ವೈಎಸ್‌ಎಸ್ ಪರಮಹಂಸ ಯೋಗಾನಂದರ ಜನ್ಮೋತ್ಸವವನ್ನು ಅವರ ಜನ್ಮಸ್ಥಳವಾದ ಗೋರಖ್‌ಪುರದಲ್ಲಿ ಆಚರಿಸಿತು

24 ಜನವರಿ, 2026

5 ಜನವರಿ, 2026 ರಂದು, ಶ್ರೀ ಶ್ರೀ ಪರಮಹಂಸ ಯೋಗಾನಂದರ ಜನ್ಮಸ್ಥಳವಾದ ಭಾರತದ ಉತ್ತರ ಪ್ರದೇಶ ರಾಜ್ಯದ ಗೋರಖ್‌ಪುರ ನಗರದಲ್ಲಿ ಅವರ 133ನೇ ಆವಿರ್ಭವ ದಿನವನ್ನು(ಜನ್ಮ ವಾರ್ಷಿಕೋತ್ಸವ) ಆಚರಿಸಲಾಯಿತು. ಸೆಲ್ಫ್-ರಿಯಲೈಸೇಷನ್ ಫೆಲೋಶಿಪ್ (ಎಸ್‌ಆರ್‌ಎಫ್) ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್‌ಎಸ್) ದ ಸನ್ಯಾಸಿಗಳು, ಹಾಗೂ ರಾಜ್ಯಾದ್ಯಂತದ ವೈಎಸ್‌ಎಸ್ ಭಕ್ತರು ಮತ್ತು ಸ್ನೇಹಿತರು ಬೆಳಗಿನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪಲ್ಲಕ್ಕಿಯ ಮೇಲೆ ಸುಂದರವಾಗಿ ಅಲಂಕೃತಗೊಂಡ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರ ಭಾವಚಿತ್ರ.
ಅಲಂಕೃತ ಪಲ್ಲಕ್ಕಿಯನ್ನು ಹೊತ್ತಿದ್ದ ಎಸ್‌ಆರ್‌ಎಫ್‌ ಸಂನ್ಯಾಸಿನಿಯರೊಡನೆ 120 ಕ್ಕೂ ಹೆಚ್ಚು ಭಕ್ತರು ಜೊತೆಯಾಗಿದ್ದರು.

ಅಂದಿನ ಶುಭಾಚರಣೆಗಳು ಪರಮಹಂಸಜಿಯವರ ಜನ್ಮಸ್ಥಳವನ್ನು ಸಮೀಪಿಸುತ್ತಿದ್ದ ರಸ್ತೆಯುದ್ದಕ್ಕೂ ನಡೆದ ಬೆಳಗಿನ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು. ಎಸ್‌ಆರ್‌ಎಫ್‌ ಸಂನ್ಯಾಸಿನಿಯರು, ಪರಮಪೂಜ್ಯ ಗುರುಗಳಾದ ಪರಮಹಂಸ ಯೋಗಾನಂದಜಿಯವರ ದೊಡ್ಡ ಬಣ್ಣದ ಭಾವಚಿತ್ರವನ್ನು ಹೊತ್ತ, ಸುಂದರವಾಗಿ ಅಲಂಕೃತಗೊಂಡ, ಹೂಗಳಿಂದ ಸಿಂಗರಿಸಿದ ಪಲ್ಲಕ್ಕಿಯನ್ನು ಮುನ್ನಡೆಸಿದರು. ಸುಮಾರು 125 ಭಕ್ತರು ಮತ್ತು ಸ್ನೇಹಿತರ ಈ ಮೆರವಣಿಗೆಯು ಗುರುದೇವರ ಪವಿತ್ರ ಜನ್ಮಸ್ಥಳವನ್ನು ಸಮೀಪಿಸುತ್ತಿದ್ದಂತೆ, ರಸ್ತೆಯುದ್ದಕ್ಕೂ ವ್ಯಾಪಿಸಿ ನಿರಂತರ, ಆನಂದಮಯ “ಜೈ ಗುರು” ಜಪದೊಂದಿಗೆ ಸಾಗಿತ್ತು.

ಸ್ವಾಮಿ ವಿಶ್ವಾನಂದರು ಭಕ್ತರೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸುತ್ತಿರುವುದು.
ಎಸ್‌ಆರ್‌ಎಫ್‌ ಸನ್ಯಾಸಿನಿಯರು ಮತ್ತು ಬ್ರಹ್ಮಚಾರಿಣಿಯರು ಭಕ್ತಿಪೂರ್ವಕ ಕೀರ್ತನೆಯಲ್ಲಿ ಭಾಗವಹಿಸುತ್ತಿರುವುದು.

ಗುರುದೇವ ಪರಮಹಂಸ ಯೋಗಾನಂದರ ಜನ್ಮಸ್ಥಳದಲ್ಲಿ ನಡೆಯುವ ಈ ಪ್ರಪ್ರಥಮ ಸಾರ್ವಜನಿಕ ಜನ್ಮೋತ್ಸವ ಸಮಾರಂಭವು, ರಾಜ್ಯ ಸರ್ಕಾರವು ಆ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಮತ್ತು ಮಹಾನ್ ಗುರುಗಳ ಜೀವನ ಹಾಗೂ ಕಾರ್ಯವನ್ನು ಗೌರವಿಸಲು ಆ ಸ್ಥಳದಲ್ಲಿ ಒಂದು ದೇಗುಲವನ್ನು ನಿರ್ಮಿಸಲಾಗುತ್ತಿದೆ ಎಂದು ಕಳೆದ ವರ್ಷ ಸಾರ್ವಜನಿಕವಾಗಿ ಘೋಷಿಸಿದ ನಂತರ ಸಾಧ್ಯವಾಯಿತು. ಈ ದೇಗುಲವನ್ನು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯು ನಿರ್ವಹಿಸಲಿದೆ. ಇದು ಪೂರ್ಣಗೊಂಡಾಗ, ಪರಮಹಂಸ ಯೋಗಾನಂದಜಿಯವರ ಭಕ್ತರಿಗೆ ಮತ್ತು ಸ್ನೇಹಿತರಿಗೆ ಇದೊಂದು ಸುಂದರ ಯಾತ್ರಾ ಸ್ಥಳವಾಗಲಿದೆ. ಇದು ಈ ಸ್ಥಳದಲ್ಲಿ ಅಸ್ತಿತ್ವದಲ್ಲಿದ್ದ ಮೂಲ ಮನೆಯ ಇಟ್ಟಿಗೆಗಳಿಂದ ಭಾಗಶಃ ನಿರ್ಮಿಸಲಾದ ವಿಶೇಷ ದೇಗುಲ ಕೊಠಡಿ; ಒಂದು ವಸ್ತುಸಂಗ್ರಹಾಲಯ; ಒಂದು ಆಡಿಯೋ/ವೀಡಿಯೋ ಪ್ರಸ್ತುತಿ ಕೊಠಡಿ; ಮತ್ತು ಒಂದು ವಿಶಾಲವಾದ ಧ್ಯಾನ ಮಂದಿರವನ್ನು ಹೊಂದಿರುತ್ತದೆ.

ಬೆಳಗಿನ ಮೆರವಣಿಗೆಯ ನಂತರ ನಡೆದ ಒಂದು ಗಂಟೆ ಅವಧಿಯ ಕಾರ್ಯಕ್ರಮದಲ್ಲಿ ಸುಮಾರು 225 ಜನರು ಭಾಗವಹಿಸಿದ್ದರು, ಇವರಲ್ಲಿ 150 ಭಕ್ತರು ಮತ್ತು 75 ಅತಿಥಿಗಳು ಹಾಗೂ ಸಂದರ್ಶಕರು ಸೇರಿದ್ದರು. ಕೆಲವು ಹಿರಿಯ ಸರ್ಕಾರಿ ಅಧಿಕಾರಿಗಳು ಸಹ ಉಪಸ್ಥಿತರಿದ್ದರು. ಈ ವಿಶೇಷ ಸಂದರ್ಭವನ್ನು ಆಚರಿಸಲು, ಅಲಂಕರಿಸಲಾದ ಮಂಟಪವನ್ನು ನಿರ್ಮಿಸಲಾಗಿತ್ತು.

ಸ್ವಾಮಿ ವಿಶ್ವಾನಂದರು ಆರತಿ ನೆರವೇರಿಸಿ ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವುದು.

ಕಾರ್ಯಕ್ರಮವು ಹಿರಿಯ ಸನ್ಯಾಸಿ ಸ್ವಾಮಿ ವಿಶ್ವಾನಂದ ಗಿರಿ ಅವರು ನಮ್ಮ ಪ್ರಿಯ ಗುರುಗಳಿಗೆ ಆರತಿ ನೆರವೇರಿಸುವುದರೊಂದಿಗೆ ಪ್ರಾರಂಭವಾಯಿತು. ಇದನ್ನು ಅನುಸರಿಸಿ, ಎಸ್‌ಆರ್‌ಎಫ್‌ನ ಬ್ರಹ್ಮಚಾರಿಣಿಯರಿಂದ ಸಂಕೀರ್ತನೆ ನಡೆಯಿತು. ನಂತರ ಸ್ವಾಮಿ ವಿಶ್ವಾನಂದರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಈ ಪವಿತ್ರ ಸ್ಥಳದಲ್ಲಿ ಪರಮಹಂಸಜಿಯವರ 133ನೇ ಜನ್ಮೋತ್ಸವವನ್ನು ಆಚರಿಸಿದ ತಮ್ಮ ಸಂತೋಷವನ್ನು ಹಂಚಿಕೊಂಡರು. ಅವರು ವೈಎಸ್ಎಸ್ /ಎಸ್‌ಆರ್‌ಎಫ್‌ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿ, ವೈಎಸ್ಎಸ್ /ಎಸ್‌ಆರ್‌ಎಫ್‌ ಸನ್ಯಾಸಿಗಳು ಮತ್ತು ಮಹಾನ್ ಗುರುಗಳ ವಿಶ್ವಾದ್ಯಂತದ ಆಧ್ಯಾತ್ಮಿಕ ಕುಟುಂಬದ ಪರವಾಗಿ ಗೋರಖ್‌ಪುರ್ ಕಾರ್ಯಕ್ರಮಕ್ಕಾಗಿ ಜಾಗತಿಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಯೋಗಾನಂದಜಿಯವರ ಜನ್ಮಸ್ಥಳದಲ್ಲಿ ಸ್ಮಾರಕ ದೇವಾಲಯವನ್ನು ಸ್ಥಾಪಿಸುವ ನಿರ್ಧಾರದಲ್ಲಿ ಭಾಗಿಯಾಗಿದ್ದ ಉತ್ತರ ಪ್ರದೇಶ ರಾಜ್ಯ ಸರ್ಕಾರ ಮತ್ತು ಸರ್ವರಿಗೂ ಅವರು ಧನ್ಯವಾದಗಳನ್ನು ಅರ್ಪಿಸಿದರು. ಗುರುದೇವರು ಜನಿಸಿದ ಮೂಲ ಮನೆ ಮತ್ತು ಈಗ ನಿರ್ಮಾಣ ಹಂತದಲ್ಲಿರುವ ದೇವಾಲಯದ ದೊಡ್ಡ, ಬಣ್ಣದ ಭಿತ್ತಿಚಿತ್ರವನ್ನು ಅವರು ಹಂಚಿಕೊಂಡರು. ಇದನ್ನು ಪ್ರೇಕ್ಷಕರು ಮೆಚ್ಚುಗೆ ಮತ್ತು ಕರತಾಡನಗಳೊಂದಿಗೆ ಸ್ವೀಕರಿಸಿದರು.

ಸ್ವಾಮಿ ವಿಶ್ವಾನಂದರು, ಗುರುದೇವರು ಜನಿಸಿದ ಮೂಲ ಮನೆ ಮತ್ತು ನಿರ್ಮಾಣವಾಗುತ್ತಿರುವ ಹೊಸ ದೇವಾಲಯದ ಭಿತ್ತಿ ಚಿತ್ರಗಳನ್ನು ತೋರಿಸುತ್ತಿರುವುದು.

ಇದರ ನಂತರ, ಪ್ರಸ್ತುತ ಭಾರತಕ್ಕೆ ಆಧ್ಯಾತ್ಮಿಕ ಯಾತ್ರೆ ಕೈಗೊಂಡಿರುವ ಎಸ್‌ಆರ್‌ಎಫ್‌ ನ ಇಬ್ಬರು ಸನ್ಯಾಸಿನಿಯರಾದ ರಂಜನಾ ಮಾ ಹಾಗೂ ಯೋಗಮಯೀ ಮಾ ಅವರು ಸಂಕ್ಷಿಪ್ತ ಪ್ರವಚನಗಳನ್ನು ನೀಡಿದರು. ಅವರು ವೈಎಸ್ಎಸ್ /ಎಸ್‌ಆರ್‌ಎಫ್‌ ಪ್ರಕಟಣೆಗಳಾದ ಯೋಗಿಯ ಆತ್ಮಚರಿತ್ರೆ ಮತ್ತು ಮೇಜ್ದಾ ಗ್ರಂಥಗಳಿಂದ ಆಯ್ದ ಭಾಗಗಳನ್ನು ವಾಚಿಸುತ್ತಾ, ಪರಮಹಂಸ ಯೋಗಾನಂದಜಿಯವರ ಗೋರಖ್‌ಪುರದಲ್ಲಿನ ಅವರ ಜೀವನದ ಮೊದಲ ಎಂಟು ವರ್ಷಗಳ ಬಾಲ್ಯದ ದಿನಗಳ ಪ್ರೇರಣಾದಾಯಕ ಘಟನೆಗಳನ್ನು ಹಂಚಿಕೊಂಡರು. ಸ್ವಾಮಿ ವಿಶ್ವಾನಂದರು, ಭಾರತವು ಅನಾದಿ ಕಾಲದಿಂದಲೂ ಸಮಸ್ತ ಮಾನವಕುಲದ ಆಧ್ಯಾತ್ಮಿಕ ಉನ್ನತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಲೆಕ್ಕವಿಲ್ಲದಷ್ಟು ಮಹಾನ್ ಆತ್ಮಗಳ ಮಾತೃಭೂಮಿಯಾಗಿದೆ ಎಂದು ಗಮನಸೆಳೆದರು. ಗೋರಖ್‌ಪುರದಲ್ಲಿ ಜನಿಸಿದ ಪರಮಹಂಸ ಯೋಗಾನಂದರು ಇವರಲ್ಲಿ ಒಬ್ಬರಾದರು. ಸ್ವಾಮಿ ವಿಶ್ವಾನಂದರು, ಮಹಾನ್ ಗುರುಗಳ ನೇರ ಶಿಷ್ಯೆಯೂ, ಅವರ ವಿಶ್ವವ್ಯಾಪಿ ವೈಎಸ್ಎಸ್ /ಎಸ್‌ಆರ್‌ಎಫ್‌ ಸಂಸ್ಥೆಯ 50 ವರ್ಷಗಳಿಗೂ ಹೆಚ್ಚು ಕಾಲದ ಮಾಜಿ ಅಧ್ಯಕ್ಷರೂ ಹಾಗೂ ಸಂಘಮಾತೆಯಾಗಿದ್ದ ಶ್ರೀ ಶ್ರೀ ದಯಾ ಮಾತಾ ಅವರ ಈ ಮಾತುಗಳನ್ನು ಹಂಚಿಕೊಂಡರು:

“ನಮ್ಮ ಪ್ರೀತಿಯ ಗುರುಗಳು ಎಷ್ಟು ನಮ್ರರಾಗಿದ್ದರೆಂದರೆ, ತಮ್ಮ ಆತ್ಮಚರಿತ್ರೆಯಲ್ಲಿ ತಮ್ಮನ್ನೇ ಮೀರಿ ಅನೇಕ ಮಹಾಸಂತರನ್ನು ಶ್ಲಾಘಿಸಿದ್ದರು. ಆದರೆ, ತಮ್ಮ ದೈವನಿಯೋಜಿತ ಧ್ಯೇಯದಲ್ಲಿ, ಅವರು ಈ ಯುಗದ ವಿಶ್ವಾವತಾರರಾಗಿದ್ದಾರೆ; ಮತ್ತು ಈ ಮರ್ತ್ಯ ಲೋಕದ ತೀರಗಳಲ್ಲಿ ಹೆಜ್ಜೆ ಇಟ್ಟ ಅಂತಹಾ ಆಧ್ಯಾತ್ಮಿಕ ಮಟ್ಟದವರು ಕೆಲವರೇ. ಅನಂತದೊಂದಿಗೆ ಒಂದಾಗಿದ್ದ ಅವರು, ಚೈತನ್ಯ ಸಾಗರದಲ್ಲಿಯೇ ಜೀವಿಸಿದ್ದರು, ಚಲಿಸುತ್ತಿದ್ದರು ಮತ್ತು ನೆಲೆಗೊಂಡಿದ್ದರು. ಅವರು ನಿಷ್ಕಲ್ಮಷ ಪ್ರೀತಿಯನ್ನು ಹೊರಸೂಸುತ್ತಿದ್ದರು; ಮತ್ತು ಅವರ ವಿವೇಕವು ಎಷ್ಟು ಅಗಾಧವಾಗಿಯೂ ಉನ್ನತವಾಗಿಯೂ ಇತ್ತೆಂದರೆ, ನಾವು ವಿಸ್ಮಿತ ಶಿಷ್ಯರು ಅವರ ಮನಸ್ಸಿನ ಚಿಲುಮೆಯಿಂದ ಗಹನ ವೇದಗಳ ಸಾರವನ್ನೇ ಕುಡಿಯುತ್ತಿದ್ದೇವೆಂದು ತಿಳಿದಿದ್ದೆವು. ಅವರು ತಮ್ಮ ಪವಾಡದ ಶಕ್ತಿಗಳಿಂದ ಲಕ್ಷಾಂತರ ಜನರನ್ನು ಮೋಡಿಮಾಡಬಹುದಿತ್ತು, ಆದರೂ ಅವರು ಕೇವಲ ನಿಜ ಭಕ್ತರ ಹೃದಯಗಳಲ್ಲಿ ದೇವರ ಪ್ರೀತಿಯನ್ನು ಜಾಗೃತಗೊಳಿಸಲು ಪ್ರಯತ್ನಿಸಿದರು, ಅದೂ ತಮ್ಮದೇ ಆದ ದೈವೋನ್ಮತ್ತ ಪ್ರೀತಿಯ ಮಹಾನ್ ಶಕ್ತಿಯ ಮೂಲಕ.”

ವೈಎಸ್ಎಸ್/ಎಸ್‌ಆರ್‌ಎಫ್‌ ಸನ್ಯಾಸಿಗಳು, ಸನ್ಯಾಸಿನಿಯರು, ಬ್ರಹ್ಮಚಾರಿಗಳು ಮತ್ತು ಬ್ರಹ್ಮಚಾರಿಣಿಯರು 400ಕ್ಕೂ ಹೆಚ್ಚು ಭಾಗವಹಿಸಿದ ಭಕ್ತರಿಗೆ ಪ್ರಸಾದವನ್ನು ವಿತರಿಸಿದರು.

ಪ್ರಸಾದ ವಿತರಣೆ ಮತ್ತು ಪುಷ್ಪಾಂಜಲಿ (ಹೂ ಸಮರ್ಪಣೆ).

ಮಧ್ಯಾಹ್ನ, ಎಸ್‌ಆರ್‌ಎಫ್‌ ಸನ್ಯಾಸಿನಿಯರು ಮತ್ತು ಬ್ರಹ್ಮಚಾರಿಣಿಯರು ಅದೇ ಸ್ಥಳದಲ್ಲಿ ಒಂದು ಗಂಟೆಯ ಸಾಮೂಹಿಕ ಧ್ಯಾನವನ್ನು ನಡೆಸಿದರು, ಇದರಲ್ಲಿ 50ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ಗುರುದೇವರ ಉಪಸ್ಥಿತಿಯನ್ನು ಎಲ್ಲರೂ ಅನುಭವಿಸಿದ ಈ ಪುಣ್ಯದಿನಕ್ಕಾಗಿ ಅಲ್ಲಿ ಉಪಸ್ಥಿತರಿದ್ದ ಪ್ರತಿಯೊಬ್ಬರೂ ದೇವರು ಮತ್ತು ಗುರುಗಳಿಗೆ ಧನ್ಯವಾದ ಸಲ್ಲಿಸಿದರು.

ಇದನ್ನು ಹಂಚಿಕೊಳ್ಳಿ