
ಇದು “ನಿಮ್ಮ ವಿಧಿಯನ್ನು ನಿಯಂತ್ರಿಸುವುದು” ಎಂಬ ಉಪನ್ಯಾಸದಿಂದ ಆಯ್ದ ಭಾಗವಾಗಿದೆ. ಸಂಪೂರ್ಣ ಉಪನ್ಯಾಸವನ್ನು ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಪ್ರಬಂಧಗಳ ಸಂಗ್ರಹ ಸಂಪುಟ 2, ದಿ ಡಿವೈನ್ ರೋಮಾನ್ಸ್ ನಲ್ಲಿ ಓದಬಹುದು.
ಹೊಸ ವರ್ಷದ ಆರಂಭದೊಂದಿಗೆ, ನಾವು ಏಕಾಗ್ರಗೊಂಡ ಸಂಕಲ್ಪ ಮತ್ತು ಆಧ್ಯಾತ್ಮಿಕ ದೃಢನಿಶ್ಚಯದೊಂದಿಗೆ ನಮ್ಮ ಜೀವನದ ಹೊಸ ಯುಗವನ್ನು ಪ್ರವೇಶಿಸೋಣ.
ದಯವಿಟ್ಟು ನನ್ನೊಂದಿಗೆ ಪ್ರಾರ್ಥಿಸಿ: “ಹೇ ಭಗವಂತನೇ, ಹೊಸ ವರ್ಷದ ದ್ವಾರಗಳ ಮೂಲಕ ನಾವು ಉತ್ತಮ ಜೀವನವನ್ನು ಪ್ರವೇಶಿಸುತ್ತಿದ್ದೇವೆ. ಇದು ಎಲ್ಲ ಕೊಡುಗೆಗಳ ದಾತನಾದ ನಿನ್ನೊಂದಿಗಿನ ಮಹಾನ್ ಸಂಸರ್ಗದ ವರ್ಷವಾಗಲಿ. ನೀನು ನಮ್ಮ ಎಲ್ಲ ಆಸೆಗಳ ಸಿಂಹಾಸನದ ಮೇಲೆ ಕುಳಿತು, ನಮ್ಮ ಬುದ್ಧಿಶಕ್ತಿಯ ಮೂಲಕ ನಮ್ಮ ಜೀವನವನ್ನು ನಿರ್ದೇಶಿಸುವ ಏಕೈಕ ರಾಜನಾಗಿರು.
“ಕಳೆದ ವರ್ಷದಲ್ಲಿ ಆಸೆಗಳು ನಮ್ಮನ್ನು ಹೆಚ್ಚಾಗಿ ದಾರಿ ತಪ್ಪಿಸುತ್ತಿದ್ದವು. ಇನ್ನು ಮುಂದೆ ನಮ್ಮ ಎಲ್ಲಾ ಆಕಾಂಕ್ಷೆಗಳು ನಿನ್ನ ಇಚ್ಛೆಗೆ ಅನುಗುಣವಾಗಿ ಮತ್ತು ಸಾಮರಸ್ಯದಿಂದ ಇರುವಂತೆ ನಮ್ಮನ್ನು ಆಶೀರ್ವದಿಸು. ದೈಹಿಕವಾಗಿ, ಮಾನಸಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪ್ರತಿದಿನವೂ ನಿನ್ನ ಪ್ರಜ್ಞೆಯಲ್ಲಿ ನವಜಾಗೃತಿಯಾಗುವಂತೆ ನಮ್ಮನ್ನು ಆಶೀರ್ವದಿಸು.
“ಹೇ ಭಗವಂತನೇ, ನಿನಗೆ, ಮತ್ತು ನಮ್ಮನ್ನು ಆಶೀರ್ವದಿಸುತ್ತಿರುವ ಹಾಗೂ ನಿನ್ನ ಸಾಮ್ರಾಜ್ಯಕ್ಕೆ ನಮ್ಮನ್ನು ಪ್ರೇರೇಪಿಸುತ್ತಿರುವ ನಮ್ಮೆಲ್ಲ ಗುರುಗಳಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಓಮ್. ಓಮ್. ಆಮೆನ್.”
ಇದು ನಿಮಗಾಗಿ ನನ್ನ ಹೊಸ ವರ್ಷದ ಹಾರೈಕೆ: ನೀವೆಲ್ಲರೂ ನಿಮ್ಮ ಕನಸುಗಳಿಂದಾಚೆಗಿರುವ, ಶಾಂತಿ ಮತ್ತು ಶಾಶ್ವತ ಆನಂದ ನೆಲೆಸಿರುವ ಲೋಕವನ್ನು ತಲುಪುವಂತಾಗಲಿ. ನೀವು ಈಥರ್‌ನಲ್ಲಿ ಬಿಡುಗಡೆ ಮಾಡುವ ಯಾವುದೇ ಬಲವಾದ ಶುಭಾಕಾಂಕ್ಷೆಯು ನೆರವೇರಲಿ.
ನಾವು ಧ್ಯಾನ ಮಾಡೋಣ: ಕಳೆದ ವರ್ಷದ ಸುಂದರ ಘಟನೆಗಳ ಬಗ್ಗೆ ಯೋಚಿಸಿ. ಕರಾಳ ಅನುಭವಗಳನ್ನು ಮರೆತುಬಿಡಿ. ಹೊಸ ವರ್ಷದ ತಾಜಾ ಮಣ್ಣಿನಲ್ಲಿ ನೀವು ಹಿಂದೆ ಮಾಡಿದ ಒಳ್ಳೆಯದನ್ನು ಬಿತ್ತಿರಿ, ಚೈತನ್ಯ ತುಂಬಿದ ಆ ಬೀಜಗಳು ಇನ್ನೂ ಉತ್ತಮ ರೀತಿಯಲ್ಲಿ ಬೆಳೆಯುವಂತಾಗಲಿ.
ಹಿಂದಿನ ದುಃಖಗಳೆಲ್ಲವೂ ಹೋದವು. ಹಿಂದಿನ ಎಲ್ಲ ಕೊರತೆಗಳೂ ಮರೆತುಹೋದವು. ಅಗಲಿ ಹೋದ ಪ್ರೀತಿಪಾತ್ರರು ಭಗವಂತನಲ್ಲಿ ಅಮರರಾಗಿ ಬದುಕುತ್ತಿದ್ದಾರೆ. ನಾವು ಈಗ ನಿತ್ಯಜೀವನದಲ್ಲಿದ್ದೇವೆ (ಭಗವಂತನಲ್ಲಿದ್ದೇವೆ). ಇದನ್ನು ನಾವು ಅರಿತುಕೊಂಡರೆ ನಮಗೆ ಸಾವೇ ಇರುವುದಿಲ್ಲ. ಸಮುದ್ರದಲ್ಲಿ ಅಲೆಗಳು ಏಳುತ್ತವೆ ಮತ್ತು ಬೀಳುತ್ತವೆ; ಅವು ಕಣ್ಮರೆಯಾದಾಗಲೂ ಸಾಗರದೊಂದಿಗೆ ಒಂದಾಗಿರುತ್ತವೆ. ಅಂತೆಯೇ, ಎಲ್ಲ ವಸ್ತುಗಳೂ ಭಗವಂತನ ಉಪಸ್ಥಿತಿಯ ಸಾಗರದಲ್ಲಿವೆ.
ಭಯಪಡುವಂಥದ್ದೇನೂ ಇಲ್ಲ. ಮನಸ್ಸಿನ ಪ್ರತಿಯೊಂದು ಸ್ಥಿತಿಯನ್ನು ಭಗವಂತನೊಂದಿಗೆ ಜೋಡಿಸಿಕೊಳ್ಳಿ. ಅಲೆಯು ಸಾಗರದಿಂದ ಬೇರ್ಪಟ್ಟಾಗ ಮಾತ್ರ ಅದಕ್ಕೆ ಪ್ರತ್ಯೇಕತೆಯ ಮತ್ತು ಕಳೆದುಹೋದ ಅನುಭವವಾಗುತ್ತದೆ. ಶಾಶ್ವತ ಜೀವನದೊಂದಿಗಿನ ನಿಮ್ಮ ಸಂಪರ್ಕದ ಬಗ್ಗೆ ನಿರಂತರವಾಗಿ ಯೋಚಿಸಿ, ಆಗ ನೀವು ಪರಮ ಶಾಶ್ವತ ಪ್ರಭುವಿನೊಂದಿಗೆ ನಿಮ್ಮ ಅನನ್ಯತೆಯನ್ನು ತಿಳಿಯುವಿರಿ.
ಬದುಕು ಮತ್ತು ಸಾವು ಅಸ್ತಿತ್ವದ ವಿಭಿನ್ನ ಹಂತಗಳಷ್ಟೆ. ನೀವು ಶಾಶ್ವತ ಜೀವನದ ಭಾಗವಾಗಿರುವಿರಿ. ಭಗವಂತನಲ್ಲಿ ನಿಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸಿ ಮತ್ತು ವಿಸ್ತರಿಸಿ, ಆಗ ನಿಮ್ಮ ಬಗ್ಗೆ ನಿಮಗಿರುವ ಪರಿಕಲ್ಪನೆಯು ಸಣ್ಣ ಶರೀರಕ್ಕೆ ಸೀಮಿತವಾಗಿರುವುದಿಲ್ಲ. ಇದನ್ನು ಕುರಿತು ಧ್ಯಾನ ಮಾಡಿ. ಇದನ್ನು ಅರಿಯಿರಿ.
ನಿಮ್ಮ ಪ್ರಜ್ಞೆಗೆ ಪರಿಧಿಯೇ ಇಲ್ಲ. ಲಕ್ಷಾಂತರ ಮೈಲುಗಳಷ್ಟು ಮುಂದೆ ನೋಡಿ: ಅಂತ್ಯವಿಲ್ಲ. ಎಡಕ್ಕೆ, ಮೇಲೆ ಮತ್ತು ಕೆಳಗೆ ನೋಡಿ: ಅಂತ್ಯವಿಲ್ಲ. ನಿಮ್ಮ ಮನಸ್ಸು ಸರ್ವವ್ಯಾಪಿ, ನಿಮ್ಮ ಪ್ರಜ್ಞೆಗೆ ಎಲ್ಲೆ ಇಲ್ಲ.
ನನ್ನೊಂದಿಗೆ ಪ್ರಾರ್ಥಿಸಿ: “ಭಗವಂತನೇ, ಕಳೆದ ವರ್ಷದ ಪ್ರಜ್ಞೆಯಿಂದ ನಾನೀಗ ಬಂಧಿತನಾಗಿಲ್ಲ. ನಾನು ಶರೀರದ ಇಕ್ಕಟ್ಟಿನ ಪ್ರಜ್ಞೆಯಿಂದ ಮುಕ್ತನಾಗಿದ್ದೇನೆ. ನಾನು ಶಾಶ್ವತ. ಮೇಲೆ ಮತ್ತು ಕೆಳಗೆ, ಎಡಗಡೆ, ಬಲಗಡೆ, ಮುಂದೆ, ಹಿಂದೆ ಮತ್ತು ಸುತ್ತಲೂ, ಚಿರಂತನದ ಕಂದಕದಲ್ಲಿ ನಾನು ಸರ್ವವ್ಯಾಪಿಯಾಗಿದ್ದೇನೆ. ನೀನು ಮತ್ತು ನಾನು ಒಂದೇ.
“ಭಗವಂತನಿಗೆ, ಗುರುಗಳಿಗೆ ಮತ್ತು ಸರ್ವಧರ್ಮಗಳ ಸಂತರಿಗೆ ನಾವು ನಮಿಸುತ್ತೇವೆ. ಮತ್ತು ನಾವು ಪ್ರತಿ ರಾಷ್ಟ್ರದ ಎಲ್ಲ ಆತ್ಮಗಳಿಗೆ ನಮಿಸುತ್ತೇವೆ, ಏಕೆಂದರೆ ಅವರೆಲ್ಲರೂ ನಿನ್ನ ಪ್ರತಿರೂಪದಲ್ಲಿ ಮಾಡಲ್ಪಟ್ಟಿದ್ದಾರೆ. ಹೊಸ ವರ್ಷದಲ್ಲಿ ನಾವು ಈ ಭೂಮಂಡಲದ ಎಲ್ಲ ರಾಷ್ಟ್ರಗಳಿಗೆ ಶಾಂತಿಯನ್ನು ಬಯಸುತ್ತೇವೆ. ಅವರು ನಿನ್ನ ಪಿತೃತ್ವದಡಿಯಲ್ಲಿ ತಮ್ಮ ಸರ್ವಸಮ್ಮತ ಭ್ರಾತೃತ್ವವನ್ನು ಅನುಭವಿಸಲಿ.
“ಅವರಿಗೆ ಈ ತಿಳುವಳಿಕೆಯನ್ನು ಅನುಗ್ರಹಿಸು, ಅದರಿಂದ ಈ ಭೂಮಿಯನ್ನು ಸ್ವರ್ಗವನ್ನಾಗಿ ಮಾಡಲು ಅವರು ಕಾದಾಟವನ್ನು ಬಿಟ್ಟು ಪರಸ್ಪರ ಶಾಂತಿಯುತವಾಗಿ ಬದುಕುವಂತಾಗಲಿ. ಮತ್ತು ನಮ್ಮ ಜೀವನವನ್ನು ಆಧ್ಯಾತ್ಮಿಕವಾಗಿ ಪುನರ್ನಿರ್ಮಿಸುವ ಮೂಲಕ ಹಾಗೂ ನಮ್ಮ ಉದಾಹರಣೆಯಿಂದ ಇತರರನ್ನು ಅದೇ ರೀತಿ ಮಾಡಲು ಪ್ರೇರೇಪಿಸುವ ಮೂಲಕ ನಾವು ಇಲ್ಲಿ ನಿನ್ನ ಸ್ವರ್ಗವನ್ನು ನಿರ್ಮಿಸಲು ಸಹಾಯ ಮಾಡುವಂತೆ ನಮ್ಮೆಲ್ಲರನ್ನು ಆಶೀರ್ವದಿಸು.
“ನಾವು ನಮ್ಮ ತಂದೆಯಾದ ನಿನ್ನನ್ನು ಪ್ರೀತಿಸುತ್ತೇವೆ ಮತ್ತು ನಾವು ಎಲ್ಲ ಜನಾಂಗಗಳನ್ನು ನಮ್ಮ ಸಹೋದರರಂತೆ ಪ್ರೀತಿಸುತ್ತೇವೆ. ನಾವು ಎಲ್ಲ ಜೀವಿಗಳನ್ನು ಪ್ರೀತಿಸುತ್ತೇವೆ, ಏಕೆಂದರೆ ಅವು ನಿನ್ನ ಚೈತನ್ಯವನ್ನು ಪ್ರತಿಬಿಂಬಿಸುತ್ತವೆ. ನಾವು ಎಲ್ಲದರಲ್ಲೂ ನೆಲೆಸಿರುವ ನಿನಗೆ ನಮಿಸುತ್ತೇವೆ.
“ಭಗವಂತನೇ, ಈ ಹೊಸ ವರ್ಷದಲ್ಲಿ ನಮ್ಮನ್ನು ಬಲಿಷ್ಠರನ್ನಾಗಿಸು, ನಿನ್ನ ನಿರಂತರ ಉಪಸ್ಥಿತಿಯಿಂದ ಸದಾ ಮಾರ್ಗದರ್ಶಿಸಲ್ಪಟ್ಟು ಶರೀರ, ಮನಸ್ಸು ಮತ್ತು ಆತ್ಮದಲ್ಲಿ ನಾವು ನಿನ್ನ ಚೈತನ್ಯ, ಆರೋಗ್ಯ, ಸಮೃದ್ಧಿ ಮತ್ತು ಸಂತೋಷವನ್ನು ಪ್ರತಿಬಿಂಬಿಸುವಂತಾಗಲಿ. ನಿನ್ನ ಮಕ್ಕಳಾಗಿ, ನೀನು ಪರಿಪೂರ್ಣನಾಗಿರುವಂತೆಯೇ ನಾವೂ ಪರಿಪೂರ್ಣರಾಗುವಂತಾಗಲಿ. ಓಂ, ಶಾಂತಿ, ಓಂ.”