ಸ್ವಾಮಿ ಚಿದಾನಂದ ಗಿರಿ ಅವರಿಂದ 2025ರ ಕ್ರಿಸ್ಮಸ್ ಸಂದೇಶ

13 ಡಿಸೆಂಬರ್, 2025

ಪ್ರೀತಿ ಪಾತ್ರರೇ,

ನಿಮಗೆ ಹೃತ್ಪೂರ್ವಕ, ಪ್ರೀತಿಯ ಮತ್ತು ಆನಂದಭರಿತ ಕ್ರಿಸ್ಮಸ್‌ ಶುಭಾಶಯಗಳು – ಹಾಗೂ ಪರಮಹಂಸ ಯೋಗಾನಂದರ ಜಾಗತಿಕ ಆಧ್ಯಾತ್ಮಿಕ ಕುಟುಂಬದ ಎಲ್ಲ ಸದಸ್ಯರು ಮತ್ತು ಸ್ನೇಹಿತರಿಗೆ! ಈ ಪವಿತ್ರ ಋತುವಿನಲ್ಲಿ ನಾವು ಪ್ರಭು ಏಸುಕ್ರಿಸ್ತನ ಜನನವನ್ನು ಆಚರಿಸುತ್ತಿರುವಾಗ, ಇಡೀ ವಿಶ್ವ ಕುಟುಂಬವನ್ನು ನಿರಂತರವಾಗಿ ಆಶೀರ್ವದಿಸಿ ಆಧ್ಯಾತ್ಮೀಕರಿಸುತ್ತಿರುವ ಈ ಪ್ರೀತಿಯ ಅವತಾರದ ಎಲ್ಲೆಯಿಲ್ಲದ ಕ್ರಿಸ್ತ ಪ್ರೇಮವು ನಿಮ್ಮ ಧ್ಯಾನದ ಸ್ಥಿರತೆಯಲ್ಲಿ ನೀವು ಇನ್ನಷ್ಟು ಆಳವಾಗಿ ಗ್ರಹಿಸುವಂತಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಅದು ಇಡೀ ಜಾಗತಿಕ ಕುಟುಂಬವನ್ನು ಆಶೀರ್ವದಿಸುತ್ತಿದೆ ಮತ್ತು ಆಧ್ಯಾತ್ಮಿಕಗೊಳಿಸುತ್ತಿದೆ.

ಏಸುವು ತನ್ನ ಆಂತರ್ಯದೊಳಗೆ ಭಗವಂತನ ಎಲ್ಲೆಯಿಲ್ಲದ ತೇಜೋಮಯ ಬ್ರಹ್ಮಾಂಡ-ಪೋಷಣೆಯ ಪ್ರಜ್ಞೆಯನ್ನು ಹೊಂದಿದ್ದ. ಆದರೂ ಪ್ರಾಯಶಃ ಯಾವುದು ನಮ್ಮನ್ನು ಅತ್ಯಂತ ಗಾಢವಾಗಿ ಸ್ಪರ್ಶಿಸುತ್ತದೆಂದರೆ, ಅವನು ಮಾನವಕೋಟಿಯ ನಡುವೆ ತೋರಿದ ವಿನಮ್ರ ಸರಳತೆಯಾಗಿದೆ — ಪ್ರತಿಯೊಂದು ಆತ್ಮಕ್ಕೂ ಸ್ವರ್ವಸ್ವವನ್ನು ಒಳಗೊಳ್ಳುವ ಸಹಾನುಭೂತಿಯನ್ನು ಹೊರಸೂಸುತ್ತಾ ಮತ್ತು ಆಲೋಚನೆ ಮತ್ತು ಕ್ರಿಯೆಯಲ್ಲಿ ಸದ್ಗುಣವನ್ನು ಸಾಕಾರಗೊಳಿಸುತ್ತಾ. ಅವನು ತನ್ನ ಉದಾಹರಣೆಯ ಮೂಲಕ ನಮ್ಮ ಜೀವನವನ್ನು ಭಗವಂತನ ಇಚ್ಛೆಗೆ ಅನುಗುಣವಾಗಿ ಹೇಗೆ ಹೊಂದಿಸಿಕೊಳ್ಳಬಹುದು ಮತ್ತು ಪ್ರತಿಯೊಂದು ಸನ್ನಿವೇಶದಲ್ಲೂ ಹೇಗೆ ದೈವಿಕವಾಗಿ ಸ್ಪಂದಿಸಬಹುದು, ನಮ್ಮ ಜಾಗೃತ ವಿಶ್ವದಲ್ಲಿ ಪ್ರೀತಿ, ಬೆಳಕು ಮತ್ತು ಶಾಂತಿಯ ದೂತರಾಗಬಹುದು ಎಂಬುದನ್ನು ತೋರಿಸಿದ. ನಮ್ಮ ಸ್ವಂತ ಆಧ್ಯಾತ್ಮಿಕ ರೂಪಾಂತರದ ಶಕ್ತಿಯನ್ನು ನಾವು ಎಂದೂ ಕಡಿಮೆ ಅಂದಾಜು ಮಾಡಬಾರದು. ಭಗವಂತನೊಡನೆಯ ಸಂಸರ್ಗದ ಪ್ರತಿಯೊಂದು ಕ್ಷಣ, ಪ್ರತಿಯೊಂದು ಶುದ್ಧ ಆಲೋಚನೆ, ಪ್ರತಿಯೊಂದು ನಿಸ್ವಾರ್ಥ ಕ್ರಿಯೆಯು ಮಾನವಕೋಟಿಯನ್ನು ಉನ್ನತೀಕರಿಸಲು ಮತ್ತು ಅದರ ಪವಿತ್ರೀಕರಣಕ್ಕೆ ಸಹಾಯ ಮಾಡಲು ಉಪಶಮನದ ಮತ್ತು ಸಾಮರಸ್ಯದ ಕಿರುದೆರೆಗಳನ್ನು ಕಳುಹಿಸುತ್ತದೆ.

ಈ ಕ್ರಿಸ್ಮಸ್‌ ಎಸ್‌ಆರ್‌ಎಫ್‌ ಮದರ್‌ ಸೆಂಟರ್‌ನ, ನಮ್ಮ ಗುರು ಪರಮಹಂಸ ಯೋಗಾನಂದರ ಜಾಗತಿಕ ಉದ್ದಿಷ್ಟ ಕಾರ್ಯದ ಆಧ್ಯಾತ್ಮಿಕ ಕೇಂದ್ರ ಬಿಂದುವಿನ 100ನೇ ವಾರ್ಷಿಕೋತ್ಸವವನ್ನು ಆಚರಿಸುತ್ತದೆ. ಇದು ಕ್ರಿಸ್ತನನ್ನು ಗೌರವಿಸಲು ಅವರು ಇಡೀ ದಿನದ ವಾರ್ಷಿಕ ಕ್ರಿಸ್ಮಸ್‌ ಧ್ಯಾನವನ್ನು ಉದ್ಘಾಟಿಸಿದ ಸ್ಥಳ — ನಮ್ಮೊಳಗೆ ಸರ್ವವ್ಯಾಪಿ ಕ್ರಿಸ್ತ ಪ್ರಜ್ಞೆಯ ಜನನವನ್ನು ಅರಿಯಲು ಮತ್ತು ಏಸುವು ಸಂಪೂರ್ಣವಾಗಿ ಸಾಕಾರಗೊಳಿಸಿದ ಆತ್ಮದ ಗುಣಗಳನ್ನು — ನಮ್ರತೆ, ಕ್ಷಮೆ ಮತ್ತು ಎಲ್ಲರೆಡೆಗೆ ಬೇಷರತ್ತಾದ ಪ್ರೀತಿಯನ್ನು ನಮ್ಮ ಜೀವನದಲ್ಲಿ ಹೆಚ್ಚು ಸಂಪೂರ್ಣವಾಗಿ ವ್ಯಕ್ತಪಡಿಸಲು ನಮಗೆ ಇದೊಂದು ಸದವಕಾಶ. ಈ ಧ್ಯಾನಗಳೊಂದರಲ್ಲಿ ಪರಮಹಸಂಜಿ, “ನೀವು ನಿಮ್ಮ ಪವಿತ್ರ ಭಾವನೆಯನ್ನು ಸದಾ ಹೆಚ್ಚುತ್ತಿರುವ ತೀವ್ರತೆಯಿಂದ ನಿರಂತರವಾಗಿ ವ್ಯಕ್ತಪಡಿಸಿದಲ್ಲಿ, ಈಗಲೇ ನೀವು ಹಿಂದೆಂದೂ ಅನುಭವಿಸದಿದ್ದಂತಹ ಭಗವಂತನ ಉಪಸ್ಥಿತಿಯನ್ನು ಕಾಣುತ್ತೀರಿ ಮತ್ತು ಅನುಭವಿಸುತ್ತೀರಿ” ಎಂದು ಹೇಳಿದರು. ಅದು ನಿಮಗೆ ಹಾಗೆಯೇ ಆಗಲಿ!

ನೀವು ಧ್ಯಾನದ ಆತ್ಮ-ಪೋಷಕ ಆಂತರಿಕ ಸ್ಥಿರತೆಯಲ್ಲಿ ಮುಳುಗಿ, ಕುಟುಂಬದ ಸದಸ್ಯರು ಮತ್ತು ಸ್ನೇಹಿತರೊಡನೆ ಹೊರಗೆ ಕ್ರಿಸ್ಮಸ್‌ ಹಬ್ಬವನ್ನು ಆಚರಿಸುತ್ತಿರುವಾಗ, ಕ್ರಿಸ್ತನ ಪ್ರೇಮವು ನಿಮ್ಮ ಹೃದಯದಿಂದ ಉಕ್ಕಿ ಹರಿಯಲಿ — ನಿಮ್ಮ ಮಾರ್ಗದಲ್ಲಿ ಬರುವವರಿಗೆಲ್ಲಾ ಶಾಂತಿ, ಸದ್ಭಾವನೆ ಮತ್ತು ಸಂತೋಷವನ್ನು ಹರಡಲಿ.

ನಿಮಗೆಲ್ಲರಿಗೂ ಅತ್ಯಂತ ಆನುಗ್ರಹೀತವಾದ ಕ್ರಿಸ್ಮಸ್‌ಗೆ ಹಾಗೂ ನಿತ್ಯ ನೂತನ ಆನಂದ ಮತ್ತು ಸಂತೃಪ್ತಿ ತುಂಬಿದ ಹೊಸ ವರ್ಷಕ್ಕೆ ನನ್ನ ದಿವ್ಯ ಸ್ನೇಹ ಮತ್ತು ಸದಾಶಯಗಳು.

ಭಗವಂತ, ಕ್ರಿಸ್ತ ಮತ್ತು ಗುರುಗಳ ಪ್ರೀತಿಯಲ್ಲಿ,

ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ