YSS/SRF ನ ಬಲಿಪೀಠದ ಮೇಲಿರುವ ಏಸು ಕ್ರಿಸ್ತನ ಫೋಟೋ.

ಪರಮಹಂಸ ಯೋಗಾನಂದರ ಯೋಗ ಪ್ರಚಾರದ ಒಂದು ಮುಖ್ಯ ಗುರಿಯೆಂದರೆ “ಭಗವಾನ್‌ ಕೃಷ್ಣ ಬೋಧಿಸಿದ ಮೂಲ ಯೋಗ ಮತ್ತು ಏಸು ಕ್ರಿಸ್ತ ಬೋಧಿಸಿದ ಮೂಲ ಕ್ರೈಸ್ತ ಧರ್ಮದ ಸಂಪೂರ್ಣ ಸಾಮರಸ್ಯವನ್ನು ಹಾಗೂ ಮೂಲಭೂತ ಏಕತೆಯನ್ನು ತಿಳಿಸುವುದಾಗಿತ್ತು; ಮತ್ತು ಸತ್ಯದ ಈ ತತ್ವಗಳೇ ಎಲ್ಲಾ ನೈಜ ಧರ್ಮಗಳ ಸಾಮಾನ್ಯ ವೈಜ್ಞಾನಿಕ ತಳಹದಿಯಾಗಿದೆ ಎಂಬುದನ್ನು ತೋರಿಸುವುದಾಗಿತ್ತು.”

ಏಸು ಕ್ರಿಸ್ತನು ಸಾಮಾನ್ಯ ಜನರಿಗಾಗಿ ವಿಶ್ವಾಸ, ಪ್ರೀತಿ ಮತ್ತು ಕ್ಷಮೆಯ ಸರಳ ತತ್ವಗಳನ್ನು ಪ್ರತಿಪಾದಿಸಿದ್ದಾನೆ. ಅವನು ಹೆಚ್ಚಾಗಿ ಸಮಯಾತೀತ ನೈತಿಕತೆಗಳಿಂದ ತುಂಬಿದ ನೀತಿಕಥೆಗಳ ಮೂಲಕ ಮಾತನಾಡುತ್ತಿದ್ದ. ಆದರೆ ತನ್ನ ಆಪ್ತ ಶಿಷ್ಯರಿಗೆ ಆಳವಾದ ಸತ್ಯಗಳನ್ನು, ಅಂದರೆ, ಹೆಚ್ಚು ಪ್ರಾಚೀನವಾದ ಯೋಗ ತತ್ವಗಳ ಅತ್ಯಂತ ಆಳವಾದ ಆಧ್ಯಾತ್ಮಿಕ ಪರಿಕಲ್ಪನೆಗಳೊಂದಿಗೆ ನಿಕಟ ಸಾಮ್ಯತೆ ಇರುವಂತಹ ಸತ್ಯಗಳನ್ನು ಬೋಧಿಸಿದ್ದಾನೆ.

ಏಸುವಿನ ಅನುಯಾಯಿಗಳು ಒಮ್ಮೆ ಆತನನ್ನು ಪ್ರಶ್ನಿಸುತ್ತಾರೆ, “ನೀವು ಅವರಿಗೆ ನೀತಿಕಥೆಗಳ ಮೂಲಕ ಏಕೆ ಹೇಳುತ್ತೀರಿ?” ಎಂದು. ಅದಕ್ಕೆ ಅವನು ಉತ್ತರಿಸಿದ, “ಏಕೆಂದರೆ, ಬ್ರಹ್ಮಾಂಡದ ನಿಗೂಢ ರಹಸ್ಯಗಳನ್ನು ನೀವು ತಿಳಿದುಕೊಳ್ಳಬೇಕೆಂದು ನಿಮಗೆ ಕೊಡಲಾಗಿದೆ, ಆದರೆ ಅವರಿಗೆ ಕೊಟ್ಟಿಲ್ಲ….ಆದ್ದರಿಂದ ಅವರಿಗೆ ನೀತಿಕಥೆಗಳ ಮೂಲಕ ಹೇಳುತ್ತೇನೆ: ಏಕೆಂದರೆ, ಅವರು ನೋಡಿಯೂ ನೋಡುವುದಿಲ್ಲ; ಕೇಳಿಯೂ ಕೇಳುವುದಿಲ್ಲ ಮತ್ತು ಅವರಿಗೆ ಅರ್ಥವಾಗುವುದೂ ಇಲ್ಲ.” (ಮ್ಯಾಥ್ಯೂ 13:10,11,13).

ಏಸುವು ತನ್ನ ಶಿಷ್ಯರಿಗೆ ಯೋಗ ಧ್ಯಾನದ ನಿಗೂಢ ತಂತ್ರಗಳನ್ನು ನೀಡಿದ್ದಾನೆ ಎಂಬ ಅಂಶವನ್ನು ಒಳಗೊಂಡಂತೆ, ಅವನ ಮೂಲ ಬೋಧನೆಗಳ ಸಂಪೂರ್ಣ ಅರ್ಥವನ್ನು ಪರಮಹಂಸ ಯೋಗಾನಂದರು ತಮ್ಮ: ದಿ ಸೆಕೆಂಡ್‌ ಕಮಿಂಗ್‌ ಆಫ್‌ ಕ್ರೈಸ್ಟ್‌: ದಿ ರಿಸರೆಕ್ಷನ್‌ ಆಫ್‌ ದಿ ಕ್ರೈಸ್ಟ್‌ ವಿದಿನ್‌ ಯೂ ಎಂಬ ಪುಸ್ತಕದಲ್ಲಿ ಆಳವಾದ ವ್ಯಾಖ್ಯಾನದೊಂದಿಗೆ ವಿವರಿಸಿದ್ದಾರೆ. ಈ ಪುಸ್ತಕದ ಪೀಠಿಕೆಯಲ್ಲಿ, ಯೋಗಾನಂದರು ಹೀಗೆ ಬರೆದಿದ್ದಾರೆ:

“ಏಸು ಕ್ರಿಸ್ತನು ಇಂದಿಗೂ ಜೀವಂತವಾಗಿದ್ದಾನೆ ಮತ್ತು ಕಾರ್ಯನಿರತನಾಗಿದ್ದಾನೆ. ಚೇತನಸ್ವರೂಪಿಯಾಗಿ ಮತ್ತು ಕೆಲವೊಮ್ಮೆ ಭೌತಿಕ ರೂಪದಲ್ಲಿ, ಅವನು ಜನಸಾಮಾನ್ಯರ ಕಣ್ಣಿಗೆ ಕಾಣಿಸದಂತೆ, ಈ ಪ್ರಪಂಚದ ಪುನರುತ್ಥಾನಕ್ಕಾಗಿ ಶ್ರಮಿಸುತ್ತಿದ್ದಾನೆ. ಎಲ್ಲರ ಬಗ್ಗೆ ಇರುವ ಅತೀವ ಪ್ರೀತಿಯಿಂದಾಗಿ, ಏಸುವು ತಾನು ಮಾತ್ರ ಸ್ವರ್ಗದ ಆನಂದಮಯ ಪ್ರಜ್ಞೆಯನ್ನು ಅನುಭವಿಸುವುದರಿಂದ ತೃಪ್ತನಾಗಿಲ್ಲ. ಮನುಕುಲದ ಬಗ್ಗೆ ಅವನಿಗೆ ಅತ್ಯಂತ ಕಾಳಜಿ ಇದೆ ಮತ್ತು ತನ್ನ ಅನುಯಾಯಿಗಳಿಗೆ ಭಗವಂತನ ಅನಂತ ಸಾಮ್ರಾಜ್ಯವನ್ನು ಪ್ರವೇಶಿಸಲು ಬೇಕಾದ ದಿವ್ಯ ಸ್ವಾತಂತ್ರ್ಯವನ್ನು ಹೊಂದುವ ಬಗೆಯನ್ನು ತಿಳಿಸಬಯಸುತ್ತಾನೆ. ಅವನು ನಿರಾಶನಾಗಿದ್ದಾನೆ, ಏಕೆಂದರೆ ಅನೇಕ ಚರ್ಚುಗಳು ಮತ್ತು ದೇವಾಲಯಗಳು ಅವನ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟಿವೆ, ಅವು ಹೆಚ್ಚಾಗಿ ಶ್ರೀಮಂತವೂ ಪ್ರಬಲವೂ ಆಗಿರುತ್ತವೆ, ಆದರೆ ಅವನು ಒತ್ತಿಹೇಳಿದ ಸಂಸರ್ಗ, ಅಂದರೆ ಭಗವಂತನೊಂದಿಗೆ ನಿಜವಾದ ಸಂಪರ್ಕ ಎಲ್ಲಿದೆ? ಮೊಟ್ಟಮೊದಲು, ಮಾನವರ ಆತ್ಮಗಳಲ್ಲಿ ಮಂದಿರಗಳು ಸ್ಥಾಪಿತವಾಗಬೇಕು; ನಂತರ ಹೊರನೋಟಕ್ಕೆ ಭೌತಿಕ ಪೂಜಾಸ್ಥಳಗಳನ್ನು ಸ್ಥಾಪಿಸಬೇಕೆಂದು ಅವನು ಬಯಸುತ್ತಾನೆ. ಅದರ ಬದಲು, ಅಪಾರ ಜನಸ್ತೋಮಗಳಿರುವ ಅಸಂಖ್ಯಾತ ಭವ್ಯ ಸೌಧಗಳಲ್ಲಿ ಚರ್ಚ್‌ ಧರ್ಮವನ್ನು (ಚರ್ಚ್‌ಯಾನಿಟಿ) ಬೋಧಿಸಲಾಗುತ್ತಿದೆ, ಆದರೆ ಆಳವಾದ ಪ್ರಾರ್ಥನೆ ಮತ್ತು ಧ್ಯಾನದ ಮೂಲಕ ಕ್ರಿಸ್ತನೊಂದಿಗೆ ನಿಜವಾಗಿಯೂ ಸಂಪರ್ಕದಲ್ಲಿರುವ ಆತ್ಮಗಳು ಕೆಲವೇ ಕೆಲವು.

“ಕ್ರಿಸ್ತ ಮತ್ತು ಕೃಷ್ಣರಿಂದ ಪ್ರತಿಪಾದಿಸಲ್ಪಟ್ಟ ಭಗವತ್‌ಸಂಸರ್ಗದ ಮೂಲ ಬೋಧನೆಗಳ ಪುನರುಜ್ಜೀವನದ ಮೂಲಕ ಆತ್ಮಗಳ ಮಂದಿರಗಳಲ್ಲಿ ಭಗವಂತನನ್ನು ಪುನರ್‌ಸ್ಥಾಪಿಸುವ ಕಾರಣಕ್ಕಾಗಿ ಮಹಾವತಾರ ಬಾಬಾಜಿಯವರು ನನ್ನನ್ನು ಪಶ್ಚಿಮಕ್ಕೆ ಕಳಿಸಿದರು….

“ಬಾಬಾಜಿ ನಿರಂತರವಾಗಿ ಕ್ರಿಸ್ತನೊಡನೆ ಸಂಪರ್ಕ ಹೊಂದಿರುವವರು. ಇಬ್ಬರೂ ಒಟ್ಟುಗೂಡಿ ವಿಮೋಚನೆಗೊಳಿಸುವ ಸ್ಪಂದನಗಳನ್ನು ಕಳಿಸಿಕೊಡುತ್ತಾರೆ ಹಾಗೂ ಈ ಯುಗಕ್ಕನುಗುಣವಾಗಿ ಮೋಕ್ಷಕ್ಕೆ ಬೇಕಾದ ಆಧ್ಯಾತ್ಮಿಕ ತಂತ್ರವನ್ನು ಯೋಜಿಸಿದ್ದಾರೆ.”

ಇದನ್ನು ಹಂಚಿಕೊಳ್ಳಿ