ಪಂಚತತ್ವಗಳು. ಬ್ರಹ್ಮಾಂಡೀಯ ಸ್ಪಂದನ ಅಥವಾ ಓಂಕಾರವು, ಮನುಷ್ಯನ ಭೌತಿಕ ದೇಹವೂ ಸೇರಿದಂತೆ ಇಡೀ ಭೌತ ಸೃಷ್ಟಿಯನ್ನು ಪಂಚ ತತ್ವಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಹಾಗೂ ಆಕಾಶ (ಇದನ್ನು ಶಬ್ದಾರ್ಥ ಸಂಗ್ರಹದಲ್ಲಿ ನೋಡಿ) ಇವುಗಳ ಅಭಿವ್ಯಕ್ತಿಯ ಮೂಲಕ ರಚಿಸುತ್ತದೆ. ಇವು ಸ್ವಭಾವತಃ ಬುದ್ಧಿಶೀಲವೂ ಸ್ಪಂದನಾತ್ಮಕವೂ ಆಗಿರುವ ರಚನಾತ್ಮಕ ಶಕ್ತಿಗಳು. ಪೃಥ್ವಿ ತತ್ತ್ವವಿಲ್ಲದೆ ಘನ ವಸ್ತುವಿನ ಸ್ಥಿತಿ ಇರುವುದಿಲ್ಲ; ಜಲ ತತ್ತ್ವವಿಲ್ಲದೆ, ದ್ರವ ಸ್ಥಿತಿ ಇರುವುದಿಲ್ಲ; ವಾಯು ತತ್ತ್ವವಿಲ್ಲದೆ, ಅನಿಲ ಸ್ಥಿತಿ ಇರುವುದಿಲ್ಲ; ಅಗ್ನಿ ತತ್ತ್ವವಿಲ್ಲದೆ, ಶಾಖ ಇರುವುದಿಲ್ಲ; ಆಕಾಶ ತತ್ತ್ವವಿಲ್ಲದೆ, ಬ್ರಹ್ಮಾಂಡದ ಚಲನಚಿತ್ರವನ್ನು ಪ್ರದರ್ಶಿಸಲು ಹಿನ್ನೆಲೆ ಇರುವುದಿಲ್ಲ. ಶರೀರದಲ್ಲಿ, ಪ್ರಾಣವು (ಬ್ರಹ್ಮಾಂಡೀಯ ಸ್ಪಂದನ ಶಕ್ತಿ) ಮೆಡುಲ್ಲಾ ಮೂಲಕ ಪ್ರವೇಶಿಸಿ, ಕೆಳಗಿನ ಐದು ಚಕ್ರಗಳಾದ (ಇದನ್ನು ಶಬ್ದಾರ್ಥ ಸಂಗ್ರಹದಲ್ಲಿ ನೋಡಿ) ಮೂಲಾಧಾರ (ಪೃಥ್ವಿ), ಸ್ವಾಧಿಷ್ಠಾನ (ಜಲ), ಮಣಿಪೂರ (ಅಗ್ನಿ), ಅನಾಹತ (ವಾಯು) ಹಾಗೂ ವಿಶುದ್ಧಿ (ಆಕಾಶ) ಇವುಗಳ ಕಾರ್ಯಗಳಿಂದಾಗಿ ಪಂಚ ತತ್ವಗಳ ಪ್ರವಾಹಗಳಾಗಿ ವಿಭಜಿಸಲ್ಪಡುತ್ತದೆ. ಈ ತತ್ವಗಳನ್ನು ಸಂಸ್ಕೃತ ಪರಿಭಾಷೆಯಲ್ಲಿ ಪೃಥ್ವಿ, ಅಪ್, ತೇಜ್, ಪ್ರಾಣ ಮತ್ತು ಆಕಾಶ ಎನ್ನಲಾಗುತ್ತದೆ.
ಪತಂಜಲಿ. ಯೋಗದ ಪ್ರಾಚೀನ ಪ್ರತಿಪಾದಕ, ಒಬ್ಬ ಪ್ರಾಚೀನ ಋಷಿ, ಅವರ ಯೋಗ ಸೂತ್ರಗಳು ಯೋಗ ಮಾರ್ಗದ ತತ್ವಗಳನ್ನು ಎಂಟು ಹಂತಗಳಲ್ಲಿ ವಿಂಗಡಿಸಿ ವಿವರಿಸುತ್ತವೆ: (1) ಯಮ, ನೈತಿಕ ನಡವಳಿಕೆ; (2) ನಿಯಮ, ಧಾರ್ಮಿಕ ಆಚರಣೆಗಳು; (3) ಧ್ಯಾನದ ಆಸನ; (4) ಪ್ರಾಣಾಯಾಮ; (5) ಪ್ರತ್ಯಾಹಾರ, ಮನಸ್ಸಿನ ಆಂತರೀಕರಣ; (6) ಧಾರಣ, ಏಕಾಗ್ರತೆ; (7) ಧ್ಯಾನ, ಹಾಗೂ (8) ಸಮಾಧಿ, ಭಗವಂತನೊಂದಿಗೆ ಸಂಯೋಗ.
ಪರಮಗುರು. ಅರ್ಥಶಃ, “ಮುಂಚಿನ ಗುರು; ಒಬ್ಬ ಗುರುವಿನ ಗುರು. ಸೆಲ್ಫ್-ರಿಯಲೈಝೇಷನ್‌ನವರಿಗೆ (ಪರಮಹಂಸ ಯೋಗಾನಂದರ ಶಿಷ್ಯರು), ಪರಮಗುರು ಎಂದರೆ ಶ್ರೀ ಯುಕ್ತೇಶ್ವರರು. ಪರಮಹಂಸಜಿಯವರಿಗೆ ಲಾಹಿರಿ ಮಹಾಶಯರು. ಮಹಾವತಾರ್ ಬಾಬಾಜಿ ಪರಮಹಂಸಜಿಯವರ ಪರಮ-ಪರಮಗುರು.
ಪರಮಹಂಸ. ಒಬ್ಬ ಗುರುವನ್ನು (ಗುರು ನೋಡಿ) ಸೂಚಿಸುವ ಒಂದು ಆಧ್ಯಾತ್ಮಿಕ ಉಪಾಧಿ. ಇದನ್ನು ಒಬ್ಬ ನೈಜ ಗುರು ಮಾತ್ರ ಒಬ್ಬ ಅರ್ಹ ಶಿಷ್ಯನಿಗೆ ನೀಡಬಹುದು. ಅರ್ಥಶಃ ಪರಮಹಂಸ ಎಂದರೆ “ಸರ್ವೋತ್ಕೃಷ್ಟ ಹಂಸ.” ಹಿಂದೂ ಸದ್ಗ್ರಂಥಗಳಲ್ಲಿ, ಹಂಸವು ಆಧ್ಯಾತ್ಮಿಕ ವಿವೇಚನೆಯನ್ನು ಸೂಚಿಸುತ್ತದೆ. ಸ್ವಾಮಿ ಶ್ರೀ ಯುಕ್ತೇಶ್ವರರು ಈ ಉಪಾಧಿಯನ್ನು ಅವರ ಪ್ರಿಯ ಶಿಷ್ಯರಾದ ಯೋಗಾನಂದರಿಗೆ 1935ರಲ್ಲಿ ಅನುಗ್ರಹಿಸಿದರು.
ಪುನರ್ಜನ್ಮ. ಆತ್ಮ-ಸಾಕ್ಷಾತ್ಕಾರವಾಗುವವರೆಗೂ ಹಾಗೂ ಭಗವಂತನೊಂದಿಗೆ ಐಕ್ಯವಾಗುವವರೆಗೂ ಮಾನವ ಜೀವಿಗಳು ವಿಕಾಸ ನಿಯಮದ ನಿರ್ಬಂಧಕ್ಕೊಳಪಟ್ಟು ಹಂತ ಹಂತವಾಗಿ ಉನ್ನತ ಜನ್ಮಗಳಲ್ಲಿ ಮತ್ತೆ ಮತ್ತೆ ಹುಟ್ಟಿಬರಬೇಕಾಗುತ್ತದೆ ಎಂದು ಹೇಳುವ ಸಿದ್ಧಾಂತ – ಅನರ್ಥ ಕಾರ್ಯಗಳು ಮತ್ತು ಆಸೆಗಳಿಂದಾಗಿ ಹಂತಹಂತವಾದ ಉನ್ನತ ಜನ್ಮಗಳನ್ನು ತಳೆಯುವ ಕಾರ್ಯ ವಿಳಂಬವಾಗುತ್ತಿರುತ್ತದೆ ಹಾಗೂ ಆಧ್ಯಾತ್ಮದ ಪ್ರಯತ್ನಗಳಿಂದಾಗಿ ಮುನ್ನಡೆಯಾಗುತ್ತಿರುತ್ತದೆ. ಹೀಗೆ ಮರ್ತ್ಯಪ್ರಜ್ಞೆಯ ಇತಿಮಿತಿಗಳನ್ನು ಹಾಗೂ ಲೋಪದೋಷಗಳನ್ನು ಮೀರಿದ ಮೇಲೆ ಆತ್ಮವು ಒತ್ತಾಯಪೂರ್ವಕ ಪುನರ್ಜನ್ಮಗಳಿಂದ ಶಾಶ್ವತವಾಗಿ ಮುಕ್ತವಾಗುತ್ತದೆ. “ಯಾರು ಜಯಶಾಲಿಗಳಾಗುತ್ತಾರೋ ಆತನನ್ನು ನನ್ನ ದೇವನ ಮಂದಿರದಲ್ಲಿ ಒಂದು ಸ್ತಂಭವನ್ನಾಗಿ ಮಾಡುತ್ತೇನೆ. ಆತನು ಮತ್ತೆ ಹೊರಹೋಗಬೇಕಾಗಿಲ್ಲ.” (ರಿವಿಲೇಷನ್ 3:12).
ಪ್ರಕೃತಿ. ಬ್ರಹ್ಮಾಂಡ ಪ್ರಕೃತಿ; ಸಾಮಾನ್ಯವಾಗಿ, ಚೈತನ್ಯದಿಂದ ಹೊರಹೊಮ್ಮುವ ವಿವೇಚನಾಯುಕ್ತ, ಸೃಷ್ಟಿಶೀಲ ಸ್ಪಂದನಾತ್ಮಕ ಶಕ್ತಿ, ಅದು ವಿಶ್ವವನ್ನು ಮತ್ತು ಪಿಂಡಾಂಡವಾದ ಮನುಷ್ಯನನ್ನು ಮೂರ್ತೀಕರಿಸುತ್ತದೆ ಹಾಗೂ ಅವೆರಡರ ತ್ರಿತಯೈಕ್ಯ ಅಭಿವ್ಯಕ್ತಿಯಾಗುತ್ತದೆ (ಕಾರಣ, ಸೂಕ್ಷ್ಮ ಮತ್ತು ಭೌತಿಕ).
ನಿರ್ದಿಷ್ಟವಾಗಿ ಹೇಳುವುದಾದರೆ: ಮಹಾ-ಪ್ರಕೃತಿಯು ಭಗವಂತನ, ಸೃಷ್ಟ್ಯಾತ್ಮಕ ಮಾತೃ ಪ್ರಕೃತಿ ಅಥವಾ ಪವಿತ್ರಾತ್ಮನ ಸೃಷ್ಟ್ಯಾದಿಯ ಭೇದ ಕಲ್ಪಿಸದ ಸ್ರಷ್ಟ್ಯಾತ್ಮಕ ಬುದ್ಧಿಶಕ್ತಿ, ತನ್ನದೇ ಬ್ರಹ್ಮಾಂಡ ಸ್ಪಂದನದ ಮೂಲಕ ಎಲ್ಲ ಸೃಷ್ಟಿಯೂ ಆವಿರ್ಭವಿಸುವಂತೆ ಮಾಡುತ್ತದೆ. ಪರಾ-ಪ್ರಕೃತಿ (ಶುದ್ಧ ಪ್ರಕೃತಿ) ಮತ್ತು ಅಪರ-ಪ್ರಕೃತಿ (ಅಶುದ್ಧ ಪ್ರಕೃತಿ) ಕ್ರೈಸ್ತರ ಪಾರಿಭಾಷಿಕ ಶಬ್ದಗಳಾದ ಪವಿತ್ರಾತ್ಮ ಮತ್ತು ಸೈತಾನನೊಡನೆ ಸಂಬಂಧ ಹೊಂದಿವೆ – ಅನುಕ್ರಮವಾಗಿ, ಸೃಷ್ಟಿಯಲ್ಲಿ ಭಗವಂತನ ಸ್ಪಂದನಾತ್ಮಕ ಉಪಸ್ಥಿತಿಯ ಸರ್ವವ್ಯಾಪಕತೆಯನ್ನು ವ್ಯಕ್ತಪಡಿಸುವ ಸೃಷ್ಟ್ಯಾತ್ಮಕ ಶಕ್ತಿ ಮತ್ತು ಭಗವಂತನ ಸರ್ವವ್ಯಾಪಿತ್ವವನ್ನು ಮರೆಮಾಡುವ ಬ್ರಹ್ಮಾಂಡ ಮಾಯೆಯ ದುಷ್ಟ ಶಕ್ತಿ.
ಪ್ರಜ್ಞೆಯ ಅವಸ್ಥೆಗಳು. ಮರ್ತ್ಯ ಪ್ರಜ್ಞೆಯಲ್ಲಿ ಮನುಷ್ಯನು ಮೂರು ಅವಸ್ಥೆಗಳನ್ನು ಅನುಭವಿಸುತ್ತಾನೆ: ಜಾಗೃತಾವಸ್ಥೆ, ನಿದ್ರಾವಸ್ಥೆ ಹಾಗು ಸ್ವಪ್ನಾವಸ್ಥೆ. ಆದರೆ ಅವನು ತನ್ನ ಆತ್ಮವನ್ನು, ಅತೀತ ಪ್ರಜ್ಞೆಯನ್ನು ಅನುಭವಿಸುವುದಿಲ್ಲ ಹಾಗೂ ಭಗವಂತನನ್ನು ಅನುಭವಿಸುವುದಿಲ್ಲ. ಕ್ರಿಸ್ತ ಪ್ರಜ್ಞೆಯುಳ್ಳ ಮನುಷ್ಯನು ಅನುಭವಿಸುತ್ತಾನೆ. ಮರ್ತ್ಯ ಮನುಷ್ಯನಿಗೆ ತನ್ನ ಇಡೀ ಶರೀರದ ಅರಿವಿರುವಂತೆ, ವಿಶ್ವವೇ ತನ್ನ ಶರೀರವೆಂದು ಭಾವಿಸುವ ಕ್ರಿಸ್ತಪ್ರಜ್ಞೆಯುಳ್ಳ ಮನುಷ್ಯನಿಗೆ ಇಡೀ ವಿಶ್ವದ ಅರಿವಿರುತ್ತದೆ. ಕ್ರಿಸ್ತ ಪ್ರಜ್ಞಾವಸ್ಥೆಯಿಂದಾಚೆಗೆ ಬ್ರಹ್ಮಾಂಡ ಪ್ರಜ್ಞೆಯಿದೆ, ಅದು, ಸ್ಪಂದನಾತ್ಮಕ ಸೃಷ್ಟಿಯ ಆಚೆಯಿರುವ ಭಗವಂತನ ನಿರುಪಾಧಿಕ ಪ್ರಜ್ಞೆಯಲ್ಲೂ ಹಾಗೂ ಇಂದ್ರಿಯಗೋಚರ ಪ್ರಪಂಚಗಳಲ್ಲಿ ಅಭಿವ್ಯಕ್ತವಾಗುವ ಪ್ರಭುವಿನ ಸರ್ವವ್ಯಾಪಿತ್ವದಲ್ಲೂ ಅವನೊಂದಿಗಿನ ತಾದಾತ್ಮ್ಯದ ಅನುಭವ.
ಪ್ರಾಣ ಶಕ್ತಿ. ಪ್ರಾಣ ನೋಡಿ.
ಪ್ರಾಣ. ಜೀವಿಗಳನ್ನು ರೂಪಿಸುವ, ಪರಮಾಣು ಶಕ್ತಿಗಿಂತ ಸೂಕ್ಷ್ಮವಾಗಿರುವ, ಬುದ್ಧಿಶಕ್ತಿಯುಳ್ಳ ಕಿಡಿಗಳು. ಹಿಂದೂ ಧರ್ಮಗ್ರಂಥಗಳಲ್ಲಿ ಇದನ್ನು ಒಟ್ಟಾರೆಯಾಗಿ ಪ್ರಾಣ ಎಂದು ಹೇಳಲಾಗುತ್ತದೆ, ಪರಮಹಂಸ ಯೋಗಾನಂದರು ಇದನ್ನು “ಲೈಫ್ ಟ್ರಾನ್ಸ್” ಎಂದು ಭಾಷಾಂತರಿಸಿದ್ದಾರೆ. ಸಾರಭೂತವಾಗಿ, ಭಗವಂತನ ಸಾಂದ್ರೀಕೃತ ಆಲೋಚನೆಗಳು; ಸೂಕ್ಷ್ಮ ಲೋಕದ (ಸೂಕ್ಷ್ಮಲೋಕ ನೋಡಿ) ದ್ರವ್ಯ ಹಾಗೂ ಭೌತ ಬ್ರಹ್ಮಾಂಡದ ಜೀವ ತತ್ವ. ಭೌತ ಪ್ರಪಂಚದಲ್ಲಿ ಎರಡು ವಿಧವಾದ ಪ್ರಾಣಗಳಿವೆ: (1) ವಿಶ್ವದಲ್ಲಿ ಸರ್ವವ್ಯಾಪಿಯಾಗಿರುವ ಬ್ರಹ್ಮಾಂಡೀಯ ಸ್ಪಂದನಕಾರಿ ಶಕ್ತಿ, ಅದು ಎಲ್ಲ ವಸ್ತುಗಳನ್ನೂ ರೂಪಿಸುತ್ತದೆ ಹಾಗೂ ಅವುಗಳಿಗೆ ಆಧಾರವಾಗಿರುತ್ತದೆ; (2) ಪಂಚ ಪ್ರವಾಹಗಳು ಅಥವಾ ಕಾರ್ಯಗಳ ಮೂಲಕ ಪ್ರತಿಯೊಂದು ಮಾನವ ಶರೀರವನ್ನು ಆವರಿಸಿಕೊಂಡು ಪೋಷಕವಾಗಿರುವ ನಿರ್ದಿಷ್ಟ ಪ್ರಾಣ ಅಥವಾ ಶಕ್ತಿ. ಪ್ರಾಣ ಪ್ರವಾಹವು ಸ್ಫಟಿಕೀಕರಣದ ಕಾರ್ಯವನ್ನು ನಿರ್ವಹಿಸುತ್ತದೆ; ವ್ಯಾನ ಪ್ರವಾಹ, ಪರಿಚಲನೆ; ಸಮಾನ ಪ್ರವಾಹ, ಜೀರ್ಣಕ್ರಿಯೆ; ಉದಾನ ಪ್ರವಾಹ, ಚಯಾಪಚಯ; ಅಪಾನ ಪ್ರವಾಹ, ವಿಸರ್ಜನೆ.
ಪ್ರಾಣಾಯಾಮ. ಪ್ರಾಣದ (ಶರೀರದಲ್ಲಿರುವ ಜೀವವನ್ನು ಸಕ್ರಿಯಗೊಳಿಸುವ ಮತ್ತು ಪೋಷಿಸುವ ಸೃಜನಾತ್ಮಕ ಸ್ಪಂದನ ಅಥವಾ ಶಕ್ತಿ) ಪ್ರಜ್ಞಾಪೂರ್ವಕ ನಿಯಂತ್ರಣ. ಪ್ರಾಣಾಯಾಮದ ಯೋಗ ವಿಜ್ಞಾನವು ಮನುಷ್ಯನನ್ನು ಶರೀರ-ಪ್ರಜ್ಞೆಗೆ ಕಟ್ಟಿಹಾಕುವ ಬದುಕಿನ ಕ್ರಿಯೆಗಳು ಮತ್ತು ಸಂವೇದನಾ ಗ್ರಹಿಕೆಗಳಿಂದ ಮನಸ್ಸನ್ನು ಪ್ರಜ್ಞಾಪೂರ್ವಕವಾಗಿ ಬೇರ್ಪಡಿಸುವ ನೇರ ಮಾರ್ಗವಾಗಿದೆ. ಹೀಗೆ ಪ್ರಾಣಾಯಾಮವು ಮನುಷ್ಯನ ಪ್ರಜ್ಞೆಯನ್ನು, ಭಗವಂತನೊಂದಿಗೆ ಸಂಸರ್ಗ ಹೊಂದಲು ಮುಕ್ತಗೊಳಿಸುತ್ತದೆ. ಆತ್ಮ ಹಾಗೂ ಪರಮಾತ್ಮನ ಸಂಯೋಗಕ್ಕೆ ಎಡೆಮಾಡಿ ಕೊಡುವ ಎಲ್ಲ ವೈಜ್ಞಾನಿಕ ತಂತ್ರಗಳನ್ನು ಯೋಗ ಎಂದು ವರ್ಗೀಕರಿಸಬಹುದು ಹಾಗೂ ಪ್ರಾಣಾಯಾಮವು ಈ ದಿವ್ಯ ಸಂಯೋಗವನ್ನು ಹೊಂದಲು ಇರುವ ಶ್ರೇಷ್ಠ ಯೋಗ ವಿಧಾನವಾಗಿದೆ.