ಶ್ರೀ ಶ್ರೀ ಮೃಣಾಲಿನಿ ಮಾತಾ: ಗುರುಗಳ ಮಾಧ್ಯಮ

Sri Mrinalini Mata editor-in-chief of SRF

ಆಗಸ್ಟ್ 3, 2017 ರಂದು, ನಮ್ಮ ಪ್ರೀತಿಯ ಸಂಘಮಾತಾ ಮತ್ತು ಅಧ್ಯಕ್ಷರಾದ ಶ್ರೀ ಮೃಣಾಲಿನಿ ಮಾತಾರವರು ಶಾಂತಿಯುತವಾಗಿ ಇಹಲೋಕವನ್ನು ತೊರೆದು ಪರಮಾತ್ಮನಲ್ಲಿ ಆನಂದ ಮತ್ತು ಮುಕ್ತಿಯ ಶಾಶ್ವತ ಲೋಕಕ್ಕೆ ತೆರಳಿದರು. ಪರಮಹಂಸ ಯೋಗಾನಂದರ ಬೋಧನೆಗಳಿಂದ ಜೀವನವು ಪರಿವರ್ತಿತವಾದ ಲಕ್ಷಾಂತರ ಸತ್ಯಾನ್ವೇಷಕರಿಗೆ ಜ್ಞಾನ, ಪ್ರೀತಿ ಮತ್ತು ತಿಳುವಳಿಕೆಯ ಮಾರ್ಗದರ್ಶಕ ಬೆಳಕಾಗಿರುವ, ಶ್ರೀ ಮೃಣಾಲಿನಿ ಮಾತಾ ಎಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಗುರುಗಳ ಆಧ್ಯಾತ್ಮಿಕ ಮತ್ತು ಮಾನವೀಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡರು. ನಮ್ಮ ಗುರುಗಳೆಡೆಗೆ ಅನಿರ್ಬಂಧಿತ ಭಕ್ತಿ ಮತ್ತು ಸೇವೆಯ, ಮತ್ತು ಗುರುವಿನ ಜ್ಞಾನ ಮತ್ತು ಆದರ್ಶಗಳೊಂದಿಗೆ ಆಳವಾದ ಶ್ರುತಿಗೂಡುವಿಕೆಯ ಶ್ರೇಷ್ಠ ಮಾದರಿಯಾದ ಈ ಉದಾತ್ತ ಆತ್ಮವು ಪ್ರಪಂಚದಾದ್ಯಂತದ ಅಸಂಖ್ಯಾತ ಭಕ್ತರಿಗೆ ಸದಾ ಭಗವಂತನ ಬೆಳಕು ಮತ್ತು ಪ್ರೀತಿಯಲ್ಲಿ ನೆಲೆಸುವ ಮಾರ್ಗವನ್ನು ಬೆಳಗಿಸಿತು.

ಪರಮಹಂಸ ಯೋಗಾನಂದರಿಂದ ಆಯ್ಕೆ ಮತ್ತು ತರಬೇತಿ

ಶ್ರೀ ಮೃಣಾಲಿನಿ ಮಾತಾರವರು ಪರಮಹಂಸಜಿಯವರ ಅಗ್ರಗಣ್ಯ ನೇರ ಶಿಷ್ಯರಲ್ಲಿ ಒಬ್ಬರೆಂದು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತಾರೆ. ಗುರುವಿನ ನಿಧನದ ನಂತರ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್‌ನ ಕೆಲಸವನ್ನು ಮುಂದುವರಿಸಲು ಅವರಿಂದ ವೈಯಕ್ತಿಕವಾಗಿ ತರಬೇತಿ ಪಡೆದ ಆಯ್ದ ಗುಂಪಿನಲ್ಲಿ ಅವರೂ ಒಬ್ಬರು ಮತ್ತು 2011 ರಲ್ಲಿ ವೈಎಸ್‌ಎಸ್/ಎಸ್‌ಆರ್‌ಎಫ್‌ನ ನಾಲ್ಕನೇ ಅಧ್ಯಕ್ಷರಾದರು. ಶ್ರೀ ದಯಾ ಮಾತಾರವರು 1955 ರಿಂದ 2010 ರಲ್ಲಿ ನಿಧನರಾಗುವವರೆಗೆ ಈ ಸ್ಥಾನದಲ್ಲಿದ್ದು ಸೇವೆ ಸಲ್ಲಿಸಿದ್ದರು, ಮೃಣಾಲಿನಿ ಮಾತಾ, ಅವರ ಉತ್ತರಾಧಿಕಾರಿಯಾದರು. ಅವರು ವೈಎಸ್‌ಎಸ್/ಎಸ್‌ಆರ್‌ಎಫ್ ಪ್ರಕಟಣೆಗಳ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು, ಅವರು ಪರಮಹಂಸ ಯೋಗಾನಂದರ ಬೋಧನೆಗಳ ಪ್ರಕಟಣೆಯ ಜವಾಬ್ದಾರಿಯನ್ನು ಹೊತ್ತಿದ್ದರು—ಈ ಪಾತ್ರಕ್ಕಾಗಿ ಅವರು ಪರಮಹಂಸಜಿಯವರಿಂದಲೇ ತರಬೇತಿ ಪಡೆದಿದ್ದರು ಮತ್ತು ಈ ಪಾತ್ರವನ್ನು ಅವರು ತಮ್ಮ ಜೀವನದ ಕೊನೆಯವರೆಗೂ ನಿರ್ವಹಿಸಿದರು. ಅಧ್ಯಕ್ಷತೆಯನ್ನು ವಹಿಸಿಕೊಳ್ಳುವ ಮೊದಲು, ಮೃಣಾಲಿನಿ ಮಾತಾಜಿಯವರು ನಲವತ್ತೈದು ವರ್ಷಗಳ ಕಾಲ ಎಸ್‌ಆರ್‌ಎಫ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತ, ವೈಎಸ್‌ಎಸ್/ಎಸ್‌ಆರ್‌ಎಫ್ ಸನ್ಯಾಸಿಗಳ ಸಮಗ್ರ ಮಾರ್ಗದರ್ಶನದಲ್ಲಿ ಶ್ರೀ ದಯಾ ಮಾತಾರವರಿಗೆ ನಿಕಟವಾಗಿ ಸಹಾಯ ಮಾಡಿದರು ಮತ್ತು ಸಂಸ್ಥೆಯು ಪ್ರತಿ ವರ್ಷ ಒದಗಿಸುವ ಹಲವಾರು ಚಟುವಟಿಕೆಗಳು ಮತ್ತು ಸೇವೆಗಳ ಮೇಲ್ವಿಚಾರಣೆ ಮಾಡಿದರು.

ಅವರು ಗುರುವಿನಿಂದ ಪಡೆದುಕೊಂಡ ಆಧ್ಯಾತ್ಮಿಕ ಬೆಳಕು ಮತ್ತು ಜ್ಞಾನವನ್ನು ಜನರಿಗೆ ತಲುಪಿಸುವುದು

ಗುರುದೇವ ಪರಮಹಂಸ ಯೋಗಾನಂದರ ಕಾರ್ಯವನ್ನು, ತಾವು ನಿರ್ವಹಿಸಿದ ಪ್ರತಿಯೊಂದು ಪಾತ್ರದಲ್ಲಿ, ಮೃಣಾಲಿನಿ ಮಾತಾಜಿ, ಗುರುವಿನ ಬೋಧನೆಗಳ ದಿವ್ಯ ಜ್ಞಾನದಿಂದ ಹಾಗೂ ತಮ್ಮ ನಿಷ್ಠೆಯಿಂದ ಮತ್ತು ಗುರುವಿನಲ್ಲಿ ಸಂಪೂರ್ಣ ವಿಶ್ವಾಸದಿಂದ ಮಾರ್ಗದರ್ಶಿಸಲ್ಪಟ್ಟರು—ಬೋಧನೆಗಳು ಅವರನ್ನು ಸಂಪೂರ್ಣವಾಗಿ ಆವರಿಸಿದ್ದವು. ಗುರುವಿನಿಂದ ಪಡೆದ ವೈಯಕ್ತಿಕ ತರಬೇತಿಯಿಂದಾಗಿ, ಸನ್ಯಾಸಿಗಳಿಗೆ ಮತ್ತು ಗೃಹಸ್ಥ ಭಕ್ತಾದಿಗಳಿಗೆ—ಗುರುವು ಕಲಿಸಿದ ಆಧ್ಯಾತ್ಮಿಕ ಜೀವನದ ನಿಯಮಗಳು, ಅವರ ಉನ್ನತ ಆದರ್ಶಗಳು ಅಂತೆಯೇ, ಭಗವದನ್ವೇಷಣೆಯಲ್ಲಿ ಪ್ರಾಮಾಣಿಕರಾಗಿರುವವರೆಲ್ಲರಿಗೂ ಗುರು ನೀಡಿದ ಪ್ರೀತಿಪೂರ್ವಕ ಪ್ರೋತ್ಸಾಹವನ್ನು ತಿಳಿಸಲು ಅವರು ಆದರ್ಶಪ್ರಾಯವಾಗಿ ಅರ್ಹರಾಗಿದ್ದರು.

ಗುರುದೇವರೊಂದಿಗೆ ಕಳೆದ ವರ್ಷಗಳಲ್ಲಿ ಆದ ತಮ್ಮ ಅನುಭವಗಳನ್ನು ಅವರು ಸಂಭಾಷಣೆಗಳು ಮತ್ತು ಬರಹಗಳಲ್ಲಿ ಹಂಚಿಕೊಂಡಿದ್ದಾರೆ, ಅನೇಕರು ಅದರಿಂದ ಸ್ಫೂರ್ತಿ ಪಡೆದಿದ್ದಾರೆ. ಪರಮಹಂಸಜಿಯವರ ಆಶ್ರಮಗಳಲ್ಲಿ ಸನ್ಯಾಸಿಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು, ಆಶ್ರಮ ಜೀವನವನ್ನು ಪ್ರವೇಶಿಸುವವರಿಗೆ ಗುರುವಿನ ಆದರ್ಶಗಳಲ್ಲಿ ಸಂಪೂರ್ಣ ತಳಹದಿಯನ್ನು ನೀಡಿದರು ಮತ್ತು ತಾವು ಗುರುವಿನಿಂದ ಪಡೆದ ತರಬೇತಿಯನ್ನು ಅವರಿಗೂ ಕೊಟ್ಟರು.

ಅನೇಕ ವರ್ಷಗಳ ಹಿಂದೆ, ಅವರು ಇನ್ನೂ ಹದಿಹರೆಯದವರಾಗಿದ್ದಾಗ, ಪರಮಹಂಸಜಿ, ಅವರಿಗೆ ಹೀಗೆ ಹೇಳಿದರು: “ಒಂದು ದಿನ, ನೀನು ಅನೇಕಾನೇಕ ಜನರಿಗೆ ತರಬೇತಿ ನೀಡಬೇಕಾಗಿ ಬರುತ್ತದೆ.” ಆ ಸಮಯದಲ್ಲಿ ಅವರು ಸಹಜವಾಗಿಯೇ ಆಶ್ಚರ್ಯಚಕಿತರಾಗಿದ್ದರೂ (ತಾವೇ ಈ ಮಾರ್ಗದಲ್ಲಿ ತೀರಾ ಹೊಸಬರಾಗಿದ್ದುದರಿಂದ), ದೂರದೃಷ್ಟಿಯುಳ್ಳ ಗುರುವಿನ ಭವಿಷ್ಯವಾಣಿಯ ನೆರವೇರಿಕೆಯಿಂದ ಅನೇಕ ವರ್ಷಗಳಿಂದ ಸಾವಿರಾರು ಜನರು ಅನುಗ್ರಹಿಸಲ್ಪಟ್ಟಿದ್ದಾರೆ. ಭಗವಂತ ಮತ್ತು ಗುರುವಿನಲ್ಲಿ ಹಾಗೂ ಆತ್ಮದ ದಿವ್ಯ ಸಾಮರ್ಥ್ಯದಲ್ಲಿ ವಿಶ್ವಾಸವನ್ನಿರಿಸುವುದು ಬಹು ಮುಖ್ಯವಾಗಿರುವಂತೆಯೇ, ಒಬ್ಬರು ತಮ್ಮನ್ನು ತಾವು ಬದಲಿಸಿಕೊಳ್ಳಲು ಧ್ಯಾನಗಳಲ್ಲಿ ಮತ್ತು ದೈನಂದಿನ ಪ್ರಯತ್ನಗಳಲ್ಲಿ, ತಾಳ್ಮೆಯಿಂದ ಶ್ರಮಿಸುವುದು ಆಧ್ಯಾತ್ಮಿಕ ಪ್ರಗತಿಗೆ ಬಹು ಮುಖ್ಯ ಎಂದು ಸನ್ಯಾಸಿಗಳು ಮತ್ತು ಸಾಮಾನ್ಯ ಸದಸ್ಯರಿಗೆ ಸಮಾನವಾಗಿ ಮೃಣಾಲಿನಿ ಮಾತಾ ಪ್ರೋತ್ಸಾಹಿಸಿದರು.

ಅವರು ಹೇಳಿದರು: “ಈ ಕ್ಷಣದಲ್ಲಿ ನೀವು ಏನಾಗಿರುವಿರೋ ಅದನ್ನು ನೀವೇ ಮಾಡಿಕೊಂಡಿರುವುದು ಬೇರೆ ಯಾರೂ ಅಲ್ಲ. ನಿಮ್ಮ ಇಚ್ಛಾಸ್ವಾತಂತ್ರ್ಯದಿಂದ ನೀವು ಏನನ್ನು ಸೃಷ್ಟಿಸುತ್ತಿದ್ದಿರೋ ಅದರಲ್ಲಿ ಭಗವಂತ ಮಧ್ಯಪ್ರವೇಶಿಸಲಿಲ್ಲ. ಮತ್ತು ನೀವು ಏನಾಗಿರುವಿರೋ ಅದು ಬೇರೆ ಯಾರೂ ಆದೇಶಿಸಿದುದಲ್ಲ. ಇಂದು ನೀವೇನಾಗಿರುವಿರೋ ಅದು, ನಿಮ್ಮ ಯುಕ್ತಾಯುಕ್ತ ಕಾರ್ಯಗಳು ಮತ್ತು ಆಲೋಚನೆಗಳು ಮತ್ತು ಉದ್ದೇಶಗಳು ಮತ್ತು ಆಸೆಗಳಿಂದ ನೀವೇ ಸೃಷ್ಟಿಸಿಕೊಂಡಿರುವುದು. ಮತ್ತು ನಮ್ಮ ನಿಯತಿಯನ್ನು ನಾವೇ ಮಾಡಿಕೊಂಡಿದ್ದುದಾದರೆ, ನಮಗೆ ಅದನ್ನು ಬದಲಾಯಿಸುವ ಶಕ್ತಿಯೂ ಇರುತ್ತದೆ. ‘ನೀವು ಈಗಲೇ ಆಧ್ಯಾತ್ಮಿಕ ಸಾಧನೆಯನ್ನು ಕೈಗೊಂಡರೆ ಭವಿಷ್ಯತ್ತಿನಲ್ಲಿ ಎಲ್ಲವೂ ಸುಧಾರಿಸುವುದು.” ಎಂದು ಶ್ರೀಯುಕ್ತೇಶ್ವರರು ಹೇಳಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ನಾನು ನಿಮಗೆ ಮನಗಾಣಿಸಬಹುದಾದ ಒಂದು ಅಂಶವಿದ್ದರೆ, ಅದು ಪ್ರಜ್ಞಾಪೂರ್ವಕ ಆಧ್ಯಾತ್ಮಿಕ ಪ್ರಯತ್ನ— ನಿಮ್ಮ ಜೀವನದ ಯಾವುದೇ ಅಪೂರ್ಣತೆ ಅಥವಾ ಮಿತಿಯನ್ನು ಒಪ್ಪಿಕೊಳ್ಳದಿರುವುದು.”

ಬಾಲ್ಯ ಹಾಗೂ ಎಸ್‌ಆರ್‌ಎಫ್‌ ಮಾರ್ಗದ ಪರಿಚಯವಾದುದು

ಶ್ರೀ ಮೃಣಾಲಿನಿ ಮಾತಾರವರು 1931 ರಲ್ಲಿ ಕಾನ್ಸಾಸ್‌ನ ವಿಚಿತಾದಲ್ಲಿ ಜನಿಸಿದರು. ಪೂರ್ವಾಶ್ರಮದಲ್ಲಿ ಮೆರ್ನಾ ಬ್ರೌನ್ ಎಂದು ಕರೆಯಲ್ಪಡುತ್ತಿದ್ದ ಅವರು ತಮ್ಮ ಯೌವನದ ಹೆಚ್ಚಿನ ಭಾಗವನ್ನು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕಳೆದರು. ಇತರರಿಂದ ಆಳವಾಗಿ ಧಾರ್ಮಿಕಳು ಮತ್ತು ಸಂಕೋಚದ ಮಗು ಎಂದು ವರ್ಣಿಸಲ್ಪಡುತ್ತಿದ್ದ ಯುವ ಮೆರ್ನಾ ಹದಿನಾಲ್ಕು ವರ್ಷದವರಾಗಿದ್ದಾಗ ಎಸ್‌ಆರ್‌ಎಫ್‌ನ ಸ್ಯಾನ್ ಡಿಯಾಗೋ ಮಂದಿರದಲ್ಲಿ ಪರಮಹಂಸಜಿಯನ್ನು ಮೊದಲು ಭೇಟಿಯಾದರು. ತಮ್ಮ ಹಿರಿಯ ಮಗಳು ಗುರುಗಳ ಬೋಧನೆಗಳಲ್ಲಿ ಆಸಕ್ತಿವಹಿಸಿ ಅವರೊಂದಿಗೆ ಹಲವಾರು ವೈಯಕ್ತಿಕ ಸಂದರ್ಶನಗಳನ್ನು ಹೊಂದಿದ ನಂತರ, ಆಕೆಯ ತಾಯಿಯು ಸ್ಯಾನ್ ಡಿಯಾಗೋ ಮಂದಿರದಲ್ಲಿ ಪರಮಹಂಸಜಿಯವರ ಸತ್ಸಂಗಗಳಿಗೆ ಹಾಜರಾಗಲು ಪ್ರಾರಂಭಿಸಿದರು. ಪರಮಹಂಸಜಿಯವರು, ಭವಿಷ್ಯತ್ತಿನ ಮೃಣಾಲಿನಿ ಮಾತಾರನ್ನು ಭೇಟಿಯಾಗುವ ಮೊದಲೇ ಅವರಲ್ಲಿ ಆಳವಾದ ಆಸಕ್ತಿಯನ್ನು ವಹಿಸಿದರು, ಹಾಗೂ ಅವರನ್ನು ಮಂದಿರಕ್ಕೆ ಕರೆತರುವಂತೆ ಅವರ ತಾಯಿಯನ್ನು ಪ್ರೋತ್ಸಾಹಿಸಿದರು. ಹಲವಾರು ವಿನಂತಿಗಳ ನಂತರ, ಮೃಣಾಲಿನಿ ಮಾತಾರನ್ನು ಭಾನುವಾರದ ಸತ್ಸಂಗಗಳಲ್ಲಿ ಒಂದಕ್ಕೆ ತಮ್ಮೊಂದಿಗೆ ಬರುವಂತೆ ಮನವೊಲಿಸಲು ಆಕೆಗೆ ಸಾಧ್ಯವಾಯಿತು. ತಾನು ಬೆಳೆದಂಥ ಚರ್ಚಿನೆಡೆಗಿನ ನಿಷ್ಠೆಯಿಂದಾಗಿ ಮೃಣಾಲಿನಿ ಮಾತಾರಿಗೆ ಬೇರೊಂದು ಧರ್ಮದ ಸತ್ಸಂಗಗಳಿಗೆ ಬರಲು ಇಷ್ಟವಿರಲಿಲ್ಲ, ಆದರೂ ಪರಮಹಂಸಜಿಯವರ ಬೋಧನೆಗಳು ಕ್ರಿಸ್ತನು ಕಲಿಸಿದ ಅದೇ ತತ್ತ್ವಚಿಂತನೆಯನ್ನು ಸುಂದರವಾಗಿ ಪ್ರತಿಬಿಂಬಿಸುತ್ತವೆ ಎಂದು ಆಕೆಯ ತಾಯಿಯು ವಿವರಿಸಿದ ನಂತರ ಅವರು ಅಂತಿಮವಾಗಿ ಎಸ್‌ಆರ್‌ಎಫ್‌ ಮಂದಿರಕ್ಕೆ ಭೇಟಿ ನೀಡಲು ಒಪ್ಪಿಕೊಂಡರು.

ತನ್ನ ಬೈಬಲ್ ಅನ್ನು ತನ್ನ ತೋಳಿನಡಿ ಸಿಕ್ಕಿಸಿಕೊಂಡು, ದೃಢನಿಶ್ಚಯದಿಂದ ಕೂಡಿದ ಯುವ ಮೆರ್ನಾ 1945 ರಲ್ಲಿ ಡಿಸೆಂಬರ್‌ನಲ್ಲಿ ಎಸ್‌ಆರ್‌ಎಫ್‌ನ ಸ್ಯಾನ್ ಡಿಯಾಗೋ ಮಂದಿರವನ್ನು ಪ್ರವೇಶಿಸಿದರು. ಪರಮಹಂಸ ಯೋಗಾನಂದರನ್ನು ಮೊದಲ ಬಾರಿ ನೋಡಿದಾಗ, ಅವರು “ಅಗಾಧವಾದ ಶಾಂತಿಯ ಭಾವನೆ” ಯಿಂದ ಹಾಗೂ “ಬಹು ಹಿಂದಿನಿಂದ ಸುಪರಿಚಿತ” ಎಂಬ ಭಾವನೆಯಿಂದ ತುಂಬಿಕೊಂಡಿದ್ದೆ ಎಂದು ನಂತರದಲ್ಲಿ ಹೇಳಿದರು.

ಪರಮಹಂಸ ಯೋಗಾನಂದರೊಂದಿಗೆ ಕಳೆದ ವರ್ಷಗಳು

ಮುಂದಿನ ವರ್ಷಗಳಲ್ಲಿ ತಮ್ಮ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಪರಮಹಂಸಜಿ ತಕ್ಷಣವೇ ಆಕೆಯನ್ನು ಗುರುತಿಸಿದರು. ವರ್ಷಗಳ ನಂತರ, ಅವರ ನಿಧನದ ಸ್ವಲ್ಪ ಸಮಯದ ಮೊದಲು, ಅವರು ಆ ಮೊದಲ ಭೇಟಿಯ ಬಗ್ಗೆ ಆಕೆಗೆ ಹೇಳಿದರು: “ನಿನಗೆ ಗೊತ್ತೆ, ನೀನು ಸ್ಯಾನ್ ಡಿಯಾಗೋದಲ್ಲಿನ ಆ ಮಂದಿರದೊಳಗೆ ಕಾಲಿಟ್ಟಾಗ ಮತ್ತು ನಾನು ಈ ಜೀವನದಲ್ಲಿ ನಿನ್ನನ್ನು ಮೊದಲ ಬಾರಿ ನೋಡಿದಾಗ, ನಾನು, ನಾವಿಬ್ಬರು ಜೊತೆಯಲ್ಲಿದ್ದಾಗಿನ ಹಿಂದಿನ ಜನ್ಮಗಳ ಸಂಪೂರ್ಣ ಇತಿಹಾಸವನ್ನು ಕಂಡೆ, ಮತ್ತು ನಾನು ಭವಿಷ್ಯವನ್ನೂ ಕಂಡೆ.… ನಾನು ಆ ದಿನ ನೋಡಿದ್ದಕ್ಕಿಂತ ಅದು ಸ್ವಲ್ಪವೂ ಭಿನ್ನವಾಗಿರಲಿಲ್ಲ.”

ಪರಮಹಂಸಜಿಯವರನ್ನು ಭೇಟಿಯಾದ ಅಲ್ಪ ಸಮಯದಲ್ಲೇ, ಯುವ ಮೆರ್ನಾ, ಎಸ್‌ಆರ್‌ಎಫ್ ಸನ್ಯಾಸಿ ಸಮುದಾಯದಲ್ಲಿ ಸನ್ಯಾಸಿನಿಯಾಗಿ ತನ್ನ ಜೀವನವನ್ನು ಭಗವಂತ ಮತ್ತು ಗುರುಗಳಿಗಾಗಿ ಅರ್ಪಿಸಬೇಕಿರುವ ಕರೆಯನ್ನು ಗುರುತಿಸಿದರು. ಆಕೆ ಮೊದಲು ಕಿರಿಯ ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಬೇಕೆಂದು ಗುರುಗಳು ಹೇಳಿದರು. ನಂತರ, ಆಕೆಯ ಪೋಷಕರ ಅನುಮತಿಯೊಂದಿಗೆ, ಜೂನ್ 10, 1946 ರಂದು, ಆಕೆಗೆ ಹದಿನೈದು ವರ್ಷವಾಗಿದ್ದಾಗ, ಆಕೆಯು ಕ್ಯಾಲಿಫೋರ್ನಿಯಾದ ಎನ್‌ಸಿನಿಟಾಸ್‌ನಲ್ಲಿರುವ ಎಸ್‌ಆರ್‌ಎಫ್‌ ಆಶ್ರಮದಲ್ಲಿ ವಾಸಿಸಲು ಬಂದರು. ಎನ್‌ಸಿನಿಟಾಸ್‌ನಲ್ಲಿ ಪರಮಹಂಸಜಿಯವರ ವೈಯಕ್ತಿಕ ಮಾರ್ಗದರ್ಶನ ಮತ್ತು ಆಶ್ರಮ ತರಬೇತಿಯನ್ನು ಪಡೆಯುತ್ತಾ ಪ್ರೌಢಶಾಲೆಯನ್ನು ಮುಗಿಸಿದರು. ಆಶ್ರಮದ ಉಸ್ತುವಾರಿ ವಹಿಸಿದ್ದ ಗುರುಗಳ ಮುಂದುವರಿದ ಶಿಷ್ಯೆ ಶ್ರೀ ಜ್ಞಾನಮಾತಾ, ಆ ವರ್ಷಗಳಲ್ಲಿ ಆಕೆಗೆ ಪ್ರೀತಿಯ ಮತ್ತು ಪ್ರಭಾವಶಾಲಿ ಮಾರ್ಗದರ್ಶಕಿ ಮತ್ತು ಆಧ್ಯಾತ್ಮಿಕ ತಾಯಿಯಾಗಿದ್ದರು. (ಮೃಣಾಲಿನಿ ಮಾತಾರವರ ತಾಯಿ ಎರಡು ವರ್ಷಗಳ ನಂತರ ಆಶ್ರಮವನ್ನು ಪ್ರವೇಶಿಸಿದರು, ಅಲ್ಲಿ ಅವರು ಸಂನ್ಯಾಸದ ಪ್ರತಿಜ್ಞೆ ತೆಗೆದುಕೊಂಡ ನಂತರ ಮೀರಾ ಮಾತಾ ಎಂಬ ಹೆಸರನ್ನು ಪಡೆದರು.)

ಹಿಂದಿನ ಜನ್ಮಗಳಿಂದ ಈ ಯುವ ಶಿಷ್ಯೆಯ ಅಸಾಧಾರಣ ಆಧ್ಯಾತ್ಮಿಕ ಪರಿಪಕ್ವತೆಯ ಬಗ್ಗೆ ತೀಕ್ಷ್ಣವಾಗಿ ಅರಿತಿದ್ದ ಪರಮಹಂಸಜಿಯವರು, ಆಕೆ ಆಶ್ರಮದಲ್ಲಿ ಕೇವಲ ಒಂದು ವರ್ಷ ಕಳೆದ ನಂತರ 1947 ರಲ್ಲಿ ಸನ್ಯಾಸದ ಅಂತಿಮ ಪ್ರತಿಜ್ಞೆಯನ್ನು ತಾವೇ ದಯಪಾಲಿಸಿದರು. ಅವರು ಆಕೆಗೆ “ಮೃಣಾಲಿನಿ” ಎಂಬ ಸನ್ಯಾಸಾಶ್ರಮದ ಹೆಸರನ್ನಿಟ್ಟರು, ಈ ಹೆಸರು ಕಮಲದ ಹೂವಿನ ಶುದ್ಧತೆಯನ್ನು ಸೂಚಿಸುತ್ತದೆ, ಇದು ಆಧ್ಯಾತ್ಮಿಕ ವಿಕಸನದ ಪುರಾತನ ಸಂಕೇತವಾಗಿದೆ.

ಗುರುಗಳ ಬೋಧನೆಗಳನ್ನು ಪ್ರಕಟಿಸುವಲ್ಲಿ ಆಕೆಯ ಪಾತ್ರ

2004 ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆದ ಎಸ್‌ಆರ್‌ಎಫ್ ವಿಶ್ವ ಘಟಿಕೋತ್ಸವದ ಸಂದರ್ಭದಲ್ಲಿ ನಾಲ್ಕು ಸುವಾರ್ತೆಗಳ ಕುರಿತು ಪರಮಹಂಸ ಯೋಗಾನಂದರ ವ್ಯಾಖ್ಯಾನವಾದ ಸೆಕೆಂಡ್‌ ಕಮಿಂಗ್‌ ಆಫ್‌ ಕ್ರೈಸ್ಟ್‌ನ ಬಿಡುಗಡೆ

ಮೃಣಾಲಿನಿ ಮಾತಾರವರ ಆಶ್ರಮ ಜೀವನದ ಆರಂಭದಿಂದಲೂ, ಗುರುಗಳು ಆಕೆಯ ಪಾತ್ರವನ್ನು ಕುರಿತು ಇತರ ಶಿಷ್ಯರಿಗೆ ಹೇಳಿದ್ದರು-ವಿಶೇಷವಾಗಿ ಯೋಗದಾ ಸತ್ಸಂಗ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಪಾಠಗಳು, ಬರಹಗಳು ಮತ್ತು ಉಪನ್ಯಾಸಗಳ ಸಂಪಾದಕಿಯಾಗಿ ಆಕೆಯ ಮುಂದಿರುವ ಜವಾಬ್ದಾರಿಯ ಕುರಿತಾಗಿ. 1950 ರಲ್ಲಿ ರಾಜರ್ಷಿ ಜನಕಾನಂದರಿಗೆ ಕೈಯಿಂದ ಬರೆದ ಪತ್ರದಲ್ಲಿ “ಆಕೆಯು ಈ ಕೆಲಸಕ್ಕೆಂದೇ ನಿಯೋಜಿಸಲ್ಪಟ್ಟವಳು” ಎಂದು ಅವರು ಹೇಳಿದರು. “ನಾನು ಆಕೆಯನ್ನು ಮೊದಲ ಬಾರಿ ನೋಡಿದಾಗ ಭಗವಂತ ನನಗೆ ಅದನ್ನು ತೋರಿಸಿದ.”

ಶ್ರೀ ದಯಾ ಮಾತಾ ಅವರು ಬರೆದಿದ್ದಾರೆ, “ಗುರುದೇವರು ಯಾವ ಕಾರ್ಯಕ್ಕಾಗಿ ಆಕೆಯನ್ನು [ಮೃಣಾಲಿನಿ ಮಾ] ಸಿದ್ಧಪಡಿಸುತ್ತಿದ್ದರು ಎಂಬುದನ್ನು ನಮಗೆಲ್ಲ ಸ್ಪಷ್ಟಪಡಿಸುದ್ದರು, ಆಕೆಗೆ ತಮ್ಮ ಬೋಧನೆಗಳ ಪ್ರತಿಯೊಂದು ಅಂಶದಲ್ಲಿ ಮತ್ತು ತಮ್ಮ ಬರಹಗಳು ಮತ್ತು ಉಪನ್ಯಾಸಗಳನ್ನು ಸಿದ್ಧಪಡಿಸುವಲ್ಲಿ ಮತ್ತು ಪ್ರಸ್ತುತಿ ಪಡಿಸುವಲ್ಲಿನ ತಮ್ಮ ಆಶಯಗಳ ಬಗ್ಗೆ ವೈಯಕ್ತಿಕವಾಗಿ ಸೂಚನೆಗಳನ್ನು ನೀಡಿದರು.”

ನಂತರದ ವರ್ಷಗಳಲ್ಲಿ, ತಮ್ಮ ಬದುಕಿನ ಅಂತಿಮ ವರ್ಷಗಳವರೆಗೆ, ಪರಮಹಂಸಜಿ ದೈನಂದಿನ ಒಡನಾಟದ ಮೂಲಕ, ಮೃಣಾಲಿನಿ ಮಾತೆಯ ಆಧ್ಯಾತ್ಮಿಕ ತರಬೇತಿಗೆ ಹೆಚ್ಚಿನ ಗಮನವನ್ನು ಮೀಸಲಿಟ್ಟರು, ತಮ್ಮ ಮರಣದ ನಂತರ, ತಮ್ಮ ಹಸ್ತಪ್ರತಿಗಳನ್ನು ಮತ್ತು ಉಪನ್ಯಾಸಗಳನ್ನು ಪ್ರಕಟಣೆ ಮಾಡಲು ಹೇಗೆ ತಿದ್ದುಪಡಿ ಮಾಡಬೇಕೆಂಬ ಬಗ್ಗೆ ಆಕೆಗೆ ವೈಯಕ್ತಿಕವಾಗಿ ಸೂಚನೆಯನ್ನು ನೀಡಿದರು.

ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಪರಮಹಂಸ ಯೋಗಾನಂದರ ಭಗವದ್ಗೀತೆಯ ಅನುವಾದ ಮತ್ತು ವ್ಯಾಖ್ಯಾನ, ಗಾಡ್ ಟಾಕ್ಸ್ ವಿತ್ ಅರ್ಜುನ; ಸುವಾರ್ತೆಗಳ ಮೇಲಿನ ಅವರ ಕೌಶಲದ ವ್ಯಾಖ್ಯಾನಗಳು, ಸೆಕೆಂಡ್‌ ಕಮಿಂಗ್‌ ಆಫ್‌ ಕ್ರೈಸ್ಟ್: ದ ರಿಸರೆಕ್ಷನ್‌ ಆಫ್‌ ಕ್ರೈಸ್ಟ್‌ ವಿದಿನ್‌ ಯು; ಅವರ ಕವನ ಸಂಕಲನಗಳು ಮತ್ತು ಸ್ಫೂರ್ತಿದಾಯಕ ಬರಹಗಳ ಹಲವಾರು ಸಂಪುಟಗಳು; ಮತ್ತು ಮೂರು ಸಂಕಲನಗಳಲ್ಲಿ 150 ಕ್ಕೂ ಹೆಚ್ಚು ಉಪನ್ಯಾಸಗಳಿರುವ, ಅವರ ಕಲೆಕ್ಟೆಡ್‌ ಟಾಕ್ಸ್‌ ಅಂಡ್‌ ಎಸ್ಸೇಸ್‌ ನ ಸಂಗ್ರಹವೂ ಸೇರಿದಂತೆ ಗುರುಗಳ ಅನೇಕ ಕೃತಿಗಳು ಆಕೆಯ ನಿರ್ದೇಶನದಲ್ಲಿ ಪ್ರಕಟಗೊಂಡಿವೆ, ಜೊತೆಗೆ ಇತರ ಭಾಷೆಗಳಿಗೂ ಅನುವಾದವಾಗಿವೆ. ಆಕೆಯ ನಿಧನಕ್ಕೆ ಸ್ವಲ್ಪ ಸಮಯದ ಮುನ್ನ ಆಕೆ ಪೂರ್ಣಗೊಳಿಸಿದ ಇತರ ಪ್ರಮುಖ ಪ್ರಕಟಣೆಗಳನ್ನು ಮುಂದಿನ ದಿನಗಳಲ್ಲಿ ಘೋಷಿಸಲು ನಾವು ಎದುರು ನೋಡುತ್ತಿದ್ದೇವೆ.

ಭಾರತಕ್ಕೆ ಹಲವಾರು ಭೇಟಿಗಳು

ಹಲವಾರು ವರ್ಷಗಳಲ್ಲಿ, ಶ್ರೀ ಮೃಣಾಲಿನಿ ಮಾತಾರವರು ಪರಮಹಂಸ ಯೋಗಾನಂದರ ಯೋಗದಾ ಸತ್ಸಂಗ ಸೊಸೈಟಿಯ ಬೆಳವಣಿಗೆ ಮತ್ತು ಕಾರ್ಯಕ್ಕಾಗಿ ಮಾರ್ಗದರ್ಶನ ನೀಡುವಲ್ಲಿ ಶ್ರೀ ದಯಾ ಮಾತಾರವರಿಗೆ ನೆರವಾಗಲು ಭಾರತಕ್ಕೆ ಆರು ಭೇಟಿಗಳನ್ನಿತ್ತರು. ಅವರು ವೈಎಸ್ಎಸ್ ಆಶ್ರಮಗಳಲ್ಲಿ ಹೆಚ್ಚು ಸಮಯ ಕಳೆದರು ಮತ್ತು ಉಪಖಂಡದ ಪ್ರಮುಖ ನಗರಗಳಲ್ಲಿ ಗುರುವಿನ ಬೋಧನೆಗಳ ಕುರಿತು ಉಪನ್ಯಾಸ ನೀಡಿದರು. ಗುರು-ಶಿಷ್ಯರ ಸಂಬಂಧದ ವಿಷಯವೂ ಸೇರಿದಂತೆ ವಿವಿಧ ವಿಷಯಗಳ ಕುರಿತು ಅವರ ಉಪನ್ಯಾಸಗಳು ಯೋಗದಾ ಸತ್ಸಂಗ ಪತ್ರಿಕೆಯಲ್ಲಿ, ಪುಸ್ತಕ ರೂಪದಲ್ಲಿ ಮತ್ತು ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್‌ಗಳಲ್ಲಿ ಪ್ರಕಟವಾಗಿವೆ.

ಸದಸ್ಯವರ್ಗಕ್ಕೆ ಮೃಣಾಲಿನಿ ಮಾತಾಜಿಯವರಿಂದ ನಿಯಮಿತವಾಗಿ ಬರುತ್ತಿದ್ದ ಸಲಹೆಯ ಪತ್ರಗಳು ಮತ್ತು ಸ್ಫೂರ್ತಿ, ಜೊತೆಗೆ ಅವರ ಆಳವಾದ ಜ್ಞಾನ, ಸಹಾನುಭೂತಿ ಮತ್ತು ಹಾಸ್ಯಗಳ ಅನನ್ಯ ಸಂಯೋಜನೆಯು, ಅವರಿಗೆ ಪ್ರಪಂಚದಾದ್ಯಂತ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಸದಸ್ಯರ ಪ್ರೀತಿಪೂರ್ವಕ ಗೌರವ ಮತ್ತು ಆಳವಾದ ಕೃತಜ್ಞತೆಯನ್ನು ತಂದುಕೊಟ್ಟಿದೆ.

1973 - MM-Ranchi 1973-3A
1973 ರಲ್ಲಿ ಭಾರತದ ರಾಂಚಿಯಲ್ಲಿರುವ ವೈಎಸ್‌ಎಸ್‌ ಶಾಲೆಯ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡುತ್ತಿರುವುದು

ಆಕೆಯ ಜೀವನದ ಹೆಜ್ಜೆ ಗುರುತು, ಚಿರಂತನ ಸ್ಫೂರ್ತಿ

ಮೃಣಾಲಿನಿ ಮಾತಾರವರ ಹಲವು ದಶಕಗಳ ನಿಸ್ವಾರ್ಥ ಹಾಗೂ ದೈವತ್ವಕ್ಕೆ ಶ್ರುತಿಗೂಡಿದ ಸೇವೆಯಿಂದಾಗಿ ಪ್ರಕಟಣೆಗೆ ಬಂದಿರುವ ಪರಮಹಂಸ ಯೋಗಾನಂದರ ಬೋಧನೆಗಳು ಭಗವತ್ಪ್ರೇರಿತ ಜ್ಞಾನ ಮತ್ತು ಸತ್ಯದ ಅಮೂಲ್ಯ ಪರಂಪರೆಯಿಂದ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಸದಸ್ಯರು ಮತ್ತು ಪ್ರಪಂಚವು ಶಾಶ್ವತವಾಗಿ ಆಶೀರ್ವದಿಸಲ್ಪಡುತ್ತವೆ. ವರ್ಷಗಳು ಕಳೆದಂತೆ, ಈ ರೀತಿಯಲ್ಲಿ ಗುರುಗಳ ಆಶಯಗಳನ್ನು ನೆರವೇರಿಸುವ ಮೂಲಕ ಆಕೆಯು ನೀಡಿದ ಅಗಾಧವಾದ ಕೊಡುಗೆಯು ಆಕೆಯ ದಿವ್ಯ ಸಾಧನೆಯ ಆಂತರಿಕ ಮತ್ತು ಬಾಹ್ಯ ಜೀವನಕ್ಕೆ ಶಾಶ್ವತವಾದ ಪ್ರಮುಖ ಮಾದರಿಯಾಗಿರುತ್ತದೆ.

ಸದಾ ಭಗವತ್ಪ್ರಜ್ಞೆಯಲ್ಲಿ ನೆಲೆಗೊಂಡಿರುವ ಶ್ರೀ ಮೃಣಾಲಿನಿ ಮಾತಾರವರು ಭಕ್ತರಿಗೆ ಈ ಸಲಹೆಯನ್ನು ನೀಡಿದರು:

“ನಿಜವಾಗಿಯೂ ಭಗವಂತನ ನಸುನೋಟವನ್ನಾದರೂ ಅನುಭವಿಸಿದ ಯಾವುದೇ ವ್ಯಕ್ತಿಯು ಮತ್ತೆ ಎಂದಿಗೂ ಹಿಂದಿನಂತೆ ಇರಲು ಸಾಧ್ಯವಿಲ್ಲ — ಮೊದಲಿನಂತೆ ಸೀಮಿತ ಲೌಕಿಕ ಪ್ರಜ್ಞೆಯಿಂದ ತೃಪ್ತನಾಗಲು ಸಾಧ್ಯವಿಲ್ಲ. ನೀವು ಜಗತ್ತನ್ನು ಅಥವಾ ಅದರ ವಿವೇಚನಾಯುಕ್ತ ಸಂತೋಷಗಳನ್ನು ಅನುಭವಿಸುವುದನ್ನು ನಿಲ್ಲಿಸುವುದಿಲ್ಲ; ಅಲ್ಲಿರುವುದು, ಅರಿವನ್ನು ಬಾಹ್ಯ ಮಗ್ಗುಲಿನಿಂದ ವಾಸ್ತವತೆಯ ಆಂತರಿಕ ಮಗ್ಗುಲಿಗೆ ತಿರುಗಿಸುವುದಷ್ಟೆ. ಭೌತಿಕ ರೂಪಗಳು ಮತ್ತು ಇತಿಮಿತಿಗಳು, ವ್ಯಾಮೋಹಗಳು ಮತ್ತು ಆಸೆಗಳು, ಇಷ್ಟಾನಿಷ್ಟಗಳು ಸುಖದುಃಖಗಳೊಂದಿಗೆ ಗುರುತಿಸಲ್ಪಡುವ ಬದಲು, ನೀವು ಇಡೀ ಜೀವನವನ್ನು ಭಗವಂತನ ಒಂದು ಅಭಿವ್ಯಕ್ತಿಯಾಗಿ ನೋಡುತ್ತೀರಿ. ಎಲ್ಲವೂ ಅವನ ಅನಂತ ಬೆಳಕು ಮತ್ತು ಪ್ರಜ್ಞೆಯಿಂದ ಮಾಡಲ್ಪಟ್ಟಿವೆ ಎಂಬುದನ್ನು ನೀವು ಗ್ರಹಿಸುತ್ತೀರಿ. ನಿಮ್ಮ ಕುಟುಂಬದ ಪ್ರೀತಿ ಮತ್ತು ಒಡನಾಟವನ್ನು ನೀವು ಆನಂದಿಸುತ್ತೀರಿ ಏಕೆಂದರೆ ಆ ಕುಟುಂಬವನ್ನು ಪ್ರೀತಿಸಲು ಭಗವಂತ ನಿಮಗೆ ಕೊಟ್ಟಿರುವ ಅವನ ಪ್ರೀತಿಯು ನಿಮ್ಮ ಮೂಲಕ ಹರಿಯುವುದನ್ನು ನೀವು ಅನುಭವಿಸುವಿರಿ. ಅದಕ್ಕೆ ಪ್ರತಿಯಾಗಿ, ಅವರಿಂದ ನಿಮಗೆ ಸಿಗುವ ಪ್ರೀತಿಯಲ್ಲಿ ನೀವು ಕೇವಲ ಸ್ವಾರ್ಥದ, ದೈಹಿಕ, ಸೀಮಿತ ಮಾನುಷ ಭಾವೋದ್ರೇಕವನ್ನು ಅನುಭವಿಸದೆ, ಭಗವಂತನ ಆ ಅನಂತ ಪ್ರೇಮವನ್ನು ಅನುಭವಿಸುವಿರಿ. ನೀವು ಗುಲಾಬಿಯನ್ನು ಅಥವಾ ಭಗವಂತ ಸೃಷ್ಟಿಸಿದ ಅಸಂಖ್ಯಾತ ಸುಂದರ ವಸ್ತುಗಳನ್ನು ನೋಡಿದಾಗ, ದಳಗಳ ಸೌಂದರ್ಯದ ಹಿಂದೆ, ಆ ಸೌಂದರ್ಯವನ್ನು ಸೃಷ್ಟಿಸಿ ಪೋಷಿಸುವ ಸೃಷ್ಟಿಕರ್ತನ ಅನಂತ ಬೆಳಕು ಮತ್ತು ಪ್ರಜ್ಞೆಯನ್ನು ನೋಡುತ್ತೀರಿ.

“ನೀವು ಬಾಹ್ಯದಲ್ಲಿ ಯಾವುದೇ ಅನುಭವಗಳನ್ನು ಅನುಭವಿಸಿದರೂ ಅಥವಾ ಆ ಅನುಭವಗಳ ಮೂಲಕ ಯಾವುದೇ ಪಾಠಗಳನ್ನು ಕಲಿತರೂ, ಪ್ರಜ್ಞೆಯು ಸದಾ ಆ ಒಂದು ವಾಸ್ತವತೆಯ (ಭಗವಂತನ) ಮೇಲೆ ಕೇಂದ್ರೀಕೃತವಾಗಿರಲಿ — ನಿಮ್ಮನ್ನು ಎಂದಿಗೂ ವಿಫಲಗೊಳಿಸದ ಆ ಏಕೈಕ ವಸ್ತು, ಅದು ಎಂದಿಗೂ ಬದಲಾಗದು, ಚಿರಂತನವಾದುದು — ಅಂದರೆ, ಭಗವಂತ, ಮತ್ತು ಅವನೊಂದಿಗಿರುವ ನಿಮ್ಮ ಸಂಬಂಧ.”

2015 ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆದ ಎಸ್‌ಆರ್‌ಎಫ್ ವಿಶ್ವ ಘಟಿಕೋತ್ಸವದ ಸಂದರ್ಭದಲ್ಲಿ ಎಸ್‌ಆರ್‌ಎಫ್‌ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸತ್ಸಂಗದಲ್ಲಿ

ನಾವು ಅವರ ಪ್ರೀತಿಯ ಉಪಸ್ಥಿತಿಯನ್ನು ಅನುಭವಿಸುವುದನ್ನು ಮುಂದುವರಿಸೋಣ ಮತ್ತು “ಶಾಶ್ವತವಾದ ಆ ಒಂದು ವಾಸ್ತವತೆ ಅಂದರೆ ಭಗವಂತ” ನ ಮೇಲೆ ಸದಾ ನಮ್ಮ ಪ್ರಜ್ಞೆಯನ್ನು ಸ್ಥಿರೀಕರಿಸಲು ಪ್ರಯತ್ನಿಸಬೇಕೆಂಬ ಆಕೆಯ ಸಲಹೆಯಿಂದ ಮಾರ್ಗದರ್ಶನ ಪಡೆಯೋಣ.

ನಮ್ಮ ಪ್ರೀತಿಯ ಶ್ರೀ ಮೃಣಾಲಿನಿ ಮಾತಾರವರಿಗೆ ನಮ್ಮ ಹೃದಯದ ಪ್ರೀತಿ ಮತ್ತು ಕೃತಜ್ಞತೆಯನ್ನು ಕಳುಹಿಸಲು ದಯವಿಟ್ಟು ನಮ್ಮೊಂದಿಗೆ ಸೇರಿಕೊಳ್ಳಿ. ಆಕೆಯ ನಿಸ್ವಾರ್ಥ ಸೇವೆ, ಸ್ನೇಹ ಮತ್ತು ನಿಷ್ಠೆಯ ಜೀವನವು, ಆಕೆಯ ಸಲಹೆಯಂತೆ, “ನಿಮ್ಮೊಳಗಿನ ದಿವ್ಯ ಪ್ರತಿಬಿಂಬವನ್ನು ಸಂಪೂರ್ಣವಾಗಿ ವ್ಯಕ್ತಪಡಿಸುವಂತೆ ನಿಮ್ಮ ಜೀವನವನ್ನು ರೂಪಿಸಲು ಭಗವಂತ ಮತ್ತು ಗುರುಗಳಿಗೆ ಅನುಮತಿಸಲು,” ಸ್ಫೂರ್ತಿ ನೀಡಲಿ.

ಶ್ರೀ ಮೃಣಾಲಿನಿ ಮಾತಾರವರ ಜೀವನವನ್ನು ಕುರಿತ ನಿಮ್ಮ ನೆನಪುಗಳು ಅಥವಾ ಭಾವನೆಗಳನ್ನು ಹಂಚಿಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ:

ಇದನ್ನು ಹಂಚಿಕೊಳ್ಳಿ