ಪ್ರಧಾನ ಕಟ್ಟಡ — ಯೋಗದಾ ಸತ್ಸಂಗ ಶಾಖಾ ಮಠ, ರಾಂಚಿ

ತಮ್ಮ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರಜೀಯವರಿಂದ ಉತ್ತೇಜನ ಪಡೆದ ಪರಮಹಂಸ ಯೋಗಾನಂದಜಿಯವರು, ಯುವ ಶಿಷ್ಯರ ಆಧ್ಯಾತ್ಮಿಕ ತರಬೇತಿಯನ್ನು ವ್ಯವಸ್ಥಿತಗೊಳಿಸಲು ಪ್ರಾರಂಭಿಸಿದರು ಮತ್ತು ಅದರೊಂದಿಗೆ ಅವರಿಗೆ ಮೂಲಭೂತ ಶಿಕ್ಷಣವನ್ನೂ ಒದಗಿಸಿದರು. ಕಾಸಿಂಬಜಾರ್‌ನ ಮಹಾರಾಜ, ಸರ್ ಮಣೀಂದ್ರ ಚಂದ್ರ ನಂದಿಯವರ ಉತ್ಸಾಹಭರಿತ ಪ್ರೋತ್ಸಾಹದೊಂದಿಗೆ, ಮಾರ್ಚ್ 22, 1917 ರಂದು ಪಶ್ಚಿಮ ಬಂಗಾಳದ ದಿಹಿಕಾದಲ್ಲಿ ಯೋಗದಾ ಸತ್ಸಂಗ ಬ್ರಹ್ಮಚರ್ಯ ವಿದ್ಯಾಲಯವನ್ನು ಕೇವಲ ಏಳು ಹುಡುಗರೊಂದಿಗೆ ಸ್ಥಾಪಿಸುವುದರೊಂದಿಗೆ ಔಪಚಾರಿಕವಾಗಿ ಸಾಂಸ್ಥಿಕ ಪ್ರಾರಂಭವನ್ನು ಮಾಡಲಾಯಿತು.

ಒಂದು ವರ್ಷದ ನಂತರ, ದಿಹಿಕಾ ನಿವೇಶನ ಸಾಲದಾಗುವಷ್ಟು ತ್ವರಿತವಾಗಿ ವರ್ಧಿಸಿದ್ದ ಶಾಲೆಯ ಯಶಸ್ಸಿನಿಂದ ಪ್ರೇರಿತರಾದ ಮಹಾರಾಜರು, ಜಾರ್ಖಂಡ್‌ನ ರಾಂಚಿಯಲ್ಲಿದ್ದ ತಮ್ಮ ಬೇಸಿಗೆ ಅರಮನೆಯನ್ನು ಮತ್ತು ಅದರ 25 ಎಕರೆ ಭೂಮಿಯನ್ನು ಗೌರವಯುತವಾಗಿ ನೀಡಿದರು, ಅಲ್ಲಿಗೆ ಶಾಲೆಯನ್ನು 1918 ರಲ್ಲಿ ಸ್ಥಳಾಂತರಿಸಲಾಯಿತು.

YSS Ranchi Ashram main building

1935 ರಲ್ಲಿ, ಪರಮಹಂಸಜಿ ಒಂದು ವರ್ಷದ ಅವಧಿಯ ಭೇಟಿಗಾಗಿ ಭಾರತಕ್ಕೆ ಬಂದಾಗ, ಅವರು ಈ ಆಸ್ತಿಯನ್ನು ಮಹಾರಾಜರ ಮಗ ಶ್ರೀ ಶಿರೀಶ್ ಚಂದ್ರ ನಂದಿಯವರಿಂದ ಖರೀದಿಸಿದರು. ಖರೀದಿಸಲು ಬೇಕಾದ ಬಂಡವಾಳವು ಅಮೆರಿಕದ ಅವರ ಶಿಷ್ಯರಿಂದ, ಅವರ ತಂದೆ ಶ್ರೀ ಭಗವತಿ ಚರಣ್ ಘೋಷರಿಂದ, ಹಾಗೂ ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಅವರು ನೀಡಿದ ಉಪನ್ಯಾಸಗಳಿಂದ ಉಳಿಸಿದ ಹಣದಿಂದ ಬಂದಿತು. ಪರಮಹಂಸಜಿಯವರ ಪ್ರೀತಿಯ ಉದಾತ್ತ ಶಿಷ್ಯ ಮತ್ತು ವೈಎಸ್ಎಸ್/ಎಸ್ಆರ್‌ಎಫ್‌ನ ಎರಡನೇ ಅಧ್ಯಕ್ಷರಾದ ರಾಜರ್ಷಿ ಜನಕಾನಂದ ಅವರೂ ಉದಾರ ದೇಣಿಗೆ ನೀಡಿದರು.

ಯೋಗದಾ ಸತ್ಸಂಗ ಶಾಖಾ ಮಠ, ರಾಂಚಿಯ ಪ್ರಧಾನ ಕಟ್ಟಡದ ಕಂಬದ ಮೇಲೆ, ರಾಂಚಿ ಶಾಲೆಯನ್ನು ದೃಢವಾಗಿ ಸ್ಥಾಪಿಸಲು ಸಹಾಯ ಮಾಡಿದ ಎಲ್ಲರ ಹೆಸರನ್ನು ಕೆತ್ತಲಾಗಿದೆ. ಯೋಗಾನಂದಜಿಯವರು ತಮ್ಮ ತಂದೆಯ ಕೊಡುಗೆಯ ಬಗ್ಗೆ ವಿರಳವಾಗಿ ಮಾತನಾಡಿದ್ದರೂ, ಸಂಸ್ಥೆಯ ಸ್ಥಾಪನೆಯಲ್ಲಿ ಅವರ ಸಹಾಯವು ನಿರ್ಣಾಯಕವಾಗಿತ್ತು.

ಕಟ್ಟಡದ ಗಮನಾರ್ಹ ನವೀಕರಣವನ್ನು 1967 ರಲ್ಲಿ ಸ್ವಾಮಿ ಶ್ಯಾಮಾನಂದ ಗಿರಿ ಅವರು ಕೈಗೊಂಡರು. 1979 ರ ಉತ್ತರಾರ್ಧದಲ್ಲಿ, ಕಾಂಕ್ರೀಟ್ ಮೇಲ್ಛಾವಣಿಯನ್ನು ನಿರ್ಮಿಸಲಾಯಿತು ಮತ್ತು ಮುಂದಿನ ತಲೆಮಾರಿನವರಿಗಾಗಿ ಕಟ್ಟಡವನ್ನು ಪುನಃಸ್ಥಾಪಿಸಲು ಮತ್ತು ರಕ್ಷಿಸಲು ಅಗತ್ಯವಾದ ದುರಸ್ತಿಗಳನ್ನು ಕೈಗೊಳ್ಳಲಾಯಿತು. ಇಳಿಜಾರಿನ ಮೇಲ್ಛಾವಣಿಯನ್ನು ಹೊಂದಿರುವ ಕಟ್ಟಡದ ಮೂಲ ವಾಸ್ತುಶಿಲ್ಪದ ವಿನ್ಯಾಸವನ್ನು ಉಳಿಸಿಕೊಳ್ಳಲಾಯಿತು, ಹಾಗೆಯೇ ಪುರಾತನ ಮರದ ತೊಲೆಗಳನ್ನು ಈಗಲೂ ಕೂಡ ಕಾಣಬಹುದಾಗಿದೆ.

ಆರಂಭಿಕ ವರ್ಷಗಳಲ್ಲಿ ಶಾಲೆಯ ಪ್ರಾರಂಭ ಮತ್ತು ಬೆಳವಣಿಗೆ

ಆರಂಭಿಕ ವರ್ಷಗಳಲ್ಲಿ, ಈ ಕಟ್ಟಡವು ನೂರು ವಿದ್ಯಾರ್ಥಿಗಳ ಸಾಮರ್ಥ್ಯವಿದ್ದ, ಬಾಲಕರ ವಸತಿ ಶಾಲೆಯನ್ನು ಹೊಂದಿತ್ತು. ಪರಮಹಂಸ ಯೋಗಾನಂದರು ಶಾಲೆಯ ಶೈಕ್ಷಣಿಕ ಕಾರ್ಯಕ್ರಮವನ್ನು ರೂಪಿಸಿದರು, ಇದನ್ನು ವಿದ್ಯಾರ್ಥಿಗಳ ದೇಹ, ಮನಸ್ಸು ಮತ್ತು ಆತ್ಮದ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡುವಂತೆ ವಿನ್ಯಾಸಗೊಳಿಸಲಾಗಿತ್ತು. ಇದು ಕೃಷಿ, ಕೈಗಾರಿಕೆ, ವಾಣಿಜ್ಯ ಮತ್ತು ಶೈಕ್ಷಣಿಕ ವಿಷಯಗಳನ್ನು ಒಳಗೊಂಡಿತ್ತು. ಬಹುಕಾಲದಿಂದ ಮಾನ್ಯ ಮಾಡಲಾದ ಋಷಿಗಳ ಶೈಕ್ಷಣಿಕ ಆದರ್ಶಗಳನ್ನು ಅನುಸರಿಸಿ, ಪರಮಹಂಸಜಿ ಹೆಚ್ಚಿನ ತರಗತಿಗಳನ್ನು ಹೊರಾಂಗಣದಲ್ಲಿ ನಡೆಸಲು ವ್ಯವಸ್ಥೆ ಮಾಡಿದ್ದರು.

ರಾಂಚಿಯಲ್ಲಿನ ಅನನ್ಯ ವೈಶಿಷ್ಟ್ಯವಿದ್ದುದು, ವಿದ್ಯಾರ್ಥಿಗಳ ಕ್ರಿಯಾ ಯೋಗದ ದೀಕ್ಷೆ. ಆಧ್ಯಾತ್ಮಿಕ ವ್ಯಾಯಾಮಗಳ ನಿಯತ ಅಭ್ಯಾಸಗಳು, ಗೀತಾ ಶ್ಲೋಕಗಳ ಪಠಣ ಮತ್ತು ಸರಳತೆ, ಸ್ವಾರ್ಥ-ತ್ಯಾಗ, ಗೌರವಾರ್ಹ ಗುಣ ಮತ್ತು ಸತ್ಯ, ಈ ಸದ್ಗುಣಗಳ ಬೋಧನೆಗಳು ದೈನಂದಿನ ವೇಳಾಪಟ್ಟಿಯ ಅವಿಭಾಜ್ಯ ಅಂಗವಾಗಿದ್ದವು.

ತಮ್ಮ ಆಡಳಿತಾತ್ಮಕ ಮತ್ತು ಬೋಧನಾ ಜವಾಬ್ದಾರಿಗಳ ಜೊತೆಗೆ, ಪರಮಹಂಸಜಿ ವಿದ್ಯಾರ್ಥಿಗಳ ಜೀವನದಲ್ಲಿ ಪೋಷಕರ ಪಾತ್ರವನ್ನು ವಹಿಸಿದರು. ಯೋಗದಾ ಸತ್ಸಂಗ ಬ್ರಹ್ಮಚರ್ಯ ವಿದ್ಯಾಲಯದ ವಿದ್ಯಾರ್ಥಿ ಶ್ರೀ ಎಸ್.ಕೆ.ಡಿ. ಬ್ಯಾನರ್ಜಿ ಅರವತ್ತು ವರ್ಷಗಳ ನಂತರ ಭಾವುಕರಾಗಿ ಹೀಗೆ ನೆನಪಿಸಿಕೊಂಡರು: “ಪರಮಹಂಸಜಿ ನಮಗೆ ತಂದೆಯಾಗಿದ್ದರು ಮತ್ತು ನಾವು ಅವರ ನಿಷ್ಠಾವಂತ ಪುತ್ರರಾಗಿದ್ದೆವು. ಕೇವಲ ಅವರ ಸನಿಹದಲ್ಲಿ ಬದುಕುವುದೇ ಆಧ್ಯಾತ್ಮಿಕ ಶಿಕ್ಷಣವಾಗಿತ್ತು. ಪರಮಹಂಸಜಿ ದೈವೀ ಪರಿಪೂರ್ಣತೆಯ ಗುರಿಯತ್ತ ನಮ್ಮನ್ನು ಪ್ರೇರೇಪಿಸಿದರು.”

1920ರಲ್ಲಿ ಪಶ್ಚಿಮಕ್ಕೆ ಹೊರಟು ನಿಂತಾಗ ಪರಮಹಂಸಜಿಯವರು ಮಕ್ಕಳ ಜವಾಬ್ದಾರಿಯನ್ನು ಶಾಲೆಯ ಇತರ ಶಿಕ್ಷಕರಿಗೆ ವಹಿಸಿದರು.

1968ರ ಹೊತ್ತಿಗೆ, ವೈಎಸ್ಎಸ್ ಪ್ರೌಢಶಾಲೆಗಳಲ್ಲಿ ಸುಮಾರು 1,400 ಬಾಲಕರು ಮತ್ತು 400 ಬಾಲಕಿಯರು ಮತ್ತು ಅದರ ಎರಡು ಕಾಲೇಜುಗಳಲ್ಲಿ ಸುಮಾರು 800 ವಿದ್ಯಾರ್ಥಿಗಳು ದಾಖಲಾಗಿದ್ದರು. ಅದರ ಕ್ಷಿಪ್ರ ವಿಸ್ತರಣೆಯಿಂದಾಗಿ, ಆಶ್ರಮ ಆವರಣದಿಂದ ಹೊರಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಳಾಂತರಿಸುವುದು ಅನಿವಾರ್ಯವಾಯಿತು. 1981ರಲ್ಲಿ, ಬಾಲಕರ ಶಾಲೆ ಮತ್ತು ಕಾಲೇಜನ್ನು ಆಶ್ರಮದಿಂದ ಸುಮಾರು 11 ಕಿಮೀ ದೂರದಲ್ಲಿರುವ ಜಗನ್ನಾಥಪುರ ಎಂಬ ಹೊಸ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಆಧ್ಯಾತ್ಮಿಕ ಸಂಸ್ಥೆಯ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಪ್ರಧಾನ ಕಟ್ಟಡವನ್ನು ನಂತರ ಕಚೇರಿ ಸ್ಥಳವಾಗಿ ಬಳಸಲಾಯಿತು.

ಪ್ರಧಾನ ಕಟ್ಟಡವು ಹಲವಾರು ಸಣ್ಣ ಕೊಠಡಿಗಳು ಮತ್ತು ಸಭಾಂಗಣಗಳನ್ನು ಒಳಗೊಂಡಿದೆ — ಒಂದು ಸ್ವಾಗತ ಕಕ್ಷೆ ಮತ್ತು ಪುಸ್ತಕ ಕೊಠಡಿ, ಮಾತೃ ಮಂದಿರ, ಪರಮಹಂಸ ಯೋಗಾನಂದರ ಕೊಠಡಿ, ಮತ್ತು ಶತಮಾನೋತ್ಸವದ ಫೋಟೋ ಪ್ರದರ್ಶನದ ಸಭಾಂಗಣ.

ಸ್ವಾಗತ ಕಕ್ಷೆ ಮತ್ತು ಪುಸ್ತಕ ಕೊಠಡಿ

ಹೊರಗಿನ ವರಾಂಡವು ಒಂದು ದೊಡ್ಡ ಸಭಾಂಗಣಕ್ಕೆ ತೆರೆದುಕೊಳ್ಳುತ್ತದೆ, ಇದು ಆಶ್ರಮಕ್ಕೆ ಬರುವ ಭಕ್ತರು ಮತ್ತು ಇತರ ಸಂದರ್ಶಕರಿಗೆ ಸ್ವಾಗತ ಕಕ್ಷೆಯಾಗಿ ಕಾರ್ಯನಿರ್ವಹಿಸುತ್ತದೆ. ವೈಎಸ್ಎಸ್ ನ ಎಲ್ಲಾ ಪ್ರಕಟಣೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಮತ್ತು ಪುಸ್ತಕ ಮಾರಾಟದ ಮುಂಗಟ್ಟು ಸಹ ಇಲ್ಲಿ ನೆಲೆಗೊಂಡಿದೆ.

ಮಾತೃ ಮಂದಿರ

ವರಾಂಡಾದ ಎಡಭಾಗದಲ್ಲಿರುವ ದೊಡ್ಡ ಕಾರ್ಪೆಟ್ ಸಭಾಂಗಣವೇ ಮಾತೃ ಮಂದಿರ. ವೈಎಸ್‌ಎಸ್/ಎಸ್‌ಆರ್‌ಎಫ್‌ನ ಮೂರನೇ ಅಧ್ಯಕ್ಷರು ಮತ್ತು ಸಂಘಮಾತಾ, ಶ್ರೀ ಶ್ರೀ ದಯಾ ಮಾತಾ ಅವರಿಂದಾಗಿ ಸಭಾಂಗಣವು ಈ ಪವಿತ್ರ ಹೆಸರನ್ನು ಪಡೆದುಕೊಂಡಿದೆ. ಒಂದು ಸಂದರ್ಭದಲ್ಲಿ, ಶ್ರೀ ದಯಾ ಮಾತಾಜಿಯವರು ಸತ್ಸಂಗದ ಸಮಯದಲ್ಲಿ, ಒಂದು ದಿವಾನದ ಮೇಲೆ ಕುಳಿತಾಗ ‘ಸಮಾಧಿ’ ಸ್ಥಿತಿಗೆ ಜಾರಿದ್ದರು. ಅವರ ಚಿತ್ರಗಳು ಮತ್ತು ಈ ಸಭಾಂಗಣದಲ್ಲಿ ಇರಿಸಲಾಗಿರುವ ಎರಡು ದಿವಾನ್‌ಗಳು ಮಾ ಅವರಿಗೆ ಸೂಚಿಸುವ ಗೌರವ ಮಾತ್ರವಲ್ಲದೇ, ಗುರುಗಳು-ನೀಡಿರುವ ಸಾಧನೆಯ ನಿಯತ ಮತ್ತು ಪ್ರಾಮಾಣಿಕ ಅಭ್ಯಾಸದಿಂದ ಯೋಗದನ್‌ಗಳು ಸಾಧಿಸಬಹುದಾದ ಆಧ್ಯಾತ್ಮಿಕ ಎತ್ತರವನ್ನು ತೋರಿಸುವ ಇವು ಅವರೆಲ್ಲರಿಗೂ ಒಂದು ಜ್ಞಾಪನೆಯಾಗಿದೆ. ಸಭಾಂಗಣವನ್ನು ಈಗ ಧ್ಯಾನ, ಸಮಾಲೋಚನೆ ಮತ್ತು ತರಗತಿಗಳನ್ನು ನಡೆಸಲು ಬಳಸಲಾಗುತ್ತಿದೆ.

ಪರಮಹಂಸ ಯೋಗಾನಂದರ ಕೊಠಡಿ

ರಾಂಚಿಯಲ್ಲಿ ಮಹಾನ್ ಗುರುಗಳು (1918 ರಿಂದ 1920) ತಂಗಿದ್ದ ಕೋಣೆಯನ್ನು ಮಂದಿರವನ್ನಾಗಿ ಸಂರಕ್ಷಿಸಲಾಗಿದೆ. ಪ್ರತಿ ದಿನ ಕೆಲವು ಗಂಟೆಗಳ ವೈಯಕ್ತಿಕ ಧ್ಯಾನಕ್ಕಾಗಿ ಇದನ್ನು ಎಲ್ಲರಿಗೂ ತೆರೆದಿಡಲಾಗುತ್ತದೆ. ಭಕ್ತಾದಿಗಳು ಇಲ್ಲಿ ಧ್ಯಾನ ಮಾಡುವುದರಿಂದ ಹೆಚ್ಚಿನ ಉನ್ನತಿಯನ್ನು ಅನುಭವಿಸುತ್ತಾರೆ. ಯೋಗಾನಂದಜಿಯವರು ಬಳಸುತ್ತಿದ್ದ ಮರದ ಮಂಚದ ಜೊತೆಗೆ, ಕೋಣೆಯಲ್ಲಿ ಗುರುವಿನ ಹಸ್ತ ಮತ್ತು ಪಾದಗಳ ಗುರುತುಗಳನ್ನು ಪ್ರದರ್ಶಿಸಲಾಗಿದೆ — ಇದನ್ನು ಯುಎಸ್‌ಎ, ಲಾಸ್ ಏಂಜಲೀಸ್‌ನಲ್ಲಿರುವ ಎಸ್ಆರ್‌ಎಫ್‌ನ ಅಂತರರಾಷ್ಟ್ರೀಯ ಕೇಂದ್ರ ಕಚೇರಿಯಿಂದ ತರಲಾಗಿದೆ.

ಪ್ರಾರ್ಥನೆಯ ಅಗತ್ಯವಿರುವ ತಮ್ಮ ಪ್ರೀತಿಪಾತ್ರರ ಹೆಸರನ್ನು ಮಂಚದ ಮೇಲೆ ಇರಿಸಲಾಗಿರುವ ಪ್ರಾರ್ಥನಾ ಪೆಟ್ಟಿಗೆಯಲ್ಲಿ ಹಾಕಬಹುದು. ಗುರೂಜಿಯವರು ತಮ್ಮ ಕಾಲದಲ್ಲಿ ಪ್ರಾರಂಭಿಸಿದ ಜಾಗತಿಕ ಪ್ರಾರ್ಥನಾ ಸಮೂಹದ ಭಾಗವಾಗಿ, ಪ್ರಪಂಚದಾದ್ಯಂತದ ವೈಎಸ್‌ಎಸ್ ಸನ್ಯಾಸಿಗಳು ಮತ್ತು ಭಕ್ತರು, ಪ್ರಾರ್ಥನೆಯನ್ನು ವಿನಂತಿಸಿಕೊಳ್ಳುವ ಎಲ್ಲರಿಗಾಗಿ ಪ್ರತಿದಿನ ಪ್ರಾರ್ಥಿಸುತ್ತಾರೆ.

ಇದರ ಜೊತೆಗೆ, ಗುರುಗಳ ಕೆಲವು ವೈಯಕ್ತಿಕ ವಸ್ತುಗಳನ್ನು ಈ ಕೋಣೆಯ ಹೊರಗೆ ಪ್ರದರ್ಶಿಸಲಾಗಿದೆ.

ಯೋಗಾನಂದಜಿಯವರ ವೈಯಕ್ತಿಕ ವಸ್ತುಗಳ ಪ್ರದರ್ಶನ

ಯೋಗಾನಂದಜಿಯವರ ಮಹಾಸಮಾಧಿಯ ನಂತರ ಅವರ ದೇಹದ ಮೇಲೆ ಇರಿಸಲಾಗಿದ್ದ ಗುಲಾಬಿ ಹೂವು ಸೇರಿದಂತೆ ಅವರ ಕೆಲವು ವೈಯಕ್ತಿಕ ವಸ್ತುಗಳನ್ನು ಈ ಕೋಣೆಯ ಹೊರಗೆ ಪ್ರದರ್ಶಿಸಲಾಗಿದೆ. ಇತರ ಕುರುಹುಗಳಲ್ಲಿ ಅವರು ಬಳಸಿದ ಒಂದು ಛತ್ರಿ, ಸನ್ಯಾಸದ ನಿಲುವಂಗಿ ಮತ್ತು ಕಾಲುಚೀಲಗಳು ಮತ್ತು ಅವರು ಸೇವಿಸಿದ “ಲುಚಿ” ಯ ತುಂಡು ಸೇರಿವೆ.

ಫೋಟೋ ಗ್ಯಾಲರಿ

ಸ್ವಾಗತ ಕಕ್ಷೆಯ ಎದುರಿಗೆ ಫೋಟೋ ಗ್ಯಾಲರಿ ಇದೆ. 1917 ರಿಂದ 2016 ರವರೆಗಿನ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ನೂರು ವರ್ಷಗಳ ಪಯಣವನ್ನು ನಿರೂಪಿಸುವ ಚಿತ್ರಾತ್ಮಕ ಇತಿಹಾಸವನ್ನು ಇಲ್ಲಿ ಪ್ರದರ್ಶಿಸಲಾಗಿದೆ.