ದೇವರನ್ನು ನಿಶ್ಚಲತೆ ಮತ್ತು ಶಾಂತತೆಯಲ್ಲಿ ಕಾಣಬಹುದು — ಶ್ರೀ ಪರಮಹಂಸ ಯೋಗಾನಂದರಿಂದ

13 ಡಿಸೆಂಬರ್‌, 2025

ಈ ಕೆಳಗಿನ ಬರವಣಿಗೆಯು “ದೇವರೊಂದಿಗೆ ಸ್ನೇಹ ಬೆಳೆಸಿ” ಎಂಬ ಪ್ರವಚನದ ಆಯ್ದ ಭಾಗವಾಗಿದೆ. ಇದನ್ನು ಪರಮಹಂಸ ಯೋಗಾನಂದರ ‘ಸಂಗ್ರಹಿಸಿದ ಪ್ರವಚನಗಳು ಮತ್ತು ಪ್ರಬಂಧಗಳು’ ಕೃತಿಶ್ರೇಣಿಯ ಭಾಗವಾಗಿರುವ ‘ಸಾಲ್ವಿಂಗ್ ದಿ ಮಿಸ್ಟರಿ ಆಫ್ ಲೈಫ್, ಸಂಪುಟ IV’ ರಲ್ಲಿ ಪೂರ್ಣವಾಗಿ ಓದಬಹುದು. ಇದು ಈಗ ದಪ್ಪ ರಕ್ಷಾಪುಟ, ಕಾಗದ ರಕ್ಷಾಪುಟ ಮತ್ತು ಇ-ಪುಸ್ತಕಗಳ ಆವೃತ್ತಿಗಳಲ್ಲಿ ಲಭ್ಯವಿದೆ.

ಕೇಸರಿ-ಕಮಲ-ರೇಖಾಚಿತ್ರ

ಸದಾ ನೆನಪಿರಲಿ: ನಿಮಗೆ ಸ್ವಲ್ಪ ಬಿಡುವಿನ ಸಮಯ ಸಿಕ್ಕಾಗ, ದೇವರೊಡನೆ ನಿಮ್ಮ ಸಖ್ಯವನ್ನು ಬೆಳೆಸಿಕೊಳ್ಳಲು ಅದನ್ನು ವಿನಿಯೋಗಿಸಿ. ನಿಮಗೆ ಇದು ನನ್ನ ಸ್ವಂತ ಅನುಭವದಿಂದ ಮೂಡಿಬಂದ ವಿನಮ್ರವಾದ ಸಲಹೆ….

ದೇವರೊಂದಿಗೆ ಗೆಳೆತನವನ್ನು ಬೆಳೆಸಿಕೊಳ್ಳಲು, ಆತನನ್ನು ಪ್ರೀತಿಸಲು, ನಾವು ಆತನನ್ನು ಅರಿಯಬೇಕು. ನಿಶ್ಚಲತೆ ಮತ್ತು ಪ್ರಶಾಂತತೆಯಲ್ಲಿ, ನಿಮ್ಮ ಆತ್ಮವನ್ನು ಆತನಿಗೆ ಅರ್ಪಿಸಿ.

ಕೆಲವು ತಿಂಗಳುಗಳ ಅವಧಿಯಲ್ಲಿ, ಬಹುಶಃ, ವೇದಗಳು ಮತ್ತು ಇತರ ಧರ್ಮಗ್ರಂಥಗಳಲ್ಲಿನ ವಿವೇಕದ ಮಾತುಗಳಿಂದ ನಾನು ನಿಮಗೆ ಪರಮಾತ್ಮನ ಬಗ್ಗೆ ಕಲಿಸಬಹುದು; ಆದರೆ ನಿಮ್ಮ ಆತ್ಮದೊಳಗೆ ಆ ಸತ್ಯಗಳನ್ನು ಸಾಕ್ಷಾತ್ಕರಿಸಿಕೊಳ್ಳದಿದ್ದರೆ ಅದು ನಿಮಗೆ ಅಷ್ಟಾಗಿ ಪ್ರಯೋಜನವಾಗುವುದಿಲ್ಲ.

ಸಾಕ್ಷಾತ್ಕಾರವು ಆಂತರಿಕ ಪ್ರಶಾಂತತೆಯಲ್ಲಿ ಮಾತ್ರ ಲಭ್ಯವಾಗುತ್ತದೆ. ಪ್ರಶಾಂತತೆಯು ದೇವರಿಗೆ ಪ್ರಿಯವಾದುದು. ಪ್ರಶಾಂತತೆಯೇ ಪರಮಪಿತನ ಯಜ್ಞವೇದಿ ಮತ್ತು ಪವಿತ್ರ ಕ್ಷೇತ್ರವಾಗಿದೆ. ಆತನನ್ನು ಪ್ರಶಾಂತತೆಯಲ್ಲಿ ಅರಸಲು ಅಭ್ಯಾಸ ಮಾಡಿ. ಧ್ಯಾನವೇ ಮಾರ್ಗವಾಗಿದೆ. ಅದು ನಾನು ನಿಮಗೆ ನೀಡಬಲ್ಲ ಅತ್ಯುತ್ತಮ ಸಲಹೆ. ಪುಸ್ತಕಗಳು, ತರಗತಿಗಳು ಮತ್ತು ತಾತ್ವಿಕ ವಿವರಣೆಗಳು ನಿಮಗೆ ಲಭ್ಯವಿರಬಹುದು, ಆದರೆ ಇದನ್ನು ಮರೆಯಬೇಡಿ: ನಿಮ್ಮ ಎಲ್ಲ ಬಿಡುವಿನ ಕ್ಷಣಗಳನ್ನು ಧ್ಯಾನ ಮಾಡಲು ಮತ್ತು ದೇವರೊಂದಿಗೆ ಸ್ನೇಹ ಬೆಳೆಸಿಕೊಳ್ಳಲು ಬಳಸಿ.

ಧ್ಯಾನದ ಮೊದಲ ಕೆಲವು ನಿಮಿಷಗಳಲ್ಲಿ ನಿಮ್ಮ ಮನಸ್ಸು ಅಲೆದಾಡುತ್ತದೆ, ಆದರೆ ಆಲೋಚನೆಗಳು ನಿಶ್ಚಲವಾಗುವವರೆಗೆ ದೀರ್ಘಕಾಲದವರೆಗೆ ದೃಢವಾಗಿ ಮುಂದುವರಿಸಿ. ನೀವು ಹೀಗೆ ಯೋಚಿಸುತ್ತೀರಿ: “ಅಯ್ಯೋ, ಇಂದು ನನಗೆ ಈ ಕೆಲಸವಿದೆ; ಇಂದು ರಾತ್ರಿ ಸ್ವಲ್ಪ ಸಮಯದ ನಂತರ ಧ್ಯಾನ ಮಾಡುತ್ತೇನೆ.” ಆತನನ್ನು ಅರಿಯುವ ಮಹತ್ವವನ್ನು ನೀವು ಅನನ್ಯವಾಗಿ ಅನುಭವಿಸದ ಹೊರತು, ಆ “ರಾತ್ರಿ” ನಿಮಗೆ ಎಂದಿಗೂ ಬರುವುದಿಲ್ಲ; ವಿಚಲಿತಗೊಳಿಸುವ ಕಾರ್ಯಗಳು ನಿಮ್ಮ ಬೆಳಗು, ಮಧ್ಯಾಹ್ನ ಮತ್ತು ಸಂಜೆಗಳನ್ನು ತುಂಬುತ್ತವೆ, ರಾತ್ರಿ ಬಂದಾಗ ನೀವು ಅಸಹಾಯಕರಾಗಿ ನಿದ್ರೆಗೆ ಶರಣಾಗುತ್ತೀರಿ.

ಆದ್ದರಿಂದ, ನೀವು ಧ್ಯಾನಕ್ಕಾಗಿ ಕುಳಿತಾಗ, ಮನಸ್ಸನ್ನು ಏಕಾಗ್ರವಾಗಿಡಿ. ಚದುರಿದ ಆಲೋಚನೆಗಳನ್ನು ದೂರವಿಟ್ಟು, ಹೀಗೆ ಆಗ್ರಹಿಸಿ: “ಪರಮಪಿತನೇ, ನನ್ನೊಂದಿಗೆ ಇರಿ. ನನಗೆ ಉತ್ತರ ಬೇಕು; ನಿಮ್ಮ ಆಶೀರ್ವಾದವನ್ನು ನನ್ನ ಅಂತರ್ಯದಲ್ಲಿ ಅನುಭವಿಸಬೇಕು.” ಅವರಿಗೆ ಪುನಃ ಪುನಃ, ಪ್ರತಿ ಬಾರಿಯೂ ಮತ್ತಷ್ಟು ಗಾಢವಾಗಿ ಹೇಳಿ.

ಅನ್ಯಮನಸ್ಕನಾಗಿ ಪ್ರಾರ್ಥಿಸುವುದರಿಂದ ಅಷ್ಟೊಂದು ಪ್ರಯೋಜನವಿಲ್ಲ — ಅದು ನೀವು ತಿನ್ನಲು ಬಯಸುವ ಒಂದು ರುಚಿಯಾದ ಕೇಕ್ ಬಗ್ಗೆ ಯೋಚಿಸುತ್ತಾ, “ಸ್ವರ್ಗದಲ್ಲಿರುವ ಪರಮಪಿತನೇ, ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹೇಳಿದಂತಾಗುತ್ತದೆ. ಅದರ ಬದಲು, ಮೊದಲ ಪದ “ಪರಮಪಿತನೇ” ಎಂದು ಹೇಳಿ ಸಾಕು; ಆದರೆ ಅದನ್ನು ನೀವು ಅನುಭವಿಸುವವರೆಗೂ ಹೇಳುತ್ತಿರಿ. ನಂತರ ನಿಮ್ಮ ಪ್ರಾರ್ಥನೆಯ ಮುಂದಿನ ಪದಗುಚ್ಛಕ್ಕೆ ಮುಂದುವರಿಯಿರಿ.

ಅದು ಪೂರ್ವ ಮತ್ತು ಪಶ್ಚಿಮದ ನಡುವಿನ ಒಂದು ವ್ಯತ್ಯಾಸ. ಉದಾಹರಣೆಗೆ, ನಾನು ಮೊದಲು ಅಮೆರಿಕಕ್ಕೆ ಬಂದಾಗ ಪಾಶ್ಚಾತ್ಯ ಸಂಗೀತ ನನಗೆ ಇಷ್ಟವಾಗಿರಲಿಲ್ಲ; ಆದರೆ ಒಂದು ಕಥೆಯು ಮುಂದುವರಿದು ಹೇಗೆ ಪರಾಕಾಷ್ಠೆಯ ಅಂತ್ಯವನ್ನು ತಲುಪುತ್ತದೆಯೋ ಹಾಗೆ ಈಗ ನಾನು ಅದನ್ನು ಅರ್ಥಮಾಡಿಕೊಂಡಿದ್ದೇನೆ. ಪೂರ್ವದಲ್ಲಿ ನಾವು ಸಂಗೀತವನ್ನು ಈ ರೀತಿಯಲ್ಲಿ ಬಳಸುವುದಿಲ್ಲ; ನಾವು ಒಂದು ಪಲ್ಲವಿಯನ್ನು ತೆಗೆದುಕೊಂಡು ಅದು ವ್ಯಕ್ತಪಡಿಸುವ ಭಾವನೆಯಲ್ಲಿ ಲೀನವಾಗುವವರೆಗೂ ಅದನ್ನು ಪದೇ ಪದೇ ಪುನರಾವರ್ತಿಸುತ್ತೇವೆ.

ದೇವರ ಮೇಲೆ ಯಾವುದೇ ಪ್ರೀತಿಯ ಭಾವವಿಲ್ಲದೆ, ಒಂದು ಸಂಪೂರ್ಣ ಪ್ರಾರ್ಥನಾ ಪುಸ್ತಕವನ್ನು ಪಠಿಸುವುದರಿಂದ ಏನು ಪ್ರಯೋಜನ? ನಿಜವಾದ ಪ್ರಾರ್ಥನೆಯು ಬೌದ್ಧಿಕವಲ್ಲ; ಅದು ನೀವು ದೇವರಿಗೆ ಹೇಳುವ ಭಾವನಾತ್ಮಕ ಮಾತುಗಳು. ಆ ಭಾವನೆಯನ್ನು ಬೆಳೆಸಿಕೊಳ್ಳಬೇಕು: ಪ್ರಾರಂಭದಲ್ಲಿ, ನೀವು ದೇವರನ್ನು ತಿಳಿದಿರದ ಕಾರಣ ಆತನ ಮೇಲೆ ಪ್ರೀತಿ ಇರುವುದಿಲ್ಲ.

ನಮಗೆ ಆಪ್ತರಾದವರನ್ನು ಮತ್ತು ಪ್ರೀತಿಪಾತ್ರರನ್ನು ನಾವು ಪ್ರೀತಿಸುತ್ತೇವೆ. ಅವರಿಗೆ ನಮ್ಮ ಭಾವನೆಗಳನ್ನು ಸಹಜವಾಗಿ ವ್ಯಕ್ತಪಡಿಸುತ್ತೇವೆ; ಅದು ನಮ್ಮ ಹೃದಯದಿಂದ ತಾನಾಗಿಯೇ ಉಕ್ಕಿಬರುತ್ತದೆ. ಏಕೆ? ಏಕೆಂದರೆ ಅವರು ನಮಗೆ ನಿಜವಾದವರು, ಅವರನ್ನು ನಾವು ನಮ್ಮ ಕಣ್ಣೆದುರೇ ಅಥವಾ ಮನಸ್ಸಿನ ಕಣ್ಣಿನಲ್ಲಿ ನೋಡಬಹುದು. ಆದರೆ ದೇವರನ್ನು ನಾವು ಕಾಣುವುದಿಲ್ಲ ಏಕೆಂದರೆ ನಾವು ಆತನನ್ನು ತಿಳಿದುಕೊಳ್ಳಲು ಪ್ರಯತ್ನಿಸಿಲ್ಲ. ನಾವು ಆತನ ಉಪಸ್ಥಿತಿಯನ್ನು ಹೂವುಗಳಲ್ಲಿ ಮತ್ತು ಪ್ರಕೃತಿಯ ಇತರ ಸೌಂದರ್ಯಗಳಲ್ಲಿ ಊಹಿಸಬಹುದು; ಆದರೆ ಆತನೊಂದಿಗೆ ನೇರ ಸಂಪರ್ಕ ಸಾಧಿಸಲು ಆಳವಾದ ಧ್ಯಾನದ ಅವಶ್ಯಕತೆಯಿದೆ….

ದೇವರು ದೊರಕುವವರೆಗೆ ದೃಢವಾಗಿ ಮುಂದುವರೆಯಿರಿ

ನನ್ನ ಪರಮಪಿತನ ಮೇಲಿರುವ ನನ್ನ ಪ್ರೀತಿಯ ಅತಿ ಸಣ್ಣ ಕಿಡಿಯನ್ನಾದರೂ ನಿಮ್ಮಲ್ಲಿ ಜಾಗೃತಗೊಳಿಸಿದಾಗ, ನನ್ನ ಕಾರ್ಯವು ಪೂರ್ಣಗೊಳ್ಳುತ್ತದೆ.

ಪರಮಾತ್ಮನಿಗೆ ಸನ್ನಿಹಿತವಾಗಲು ಬಹಳಷ್ಟು ಸಮಯ ಹಿಡಿಯಿತು; ನನ್ನ ಮನಸ್ಸು ಅಷ್ಟು ಚಂಚಲವಾಗಿದ್ದರಿಂದ, ಈ ಜೀವನದಲ್ಲಿ ನನಗೆ ಎಂದಿಗೂ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲವೆಂದು ತೋರಿತು. ಆದರೆ, ಮನಸ್ಸು ನನ್ನನ್ನು ಧ್ಯಾನ ತ್ಯಜಿಸುವಂತೆ ಮೋಸಗೊಳಿಸಲು ಎಷ್ಟು ಬಾರಿ ಪ್ರಯತ್ನಿಸಿತೋ, ಅಷ್ಟೇ ಬಾರಿ ನಾನು ಮನಸ್ಸನ್ನು ಮರಳು ಮಾಡುತ್ತಿದ್ದೆ: “ನಾನು ಇಲ್ಲಿಯೇ ಕುಳಿತುಕೊಳ್ಳುತ್ತೇನೆ, ಎಷ್ಟೇ ಶಬ್ದಗಳು ಅಥವಾ ವಿಕರ್ಷಣೆಗಳು ಬಂದರೂ ಸರಿಯೆ. ಪ್ರಯತ್ನದಲ್ಲಿ ಪ್ರಾಣ ಹೋದರೂ ನನಗೆ ಚಿಂತೆಯಿಲ್ಲ; ಕೊನೆಯವರೆಗೂ ನಾನು ಮುಂದುವರೆಯುತ್ತೇನೆ.”

ನಾನು ಹೀಗೆ ದೃಢವಾಗಿ ಮುಂದುವರಿದಂತೆ, ಆಗೊಮ್ಮೆ ಈಗೊಮ್ಮೆ ದಿವ್ಯ ಚೇತನದ ಒಂದು ಕ್ಷಣಿಕ ದರ್ಶನ ಬರುತ್ತಿತ್ತು; ಅದು ಒಂದು ಕಿಡಿಯಂತೆ, ಅದೆಷ್ಟು ಸಮೀಪವೋ ಅಷ್ಟೇ ದೂರ, ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಮರೆಯಾಗುತ್ತಿತ್ತು. ಆದರೆ ನಾನು ದೃಢಸಂಕಲ್ಪದಿಂದ ಉಳಿದೆ. ಅಗೋಚರ ಮೌನದಲ್ಲಿ ಅಸೀಮ ನಿರ್ಧಾರದೊಂದಿಗೆ ನಾನು ಅದೆಷ್ಟು ಕಾದೆ! ಏಕಾಗ್ರತೆ ಎಷ್ಟು ಆಳವಾಯಿತೋ, ಅವರ ಆಶ್ವಾಸನೆ ಅಷ್ಟೇ ಸ್ಪಷ್ಟವೂ ಪ್ರಬಲವೂ ಆಯಿತು. ಈಗ ಅವರು ಸದಾ ನನ್ನೊಂದಿಗಿದ್ದಾರೆ….

ನಾನು ನಿಮ್ಮಲ್ಲಿ ಬೆಳೆಸಲು ಬಯಸುವ ಏಕೈಕ ವಿಷಯವೆಂದರೆ ಅವನೊಂದಿಗಿನ ಆ ಸಂಬಂಧ. ಆ ಸಂಬಂಧದಲ್ಲಿ, ನೀವು ಪ್ರತಿ ಬಾರಿ “ದೇವರೇ, ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹೇಳಿದಾಗ, ನಿಮ್ಮ ಪ್ರತಿಯೊಂದು ಕಣ, ಪ್ರತಿಯೊಂದು ಭಾವನೆ, ಪ್ರತಿಯೊಂದು ಆಲೋಚನೆಯೂ ಅವನ ಆನಂದದ ಅನಂತತೆಯಲ್ಲಿ ಜಾಗೃತಗೊಳ್ಳುತ್ತದೆ.

ಕೇಸರಿ-ಕಮಲ-ರೇಖಾಚಿತ್ರ

ಪರಮಹಂಸ ಯೋಗಾನಂದರವರ ಸಾಲ್ವಿಂಗ್ ದ ಮಿಸ್ಟರಿ ಆಫ್ ಲೈಫ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ. ಇದು ದೈನಂದಿನ ಜೀವನದಲ್ಲಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವಿಕೆ ಸರಣಿಯ ಸಂಗ್ರಹಿಸಿದ ಪ್ರವಚನಗಳು ಮತ್ತು ಪ್ರಬಂಧಗಳ ನಾಲ್ಕನೇ ಸಂಪುಟವಾಗಿದೆ. ಕಾಲಾತೀತ ಜ್ಞಾನದ ಈ ಸುಂದರ ಕೃತಿಯು ಪ್ರತಿಯನ್ನು ಈಗ ತರಿಸಿಕೊಳ್ಳಲು ಲಭ್ಯವಿದೆ.

ಇದನ್ನು ಹಂಚಿಕೊಳ್ಳಿ