ಪರಿಣಾಮಕಾರಿ ಪ್ರಾರ್ಥನೆಗೆ ಬೇಕಾಗಿರುವ ಮುಖ್ಯ ಅಂಶಗಳು

ಪರಮಹಂಸ ಯೋಗಾನಂದರು ಯೋಗದಾ ಸತ್ಸಂಗ ಪಾಠಗಳಲ್ಲಿ, ಏಕಾಗ್ರತೆ ಮತ್ತು ಧ್ಯಾನದ ವೈಜ್ಞಾನಿಕ ವಿಧಾನಗಳ ಮೂಲಕ ಭಗವಂತನ ಆಂತರಿಕ ಉಪಸ್ಥಿತಿಯನ್ನು ಅರಿತುಕೊಳ್ಳಲು ಹಂತ-ಹಂತದ ಸೂಚನೆಗಳನ್ನು ನೀಡಿದ್ದಾರೆ. ಮತ್ತು ಅಂತಹ ವಿಧಾನಗಳನ್ನು ಅಭ್ಯಾಸ ಮಾಡುವವರು, ಎಲ್ಲರಲ್ಲಿ ಭಗವಂತನಿದ್ದಾನೆ ಎಂಬ ತಮ್ಮ ವಿಸ್ತೃತ ಅರಿವಿನಿಂದ ಇತರರಿಗೆ ಸೇವೆ ಸಲ್ಲಿಸುವುದನ್ನು ನೋಡುವುದು ಅವರ ದೊಡ್ಡ ಬಯಕೆಯಾಗಿತ್ತು — ವಸುಧೈವ ಕುಟುಂಬಕಂ ಎಂಬ ನೈಜ ಅರಿವಿನೊಂದಿಗೆ.

ಜಾಗತಿಕ ಪ್ರಾರ್ಥನಾ ವೃಂದದ ಪರಿಣಾಮಕಾರಿತ್ವವು ಸಹಾನುಭೂತಿಯುಳ್ಳ ಸಾಕಷ್ಟು ಆತ್ಮಗಳ, ಹೃತ್ಪೂರ್ವಕ ಭಾಗವಹಿಸುವಿಕೆಯ ಮೇಲೆ ಮಾತ್ರವಲ್ಲ, ಪ್ರಾರ್ಥನಾ ವೃಂದದ ವೈಯಕ್ತಿಕ ಸದಸ್ಯರು ಹೊಂದಿರುವ ಸಂಸರ್ಗದ ಆಳದ ಮೇಲೂ ನಿರ್ಭರವಾಗಿರುತ್ತದೆ. ಭಗವಂತನ ಪ್ರತಿಕ್ರಿಯೆಯನ್ನು ತರಬೇಕೆಂದರೆ ಹೇಗೆ ಪ್ರಾರ್ಥಿಸಬೇಕೆಂದು ತಿಳಿಯುವುದು ಅತ್ಯಗತ್ಯ.

ಪರಿಣಾಮಕಾರಿ ಪ್ರಾರ್ಥನೆಗಾಗಿ ನೆನಪಿಡಬೇಕಾಗಿರುವ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:

ಏಕಾಗ್ರತೆ

Lighted candle in Smriti Mandir.ಯಶಸ್ವೀ ಪ್ರಾರ್ಥನೆಯು ಹೆಚ್ಚಾಗಿ ಏಕಾಗ್ರತೆಯ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ — ಏಕಾಗ್ರತೆಯೆಂದರೆ ಮನಸ್ಸನ್ನು ಗೊಂದಲಗಳಿಂದ ಮುಕ್ತಗೊಳಿಸಿ, ಅದನ್ನು ನಾವು ಬಯಸಿದ ಯಾವುದರ ಮೇಲಾದರೂ ಒಮ್ಮುಖವಾಗಿ ಇರಿಸುವ ಸಾಮರ್ಥ್ಯ. ಸೂರ್ಯನ ಚದುರಿದ ಕಿರಣಗಳನ್ನು ಭೂತಗನ್ನಡಿಯಿಂದ ಒಮ್ಮುಖಗೊಳಿಸಿ ತೀವ್ರ ದಹನ ಶಕ್ತಿಯನ್ನು ಸೃಷ್ಟಿಸುವಂತೆ, ಆಲೋಚನೆಗಳು, ಭಾವನೆಗಳು ಮತ್ತು ಆಡಿದ ಮಾತುಗಳಲ್ಲಿ ಸುಪ್ತವಾಗಿರುವ, ಸೂಕ್ಷ್ಮವಾದರೂ ಬಲಶಾಲಿಯಾಗಿರುವ ಶಕ್ತಿಯನ್ನು ಏಕಾಗ್ರತೆಯ ಒಂದು ನಿರ್ದಿಷ್ಟ ವಿಧಾನದ ಮೂಲಕ ಸರ್ವ ಶಕ್ತ ಪ್ರಾರ್ಥನೆಯಾಗಿ ಒಟ್ಟುಗೂಡಿಸಬಹುದು.

ಮಾನಸಿಕ ಶಕ್ತಿಯ ಅಪಾರ ನಿಧಿಗಳನ್ನು ಏಕಾಗ್ರತೆಯ ಮೂಲಕ ಬಳಸಿಕೊಳ್ಳಬಹುದು — ಅದು, ಯಾವುದೇ ಬಾಹ್ಯ ಪ್ರಯತ್ನದಲ್ಲಿ ಅಥವಾ ಭಗವಂತನೊಂದಿಗೆ ನಮ್ಮ ಬದಲಾಗದ ಸಂಬಂಧದ ಅನುಭವವನ್ನು ಪಡೆಯಲು ಆಂತರಿಕವಾಗಿ ಬಳಸಬಹುದಾದ ಶಕ್ತಿ.

ಪರಿಣಾಮಕಾರಿ ಪ್ರಾರ್ಥನೆಯಲ್ಲಿ ಧ್ಯಾನದ ಪ್ರಾಮುಖ್ಯತೆ

ಧ್ಯಾನವು ಭಗವಂತನನ್ನು ಅರಿತುಕೊಳ್ಳಲು ಬಳಸುವ ಏಕಾಗ್ರತೆ. ಪ್ರಾರ್ಥನೆಗೂ ಮುನ್ನ, ನಾವು “ಭಗವಂತನ ಪ್ರತಿರೂಪದಲ್ಲಿ” ಮಾಡಲ್ಪಟ್ಟಿದ್ದೇವೆ ಎಂಬ ಅರಿವನ್ನು ಪಡೆಯಲು, ಧ್ಯಾನ ಮಾಡುವುದು ಒಳ್ಳೆಯದು ಎಂದು ಪರಮಹಂಸ ಯೋಗಾನಂದರು ಕಲಿಸಿದರು. ಯೋಗದಾ ಸತ್ಸಂಗ ಸೊಸೈಟಿಯ ಪಾಠಗಳಲ್ಲಿ ಕಲಿಸುವಂತಹ ಏಕಾಗ್ರತೆ ಮತ್ತು ಧ್ಯಾನದ ತಂತ್ರಗಳು ಮನಸ್ಸನ್ನು ಆಂತರಿಕಗೊಳಿಸಿ, ಅಂತಸ್ಥವಾಗಿರುವ ದಿವ್ಯ ಚೇತನವನ್ನು ತೋರ್ಪಡಿಸುತ್ತವೆ. ಆ ಆಂತರಿಕ ಪವಿತ್ರ ಉಪಸ್ಥಿತಿಯ ಮೇಲಿನ ಏಕಾಗ್ರತೆಯು, ಭಗವಂತನೊಂದಿಗೆ ಸರ್ವದಾ ಒಂದಾಗಿರುವ ನಮ್ಮ ನೈಜ ಆತ್ಮದ ಪ್ರತ್ಯಕ್ಷಾನುಭವಕ್ಕೆ ಕಾರಣವಾಗುತ್ತದೆ.

“ನಮಗೆ ಬೇಕಾದುದನ್ನು ನೀಡುವಂತೆ ಭಗವಂತನನ್ನು ಪುಸಲಾಯಿಸುತ್ತ, ಭಿಕ್ಷುಕರಂತೆ ಪ್ರಾರ್ಥಿಸುವುದನ್ನು ಅವನು ಬಯಸುವುದಿಲ್ಲ. ಬೇರೆ ಯಾವುದೇ ಪ್ರೀತಿಸುವ ತಂದೆಯಂತೆ, ಅವನು ನಮ್ಮ ಯೋಗ್ಯ ಆಸೆಗಳನ್ನು ಪೂರೈಸುವಲ್ಲಿ ಸುಖಿಸುತ್ತಾನೆ. ಆದ್ದರಿಂದ, ಧ್ಯಾನದ ಮೂಲಕ ಮೊದಲು ಅವನೊಂದಿಗೆ ನಿಮ್ಮ ಅನನ್ಯತೆಯನ್ನು ಸ್ಥಿರಪಡಿಸಿ. ನಂತರ ನಿಮ್ಮ ಕೋರಿಕೆಯನ್ನು ಈಡೇರಿಸಲಾಗುತ್ತದೆ ಎಂಬ ಅರಿವಿನಲ್ಲಿ, ನೀವು ಮಗುವಿನ ಪ್ರೀತಿಪೂರ್ವಕ ನಿರೀಕ್ಷೆಯೊಂದಿಗೆ ನಿಮ್ಮ ತಂದೆಯಿಂದ (ಭಗವಂತನಿಂದ), ನಿಮಗೆ ಬೇಕಾದುದನ್ನು ಕೇಳಬಹುದು,” ಎಂದು ಪರಮಹಂಸಜಿ ಹೇಳಿದರು.

ಇಚ್ಛೆಯ ಶಕ್ತಿ

Man praying.ಪ್ರಾರ್ಥನೆಯಲ್ಲಿ ಇಚ್ಛಾ ಶಕ್ತಿಯು ಅತ್ಯಗತ್ಯ ಅಂಶವಾಗಿದೆ. “ಇಚ್ಛಾಶಕ್ತಿಯ ನಿರಂತರ, ಶಾಂತ, ಶಕ್ತಿಯುತವಾದ ಬಳಕೆಯು ಸೃಷ್ಟಿಯ ಶಕ್ತಿಗಳನ್ನು ಅಲುಗಾಡಿಸಿ ಅನಂತದಿಂದ ಪ್ರತಿಕ್ರಿಯೆಯನ್ನು ದೊರಕಿಸುತ್ತದೆ,” ಎಂದು ಪರಮಹಂಸಜಿ ಹೇಳಿದರು. “ನೀವು ಪಟ್ಟು ಬಿಡದಿದ್ದರೆ, ವೈಫಲ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸಿದರೆ ನೀವು ಇಚ್ಛಿಸಿದ ವಸ್ತು ನಿಮಗೆ ದಕ್ಕಲೇ ಬೇಕು. ನೀವು ಸತತವಾಗಿ ನಿಮ್ಮ ಯೋಚನೆ ಮತ್ತು ಕ್ರಿಯೆಗಳಲ್ಲಿ ಆ ಇಚ್ಛಾಶಕ್ತಿಯನ್ನು ಉಪಯೋಗಿಸುತ್ತಿದ್ದರೆ ನೀವು ಇಚ್ಛಿಸಿದುದು ನಿಮ್ಮದಾಗಲೇ ಬೇಕು. ನಿಮ್ಮ ಇಚ್ಛೆಗೆ ಅನುಸಾರವಾದದ್ದು ಪ್ರಪಂಚದಲ್ಲಿರದಿದ್ದರೂ, ನಿಮ್ಮ ಇಚ್ಛಾಶಕ್ತಿಯು ನಿರಂತರವಾಗಿದ್ದರೆ ಅದು ಹೇಗೋ ನೀವು ಬಯಸಿದ ಫಲಿತಾಂಶವು ಕಾಣಿಸಿಕೊಳ್ಳುತ್ತದೆ. ಅಂತಹ ಇಚ್ಛಾಶಕ್ತಿಯಲ್ಲಿ ಭಗವಂತನ ಉತ್ತರವಿರುತ್ತದೆ; ಏಕೆಂದರೆ ಇಚ್ಛಾಶಕ್ತಿಯು ಭಗವಂತನಿಂದಲೇ ಬರುತ್ತದೆ, ಮತ್ತು ಇಚ್ಛಾಶಕ್ತಿಯು ಸತತವಾಗಿದ್ದರೆ ಅದೇ ದೈವೇಚ್ಛೆಯಾಗುತ್ತದೆ.”

ಪ್ರಾರ್ಥನೆಯಲ್ಲಿ ಭಗವಂತನೇ ಎಲ್ಲವನ್ನೂ ಮಾಡುತ್ತಾನೆ ಎಂಬ ನಿಷ್ಕ್ರಿಯ ಮನೋಭಾವ ಮತ್ತು ಇನ್ನೊಂದು ಕಡೆ, ಕೇವಲ ನಮ್ಮ ಪ್ರಯತ್ನಗಳನ್ನೇ ಅವಲಂಬಿಸುವುದು, ಇವುಗಳ ನಡುವಣ ವ್ಯತ್ಯಾಸವನ್ನು ಗುರುತಿಸುವುದು ಅವಶ್ಯಕ. “ಸಂಪೂರ್ಣವಾಗಿ ಭಗವಂತನನ್ನೇ ಅವಲಂಬಿಸುವ ಮಧ್ಯಕಾಲೀನ ಕಲ್ಪನೆ ಮತ್ತು ತನ್ನನ್ನು ಮಾತ್ರ ಅವಲಂಬಿಸುವ ಆಧುನಿಕ ವಿಧಾನದ ನಡುವೆ ಸಮತೋಲನವನ್ನು ಸಾಧಿಸಬೇಕು,” ಎಂದು ಪರಮಹಂಸ ಯೋಗಾನಂದರು ವಿವರಿಸಿದರು.

ಶಿಲುಬೆಗೇರಿಸುವ ವಿಚಾರಣೆಗೆ ಒಳಗಾಗುವ ಮೊದಲು, “ನಿನ್ನಿಚ್ಛೆಯಂತಾಗಲಿ” ಎಂದು ಯೇಸು ಪ್ರಾರ್ಥಿಸಿದಾಗ, ಅವನು ತನ್ನ ಸ್ವಂತ ಇಚ್ಛೆಯನ್ನು ತೊರೆಯಲಿಲ್ಲ. ತನ್ನ ಜೀವನಕ್ಕಾಗಿ ಭಗವಂತನು ಮಾಡಿಕೊಂಡಿರುವ ದಿವ್ಯ ಯೋಜನೆಗೆ ಸಮರ್ಪಿಸಿಕೊಳ್ಳಬೇಕೆಂದರೆ ಇಚ್ಛೆಯ ಮೇಲೆ ಸಂಪೂರ್ಣ ಪಾಂಡಿತ್ಯ ಬೇಕಾಗಿತ್ತು. ಕೆಲವೇ ಜನರು ಮಾತ್ರ ತಮ್ಮ ಇಚ್ಛಾಶಕ್ತಿಯನ್ನು ಆ ಮಟ್ಟಿಗೆ ಬೆಳೆಸಿಕೊಂಡಿರುತ್ತಾರೆ. ಆದರೆ ಭಗವಂತನು, ತನ್ನ ಮಕ್ಕಳಾದ ನಾವು ಪ್ರತಿ ಪ್ರಯತ್ನದಲ್ಲಿ ಅವನ ಕಾಣಿಕೆಗಳಾದ ವಿವೇಚನೆ, ಇಚ್ಛೆ ಮತ್ತು ಭಾವನೆಗಳನ್ನು ನಮಗೆ ಸಾಧ್ಯವಾದಷ್ಟು ಮಟ್ಟಿಗೆ ಪ್ರಯೋಗಿಸಬೇಕೆಂದು ನಿರೀಕ್ಷಿಸುತ್ತಾನೆ. ಯಶಸ್ಸನ್ನು ಸಾಧಿಸಲು ನಮ್ಮಲ್ಲಿರುವ ಎಲ್ಲಾ ವಿಧಾನಗಳನ್ನು ಬಳಸುತ್ತಿರುವಾಗಲೇ ನಮ್ಮ ಅಂತರಂಗದ ದಿವ್ಯ ಉಪಸ್ಥಿತಿಯಿಂದ ಮಾರ್ಗದರ್ಶನವನ್ನು ಕೋರಿಕೊಳ್ಳಬೇಕು. ಈ ಸಮತೋಲಿತ ಮನೋಭಾವವು ಸಮಚಿತ್ತತೆಗೆ, ತಿಳುವಳಿಕೆಗೆ, ನಮ್ಮ ಮಾನುಷ ಮತ್ತು ದಿವ್ಯ ಸಾಮರ್ಥ್ಯಗಳ ಸಮನ್ವಯತೆಗೆ ಹಾಗೂ ಭಗವದಿಚ್ಛೆಯೊಂದಿಗೆ ನಮ್ಮ ಮಾನುಷ ಇಚ್ಛೆಯನ್ನು ಶ್ರುತಿಗೂಡಿಸುವುದಕ್ಕೆ ಕಾರಣವಾಗುತ್ತದೆ.

ಭಕ್ತಿ, ಭಗವಂತನ ಮೇಲಿನ ಪ್ರೀತಿ

Devotee Meditatingಭಕ್ತಿಯಿಂದ ತುಂಬಿದ ಪ್ರಾರ್ಥನೆಯು ಅತ್ಯಂತ ಪರಿಣಾಮಕಾರಿ ಪ್ರಾರ್ಥನೆಯಾಗಿದೆ. ಭಕ್ತಿಯು, ಭಗವಂತನ ಮೇಲಿನ ಪ್ರೀತಿಯು, ಹೃದಯದ ಆಯಸ್ಕಾಂತೀಯ ಆಕರ್ಷಣೆಯಾಗಿದ್ದು ಅದಕ್ಕೆ ಭಗವಂತನು ಸೋಲದಿರಲು ಸಾಧ್ಯವಿಲ್ಲ. ಪರಮಹಂಸ ಯೋಗಾನಂದರು ಹೇಳಿದರು: “ಹೃದಯಗಳನ್ನು ಶೋಧಿಸುವವನು (ಭಗವಂತ) ನಿಮ್ಮ ಪ್ರಾಮಾಣಿಕ ಪ್ರೀತಿಯನ್ನು ಮಾತ್ರ ಬಯಸುತ್ತಾನೆ. ಅವನು ಪುಟ್ಟ ಮಗುವಿನಂತೆ: ಯಾರಾದರೂ ಅವನಿಗೆ ತನ್ನ ಇಡೀ ಸಂಪತ್ತನ್ನೇ ನೀಡಬಹುದು ಆದರೆ ಅದು ಅವನಿಗೆ ಬೇಕಾಗಿಲ್ಲ; ಮತ್ತು ಇನ್ನೊಬ್ಬರು ಅವನಿಗಾಗಿ ಮೊರೆಯಿಡಬಹುದು, ‘ಹೇ, ಪ್ರಭೂ, ನಾನು ನಿನ್ನನ್ನು ಪ್ರೀತಿಸುತ್ತೇನೆ!’ ಹಾಗೂ ಅವನು ಆ ಭಕ್ತನ ಹೃದಯದೊಳಕ್ಕೆ ಓಡೋಡಿ ಬರುತ್ತಾನೆ.

ಭಗವಂತನಿಗೆ ನಾವು ಕೇಳುವ ಮೊದಲೇ ಎಲ್ಲವೂ ತಿಳಿದಿರುವುದರಿಂದ, ಅವನಿಗೆ ದೀರ್ಘ ಪ್ರಾರ್ಥನೆಗಳಿಗಿಂತ ನಮ್ಮ ಪ್ರೀತಿಯಲ್ಲಿ ಹೆಚ್ಚು ಆಸಕ್ತಿಯಿದೆ. ಜಾನ್ ಬನ್ಯನ್ ಹೇಳಿದ್ದಾನೆ, “ಪ್ರಾರ್ಥನೆಯಲ್ಲಿ, ಹೃದಯವಿಲ್ಲದ ಪದಗಳಿಗಿಂತ, ಪದಗಳಿಲ್ಲದ ಹೃದಯವನ್ನು ಹೊಂದಿರುವುದು ಉತ್ತಮ.” ಗಮನ ಮತ್ತು ಭಾವನೆಯಿಲ್ಲದ ಯಾಂತ್ರಿಕ ಪ್ರಾರ್ಥನೆಯು ಭಗವಂತನಿಗೆ ಬಾಡಿದ ಹೂಗಳನ್ನು ಅನ್ಯಮನಸ್ಕತೆಯಿಂದ ಅರ್ಪಿಸಿದಂತೆ — ಅದು ಹೆಚ್ಚಿನ ಪ್ರತಿಕ್ರಿಯೆಯನ್ನು ಕೊಡುವ ಸಾಧ್ಯತೆ ಇರುವುದಿಲ್ಲ! ಆದರೆ ನಾವು ಭಕ್ತಿ, ಏಕಾಗ್ರತೆ ಮತ್ತು ಇಚ್ಛಾಶಕ್ತಿಯಿಂದ ಭಗವಂತನನ್ನು ಮತ್ತೆ ಮತ್ತೆ ಕರೆದರೆ, ನಮ್ಮ ಪ್ರಾರ್ಥನೆಗಳನ್ನು ಆ ಪರಮಾತ್ಮನು ಕೇಳಿಸಿಕೊಂಡಿದ್ದಾನೆ ಮತ್ತು ಉತ್ತರಿಸುತ್ತಾನೆ ಎಂದು ನಿಸ್ಸಂದೇಹವಾಗಿ ನಮ್ಮ ಅರಿವಿಗೆ ಬರುತ್ತದೆ, ಅವನ ಶಕ್ತಿ ಮತ್ತು ನಮಗಾಗಿ ಅವನ ಪ್ರೀತಿಯ ಕಾಳಜಿಯು ಪರಿಪೂರ್ಣ ಮತ್ತು ಅಪಾರ.

ಇದನ್ನು ಹಂಚಿಕೊಳ್ಳಿ