ವೈಎಸ್‌ಎಸ್/ಎಸ್‌ಆರ್‌ಎಫ್‌ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿಯವರು 2017ರಲ್ಲಿ ಭಾರತದಲ್ಲಿ ಮಾತನಾಡುವಾಗ: “ಭಾರತವು ಶತಶತಮಾನಗಳಿಂದ ಎಲ್ಲ ಮಾನವಸಂಕುಲಕ್ಕೂ ಅತ್ಯುನ್ನತ ಆಧ್ಯಾತ್ಮಿಕ ಸತ್ಯದ ಪ್ರಧಾನಾಧಿಕಾರಿಯಾಗಿದೆ. ಅದು ಭಾರತದ ಅತ್ಯುನ್ನತವಾದುದನ್ನು ಪರಮಹಂಸಜಿಯವರು ಮೊದಲು ಪಶ್ಚಿಮಕ್ಕೆ, ನಂತರ ಇಡೀ ಜಗತ್ತಿಗೆ ಹಾಗೂ ತಮ್ಮ ಪ್ರೀತಿಪಾತ್ರ ಭಾರತಕ್ಕೆ ಹಿಂದಿರುಗಿ ನೀಡಿದ ವಿಶಿಷ್ಟ ದೈವಸಂಕಲ್ಪವಾಗಿತ್ತು. ಅವರು ಉತ್ಕೃಷ್ಟ ಕಾಲದ ಅಂದರೆ ಭಾರತದ ಉತ್ಕಷ್ಟ ನಾಗರಿಕತೆಯ ಸುವರ್ಣ ಯುಗದ, ಸರ್ವಾನ್ವಯ ಆಧ್ಯಾತ್ಮಿಕತೆಯ ಸಾರವನ್ನು ಅದರ ಪರಿಶುದ್ಧ ರೂಪದಲ್ಲಿ ಹೊರತಂದರು. ಅದೇ ಯೋಗ. ಅದು ಒಂದು ವಿಜ್ಞಾನವಾಗಿದೆ, ಒಂದು ವರ್ಗ ಅಥವಾ ಒಂದು ಧಾರ್ಮಿಕ ಪಂಥವಲ್ಲ; ಮತ್ತು ಅದರಿಂದಾಗಿ ಈ ಆಧ್ಯಾತ್ಮಿಕ ದೈವಸಂಕಲ್ಪವು–ಯೋಗ ಪ್ರಕಾಶವು–ನಿಜವಾಗಿಯೂ ಜಗದಾದ್ಯಂತ ಇಡೀ ಮಾನವಸಂಕುಲಕ್ಕೆ ಆಧ್ಯಾತ್ಮಿಕ ವರವಾಗಬಹುದು.
ಯೋಗವನ್ನು ಅಭ್ಯಾಸ ಮಾಡಲು ಮತ್ತು ಅದರ ಮಹೋನ್ನತ ಲಾಭಗಳನ್ನು ಪಡೆಯಲು ಒಬ್ಬರು ಯಾವುದೇ ನಿರ್ದಿಷ್ಟ ರಾಷ್ಟ್ರ, ಪಂಗಡ ಅಥವಾ ಮತ ಧರ್ಮಕ್ಕೆ ಸೇರಿದವರಾಗಬೇಕಿಲ್ಲ ಎಂದು ಪರಮಹಂಸ ಯೋಗಾನಂದರು ಬಹಳಷ್ಟು ಸಲ ಸೂಚಿಸಿದ್ದಾರೆ. ಒಂದು ವಿಜ್ಞಾನವಾಗಿ ಅದರ ನೈಜ ಸಾರ್ವತ್ರಿಕತೆ, ಅದರ ಫಲಗಳನ್ನು ಯಾರೇ ಬೇಕಾದರೂ ಅವರು ಯಾವುದೇ ರಾಷ್ಟ್ರದವರಾಗಲೀ, ಅದು ಪೌರಾತ್ಯವಾಗಲೀ ಅಥವಾ ಪಾಶ್ಚಿಮಾತ್ಯವಾಗಲೀ, ಪಡೆಯಬಹುದು ಎಂಬ ಅಂಶದ ಮೇಲಡಗಿದೆ.
ಯೋಗ ಧ್ಯಾನದ ಸತತ ಅಭ್ಯಾಸದ ಮೂಲಕ, ನಾವೆಲ್ಲರೂ ಆನಂದ, ಪ್ರೇಮ, ದಯೆ ಮತ್ತು ಶಾಂತಿಯ ಒಂದು ಆಳವಾದ ಮನಃಸ್ಥಿತಿಯನ್ನು ಪಡೆಯಬಹುದು. ಈ ಬದಲಾವಣೆಗಳು ನಮ್ಮ ಆಂತರ್ಯದೊಳಗೆ ಆದಾಗ, ಅವುಗಳ ಪ್ರಭಾವವೂ ಕೂಡ ಬಾಹ್ಯದಲ್ಲಿ ಪಸರಿಸುತ್ತವೆ, ಒಂದು ಅಗೋಚರ ನಿಯಮದ ಪ್ರಕಾರ, ಮೊಟ್ಟಮೊದಲಿಗೆ ನಮ್ಮ ಹತ್ತಿರದ ಕುಟುಂಬ ಮತ್ತು ಸಮುದಾಯಕ್ಕೆ ಮತ್ತು ನಂತರ ಇಡೀ ಜಗತ್ತಿಗೆ. ಪರಮಹಂಸಜಿ ಹೇಳಿರುವ ಹಾಗೆ, “ನಿನ್ನನ್ನು ನೀನು ಬದಲಾಯಿಸಿಕೋ, ಆಗ ನೀನು ಸಾವಿರಾರು ಜನರನ್ನು ಬದಲಾಯಿಸುತ್ತೀ.”
ಯೋಗದ ಮಹಾನ್ ಪ್ರಯೋಜನಗಳಲ್ಲೊಂದೆಂದರೆ, ಧ್ಯಾನಿಯಲ್ಲಿ ಎಲ್ಲ ಸಮುದಾಯಗಳೊಂದಿಗೆ ಒಂದು ಏಕತಾಭಾವವು ವೃದ್ಧಿಸುತ್ತದೆ. ಒಬ್ಬರ ಆಧ್ಯಾತ್ಮಿಕ ನಂಬಿಕೆಗಳು ಏನೇ ಇದ್ದರೂ, ಅಥವಾ ನಂಬಿಕೆ ಇಲ್ಲದಿದ್ದರೂ,ಯಾರೆಲ್ಲಾ ಯೋಗದ ವಿಜ್ಞಾನವನ್ನು ಅಭ್ಯಾಸ ಮಾಡುತ್ತಾರೋ, ಅವರೆಲ್ಲರೂ ಎಲ್ಲದರಲ್ಲೂ ಮತ್ತು ಪ್ರತಿಯೊಬ್ಬರಲ್ಲಿ ಭಗವಂತನಿದ್ದಾನೆ ಎಂಬುದನ್ನು ಅರಿಯುತ್ತಾರೆ.
ತಂತ್ರಜ್ಞಾನದ ಪ್ರಗತಿಯ ಕಾರಣವಾಗಿ ನಮ್ಮೆಲ್ಲರನ್ನೂ ಅತಿ ಸಮೀಪದಲ್ಲಿರಿಸುವಂತೆ ನಮ್ಮ ಜಗತ್ತು ವಿವರಿಸಲಾಗದ ರೀತಿಯಲ್ಲಿ ಸಂಕುಚಿತವಾಗಿರುವಾಗ, ಅಂತಹ ಸಾರ್ವತ್ರಿಕತೆಯಿಂದ ವ್ಯಾಪಿತವಾದ ಹೃದಯ ಮತ್ತು ಮನಸ್ಸುಗಳು ನಿಜವಾಗಿಯೂ ನಮ್ಮ ಕಾಲದ ಅತ್ಯಂತ ಮಹತ್ವದ ಅವಶ್ಯಕತೆಯಾಗಿವೆ. 1951ರ ಒಂದು ಸಂದರ್ಶನದಲ್ಲಿ ಜಗತ್ತಿಗೆ ತಮ್ಮ ಸಂದೇಶವನ್ನು ಸಂಕ್ಷಿಪ್ತವಾಗಿ ತಿಳಿಸುವಂತೆ ಪರಮಹಂಸಜಿಯವರನ್ನು ಕೇಳಲಾಯಿತು. ಮಾನವಸಂಕುಲವು ಅದರ ಸಾರಭೂತವಾದ ಏಕತೆಯನ್ನು ಅರಿಯಬೇಕಾದ ಮೂಲಭೂತ ಅವಶ್ಯಕತೆಯ ಬಗ್ಗೆ ಅವರು ಮಾತನಾಡಿದರು–ಅವರು ಆ ಭವಿಷ್ಯಸೂಚಕ ನುಡಿಗಳನ್ನು ಮೊದಲು ಹೇಳಿದ್ದಕ್ಕಿಂತಲೂ ಅವು ಇಂದು ಬಹಳ ಮುಖ್ಯವಾಗಿವೆ ಅಥವಾ ಇನ್ನೂ ಹೆಚ್ಚಿರಬಹುದು.
“ಜಗತ್ತಿನ ನನ್ನ ಸಹೋದರ ಸಹೋದರಿಯರೇ: ಭಗವಂತನು ನಮ್ಮ ತಂದೆ ಮತ್ತು ಅವನು ಒಬ್ಬನೇ ಆಗಿದ್ದಾನೆ ಎಂಬುದನ್ನು ನೆನಪಿನಲ್ಲಿಡಿ. ನಾವೆಲ್ಲರೂ ಅವನ ಮಕ್ಕಳಾಗಿದ್ದೇವೆ. ಹಾಗಾಗಿ, ಪ್ರತಿಯೊಬ್ಬರೂ ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಜಗತ್ತಿನ ಸಂಯುಕ್ತ ರಾಷ್ಟ್ರಗಳ ಆದರ್ಶ ನಾಗರಿಕರಾಗಲು ನಾವೆಲ್ಲರೂ ಒಬ್ಬರಿಗೆ ಒಬ್ಬರು ಸಹಾಯ ಮಾಡಲು ಸೃಜನಶೀಲ ಮಾರ್ಗಗಳನ್ನು ಆರಿಸಿಕೊಳ್ಳಬೇಕು. ಒಂದು ಸಾವಿರ ವ್ಯಕ್ತಿಗಳಿರುವ ಒಂದು ಸಮುದಾಯದಲ್ಲಿ, ಪ್ರತಿಯೊಬ್ಬ ವ್ಯಕ್ತಿಯೂ ಅಕ್ರಮ ಲಾಭ, ಬಡಿದಾಟ ಮತ್ತು ವಂಚನೆಯಿಂದ ಇತರರ ವೆಚ್ಚದಲ್ಲಿ ತನ್ನನ್ನು ತಾನು ಶ್ರೀಮಂತನನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದರೆ, ಪ್ರತಿಯೊಬ್ಬ ವ್ಯಕ್ತಿಯೂ ಒಂಬೈನೂರ ತೊಂಬತ್ತೊಂಬತ್ತು ಶತ್ರುಗಳನ್ನು ಹೊಂದಿರುತ್ತಾನೆ; ಅದೇ, ಪ್ರತಿಯೊಬ್ಬ ವ್ಯಕ್ತಿಯೂ ಇತರರಿಗೆ ಸಹಕಾರ ತೋರಿದರೆ–ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಮತ್ತು ಆಧ್ಯಾತ್ಮಿಕವಾಗಿ- ಪ್ರತಿಯೊಬ್ಬನೂ ಒಂಬೈನೂರ ತೊಂಬತ್ತೊಂಬತ್ತು ಮಿತ್ರರನ್ನು ಹೊಂದುತ್ತಾನೆ. ಎಲ್ಲ ರಾಷ್ಟ್ರಗಳೂ ಪ್ರೇಮದಿಂದ ಒಂದಕ್ಕೊಂದು ಸಹಾಯ ಮಾಡಿದರೆ, ಇಡೀ ಜಗತ್ತು ಎಲ್ಲರ ಯೋಗಕ್ಷೇಮವನ್ನು ಪ್ರೋತ್ಸಾಹಿಸುವ ಸಾಕಷ್ಟು ಅವಕಾಶಗಳನ್ನು ಹೊಂದಿ ಶಾಂತಿಯಿಂದ ಜೀವಿಸುತ್ತದೆ…
“ರೇಡಿಯೋ, ದೂರದರ್ಶನ ಮತ್ತು ವಿಮಾನ ಪ್ರಯಾಣದಂತಹ ಮಾಧ್ಯಮಗಳು ನಮ್ಮೆಲ್ಲರನ್ನೂ ಹಿಂದೆಂದಿಗಿಂತಲೂ ಒಗ್ಗೂಡಿಸಿದೆ. ಇದು ಇನ್ನು ಮುಂದೆ ಏಷ್ಯನ್ನರಿಗೆ ಏಷ್ಯಾವಲ್ಲ, ಯುರೋಪಿಯನ್ನರಿಗೆ ಯುರೋಪಲ್ಲ, ಅಮೆರಿಕನ್ನರಿಗೆ ಅಮೆರಿಕವಲ್ಲ, ಇತ್ಯಾದಿ, ಬದಲಾಗಿ ಭಗವಂತನ ಅಧೀನದಲ್ಲಿರುವ ಜಗತ್ತಿನ ಸಂಯುಕ್ತ ರಾಷ್ಟ್ರಗಳು, ಅದರಲ್ಲಿ ಪ್ರತಿಯೊಬ್ಬ ಪ್ರಜೆಯೂ ಶರೀರ, ಮನಸ್ಸು ಮತ್ತು ಆತ್ಮಗಳ ಸಂತೃಪ್ತಿಗೆ ಎಲ್ಲ ಅವಕಾಶವನ್ನೂ ಹೊಂದಿರುವ ವಿಶ್ವದ ಒಬ್ಬ ಆದರ್ಶ ನಾಗರಿಕನಾಗಬಹುದು ಎಂಬುದನ್ನು ನಾವು ಆವಶ್ಯಕವಾಗಿ ತಿಳಿದುಕೊಳ್ಳಲೇಬೇಕು.
“ಅದೇ ಪ್ರಪಂಚಕ್ಕೆ ನನ್ನ ಸಂದೇಶ ಮತ್ತು ಪ್ರಾರ್ಥನೆ.”
ಶರೀರ, ಮನಸ್ಸು ಮತ್ತು ಆತ್ಮದಲ್ಲಿ ಆದರ್ಶ ವಿಶ್ವ ಪ್ರಜೆಗಳಾಗಿ ಬೆಳೆಯಲು ಪರಸ್ಪರ ಸಹಾಯ ಮಾಡುವಂತಹ ಅತ್ಯಂತ ಆಳವಾದ “ರಚನಾತ್ಮಕ ಮಾರ್ಗಗಳು” ಯೋಗದ ಸಾರ್ವತ್ರಿಕ ವಿಜ್ಞಾನದಲ್ಲಿ ಕಂಡುಬರುತ್ತವೆ.