ಇದು 2017ರಲ್ಲಿ ಸ್ವರ್ಗಸ್ಥರಾಗುವವರೆಗೂ 2011ರಿಂದ ವೈಎಸ್‌ಎಸ್/ಎಸ್‌ಆರ್‌ಎಫ್‌ನ ನಾಲ್ಕನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶ್ರೀ ಮೃಣಾಲಿನಿ ಮಾತಾರವರ “ಭಗವಂತನ ಪ್ರೇಮ ಮತ್ತು ಪರಮಾನಂದವನ್ನು ತರುವ ಯೋಗ ಸಾಧನ” ಎಂಬ ಉಪನ್ಯಾಸದ ಒಂದು ಚಿಕ್ಕ ಆಯ್ದ ಭಾಗ. ಪೂರ್ಣ ಉಪನ್ಯಾಸದ ಆಡಿಯೋವನ್ನು ವೈಎಸ್‌ಎಸ್ ಬ್ಲಾಗಿನಲ್ಲಿ ಮತ್ತು ಈ ಪುಟದ ಕೆಳಗೆ ಕಾಣಬಹುದು. ಉಪನ್ಯಾಸದ ಸಂಪೂರ್ಣ ಆವೃತ್ತಿಯನ್ನು ಯೋಗದಾ ಸತ್ಸಂಗ ನಿಯತಕಾಲಿಕೆಯ ಪುಟದ ಒಂದು ಸ್ಯಾಂಪಲ್ (ಮಾದರಿ) ಲೇಖನದಲ್ಲಿ ಓದಬಹುದು.
ನಮ್ಮ ವೆಬ್‌ಸೈಟಿನಲ್ಲಿ ಆಧುನಿಕ ಜಗತ್ತಿಗೆ ಭಾರತದ ಪುರಾತನ ಯೋಗದ ಬೋಧನೆಗಳನ್ನು ಪ್ರಚುರ ಪಡಿಸಿದ ಪರಮಹಂಸ ಯೋಗಾನಂದರ ಜೀವನ ಮತ್ತು ಅಸಾಧಾರಣ ಪಯಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಪಶ್ಚಿಮದಲ್ಲಿ ತಮ್ಮ ಈ ಪ್ರಚಾರ ಕಾರ್ಯವನ್ನು ಪೂರ್ತಿಗೊಳಿಸಲು ಪರಮಹಂಸ ಯೋಗಾನಂದರು ತಮ್ಮ ತಾಯಿನಾಡನ್ನು ಬಿಟ್ಟಿದ್ದರೂ ಅವರ ಹೃದಯ ಮತ್ತು ಆತ್ಮ ಮಾತ್ರ ಎಂದೂ ಭಾರತವನ್ನು ತೊರೆದಿರಲಿಲ್ಲ.
ಒಮ್ಮೆ ಭಾರತದಿಂದ ಯಾರೋ ಒಬ್ಬರು ಪರಮಹಂಸಜಿಯವರಿಗೆ ಬರೆದರು: “ಖಂಡಿತವಾಗಿ ನೀವು ನಿಮ್ಮ ಭಾರತವನ್ನು ಮರೆತಿದ್ದೀರಿ. ಏಕೆಂದರೆ, ಬಹಳ ದೀರ್ಘ ಕಾಲದ ವರೆಗೆ ಇಲ್ಲಿಂದ ದೂರವಾಗಿರುವುದರಿಂದ, ಖಂಡಿತವಾಗಿ ನೀವು ನಿಮ್ಮ ತಾಯಿನಾಡನ್ನು ಮರೆತಿದ್ದೀರಿ.” ಆದರೆ ನಮ್ಮ ಗುರುದೇವ ಹಿಂತಿರುಗಿ ಬರೆದರು: “ಅದು ಎಂದಿಗೂ ಸಾಧ್ಯವಿಲ್ಲ. ನಾನು ಭಾರತವನ್ನು ಪ್ರೀತಿಸುತ್ತಿರುವುದರಿಂದಲೇ, ನಾನು ಪ್ರಪಂಚದಾದ್ಯಂತ ಭಾರತದ ಸಂದೇಶ ಮತ್ತು ಭಗವತ್-ಪ್ರೇಮವನ್ನು ಪ್ರಸರಿಸಲು ಹಗಲೂ ರಾತ್ರಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ದಿನದ ಒಂದು ಕ್ಷಣವೂ ಆಕೆ ನನ್ನ ಹೃದಯ ಮತ್ತು ಮನಸ್ಸಿನಿಂದ ದೂರವಾಗಿಲ್ಲ.”
ಒಂದು ವರ್ಷ ಇರಲು ನಮ್ಮ ಗುರುದೇವ 1935ರಲ್ಲಿ ಭಾರತಕ್ಕೆ ಹಿಂದಿರುಗಿ ಬಂದರು. ಆ ಸಮಯದ ನಂತರ ಮತ್ತೆ ಹಿಂದಿರುಗಿ ಬರಲು ಅವರು ಸದಾ ಯೋಚನೆ ಮಾಡುತ್ತಿದ್ದರು; ಆದರೆ ಅವರು ಎಷ್ಟು ಕಾರ್ಯನಿರತರಾಗಿದ್ದರು ಮತ್ತು ಅವರ ಕೆಲಸವು ಎಷ್ಟು ಬೆಳೆಯುತ್ತಾ ಹೋಯಿತೆಂದರೆ, ದಿವ್ಯ ಮಾತೆ ಅವರಿಗೆ ಹೋಗಗೊಡಲಿಲ್ಲ. ಆದರೂ ಅವರು ಭವಿಷ್ಯವನ್ನು ನುಡಿದಿದ್ದರು, “ಭಾರತದ ಸಂದೇಶವನ್ನು ನಾನು ಪ್ರಪಂಚದ ಆ ಕಡೆಗೆ ಕೊಂಡೊಯ್ದಿದ್ದೇನೆ ಮತ್ತು ಭಾರತ ನನ್ನನ್ನು ಗುರುತಿಸುತ್ತದೆ.”
ಅವರ ಗುರು, ಶ್ರೀ ಯುಕ್ತೇಶ್ವರಜಿ ಅವರು ಕೂಡ ಹೇಳಿದ್ದರು, “ನನ್ನ ಸಂದೇಶವು ಭಾರತದಲ್ಲಿ ಭಾರತದಿಂದ ಪ್ರಸಾರವಾಗುವುದಿಲ್ಲ; ಅದು ಆಚೆ ಕಡೆಯಿಂದ ಮತ್ತೆ ಭಾರತಕ್ಕೆ ಪ್ರಸಾರವಾಗುತ್ತದೆ.”
ಪರಮಹಂಸಜಿ ಮತ್ತು ಶ್ರೀ ಯುಕ್ತೇಶ್ವರಜಿ ಇಬ್ಬರೂ ಅದನ್ನು ಹೇಳಿದ್ದರು; ಮತ್ತು ಅದನ್ನೇ ಬಾಬಾಜಿ ಪರಮಹಂಸ ಯೋಗಾನಂದರ ಬಗ್ಗೆ ಶ್ರೀ ಯುಕ್ತೇಶ್ವರಜಿಯವರಿಗೆ ವ್ಯಕ್ತಪಡಿಸಿದ್ದರು: ಪ್ರಪಂಚದಾದ್ಯಂತ ಸಂದೇಶವನ್ನು ಸಾರಲು [ಯೋಗದ] ನಾನು ಈ ಚೇಲಾನನ್ನು (ಶಿಷ್ಯನನ್ನು) ನಿನ್ನ ಬಳಿ ಕಳಿಸುತ್ತಿದ್ದೇನೆ. ಏಕೆಂದರೆ, ಭಗವಂತ ಅವನ ಜಗತ್ತನ್ನು ಈಗ ಒಗ್ಗೂಡಿರಬೇಕೆಂದು ಬಯಸುತ್ತಾನೆ. ವಿಭಜನೆಗಳು ಇನ್ನೆಂದೂ ಇರಬಾರದು.”
ಆದ್ದರಿಂದ ಈ ಏಕತೆಯು ಪೂರ್ವ ಮತ್ತು ಪಶ್ಚಿಮದಿಂದ ಬರಬೇಕು; ಆದರೆ ಇಲ್ಲಿ ಭಾರತದಲ್ಲಿ ಈ ಬೋಧನೆ, ಈ ಬೆಳಕು, ಮೊತ್ತ ಮೊದಲು ಬೆಳಗಿತು ಮತ್ತು ಇಡೀ ಪ್ರಪಂಚದಾದ್ಯಂತ ಹರಡಿತು. ಆದ್ದರಿಂದ ಈ ಕಾರಣಕ್ಕಾಗಿಯೇ ನಾವು ಈ ಪವಿತ್ರವಾದ ದೇಶವನ್ನು ಗೌರವಿಸುತ್ತೇವೆ.
ಸ್ನೇಹಪೂರ್ಣ ಆಕಾಶ,
ಸ್ವಾಗತಿಸುತ್ತಿರುವ ಆಲದ ಮರದ ನೆರಳು,
ಹರಿಯುತ್ತಿರುವ ಪವಿತ್ರ ಗಂಗಾನದಿ —
ಹೇಗೆ ನಾನು ನಿನ್ನನ್ನು ಮರೆಯಲಾಗುತ್ತದೆ!
ಸಾವಿಲ್ಲದ ಸರ್ವಶಕ್ತ ದೇವತೆಗಳು
ಸ್ವರ್ಗದಲ್ಲಿ ಬೆಳೆದದ್ದಕ್ಕಿಂತ ಉತ್ತಮವಾಗಿರುವ,
ಭಾರತದ ಉಜ್ವಲ ಹೊಲಗಳ
ತೊನೆದಾಡುವ ಜೋಳದ ತೆನೆಗಳನ್ನು ನಾನು ಪ್ರೇಮಿಸುತ್ತೇನೆ!
ನನ್ನ ಆತ್ಮದ ವಿಸ್ತೃತವಾದ ಪ್ರೇಮ, ಭಗವಂತನ ಅನುಶಾಸನದಿಂದ,
ಮೊದಲು ಜನಿಸಿತು ಇಲ್ಲಿ ಕೆಳಗೆ,
ನನ್ನದೇ ಜನ್ಮಭೂಮಿಯಲ್ಲಿ —
ಭಾರತದ ಬಿಸಿಲ ಸ್ನಾನ ಮಾಡಿದ ಉಜ್ವಲ ಮಣ್ಣಿನಲ್ಲಿ.
ನಾ ನಿನ್ನ ತಂಗಾಳಿಯನ್ನು ಪ್ರೇಮಿಸುತ್ತೇನೆ,
ನಾ ನಿನ್ನ ಚಂದಿರನನ್ನು ಪ್ರೇಮಿಸುತ್ತೇನೆ,
ನಾ ನಿನ್ನ ಬೆಟ್ಟ ಗುಡ್ಡಗಳನ್ನು ಮತ್ತು ಸಾಗರಗಳನ್ನು ಪ್ರೇಮಿಸುತ್ತೇನೆ;
ನಿನ್ನಲ್ಲೇ ನನ್ನ ಜೀವನ ಕೊನೆಗೊಳ್ಳಲಿ ಎಂದು ಬಯಸುತ್ತೇನೆ.
ನೀನೇ ನನಗೆ ಮೊದಲು ಪ್ರೀತಿಸಲು ಕಲಿಸಿದ್ದು
ಆಕಾಶವನ್ನು, ನಕ್ಷತ್ರಗಳನ್ನು, ಮೇಲಿರುವ ಭಗವಂತನನ್ನು;
ಆದ್ದರಿಂದ ನನ್ನ ಮೊದಲ ಗೌರವಾರ್ಪಣೆ — ಭೇಟಿಯಾದ ಹಾಗೆ —
ಓ ಭಾರತವೇ, ನಿನ್ನ ಪಾದಗಳಿಗೆ ಸಮರ್ಪಿಸುತ್ತೇನೆ!
ನಿನ್ನಿಂದ ಈಗ ನಾನು ನೋಡಲು ಕಲಿತಿರುವೆ,
ನಿನ್ನ ಹಾಗೆ ಎಲ್ಲ ದೇಶಗಳನ್ನೂ ಒಂದೇ ಸಮನಾಗಿ ಪ್ರೇಮಿಸಲು.
ನಿನಗೆ ಬಾಗಿ ನಮಿಸುತ್ತೇನೆ, ನನಗೆ ಜನ್ಮ ನೀಡಿದ ಭೂಮಿಯೇ,
ನನ್ನ ವಿಶಾಲ ಪ್ರೇಮದ ಹೇ ತಾಯೇ.
ಈ ಭೂಮಿಯನ್ನು ಅದರ ಆಧ್ಯಾತ್ಮಿಕ ಪರಂಪರೆಗಾಗಿ ಗೌರವಿಸಿ, ಏಕೆಂದರೆ ಇದೇ ಪ್ರಪಂಚದ ಅಧ್ಯಾತ್ಮಿಕ ಬೆಳಕು.
ಸಂಪೂರ್ಣ ಉಪನ್ಯಾಸವನ್ನು ಕೇಳಿ
ಸಂಪೂರ್ಣ ಉಪನ್ಯಾಸವನ್ನು ಓದಿ
ನಮ್ಮ ಯೋಗದಾ ಸತ್ಸಂಗ ನಿಯತಕಾಲಿಕೆಯ ಪುಟದಲ್ಲಿ 1925ರಲ್ಲಿ ಪರಮಹಂಸ ಯೋಗಾನಂದರು ಸ್ಥಾಪಿಸಿದ ನಿಯತಕಾಲಿಕೆಯ ಇತಿಹಾಸದ ಬಗ್ಗೆ ಹೆಚ್ಚಿಗೆ ತಿಳಿಯಬಹುದು ಮತ್ತು “ಭಗವಂತನ ಪ್ರೇಮ ಮತ್ತು ಪರಮಾನಂದವನ್ನು ತರುವ ಯೋಗ ಸಾಧನ” ಈ ಲೇಖನವೂ ಸೇರಿದಂತೆ ಇತರ ಸ್ಯಾಂಪಲ್ (ಮಾದರಿ) ಲೇಖನಗಳನ್ನು ಓದಿ ಆನಂದಿಸಬಹುದು.