“ಪ್ರಾರಂಭಿಸಿ!” ಶ್ರದ್ಧಾ ಮಾತಾರಿಂದ

10 ಜನವರಿ , 2023

ಶ್ರದ್ಧಾ ಮಾತಾ (1895-1984) 1933 ರಲ್ಲಿ ಪರಮಹಂಸ ಯೋಗಾನಂದರನ್ನು ಭೇಟಿಯಾದರು ಮತ್ತು ನಂತರ ಸ್ವಲ್ಪ ಸಮಯದಲ್ಲೇ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ನಲ್ಲಿ ಸಂನ್ಯಾಸತ್ವವನ್ನು ಸ್ವೀಕರಿಸಿದರು. ನಂತರ ಅವರನ್ನು ಪರಮಹಂಸ ಯೋಗಾನಂದರು ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್ ನ ನಿರ್ದೇಶಕರ ಮಂಡಳಿಗೆ ನೇಮಿಸಿದರು ಮತ್ತು ಅವರು ತಮ್ಮ ಜೀವನದುದ್ದಕ್ಕೂ ಆ ಸ್ಥಾನದಲ್ಲಿ ಸೇವೆ ಸಲ್ಲಿಸಿದರು. ಈ ಪ್ರಬಂಧವನ್ನು ಮೂಲತಃ ಅವರು 1935 ರಲ್ಲಿ ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್ ನ ನಿಯತಕಾಲಿಕೆಗಾಗಿ ಬರೆದಿದ್ದರು, ಆದರೆ ಅದರ ಸಂದೇಶವು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿರುತ್ತದೆ – ಈಗ ಹೊಸ ವರ್ಷದ ಆರಂಭದಲ್ಲಿ ಅಥವಾ ಯಾವುದೇ ಸಮಯದಲ್ಲಿ ನೀವು ಪ್ರಸ್ತುತ ಕ್ಷಣವು ನಿಮಗೆ ನೀಡುತ್ತಿರುವ ಅಮೂಲ್ಯ ಅವಕಾಶವನ್ನು ಬಳಸಿಕೊಳ್ಳಲು ಬಯಸಿದಾಗ.

ನಿಮಗೊಂದು ರಹಸ್ಯವಾದ ಮಹತ್ವಾಕಾಂಕ್ಷೆ ಇದೆಯೇ? ಈ ದಿನ ನೀವು ಹೊಸದಾಗಿ ಜೀವನವನ್ನು ಪ್ರಾರಂಭಿಸಬಹುದು ಎಂಬ ಆಯ್ಕೆಯನ್ನು ನಿಮಗೆ ನೀಡಿದರೆ, ನೀವು ಏನು ಮಾಡುತ್ತೀರಿ?

ಜೀವನವು ನಿಮಗೆ ಆ ಆಯ್ಕೆಯನ್ನು ನೀಡುತ್ತಿದೆ. ಬೇಕಾದಂತೆ ಆಕಾರ ಕೊಡಬಹುದಾದ ಸಮಯವೆಂಬ ಮಣ್ಣು ನಿಮ್ಮ ಕೈಯಲ್ಲೇ ಇದೆ. ಅನೇಕ ವೇಳೆ ಅಸಾಧ್ಯವೆಂದು ತೋರುವ ಸಾಧನೆಯು ಅತ್ಯಂತ ತಾರ್ಕಿಕವಾಗಿರುತ್ತದೆ. ನೀವು ಏನನ್ನಾದರೂ ಮಾಡಲು ಅಸಾಧ್ಯ ಎಂದು ಭಾವಿಸಿದ್ದರೆ – ಅದನ್ನು ಪ್ರಾರಂಭಿಸಿ!

ನೀವೇ ಹಾಕಿಕೊಂಡಿರುವ ನಿಮ್ಮ ಏಕೈಕ ಮಿತಿಗಳಾಗಿರುವ ಆಲೋಚನೆ-ಅಭ್ಯಾಸಗಳೆಂಬ ಸಂಕೋಲೆಗಳನ್ನು ತೆಗೆದುಹಾಕಿ. ಅಂತರಂಗದ ಪಿಸುಮಾತಿಗೆ ಕಿವಿಗೊಡಿ. ಆತ್ಮವೆಂಬ ಬಾವಿಯನ್ನು ಆಳವಾಗಿ ಅಗೆಯುವವನಿಗೆ ಜೀವನವು ಸಂತೋಷಭರಿತ ಆಶ್ಚರ್ಯಗಳನ್ನು ನೀಡುತ್ತದೆ.

ಒಂದೇ ದಿನದಲ್ಲಿ ಯಾವುದೇ ಗುರಿಯನ್ನು ಸಾಧಿಸಲಾಗುವುದಿಲ್ಲ. ಅತ್ಯಗತ್ಯವಾದ ಒಂದು ವಿಷಯವೇನೆಂದರೆ ನೀವು ಈಗಲೇ ಪ್ರಾರಂಭಿಸಬೇಕು – ನಾಳೆ ಅಲ್ಲ. ಪ್ರಾರಂಭಿಸಿ! ಈ ಅತ್ಯದ್ಭುತ ಕ್ಷಣವು ಅವಕಾಶಗಳೆಂಬ ನಿಧಿಯು ತುಂಬಿದ ಗುಹೆಗಳಿಗೆ ಕೀಲಿ ಕೈಯಾಗಿದೆ.

ನಿಮ್ಮ ಜಾಣ್ಮೆಯ ಭಂಡಾರದ ಮೂಲವು ಅನಂತದಲ್ಲಿದೆ, ಅದನ್ನು ಬಳಸಿಕೊಳ್ಳಿ. ಎಷ್ಟೇ ಚಿಕ್ಕದಾಗಿದ್ದರೂ ಮೊದಲ ಹೆಜ್ಜೆಯನ್ನು ಇಡಿ. ಬಿಡುಗಡೆಯಾದ ನಿಮ್ಮ ಶಕ್ತಿಯು, ಹಿಮದ ಚೆಂಡಿನಂತೆ, ಹೆಚ್ಚುತ್ತ ಹೋಗುತ್ತದೆ.

“ಸಾಮರ್ಥ್ಯದ ಅರ್ಥ, ಕೊನೆಯ ಹಂತದವರೆಗಿನ ಜವಾಬ್ದಾರಿ.” ನಿಮ್ಮ ಸುಪ್ತ ಪ್ರತಿಭೆಯು ನಿಮ್ಮ ನಿರ್ವಹಣೆಗೆ ವಹಿಸಲಾದ ಫಲಪ್ರದ ಬೀಜವಾಗಿದೆ. ಮುಂದೂಡುವಿಕೆಯೆಂಬ ಶುಷ್ಕ ಮಣ್ಣಿನಲ್ಲಿ ಅದನ್ನು ಒಣಗಲು ಬಿಡಲು ನಿಮಗೆ ಹಕ್ಕಿದೆಯೇ? ಜೀವನವು ಅವಳು ನಿಮ್ಮೊಳಗೆ ಏನು ಬಿತ್ತಿದ್ದಾಳೋ ಅದನ್ನು ನೀವು ನಿಷ್ಠೆಯಿಂದ ಕೊಯ್ಲು ಮಾಡಬೇಕೆಂದು ಮಾತ್ರ ಕೇಳುತ್ತದೆ.

ಕಾರ್ಯ ಮಾಡಲು ಬೇಕಾದ ಅಗತ್ಯ ವಸ್ತುಗಳೆಲ್ಲಾ ಹತ್ತಿರದಲ್ಲೇ ಇವೆ. ನಿಮ್ಮ ಜಾಗೃತ ಪ್ರಜ್ಞೆಯ ಕಣ್ಣುಗಳಿಂದ ಅವುಗಳನ್ನು ಗುರುತಿಸಿ.

ಉದ್ವೇಗದಿಂದ, ಪ್ರತಿಫಲಾಪೇಕ್ಷೆಗಾಗಿ ಹೆಣಗಾಡಿಕೊಂಡು ಕೆಲಸ ಮಾಡಬೇಡಿ, ಬದಲಿಗೆ ಅನಾಯಾಸವಾಗಿ ಮತ್ತು ಸಂತೋಷದಿಂದ ಕೆಲಸ ಮಾಡಿ. ಕೆಲಸಕ್ಕಿಂತ ಅದು ತಲುಪಿಸುವ ಗುರಿಯನ್ನು ಹೆಚ್ಚು ಪ್ರೀತಿಸಬೇಡಿ. ಜಾಗರೂಕ ಮನಸ್ಸು ಮತ್ತು ಪ್ರೀತಿಯ ಕೈಗಳಿಂದ, ಈಕ್ಷಣ ಎನ್ನುವ ಹೊಳೆಯುವ ಎಳೆಗಳನ್ನು ಶಾಶ್ವತತೆಯ ವಿನ್ಯಾಸದಲ್ಲಿ ಹೆಣೆಯಿರಿ.

ಮತ್ತು ನೀವು ವಿನ್ಯಾಸ ಮಾಡಿದ ಹೊಳೆಯುವ ಪಾತ್ರೆಯು ಅಜಾಗರೂಕ ಸ್ಪರ್ಶದಿಂದ ಅಥವಾ ನಿರಂಕುಶ ಗಾಳಿಯಿಂದ ಛಿದ್ರಗೊಂಡರೆ, ಅಳಬೇಡಿ. ವಿವೇಚನೆಯನ್ನು ಬೆಳೆಸಿಕೊಳ್ಳುವುದರ ಮೂಲಕ ಹೃದಯವನ್ನು ಶ್ರೀಮಂತಗೊಳಿಸುವುದರೊಂದಿಗೆ, ಕೈಯನ್ನು ಹೆಚ್ಚು ಆಜ್ಞಾನುವರ್ತಿಯಾಗಿಸಿಕೊಂಡು ಮತ್ತು ಕಣ್ಣನ್ನು ಹೆಚ್ಚು ಸತ್ಯಯುತವಾಗಿಸಿಕೊಂಡು, ಮತ್ತೆ ಪ್ರಾರಂಭಿಸಿ! ಕೇವಲ ಪ್ರಾರಂಭಿಸಿ! ಅದರಲ್ಲಿ ಮಾತ್ರ ಪ್ರತಿಭೆ ಅಡಗಿದೆ.

“ನೀವು ಏನಾಗುವಿರಿ ಎಂಬುದು ಇನ್ನೂ ಪ್ರಕಟಗೊಂಡಿಲ್ಲ” (I ಜಾನ್‌ 3:2). ಬೀಜದ ಹೃದಯದಲ್ಲಿ ಹೂವು ಮಲಗಿದೆ. ಆದರೆ ಬೀಜಕ್ಕೆ ತನ್ನದೇ ಆರಂಭ ಅಥವಾ ಅಂತ್ಯ ತಿಳಿದಿದೆಯೇ? ತನಗೆ ಸಾಧ್ಯವಿರುವಷ್ಟು ಉಷ್ಣತೆ ಮತ್ತು ತೇವಾಂಶವನ್ನು ಒಟ್ಟುಗೂಡಿಸಿಕೊಂಡು, ಅದರದೇ ಅಸ್ತಿತ್ವದ ವಿಸ್ತರಿಸುತ್ತಿರುವ ಹೃದಯವು ಸೂರ್ಯನನ್ನು ಸ್ವಾಗತಿಸಲು ಸಂತೋಷದಿಂದ ಸಿಡಿಯುತ್ತದೆ.

ಜೀವನವು ನಿಮ್ಮನ್ನು ಪುಸಲಾಯಿಸುವುದು, ಬೇಡಿಕೊಳ್ಳುವುದು, ಕಾರ್ಯ ಮಾಡಲು ಆಜ್ಞಾಪಿಸುವುದು. ಈ ದಿನ, ನಿಮ್ಮೊಳಗಿನ ಅದರ ಪ್ರಬಲ ಅಪೇಕ್ಷೆಯ ಬಗ್ಗೆ ಪ್ರಜ್ಞಾಪೂರ್ವಕರಾಗಿರಿ. ನಿಮ್ಮ ಮಿತಿಗಳೆಂಬ ಚಿಪ್ಪನ್ನು ಒಡೆಯಿರಿ. ನಿಮ್ಮ ಮುಖವನ್ನು ಬೆಳಕಿನೆಡೆಗೆ ತಿರುಗಿಸಿ, ಉತ್ಕೃಷ್ಟ ಮಾನವ ಪುತ್ರನಾಗಿ ಮುಂದಕ್ಕೆ ಹೆಜ್ಜೆ ಹಾಕಿ.

ಇದನ್ನು ಹಂಚಿಕೊಳ್ಳಿ