ಒಂದು ಪರಿಚಯ:
ಆಧ್ಯಾತ್ಮಿಕ ಮಾರ್ಗದ ಸಾರ್ವತ್ರಿಕವಾದ ಎರಡು ನೈಜ ಅಂಶಗಳನ್ನು ನೀವು ತಿಳಿಯಬಯಸುವಿರೆ?
- ಜೀವನದಲ್ಲಿ ಸಂಪೂರ್ಣ ಆನಂದ ಮತ್ತು ಸಾಫಲ್ಯದ ಮಟ್ಟವನ್ನು ತಲುಪಲು ಸಾಧ್ಯ ಎಂದು ನಿಮಗೆ ಆಳವಾಗಿ ಅನಿಸಿದರೆ, ನಿಮ್ಮ ಅನಿಸಿಕೆ ಸರಿಯಾದುದು.
- ಮತ್ತು ಅಲ್ಲಿಗೆ ನೀವು ಏಕಾಂಗಿಯಾಗಿ ತಲುಪಲು ಸಾಧ್ಯವಿಲ್ಲ — ನಮ್ಮೆಲ್ಲರಿಗೂ ಈ ಪಥದಲ್ಲಿ, ನಮ್ಮ ಸ್ವಂತ ದೃಷ್ಟಿಕೋನಕ್ಕಿಂತ ದೂರಗಾಮಿ ದೃಷ್ಟಿಕೋನವುಳ್ಳ ಒಬ್ಬ ಪ್ರಾಜ್ಙ ಮಾರ್ಗದರ್ಶಕನ ಒಂದು ಮಾದರಿಯ ಅವಶ್ಯಕತೆ ಇದೆ.
ಪರಮಹಂಸ ಯೋಗಾನಂದರ ಯೋಗಿಯ ಆತ್ಮಕಥೆಯು ಈ ವಾಕ್ಯದೊಂದಿಗೆ ಆರಂಭವಾಗುತ್ತದೆ: “ಬಹುಕಾಲದಿಂದಲೂ ಭಾರತೀಯ ಸಂಸ್ಕೃತಿಯ ಗಮನಾರ್ಹ ಲಕ್ಷಣಗಳೆಂದರೆ ಪಾರಮಾರ್ಥಿಕ ಸತ್ಯಾನ್ವೇಷಣೆ ಮತ್ತು ಅದರ ಸಹವರ್ತಿಯಾದ ಶಿಷ್ಯ-ಗುರು ಸಂಬಂಧ.”
ಪರಮಹಂಸಜಿಯವರ ಆತ್ಮಕಥೆಯಲ್ಲಿ ಮೊದಲ ಶಬ್ದಗಳಿಂದ ಹಿಡಿದು ಪುಸ್ತಕದುದ್ದಕ್ಕೂ — ನಾವೆಲ್ಲರೂ ಅರಸುತ್ತಿರುವ ಪರಮಸುಖದ ಪ್ರಜ್ಞೆಯಲ್ಲಿ ನೆಲೆಸಿರುವ ಒಬ್ಬರಿಂದ ಮಾರ್ಗದರ್ಶನ ಪಡೆಯುವುದರಿಂದ ಸಿಗುವ ಅತ್ಯುನ್ನತ ಪ್ರಯೋಜನವನ್ನು ತೋರಿಸುತ್ತದೆ.
ಆ ಆಧ್ಯಾತ್ಮಿಕ ಮೇರುಕೃತಿಯು, ಅದರ ಮೊದಲ ಪ್ರಕಟನೆಯಿಂದಲೇ, ನೈಜ ಗುರುವಿನ ಕಾಲಾತೀತ ಅರ್ಥ ಮತ್ತು ಪ್ರಾಮುಖ್ಯತೆಯನ್ನು — ಹಾಗೂ ಅಂತಹ ಒಬ್ಬರ ಬೋಧನೆಗಳನ್ನು ಹೃತ್ಪೂರ್ವಕವಾಗಿ ಅನುಸರಿಸುವ ಯಾರಿಗೇ ಆದರೂ ದೊರೆಯುವ ಯೋಗದ ಸಾರ್ವಕಾಲಿಕ ಅದ್ಭುತಗಳನ್ನು ಹೆಚ್ಚು ಹೆಚ್ಚಾಗಿ ಪರಿಚಯಿಸುತ್ತಲೇ ಇದೆ.
ಪ್ರತಿ ಮಾರ್ಚ್‌ನಲ್ಲಿ, ನಾವು ಪರಮಹಂಸಜಿ ಮತ್ತು ಅವರ ಪ್ರೀತಿಯ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರರನ್ನು ಗೌರವಿಸಲು, ಅವರ ಸ್ಮರಣಾರ್ಥ ಧ್ಯಾನಗಳನ್ನು ನಡೆಸುತ್ತೇವೆ (ಈ ಇಬ್ಬರು ಮಹಾನ್ ಆತ್ಮಗಳ ಮಹಾಸಮಾಧಿಯ ವಾರ್ಷಿಕೋತ್ಸವದ ಗೌರವಾರ್ಥ). ಮತ್ತು ಆ ವಿಶೇಷ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ, ಜ್ಞಾನೋದಯ ಹೊಂದಿದ ಗುರುವಿನ ಮೂಲಕ ಭಗವಂತನು ಪ್ರಪಂಚಕ್ಕೆ ಬೆಳಕನ್ನು ತರಲು ಮತ್ತು ಜೀವನಗಳನ್ನು ಪರಿವರ್ತಿಸಲು ಹೇಗೆ ಕಾರ್ಯನಿರ್ವಹಿಸುತ್ತಾನೆ ಎಂಬುದರ ಕುರಿತು ಪರಮಹಂಸಜಿಯವರ ಸ್ಫೂರ್ತಿದಾಯಕ ಚಿಂತನೆಯನ್ನು ಈ ಕೆಳಗೆ ನೀಡಲಾಗಿದೆ.
ಪರಮಹಂಸ ಯೋಗಾನಂದರ ಉಪನ್ಯಾಸಗಳು ಮತ್ತು ಬರಹಗಳಿಂದ:
ಭಗವಂತನನ್ನು ಅರಿತಿರುವವನೇ ನಿಜವಾದ ಗುರು…ಆದ್ದರಿಂದ ಇತರರನ್ನು ಅವರವರ ವಿಮೋಚನೆ ಮತ್ತು ಆರೋಹಣದ ಮಾರ್ಗದಲ್ಲಿ ಮುನ್ನಡೆಸಲು ಅವನಿಗೆ ಸಾಧ್ಯವಾಗುತ್ತದೆ.
ಅಂತರಂಗದಲ್ಲಿರುವ ಆತ್ಮವನ್ನು ಅನಾವರಣಗೊಳಿಸಲು ಮತ್ತು ಪರಮಾತ್ಮನಲ್ಲಿ ಚಿರಂತನ ಮುಕ್ತಿಯೆಡೆಗಿನ ಆತ್ಮದ ಆರೋಹಣಕ್ಕೆ ಮಾರ್ಗದರ್ಶನ ನೀಡಲು ಗುರು ನಿಮಗೆ ಸಹಾಯ ಮಾಡುತ್ತಾರೆ.
ಶಾಲೆಯಲ್ಲಿ ಲಭ್ಯವಿರುವ ಲೌಕಿಕ ಜ್ಞಾನವನ್ನು ಅರ್ಥಮಾಡಿಕೊಳ್ಳಲು, ನೀವು ಅದನ್ನು ತಿಳಿದಿರುವ ಶಿಕ್ಷಕರಿಂದ ಕಲಿಯಬೇಕು. ಅಂತೆಯೇ ಆಧ್ಯಾತ್ಮಿಕ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಭಗವಂತನನ್ನು ಅರಿತಿರುವ ಒಬ್ಬ ಆಧ್ಯಾತ್ಮಿಕ ಗುರುವನ್ನು ಹೊಂದಿರುವುದು ಅವಶ್ಯಕ. ನೀವು ಅವರ ಭೌತಿಕ ಉಪಸ್ಥಿತಿಯಲ್ಲಿ ಇರಲು ಸಾಧ್ಯವಾಗದಿದ್ದರೂ ಅಥವಾ ಅವರು ಭೂಮಿಯ ಮೇಲೆ ಇರದಿದ್ದರೂ, ಭಗವಂತನನ್ನು ಕಂಡುಕೊಳ್ಳಬೇಕಾದರೆ ಅಂತಹ ಗುರುವಿನ ಬೋಧನೆಯನ್ನು ನೀವು ಅನುಸರಿಸಲೇಬೇಕು.
ಗುರು-ಶಿಷ್ಯರ ಸಂಬಂಧದ ದಿವ್ಯ ನಿಯಮದ ತಿಳುವಳಿಕೆ ಅಗತ್ಯ. ನಾವು ಇದನ್ನು ಭಾರತದಲ್ಲಿ ಕಲಿಯುತ್ತೇವೆ. ಇದು ತುಂಬಾ ಸರಳ, ಆದರೆ ಬಹಳ ಮುಖ್ಯ: ನೀವು ಮೊದಲು ಗುರುವನ್ನು ಕಂಡುಕೊಳ್ಳಬೇಕು; ಆಗ ನಿಜವಾದ ಆಧ್ಯಾತ್ಮಿಕ ಪ್ರಗತಿ ಪ್ರಾರಂಭವಾಗುತ್ತದೆ.
ಬದುಕಿನ ಕಣಿವೆಯಲ್ಲಿ ಕುರುಡರಂತೆ ಎಡವುತ್ತ ಸಾಗುತ್ತಿರುವಾಗ, ಕಣ್ಣಿರುವವರ ಸಹಾಯ ಬೇಕಾಗುತ್ತದೆ. ನಿಮಗೊಬ್ಬ ಗುರು ಬೇಕಾಗುತ್ತದೆ. ಜಗತ್ತಿನಲ್ಲಿ ಸೃಷ್ಟಿಯಾಗಿರುವ ದೊಡ್ಡ ಅವ್ಯವಸ್ಥೆಯಿಂದ ಹೊರಬರುವ ಏಕೈಕ ಮಾರ್ಗವೆಂದರೆ ಜ್ಞಾನೋದಯವಾದವರನ್ನು ಅನುಸರಿಸುವುದು. ನನ್ನ ಗುರುವನ್ನು ಭೇಟಿಯಾಗುವವರೆಗೆ ನಾನು ನಿಜವಾದ ಆನಂದ ಮತ್ತು ಸ್ವಾತಂತ್ರ್ಯವನ್ನು ಎಂದಿಗೂ ಅನುಭವಿಸಿರಲಿಲ್ಲ, ಅವರಿಗೆ ನನ್ನಲ್ಲಿ ಆಧ್ಯಾತ್ಮಿಕವಾದ ಆಸಕ್ತಿ ಇತ್ತು ಮತ್ತು ನನಗೆ ಮಾರ್ಗದರ್ಶನ ನೀಡುವ ಜ್ಞಾನವನ್ನು ಹೊಂದಿದ್ದರು.
ನಿಜವಾದ ಗುರುವಿಗಾಗಿ ನಾನು ಭಾರತದಾದ್ಯಂತ ಹುಡುಕಿದೆ. ಪುಸ್ತಕಗಳಲ್ಲಿ ಹುಡುಕಿದೆ; ದೇವಸ್ಥಾನದಿಂದ ದೇವಸ್ಥಾನಕ್ಕೆ, ಒಂದು ಪವಿತ್ರ ಸ್ಥಳದಿಂದ ಇನ್ನೊಂದಕ್ಕೆ ಪಯಣಿಸಿದೆ; ಆದರೆ ನನ್ನ ಅನುಮಾನಗಳು ನನ್ನನ್ನು ಎಲ್ಲೆಡೆ ಹಿಂಬಾಲಿಸಿದವು. ಆದರೆ ಸಾಕ್ಷಾತ್ಕಾರ ಹೊಂದಿದ ನನ್ನ ಗುರು ಶ್ರೀ ಯುಕ್ತೇಶ್ವರಜಿಯವರನ್ನು ನಾನು ಕಂಡುಕೊಂಡಾಗ ಮತ್ತು ಅವರ ಕಣ್ಣುಗಳಲ್ಲಿ ಆ ದಿವ್ಯ ಚೈತನ್ಯವನ್ನು ಕಂಡಾಗ, ಎಲ್ಲಾ ಅನುಮಾನಗಳು ದೂರಾದವು. ಅವರ ಅನುಗ್ರಹದಿಂದ ನನ್ನ ಇಡೀ ಜೀವನವೇ ಬದಲಾಯಿತು. ಆದ್ದರಿಂದಲೇ ನಿಜವಾದ ಗುರುವನ್ನು ಮತ್ತು ಅವರ ಬೋಧನೆಗಳನ್ನು ಅನುಸರಿಸುವ ಮಹತ್ವವನ್ನು ನಾನು ನಿಮಗೆ ಒತ್ತಿ ಹೇಳುವುದು.
ನಿಜವಾದ ಗುರುವಿಗೆ ತನ್ನನ್ನು ಇತರರ ಹೃದಯಗಳಲ್ಲಿ ಇರಿಸಿಕೊಳ್ಳುವ ಯಾವ ಬಯಕೆಯೂ ಇರುವುದಿಲ್ಲ, ಬದಲಿಗೆ, ಅವನು ಅವರ ಪ್ರಜ್ಞೆಯಲ್ಲಿ ಭಗವತ್‌ಪ್ರಜ್ಞೆಯನ್ನು ಜಾಗೃತಗೊಳಿಸಲು ಬಯಸುತ್ತಾನೆ.
ಭಗವಂತನ ದರ್ಶನಕ್ಕಾಗಿ ನನ್ನನ್ನು ನಾನು ಸೂಕ್ತ ಮಂದಿರವನ್ನಾಗಿ ಮಾಡಿಕೊಳ್ಳಲು ಜ್ಞಾನದ ಉಳಿಯನ್ನು ಹೇಗೆ ಬಳಸಬೇಕೆಂದು ನನ್ನ ಗುರುಗಳು ನನಗೆ ತೋರಿಸಿದರು. ದಿವ್ಯ ಜ್ಞಾನವನ್ನು ಹೊಂದಿರುವ ಗುರುಗಳ ಉಪದೇಶಗಳಂತೆ ನಡೆದುಕೊಂಡರೆ ಎಲ್ಲ ಜನರೂ ಹಾಗೆ ಮಾಡಲು ಸಾಧ್ಯವಿದೆ.
ವೈಎಸ್‌ಎಸ್ ವೆಬ್‌ಸೈಟ್‌ನಲ್ಲಿ “ಒಬ್ಬರ ಆಧ್ಯಾತ್ಮಿಕ ಹುಡುಕಾಟದಲ್ಲಿ ಗುರುವಿನ ಪಾತ್ರ” ಇದನ್ನು ಓದುವ ಮೂಲಕ ಆಧ್ಯಾತ್ಮಿಕ ಮಾರ್ಗದ ಈ ಅಗತ್ಯ ಅಂಶದ ಬಗ್ಗೆ ನೀವು ಪರಮಹಂಸ ಯೋಗಾನಂದರಿಂದ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬಹುದು. ಅವರ ಕೃತಿಗಳ ಈ ಆಯ್ದ ಭಾಗಗಳಲ್ಲಿ, ಪರಮಹಂಸಜಿಯವರು, ಅನ್ವೇಷಕ ಹಾಗೂ ಅವನ ಅಥವಾ ಅವಳ ಗುರುವಿನ ನಡುವೆ ಇರುವ ಅತ್ಯಂತ ಉನ್ನತ ಮತ್ತು ವೈಯಕ್ತಿಕ ಸಂಬಂಧವನ್ನು ವಿವರಿಸುತ್ತಾರೆ.
ವೈಎಸ್‌ಎಸ್/ಎಸ್‌ಆರ್‌ಎಫ್‌ನ ಪ್ರಸ್ತುತ ಮತ್ತು ಹಿಂದಿನ ಅಧ್ಯಕ್ಷರುಗಳಿಂದ, ನಿಜವಾದ ಗುರುವಿನ ಸ್ವರೂಪ ಮತ್ತು ಭಗವಂತನನ್ನು ಅರಿತಿರುವ ಹಾಗೂ ಅನ್ವೇಷಕನನ್ನು ಅವನ ಅಥವಾ ಅವಳ ಆತ್ಮಸಾಕ್ಷಾತ್ಕಾರಕ್ಕೆ ಮುನ್ನಡೆಸಲು ಸಾಧ್ಯವಿರುವ ಅಂತಹವರೊಂದಿಗೆ ನಮ್ಮ ಪ್ರಜ್ಞೆಯನ್ನು ಹೇಗೆ ಶ್ರುತಿಗೂಡಿಸುವುದು ಎಂಬುದರ ಕುರಿತು ಹಲವಾರು ಕಿರು ವೀಡಿಯೊಗಳನ್ನು ವೀಕ್ಷಿಸಲು ವೈಎಸ್‌ಎಸ್ ಬ್ಲಾಗ್‌ನಲ್ಲಿ ಮತ್ತೊಂದು ಪುಟಕ್ಕೂ ಭೇಟಿ ನೀಡಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.