ಪರಮಹಂಸ ಯೋಗಾನಂದರ 125 ನೇ ಜನ್ಮದಿನೋತ್ಸವದ ಅಂಗವಾಗಿ ₹125 ರ ವಿಶೇಷ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡುವ ಮೂಲಕ ಭಾರತ ಸರ್ಕಾರವು ಅವರಿಗೆ ಗೌರವ ಸಲ್ಲಿಸಿತು (ಇದನ್ನು ಭಾರತದಲ್ಲಿ ಮೊದಲು 2018 ರಲ್ಲಿ ಗೌರವಿಸಲಾಯಿತು ಮತ್ತು ಈ ವರ್ಷದವರೆಗೆ ವಿಸ್ತರಿಸಲಾಯಿತು). ಅಕ್ಟೋಬರ್ 29, 2019 ರಂದು ನವದೆಹಲಿಯ ಕೇಂದ್ರ ಸಚಿವಾಲಯದಲ್ಲಿ ನಡೆದ ಸಮಾರಂಭದಲ್ಲಿ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆ ವಹಿಸಿದ್ದರು. ಅವರೊಂದಿಗೆ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಅನುರಾಗ್ ಠಾಕೂರ್, ಸಂಸ್ಕೃತಿ ಕಾರ್ಯದರ್ಶಿ ಶ್ರೀ ಅರುಣ್ ಗೋಯೆಲ್ ಮತ್ತು ಇತರ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದರು.
ಹಣಕಾಸು ಸಚಿವೆ ಸೀತಾರಾಮನ್ ತಮ್ಮ ಹೇಳಿಕೆಯಲ್ಲಿ ಪರಮಹಂಸ ಯೋಗಾನಂದರನ್ನು ವಿಶ್ವ ಸಾಮರಸ್ಯದ ಸಾರ್ವತ್ರಿಕ ಸಂದೇಶವನ್ನು ತಂದ “ಮಹಾನ್ ಯೋಗಿ” ಎಂದು ಗೌರವ ಸಲ್ಲಿಸಿದರು. “ನಮ್ಮೆಲ್ಲರ ಹೃದಯ ಮತ್ತು ಮನಸ್ಸುಗಳಿಗೆ ಸಾಮರಸ್ಯವನ್ನು ತಂದುಕೊಟ್ಟಂತಹ ವಿಶ್ವದ ಈ ಮಹಾನ್ ಪುತ್ರನ ಬಗ್ಗೆ ಭಾರತವು ಬಹಳ ಬಲವಾಗಿ ಭಾವಿಸುತ್ತದೆ,” ಎಂದು ಅವರು ಹೇಳಿದರು.
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ನಿರ್ದೇಶಕರ ಮಂಡಳಿಯ ಸದಸ್ಯರಾದ ಸ್ವಾಮಿ ವಿಶ್ವಾನಂದ ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಉಪಾಧ್ಯಕ್ಷರಾದ ಸ್ವಾಮಿ ಸ್ಮರಣಾನಂದರು ಹಣಕಾಸು ಸಚಿವೆ ಸೀತಾರಾಮನ್ ಅವರಿಂದ ಹೊಸ ನಾಣ್ಯವನ್ನು ಸ್ವೀಕರಿಸಿದರು. ಭಾರತದ ಮಹಾನ್ ಆಧ್ಯಾತ್ಮಿಕ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಮಹಂಸ ಯೋಗಾನಂದರ ಪಾತ್ರವನ್ನು ಭಾರತ ಸರ್ಕಾರ ಗುರುತಿಸಿದ್ದಕ್ಕಾಗಿ ಅವರಿಬ್ಬರೂ ತಮ್ಮ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ವೈಎಸ್ಎಸ್/ಎಸ್‌ಆರ್‌ಎಫ್ ಅಧ್ಯಕ್ಷ ಸ್ವಾಮಿ ಚಿದಾನಂದ ಗಿರಿಯವರ ಲಿಖಿತ ಸಂದೇಶವನ್ನು ಸ್ವಾಮಿ ವಿಶ್ವಾನಂದರು ಓದಿದರು. (ಕೆಳಗೆ ಈ ಸಂದೇಶದ ಪೂರ್ಣ ಬರಹವನ್ನು ನೋಡಿ.) ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಲವಾರು ವೈಎಸ್‌ಎಸ್ ಭಕ್ತರು ಮತ್ತು ಸಾರ್ವಜನಿಕರು ಹಾಜರಿದ್ದರು.
ಈ ಸ್ಮರಣಾರ್ಥ ನಾಣ್ಯವು ಭಾರತ ಸರ್ಕಾರವು ಪರಮಹಂಸ ಯೋಗಾನಂದರಿಗೆ ಮೂರನೇ ಬಾರಿಗೆ ಔಪಚಾರಿಕವಾಗಿ ಗೌರವ ಸಲ್ಲಿಸುತ್ತಿರುವುದರ ಗುರುತಾಗಿದೆ. ಭಾರತ ಮತ್ತು ಜಗತ್ತಿಗೆ ಅವರ ಆಧ್ಯಾತ್ಮಿಕ ಕೊಡುಗೆಗಳನ್ನು ಗುರುತಿಸಿ ಭಾರತ ಸರ್ಕಾರವು ಎರಡು ಬಾರಿ ಅವರ ಸ್ಮರಣಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿತ್ತು: 1977 ರಲ್ಲಿ, ಶ್ರೀ ಯೋಗಾನಂದರ ನಿಧನದ ಇಪ್ಪತ್ತೈದನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮತ್ತು 2017 ರಲ್ಲಿ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಶತಮಾನೋತ್ಸವದ ಸಂದರ್ಭದಲ್ಲಿ.
ಪರಮಹಂಸ ಯೋಗಾನಂದರ 125 ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ 125 ರೂಪಾಯಿ ಮುಖಬೆಲೆಯಲ್ಲಿ ಬಿಡುಗಡೆ ಮಾಡಲಾದ ಹೊಸ ನಾಣ್ಯದ ಮುಂಭಾಗ ಮತ್ತು ಹಿಂಭಾಗದ ನೋಟ. ಈ ವಾರ್ಷಿಕೋತ್ಸವವನ್ನು ಭಾರತ ಸರ್ಕಾರವು 2018ರಲ್ಲಿ ಭಾರತದಲ್ಲಿ ಪರಮಹಂಸಜಿಯವರ ಸಂದೇಶ ಮತ್ತು ಬೋಧನೆಗಳ ಪ್ರಯೋಜನಕಾರಿ ಪ್ರಭಾವವನ್ನು ಹೆಚ್ಚಿಸಲು ಹಲವಾರು ಯೋಜನೆಗಳಿಗೆ ಹಣಕಾಸು ಒದಗಿಸುವ ದೊಡ್ಡ ಅನುದಾನದೊಂದಿಗೆ ಗೌರವಿಸಲು ಪ್ರಾರಂಭಿಸಿತು. ಸ್ಮರಣಾರ್ಥ ನಾಣ್ಯಕ್ಕಾಗಿ ಯೋಜನೆಗಳನ್ನು ಮೊದಲು ಕಳೆದ ವರ್ಷ ರೂಪಿಸಲಾಯಿತು ಮತ್ತು ಅದು ಅಕ್ಟೋಬರ್ 29, 2019 ರಂದು ನಾಣ್ಯ ಬಿಡುಗಡೆಯೊಂದಿಗೆ ಫಲಾನುಭವವನ್ನು ಕಂಡಿತು.
ಸ್ಮರಣಾರ್ಥ ನಾಣ್ಯ ಖರೀದಿಗೆ ಲಭ್ಯವಾಗಲಿದೆ
ಸೀಮಿತ ಸಂಖ್ಯೆಯ ಸ್ಮರಣಾರ್ಥ ನಾಣ್ಯಗಳು ಶೀಘ್ರದಲ್ಲೇ ಖರೀದಿಗೆ ಲಭ್ಯವಿರುತ್ತವೆ. ಲಭ್ಯವಾದ ಕೂಡಲೆ ಅವುಗಳನ್ನು ಹೇಗೆ ಖರೀದಿಸುವುದು ಎಂಬುದರ ಕುರಿತು ನಾವು ಮಾಹಿತಿಯನ್ನು ನೀಡುತ್ತೇವೆ.
ಸ್ವಾಮಿ ಚಿದಾನಂದಜಿಯವರ ಸಂದೇಶದ ಪೂರ್ಣ ಬರಹ, ಅಕ್ಟೋಬರ್ 29, 2019
“ನಾವು ಒಬ್ಬನೇ ದೇವರ ಮಕ್ಕಳು, ಮತ್ತು ಪರಸ್ಪರರ ಯೋಗಕ್ಷೇಮಕ್ಕಾಗಿ ಸ್ನೇಹ, ಶಾಂತಿ ಮತ್ತು ಸಾಮರಸ್ಯದಿಂದ ಬದುಕಬೇಕು ಎಂಬ ಶಾಶ್ವತ ಸತ್ಯದ ಆಧಾರದ ಮೇಲೆ ಪರಮಹಂಸಜಿ ಎಲ್ಲಾ ಜನರಲ್ಲಿ ಭ್ರಾತೃತ್ವದ ಮನೋಭಾವವನ್ನು ಹರಡಲು ಪ್ರಯತ್ನಿಸಿದರು.” — ಸ್ವಾಮಿ ಚಿದಾನಂದ ಗಿರಿ
ಶ್ರೀ ಶ್ರೀ ಪರಮಹಂಸ ಯೋಗಾನಂದರ 125 ನೇ ಜನ್ಮ ದಿನದ ವಾರ್ಷಿಕೋತ್ಸವದ ಸ್ಮರಣಾರ್ಥ ನಾಣ್ಯ ಬಿಡುಗಡೆಯ ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳು. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಭಕ್ತರ ಪರವಾಗಿ ಮತ್ತು “ವಸುಧೈವ ಕುಟುಂಬಕಂ” ಆದರ್ಶವನ್ನು ನಂಬಿರುವ ಎಲ್ಲರ ಪರವಾಗಿ, ಪ್ರಾಚೀನ ಭಾರತದ ಆಧ್ಯಾತ್ಮಿಕ ಸಂಪತ್ತನ್ನು ಜಗತ್ತಿಗೆ ತರುವಂತೆ ದೈವ ನಿಯಾಮಕವಾಗಿದ್ದ ಆಕೆಯ ಮಹಾನ್ ಸಂತರಲ್ಲಿ ಒಬ್ಬರಿಗೆ ಈ ಗೌರವ ಸಲ್ಲಿಸಿದ್ದಕ್ಕಾಗಿ ಗೌರವಾನ್ವಿತ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್‌ರವರಿಗೆ – ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದ ಹೇಳುವುದು ನನ್ನ ಸೌಭಾಗ್ಯವಾಗಿದೆ. ಪಶ್ಚಿಮದಲ್ಲಿ ಯೋಗದ ಪಿತಾಮಹ ಎಂದು ಕರೆಯಲ್ಪಡುವ, ವೈಎಸ್ಎಸ್/ಎಸ್ಆರ್‌ಎಫ್‌ನ ಸ್ಥಾಪಕರು ಮತ್ತು ಗುರುದೇವರಾದ ಪರಮಹಂಸಜಿ, ಜಗದ್ಗುರುಗಳ ಸಾಲಿಗೆ ಸೇರಿದವರು – ಅವರ ಸಂದೇಶವು ಸಾರ್ವತ್ರಿಕವಾಗಿದ್ದು, ಭಾರತದ ಎಲ್ಲರನ್ನೂ ಒಳಗೊಳ್ಳುವ ಚೈತನ್ಯವನ್ನು ಮತ್ತು ಹೃದಯವನ್ನು ಮೂರ್ತರೂಪಗೊಳಿಸುತ್ತ, ರಾಷ್ಟ್ರೀಯ ಮತ್ತು ಧಾರ್ಮಿಕ ಗಡಿಗಳನ್ನು ದಾಟಿ ಪಸರಿಸುತ್ತದೆ.
ನಾವು ಒಬ್ಬನೇ ದೇವರ ಮಕ್ಕಳು, ಮತ್ತು ಪರಸ್ಪರರ ಯೋಗಕ್ಷೇಮಕ್ಕಾಗಿ ಸ್ನೇಹ, ಶಾಂತಿ ಮತ್ತು ಸಾಮರಸ್ಯದಿಂದ ಬದುಕಬೇಕು ಎಂಬ ಶಾಶ್ವತ ಸತ್ಯದ ಆಧಾರದ ಮೇಲೆ ಪರಮಹಂಸಜಿ ಎಲ್ಲಾ ಜನರಲ್ಲಿ ಭ್ರಾತೃತ್ವದ ಮನೋಭಾವವನ್ನು ಹರಡಲು ಪ್ರಯತ್ನಿಸಿದರು. ಪ್ರತಿಯೊಂದು ಆತ್ಮ ಮತ್ತು ಪ್ರತಿಯೊಂದು ಜೀವಿಯಲ್ಲೂ ದೈವತ್ವವನ್ನು ನೋಡುವ; ಮತ್ತು ಭಗವಂತನ ಇಡೀ ಸೃಷ್ಟಿಯನ್ನು ಗೌರವ ಮತ್ತು ಆದರದಿಂದ ನಡೆಸಿಕೊಳ್ಳುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು. ಆ ಆದರ್ಶಕ್ಕೆ ಅನುಗುಣವಾಗಿ, ಅವರು ತಮ್ಮ ಶಿಷ್ಯರಿಗೆ ಮನುಕುಲವನ್ನು ತನ್ನ ಬೃಹದಾತ್ಮವೇ ಎಂಬಂತೆ ಸೇವೆ ಸಲ್ಲಿಸುವ ಮೂಲಕ ನಮ್ಮ ಕಾಳಜಿಯ ವಲಯವನ್ನು ವಿಶಾಲವಾಗಿಸಿಕೊಂಡು ನಮ್ಮ ಪ್ರಜ್ಞೆಯನ್ನು ವಿಸ್ತರಿಸಿಕೊಳ್ಳಲು ಪ್ರೋತ್ಸಾಹಿಸಿದರು. ವೈಎಸ್ಎಸ್ ಭಕ್ತರು ನಡೆಸುವ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಔಷಧಾಲಯಗಳು, ಶಾಲೆಗಳು ಮತ್ತು ಕಾಲೇಜುಗಳಂತಹ ವಿವಿಧ ದತ್ತಿ ಚಟುವಟಿಕೆಗಳು ಮತ್ತು ನೈಸರ್ಗಿಕ ವಿಕೋಪಗಳಿಗೆ ತುತ್ತಾದವರಿಗೆ ಒದಗಿಸಲಾಗುವ ಪರಿಹಾರಗಳು ಆ ಆದರ್ಶದ ಅಭಿವ್ಯಕ್ತಿಗಳಾಗಿವೆ.
ನಮ್ಮ ಗುರುಗಳು ಮನುಕುಲಕ್ಕೆ ಸಲ್ಲಿಸಿದ ಅತ್ಯಂತ ಶ್ರೇಷ್ಠ ಸೇವೆಯೆಂದರೆ, ಭಾರತದ ಪ್ರಾಚೀನ ಪವಿತ್ರ ವಿಜ್ಞಾನವಾದ ಕ್ರಿಯಾ ಯೋಗವನ್ನು ಪ್ರಪಂಚದಾದ್ಯಂತ ಪ್ರಸಾರ ಮಾಡಿದುದು, ಈ ಕ್ರಿಯಾ ಯೋಗದ ನಿಷ್ಠಾವಂತ ಅಭ್ಯಾಸದ ಮೂಲಕ, ಜಗತ್ತಿನಾದ್ಯಂತ ಆಧ್ಯಾತ್ಮಿಕವಾಗಿ ಹಾತೊರೆಯುತ್ತಿರುವ ಆತ್ಮಗಳು ಭಗವಂತನೊಂದಿಗೆ ನೇರ ಸಂಸರ್ಗದ ಅನುಭವವನ್ನು ಪಡೆಯಲಿ ಎಂದು. ಶ್ರದ್ಧಾವಂತ ಅನ್ವೇಷಕರು ಯಾವುದೇ ಧರ್ಮ, ಜಾತಿ, ಪಂಥ ಅಥವಾ ರಾಷ್ಟ್ರೀಯತೆಯವರಾಗಿದ್ದರೂ ಗುರುಗಳ ಬೋಧನೆಗಳು ಅವರಿಗೆ ಲಭ್ಯವಿವೆ, ಏಕೆಂದರೆ ನಾವು ವಿಭಿನ್ನ ಧರ್ಮಗಳಿಗೆ ಸೇರಿದವರಾಗಿರಬಹುದು, ಆದರೆ ನಮ್ಮ ಸಾಮಾನ್ಯ ಗುರಿಯಾದ ಭಗವತ್-ಸಾಕ್ಷಾತ್ಕಾರದತ್ತ ನಮ್ಮನ್ನು ಕರೆದೊಯ್ಯುವುದೇ ಎಲ್ಲ ಶ್ರೇಷ್ಠ ಧರ್ಮಗಳ ಉದ್ದೇಶವೆಂದು ಅವರು ದೃಢವಾಗಿ ನಂಬಿದ್ದರು. ಧ್ಯಾನದಲ್ಲಿ ಭಗವಂತನೊಂದಿಗೆ ಆಗುವ ಆಂತರಿಕ ಸಂಸರ್ಗದಿಂದ ಬರುವ ಭಗವತ್‌ಪ್ರಜ್ಞೆಯೊಂದಿಗಿನ ಸಂಯೋಗದ ಮೂಲಕ, ಅವನ ಮಕ್ಕಳು ಪರಸ್ಪರರೊಂದಿಗಿನ ತಮ್ಮ ಬಾಂಧವ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಆ ಮೂಲಕ ಪ್ರಪಂಚದಾದ್ಯಂತ ಹೆಚ್ಚಿನ ಸಾಮರಸ್ಯದ ಯುಗವನ್ನು ತರುತ್ತಾರೆ ಎಂದು ಪರಮಹಂಸಜಿ ಪೂರ್ವಭಾವಿಯಾಗಿ ಅರಿತಿದ್ದರು.
ಮಾನ್ಯ ಹಣಕಾಸು ಸಚಿವರು ಈ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿರುವುದು, ಎಲ್ಲ ಜೀವಿಗಳ ಹೃದಯದಲ್ಲಿ ದಿವ್ಯ ಆತ್ಮವನ್ನು ಅರಿತುಕೊಳ್ಳುವ ಈ ಗುರಿಯತ್ತ ಮನುಕುಲದ ಪಯಣದಲ್ಲಿ ಒಂದು ಮೈಲಿಗಲ್ಲಿನ ಸಮಯೋಚಿತ ಪರಿಗಣನೆಯಾಗಿದೆ.
ಭಗವಂತನ ವಿಶ್ವಾದ್ಯಂತದ ಕುಟುಂಬದಲ್ಲಿ ಅವನ ಸಾಮರಸ್ಯದ ಪ್ರಭಾವವನ್ನು ಹರಡುವ ಎಲ್ಲರನ್ನೂ ಅವನು ಆಶೀರ್ವದಿಸಲಿ,
ಸ್ವಾಮಿ ಚಿದಾನಂದ ಗಿರಿ
ಅಧ್ಯಕ್ಷರು, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್


















