ಕ್ರಿಸ್ತನು ನಿಮ್ಮೊಂದಿಗಿದ್ದಾನೆ ಎಂದು ನೀವು ಯಾವಾಗ ತಿಳಿಯುವಿರಿ?

ಕ್ರಿಸ್‌ಮಸ್‌ ಸಂದೇಶ

 

When-Will-You-Know-That-Christ-Is-With-Youಯೇಸುವು ಇಪ್ಪತ್ತು ಶತಮಾನಗಳ ಹಿಂದೆ ಕ್ರಿಸ್ತ ಪ್ರಜ್ಞೆಯ ತೊಟ್ಟಿಲಲ್ಲಿ ಜನಿಸಿದ. ಅವನ ಸಾರ್ವತ್ರಿಕ ಕ್ರಿಸ್ತ ಪ್ರಜ್ಞೆಯು ಪ್ರತಿಯೊಬ್ಬ ಜ್ಞಾನಿಯಲ್ಲೂ ಮರುಹುಟ್ಟು ಪಡೆಯುತ್ತದೆ. ಮುಂಬರುವ ಕ್ರಿಸ್‌ಮಸ್‌ನಲ್ಲಿ ಸರ್ವವ್ಯಾಪಿ ಕ್ರಿಸ್ತನ ಜನನವನ್ನು ನಿಮ್ಮೊಳಗೆ ಕಂಡುಕೊಳ್ಳಲು ಸಾಧ್ಯವಾಗುವಂತೆ ನಿಮ್ಮ ಆತ್ಮವನ್ನು ವಿಸ್ತರಿಸಲು ನೀವು ಸಿದ್ಧರಿರುವಿರೇ?

ಯೇಸುವಿನ ಜನ್ಮದಿನವನ್ನು ಉಡುಗೊರೆಗಳು ಮತ್ತು ಹಬ್ಬಗಳೊಂದಿಗೆ ಆಚರಿಸುವುದು ಅವನ ಜೀವನದ ಆದರ್ಶಗಳಿಗೆ ಸ್ವಲ್ಪ ಗೌರವ ಮತ್ತು ಆದರಣೆಯನ್ನು ಕೊಟ್ಟಂತಾಗುತ್ತದೆ. ಆದರೂ ಸಾರ್ವತ್ರಿಕ ಭ್ರಾತೃತ್ವ ಮತ್ತು ಎಲ್ಲಾ ಜೀವಿಗಳ ಮೇಲಿನ ಪ್ರೀತಿಯ ಹೊಸ ಪ್ರಜ್ಞೆಯ ಹುಟ್ಟನ್ನು ನಿಮ್ಮೊಳಗೆ ಅನುಭವಿಸುವುದಕ್ಕಾಗಿ, ಕ್ರಿಸ್‌ಮಸ್‌ನ ಪವಿತ್ರ ಸಂದರ್ಭದಲ್ಲಿ ಧ್ಯಾನ ಮಾಡುವುದು ಮತ್ತು ನಿಮ್ಮ ಮನಸ್ಸನ್ನು ಸಿದ್ಧಪಡಿಸುವುದೆಂದರೆ, ನಿಜವಾಗಿಯೂ ಕ್ರಿಸ್‌ಮಸ್‌ ಅನ್ನು ಆಚರಿಸಿದಂತೆ. ನಿಮ್ಮ ಮನಸ್ಸಿನಿಂದ ಎಲ್ಲಾ ಪ್ರತಿಷ್ಠೆ ಮತ್ತು ಪೂರ್ವಗ್ರಹಗಳನ್ನು ಹೊರದೂಡಿ, ಆಗ ನಿಮ್ಮ ಪ್ರೀತಿ-ವಿಸ್ತರಿತ ಮಡಿಲಲ್ಲಿ ನೀವು ಸರ್ವವ್ಯಾಪಿಯಾದ ಕ್ರಿಸ್ತನ ಪ್ರಜ್ಞೆಯನ್ನು ಯೋಗ್ಯವಾಗಿ ಹಿಡಿದಿಟ್ಟುಕೊಳ್ಳಬಹುದು.

ಕ್ರಿಸ್‌ಮಸ್‌ ಸಮಯದಲ್ಲಿ ನಿಮ್ಮ ಪ್ರಬಲ ಇಚ್ಛಾಶಕ್ತಿಯು ಪ್ರಲೋಭನೆಗಳ ಪರೀಕ್ಷೆಗಳಿಂದ ಅಜೇಯವಾಗಿ ಉಳಿದಿದೆ ಎಂದು ನೀವು ಕಂಡುಕೊಂಡರೆ, ಕ್ರಿಸ್ತನು ವಾಸ್ತವದಲ್ಲಿ ನಿಮ್ಮೊಳಗೆ ಜನಿಸಿದ್ದಾನೆ ಎಂದು ತಿಳಿಯಿರಿ. ಮುಂಬರುವ ಕ್ರಿಸ್‌ಮಸ್‌ನಲ್ಲಿ ನೀವು ಆತಂಕವೆಂಬ ಶಿಲುಬೆಗೇರಿಸಲ್ಪಟ್ಟಾಗ, ಆಂತರಿಕ ಶಾಂತಿಯನ್ನು ಕಾಯ್ದುಕೊಳ್ಳಲು ಸಾಧ್ಯವಾದರೆ, ಕ್ರಿಸ್ತನು ನಿಮ್ಮೊಂದಿಗಿದ್ದಾನೆ ಎಂದು ತಿಳಿಯಿರಿ. ಕ್ರಿಸ್‌ಮಸ್‌ನಲ್ಲಿ ನೀವು ಆಕ್ರಮಣಕಾರಿ ಆಲೋಚನೆಗಳ ಪ್ರಕ್ಷುಬ್ಧ ಹಿಂಡಿನ ನಡುವೆಯೂ ಆಳವಾದ ಆನಂದದಿಂದ ಧ್ಯಾನ ಮಾಡಲು ಸಾಧ್ಯವಾದರೆ, ಕ್ರಿಸ್ತನು ನಿಮ್ಮೊಳಗೆ ಧ್ಯಾನದ ದಿವ್ಯಾನಂದವಾಗಿ ಪ್ರಕಟಗೊಂಡಿದ್ದಾನೆ ಎಂದು ತಿಳಿಯಿರಿ.

ಇತರರ ದುಷ್ಟತನವೆಂಬ ಶಿಲುಬೆಗೇರಿಸುವಿಕೆಯಿಂದಲೂ ನೀವು ಕೋಪಗೊಳ್ಳಲು ಸಾಧ್ಯವಾಗದಿದ್ದಾಗ, ನೀವು ಕ್ರಿಸ್ತನ ಆಗಮನಕ್ಕೆ ಸಿದ್ಧರಿರುವಿರಿ ಎಂದು ತಿಳಿಯಿರಿ. ನಿಮ್ಮ ಮೇಲಿನ ಯಾವುದೇ ದ್ವೇಷದ ಹೊರತಾಗಿಯೂ ನೀವು ಎಲ್ಲರೆಡೆಗೂ ಪ್ರೀತಿಯನ್ನು ಸುರಿಸಿದಾಗ, ಕ್ರಿಸ್ತನಿಗಾಗಿ ನಿಮ್ಮೊಳಗೆ ಪೂಜಾಪೀಠವನ್ನು ನಿರ್ಮಿಸಲಾಗಿದೆ ಎಂದು ತಿಳಿಯಿರಿ.

ಧ್ಯಾನದ ಅವಿಚ್ಛಿನ್ನ ಆನಂದದ ಭಾವಪರವಶತೆಯನ್ನು ನೀವು ಸದಾ ಕಾಲ ಅನುಭವಿಸಲು ಸಾಧ್ಯವಾದಾಗ, ಕ್ರಿಸ್ತನು ಎಂದೆಂದಿಗೂ ನಿಮ್ಮೊಂದಿಗೆ ಇದ್ದಾನೆ ಮತ್ತು ನಿಮ್ಮ ಅಳಿವಿಲ್ಲದ ಪ್ರಜ್ಞೆಯಲ್ಲಿ ನೀವು ನಿಜವಾದ ಕ್ರಿಸ್‌ಮಸ್‌ನ ಅನುಭವವನ್ನು ಪ್ರತಿ ಕ್ಷಣ, ಪ್ರತಿ ನಿಮಿಷ, ಪ್ರತಿ ದಿನ, ಪ್ರತಿ ವರ್ಷ ಅನಂತ ಕಾಲದವರೆಗೆ ಆಚರಿಸುತ್ತೀರಿ ಎಂದು ತಿಳಿಯಿರಿ.

(ಪರಮಹಂಸ ಯೋಗಾನಂದರ ದ ಸೆಕೆಂಡ್‌ ಕಮಿಂಗ್‌ ಆಫ್‌ ಕ್ರೈಸ್ಟ್:‌ ದ ರಿಸರೆಕ್ಷನ್‌ ಆಫ್‌ ದ ಕ್ರೈಸ್ಟ್‌ ವಿದಿನ್‌ ಯು ದಿಂದ ಆಯ್ದ ಭಾಗಗಳು)

ಇದನ್ನು ಹಂಚಿಕೊಳ್ಳಿ