ಧ್ಯಾನದ ಉದ್ಯಾನಗಳು – ಯೋಗದಾ ಸತ್ಸಂಗ ಶಾಖಾ ಮಠ, ರಾಂಚಿ

ಮೌನ ದ್ವಾರಗಳ ಮೂಲಕ ಅರಿವು ಹಾಗೂ ಶಾಂತಿಯ ಉಪಶಮನಕಾರಿ ಸೂರ್ಯನು ನಿನ್ನ ಮೇಲೆ ಬೆಳಕು ಚೆಲ್ಲುತ್ತಾನೆ.

ಪರಮಹಂಸ ಯೋಗಾನಂದ

ಆಶ್ರಮದ ಮೈದಾನಗಳು ಅನೇಕ ಸುಂದರವಾಗಿ ವಿನ್ಯಾಸಗೊಳಿಸಿದ ಉದ್ಯಾನಗಳಿಂದ ಚಿಮುಕಿಸಿದಂತಿವೆ. ಅವು ಸಂಪದ್ಭರಿತ ವೈವಿಧ್ಯಮಯ ಗಿಡಗಳು ಹಾಗೂ ಮರಗಳಿಗೆ ನೆಲೆಯಾಗಿವೆ. ನೆರಳನ್ನೀಯುವ ಮಾವಿನ ತೋಪುಗಳು, ಹಲಸಿನ ಮರಗಳ ದಾರಿಗಳು, ನಿತ್ಯ ಹರಿದ್ವರ್ಣದಿಂದ ಮನಸೆಳೆಯುವ ಲಿಚಿ ಮರಗಳು ಮತ್ತು ಸಧಬಿರುಚಿಯಿಂದ ಅಲ್ಲಲ್ಲಿ ಚದುರಿದಂತಿರುವ ಅಲಂಕಾರಿಕ ಬೊಂಬಿನ ಪ್ರದೇಶಗಳು ಎಲ್ಲವೂ ಸೇರಿ ಒಂದು ಆಧ್ಯಾತ್ಮಿಕ ಓಯಸಿಸ್‌ ಅನ್ನು ಸೃಷ್ಟಿಸಿ, ಲೌಕಿಕತೆಯಿಂದ ಬಳಲಿದ ಆತ್ಮಗಳನ್ನು ಶಾಂತಿ ಹಾಗೂ ಆನಂದದ ಅಮೃತವನ್ನು ಸವಿಯಲು ಕೂಗಿ ಕರೆಯುತ್ತವೆ. ಇಲ್ಲಿ ಒಬ್ಬರಿಗೆ ಪ್ರಪಂಚದ ಆಸಕ್ತಿಯನ್ನು ದೂರ ಮಾಡಿ ಶರೀರ, ಮನಸ್ಸು ಮತ್ತು ಚೇತನವನ್ನು ವಿಶ್ರಾಂತಿಗೊಳಿಸುವುದು ಸುಲಭವೆಂಬಂತೆ ಭಾಸವಾಗುತ್ತದೆ. ಒಬ್ಬರು ಕುಳಿತು ಧ್ಯಾನ ಮಾಡುತ್ತಾ ಆಂತರ್ಯದೊಳಗೆ ಹೋಗಲು ಅಥವಾ ಹಾಗೇ ಸುಮ್ಮನೆ ಕುಳಿತುಕೊಂಡು ಈ ಪವಿತ್ರ ವಾತಾವರಣದ ಶಾಂತಿ ಹಾಗೂ ಪ್ರಶಾಂತತೆಯಲ್ಲಿ ಮುಳುಗಲು ಹಲವಾರು ಬೆಂಚ್‌ಗಳನ್ನು ಹಾಕಲಾಗಿದೆ.

ಈ ಪವಿತ್ರ ಮೈದಾನಗಳಲ್ಲಿ ನಡೆದಾಡಿದ ಪರಮಹಂಸಜಿ ಮತ್ತು ಅನೇಕ ದಿವ್ಯ ಪುರುಷರು ಬಿಟ್ಟುಹೋದ ದಿವ್ಯ ಸ್ಪಂದನಗಳು, ಯಾರೆಲ್ಲ ಪ್ರಶಾಂತತೆಯನ್ನು ಅರಸುತ್ತಾ ಅಥವಾ ಭಗವಂತನನ್ನು ಧ್ಯಾನಿಸಲು ಆಶ್ರಮದ ಆವರಣವನ್ನು ಪ್ರವೇಶಿಸುತ್ತಾರೋ ಅವರೆಲ್ಲರನ್ನೂ ಉದ್ಧರಿಸುತ್ತವೆ.

ಈ ದಿವ್ಯ ಧ್ಯಾನದ ಮೈದಾನಗಳಲ್ಲಿ ಅನೇಕ ಪ್ರಶಾಂತ ಗಜೆಬೋಗಳು, ವಿವಿಕ್ತ ಪ್ರದೇಶಗಳು ಮತ್ತು ಆವರಣಗಳಿವೆ, ಅಲ್ಲಿ ಒಬ್ಬರು ಶಾಂತಿಯಿಂದ ಧ್ಯಾನ ಮಾಡಬಹುದು. ಒಂದು ಆಹ್ಲಾದಕರ ವಾತಾವರಣವನ್ನು ಉಂಟುಮಾಡಲು ಹೂಗಿಡಗಳು, ಪೊದೆಗಳು ಮತ್ತು ಸಸ್ಯಗಳನ್ನು ಶ್ರದ್ಧೆಯಿಂದ ನೋಡಿಕೊಳ್ಳಲಾಗಿದೆ. ಪ್ರಧಾನ ಕಟ್ಟಡ ಮತ್ತು ಧ್ಯಾನ ಮಂದಿರದ ಮುಂದೆ ಹಾಗೂ ಸ್ಮೃತಿ ಮಂದಿರದ ಸುತ್ತಲೂ ವಿಸ್ತೃತವಾಗಿ ಹರಡಿರುವ ಸೊಂಪಾದ ಗಾಢ ಹಸುರಿನ ಹುಲ್ಲು ಮೈದಾನಗಳಿವೆ. ವಿವಿಧ ರೀತಿಯ ಅಪರೂಪದ ಲಿಲಿ ಹೂಗಳು ಮತ್ತು ವಿವಿಧ ಬಣ್ಣಗಳ ಮೀನುಗಳಿಂದ ತುಂಬಿದ ಕೆಲವು ನೀರಿನ ತಾಣಗಳಿವೆ. ಈ ಎಲ್ಲ ವಿನ್ಯಾಸಗಳ ಅಂಶಗಳು ಈ ದಿವ್ಯ ಮೈದಾನಗಳಲ್ಲಿ ಪ್ರತಿಧ್ವನಿಸುವ ಶಾಂತಿ ಹಾಗೂ ಪ್ರಶಾಂತತೆಯ ಪ್ರಭೆಯನ್ನು ಹೆಚ್ಚಿಸುತ್ತವೆ.