ಕರ್ಮ. ಈ ಜನ್ಮದಲ್ಲಿ ಅಥವಾ ಪೂರ್ವ ಜನ್ಮಗಳಲ್ಲಿ ಮಾಡಿದ ಕ್ರಿಯೆಗಳ ಪರಿಣಾಮಗಳು; ಸಂಸ್ಕೃತದ ಕ್ರಿ ಎಂದರೆ ಮಾಡುವುದು ಎಂದರ್ಥ. ಹಿಂದೂ ಧರ್ಮಗ್ರಂಥಗಳಲ್ಲಿ ವಿವರಿಸಲಾದ ಕರ್ಮದ ನಿಯಮವೆಂದರೆ, ಕ್ರಿಯೆ-ಪ್ರತಿಕ್ರಿಯೆ, ಕಾರಣ-ಪರಿಣಾಮ, ಬಿತ್ತನೆ-ಕೊಯ್ಲುಗಳನ್ನು ಸರಿದೂಗಿಸುವುದು. ಸಹಜವಾದ ಸದಾಚಾರದ ಹಾದಿಯಲ್ಲಿ, ಪ್ರತಿಯೊಬ್ಬ ಮಾನವನು ತನ್ನ ಆಲೋಚನೆಗಳು ಮತ್ತು ಕ್ರಿಯೆಗಳ ಮೂಲಕ ತನ್ನ ವಿಧಿಯನ್ನು ರೂಪಿಸುವವನಾಗುತ್ತಾನೆ. ಜ್ಞಾನದಿಂದಲೋ ಅಜ್ಞಾನದಿಂದಲೋ ಅವನು ಚಾಲನೆಯಲ್ಲಿ ತಂದ ಯಾವುದೇ ಶಕ್ತಿಗಳು, ಒಂದು ವೃತ್ತವು ನಿಷ್ಠುರವಾಗಿ ತನ್ನಲ್ಲೇ ಪೂರ್ಣಗೊಳ್ಳುವಂತೆ, ತಮ್ಮ ಆರಂಭದ ಸ್ಥಾನವಾದ ಅವನಲ್ಲಿಗೇ ಮರಳಬೇಕು. ಕರ್ಮವನ್ನು ನ್ಯಾಯದ ನಿಯಮ ಎಂದು ಅರ್ಥೈಸಿಕೊಳ್ಳುವುದರಿಂದ ಮಾನವನ ಮನಸ್ಸು ಭಗವಂತ ಮತ್ತು ಮಾನವನ ಬಗೆಗಿನ ಅಸಮಾಧಾನದಿಂದ ಮುಕ್ತವಾಗುತ್ತದೆ. ಒಬ್ಬ ವ್ಯಕ್ತಿಯ ಕರ್ಮವು ಅವನ ಜನ್ಮದಿಂದ ಜನ್ಮಕ್ಕೆ ಅದನ್ನು ತೀರಿಸುವವರೆಗೂ ಅಥವಾ ಆಧ್ಯಾತ್ಮಿಕವಾಗಿ ಅದನ್ನು ಮೀರಿ ನಿಲ್ಲುವವರೆಗೂ ಹಿಂಬಾಲಿಸುತ್ತಲೇ ಇರುತ್ತದೆ. ಪುನರ್ಜನ್ಮ ನೋಡಿ. ಸಮುದಾಯಗಳು, ರಾಷ್ಟ್ರಗಳು ಅಥವಾ ಇಡೀ ಪ್ರಪಂಚದ ಮಾನವರು ಮಾಡುವ ಸಂಚಿತ ಕಾರ್ಯಗಳು ಸಾಮೂಹಿಕ ಕರ್ಮವನ್ನು ರೂಪಿಸುತ್ತವೆ, ಅದು ಒಳ್ಳೆಯದು ಅಥವಾ ಕೆಟ್ಟದ್ದರ ಮಟ್ಟ ಹಾಗೂ ಹೆಚ್ಚಳಕ್ಕನುಗುಣವಾಗಿ ಸ್ಥಳೀಯ ಅಥವಾ ದೂರಗಾಮಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನ ಆಲೋಚನೆಗಳು ಮತ್ತು ಕಾರ್ಯಗಳು ಈ ಪ್ರಪಂಚದ ಹಾಗೂ ಅದರಲ್ಲಿರುವ ಎಲ್ಲ ಜನಗಳ ಒಳ್ಳೆಯದಕ್ಕೆ ಅಥವಾ ಕೆಡುಕಿಗೆ ಕೊಡುಗೆ ನೀಡುತ್ತದೆ.
ಕರ್ಮ ಯೋಗ. ನಿರ್ಲಿಪ್ತತೆಯಿಂದ ಕೂಡಿದ ಕಾರ್ಯ ಮತ್ತು ಸೇವೆಯ ಮೂಲಕ ಭಗವಂತನೆಡೆಗಿನ ಮಾರ್ಗ. ನಿಸ್ವಾರ್ಥ ಸೇವೆಯ ಮೂಲಕ, ಕರ್ಮಗಳ ಫಲಗಳನ್ನು ಭಗವಂತನಿಗೆ ಕೊಡುವ ಮೂಲಕ, ಭಗವಂತನೇ ಏಕೈಕ ಕರ್ತೃ ಎಂದು ಕಾಣುವ ಮೂಲಕ ಭಕ್ತನು ಅಹಂ ನಿಂದ ಮುಕ್ತನಾಗಿ ಭಗವಂತನನ್ನು ಮನಗಾಣುತ್ತಾನೆ. ಯೋಗ ನೋಡಿ.
ಕಾರಣ ಪ್ರಪಂಚ. ಭೌತ ದ್ರವ್ಯಗಳ (ಪರಮಾಣುಗಳು, ಪ್ರೋಟಾನ್‌ಗಳು, ಎಲೆಕ್ಟ್ರಾನ್‌ಗಳು) ಸ್ಥೂಲ ಪ್ರಪಂಚದ ಹಿಂದೆ ಹಾಗೂ ಪ್ರಕಾಶಮಾನವಾದ ಪ್ರಾಣಶಕ್ತಿ(ಲೈಫ್‌ಟ್ರಾನ್‌ಗಳು)ಯಿರುವ ಸೂಕ್ಷ್ಮಜಗತ್ತಿನ ಹಿಂದೆ ಆಲೋಚನೆಗಳ (ಥಾಟ್‌ಟ್ರಾನ್‌ಗಳು) ಕಾರಣ ಅಥವಾ ಕಲ್ಪನಾತ್ಮಕ ಪ್ರಪಂಚವಿರುತ್ತದೆ. ಒಬ್ಬ ಮನುಷ್ಯನು ಸ್ಥೂಲ ಹಾಗೂ ಸೂಕ್ಷ್ಮ ಬ್ರಹ್ಮಾಂಡಗಳನ್ನು ಅತಿಶಯಿಸುವಷ್ಟು ವಿಕಸನಗೊಂಡ ನಂತರ, ಅವನು ಕಾರಣ ಜಗತ್ತಿನಲ್ಲಿ ವಾಸಿಸುತ್ತಾನೆ. ಕಾರಣ ಜೀವಿಗಳ ಪ್ರಜ್ಞೆಯಲ್ಲಿ, ಸ್ಥೂಲ ಮತ್ತು ಸೂಕ್ಷ್ಮ ಬ್ರಹ್ಮಾಂಡಗಳು ಅವುಗಳ ಆಲೋಚನಾ ಅಸ್ತಿತ್ವವಾಗಿ ಪರಿವರ್ತನೆ ಹೊಂದಿರುತ್ತವೆ. ಭೌತ ಮನುಷ್ಯನು ಕಾಲ್ಪನಿಕವಾಗಿ ಮಾಡಬಹುದಾದದ್ದನ್ನು, ಕಾರಣ ಮನುಷ್ಯನು ವಾಸ್ತವದಲ್ಲಿ ಮಾಡಲು ಸಾಧ್ಯವಾಗುತ್ತದೆ—ಆಲೋಚನೆಯೇ ಏಕಮಾತ್ರ ಮಿತಿ. ಅಂತಿಮ ಘಟ್ಟದಲ್ಲಿ, ಎಲ್ಲಾ ಸ್ಪಂದನಾತ್ಮಕ ಲೋಕಗಳಿಂದಾಚೆ ಇರುವ ಸರ್ವವ್ಯಾಪಿಯಾದ ಪರಮಾತ್ಮನೊಂದಿಗೆ ಒಂದಾಗಲು, ಮನುಷ್ಯನು, ಆತ್ಮದ ಕೊನೆಯ ಆವರಣವಾದ ಕಾರಣ ಶರೀರವನ್ನು ಕಳಚಿಹಾಕುತ್ತಾನೆ.
ಕಾರಣ ಶರೀರ. ಸಾರಭೂತವಾಗಿ, ಆತ್ಮವೇ ಆಗಿರುವ ಮನುಷ್ಯನು, ಕಾರಣ-ಶರೀರವುಳ್ಳ ಜೀವಿಯಾಗಿರುತ್ತಾನೆ. ಅವನ ಕಾರಣ ಶರೀರವು, ಸೂಕ್ಷ್ಮ ಹಾಗೂ ಸ್ಥೂಲ ಶರೀರಗಳಿಗೆ ಕಲ್ಪನಾ ಮಾತೃಕೆಯಾಗಿರುತ್ತದೆ. ಕಾರಣ ಶರೀರವು ಸೂಕ್ಷ್ಮ ಶರೀರದ 19 ತತ್ವಗಳು ಮತ್ತು ಹಾಗೂ ಸ್ಥೂಲ ಶರೀರದ 16 ಮೂಲ ಭೌತ ತತ್ವಗಳಿಗೆ ಅನುಗುಣವಾಗಿರುವ 35 ಕಲ್ಪನಾ ತತ್ವಗಳಿಂದ ಕೂಡಿರುತ್ತದೆ.
ಕುಂಡಲಿನಿ. ಬೆನ್ನು ಹುರಿಯ ಕೆಳಭಾಗದಲ್ಲಿ ಸೂಕ್ಷ್ಮ ಸುರುಳಿಯಾಕಾರದ ಮಾರ್ಗದಲ್ಲಿ ಸ್ಥಿತವಾಗಿರುವ ಸೃಷ್ಟ್ಯಾತ್ಮಕ ಪ್ರಾಣ ಶಕ್ತಿಯ ಪ್ರಬಲ ಪ್ರವಾಹ. ಸಾಧಾರಣ ಎಚ್ಚರದ ಪ್ರಜ್ಞೆಯಲ್ಲಿ, ದೇಹದ ಪ್ರಾಣ ಶಕ್ತಿಯು ಭೌತಿಕ ಶರೀರವನ್ನು ಸಚೇತನಗೊಳಿಸಿ, ಸೂಕ್ಷ್ಮ ಹಾಗೂ ಕಾರಣ ಶರೀರಗಳನ್ನು (ಸೂಕ್ಷ್ಮ ಶರೀರ, ಕಾರಣ ಶರೀರ ನೋಡಿ) ಮತ್ತು ಅಂತಸ್ಥ ಆತ್ಮವನ್ನು ಮರ್ತ್ಯ ರೂಪಕ್ಕೆ ಕಟ್ಟಿಹಾಕುತ್ತಾ ಈ ಸುರುಳಿಸುತ್ತಿಕೊಂಡಿರುವ ಕುಂಡಲಿನಿಯ ಮಾರ್ಗದ ಮೂಲಕ ಹೊರಹೋಗುತ್ತದೆ. ಧ್ಯಾನದ ಉದ್ದೇಶವಾಗಿರುವ ಪ್ರಜ್ಞೆಯ ಉನ್ನತ ಸ್ಥಿತಿಗಳಲ್ಲಿ, ಮಿದುಳು ಮತ್ತು ಮಿದುಳು ಬಳ್ಳಿಗೆ ಸಂಬಂಧಿಸಿದ ಕೇಂದ್ರಗಳಲ್ಲಿ (ಚಕ್ರಗಳು) ಸುಪ್ತ ಆಧ್ಯಾತ್ಮಿಕ ಸಹಜ ಶಕ್ತಿಗಳನ್ನು ಜಾಗೃತಗೊಳಿಸಲು ಕುಂಡಲಿನಿ ಶಕ್ತಿಯು ಹಿಂದಿರುಗಿ ಬೆನ್ನುಹುರಿಯ ಮೇಲ್ಭಾಗಕ್ಕೆ ಹರಿಯುತ್ತದೆ. ಇದರ ಸುರುಳಿಸುತ್ತಿಕೊಂಡಿರುವ ರಚನೆಯಿಂದಾಗಿ ಇದನ್ನು “ಸರ್ಪ ಶಕ್ತಿ” ಎಂದೂ ಕರೆಯುತ್ತಾರೆ.
ಕೂಟಸ್ಥ ಚೈತನ್ಯ. ಕ್ರಿಸ್ತ ಪ್ರಜ್ಞೆ (ಕ್ರಿಸ್ತ ಪ್ರಜ್ಞೆ ನೋಡಿ). ಸಂಸ್ಕೃತ ಶಬ್ದ ಕೂಟಸ್ಥ ಎಂದರೆ, “ಯಾವುದು ಬದಲಾಗದೇ ಉಳಿಯುವುದೋ ಅದು”; ಚೈತನ್ಯ ಎಂದರೆ “ಪ್ರಜ್ಞೆ.”
ಕ್ರಿಯಾ ಯೋಗ. ಭಾರತದಲ್ಲಿ ಸಹಸ್ರಾರು ವರ್ಷಗಳ ಹಿಂದೆ ಉಗಮವಾದ ಒಂದು ಪವಿತ್ರ ಆಧ್ಯಾತ್ಮಿಕ ವಿಜ್ಞಾನ. ಇದರಲ್ಲಿ ಧ್ಯಾನದ ಕೆಲವೊಂದು ತಂತ್ರಗಳಿವೆ, ಶ್ರದ್ಧೆಯಿಂದ ಮಾಡಿದ ಇವುಗಳ ಅಭ್ಯಾಸವು ಭಗವತ್ಸಾಕ್ಷಾತ್ಕಾರಕ್ಕೆ ಎಡೆಮಾಡಿಕೊಡುತ್ತದೆ. ಕ್ರಿಯಾದ ಸಂಸ್ಕೃತ ಮೂಲ ಕ್ರಿ, ಅಂದರೆ, ಮಾಡುವುದು, ಕಾರ್ಯ ಮಾಡುವುದು, ಪ್ರತಿಕ್ರಿಯಿಸುವುದು ಎಂದು ಪರಮಹಂಸ ಯೋಗಾನಂದರು ವಿವರಿಸಿದ್ದಾರೆ; ಅದೇ ಮೂಲವು ಕರ್ಮ ಎಂಬ ಪದದಲ್ಲಿ ಕಂಡುಬರುತ್ತದೆ, ಕಾರಣ ಮತ್ತು ಪರಿಣಾಮದ ನೈಸರ್ಗಿಕ ತತ್ವ. ಆದ್ದರಿಂದ ಕ್ರಿಯಾ ಯೋಗ ಎಂದರೆ “ಒಂದು ನಿರ್ದಿಷ್ಟ ಕ್ರಿಯೆ ಅಥವಾ ವಿಧಿಯ (ಕ್ರಿಯಾ) ಮೂಲಕ ಅನಂತದೊಂದಿಗೆ ಸಂಯೋಗ.” ಒಂದು ವಿಧದ ರಾಜ (“ರಾಜ ಯೋಗ್ಯ” ಅಥವಾ “ಸಮಗ್ರ”) ಯೋಗವಾದ ಕ್ರಿಯಾ ಯೋಗವನ್ನು ಕೃಷ್ಣನು ಭಗವದ್ಗೀತೆಯಲ್ಲಿ ಮತ್ತು ಪತಂಜಲಿಯು ಯೋಗ ಸೂತ್ರಗಳಲ್ಲಿ ಶ್ಲಾಘಿಸಿದ್ದಾರೆ. ಈ ಯುಗದಲ್ಲಿ ಮಹಾವತಾರ ಬಾಬಾಜಿ (ಮಹಾವತಾರ ಬಾಬಾಜಿ ನೋಡಿ)ಯವರಿಂದ ಪುನರುಜ್ಜೀವನಗೊಂಡ ಕ್ರಿಯಾ ಯೋಗವು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಗುರುಗಳು ನೀಡುವ ದೀಕ್ಷೆಯಾಗಿದೆ. ಪರಮಹಂಸ ಯೋಗಾನಂದರ ಮಹಾಸಮಾಧಿ (ಇದನ್ನು ಶಬ್ದಾರ್ಥ ಸಂಗ್ರಹದಲ್ಲಿ ನೋಡಿ)ಯ ನಂತರ, ಅವರಿಂದ ನೇಮಕಗೊಂಡ ಆಧ್ಯಾತ್ಮಿಕ ಪ್ರತಿನಿಧಿಯಾದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಅಧ್ಯಕ್ಷರ (ಅಥವಾ ಅಧ್ಯಕ್ಷರಿಂದ ನೇಮಕಗೊಂಡಿರುವ ವ್ಯಕ್ತಿಯ) ಮೂಲಕ ದೀಕ್ಷೆಯನ್ನು ನೀಡಲಾಗುತ್ತದೆ.
ಕ್ರಿಸ್ತ ಪ್ರಜ್ಞೆ. ಇಡೀ ಸೃಷ್ಟಿಯಲ್ಲಿಯ ವ್ಯಕ್ತರೂಪದ ಭಗವಂತನ ಸರ್ವವ್ಯಾಪಕ ಪ್ರಜ್ಞೆಯೇ “ಕ್ರಿಸ್ತ” ಅಥವಾ “ಕ್ರಿಸ್ತ ಪ್ರಜ್ಞೆ.” ಕ್ರೈಸ್ತರ ಧರ್ಮಗ್ರಂಥದಲ್ಲಿ ಇದನ್ನು “ಜನ್ಮಪಡೆದ ಏಕೈಕ ಪುತ್ರ” ಎಂದು ಕರೆಯಲಾಗುತ್ತದೆ, ಸೃಷ್ಟಿಯಲ್ಲಿ ಪರಮಪಿತನ ಏಕೈಕ ಶುದ್ಧ ಪ್ರತಿಫಲನ; ಹಿಂದೂ ಧರ್ಮಗ್ರಂಥದಲ್ಲಿ ಇದನ್ನು ಕೂಟಸ್ಥ ಚೈತನ್ಯ ಅಥವಾ ತತ್ ಎಂದೂ, ಸಮಸ್ತ ಸೃಷ್ಟಿಯನ್ನು ವ್ಯಾಪಿಸಿರುವ ಪರಮಾತ್ಮನ ವಿಶ್ವಾತ್ಮಕ ಬುದ್ಧಿ ಎಂದೂ ಕರೆಯಲಾಗುತ್ತದೆ. ಇದು ಕೃಷ್ಣ, ಯೇಸು ಹಾಗೂ ಇತರ ಅವತಾರ ಪುರುಷರುಗಳು ವ್ಯಕ್ತಪಡಿಸಿದ, ಭಗವಂತನೊಂದಿಗೆ ತಾದಾತ್ಮ್ಯ ಹೊಂದಿದ ವಿಶ್ವವ್ಯಾಪಿ ಪ್ರಜ್ಞೆ. ಮಹಾನ್ ಸಂತರುಗಳು ಹಾಗೂ ಯೋಗಿಗಳು ಈ ಸ್ಥಿತಿಯನ್ನು ಧ್ಯಾನ ಸಮಾಧಿ ಎಂದು ಅರಿತಿರುತ್ತಾರೆ, ಇದರಲ್ಲಿ ಅವರ ಪ್ರಜ್ಞೆಯು ಸೃಷ್ಟಿಯ ಪ್ರತಿ ಕಣದಲ್ಲಿಯೂ ಉಪಸ್ಥಿತವಿರುವ ದಿವ್ಯ ಬುದ್ಧಿಯೊಂದಿಗೆ ತಾದಾತ್ಮ್ಯಗೊಂಡಿರುತ್ತದೆ. ಅವರು ಅಖಿಲ ವಿಶ್ವವನ್ನು ತಮ್ಮ ಶರೀರವೆಂದೇ ಭಾವಿಸುತ್ತಾರೆ. (ಶಬ್ದಾರ್ಥ ಸಂಗ್ರಹದಲ್ಲಿ ತ್ರಿಮೂರ್ತಿತ್ವವನ್ನು ನೋಡಿ).
ಕ್ರಿಸ್ತ. ಯೇಸುವಿನ ಗೌರವಸೂಚಕ ಉಪಾಧಿ: ಯೇಸು ಕ್ರಿಸ್ತ. ಈ ಪದವು ಸೃಷ್ಟಿಯಲ್ಲಿ ಅಂತರ್ಗತವಾಗಿರುವ ಭಗವಂತನ ಸರ್ವವ್ಯಾಪಿ ಪ್ರಜ್ಞಾನವನ್ನು ಸೂಚಿಸುತ್ತದೆ (ಕೆಲವೊಮ್ಮೆ ಬ್ರಹ್ಮಾಂಡೀಯ ಕ್ರಿಸ್ತ ಅಥವಾ ಅನಂತ ಕ್ರಿಸ್ತ ಎಂದೂ ಕರೆಯಲಾಗುತ್ತದೆ), ಅಥವಾ ಆ ದಿವ್ಯ ಪ್ರಜ್ಞೆಯೊಂದಿಗೆ ಏಕತೆಯನ್ನು ಸಾಧಿಸಿರುವ ಮಹಾತ್ಮರನ್ನು ಉಲ್ಲೇಖಿಸಲು ಬಳಸಲಾಗುತ್ತದೆ. (ಗ್ರೀಕ್ ಪದ ಕ್ರಿಸ್ಟೋಸ್ ಎಂದರೆ “ಪವಿತ್ರೀಕೃತ” ಎಂದರ್ಥ, ಹೀಬ್ರೂ ಪದ ಮೆಸ್ಸಿಹಾನಂತೆಯೇ.) ಕ್ರಿಸ್ತ ಪ್ರಜ್ಞೆ ಮತ್ತು ಕೂಟಸ್ಥ ಚೈತನ್ಯವನ್ನೂ ನೋಡಿ.
ಗುಣಗಳು. ಪ್ರಕೃತಿಯ ಮೂರು ಗುಣಗಳು ತಮಸ್, ರಜಸ್ ಹಾಗೂ ಸತ್ವ – ಪ್ರತಿಬಂಧ, ಕ್ರಿಯಾಶೀಲತೆ ಹಾಗೂ ವಿಕಸನ; ಅಥವಾ ದ್ರವ್ಯರಾಶಿ, ಶಕ್ತಿ ಹಾಗೂ ಬುದ್ಧಿಶಕ್ತಿ. ಮನುಷ್ಯನಲ್ಲಿ ಈ ಮೂರು ಗುಣಗಳು ಅಜ್ಞಾನ ಅಥವಾ ಜಡತ್ವ; ಕ್ರಿಯಾಶೀಲತೆ ಅಥವಾ ಹೋರಾಟ; ಹಾಗೂ ಜ್ಞಾನದ ರೂಪದಲ್ಲಿ ಪ್ರಕಟಗೊಳ್ಳುತ್ತವೆ.
ಗುರು. ಆಧ್ಯಾತ್ಮಿಕ ಶಿಕ್ಷಕ. ಸಾಮಾನ್ಯವಾಗಿ ಗುರು ಎಂಬ ಪದವನ್ನು ಯಾವುದೇ ಶಿಕ್ಷಕ ಅಥವಾ ಅಧ್ಯಾಪಕರಿಗೆ ತಪ್ಪಾಗಿ ಬಳಸಲಾಗುತ್ತಿದೆಯಾದರೂ, ಯಾರಿಗೆ ತನ್ನ ಆತ್ಮ ನಿಯಂತ್ರಣದ ಸಾಧನೆಯಲ್ಲಿ ಸರ್ವವ್ಯಾಪಿ ಪರಮಾತ್ಮನೊಂದಿಗಿನ ತನ್ನ ತಾದಾತ್ಮ್ಯದ ಅರಿವುಂಟಾಗಿರುವುದೋ ಅವನೇ ಭಗವತ್ಸಾಕ್ಷಾತ್ಕಾರ ಹೊಂದಿದ ನಿಜವಾದ ಗುರು. ಅಂಥವನು ಅನ್ವೇಷಕನನ್ನು ಅವನ ದಿವ್ಯ ಸಾಕ್ಷಾತ್ಕಾರದೆಡೆಗಿನ ಆಂತರಿಕ ಪಯಣದಲ್ಲಿ ಮುನ್ನಡೆಸಲು ಅದ್ವಿತೀಯ ಅರ್ಹತೆಯುಳ್ಳವನಾಗಿರುತ್ತಾನೆ. ಒಬ್ಬ ಭಕ್ತನು ಭಗವಂತನನ್ನು ಶ್ರದ್ಧೆಯಿಂದ ಅರಸಲು ಸಿದ್ಧನಾದಾಗ, ಪ್ರಭುವು ಅವನ ಬಳಿಗೆ ಒಬ್ಬ ಗುರುವನ್ನು ಕಳುಹಿಸುತ್ತಾನೆ. ಅಂತಹ ಗುರುವಿನ ಜ್ಞಾನ, ಬುದ್ಧಿ, ಆತ್ಮ-ಸಾಕ್ಷಾತ್ಕಾರ ಹಾಗೂ ಬೋಧನೆಗಳ ಮೂಲಕ, ಭಗವಂತನು ಶಿಷ್ಯನನ್ನು ಮಾರ್ಗದರ್ಶಿಸುತ್ತಾನೆ. ಗುರುವಿನ ಬೋಧನೆಗಳು ಹಾಗೂ ಶಿಸ್ತನ್ನು ಅನುಸರಿಸುವ ಮೂಲಕ, ಶಿಷ್ಯನಿಗೆ ಭಗವಂತನ ಗ್ರಹಿಕೆಯ ಅಮೃತವನ್ನು ಹೊಂದುವ ತನ್ನ ಆತ್ಮದ ಬಯಕೆಯನ್ನು ನೆರವೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಾಮಾಣಿಕ ಅನ್ವೇಷಕರ ಆತ್ಮದ ಆಳವಾದ ಹಂಬಲಿಕೆಗೆ ಪ್ರತಿಯಾಗಿ ನೆರವಾಗಲೆಂದು ಭಗವಂತನಿಂದ ನೇಮಿಸಲ್ಪಟ್ಟ ಒಬ್ಬ ನಿಜವಾದ ಗುರುವು, ಸಾಮಾನ್ಯ ಶಿಕ್ಷಕನಲ್ಲ: ಅವನು ಮಾನವ ವಾಹನವಾಗಿದ್ದು, ಅವನ ಶರೀರ, ಮಾತು, ಮನಸ್ಸು ಹಾಗೂ ಆಧ್ಯಾತ್ಮಿಕತೆಯನ್ನು, ಭಗವಂತನು ಹಾದಿ ತಪ್ಪಿದ ಆತ್ಮಗಳನ್ನು ಅವರ ಅಮರತ್ವದ ಧಾಮದತ್ತ ಸೆಳೆಯಲು ಮತ್ತು ಮಾರ್ಗದರ್ಶಿಸಲು ವಾಹಕವಾಗಿ ಬಳಸುತ್ತಾನೆ. ಒಬ್ಬ ಗುರುವು ಧರ್ಮಶಾಸ್ತ್ರಗಳ ಸತ್ಯದ ಸಾಕಾರ ರೂಪವಾಗಿರುತ್ತಾನೆ. ಅವನು, ಭಕ್ತನ ಲೌಕಿಕ ಬಂಧನದ ಬಿಡುಗಡೆಯ ಬೇಡಿಕೆಗೆ ಪ್ರತಿಯಾಗಿ ಭಗವಂತನಿಂದ ನೇಮಿಸಲ್ಪಟ್ಟ ಮೋಕ್ಷದ ಮಧ್ಯವರ್ತಿ. “ಗುರುವಿನೊಂದಿಗೆ ಇರುವುದು, ಎಂದರೆ ಕೇವಲ ಅವನ ಶಾರೀರಿಕ ಉಪಸ್ಥಿತಿಯಲ್ಲಿರುವುದು ಮಾತ್ರವಲ್ಲ (ಏಕೆಂದರೆ ಇದು ಕೆಲವೊಮ್ಮೆ ಅಸಾಧ್ಯವಾಗಿರುತ್ತದೆ), ಬದಲಿಗೆ, ಮುಖ್ಯವಾಗಿ ಅವನನ್ನು ನಮ್ಮ ಹೃದಯದಲ್ಲಿಟ್ಟುಕೊಳ್ಳುವುದು ಹಾಗೂ ತಾತ್ವಿಕವಾಗಿ ಅವನೊಂದಿಗೆ ಒಂದಾಗಿರುವುದು ಮತ್ತು ನಮ್ಮನ್ನು ಅವನೊಂದಿಗೆ ಶ್ರುತಿಗೂಡಿಸಿಕೊಂಡಿರುವುದು ಎಂದರ್ಥ,” ಎಂದು ಸ್ವಾಮಿ ಶ್ರೀ ಯುಕ್ತೇಶ್ವರರು “ದಿ ಹೋಲಿ ಸೈನ್ಸ್”ನಲ್ಲಿ ಬರೆದಿದ್ದಾರೆ. (ಗುರು ವನ್ನು ನೋಡಿ)
ಗುರುದೇವ. “ದಿವ್ಯ ಬೋಧಕ,” ಒಬ್ಬರ ಆಧ್ಯಾತ್ಮಿಕ ಗುರುವನ್ನು ಸಂಬೋಧಿಸಲು ಮತ್ತು ಉಲ್ಲೇಖಿಸಲು ಬಳಸಲಾಗುವ ಗೌರವ ಸೂಚಕ ಸಾಂಪ್ರದಾಯಿಕ ಸಂಸ್ಕೃತ ಪದ; ಕೆಲವೊಮ್ಮೆ ಇಂಗ್ಲಿಷ್‌ನಲ್ಲಿ “ಮಾಸ್ಟರ್” ಎಂದು ಅನುವಾದಿಸಲಾಗುತ್ತದೆ.