ಇಲ್ಲಿ ನಾನು ನಿನ್ನ ಪಾದದ ಬಳಿ ಸಮರ್ಪಿಸುತ್ತಿದ್ದೇನೆ
ನನ್ನ ಜೀವನ, ನನ್ನ ಅವಯವ, ನನ್ನ ಚಿಂತನೆ ಮತ್ತು ನುಡಿ.
ಏಕೆಂದರೆ ಅವೆಲ್ಲವೂ ನಿನ್ನವೇ; ಅವೆಲ್ಲವೂ ನಿನ್ನವೇ.
— ಪರಮಹಂಸ ಯೋಗಾನಂದ
ವೈ ಎಸ್ ಎಸ್ ಆಶ್ರಮಗಳಲ್ಲಿ ಸಂನ್ಯಾಸಾಶ್ರಮದ ನಾಲ್ಕು ಹಂತಗಳಿವೆ, ಅವು ಪರಿತ್ಯಾಗದ ಜೀವನ ಮತ್ತು ಸಂನ್ಯಾಸಾಶ್ರಮದ ಪ್ರತಿಜ್ಞೆಗಳ ಬಗ್ಗೆ ಒಬ್ಬ ಸನ್ಯಾಸಿಯ ಹಂತ ಹಂತವಾಗಿ ಆಳಗೊಳ್ಳುವ ಬದ್ಧತೆಯನ್ನು ಸೂಚಿಸುತ್ತವೆ. ಈ ಹಂತಗಳಿಗೆ ಯಾವುದೇ ನಿಗದಿತ ಅವಧಿ ಇಲ್ಲ. ಬದಲಿಗೆ ಪ್ರತಿಯೊಬ್ಬ ಸಂನ್ಯಾಸಿಯ ಆಧ್ಯಾತ್ಮಿಕ ಬೆಳವಣಿಗೆ ಮತ್ತು ಈ ಜೀವನಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ಆ ಸಂನ್ಯಾಸಿಯ ಸಿದ್ಧತೆಯನ್ನು ಯಾವಾಗಲೂ ವೈಯಕ್ತಿಕ ಆಧಾರದ ಮೇಲೆ ಪರಿಗಣಿಸಲಾಗುತ್ತದೆ.
ಕಿರಿಯ ಪ್ರವೇಶಾರ್ಥಿ:
ಕಿರಿಯ ಪ್ರವೇಶಾರ್ಥಿ ಎಂದು ಹೆಸರಿಸಲಾಗುವ ಮೊದಲ ಹಂತವು ಸಾಮಾನ್ಯವಾಗಿ ಮೂರು ವರ್ಷಗಳವರೆಗೆ ಇರುತ್ತದೆ. ಕಿರಿಯ ಪ್ರವೇಶಾರ್ಥಿಗಳು, ಸಮೂಹ ಮತ್ತು ವೈಯಕ್ತಿಕ ಧ್ಯಾನ, ವಿನಂತಿಸಿಕೊಂಡವರಿಗಾಗಿ ಪ್ರಾರ್ಥಿಸುವುದು, ಭಕ್ತಿಗೀತೆಗಳ ಗಾಯನ, ಆಧ್ಯಾತ್ಮಿಕ ಅಧ್ಯಯನ, ಆತ್ಮಾವಲೋಕನ, ಮನರಂಜನೆ ಮತ್ತು ಅವರಿಗೆ ನಿಯೋಜಿಸಲಾದ ಯಾವುದೇ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುವುದು ಇವೆಲ್ಲವನ್ನು ಒಳಗೊಂಡಿರುವ ಸಂನ್ಯಾಸಾಶ್ರಮದ ದಿನಚರಿಯನ್ನು ಅನುಸರಿಸುತ್ತಾರೆ.
ಪ್ರವೇಶಾರ್ಥಿಗಳಿಗಾಗಿರುವ ಸಂನ್ಯಾಸಾಶ್ರಮದ ಈ ಕಾರ್ಯಕ್ರಮವು, ಪರಿತ್ಯಾಗಿಗೆ ಸನ್ಯಾಸದ ಆದರ್ಶಗಳು ಹಾಗೂ ಜೀವನ ಶೈಲಿಯ ಸಂಪೂರ್ಣ ತಿಳುವಳಿಕೆಯನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ತನ್ನ ಆಧ್ಯಾತ್ಮಿಕ ಜೀವನವನ್ನು ಹಾಗೂ ದೇವರು ಮತ್ತು ಗುರುಗಳೊಂದಿಗೆ ಶ್ರುತಿಗೂಡುವುದನ್ನು ಗಾಢವಾಗಿಸಲು ಆತನಿಗೆ ನೆರವಾಗುವಂತಹ ಮನೋಭಾವ ಮತ್ತು ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಪ್ರವೇಶಾರ್ಥಿಗೆ ಸಹಾಯ ಮಾಡುವುದಕ್ಕೆ ಇದು ಒತ್ತುಕೊಡುತ್ತದೆ. ಸಂನ್ಯಾಸ ಜೀವನದ ಈ ಮೊದಲ ಹಂತವು ಪರಿತ್ಯಾಗದ ಹಾದಿಯನ್ನು ಸ್ವೀಕರಿಸುವ ಬಯಕೆಯ ಆಳವನ್ನು ಅಳೆಯಲು ಆ ಸನ್ಯಾಸಿಗೆ ಸಹಾಯ ಮಾಡುತ್ತದೆ ಮತ್ತು ಅದೇ ಸಮಯಕ್ಕೆ ಆ ಸಂನ್ಯಾಸಿಯ ಆಧ್ಯಾತ್ಮಿಕ ಕಲ್ಯಾಣಕ್ಕೆ ಜವಾಬ್ದಾರರಾಗಿರುವವರಿಗೆ ಆತನ ಸಂನ್ಯಾಸ ಜೀವನದ ತಿಳುವಳಿಕೆಯನ್ನು ಆಳವಾಗಿಸುವಂತೆ ಮಾರ್ಗದರ್ಶನ ನೀಡಲು ಅನುವು ಮಾಡಿಕೊಡುತ್ತದೆ.

ಹಿರಿಯ ಪ್ರವೇಶಾರ್ಥಿ
ಕಿರಿಯ ಪ್ರವೇಶಾರ್ಥಿಯ ಹಂತದ ಕೊನೆಯಲ್ಲಿ, ಪ್ರವೇಶಾರ್ಥಿ ಮತ್ತು ಆತನ ಸಲಹೆಗಾರರು ಇಬ್ಬರಿಗೂ ಈ ವ್ಯಕ್ತಿಯು ಆಶ್ರಮ ಜೀವನಕ್ಕೆ ಸೂಕ್ತವೆಂದು ಮನವರಿಕೆಯಾದರೆ, ಪ್ರವೇಶಾರ್ಥಿಯನ್ನು ಹಿರಿಯ ಪ್ರವೇಶಾರ್ಥಿ ಕಾರ್ಯಕ್ರಮಕ್ಕೆ ಸೇರಲು ಆಹ್ವಾನಿಸಲಾಗುತ್ತದೆ. ಹಿರಿಯ ಪ್ರವೇಶಾರ್ಥಿಯ ಅವಧಿಯಲ್ಲಿ, ಪರಿತ್ಯಾಗಿಯು ಕಿರಿಯ ಪ್ರವೇಶಾರ್ಥಿ ಹಂತದಲ್ಲಿ ಕಲಿತ ತತ್ವಗಳನ್ನು ಬಳಸಿಕೊಂಡು ಸಂನ್ಯಾಸ ಶಿಷ್ಯತ್ವದ ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಸಂಸ್ಥೆಗೆ ಅವರು ನೀಡುವ ಸೇವೆಯಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಹೊರಲು ಅವರಿಗೆ ಅವಕಾಶವನ್ನು ನೀಡಲಾಗುತ್ತದೆ.
ಬ್ರಹ್ಮಚರ್ಯ
ಹಲವಾರು ವರ್ಷಗಳ ನಂತರ, ಹಿರಿಯ ಪ್ರವೇಶಾರ್ಥಿಯು ವೈಎಸ್ಎಸ್ ಸಂನ್ಯಾಸಿಯಾಗಿ ದೇವರನ್ನು ಅರಸಲು ಮತ್ತು ಅವನ ಸೇವೆ ಮಾಡಲು ತನ್ನ ಜೀವನವನ್ನು ಸಂಪೂರ್ಣವಾಗಿ ಮುಡಿಪಾಗಿಡುವ ಹೆಚ್ಚುತ್ತಿರುವ ಬಯಕೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದರೆ, ಅವರನ್ನು ಬ್ರಹ್ಮಚರ್ಯದ ಪ್ರತಿಜ್ಞೆಯನ್ನು ತೆಗೆದುಕೊಳ್ಳಲು ಆಹ್ವಾನಿಸಲಾಗುತ್ತದೆ. (ಬ್ರಹ್ಮಚರ್ಯ ಎಂಬುದು ಸಂಸ್ಕೃತ ಪದವಾಗಿದ್ದು, ಆತ್ಮವನ್ನು ಪರಮಾತ್ಮನೊಂದಿಗೆ ಒಗ್ಗೂಡಿಸುವ ಉದ್ದೇಶಕ್ಕಾಗಿ ಒಬ್ಬರ ಆಲೋಚನೆಗಳು ಮತ್ತು ಕಾರ್ಯಗಳ ಶಿಸ್ತು ಮತ್ತು ಸ್ವಯಂ ನಿಯಂತ್ರಣದ ಬಗ್ಗೆ ಹೇಳುತ್ತದೆ.) ಈ ಪ್ರತಿಜ್ಞೆಯು, ಸರಳತೆ, ಬ್ರಹ್ಮಚರ್ಯ, ವಿಧೇಯತೆ ಮತ್ತು ಜೀವನದ ಕೊನೆಯವರೆಗೂ ನಿಷ್ಠೆಯಿಂದಿರುವ ಪ್ರತಿಜ್ಞೆಯಿಂದ ಜೀವಿಸುತ್ತ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಆಶ್ರಮಗಳಲ್ಲಿ ಸಂನ್ಯಾಸಿಯಾಗಿ ಉಳಿಯುವ ಶಿಷ್ಯನ ಆಳವಾದ ಆಶಯವನ್ನು ಸೂಚಿಸುತ್ತದೆ.
ಈ ಪ್ರತಿಜ್ಞೆಯನ್ನು ತೆಗೆದುಕೊಂಡ ನಂತರ, ಒಬ್ಬ ಸಂನ್ಯಾಸಿಯನ್ನು ಬ್ರಹ್ಮಚಾರಿ ಎಂದು ಕರೆಯಲಾಗುತ್ತದೆ. ಅವರ ಪೂರ್ವಾಶ್ರಮದ ಹೆಸರಿನ ಬಳಕೆಯನ್ನು ಕೈಬಿಡಲಾಗುತ್ತದೆ ಮತ್ತು ಅವರು ದೃಷ್ಟಾಂತವಾಗ ಬಯಸುವ ಅಥವಾ ಹೊಂದಬಯಸುವ ನಿರ್ದಿಷ್ಟ ಆಧ್ಯಾತ್ಮಿಕ ಆದರ್ಶ ಅಥವಾ ಗುಣವನ್ನು ಸೂಚಿಸುವ ಸಂಸ್ಕೃತದ ಹೆಸರನ್ನು ನೀಡಲಾಗುತ್ತದೆ. ಆಶ್ರಮದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಕೇಳಬಹುದು ಎಂದು ಬ್ರಹ್ಮಚಾರಿಗೆ ತಿಳಿದಿರುತ್ತದೆ — ಪ್ರಾಯಶಃ ಭಕ್ತಿ ಕಾರ್ಯಕ್ರಮಗಳನ್ನು ನಡೆಸಲು ತರಬೇತಿ ನೀಡುವುದು, ವಿಶೇಷ ಕಾರ್ಯಗಳನ್ನು ವಹಿಸಿಕೊಳ್ಳುವುದು ಅಥವಾ ಆ ಸಂನ್ಯಾಸಿಯನ್ನು ಆಧ್ಯಾತ್ಮಿಕವಾಗಿ ಮಾರ್ಗದರ್ಶನ ಮಾಡುವ ಜವಾಬ್ದಾರಿ ಹೊತ್ತಿರುವವರ ನಿರ್ದೇಶನಕ್ಕನುಸಾರವಾಗಿ ಇತರ ಸ್ಥಾನಗಳಲ್ಲಿ ಸೇವೆ ಸಲ್ಲಿಸುವುದು.
ಸಂನ್ಯಾಸ
ಸಂನ್ಯಾಸದ ಅಂತಿಮ ಪ್ರತಿಜ್ಞೆಯು ದೇವರು, ಗುರು, ಪರಮಗುರುಗಳು ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾಕ್ಕೆ; ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸನ್ಯಾಸಿಯಾಗಿ ತಾನು ನಿಷ್ಠೆಯಿಂದ ಪಾಲಿಸುವ ವಾಗ್ದಾನ ಮಾಡಿರುವಂತಹ ವೈಎಸ್ಎಸ್‌ನ ಸನ್ಯಾಸತ್ವದ ಪ್ರತಿಜ್ಞೆಗಳು ಮತ್ತು ಆದರ್ಶಗಳಿಗೆ ಸಂಪೂರ್ಣ, ಜೀವಾವಧಿಯ ಬದ್ಧತೆಯನ್ನು ಸೂಚಿಸುತ್ತದೆ. ಇದು ಎಲ್ಲಾ ಹೀನ ಆಸೆಗಳನ್ನು ಬದಿಗಿಟ್ಟು ದೇವರಿಗಾಗಿ ಮಾತ್ರವೇ ಬದುಕುವ ಮತ್ತು ಯೋಗದಾ ಸತ್ಸಂಗ ಮಾರ್ಗದ ಮೂಲಕ ಅನಿರ್ಬಂಧಿತ ಸಮರ್ಪಣೆ ಮತ್ತು ನಿಷ್ಠೆಯೊಂದಿಗೆ ಅವನಿಗೆ ಸೇವೆ ಸಲ್ಲಿಸುವ, ಸಂನ್ಯಾಸಿಯ ಆತ್ಮದ ಆಂತರಿಕ ದೃಢ ನಿಶ್ಚಯವನ್ನು ಸೂಚಿಸುತ್ತದೆ. ಅನೇಕ ವರ್ಷಗಳ ಕಾಲ ಸಂನ್ಯಾಸ ಜೀವನವನ್ನು ನಡೆಸಿದ ನಂತರ, ಹಾಗೂ ಬ್ರಹ್ಮಚಾರಿಗಳು ತಮಗೆ ತಾವೇ ಮತ್ತು ತಮ್ಮ ಮೇಲಿನವರಿಗೆ, ತಾವು ಈ ಅಂತಿಮ ಬದ್ಧತೆಗೆ ಸಿದ್ಧರಾಗಿದ್ದಾರೆ ಎಂದು ಸಾಬೀತು ಪಡಿಸಿದ ನಂತರವಷ್ಟೇ ಸಂನ್ಯಾಸ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಗುತ್ತದೆ. ಈ ಪ್ರತಿಜ್ಞೆಯು ಭಾರತದ ಪ್ರಾಚೀನ ಸ್ವಾಮಿ ಪದ್ಧತಿಯ ಸದಸ್ಯರು ತೆಗೆದುಕೊಳ್ಳುತ್ತಿದ್ದ ಪ್ರತಿಜ್ಞೆಗೆ ಅನುರೂಪವಾಗಿದೆ.
ಸಂನ್ಯಾಸಿಯು ತನ್ನ ಜೀವನ ಮತ್ತು ಅಸ್ತಿತ್ವವನ್ನು ಸಂಪೂರ್ಣವಾಗಿ ದೇವರಿಗೆ ಸಮರ್ಪಿಸಿಕೊಂಡು, ತನ್ನ ನಡತೆ, ಸೇವಾಕಾರ್ಯ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ದೇವರ ಮೇಲಿನ ಪ್ರೀತಿಯ ಪರಿಪೂರ್ಣತೆಗಾಗಿ ಇನ್ನೂ ಹೆಚ್ಚು ಶ್ರದ್ಧೆಯಿಂದ ಶ್ರಮಿಸುತ್ತಾನೆ. ಪರಮಹಂಸ ಯೋಗಾನಂದರ ಬೋಧನೆಗಳು ಮತ್ತು ಸಂಸ್ಥೆಯ ಉನ್ನತ ಆದರ್ಶಗಳನ್ನು ನಿದರ್ಶಿಸುವ; ಮತ್ತು, ಆ ನಿದರ್ಶನದ ಮೂಲಕ, ಇತರರನ್ನು ಅವರ ಭಗವದನ್ವೇಷಣೆಯಲ್ಲಿ ಪ್ರೇರೇಪಿಸುವ ಮತ್ತು ಪ್ರೋತ್ಸಾಹಿಸುವ ಪವಿತ್ರ ಜವಾಬ್ದಾರಿಯನ್ನು ಅವನು ವಹಿಸಿಕೊಳ್ಳುತ್ತಾನೆ.


ಪರಮಹಂಸ ಯೋಗಾನಂದರ ಆಶ್ರಮಗಳಲ್ಲಿ ಸ್ವಯಂ-ಸುಧಾರಣೆ, ಧ್ಯಾನ ಮತ್ತು ಮಾನವಕುಲದ ಸೇವೆಗಾಗಿ ಮೀಸಲಾದ ಜೀವನವನ್ನು ನಡೆಸುವ ಅವಕಾಶದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನಮ್ಮನ್ನು ಸಂಪರ್ಕಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.