ಶ್ರೀ ಶ್ರೀ ಮೃಣಾಲಿನಿ ಮಾತಾರವರ ಸಂದೇಶ
ಶತಮಾನಗಳ ಹಿಂದೆಯೇ ಅಳಿದುಹೋಗಿದ್ದ ಪವಿತ್ರವಾದ ಕ್ರಿಯಾಯೋಗದ ವಿಜ್ಞಾನವನ್ನು ಈ ಯುಗಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಾಗುವಂತೆ ವಿಶೇಷವಾಗಿ ಅನುಗ್ರಹಿಸಿ ಅದನ್ನು ಪುನರ್‌ಸ್ಥಾಪಿಸಿ ಇಂದಿಗೆ 150 ವರ್ಷಗಳು ಸಂದಿವೆ. ಈ ಮೈಲಿಗಲ್ಲು ಸಂಭ್ರಮದಿಂದ ಆಚರಿಸುವ ಸಂದರ್ಭವಿದು ಹಾಗೂ ಆ ಭಗವಂತನನ್ನು ಮತ್ತು ಪ್ರಾಚೀನ ಋಷಿಮುನಿಗಳಿಂದ ಅನುಗ್ರಹಿಸಲ್ಪಟ್ಟ ಈ ದೈವಿಕ ಸಂಪತ್ತಿನ ಉಡುಗೊರೆಯನ್ನು ನಮಗೆ ನೀಡಿದ ನಮ್ಮ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಗೌರವಾನ್ವಿತ ಗುರು ಪರಂಪರೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತೇವೆ.
ಕ್ರಿಯಾಯೋಗವು ಮಾನವ ಪ್ರಜ್ಞೆಯನ್ನು ಉನ್ನತ ಮಟ್ಟಕ್ಕೇರಿಸುವ ವಿಜ್ಞಾನವಾಗಿದೆ — ದೇವಲೋಕಕ್ಕೆ ಕರೆದೊಯ್ಯುವ ಕೀಲಿಕೈ ಮಾನವನ ಚೈತನ್ಯದಲ್ಲೇ ಅಡಗಿದೆ. ಭೌತಿಕ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುವ ಈ ಲೌಕಿಕ ಜೀವನದಲ್ಲಿ ಎಲ್ಲೆಲ್ಲೂ ಅಡಗಿರುವ ಭಗವಂತನ ಸರ್ವವ್ಯಾಪಕತೆಯನ್ನು ಅರಿತುಕೊಳ್ಳುವ ಕೀಲಿಕೈ ಇದಾಗಿದೆ. ಇದೇ ಭಗವಂತನ ಅನುಗ್ರಹವಾಗಿದೆ ಮತ್ತು ಪ್ರಾಮಾಣಿಕವಾಗಿ ನಿಷ್ಠೆಯಿಂದ ಅಭ್ಯಸಿಸುವ ಎಲ್ಲಾ ಕ್ರಿಯಾಯೋಗಿಗಳಿಗೆ ನಮ್ಮ ಪೂಜ್ಯ ಗುರುಗಳು ನೀಡುವ ಮಾರ್ಗದರ್ಶನ ಹಾಗೂ ಸಹಾಯದ ಪ್ರಮಾಣವಚನವಾಗಿದೆ. ಕ್ರಿಯಾಯೋಗವನ್ನು ಸರಿಯಾಗಿ ಅಭ್ಯಸಿಸುವ ನಮ್ಮ ಪ್ರತಿಯೊಂದು ಪ್ರಜ್ಞಾಪೂರ್ವಕ ಪ್ರಯತ್ನವು, ಹಾಗೂ ಪ್ರಾಮಾಣಿಕ ಜೀವನ ಶೈಲಿಯು ಭಕ್ತರನ್ನು ಅವರ ನಿತ್ಯ ಆಶೀರ್ವಾದದೊಂದಿಗೆ ಆಳವಾಗಿ ಶ್ರುತಿಗೊಳಿಸುತ್ತದೆ.
ಕ್ರಿಯಾಯೋಗದ ಪುನರ್‌ಸ್ಥಾಪನೆ ಮತ್ತು ವಿಶ್ವದಾದ್ಯಂತ ಅದನ್ನು ಹರಡುವಲ್ಲಿ ಗುರುದೇವ ಪರಮಹಂಸ ಯೋಗಾನಂದರ ಕಾರ್ಯಗಳು ಮಾನವನ ವಿಕಾಸದ ಅತ್ಯಂತ ಸಂದಿಗ್ಧ ಸಮಯದಲ್ಲಿ ಒದಗಿ ಬಂದಿದೆ. ಶತಮಾನಗಳ ಅವಧಿಯಲ್ಲಿ, ತಾಂತ್ರಿಕ ಮತ್ತು ವೈಜ್ಞಾನಿಕ ಸಂಶೋಧನೆಗಳಲ್ಲಿ ದಾಪುಗಾಲುಗಳನ್ನು ಇಡಲಾಗಿದೆ ಆದರೆ ಇದರ ಜೊತೆಗೆ ಅಸ್ತಿತ್ವದಲ್ಲಿರುವ ಪ್ರಕ್ಷುಬ್ಧ ಪರಿಸ್ಥಿತಿಗಳು, ಈ ಸಾಧನೆಗಳು ನಿಜವಾದ ಸಂತೋಷ ಮತ್ತು ತೃಪ್ತಿಯನ್ನು ತಂದುಕೊಡುವಲ್ಲಿ ವಿಫಲವಾಗಿವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಭಗವಂತನೊಂದಿಗೆ ಬಾಂಧವ್ಯವನ್ನು ಬೆಸೆಯುವ ಆಧ್ಯಾತ್ಮಿಕ ವಿವೇಚನೆ ಇಲ್ಲದಿರುವಾಗ, ಕೇವಲ ಇಂದ್ರಿಯಗಳನ್ನು ತೃಪ್ತಿಪಡಿಸುವುದರ ಮೂಲಕ ಮತ್ತು ಅಹಂಕಾರದ ಧ್ಯೇಯಗಳನ್ನು ಪೂರೈಸುವುದರ ಮೂಲಕ ಮಾನವನ ಹೃದಯದ ಶೂನ್ಯತಾ ಭಾವವನ್ನು ತುಂಬಲಾಗದು. ಕೇವಲ ಭಗವಂತನೊಂದಿಗಿನ ನಮ್ಮ ಶಾಶ್ವತ ಬಾಂಧವ್ಯವನ್ನು ಅರಿತುಕೊಳ್ಳುವುದರ ಮೂಲಕ ಮತ್ತು ನಮ್ಮ ನಿತ್ಯ ಜೀವನದಲ್ಲಿ ಅವನನ್ನು ಸದಾ ಸ್ಮರಿಸುವ ಮೂಲಕ ನಮ್ಮ ಅಸ್ತಿತ್ವದ ಪ್ರಜ್ಞೆಯನ್ನು ಪೂರ್ಣಗೊಳಿಸಿಕೊಳ್ಳಬಹುದು. ಕ್ರಿಯಾಯೋಗ ವಿಜ್ಞಾನವು ಸರಿಯಾದ ಜೀವನ ಮತ್ತು ಧ್ಯಾನದ ಜೊತೆ ನಮ್ಮ, ಇತರರ ಹಾಗೂ ಆ ಸೃಷ್ಟಿಕರ್ತನ ಜೊತೆ ಸಾಮರಸ್ಯವನ್ನು ತರುವುದು. ಮಾಯೆಯ ಬಂಧನದಲ್ಲಿ ಸಿಲುಕಿ ನರಳುತ್ತಾ ಬಿಡುಗಡೆಗಾಗಿ ಕಾತರಿಸುತ್ತಿರುವ ಅಸಂಖ್ಯಾತ ಆತ್ಮಗಳ ಕರೆಗೆ ಇದು ಭಗವಂತನು ಕೃಪೆಯಿಂದ ಕಳುಹಿಸಿದ ಉತ್ತರವಾಗಿದೆ. ಇದು ಭಗವಂತನ ದೈವಿಕ ಪ್ರೀತಿ ಮತ್ತು ಶಾಂತಿಯನ್ನು ಅನುಭವಕ್ಕೆ ತಂದುಕೊಳ್ಳುವ ಮತ್ತು ಆತನೊಂದಿಗಿನ ಬಾಂಧವ್ಯದಲ್ಲಿ ನಮ್ಮ ಯೋಗಕ್ಷೇಮವನ್ನು ಕಂಡುಕೊಳ್ಳುವ ಮತ್ತು ಅಂತಿಮವಾಗಿ ನಮ್ಮ ಪ್ರಜ್ಞೆಯ ಕೇಂದ್ರವನ್ನು ದೇಹದೊಂದಿಗೆ ಗುರುತಿಸಿಕೊಂಡ ಅಹಂಪ್ರಜ್ಞೆಯಿಂದ ಅಮರ ಆತ್ಮ ಪ್ರಜ್ಞೆಗೆ ಕೊಂಡೊಯ್ಯುವ ಮಾರ್ಗವಾಗಿದೆ. ಗುರುದೇವ ಪರಮಹಂಸಜಿಯವರು ಇದೇ ಅನಂತಪ್ರಜ್ಞೆಯಲ್ಲಿ ಜೀವಿಸಿದ್ದರು. ಅವರ ಅಗಣಿತ ಜವಾಬ್ದಾರಿಗಳ ನಡುವೆಯೂ ಮತ್ತು ಭಗವಂತನು ಅವರಿಗೆ ವಹಿಸಿದ ಉದ್ದೇಶ ಸಾಧನೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಿ ಬಂದಾಗಲೂ ಅವರು ಸದಾ ದೈವೀಕವಾದ ದಿವ್ಯ ಆನಂದದಲ್ಲಿರುತ್ತಿದ್ದುದನ್ನು ನಾವು ನೋಡಿದ್ದೇವೆ. ಕ್ರಿಯಾಯೋಗವು ನೀಡುವ ಬಿಡುಗಡೆಯ ಭಾವವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಅವರು ಅದೆಷ್ಟು ಉತ್ಸಾಹದಿಂದ, ಅವಿಶ್ರಾಂತವಾಗಿ ಸೇವೆ ಸಲ್ಲಿಸಿದರು!
ಗುರೂಜಿಯವರು, ನಾವು ಈ ಜನ್ಮಕಾಲದಲ್ಲೆ ಭಗವಂತನನ್ನು ಅರಿಯುವುದು ಪ್ರತಿಯೊಬ್ಬರ ಆಧ್ಯಾತ್ಮಿಕ ಜನ್ಮಸಿದ್ಧ ಹಕ್ಕು ಎಂಬುದನ್ನು ನೆನಪಿಸುತ್ತಾರೆ. ಕ್ರಿಯಾಧ್ಯಾನವನ್ನು ಆಳವಾಗಿ ಅಭ್ಯಸಿಸುವುದರಿಂದ ನಾವು ಪರಮಾತ್ಮನನ್ನು ಮುಟ್ಟುವುದಲ್ಲದೆ, ಭಗವಂತನ ದಿವ್ಯಗುಣಗಳನ್ನು ಅಳವಡಿಸಿಕೊಳ್ಳಬಹುದು. ಆತನ ಜ್ಞಾನದಿಂದ ನಾವು ಬೇರೆಯವರನ್ನು ಹೆಚ್ಚು ಅರ್ಥಮಾಡಿಕೊಳ್ಳುವಲ್ಲೂ ಮತ್ತು ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದರಲ್ಲೂ ಸಫಲರಾಗಬಹುದು. ಆತನ ಪ್ರೇಮದ ಅನುಭೂತಿಯಿಂದ ನಾವು ಇನ್ನೂ ಹೆಚ್ಚು ದಯಾಪರರೂ ಮತ್ತು ಕ್ಷಮಾಶೀಲರೂ ಆಗುತ್ತೇವೆ. ಕ್ರಿಯಾಯೋಗದ ಈ ಪರಿವರ್ತಕ ಶಕ್ತಿಯ ಬಗ್ಗೆ ಮಹಾವತಾರ ಬಾಬಾಜಿಯವರು “ಪರಬ್ರಹ್ಮನ ಬಗ್ಗೆ ಮಾನವನ ವೈಯಕ್ತಿಕ ಮತ್ತು ಅಲೌಕಿಕ ಗ್ರಹಣಾಶಕ್ತಿಯು ದೇಶ ದೇಶಗಳ ಮಧ್ಯೆ ಸಾಮರಸ್ಯವನ್ನು ಉಂಟುಮಾಡುವಲ್ಲಿ ಸಹಕಾರಿಯಾಗಿದೆ” ಎಂದು ಭವಿಷ್ಯವಾಣಿಯನ್ನು ನುಡಿದಿದ್ದಾರೆ. ಮಾಯೆಯೆಂಬ ಕತ್ತಲೆಯ ಪರದೆಯನ್ನು ನಮ್ಮ ಪ್ರಜ್ಞೆಯಿಂದ ಸರಿಸಿದಾಗ, ನಾವು ಹೆಚ್ಚು ಹೆಚ್ಚು ಪರಿಣಾಮಕಾರಿಯಾಗಿ ಭಗವಂತನ ದಿವ್ಯಕಾಂತಿಯನ್ನು ಪ್ರತಿಫಲಿಸುವಲ್ಲಿ ಹಾಗೂ ಪ್ರಸರಿಸುವಲ್ಲಿ ಸಫಲರಾಗುವೆವು ಹಾಗೂ ಇದಕ್ಕೆ ನಮ್ಮ ವೈಯಕ್ತಿಕ ಪ್ರಯತ್ನವೂ ಬಹಳ ಮುಖ್ಯವಾದುದು. ಭಗವಂತನ ಅನ್ವೇಷಣೆಗಾಗಿ ಅನೇಕಾನೇಕ ಚೇತನಗಳು ಕ್ರಿಯಾಯೋಗವನ್ನು ಇನ್ನೂ ಹೆಚ್ಚು ನಿಷ್ಠೆಯಿಂದ ಅಭ್ಯಸಿಸಲು ಕಾತುರರಾಗಿರುವಂತೆಯೇ, ಆ ದಿವ್ಯಕಾಂತಿಯ ಉಪಶಮನಕಾರಿ ಪ್ರಭಾವವು ವಿಶ್ವದಾದ್ಯಂತ ಪ್ರಸರಿಸುತ್ತಿದೆ. ಈ ವಾರ್ಷಿಕೋತ್ಸವದ ಶುಭ ಸಂದರ್ಭದಂದು ನಾವೆಲ್ಲರೂ ಒಟ್ಟಾಗಿ ಗುರುದೇವರ ಆಶೀರ್ವಾದಗಳನ್ನು ಕೋರುತ್ತಾ ಮತ್ತು ಕ್ರಿಯಾಯೋಗದ ಮೂಲಕ ನಿಮಗಾಗಿ ನನ್ನ ಪ್ರಾರ್ಥನೆಗಳನ್ನು ಸಲ್ಲಿಸುತ್ತಾ ಪ್ರೀತಿಯಿಂದ ಅವರನ್ನು ಸ್ಮರಿಸುತ್ತೇನೆ. ನೀವು ನಿಮ್ಮ ಆತ್ಮ ಸಾಕ್ಷಾತ್ಕಾರದ ಆನಂದದ ಅನುಭವವನ್ನು ಪಡೆಯುವಂತಾಗಲಿ ಮತ್ತು ಆ ಭಗವಂತನು ನಿಮ್ಮನ್ನು ಯಾವುದೇ ಸ್ಥಳದಲ್ಲಿರಿಸಿದ್ದರೂ, ನೀವು ಆತನ ಪ್ರೀತಿ ಹಾಗೂ ಆತನ ಸದ್ಗುಣಗಳನ್ನು ಪ್ರತಿಫಲಿಸುವಂತಾಗಲಿ ಎಂದು ಹಾರೈಸುತ್ತೇನೆ.
ಭಗವಂತ ಮತ್ತು ಗುರುದೇವರ ನಿರಂತರ ಪ್ರೀತಿಯ ಆಶೀರ್ವಾದಗಳೊಂದಿಗೆ,
ಶ್ರೀ ಶ್ರೀ ಮೃಣಾಲಿನಿ ಮಾತಾ
ಕಾಪಿರೈಟ್ © 2011 ಸೆಲ್ಫ್-ರಿಯಲೈಝೇಶನ್ ಫೆಲೋಷಿಪ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.