
ಲಾಹಿರಿ ಮಹಾಶಯರು 30 ಸೆಪ್ಟೆಂಬರ್, 1828 ರಂದು ಭಾರತದ ಬಂಗಾಳದ ಘುರ್ನಿ ಗ್ರಾಮದಲ್ಲಿ ಜನಿಸಿದರು. ತಮ್ಮ ಮೂವತ್ಮೂರನೆಯ ವಯಸ್ಸಿನಲ್ಲಿ, ರಾಣಿಖೇತ್ ಬಳಿಯ ಹಿಮಾಲಯದ ತಪ್ಪಲಿನಲ್ಲಿ ಒಂದು ದಿನ ನಡೆಯುತ್ತಿದ್ದಾಗ, ಅವರು ತಮ್ಮ ಗುರು ಮಹಾವತಾರ್ ಬಾಬಾಜಿಯನ್ನು ಭೇಟಿಯಾದರು. ಈ ಭೇಟಿಯು ಹಿಂದಿನ ಅನೇಕ ಜನ್ಮಗಳಲ್ಲಿ ಜೊತೆಗೂಡಿ ಇದ್ದ ಇಬ್ಬರ ದಿವ್ಯ ಪುನರ್ಮಿಲನವಾಗಿತ್ತು; ಜಾಗೃತಗೊಳಿಸುವಂತಹ ಅನುಗ್ರಹದ ಸ್ಪರ್ಶದಿಂದ, ಲಾಹಿರಿ ಮಹಾಶಯರು, ಎಂದಿಗೂ ತೊರೆದು ಹೋಗದಿರುವ ದಿವ್ಯಾನುಭೂತಿಯ ಆಧ್ಯಾತ್ಮಿಕ ಪ್ರಭೆಯಲ್ಲಿ ಮುಳುಗಿದರು.
ಮಹಾವತಾರ್ ಬಾಬಾಜಿಯವರು, ಲಾಹಿರಿ ಮಹಾಶಯರಿಗೆ ಕ್ರಿಯಾ ಯೋಗ ವಿಜ್ಞಾನದ ದೀಕ್ಷೆಯನ್ನು ನೀಡಿದರು ಮತ್ತು ಎಲ್ಲಾ ಪ್ರಾಮಾಣಿಕ ಅನ್ವೇಷಕರಿಗೆ ಕ್ರಿಯಾ ಯೋಗದ ಪವಿತ್ರ ತಂತ್ರವನ್ನು ದಯಪಾಲಿಸುವಂತೆ ಸೂಚಿಸಿದರು. ಈ ಧ್ಯೇಯವನ್ನು ನೆರವೇರಿಸಲು ಲಾಹಿರಿ ಮಹಾಶಯರು ಬನಾರಸ್‌ನಲ್ಲಿರುವ ತಮ್ಮ ಮನೆಗೆ ಹಿಂದಿರುಗಿದರು. ಕಳೆದುಹೋಗಿದ್ದ ಪ್ರಾಚೀನ ಕ್ರಿಯಾ ವಿಜ್ಞಾನದ ತಂತ್ರವನ್ನು ಸಮಕಾಲೀನ ಕಾಲದಲ್ಲಿ ಕಲಿಸಿದ ಮೊದಲಿಗರಾಗಿ, ಅವರು, ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಆಧುನಿಕ ಭಾರತದಲ್ಲಿ ಪ್ರಾರಂಭವಾದ ಯೋಗದ ಪುನರುಜ್ಜೀವನದ ಮೂಲ ವ್ಯಕ್ತಿಯೆಂದು ಪ್ರಸಿದ್ಧರಾಗಿದ್ದಾರೆ ಮತ್ತು ಅದು ಇಂದಿಗೂ ಮುಂದುವರಿದಿದೆ.
ಪರಮಹಂಸ ಯೋಗಾನಂದರು ಯೋಗಿಯ ಆತ್ಮಕಥೆಯಲ್ಲಿ ಹೀಗೆ ಬರೆದಿದ್ದಾರೆ: “ಹೂಗಳ ಪರಿಮಳವನ್ನು ಹೇಗೆ ಅದುಮಿಡಲು ಸಾಧ್ಯವಿಲ್ಲವೋ ಹಾಗೆ ಶಾಂತತೆಯಿಂದ ಆದರ್ಶ ಗೃಹಸ್ಥನಂತೆ ಜೀವಿಸುತ್ತಿದ್ದ ಲಾಹಿರಿ ಮಹಾಶಯರು ತಮ್ಮ ಸಹಜವಾದ ಭವ್ಯತೆಯನ್ನು ಬಚ್ಚಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಆ ಮುಕ್ತಾತ್ಮನಾದ ಗುರುವಿನ ಬಳಿ ದಿವ್ಯಮಕರಂದವನ್ನರಸಿಕೊಂಡು ಶಿಷ್ಯಮಧುಕರಗಳು ಭಾರತದ ಎಲ್ಲ ಭಾಗಗಳಿಂದಲೂ ಬರತೊಡಗಿದರು….ಈ ಮಹಾನ್ ಗೃಹಸ್ಥ-ಗುರು ನಡೆಸಿದ ಸುಸಂಗತವಾದ ಸಮತೋಲನ ಜೀವನ ಸಹಸ್ರಾರು ಸ್ತ್ರೀಪುರುಷರಿಗೆ ಸ್ಫೂರ್ತಿ ನೀಡಿತು.”
ಲಾಹಿರಿ ಮಹಾಶಯರು ಆತ್ಮವನ್ನು ಪರಮಾತ್ಮನೊಂದಿಗೆ ಸಂಯೋಗಗಳಿಸುವ ಯೋಗದ ಅತ್ಯುನ್ನತ ಆದರ್ಶಗಳಿಗೆ ಮಾದರಿಯಾಗಿದ್ದ ಕಾರಣ, ಅವರನ್ನು ಯೋಗಾವತಾರ ಅಥವಾ ಯೋಗದ ಅವತಾರ ಎಂದು ಪೂಜ್ಯಭಾವನೆಯಿಂದ ನೋಡಲಾಗುತ್ತದೆ.
ಪರಮಹಂಸ ಯೋಗಾನಂದರ ಪೋಷಕರು ಲಾಹಿರಿ ಮಹಾಶಯರ ಶಿಷ್ಯರಾಗಿದ್ದರು, ಮತ್ತು ಅವರು ಇನ್ನೂ ಆಕೆಯ ತೋಳುಗಳಲ್ಲಿ ಹಸುಳೆಯಾಗಿದ್ದಾಗಲೇ ಅವರ ತಾಯಿ ಅವರನ್ನು ತಮ್ಮ ಗುರುಗಳ ಮನೆಗೆ ಕರೆದೊಯ್ದರು. ಮಗುವನ್ನು ಆಶೀರ್ವದಿಸಿ, ಲಾಹಿರಿ ಮಹಾಶಯರು ಹೇಳಿದರು, “ತಾಯಿ, ನಿನ್ನ ಮಗ ಯೋಗಿಯಾಗುತ್ತಾನೆ. ಆಧ್ಯಾತ್ಮಿಕ ಎಂಜಿನ್ ಆಗಿ ಅನೇಕ ಆತ್ಮಗಳನ್ನು ಭಗವಂತನ ಸಾಮ್ರಾಜ್ಯಕ್ಕೆ ಸೆಳೆದೊಯ್ಯುತ್ತಾನೆ” ಎಂದರು.
ಲಾಹಿರಿ ಮಹಾಶಯರು ತಮ್ಮ ಜೀವಿತಾವಧಿಯಲ್ಲಿ ಯಾವುದೇ ಸಂಘಟನೆಯನ್ನು ಸ್ಥಾಪಿಸಲಿಲ್ಲ, ಆದರೆ ಅವರು ಈ ಭವಿಷ್ಯವಾಣಿಯನ್ನು ನುಡಿದರು, “ನಾನು ಹೊರಟುಹೋದ ಸುಮಾರು ಐವತ್ತು ವರ್ಷಗಳ ಮೇಲೆ, ಯೋಗದ ಬಗ್ಗೆ ಪಾಶ್ಚಾತ್ಯ ದೇಶಗಳಲ್ಲಿ, ತೀವ್ರವಾದ ಆಸಕ್ತಿಯುಂಟಾಗುವುದರಿಂದ, ನನ್ನ ಜೀವನದ ಪ್ರಸಂಗಗಳನ್ನು ಬರೆಯಲಾಗುತ್ತದೆ. ಯೋಗದ ಸಂದೇಶವು ಭೂಮಂಡಲವನ್ನೆಲ್ಲ ಆವರಿಸುತ್ತದೆ. ಮನುಷ್ಯರ ಭ್ರಾತೃತ್ವವನ್ನು ಸ್ಥಾಪಿಸುವುದಕ್ಕೆ, ಅದರಿಂದ ಸಹಾಯವಾಗುತ್ತದೆ: ಮಾನವರೆಲ್ಲ ಒಬ್ಬನೇ ತಂದೆಯ ಮಕ್ಕಳು ಎಂಬ ನೇರ ಅರಿವಿನಿಂದ ಮೂಡುವ ಒಗ್ಗಟ್ಟು ಅದು.”
ಲಾಹಿರಿ ಮಹಾಶಯರು 26 ಸೆಪ್ಟೆಂಬರ್, 1895 ರಂದು ಬನಾರಸ್‌ನಲ್ಲಿ ಮಹಾಸಮಾಧಿಯನ್ನು ಹೊಂದಿದರು. ಇದಾದ ಐವತ್ತು ವರ್ಷಗಳ ನಂತರ, ಪಾಶ್ಚಿಮಾತ್ಯ ದೇಶಗಳಲ್ಲಿ ಯೋಗದ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯು ಅಮರಿಕದಲ್ಲಿ ಪರಮಹಂಸ ಯೋಗಾನಂದರಿಗೆ ಯೋಗಿಯ ಆತ್ಮಕಥೆಯನ್ನು ಬರೆಯಲು ಪ್ರೇರೇಪಿಸಿತು, ಅದು ಲಾಹಿರಿ ಮಹಾಶಯರ ಜೀವನದ ಕುರಿತಾದ ಸುಂದರವಾದ ಕಥನವನ್ನು ಹೊಂದಿದೆ.