ಪ್ರಾರ್ಥನೆಯ ಮೂಲಕ ಜಗದಾದ್ಯಂತ ಶಾಂತಿ ಮತ್ತು ಉಪಶಮನ

Sunrise from Ranchi ashram garden.

ಮಾನವಕೋಟಿಯು ಯುದ್ಧ, ಬಡತನ, ಅನಾರೋಗ್ಯ, ಆತಂಕ ಹಾಗೂ ಉದ್ದೇಶರಹಿತ ಜೀವನದಿಂದಿರುವ ಪ್ರಪಂಚದಲ್ಲಿ, “ಜಗತ್ತಿನ ಸಮಸ್ಯೆಗಳನ್ನು ಕಡಿಮೆ ಮಾಡಲು ನಾನು ಹೇಗೆ ಸಹಾಯ ಮಾಡಬಹುದು?” ಎಂದು ಸಹಾನುಭೂತಿಯುಳ್ಳ ಪುರುಷರು ಮತ್ತು ಮಹಿಳೆಯರು ಸಹಜವಾಗಿ ಅಚ್ಚರಿ ವ್ಯಕ್ತಪಡಿಸುತ್ತಾರೆ.

ಪರಮಹಂಸ ಯೋಗಾನಂದಜಿ ಉತ್ತರಿಸಿದರು:

Image of earth from space.“ಕೇವಲ ಆಧ್ಯಾತ್ಮಿಕ ಪ್ರಜ್ಞೆ — ತನ್ನಲ್ಲಿ ಮತ್ತು ಇತರ ಎಲ್ಲ ಜೀವಿಗಳಲ್ಲಿ ಭಗವಂತನ ಉಪಸ್ಥಿತಿಯ ಅರಿವು — ಮಾತ್ರ ಜಗತ್ತನ್ನು ರಕ್ಷಿಸಬಹುದು. ಅದಿಲ್ಲದೇ ಶಾಂತಿಗೆ ಎಡೆಯೇ ಇಲ್ಲ ಎಂಬುದನ್ನು ನಾನು ನೋಡುತ್ತಿದ್ದೇನೆ. ವ್ಯರ್ಥ ಮಾಡುವುದಕ್ಕೆ ಇನ್ನು ಸಮಯವಿಲ್ಲ. ಭಗವಂತನ ಸಾಮ್ರಾಜ್ಯವನ್ನು ಭೂಮಿಯ ಮೇಲೆ ತರುವುದಕ್ಕೆ ನಿಮ್ಮ ಪಾಲಿನ ಕೆಲಸ ಮಾಡುವುದು ನಿಮ್ಮ ಕರ್ತವ್ಯ.”

ನಮ್ಮೊಳಗೆ ದೇವರ ಇರುವಿಕೆ ಮತ್ತು ದೇವರ ಕುರಿತಾದ ಪ್ರೀತಿಯ ಅರಿವಾದಂತೆ, ಅವುಗಳನ್ನು ಹೊರಗೆ ಪಸರಿಸುವ ಸಾಮರ್ಥ್ಯವನ್ನು ನಾವು ಪಡೆಯುತ್ತೇವೆ. ಮಾನವಕೋಟಿಯ ಸಮಸ್ಯೆಗಳಿಗೆ ಇದೇ ಕಾರ್ಯೋಪಯೋಗಿ ಉತ್ತರ. ಏಕೆಂದರೆ, ನಮ್ಮ ಪ್ರಜ್ಞೆ ಮತ್ತು ಜಗತ್ತಿನ ಪರಿಸ್ಥಿತಿಗಳ ನಡುವೆ ಒಂದು ಚಲನಶೀಲ ಬಾಂಧವ್ಯವಿದೆ.

ರಾಜಕೀಯ, ಸಾಮಾಜಿಕ ಅಥವಾ ಅಂತರರಾಷ್ಟ್ರೀಯ ಸಮಸ್ಯೆಗಳು — ಈ ಪರಿಸ್ಥಿತಿಗಳು ಕೋಟ್ಯಂತರ ಜನರ ಸಂಗ್ರಹಿತ ಆಲೋಚನೆಗಳ ಮತ್ತು ಕ್ರಿಯೆಗಳ ಫಲಿತವಾಗಿದೆ. ಜಗತ್ತಿನ ಪರಿಸ್ಥಿತಿಗಳನ್ನು ಬದಲಾಯಿಸುವ ಶಾಶ್ವತ ಮಾರ್ಗವೆಂದರೆ ಮೊದಲು ನಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳುವುದು ಮತ್ತು ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದು. ಪರಮಹಂಸ ಯೋಗಾನಂದರು ಹೇಳಿದ ಹಾಗೆ, “ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ, ಆಗ ನೀವು ಸಹಸ್ರಾರು ಮಂದಿಯನ್ನು ಬದಲಾಯಿಸಿರುತ್ತೀರಿ.”

ಅವರು ವಿವರಿಸುತ್ತಾ ಹೋದರು:

“ಮನುಷ್ಯ, ಇತಿಹಾಸದಲ್ಲಿ ನಿರ್ಣಾಯಕ ಹಂತವನ್ನು ತಲುಪಿದ್ದಾನೆ, ಅಲ್ಲಿ ಅವನು ತನ್ನ ದೋಷಪೂರಿತ ಆಲೋಚನೆಗಳ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಭಗವಂತನೆಡೆಗೆ ತಿರುಗಲೇಬೇಕು. ನಾವು ಪ್ರಾರ್ಥಿಸಲೇಬೇಕು, ನಮ್ಮಲ್ಲಿ ಕೆಲವರು ಮಾತ್ರವಲ್ಲ. ನಾವು ಸರಳವಾಗಿ, ಉತ್ಕಟ ಭಾವದಿಂದ, ಪ್ರಾಮಾಣಿಕವಾಗಿ ಮತ್ತು ನಮ್ಮ ಶ್ರದ್ಧೆ ವೃದ್ಧಿಸಿದಂತೆ ಹೆಚ್ಚುತ್ತಿರುವ ಶಕ್ತಿಯಿಂದ ಪ್ರಾರ್ಥಿಸಬೇಕು….

“ಪ್ರಾರ್ಥನೆ ಎಂದರೆ, ಸಂಬಂಧಪಟ್ಟವರ ಪ್ರೇಮದ ಕ್ರಿಯಾತ್ಮಕ ಅಭಿವ್ಯಕ್ತಿ, ಅದು ಮಾನವನಿಗಾಗಿ ಭಗವಂತನ ನೆರವನ್ನು ಕೋರುವುದು. ನಿಮ್ಮ ಪ್ರಾರ್ಥನೆಗಳಿಂದ ಮತ್ತು ನಿಮ್ಮ ಪ್ರಾರ್ಥನಾಪೂರ್ಣ ಕ್ರಿಯೆಗಳಿಂದ ನೀವು ಜಗತ್ತು ಬದಲಾಗುವುದಕ್ಕೆ ಸಹಾಯ ಮಾಡಬಹುದು.”

—ಡ್ಯಾಗ್‌ ಹ್ಯಾಮರ್‌ಜೋಲ್ಡ್‌, ವಿಶ್ವಸಂಸ್ಥೆಯ ಕೇಂದ್ರ ಕಾರ್ಯಾಲಯದಲ್ಲಿ ಧ್ಯಾನದ ಕೋಣೆಯ ಸಮರ್ಪಣೆಯ ಸಮಾರಂಭದಲ್ಲಿ

“ವ್ಯಾಪಕ ಹಾನಿ ಮತ್ತು ಸಮೂಹ ಪೆಟ್ಟುಗಳನ್ನು ಸೃಷ್ಟಿಸುತ್ತ ಪ್ರಕೃತಿಯಲ್ಲಿ ಸಂಭವಿಸುವ ಹಠಾತ್‌ ವಿಪ್ಲವಗಳು ʼಭಗವಂತನ ಕ್ರಿಯೆʼಗಳಲ್ಲ. ಅಂತಹ ವಿಪತ್ತುಗಳು ಮನುಷ್ಯನ ಆಲೋಚನೆ ಮತ್ತು ಕ್ರಿಯೆಗಳಿಂದ ಸಂಭವಿಸುತ್ತವೆ. ಮನುಷ್ಯನ ತಪ್ಪು ಆಲೋಚನೆ ಮತ್ತು ತಪ್ಪು ನಡವಳಿಕೆಯಿಂದಾಗಿ ಉಂಟಾಗುವ ಹಾನಿಕಾರಕ ಸ್ಪಂದನಗಳ ಶೇಖರಣೆಯಿಂದ, ಎಲ್ಲೆಲ್ಲಿ ಜಗತ್ತಿನ ಒಳಿತು ಕೆಡಕುಗಳ ಸ್ಪಂದನಾತ್ಮಕ ಸಂತುಲನೆಯು ಪಲ್ಲಟಗೊಳ್ಳುತ್ತದೆಯೋ, ಅಲ್ಲೆಲ್ಲಾ ನೀವು ವಿನಾಶವನ್ನು ಕಾಣುವಿರಿ….

“ಯಾವಾಗ ಮನುಷ್ಯನ ಪ್ರಜ್ಞೆಯಲ್ಲಿ ಭೌತ ವಸ್ತುಗಳನ್ನು ಹೊಂದುವುದು ಮೇಲುಗೈ ಸಾಧಿಸುತ್ತದೆಯೋ, ಅಲ್ಲಿ ಸೂಕ್ಷ್ಮ ನಕಾರಾತ್ಮಕ ಕಿರಣಗಳು ಹೊರಸೂಸುತ್ತಿರುತ್ತವೆ; ಅವುಗಳ ಸಂಗ್ರಹಿತ ಶಕ್ತಿಯು ಪ್ರಕೃತಿಯ ವಿದ್ಯುತ್‌ ಸಮತೋಲನವನ್ನು ಪಲ್ಲಟಗೊಳಿಸುತ್ತದೆ. ಹಾಗೆ ಆದಾಗ ಭೂಕಂಪಗಳು, ಪ್ರವಾಹಗಳು ಮತ್ತು ಇತರ ಅನಾಹುತಗಳು ಸಂಭವಿಸುತ್ತವೆ.”

ಭಗವತ್‌-ಸಂಪರ್ಕವು ವೈಯಕ್ತಿಕ ಮತ್ತು ಅಂತರರಾಷ್ಟ್ರೀಯ ಉಪಶಮನವನ್ನು ನೀಡುತ್ತದೆ

ಆದರೆ ವೈಯಕ್ತಿಕ ಮಟ್ಟದಲ್ಲಿ ಅನಾರೋಗ್ಯ ಮತ್ತು ಅಸಂತೋಷವನ್ನು ಹಾಗೂ ದೇಶ ದೇಶಗಳಲ್ಲಿ ಯುದ್ಧ ಮತ್ತು ಪ್ರಾಕೃತಿಕ ವಿಕೋಪಗಳನ್ನು ತರುವ ಸ್ವಾರ್ಥಪರತೆ, ಅತಿಯಾಸೆ ಮತ್ತು ಹಗೆತನದ ನಕಾರಾತ್ಮಕ ಸ್ಪಂದನಗಳನ್ನು, ಹೆಚ್ಚು ಹೆಚ್ಚು ಪುರುಷರು ಮತ್ತು ಮಹಿಳೆಯರು ಧ್ಯಾನ ಹಾಗೂ ಪ್ರಾರ್ಥನೆಯಲ್ಲಿ ಭಗವಂತನೆಡೆಗೆ ತಿರುಗಿದರೆ ಪರಿಹರಿಸಬಹುದು ಎಂಬುದನ್ನು ಪರಮಹಂಸಜಿ ಒತ್ತಿ ಹೇಳಿದರು. ಆಧ್ಯಾತ್ಮಿಕ ಬಾಳ್ವೆ ಮತ್ತು ದಿವ್ಯತೆಯೊಂದಿಗಿನ ಸಂಪರ್ಕದಿಂದ ನಮ್ಮನ್ನು ನಾವು ಬದಲಾಯಿಸಿಕೊಂಡರೆ, ನಾವು ಸಹಜವಾಗಿಯೇ ಶಾಂತಿ ಹಾಗೂ ಸಾಮರಸ್ಯದ ಕಂಪನಗಳನ್ನು ಹೊರಸೂಸುತ್ತೇವೆ. ಅದು ಅಸಾಮರಸ್ಯ ಬಾಳ್ವೆಯ ನಕಾರಾತ್ಮಕ ಪರಿಣಾಮಗಳನ್ನು ನಿಷ್ಫಲಗೊಳಿಸುವುದಕ್ಕೆ ಹೆಚ್ಚು ಸಹಾಯ ಮಾಡುತ್ತದೆ.

“ನಮ್ಮ ಹೃದಯಗಳಲ್ಲಿ ಆತ್ಮಗಳ ಒಂದು ಒಕ್ಕೂಟಕ್ಕಾಗಿ ಮತ್ತು ಸಂಘಟಿತ ಜಗತ್ತಿಗಾಗಿ ಪ್ರಾರ್ಥಿಸೋಣ. ನಾವು ಜಾತಿ, ಮತ, ವರ್ಣ, ವರ್ಗ ಮತ್ತು ರಾಜಕೀಯ ಪೂರ್ವಾಗ್ರಹಗಳಿಂದ ವಿಭಜಿಸಲ್ಪಟ್ಟಿದ್ದೇವೆ ಎಂದು ಕಂಡರೂ, ಒಬ್ಬನೇ ಭಗವಂತನ ಮಕ್ಕಳಾಗಿ ನಾವು ನಮ್ಮ ಅತ್ಮಗಳಲ್ಲಿ ಭ್ರಾತೃತ್ವ ಮತ್ತು ವಿಶ್ವ ಏಕತೆಯನ್ನು ಸಾಧಿಸಬಹುದು. ಮಾನವನ ವಿಮುಕ್ತಗೊಂಡ ಅಂತಸ್ಸಾಕ್ಷಿಯ ಮೂಲಕ, ಒಬ್ಬ ಭಗವಂತನ ಮಾರ್ಗದರ್ಶನದಲ್ಲಿ ಪ್ರತಿಯೊಂದು ದೇಶವೂ ಒಂದು ಸಮರ್ಥ ಭಾಗವಾಗಿರುವಂತಹ ಒಂದು ಸಂಘಟಿತ ವಿಶ್ವವನ್ನು ಸೃಷ್ಟಿಸಲು ನಾವು ಕೆಲಸ ಮಾಡೋಣ.

“ನಮ್ಮ ಅಂತರಾಳದಲ್ಲಿ ನಾವೆಲ್ಲರೂ ದ್ವೇಷ ಮತ್ತು ಸ್ವಾರ್ಥಪರತೆಯಿಂದ ಮುಕ್ತವಾಗುವುದನ್ನು ಕಲಿಯಬಹುದು. ದೇಶ ದೇಶಗಳ ನಡುವೆ ಸಾಮರಸ್ಯವಿರಲಿ ಮತ್ತು ಅವರು ಕೈ ಕೈ ಹಿಡಿದು ಒಂದು ಸಮೃದ್ಧ ನೂತನ ನಾಗರೀಕತೆಯ ಬಾಗಿಲನ್ನು ಹಾದು ಹೋಗಲಿ, ಎಂದು ನಾವು ಪ್ರಾರ್ಥಿಸೋಣ.”

—ಪರಮಹಂಸ ಯೋಗಾನಂದ

Devotees meditating in Ranchi.ಹೀಗೆ, ನಾವು ನೀಡಬಹುದಾದಂತಹ ಅತ್ಯುಚ್ಚ ಸೇವೆಯಲ್ಲೊಂದೆಂದರೆ, ನಾವು ಭಗವಂತನ ಉಪಶಮನಶಕ್ತಿಯನ್ನು ಹರಿಸುವ ಒಂದು ಕಾಲುವೆಯಾಗಿ, ಇತರರಿಗಾಗಿ ಪ್ರಾರ್ಥಿಸುವುದು. ವಸ್ತುಗಳ ದಾನ, ಸಾಮಾಜ ಕಲ್ಯಾಣ ಸೇವೆ ಮತ್ತು ಇತರ ರೀತಿಯ ಸಹಾಯಗಳು, ಇತರರ ಸಂಕಷ್ಟಗಳನ್ನು ತಾತ್ಕಾಲಿಕವಾಗಿ ತಗ್ಗಿಸುವುದಕ್ಕೆ ಮೌಲಿಕವಾದದ್ದು ಮತ್ತು ಅವಶ್ಯಕವಾದದ್ದು, ಆದರೆ ವೈಜ್ಞಾನಿಕ ಪ್ರಾರ್ಥನೆಯು ವಿಶ್ವದ ಸಂಕಷ್ಟಗಳ ಮೂಲ ಕಾರಣವಾದ ಮಾನವಕೋಟಿಯ ತಪ್ಪು ಆಲೋಚನೆಗಳ ಸ್ವರೂಪಗಳ ಬುಡಕ್ಕೆ ಪೆಟ್ಟನ್ನು ನೀಡುತ್ತದೆ:

ಜಾಗತಿಕ ಪ್ರಾರ್ಥನಾ ಸಮೂಹದಲ್ಲಿ ಪಾಲ್ಗೊಳ್ಳುವ ಮೂಲಕ, ನಾವು ಪ್ರತಿಯೊಬ್ಬರೂ ಪ್ರಪಂಚಕ್ಕೆ ಮತ್ತು ಸಹಾಯದ ಅವಶ್ಯಕತೆಯಿರುವ ನಮ್ಮ ಯಾವುದೇ ಪ್ರೀತಿಪಾತ್ರರಿಗೆ ನಿತ್ಯ ಶಾಂತಿಯನ್ನು ಮತ್ತು ಉಪಶಮನವನ್ನು ನೀಡಲು ನಮಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಬಹುದು.

ಇದನ್ನು ಹಂಚಿಕೊಳ್ಳಿ