
“ಪ್ರಬಲವಾದ ಮತ್ತು ಗಾಢವಾದ ಪ್ರಾರ್ಥನೆಯು ನಿಸ್ಸಂಶಯವಾಗಿ ಭಗವಂತನ ಉತ್ತರವನ್ನು ಪಡೆಯುತ್ತದೆ….ಧರ್ಮದಲ್ಲಿ ವಿಜ್ಞಾನವನ್ನು ಬಳಸುವುದರಿಂದ, ಆಧ್ಯಾತ್ಮಿಕ ಸಾಧ್ಯತೆಗಳಲ್ಲಿಯ ನಿಮ್ಮ ಅನಿಶ್ಚಿತ ನಂಬಿಕೆ ಅವುಗಳ ಅತ್ಯುನ್ನತ ನೆರವೇರಿಕೆಯ ಸಾಕ್ಷಾತ್ಕಾರವಾಗಬಹುದು.”
— ಶ್ರೀ ಶ್ರೀ ಪರಮಹಂಸ ಯೋಗಾನಂದ

ಭಗವಂತನು ವಿಶ್ವವನ್ನು ಎತ್ತಿಹಿಡಿಯುವ ಪ್ರೇಮವೇ ಆಗಿದ್ದಾನೆ — ಇಡೀ ಸೃಷ್ಟಿಯನ್ನು ವ್ಯಾಪಿಸಿರುವ ಜೀವನದ ಸಾಗರ ಮತ್ತು ಶಕ್ತಿ. ಪ್ರಾರ್ಥನೆಯ ವೈಜ್ಞಾನಿಕ ವಿಧಾನಗಳ ಮೂಲಕ, ನಾವು ಆ ನಿತ್ಯಶಕ್ತಿಯೊಂದಿಗೆ ನಮ್ಮನ್ನು ಶ್ರುತಿಗೂಡಿಸಿಕೊಳ್ಳಬಹುದು ಮತ್ತು ಶರೀರ, ಮನಸ್ಸು ಮತ್ತು ಚೇತನಕ್ಕೆ ಉಪಶಮನ ಮಾಡಿಕೊಳ್ಳಬಹುದು.

ಕೆಲವು ಜನರು ಪ್ರಾರ್ಥನೆಯನ್ನು ಆಶಾಭ್ರಾಂತಿಯಲ್ಲಿನ ಅಸ್ಪಷ್ಟ ಹಾಗೂ ಫಲಕಾರಿಯಲ್ಲದ ಅಭ್ಯಾಸ ಎಂದು ಭಾವಿಸುತ್ತಾರೆ. ಒಬ್ಬ ಸಾಧಾರಣ ಮನುಷ್ಯನು ವಿಪತ್ಕಾರಕ ತೊಂದರೆಯಲ್ಲಿದ್ದಾಗ ಮತ್ತು ಎಲ್ಲ ಅವಕಾಶಗಳೂ ವಿಫಲವಾದಾಗ ಮಾತ್ರ ಪ್ರಾರ್ಥನೆಗೆ ಮೊರೆಹೋಗುತ್ತಾನೆ. ಅದರೆ ಪರಮಹಂಸ ಯೋಗಾನಂದರು ನೈಜ ಪ್ರಾರ್ಥನೆಯು ವೈಜ್ಞಾನಿಕವಾದದ್ದು ಎಂದು ಬೋಧಿಸಿದ್ದಾರೆ — ಅದು ಇಡೀ ಸೃಷ್ಟಿಯನ್ನು ನಿಯಂತ್ರಿಸುವ ಕಟ್ಟುನಿಟ್ಟಿನ ನಿಯಮಗಳ ಮೇಲೆ ಆಧಾರಿತವಾಗಿದೆ — ಮತ್ತು ಸಾಮರಸ್ಯದ ಬದುಕಿಗೆ ಅದು ಒಂದು ದಿನನಿತ್ಯದ ಅವಶ್ಯಕತೆಯಾಗಿದೆ.
ನಮ್ಮ ಭೌತಿಕ ಶರೀರಗಳು ಮತ್ತು ನಾವು ಜೀವಿಸುತ್ತಿರುವ ಭೌತಿಕ ಪ್ರಪಂಚವು ಚೈತನ್ಯದ ಅಗೋಚರ ಸ್ವರೂಪಗಳ ಘನೀಕರಣವಾಗಿದೆ ಎಂದು ಅವರು ವಿವರಿಸಿದ್ದಾರೆ. ಅನುಕ್ರಮವಾಗಿ ಆ ಚೈತನ್ಯವು ಚಿಂತನೆಯ ಸೂಕ್ಷ್ಮ ನೀಲಿ ನಕ್ಷೆಗಳ ಅಭಿವ್ಯಕ್ತಿಯಾಗಿದೆ — ಅತ್ಯಂತ ಸೂಕ್ಷ್ಮ ಕಂಪನ — ಚೈತನ್ಯ ಮತ್ತು ಭೌತ ದ್ರವ್ಯದ ಎಲ್ಲ ಅಭಿವ್ಯಕ್ತಿಗಳನ್ನೂ ನಿಯಂತ್ರಿಸುವಂತಹದು. ಇಡೀ ಸೃಷ್ಟಿಯನ್ನು ಭಗವಂತನು ಮೊದಲು ಕಲ್ಪನೆ ಅಥವಾ ಭಾವನೆಯ ರೂಪದಲ್ಲಿ ತಂದ. ನಂತರ ದಿವ್ಯ ಪ್ರಜ್ಞೆಯು ಆ ಕಲ್ಪನೆಯ ಸ್ವರೂಪಗಳು ಬೆಳಕು ಮತ್ತು ಚೈತನ್ಯದಲ್ಲಿ ಸಾಂದ್ರೀಕೃತವಾಗುವಂತೆ ಇಚ್ಛಿಸಿತು, ಮತ್ತು ಅಂತಿಮವಾಗಿ ಭೌತ ದ್ರವ್ಯದ ಸ್ಥೂಲತರ ಕಂಪನಗಳೊಳಗೆ.
ಮಾನವ ಜೀವಿಗಳಾಗಿ ನಾವು ಭಗವಂತನ ಸಾಕಾರರೂಪಗಳಾಗಿದ್ದೇವೆ, ನಾವು ಸೃಷ್ಟಿಯ ಕೆಳ ಮಟ್ಟದ ಜೀವಿಗಳಿಗಿಂತ ವಿಭಿನ್ನರಾಗಿದ್ದೇವೆ: ಚಿಂತನೆ ಮತ್ತು ಚೈತನ್ಯದ ಇದೇ ಶಕ್ತಿಗಳನ್ನು ಉಪಯೋಗಿಸಲು ನಮಗೆ ಸ್ವಾತಂತ್ರ್ಯವಿದೆ. ನಾವು ರೂಢಿಯಂತೆ ಅಂಗೀಕರಿಸಿ ಕಾರ್ಯೋನ್ಮುಖರಾಗುವ ಆಲೋಚನೆಗಳಿಂದ, ನಮ್ಮ ಜೀವನವು ತೆರೆದುಕೊಳ್ಳುವ ಪರಿಸ್ಥಿತಿಗಳನ್ನು ಸೃಷ್ಟಿಸುತ್ತೇವೆ.
ವೈಜ್ಞಾನಿಕ ಪ್ರಾರ್ಥನೆಯು ಈ ಸತ್ಯವನ್ನು ಅರಿಯುವುದರಲ್ಲಿ ಮತ್ತು ಸೃಷ್ಟಿಯ ಸರ್ವವ್ಯಾಪಿ ಸತ್ವಗಳನ್ನು ಅನುಷ್ಠಾನಗೊಳಿಸುವುದರ ಮೇಲೆ ನಿಂತಿದೆ: ಇದು ಭಗವಂತನ ಚಿಂತನಾ ಸ್ವರೂಪಗಳಾದ ಆರೋಗ್ಯ, ಸಾಮರಸ್ಯ ಮತ್ತು ಪರಿಪೂರ್ಣತೆಯೊಡನೆ ಶ್ರುತಿಗೂಡುತ್ತದೆ — ನಂತರ ಆ ಸ್ವರೂಪಗಳನ್ನು ಆವಿರ್ಭಾವಗೊಳಿಸುವುದಕ್ಕೆ ಸಹಾಯ ಮಾಡಲು ಚೈತನ್ಯವನ್ನು ಹರಿಸಲು ಸಂಕಲ್ಪ ಶಕ್ತಿಯನ್ನು ಉಪಯೋಗಿಸುತ್ತದೆ.

ಪ್ರಾರ್ಥನೆಯು ಮಾನವನ ಮನಸ್ಸು ಮತ್ತು ಸಂಕಲ್ಪವನ್ನು ಭಗವಂತನ ಪ್ರಜ್ಞೆ ಮತ್ತು ಸಂಕಲ್ಪದೊಡನೆ ಶ್ರುತಿಗೂಡಿಸುವ ವಿಜ್ಞಾನವಾಗಿದೆ. ಪ್ರಾರ್ಥನೆಯ ಮೂಲಕ, ನಾವು ಭಗವಂತನೊಡನೆ ಒಂದು ಪ್ರೇಮಪೂರ್ಣ ವೈಯಕ್ತಿಕ ಬಾಂಧವ್ಯವನ್ನು ಏರ್ಪಡಿಸಿಕೊಳ್ಳುತ್ತೇವೆ, ಮತ್ತು ಅವನ ಪ್ರತಿಕ್ರಿಯೆ ಎಂದಿಗೂ ತಪ್ಪುವುದಿಲ್ಲ. ಪರಮಹಂಸ ಯೋಗಾನಂದರ ಆತ್ಮಕಥೆಯಲ್ಲಿ ನಾವು ಓದುತ್ತೇವೆ:
“ದೇವರು ಎಲ್ಲರ ಕರೆಗೂ ಓಗೊಡುತ್ತಾನೆ, ಎಲ್ಲರಿಗಾಗಿಯೂ ಕೆಲಸ ಮಾಡುತ್ತಾನೆ. ತಮ್ಮ ಪ್ರಾರ್ಥನೆಗೆ ದೇವರು ಗಮನ ಕೊಡುತ್ತಾನೆಂಬುದನ್ನು ಜನ ಎಷ್ಟೋ ಸಲ ಅರ್ಥ ಮಾಡಿಕೊಳ್ಳುವುದೇ ಇಲ್ಲ. ಕೆಲವರಿಗೆ ಮಾತ್ರ ಅವನು ಪಕ್ಷಪಾತಿಯಲ್ಲ. ತನ್ನನ್ನು ನಂಬಿ ಹತ್ತಿರ ಬರುವ ಪ್ರತಿಯೊಬ್ಬರ ಮನವಿಯನ್ನೂ ಕೇಳುತ್ತಾನೆ. ಅವನ ಮಕ್ಕಳು ತಮ್ಮ ಸರ್ವಾಂತರ್ಯಾಮೀ ತಂದೆಯ ಪ್ರೀತಿಪೂರ್ವಕವಾದ ದಯಾರ್ದ್ರತೆಯಲ್ಲಿ ನಿಷ್ಠೆಯಿಂದ ಕೂಡಿದ ಶ್ರದ್ಧೆಯನ್ನು ಸದಾ ಹೊಂದಿರಬೇಕಷ್ಟೆ.”
ಭಗವಂತನ ಅಪರಿಮಿತ ಶಕ್ತಿಯನ್ನು ತಾಳ್ಮೆಯಿಂದ ಮತ್ತು ಎಡಬಿಡದೆ ಬಳಸಿಕೊಳ್ಳುವುದರಿಂದ, ಅವನ ಪ್ರೇಮ ಮತ್ತು ಸಹಾಯದಿಂದ, ನಾವು ಬಯಸುವ ಯಾವುದೇ ಪರಿಸ್ಥಿತಿಯನ್ನು ಸೃಷ್ಟಿಸಬಹುದು ಮತ್ತು ಕಷ್ಟಗಳನ್ನು ಮತ್ತು ಅನಾರೋಗ್ಯವನ್ನು ಕಣ್ಮರೆಯಾಗಿಸಬಹುದು — ನಮಗಾಗಿ ಮಾತ್ರವಲ್ಲ, ಇತರರಿಗೂ ಸಹ.
ಪ್ರಾರ್ಥನೆಯನ್ನು ಪರಿಣಾಮಕಾರಿಯಾಗಿಸಲು ಸಲಹೆಗಳು ಮತ್ತು ತಂತ್ರಗಳನ್ನು ಪರಿಶೋಧಿಸಿ
