ಆತ್ಮೀಯರೇ,
ಗುರುಪೂರ್ಣಿಮೆಯು ಒಂದು ಮಂಗಳಕರ ದಿನವಾಗಿದ್ದು, ಜಗತ್ತಿನಾದ್ಯಂತ ನಮ್ಮ ಆತ್ಮಗಳ ಸಂಜಾತ ಪ್ರಕಾಶವನ್ನು ಮರೆಮಾಡುವ ಮಾಯೆಯ ‘ಅಂಧಕಾರವನ್ನು ದೂರ ಮಾಡುವ’ ಗುರುವಿಗೆ ಸಲ್ಲಿಸುವ ಕೃತಜ್ಞತಾ ನಮನದ ಸಂಪ್ರದಾಯವನ್ನು, ಭಾರತದಲ್ಲಿ ಹಾಗೂ ವಿಶ್ವದಾದ್ಯಂತ ಅನೇಕ ಆತ್ಮಗಳು ಒಟ್ಟಾಗಿ, ಆಚರಿಸುವ ಶ್ರೇಯಸ್ಕರ ದಿನವಾಗಿದೆ. ನಾವು ನಮ್ಮ ಪ್ರೀತಿಯ ಗುರು ಶ್ರೀ ಶ್ರೀ ಪರಮಹಂಸ ಯೋಗಾನಂದರಿಗೆ, ಅವರು ನಮ್ಮ ಜೀವನಗಳಲ್ಲಿ ವರ್ಷಿಸುವ ಅಗಣಿತ ಆಶೀರ್ವಾದಗಳಿಗಾಗಿ ನಮ್ಮ ಕೃತಜ್ಞತೆಗಳನ್ನು ಪ್ರಕಟಿಸೋಣ; ಹಾಗೂ ಅವರು ನಮಗೆ ಮಾರ್ಗದರ್ಶನ ಮಾಡಿರುವ ಸಾಧನೆಯನ್ನು ಮತ್ತಷ್ಟು ಉತ್ಸಾಹಪೂರ್ವಕವಾಗಿ ಅನುಸರಣೆ ಮಾಡುವ ನಮ್ಮ ತೀರ್ಮಾನವನ್ನು ನವೀಕರಿಸಲು ನಿರ್ಧರಿಸೋಣ.
ಗುರೂಜಿಯವರ ಸರ್ವವ್ಯಾಪಿ ಪ್ರಜ್ಞೆಯಲ್ಲಿ ಅವರ ಮತ್ತು ನಮ್ಮ ನಡುವೆ ಯಾವುದೇ ಅಡೆತಡೆಗಳಿರುವುದಿಲ್ಲ. ಅವರು ತಮ್ಮ ಶಿಷ್ಯರಿಗೆ, ತಮ್ಮ ಭೌತಿಕ ಶರೀರವನ್ನು ತ್ಯಜಿಸಿದ ನಂತರವೂ, ತಮ್ಮ ನಿತ್ಯ ಕಾಳಜಿ ಹಾಗೂ ಮಾರ್ಗದರ್ಶನ ನೀಡುವ ಭರವಸೆ ನೀಡಿರುವರು:”ನಾನು ಸದಾ ಕಾಲ ನಿಮ್ಮಲ್ಲಿ ಪ್ರತಿಯೊಬ್ಬರನ್ನೂ ವೀಕ್ಷಿಸುತ್ತಿರುತ್ತೇನೆ. ಮತ್ತು ಯಾವ ನಿಜವಾದ ಭಕ್ತನು ತನ್ನ ಆತ್ಮದ ಅಂತರಾಳದ ಮೌನದಲ್ಲಿ, ನನ್ನ ಬಗ್ಗೆ ಯೋಚಿಸುವನೋ, ಆಗ ಅವನು ನಾನು ಸಮೀಪದಲ್ಲಿಯೇ ಇರುವೆನೆಂಬುದನ್ನು ಅರಿಯುತ್ತಾನೆ.” ಅವರ ಪಾಠಗಳನ್ನು ಮತ್ತು ಇತರ ಲೇಖನಗಳನ್ನು,”ಅವರು ನನಗೆ ಹೇಳುತ್ತಿದ್ದಾರೆ” ಎಂಬ ಭಾವನೆಯಿಂದ ಅಧ್ಯಯನ ಮಾಡಿದಲ್ಲಿ, ಪರಿವರ್ತನಾಶೀಲ ಶಕ್ತಿಯಿಂದ ಉಕ್ಕಿಹರಿಯುವ ಅವರ ಭಗವತ್ಪ್ರಜ್ಞೆಯ ನುಡಿಗಳು, ನಿಮ್ಮೆಡೆಗೆ ಜೀವತುಂಬಿ ಬರುತ್ತವೆ. ನೀವೇನಾದರೂ ಒಂದು ಸಮಸ್ಯೆಯನ್ನು ಬಗೆಹರಿಸಬೇಕಾಗಿದ್ದಲ್ಲಿ, ಅವರ ಶಾಂತಿಯ ಪ್ರಭಾವಳಿಯಿಂದ ನಿಮ್ಮನ್ನು ಆವರಿಸಿಕೊಂಡು ಮಾರ್ಗದರ್ಶನಕ್ಕಾಗಿ ಬೇಡಿಕೊಳ್ಳಿ. ಆಗ ಅವರು ನಿಮ್ಮ ಹಾದಿಯನ್ನು ಮತ್ತಷ್ಟು ಸ್ಪಷ್ಟವಾಗಿ ಕಂಡುಕೊಳ್ಳಲು ಸಹಾಯ ಮಾಡುತ್ತಾರೆ. ನೀವೇನಾದರೂ ಒಂದು ತಪ್ಪು ಮಾಡಿದ್ದರೆ ಅಥವಾ ಅಹಿತಕರ ಸಂದರ್ಭದಲ್ಲಿ, ಆಂತರ್ಯದಲ್ಲಿಯೇ ಅವರನ್ನು ಪ್ರಶ್ನಿಸಿ,”ನಾನು ಏನನ್ನು ಕಲಿಯಬೇಕೆಂದು ನೀವು ಇಚ್ಚಿಸುವಿರಿ?” ಅವರ ಮಾರ್ಗದರ್ಶನವು, ತೆರೆದ ಮನಸ್ಸಿನಿಂದ ಒಪ್ಪಿಕೊಂಡಾಗ, ನಿಮ್ಮ ಆತ್ಮದ ಉನ್ನತಿಯನ್ನು ತ್ವರಿತಗೊಳಿಸಲು ಅಂತರಾರ್ಥಗಳ ಅಮೂಲ್ಯ ರತ್ನಗಳನ್ನು ತಂದು ಕೊಡುತ್ತದೆ.
ಧ್ಯಾನವು ಗುರುವಿನೊಡನೆ ಅತ್ಯಂತ ಆಳವಾದ ತಾದಾತ್ಮ್ಯವನ್ನು ಉಂಟುಮಾಡುತ್ತದೆ. ಧ್ಯಾನ ಮಾಡಲು ಗುರೂಜಿಯವರ ಚಿತ್ರಪಟದ ಮುಂದೆ ಕುಳಿತೊಡನೆ, ನಿಮ್ಮನ್ನು ನೀವು ಅವರ ಜೀವಂತ ಉಪಸ್ಥಿತಿಯಲ್ಲಿ ನೆಲೆಗೊಳಿಸಿಕೊಳ್ಳಿ. ಅವರಿಂದ, ಅವರ ಉನ್ನತ ಪ್ರಜ್ಞೆಯ ಶಕ್ತಿ ಮತ್ತು ಭಕ್ತಿಯು, ನಿಮ್ಮ ಪರಿಶ್ರಮಗಳನ್ನು ಬಲಪಡಿಸಬಲ್ಲವು, ಪವಿತ್ರವಾದ ವೈ ಎಸ್ ಎಸ್ /ಎಸ್ಆರ್‌ಎಫ್ ತಂತ್ರಗಳ ಅಭ್ಯಾಸದಿಂದ ಅವರ ಆಶೀರ್ವಾದವು ಒಳಹೊಕ್ಕು ವ್ಯಾಪಿಸಿರುವುದರಿಂದ, ನಿಮ್ಮ ಅಂತರಂಗದ ಚಂಚಲತೆಯು ಕ್ರಮೇಣವಾಗಿ ಮರೆಯಾಗುತ್ತದೆ. ಮತ್ತು ನೀವು ನಿಮ್ಮೊಳಗೆ ದೈವಿಕ ಗುಣಗಳನ್ನು ಹೊರ ತರಲು, ಎಂದೆಂದಿಗೂ ಪ್ರೋತ್ಸಾಹಿಸುವ ಮತ್ತು ಸಹಾಯ ಮಾಡುವ ಅವರ ಅಮರ ಪ್ರೇಮದ ಆಲಿಂಗನವನ್ನು ಅತ್ಯಂತ ಮೂರ್ತ ಭಾವನೆಯಾಗಿ ನಿಮ್ಮ ಆತ್ಮದ ಮೌನ ಮಂದಿರದಲ್ಲಿ ಅನುಭವಿಸುವಿರಿ.
ಭಗವಂತನ ಮತ್ತು ಗುರುದೇವರ ಪ್ರೇಮ ಹಾಗೂ ಆಶೀರ್ವಾದಗಳು ನಿಮ್ಮನ್ನು ಸದಾ ಆವರಿಸಲಿ,
ಸ್ವಾಮಿ ಚಿದಾನಂದ ಗಿರಿ
ಕಾಪಿರೈಟ್ © 2019 ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.