ಪರಮಹಂಸ ಯೋಗಾನಂದರ ದಿ ಸ್ಪಿರಿಚುವಲ್ ಎಕ್ಸ್‌ಪ್ರೆಷನ್ ಆಫ್ ಫ್ರೆಂಡ್‌ಶಿಪ್ — ಇತರರೊಂದಿಗೆ ನಮ್ಮ ಸಂಬಂಧಗಳಲ್ಲಿ ಅಡಗಿರುವ ಆಳವಾದ ಆಧ್ಯಾತ್ಮಿಕ ಅರ್ಥವನ್ನು ಅನಾವರಣಗೊಳಿಸುವ ಕೃತಿ — ಇದೀಗ ಖರೀದಿಗೆ ಲಭ್ಯವಿದೆ ಎಂಬುದನ್ನು ಘೋಷಿಸಲು ನಮಗೆ ಅತ್ಯಂತ ಸಂತೋಷವಾಗುತ್ತಿದೆ.
ಯೋಗೋದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಶನ್ ಫೆಲೋಷಿಪ್‌ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿ ಅವರು, ಡಿಸೆಂಬರ್ 25ರಂದು ಲಾಸ್ ಏಂಜಲೀಸ್‌ನಲ್ಲಿರುವ ಎಸ್‌ಆರ್‌ಎಫ್ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ನಡೆದ ವಾರ್ಷಿಕ ಸ್ವಾಮಿಜಿಗಳ ಕ್ರಿಸ್‌ಮಸ್ ಕಾರ್ಯಕ್ರಮದ ಸಂದರ್ಭದಲ್ಲಿ, ವಿಶ್ವಾದ್ಯಂತ ವಿತರಣೆಗಾಗಿ ದಿ ಸ್ಪಿರಿಚುವಲ್ ಎಕ್ಸ್‌ಪ್ರೆಷನ್ ಆಫ್ ಫ್ರೆಂಡ್‌ಶಿಪ್ ಕೃತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಆ ವಿಶೇಷ ಸಂದರ್ಭದಲ್ಲಿ, ಸ್ವಾಮಿ ಚಿದಾನಂದಜಿ ಅವರು ಪರಮಹಂಸಜಿಯವರಿಂದ ಈ ಪುಸ್ತಕದಲ್ಲಿ ನೀಡಲ್ಪಟ್ಟಿರುವ ಸ್ಫೂರ್ತಿಯ ಸಂಪತ್ತಿನ ಕುರಿತು, ಸ್ಥಳದಲ್ಲೇ ಹಾಜರಿದ್ದ ಮತ್ತು ಆನ್‌ಲೈನ್ ಮೂಲಕ ಭಾಗವಹಿಸಿದ್ದ ವೈಎಸ್ಎಸ್/ಎಸ್‌ಆರ್‌ಎಫ್ ಸ್ವಾಮಿಜಿಗಳನ್ನು ಉದ್ದೇಶಿಸಿ ಮಾತನಾಡಿದರು. “ಇದು ಒಂದು ಸಣ್ಣ ಪುಸ್ತಕ,” ಎಂದು ಸ್ವಾಮಿ ಚಿದಾನಂದಜಿ ಹೇಳಿದರು. “ಆದರೆ ಗುರುಗಳ ಪ್ರಜ್ಞೆ ಮತ್ತು ಜೀವನದ ಸ್ಪರ್ಶವನ್ನು ಹೊಂದಿರುವ ಯಾವುದೇ ವಿಷಯದಂತೆಯೇ, ಇದರಲ್ಲೂ ಬಹಳಷ್ಟು ಅರ್ಥಸಂಪತ್ತು ಅಡಕವಾಗಿದೆ!”
ಈ ಪುಸ್ತಕವು ಮೂರು ವಿಭಾಗಗಳನ್ನು ಒಳಗೊಂಡಿದೆ. ಮೊದಲನೆಯದು, ಪರಮಹಂಸಜಿಯವರ ಸಾಂಗ್ಸ್ ಆಫ್ ದಿ ಸೋಲ್ ಕೃತಿಯಿಂದ ತೆಗೆದುಕೊಂಡಿರುವ ಸುಂದರ ಕವಿತೆ “ಫ್ರೆಂಡ್‌ಶಿಪ್.” ಮುಂದಿನ ವಿಭಾಗದಲ್ಲಿ ಸ್ನೇಹದ ದೈವಿಕ ಸ್ವರೂಪ ಮತ್ತು ಅದರ ಆಧ್ಯಾತ್ಮಿಕ ಶಕ್ತಿಯ ಕುರಿತು ಆಳವಾದ, ಸ್ಫೂರ್ತಿದಾಯಕ ಪ್ರಬಂಧವಿದೆ. ಅಂತಿಮ ವಿಭಾಗದಲ್ಲಿ “ಪ್ರೀತಿಯು ಆತ್ಮದ ಉಸಿರು” ಎಂಬ ಕಾವ್ಯಾತ್ಮಕ ಸ್ಫೂರ್ತಿಯನ್ನು ನೀಡಲಾಗಿದೆ. ಇದರಲ್ಲಿ ಪರಮಹಂಸಜಿ “ಎಲ್ಲಾ ಸೃಷ್ಟಿಯ ಮೂಲಕ ಹರಿಯುವ ಮತ್ತು ವ್ಯಾಪಿಸಿರುವ ದೈವಿಕ ಪ್ರೀತಿಯ ಸಾಕ್ಷಾತ್ಕಾರ ಮತ್ತು ಅನುಭವದಿಂದ ಮಾತನಾಡುತ್ತಿದ್ದಾರೆ” ಎಂದು ಸ್ವಾಮಿ ಚಿದಾನಂದಜಿ ವಿವರಿಸಿದರು.
ಪುಸ್ತಕವು ತನ್ನ ಶೀರ್ಷಿಕೆಯನ್ನು ಪಡೆದಿರುವ ಹಾಗೂ ಅದರ ಬಹುಪಾಲು ವಿಷಯವನ್ನು ಒಳಗೊಂಡಿರುವ ಆ ಭವ್ಯ ಪ್ರಬಂಧದ ಹುಟ್ಟು ಮತ್ತು ವಿಕಾಸದ ಕುರಿತು ವೈಎಸ್ಎಸ್/ಎಸ್‌ಆರ್‌ಎಫ್ ಅಧ್ಯಕ್ಷರು ಕೂಡ ಮಾತನಾಡಿದರು. ಮೂಲತಃ ಈ ಪ್ರಬಂಧವನ್ನು ಪರಮಹಂಸಜಿ 1930ರ ದಶಕದಲ್ಲಿ ಬರೆದಿದ್ದು, ಮೊಟ್ಟಮೊದಲು ವೈಎಸ್ಎಸ್/ಎಸ್‌ಆರ್‌ಎಫ್ ಪಾಠಗಳ ಆರಂಭಿಕ ಸರಣಿಯ ಭಾಗವಾಗಿ ಪ್ರಕಟಿಸಲಾಗಿತ್ತು. ಆದರೆ 2019ರಲ್ಲಿ ಬಿಡುಗಡೆಗೊಂಡ ಪಾಠಗಳ ಹೊಸ ಸಂಪೂರ್ಣ ಆವೃತ್ತಿಯನ್ನು ಸಿದ್ಧಪಡಿಸುತ್ತಿದ್ದ ವೇಳೆ, ಹಿಂದಿನ ಅಧ್ಯಕ್ಷರಾದ ಶ್ರೀ ದಯಾ ಮಾತಾ ಮತ್ತು ಶ್ರೀ ಮೃಣಾಲಿನಿ ಮಾತಾ ಅವರು, ಈ ಪ್ರಬಂಧವನ್ನು ಸಾಮಾನ್ಯ ಜನರಿಗೆ ಲಭ್ಯವಾಗದ ಗೌಪ್ಯ ಮನೆ-ಅಧ್ಯಯನ ಸರಣಿಯಲ್ಲೇ ಉಳಿಸುವ ಬದಲು, ಆಧ್ಯಾತ್ಮಿಕ ಸ್ನೇಹದ ಕುರಿತಾದ ಈ ಸಾರ್ವತ್ರಿಕವಾಗಿ ಅನ್ವಯಿಸುವ ಸಂದೇಶವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕೆಂದು ನಿರ್ಧರಿಸಿದರು — ಇದರಿಂದ ಅದರ ಗರಿಷ್ಠ ವಿತರಣೆಯೂ ಹಾಗೂ ಮನುಕುಲದ ಮೇಲೆ ಅದರ ಪರಿಣಾಮವೂ ಸಾಧ್ಯವಾಗುತ್ತದೆ ಎಂಬ ಉದ್ದೇಶದಿಂದ. ಸ್ವಾಮಿ ಚಿದಾನಂದಜಿ ಅವರು ಮತ್ತೊಂದು ವಿಷಯವನ್ನು ಉಲ್ಲೇಖಿಸಿದರು: 1949ರಲ್ಲಿ ಪರಮಹಂಸಜಿ ತಮ್ಮ ಈ ಪ್ರಬಂಧವನ್ನು ಮರುಪರಿಶೀಲಿಸಿ, ಇದುವರೆಗೆ ಪ್ರಕಟವಾಗಿರದ ಹಲವು ವಿಸ್ತರಣೆಗಳು ಮತ್ತು ಸ್ಪಷ್ಟೀಕರಣಗಳನ್ನು ಸೇರಿಸಿದ್ದರು. ಆದ್ದರಿಂದ, ಈ ಹೊಸ ಪುಸ್ತಕದ ಮೂಲಕ ಜಗತ್ತು ಈಗ “ಆಧ್ಯಾತ್ಮಿಕ ಸ್ನೇಹ, ದೈವಿಕ ಸ್ನೇಹದ ಕುರಿತಾದ ಪರಮಹಂಸ ಯೋಗಾನಂದರ ಭವ್ಯ ಗ್ರಂಥದ ನಿರ್ಣಾಯಕ ಪ್ರಸ್ತುತಿ”ಯನ್ನು ಪಡೆದಿದೆ ಎಂದು ಸ್ವಾಮಿ ಚಿದಾನಂದಜಿ ಹೇಳಿದರು.
ಓದುಗರು ಈ ಪುಸ್ತಕದ ಮೂರನೇ ವಿಭಾಗವು, ಕಾವ್ಯಾತ್ಮಕ ಸ್ಫೂರ್ತಿಯ ಪ್ರತಿಯೊಂದು ಪರಿಚ್ಛೇದದಲ್ಲೂ ಕಾಣುವ ಆಳವಾದ ಆಧ್ಯಾತ್ಮಿಕ ಚಿತ್ರಣಗಳಿಗೆ ಹೊಂದುವಂತೆ ಸೇರಿಸಲಾದ ವಿಶಿಷ್ಟ ಚಿತ್ರಣಗಳಿಂದ ಮತ್ತಷ್ಟು ಸಮೃದ್ಧಗೊಂಡಿದೆ ಎಂಬುದನ್ನು ಗಮನಿಸಲಿದ್ದಾರೆ. ಇದನ್ನೂ ಸಹ 2000ನೇ ಇಸವಿಯಲ್ಲಿ ಯೋಗೋದ ಸತ್ಸಂಗ ನಿಯತಕಾಲಿಕೆಗೆ ಈ ಸ್ಪೂರ್ತಿದಾಯಕ ರತ್ನವನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಶ್ರೀ ದಯಾ ಮಾತಾ ಮತ್ತು ಶ್ರೀ ಮೃಣಾಲಿನಿ ಮಾತಾ ಅವರು ಕಲ್ಪಿಸಿಕೊಂಡಿದ್ದು, ನಂತರ ಇದನ್ನು ಶಾಶ್ವತ ಪುಸ್ತಕ ರೂಪದಲ್ಲಿ ಪ್ರಕಟಿಸುವಂತೆ ತಮ್ಮ ಸೂಚನೆಗಳನ್ನು ಬಿಟ್ಟಿದ್ದರು.
ಸ್ವಾಮಿ ಚಿದಾನಂದಜಿ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸುವ ಸಂದರ್ಭದಲ್ಲಿ, ಶತಮಾನೋತ್ಸವ ವರ್ಷದ ಅಂಗವಾಗಿ ಮೌಂಟ್ ವಾಷಿಂಗ್ಟನ್‌ನಲ್ಲಿರುವ ಎಸ್‌ಆರ್‌ಎಫ್ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ಈ ಪುಸ್ತಕ ಬಿಡುಗಡೆಯಾದ ಮಹತ್ವವನ್ನು ಅವರು ಒತ್ತಿ ಹೇಳಿದರು. ದೈವಿಕ ಸ್ನೇಹದ ತತ್ವ ಮತ್ತು ಆದರ್ಶವು, ಪರಮಹಂಸಜಿಯವರು ಈ ಸ್ಥಳದಲ್ಲಿ ಸ್ಥಾಪಿಸಿದ ಸನ್ಯಾಸಿ ಸಮುದಾಯದ ಸಮರ್ಪಿತ ಸೇವೆಯೊಳಗೆ ನೇಯ್ದಿರುವ ನಿಜವಾದ “ಪೋಷಕ ತತ್ವ”ವಾಗಿದ್ದು, ಇದೇ ವೇಳೆ ಈ ವಿಶೇಷ ಕೇಂದ್ರದಿಂದ ಜಗತ್ತಿನಾದ್ಯಂತ ಹರಡಬೇಕೆಂದು ವಿಧಿಸಲ್ಪಟ್ಟಿದ್ದ ಅವರ ವಿಶ್ವವ್ಯಾಪಿ ಕಾರ್ಯದ ಭದ್ರ ಅಡಿಪಾಯವೂ ಆಗಿದೆ ಎಂದು ಅವರು ಹಂಚಿಕೊಂಡರು. “ನೀವೆಲ್ಲರೂ ಪ್ರೀತಿ, ಸೌಹಾರ್ದತೆ, ದಯೆ ಮತ್ತು ವಿನಯದೊಂದಿಗೆ ಒಂದಾಗಿ ಕೆಲಸ ಮಾಡಿದರೆ, ಈ ಕಾರ್ಯ ಜಗತ್ತನ್ನೇ ಆವರಿಸಲಿದೆ,” ಎಂದು ಗುರುಗಳು ಹೇಳಿದರು.
“ಈ ಭೌತಿಕ ಜಗತ್ತಿನಲ್ಲಿ ದೇವರ ಪ್ರೀತಿಗೆ ನಿಜವಾದ ಸ್ನೇಹಕ್ಕಿಂತ ಶುದ್ಧವಾದ ಮತ್ತೊಂದು ಅಭಿವ್ಯಕ್ತಿ ಇಲ್ಲ ಎಂದು ಪರಮಹಂಸಜಿ ಆಗಾಗ್ಗೆ ಹೇಳುತ್ತಿದ್ದರು,” ಎಂದು ಸ್ವಾಮಿ ಚಿದಾನಂದಜಿ ಗಮನಾರ್ಹವಾಗಿ ಹೇಳಿದರು, “ಈ ಪುಸ್ತಕದಲ್ಲಿ ಅಂಥ ಸ್ನೇಹದ ಸ್ವರೂಪವನ್ನು ಅತ್ಯಂತ ಸುಂದರವಾಗಿ ವಿವರಿಸಲಾಗಿದೆ. ಇಂದಿನ ನಮ್ಮ ಜಗತ್ತಿಗೆ ಈ ಬೋಧನೆಗಳು ಮತ್ತು ತತ್ವಗಳ ಮಹತ್ತರ ಅಗತ್ಯವಿದೆ ಎಂಬುದು ಸ್ಪಷ್ಟ. ಯೇಸು ಕ್ರಿಸ್ತರ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ, ಕ್ರಿಸ್‌ಮಸ್ ದಿನ ಈ ಸುಂದರ ಕೃತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುತ್ತಿರುವುದಕ್ಕೆ ನನಗೆ ಅಪಾರ ಸಂತೋಷವಾಗಿದೆ. ಪುಸ್ತಕದಲ್ಲಿ ನಮ್ಮ ಗುರುಗಳು ಹೀಗೆ ಹೇಳುತ್ತಾರೆ: ‘ಯೇಸುವಿಗೆ ಇಷ್ಟು ವ್ಯಾಪಕವಾದ ಅನುಯಾಯಿಗಳು ಏಕೆ ಇದ್ದಾರೆ? ಏಕೆಂದರೆ ಅವರು ಇತರ ಮಹಾನ್ ಗುರುಗಳು ಮತ್ತು ಅವತಾರಗಳಂತೆ ಮಾನವತೆಯ ಸೇವೆಯಲ್ಲಿ ಶ್ರೇಷ್ಠರು. ಸ್ನೇಹಿತರನ್ನು ಆಕರ್ಷಿಸಲು, ಒಬ್ಬನು ನಿಜವಾದ ಸ್ನೇಹಿತನ ಗುಣಗಳನ್ನು ಹೊಂದಿರಬೇಕು.’ ಅದೇ ಸಂದೇಶವನ್ನು ನಮ್ಮ ಗುರುಗಳು ಈ ಸಣ್ಣದಾದರೂ ಶಕ್ತಿಶಾಲಿ ಪುಸ್ತಕದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಹಾಗೂ ಸ್ಮರಣೀಯವಾಗಿ ಸಂಕ್ಷಿಪ್ತಗೊಳಿಸಿದ್ದಾರೆ. ಇದನ್ನು ಇಂದು ಬಿಡುಗಡೆ ಮಾಡಿ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತಿರುವುದಕ್ಕೆ ನಾನು ಅತ್ಯಂತ ಸಂತೋಷ ಮತ್ತು ಉತ್ಸಾಹದಿಂದಿದ್ದೇನೆ.”
ನಿಜವಾದ ಸ್ನೇಹ: ಎಲ್ಲರಿಗೂ ಸಾರ್ವತ್ರಿಕ ಮತ್ತು ಏಕತೆಯನ್ನು ಸಾಧಿಸುವ ಅಭ್ಯಾಸ
ಈ ಸುಂದರವಾಗಿ ಚಿತ್ರಿತಗೊಂಡಿರುವ ಪುಸ್ತಕದಲ್ಲಿ, ಯೋಗ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಅತ್ಯಂತ ಪೂಜ್ಯರಾದ ಆಧುನಿಕ ಮಹಾಗುರುಗಳಲ್ಲಿ ಒಬ್ಬರು, ನಿಜವಾದ ಸ್ನೇಹದ ಆಧಾರವಾಗಿರುವ ವಿಶ್ವವ್ಯಾಪಕ ಅಭ್ಯಾಸಗಳನ್ನು ವಿವರಿಸುತ್ತಾರೆ ಹಾಗೂ ಸಂಘರ್ಷಕ್ಕೊಳಗಾದ ಮಾನವೀಯತೆಗೆ ಸಮಯೋಚಿತ ಪರಿಹಾರವನ್ನು ನೀಡುತ್ತಾರೆ. ಸ್ನೇಹವನ್ನು ಅದರ ಶುದ್ಧ ಮತ್ತು ಉದಾತ್ತ ರೂಪದಲ್ಲಿ ಅನುಸರಿಸಿದಾಗ, ಅದು ನಮ್ಮ ಸಾಮಾನ್ಯ ದೈನಂದಿನ ಪ್ರಜ್ಞೆಯನ್ನು ಮೀರಿ ವಿಸ್ತರಿಸಿ, ಎಲ್ಲವನ್ನೂ ಒಳಗೊಳ್ಳುವ ಪ್ರಜ್ಞೆಗೆ ನಮ್ಮನ್ನು ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ತೋರಿಸುತ್ತಾರೆ, ಅಲ್ಲಿ ನಾವು ಇತರರೊಂದಿಗೆ ಮತ್ತು ಅಂತಿಮವಾಗಿ ಎಲ್ಲಾ ಜೀವಗಳೊಂದಿಗೆ ಏಕೀಕರಿಸುವ ದೈವಿಕ ರಕ್ತಸಂಬಂಧವನ್ನು ಅನುಭವಿಸುತ್ತೇವೆ. ಆತ್ಮದ ನಿಜವಾದ ಸ್ವರೂಪವಾದ ಎಲ್ಲವನ್ನೂ ಒಳಗೊಳ್ಳುವ ಮತ್ತು ಆಲಿಂಗಿಸುವ ಪ್ರೀತಿಯನ್ನು ನಾವು ಅನುಭವಿಸುತ್ತೇವೆ.
ಒಳಗೊಂಡಿರುವ ವಿಷಯಗಳು:
- ಎಂದಿಗೂ ವಿಫಲವಾಗದ ಸ್ನೇಹದ ನಿಯಮಗಳನ್ನು ಅನ್ವಯಿಸುವುದು ಹೇಗೆ
- ಹಿಂದಿನ ಜನ್ಮಗಳ ಸ್ನೇಹಿತರನ್ನು ಗುರುತಿಸುವುದು
- ನಾವು ಎಲ್ಲೇ ಹೋದರೂ ನಿಜವಾದ ಸ್ನೇಹಿತರನ್ನು ಸೆಳೆಯುವ ಆಕರ್ಷಣಾ ಶಕ್ತಿಯನ್ನು ಅಭಿವೃದ್ಧಿಪಡಿಸುವುದು
- ನಮ್ಮನ್ನು ಪ್ರೀತಿಸದವರನ್ನೂ ಸಹಾ ಪ್ರೀತಿಸುವುದನ್ನು ಹೇಗೆ ಅಭ್ಯಾಸ ಮಾಡುವುದು
- …ಮತ್ತು ಇನ್ನಷ್ಟು!
ನಿಮ್ಮ ಪ್ರೀತಿಯ ಪ್ರಕಾಶಮಯ ಸಾಮ್ರಾಜ್ಯದ ಗಡಿಗಳನ್ನು ಕ್ರಮೇಣ ವಿಸ್ತರಿಸಿ — ನಿಮ್ಮ ಕುಟುಂಬ, ನಿಮ್ಮ ನೆರೆಹೊರೆಯವರು, ನಿಮ್ಮ ಸಮುದಾಯ, ನಿಮ್ಮ ದೇಶ, ಎಲ್ಲಾ ದೇಶಗಳು — ಎಲ್ಲಾ ಜೀವಂತ, ಭಾವನಾತ್ಮಕ ಜೀವಿಗಳನ್ನು ಅದರಲ್ಲಿ ಒಳಗೊಳ್ಳುವಂತೆ ಮಾಡಿ. ದೇವರ ಸಮಸ್ತ ಸೃಷ್ಟಿಗೂ ದಯೆ ಮತ್ತು ವಾತ್ಸಲ್ಯದಿಂದ ತುಂಬಿದ ಪ್ರೀತಿಯನ್ನು ಬಿತ್ತುತ್ತಾ, ವಿಶ್ವ ಸ್ನೇಹಿಯಾಗಿರಿ.
— ಪರಮಹಂಸ ಯೋಗಾನಂದರು “ದಿ ಸ್ಪಿರಿಚುವಲ್ ಎಕ್ಸ್‌ಪ್ರೆಷನ್ ಆಫ್ ಫ್ರೆಂಡ್‌ಶಿಪ್” ನಲ್ಲಿ


















