
ನೀವು ಶಾಂತಿಯನ್ನು ಖರೀದಿಸಲು ಸಾಧ್ಯವಿಲ್ಲ; ಧ್ಯಾನದಲ್ಲಿ ನಿಮ್ಮ ದೈನಂದಿನ ಅಭ್ಯಾಸಗಳ ನಿಶ್ಚಲತೆಯಲ್ಲಿ ಅದನ್ನು ಹೇಗೆ ತಯಾರಿಸಬೇಕೆಂದು ನೀವು ತಿಳಿದಿರಬೇಕು.
— ಪರಮಹಂಸ ಯೋಗಾನಂದ
ಈ ಪುಟದಲ್ಲಿ ನಿಮಗೆ ಪರಮಹಂಸ ಯೋಗಾನಂದರ ಬೋಧನೆಗಳ ಜ್ಞಾನ-ಭಂಡಾರದಿಂದ ತೆಗೆದುಕೊಂಡ, ತಂತ್ರಗಳು ಮತ್ತು ಮಾರ್ಗದರ್ಶಿತ ಧ್ಯಾನಗಳು ದೊರೆಯುತ್ತವೆ, ಅವು ಈಗಲೇ ನಿಮ್ಮೊಳಗೆ ಶಾಂತಿಯನ್ನು “ಉತ್ಪಾದಿಸುವುದನ್ನು” ಪ್ರಾರಂಭಿಸಲು ಈ ಕೆಳಗಿನವು ನೆರವಿಗೆ ಬರುತ್ತವೆ:
- ಶರೀರವನ್ನು ಸಡಿಲಿಸುವುದು (ಸ್ನಾಯುಗಳಿಂದ ಒತ್ತಡವನ್ನು ತೆಗೆದುಹಾಕುವುದು)
- ಮಾನಸಿಕ ವಿಶ್ರಾಂತಿಗಾಗಿ ಮೌನದ ರಕ್ಷಣಾತ್ಮಕ ಕ್ಷಣವನ್ನು ಸೃಷ್ಟಿಸುವುದು
- ಶಾಂತತೆಯಲ್ಲಿ ನಿಮ್ಮನ್ನು ನೆಲೆಗೊಳಿಸುವುದು
- ಆಂತರಿಕ ಶಾಂತಿಯನ್ನು ಕುರಿತ ಮಾರ್ಗದರ್ಶಿತ ದೀರ್ಘ ಧ್ಯಾನಗಳಲ್ಲಿ ಮುಳುಗುವುದು
- ನಿಮ್ಮ ಶಾಂತಿಯನ್ನು ಹಿಡಿದಿಟ್ಟುಕೊಳ್ಳುವುದಕ್ಕಾಗಿ ಶ್ರೀ ಮೃಣಾಲಿನಿ ಮಾತಾರವರ ಜ್ಞಾನವನ್ನು ಹೀರಿಕೊಳ್ಳುವುದು
ನೀವು ಬಯಸಿದ ಯಾವುದೇ ಕ್ರಮದಲ್ಲಿ ಈ ಪುಟದ ವಿಷಯಗಳನ್ನು ಬಳಸಿಕೊಳ್ಳಬಹುದು. ನಿಸ್ಸಂಶಯವಾಗಿ, ಶಾಂತಿಯನ್ನು ಅರಿಯಲು ಮತ್ತು ಹಂಚಿಕೊಳ್ಳಲು ಇಲ್ಲಿ ನೀಡಲಾದ ವಿಧಾನಗಳನ್ನು ಅಥವಾ ಪರಮಹಂಸಜಿಯವರ ಇತರ ಬೋಧನೆಗಳನ್ನು ಪ್ರತಿದಿನ ಬಳಸುವುದು ಉತ್ತಮ ಕ್ರಮವಾಗಿದೆ — ಏಕೆಂದರೆ ನಿಯತವಾದ ಪುನರಾವರ್ತನೆ ಮತ್ತು ಅಭ್ಯಾಸದಿಂದ ನೀವು ಅನುಭವಿಸುವ ಎಲ್ಲವೂ ಆಳವಾಗುತ್ತವೆ.
ಶಾಂತಿಯನ್ನು ಬರಮಾಡಿಕೊಳ್ಳಲು ಮತ್ತು ಅಂತರಾಳಕ್ಕಿಳಿಯಲು ಶರೀರವನ್ನು ಸಡಿಲಿಸಿ
“ಆರಾಮದಿಂದಿರುವ ಮತ್ತು ಶಾಂತಿಯಿಂದಿರುವ ಶರೀರವು ಮಾನಸಿಕ ಶಾಂತಿಯನ್ನು ಆಹ್ವಾನಿಸುತ್ತದೆ, ಧ್ಯಾನಕ್ಕೆ ಅಂದರೆ, ಭಗವಂತನ ಸಂಸರ್ಗದ ಆಧ್ಯಾತ್ಮಿಕ ಕಲೆಗೆ ಅದು ಅತ್ಯಗತ್ಯ,” ಎಂದು ಪರಮಹಂಸ ಯೋಗಾನಂದರು ಹೇಳುತ್ತಾರೆ. ಅವರ ಇನ್ನರ್ ಪೀಸ್: ಹೌ ಟು ಬಿ ಕಾಮ್ಲಿ ಆಕ್ಟಿವ್ ಅಂಡ್ ಆಕ್ಟಿವ್ಲಿ ಕಾಮ್ ಪುಸ್ತಕದಲ್ಲಿ ಶರೀರವನ್ನು ಸಡಿಲಿಸಿಕೊಳ್ಳಲು ಈ ಕೆಳಗಿನ ತಂತ್ರಗಳನ್ನು ಕೊಡುತ್ತಾರೆ (ಇವು, ಶರೀರವನ್ನು ಪುನರ್ಭರ್ತಿ ಮಾಡುವ ಮತ್ತು ಪರಿಪೂರ್ಣ ವಿಶ್ರಾಂತಿಯನ್ನು ಉತ್ತೇಜಿಸುವ ವಿಜ್ಞಾನದ ಆಧಾರದ ಮೇಲೆ ಸರಳೀಕರಿಸಿದ ಸೂಚನೆಗಳು, ಇವುಗಳನ್ನು ಅವರು ಯೋಗದಾ ಸತ್ಸಂಗ ಪಾಠಗಳಲ್ಲಿ ಸಂಪೂರ್ಣವಾಗಿ ಕಲಿಸುತ್ತಾರೆ):
- ಇಚ್ಛಾಶಕ್ತಿಯೊಂದಿಗೆ ಬಿಗಿಗೊಳಿಸಿ (Tense): ಇಚ್ಛಾಶಕ್ತಿಯ ಆದೇಶದಿಂದ ಪ್ರಾಣಶಕ್ತಿಯು (ಬಿಗಿಗೊಳಿಸುವುದರ ಮೂಲಕ) ಇಡೀ ದೇಹವನ್ನು ಅಥವಾ ದೇಹದ ಯಾವುದೇ ಭಾಗವನ್ನು ತುಂಬಿಕೊಳ್ಳುವಂತೆ ನಿರ್ದೇಶಿಸಿ. ಅಲ್ಲಿ ಚೈತನ್ಯವು ಶಕ್ತಿ ತುಂಬುತ್ತ, ಹೊಸ ಚೈತನ್ಯ ನೀಡುತ್ತ, ಅನುರಣಿಸುತ್ತಿರುವುದನ್ನು ಅನುಭವಿಸಿ.
- ದೇಹವನ್ನು ಸಡಿಲಿಸಿ, ಅನುಭವಿಸಿ: ಬಿಗಿತವನ್ನು ಸಡಿಲಿಸಿ, ಹಾಗೂ ನವ ಚೈತನ್ಯ ಮತ್ತು ಜೀವಶಕ್ತಿಯ ಹಿತವಾದ ಪುಳಕವನ್ನು ರೀಚಾರ್ಜ್ ಆದ ಭಾಗದಲ್ಲಿ ಅನುಭವಿಸಿ. ನೀವು ಶರೀರವಲ್ಲ ಎಂಬುದನ್ನು ಅರಿಯಿರಿ; ನೀವು, ಈ ಶರೀರಕ್ಕೆ ಆಧಾರವಾಗಿರುವಂತಹ ಚೈತನ್ಯವೇ ಆಗಿರುವಿರಿ. ಈ ತಂತ್ರದ ಅಭ್ಯಾಸದಿಂದ ಉಂಟಾದ ನಿಶ್ಚಲತೆಯಿಂದ ಬರುವ ಶಾಂತಿಯನ್ನು, ಸ್ವಾತಂತ್ರ್ಯವನ್ನು ಹಾಗೂ ಹೆಚ್ಚಾದ ಅರಿವನ್ನು ಅನುಭವಿಸಿ.
- ಯಾವುದೇ ಸಮಯದಲ್ಲಿ ನಿಮಗೆ ನಿಶ್ಶಕ್ತಿ ಮತ್ತು ಅಸ್ಥಿರತೆ ಉಂಟಾದಾಗ, 3 ಬಾರಿ ಪುನರಾವರ್ತಿಸಿ:
(ಅ) ಉಚ್ಛ್ವಾಸ ಮಾಡಿ, ಉಸಿರನ್ನು ಹಿಡಿದುಕೊಂಡು.
(ಆ) ನಿಧಾನವಾಗಿ ಇಡೀ ಶರೀರವನ್ನು, ಎಲ್ಲ ಸ್ನಾಯುಗಳನ್ನೂ ಒಟ್ಟಿಗೇ ಬಿಗಿಗೊಳಿಸಿ.
(ಇ) ಇಡೀ ಶರೀರದ ಮೇಲೆ ಆಳವಾದ ಗಮನವನ್ನಿಟ್ಟುಕೊಂಡು ಒಂದರಿಂದ ಇಪ್ಪತ್ತು ಎಣಿಸುವವರೆಗೆ ಬಿಗಿತವನ್ನು ಹಿಡಿದಿಟ್ಟುಕೊಳ್ಳಿ.
(ಈ) ಬಿಗಿತವನ್ನು ಸಡಿಲಿಸುತ್ತ ನಿಶ್ವಾಸ ಮಾಡಿ.
ನಿಮ್ಮ ಬಿಡುವಿಲ್ಲದ ದಿನದಲ್ಲಿ ಆಧ್ಯಾತ್ಮಿಕ ಮೌನದ ಕ್ಷಣವನ್ನು ಸೃಷ್ಟಿಸಿಕೊಳ್ಳಿ — ಮಾನಸಿಕ ವಿಶ್ರಾಂತಿ
ಈ ವೀಡಿಯೋ ತುಣುಕಿನಲ್ಲಿ ಎಸ್‌ಆರ್‌ಎಫ್ ಸನ್ಯಾಸಿನಿ ಬ್ರಹ್ಮಣಿ ಮಾಯಿ ಅವರು ಪರಮಹಂಸ ಯೋಗಾನಂದರ ವೈಎಸ್‌ಎಸ್ ಪಾಠಗಳಿಂದ ಮಾನಸಿಕ ವಿಶ್ರಾಂತಿಯನ್ನು ಉಂಟುಮಾಡಲು ಮತ್ತು ನಮ್ಮ ಬಿಡುವಿಲ್ಲದ ದೈನಂದಿನ ಚಟುವಟಿಕೆಗಳ ಮಧ್ಯೆ ಒಂದು ಕ್ಷಣದ ಮೌನವನ್ನು, ರಕ್ಷಣಾತ್ಮಕ ವಿರಾಮವನ್ನು ಸೃಷ್ಟಿಸಲು ಒಂದು ಸಣ್ಣ ವ್ಯಾಯಾಮವನ್ನು ಹೇಳಿಕೊಡುತ್ತಾರೆ, ಅದರಿಂದ ಒಂದು ನಿಮಿಷಕ್ಕಾದರೂ ಅಥವಾ ಅದಕ್ಕಿಂತ ಕಡಿಮೆ ಸಮಯಕ್ಕಾದರೂ — ಭಗವಂತನೊಂದಿಗಿನ ಶಾಂತಿಯುತ ಸಂಪರ್ಕವನ್ನು ಅನುಭವಿಸಬಹುದು, ಅದು ನಮ್ಮ ಮಾನಸಿಕ ಸ್ಥಿತಿ ಮತ್ತು ಯೋಗಕ್ಷೇಮದ ಮೇಲೆ ನಿರಂತರವಾಗಿ ಪ್ರಭಾವ ಬೀರುತ್ತಿರುತ್ತದೆ.
ನಿಮ್ಮನ್ನು ನೀವು ಶಾಂತತೆಯಲ್ಲಿ ನೆಲೆಗೊಳಿಸಿಕೊಳ್ಳಿ — ಮಾರ್ಗದರ್ಶಿತ ಧ್ಯಾನ (ಸುಮಾರು 15 ನಿಮಿಷಗಳು)
ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಸನ್ಯಾಸಿನಿ ಕರುಣಾ ಮಾಯಿ ಅವರು ಧ್ಯಾನದ ಶಾಂತಿಯಲ್ಲಿ ಒಬ್ಬರು ನೆಲೆಗೊಳ್ಳಲು ಸಾಧ್ಯವಾಗುವ ಒಂದು ಮಾರ್ಗದರ್ಶಿತ ಧ್ಯಾನವನ್ನು ನಡೆಸಿಕೊಡುತ್ತಾರೆ. ಈ ಧ್ಯಾನವು ಪರಮಹಂಸ ಯೋಗಾನಂದರ ಇನ್ನರ್ ಪೀಸ್: ಹೌ ಟು ಬಿ ಕಾಮ್ಲಿ ಆಕ್ಟಿವ್ ಅಂಡ್ ಆಕ್ಟಿವ್ಲಿ ಕಾಮ್ ಪುಸ್ತಕದಲ್ಲಿನ ದೃಢೀಕರಣ ಮತ್ತು ದೃಶ್ಯೀಕರಣವನ್ನು ಒಳಗೊಂಡಿರುತ್ತದೆ.
ನೀವು ಮೌನ ಮತ್ತು ಶಾಂತತೆಯ ಅತ್ಯಧಿಕ ಆಳವನ್ನು ತಲುಪಿದ್ದೀರಿ ಎಂದು ನೀವು ಭಾವಿಸಿದಾಗ, ಇನ್ನೂ ಆಳಕ್ಕೆ ಹೋಗಿ.
— ಪರಮಹಂಸ ಯೋಗಾನಂದ
ಆಂತರಿಕ ಶಾಂತಿಯಲ್ಲಿ ಆಳವಾಗಿ ಮುಳುಗಿ — ಮಾರ್ಗದರ್ಶಿತ ಧ್ಯಾನ (ಸುಮಾರು 30 ನಿಮಿಷಗಳು)
ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ಸನ್ಯಾಸಿ ಸ್ವಾಮಿ ಸೇವಾನಂದ ಗಿರಿ ಅವರು ಆಂತರಿಕ ಶಾಂತಿಯನ್ನು ಕುರಿತ ಮಾರ್ಗದರ್ಶಿತ ಧ್ಯಾನವನ್ನು ನಡೆಸಿಕೊಡುತ್ತಾರೆ ಹಾಗೂ ಪರಮಹಂಸ ಯೋಗಾನಂದರು ನೀಡಿದ ಧ್ಯಾನ ಮತ್ತು ದೃಢೀಕರಣದಲ್ಲಿ ಕಂಡುಬರುವ ಶಾಂತಿಯ ಆಳವನ್ನು ಅನುಭವಿಸಲು ನಿಮ್ಮನ್ನು ಆಹ್ವಾನಿಸುತ್ತಾರೆ. ಪರಮಹಂಸಜಿಯವರು ಹೇಳಿದಂತೆ: “ನಿಮ್ಮ ಆತ್ಮದ ಅಂತರ್ಬೋಧೆಯ ಮೂಲಕ ಭಗವಂತನು ನಿಮ್ಮ ಅಶಾಂತತೆಯ ಮೋಡಗಳಿಂದ ಮಹಾನ್ ಶಾಂತಿ ಮತ್ತು ಆನಂದವಾಗಿ ರಭಸದಿಂದ ಹೊರಹೊಮ್ಮುವುದನ್ನು ಅನುಭವಿಸಿ.”
ಧ್ಯಾನದಲ್ಲಿ ಈ ಕೆಳಗಿನ ದೃಢೀಕರಣದ ದೀರ್ಘ ಆವೃತ್ತಿ ಇರುತ್ತದೆ, ನಿಮ್ಮ ಜೀವನದಲ್ಲಿ ಮತ್ತು ಜಗತ್ತಿನಲ್ಲಿ ಹೆಚ್ಚು ಶಾಂತಿಯನ್ನು ವ್ಯಕ್ತಪಡಿಸಲು ಬಯಸುವ ಯಾವುದೇ ಸಮಯದಲ್ಲಿಯೂ ನೀವು ಇದನ್ನು ಅಭ್ಯಾಸ ಮಾಡಬಹುದು:
ನನ್ನ ಶರೀರದಲ್ಲಿ ಶಾಂತಿಯು ತುಂಬುತ್ತಿದೆ; ಶಾಂತಿಯು ನನ್ನ ಹೃದಯವನ್ನು ತುಂಬಿಕೊಳ್ಳುತ್ತಿದೆ ಮತ್ತು ನನ್ನ ಪ್ರೀತಿಯಲ್ಲಿ ನೆಲೆಸುತ್ತಿದೆ; ಒಳಗೂ ಹೊರಗೂ ಎಲ್ಲೆಡೆಯೂ ಶಾಂತಿ.
ಅನಂತ ಶಾಂತಿಯು ನನ್ನ ಜೀವನವನ್ನು ಆವರಿಸಿ ನನ್ನ ಅಸ್ತಿತ್ವದ ಎಲ್ಲ ಕ್ಷಣಗಳನ್ನೂ ವ್ಯಾಪಿಸುತ್ತಿದೆ.
ಶಾಂತಿ ನನಗೆ; ಶಾಂತಿ ನನ್ನ ಕುಟುಂಬಕ್ಕೆ; ಶಾಂತಿ ನನ್ನ ದೇಶಕ್ಕೆ; ಶಾಂತಿ ನನ್ನ ಪ್ರಪಂಚಕ್ಕೆ; ಶಾಂತಿ ನನ್ನ ವಿಶ್ವಕ್ಕೆ.
ನಿಮ್ಮ ಶಾಂತಿಯನ್ನು ಹಿಡಿದಿಟ್ಟುಕೊಳ್ಳಿ — ಮತ್ತು ನೀವು ಮರೆತಾಗ ಅದನ್ನು ಮರಳಿ ತರಲು ಒಂದು ಮಾರ್ಗವನ್ನು ಕಂಡುಕೊಳ್ಳಿ
ನಾವು ಜೀವನವನ್ನು ಅನುಭವಿಸುತ್ತಿರುವಾಗ, ಆಗಾಗ್ಗೆ ದೈನಂದಿನ ಸವಾಲುಗಳನ್ನು ಎದುರಿಸುತ್ತೇವೆ, ಅವು ನಾವು ಧ್ಯಾನದಲ್ಲಿ ಕಂಡುಕೊಂಡ ಶಾಂತಿಯನ್ನು ಕಳೆದುಕೊಳ್ಳುವಂತೆ ಮಾಡಿ, ಅದರ ಜಾಗದಲ್ಲಿ ಹತಾಶೆ ಅಥವಾ ಗೊಂದಲದ ಭಾವನೆಗಳನ್ನು ಉಂಟುಮಾಡಲು ಕಾರಣವಾಗುವಂತೆ ಕಾಣುತ್ತವೆ.
ಆದರೆ ವೈಎಸ್‌ಎಸ್/ಎಸ್‌ಆರ್‌ಎಫ್‌ನ ನಾಲ್ಕನೇ ಅಧ್ಯಕ್ಷರಾದ ಪ್ರೀತಿಯ ಶ್ರೀ ಶ್ರೀ ಮೃಣಾಲಿನಿ ಮಾತಾ ಅವರು 2011 ರ ಎಸ್‌ಆರ್‌ಎಫ್ ವಿಶ್ವ ಘಟಿಕೋತ್ಸವದಲ್ಲಿ ಅವರ ಸತ್ಸಂಗದಿಂದ ಆಯ್ದ ಈ ಕೆಳಗಿನ ಕಿರು ತುಣುಕಿನಲ್ಲಿ ವಿವರಿಸಿದಂತೆ, ಆ ಕ್ಷಣದಲ್ಲಿ ನಮಗೆ ಪ್ರಬಲವಾದ ಆಯ್ಕೆ ಮತ್ತು ಭಗವಂತನ ಉಪಸ್ಥಿತಿಯನ್ನು ಅಭ್ಯಾಸ ಮಾಡುವ ವಿಧಾನ ಇದ್ದೇ ಇರುತ್ತದೆ, ಅದು ಶಾಂತಿಯು ಕೈತಪ್ಪಿ ಹೋದಾಗಲೆಲ್ಲ ನಮ್ಮನ್ನು ನಾವು ಶಾಂತಿಯ ಸ್ಥಿತಿಯಲ್ಲಿ ಪುನಃ ಸ್ಥಾಪಿಸಿಕೊಳ್ಳಲು ಸಾಧ್ಯವಾಗಿಸುತ್ತದೆ.
ಈ ಸಣ್ಣ ಟೂಲ್‌ಕಿಟ್‌ನಿಂದ ನಿಮ್ಮೊಳಗೆ ಎಷ್ಟು ಶಾಂತಿ ಇದೆ ಎಂಬುದನ್ನು ನೀವು ಈಗಿಂದೀಗಲೇ ವೀಕ್ಷಿಸಬಹುದು. ಪುನರಾವರ್ತಿಸುವ ದೈನಂದಿನ ಅಭ್ಯಾಸದಿಂದ ಈ ಹಿಂದೆ ಅಡಗಿದ್ದ ಮತ್ತು ಬಳಸಿಕೊಳ್ಳದಿದ್ದ ಶಾಂತಿಯ ಭಂಡಾರವು ನಿಮ್ಮ ಜೀವನದಲ್ಲಿ ನಿರಂತರ ಸಕಾರಾತ್ಮಕ ಮತ್ತು ಹರಿಯುವ ಶಕ್ತಿಯಾಗಬಹುದು.
ಆದರೆ ಈ ಟೂಲ್‌ಕಿಟ್ ನೀವು ಪರಮಹಂಸ ಯೋಗಾನಂದರ ಬೋಧನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಅನುಭವಿಸಬಹುದಾದ ಶಾಂತಿಯ ಆಳವರಿಯದ ಆಳಕ್ಕೆ ಕೊಂಡೊಯ್ಯಲು ಪ್ರಾರಂಭಿಸುತ್ತದಷ್ಟೆ. ನಿಮಗೆ ಇನ್ನೂ ಹೆಚ್ಚು ಆಳವಾಗಿ ಹೋಗಬೇಕೆಂದರೆ, ಯೋಗದಾ ಸತ್ಸಂಗ ಪಾಠಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ನೋಂದಾಯಿಸಲು ನಾವು ನಿಮಗೆ ಸಲಹೆ ನೀಡುತ್ತೇವೆ — ಇದರಲ್ಲಿ ಪರಮಹಂಸಜಿಯವರ ಧ್ಯಾನ ತಂತ್ರಗಳ ಸಂಪೂರ್ಣ ಸೂಚನೆಗಳು ಮತ್ತು ಸಮಗ್ರ ಜೀವನ ವಿಧಾನಗಳಿರುತ್ತವೆ, ಅವು ನಿಮ್ಮನ್ನು ನೇರವಾಗಿ ನಿಮ್ಮ ಆತ್ಮದೊಳಗಿರುವ ಶಾಂತಿ ಮತ್ತು ಆನಂದದ ಅಂತ್ಯವಿಲ್ಲದ ಚಿಲುಮೆಗೆ ಕೊಂಡೊಯ್ಯುತ್ತವೆ.
ನನ್ನ ನಿರಂತರ ಶಾಂತಿಯ ಪೂಜಾಪೀಠದ ಮೇಲೆ ಮತ್ತು ಆಳವಾದ ಧ್ಯಾನದಿಂದ ಹೊರಹೊಮ್ಮುವ ಆನಂದದಲ್ಲಿ ನಿನ್ನ ಉಪಸ್ಥಿತಿಯನ್ನು ಕಾಣಲು ನನಗೆ ಕಲಿಸು.
—ಪರಮಹಂಸ ಯೋಗಾನಂದ