
“ನೀವು ಗುರು-ಶಿಷ್ಯರ ಸಂಬಂಧದಲ್ಲಿ ಅಚಲ ನಿಷ್ಠೆಯುಳ್ಳವರಾಗಿದ್ದಾಗ, ಆಧ್ಯಾತ್ಮಿಕ ಮಾರ್ಗವು ಬಹಳ ಸರಳವಾಗುತ್ತದೆ. ಆಗ ನೀವು ದಾರಿ ತಪ್ಪಲು ಸಾಧ್ಯವಿಲ್ಲ. ಮಾಯೆಯು ನಿಮ್ಮನ್ನು ಎಳೆದೊಯ್ಯಲು ಎಷ್ಟೇ ಪ್ರಯತ್ನಿಸಿದರೂ, ಭಗವಂತನನ್ನು ಮನಗಂಡ ಗುರುವು ನಿಮ್ಮ ಕಷ್ಟವನ್ನು ತಿಳಿದಿರುತ್ತಾನೆ ಮತ್ತು ನೀವು ಮತ್ತೆ ಮಾರ್ಗದಲ್ಲಿ ಸ್ಥಿರವಾಗುವುದಕ್ಕೆ ಸಹಾಯ ಮಾಡುತ್ತಾನೆ. ನೀವು ಅವನೊಡನೆ ಶ್ರುತಿಗೂಡಿದ್ದಲ್ಲಿ ಇದನ್ನೇ ಗುರುವು ಮಾಡುವುದು. ನೀವು ಮತ್ತು ಗುರುಗಳು ಸಾವಿರಾರು ಮೈಲಿಗಳ ದೂರದಲ್ಲಿರಬಹುದು, ಅವರ ಸಹಾಯವು ನಿಮಗೆ ದೊರೆಯುತ್ತದೆ. ನಮ್ಮ ಗುರುಗಳು ಈ ಭೂಮಿಯ ಮೇಲೆ ಜೀವಂತವಾಗಿಲ್ಲದಿದ್ದರೂ, ಸದಾ ಅವರು ನನ್ನೊಂದಿಗಿದ್ದಾರೆಂದು ನಾನು ಭಾವಿಸುತ್ತೇನೆ. ಗುರುವಿನ ಮಾರ್ಗದರ್ಶನ ಮತ್ತು ಆಶೀರ್ವಾದ ನಿಮ್ಮೊಡನಿರುವುದೇ — ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಯಲು ಬಹಳ ಸರಳವಾದ ಮಾರ್ಗ.”
—ಪರಮಹಂಸ ಯೋಗಾನಂದ
ಪ್ರೀತಿಪಾತ್ರರೇ,
ಈ ಜಗತ್ತಿನಲ್ಲಿ ಒಬ್ಬರು ಭಗವಂತನಿಂದ ಪಡೆಯಬಹುದಾದ ಅತ್ಯಮೂಲ್ಯವಾದ ಉಡುಗೊರೆ ಎಂದರೆ ನಿರುಪಾಧಿಕ ಪ್ರೇಮ ಮತ್ತು ಸ್ನೇಹದ ಅಭಿವ್ಯಕ್ತಿಯಾದ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಒಬ್ಬ ಗುರುವಿನಿಂದ ಮಾರ್ಗದರ್ಶನ ಪಡೆಯುವುದು. ಅವನ ಏಕೈಕ ಉದ್ದೇಶವೆಂದರೆ ಪ್ರತಿಯೊಬ್ಬ ಶಿಷ್ಯನಲ್ಲೂ ನಿದ್ರಿಸುತ್ತಿರುವ ಭಗವಂತನನ್ನು ಎಚ್ಚರಗೊಳಿಸುವುದು. ವೈಎಸ್‌ಎಸ್/ಎಸ್‌ಆರ್‌ಎಫ್‌ನ ನಾವೆಲ್ಲರೂ ಅಂತಹ ಒಬ್ಬ ಗುರುವಾದ ನಮ್ಮ ಪ್ರೀತಿಯ ಸತ್‌ಗುರುಗಳಾದ ಪರಮಹಂಸ ಯೋಗಾನಂದಜಿಯವರೆಡೆಗೆ ಸೆಳೆಯಲ್ಪಟ್ಟಿದ್ದೇವೆ. ಭಾರತದಾದ್ಯಂತ ಆಚರಿಸಲಾಗುವ ಈ ಪವಿತ್ರ ದಿನದಂದು, ನಮಗೆ ಆತ್ಮ-ವಿಮೋಚಕ ಬೋಧನೆಗಳನ್ನು ನೀಡಿದ ಮತ್ತು ಯಾರ ಇಡೀ ಜೀವನವು ಎಲ್ಲರ ಆತ್ಮಗಳಲ್ಲಿ ಭಗವಂತನೆಡೆಗೆ ಪ್ರೇಮವನ್ನು ವ್ಯಕ್ತಪಡಿಸಲು ಮುಡಿಪಾಗಿತ್ತೋ ಅಂತಹ ನಮ್ಮ ಪೂಜ್ಯ ಗುರುಗಳಿಗೆ ಉಪಕಾರ ಸ್ಮರಣೆಯಾಗಿ ನಮ್ಮ ಹೃದಯ ತುಂಬಿದ ಪ್ರೇಮ ಮತ್ತು ಭಕ್ತಿಯನ್ನು ಸಮರ್ಪಿಸಲು ಒಂದಾಗೋಣ.
ಪರಮಹಂಸಜಿಯವರು ತಮ್ಮನ್ನು ಪುನಃ ಭಗವಂತನೆಡೆಗೆ ಮಾರ್ಗದರ್ಶಿಸುವ ಪರಿಶುದ್ಧ ಮತ್ತು ಖಚಿತವಾದ ಜ್ಞಾನವಿದ್ದ ತಮ್ಮ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರರನ್ನು ಭೇಟಿಯಾಗುವವರೆಗೂ ನಿಜವಾದ ಸಂತೋಷ ಮತ್ತು ಜ್ಞಾನವನ್ನು ಹೊಂದಿರಲಿಲ್ಲ ಎಂದು ಹೇಳಿದ್ದಾರೆ. ದೇವರ ಸಮಾನರಾದ ನಮ್ಮ ಆತ್ಮೀಯ ಗುರುದೇವರು ನಮಗಾಗಿ ಗೊತ್ತುಪಡಿಸಿರುವ ಮಾರ್ಗದಲ್ಲಿ ನಡೆದು, ಪವಿತ್ರವ ಸಾಧನೆಯನ್ನು ನಿಷ್ಠೆಯಿಂದ ಅಭ್ಯಾಸ ಮಾಡಿದಲ್ಲಿ, ನೀವು ಖಂಡಿತವಾಗಿ ನಿಮ್ಮ ಜೀವನದಲ್ಲಿ ಪರಮಹಂಸಜಿಯವರ ಮಾರ್ಗದರ್ಶಕ ರಕ್ಷಣೆ ಮತ್ತು ಪ್ರೇಮತುಂಬಿದ ಉಪಸ್ಥಿತಿಯನ್ನು ಸದಾ ಇನ್ನೂ ಗಾಢವಾಗಿ ಮನಗಾಣುತ್ತೀರಿ. ಅವರ ಪರವಶಗೊಳಿಸುವ ಪರಿಜ್ಞಾನ ಮತ್ತು ಪ್ರೇಮದೊಂದಿಗೆ ನಾವು ಶ್ರುತಿಗೂಡುವ ಮೂಲಕ ನಮ್ಮ ಜೀವನವು ಪರಿವರ್ತನೆಗೊಳ್ಳುತ್ತದೆ.
ಪ್ರತಿದಿನ ನಿಮ್ಮನ್ನು ನೀವು ಧ್ಯಾನದ ಆಳದೊಳಗೆ ತಲ್ಲೀನವಾಗಿಸಿಕೊಳ್ಳುವಾಗ, ಆ ಭಗವಂತ ಮತ್ತು ಗುರುಗಳು ನಿಮ್ಮನ್ನು ಮಾರ್ಗದರ್ಶಿಸುತ್ತಾ, ಪ್ರೀತಿಸುತ್ತಾ ಮತ್ತು ಉದ್ಧರಿಸುತ್ತಾ ಸದಾ ನಿಮ್ಮ ಬಳಿಯಿದ್ದಾರೆ ಎಂದು ನೀವು ವಾಸ್ತವವಾಗಿ ಗ್ರಹಿಸುವಂತಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ದಿವ್ಯ ಪ್ರೇಮ ಮತ್ತು ಆಶೀರ್ವಾದಗಳೊಂದಿಗೆ,
ಸ್ವಾಮಿ ಚಿದಾನಂದ ಗಿರಿ