ಪರಮಹಂಸ ಯೋಗಾನಂದರ ಜ್ಞಾನ-ಪರಂಪರೆಯಿಂದ
ಪ್ರತಿಯೊಬ್ಬರಲ್ಲೂ ಅಂತರ್ಬೋಧೆಯಿದೆ, ನಿಮ್ಮಲ್ಲೂ ಸಹ
ಭಗವಂತನ ಎಲ್ಲ ಮಕ್ಕಳೂ ಅತ್ಯುನ್ನತ ಬುದ್ಧಿಶಕ್ತಿಯನ್ನು ಹೊಂದಿದ್ದಾರೆ: ಅದೇ ಅಂತರ್ಬೋಧೆ, ಎಲ್ಲ-ಬಲ್ಲ ಆತ್ಮದ ಜ್ಞಾನ.







ಅಂತರ್ಬೋಧೆಯ ವಿಶೇಷ ಗುಣಗಳು


"ಅಂತರ್ಬೋಧೆಯು ಶಾಂತ ಪ್ರಜ್ಞೆಯಲ್ಲಿ ಭಾವನೆಯಾಗಿ ಪ್ರಕಟವಾಗುತ್ತದೆ, ಹೆಚ್ಚಾಗಿ ಹೃದಯದ ಮೂಲಕ ಗ್ರಹಿಸಲ್ಪಡುತ್ತದೆ. ಅಂತಹ ಭಾವನೆ ಬಂದಾಗ, ನೀವು ಅದರ ಮೂಲಕ, ಸರಿಯಾದ ದಿಸೆಯ ಒಂದು ನಿರ್ದಿಷ್ಟ ಭಾವವನ್ನು ಮತ್ತು ಅಚಲವಾದ ಗಾಢನಂಬಿಕೆಯನ್ನು ಪಡೆಯುವಿರಿ.”
ಅಂತರ್ಬೋಧೆಯು ಅಂತರಂಗದಿಂದ ಬರುತ್ತದೆ; ಆಲೋಚನೆಯು ಹೊರಗಿನಿಂದ ಬರುತ್ತದೆ. ಅಂತರ್ಬೋಧೆಯು ವಾಸ್ತವದ ಪ್ರತ್ಯಕ್ಷ ರೂಪವನ್ನು ಒದಗಿಸುತ್ತದೆ; ಆಲೋಚನೆಯು ಅದರ ಪರೋಕ್ಷ ರೂಪವನ್ನು ಒದಗಿಸುತ್ತದೆ. ಅಂತರ್ಬೋಧೆಯು, ಅಲೌಕಿಕ ಸಹಾನುಭೂತಿಯಿಂದ ವಾಸ್ತವವನ್ನು ಸಮಗ್ರವಾಗಿ ಕಾಣುತ್ತದೆ, ಆದರೆ ಆಲೋಚನೆಯು ಅದನ್ನು ತುಂಡುತುಂಡಾಗಿ ವಿಭಜಿಸುತ್ತದೆ.
…ಹಾಗೂ ಅದರಲ್ಲಿ ಭಾವನೆಯೂ ಒಳಗೊಂಡಿರುತ್ತದೆ
ಇಂದ್ರಿಯಗಳು ಮತ್ತು ಬುದ್ಧಿಶಕ್ತಿಯನ್ನು ಮೀರಿ, ಅಂತರ್ಬೋಧೆಯು ಶಾಂತ ಪ್ರಜ್ಞೆಯಲ್ಲಿ ಭಾವನೆಯಾಗಿ ಪ್ರಕಟವಾಗುತ್ತದೆ, ಅದು ಹೆಚ್ಚಾಗಿ ಹೃದಯದ ಮೂಲಕ ಗ್ರಹಿಸಲ್ಪಡುತ್ತದೆ. ಧ್ಯಾನದಲ್ಲಿ ಅಂತಹ ಭಾವನೆ ಬಂದಾಗ, ನೀವು ಅದರ ಮೂಲಕ ಸರಿಯಾದ ದಿಸೆಯ ಒಂದು ನಿರ್ದಿಷ್ಟ ಭಾವವನ್ನು ಮತ್ತು ಅಚಲವಾದ ಗಾಢನಂಬಿಕೆಯನ್ನು ಪಡೆಯುವಿರಿ. ನಿಮಗೆ ಈ ಅಂತರ್ಬೋಧೆಯನ್ನು ಗುರುತಿಸಲು ಮತ್ತು ಅನುಸರಿಸಲು ಹೆಚ್ಚು ಹೆಚ್ಚು ಸಾಧ್ಯವಾಗುತ್ತದೆ. ಅದರರ್ಥ ನೀವು ವಿವೇಚನೆಯನ್ನು ಬಿಟ್ಟುಬಿಡುತ್ತೀರಿ ಎಂದಲ್ಲ. ಶಾಂತ ನಿಷ್ಪಕ್ಷಪಾತ ವಿವೇಚನೆಯು ಅಂತರ್ಬೋಧೆಗೆ ಕಾರಣವಾಗಬಹುದು. ವ್ಯವಹಾರಜ್ಞಾನವನ್ನು ಬಳಸಿ. ಆದರೆ ಪ್ರತಿಷ್ಠೆಯ ಅಥವಾ ಭಾವನಾತ್ಮಕ ತಾರ್ಕಿಕತೆಯು ತಪ್ಪು ಅಭಿಪ್ರಾಯಗಳು ಮತ್ತು ಪ್ರಮಾದಗಳಿಗೆ ಕಾರಣವಾಗುತ್ತದೆ ಎಂಬುದನ್ನು ನೆನಪಿಡಿ.

“ಶುದ್ಧ ವಿವೇಚನೆ ಮತ್ತು ಶುದ್ಧ ಭಾವನೆ ಎರಡೂ ಅಂತರ್ಬೋಧಿತ ಗುಣಗಳನ್ನು ಹೊಂದಿವೆ. ಶುದ್ಧ ಭಾವನೆಯು ಶುದ್ಧ ವಿವೇಚನೆಯಷ್ಟೇ ಸ್ಪಷ್ಟವಾಗಿ ನೋಡುತ್ತದೆ.”
ನೀವು ಪರಿಭಾವಿಸಬೇಕು ಮತ್ತು ಯೋಚಿಸಲೂ ಬೇಕು; ನಿಮ್ಮ ಆಲೋಚನೆಗಳೊಂದಿಗೆ ನಿಮಗೆ ಭಾವನೆ ಇಲ್ಲದಿದ್ದರೆ, ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುವಲ್ಲಿ ನೀವು ಯಾವಾಗಲೂ ಯಶಸ್ವಿಯಾಗುವುದಿಲ್ಲ. ಭಾವನೆಯು ಎಲ್ಲಾ ಜ್ಞಾನದ ಭಂಡಾರವಾದ ಅಂತರ್ಬೋಧೆಯ ಅಭಿವ್ಯಕ್ತಿಯಾಗಿದೆ. ಭಾವನೆ ಮತ್ತು ಆಲೋಚನೆ, ಅಥವಾ ವಿವೇಚನೆ, ಸಮತೋಲಿತವಾಗಿರಬೇಕು; ಆಗ ಮಾತ್ರ ನಿಮ್ಮೊಳಗಿನ ಭಗವಂತನ ದಿವ್ಯ ಪ್ರತೀಕವಾದ ಆತ್ಮವು ತನ್ನ ಪೂರ್ಣ ಸ್ವರೂಪವನ್ನು ಪ್ರಕಟಿಸುತ್ತದೆ. ಆದ್ದರಿಂದ ಯೋಗವು ಒಬ್ಬನಿಗೆ ಅವನ ವಿವೇಚನೆ ಮತ್ತು ಭಾವನೆಗಳ ಶಕ್ತಿಯನ್ನು ಹೇಗೆ ಸಮತೋಲನಗೊಳಿಸಬೇಕೆಂದು ಕಲಿಸುತ್ತದೆ. ಎರಡನ್ನೂ ಸರಿಸಮಾನವಾಗಿ ಹೊಂದಿರದವನು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ವ್ಯಕ್ತಿಯಲ್ಲ.
ವಿವೇಚನೆ ಮತ್ತು ಭಾವನೆಯ ಸಾಮರಸ್ಯಕರ ಸಮತೋಲನವು ಅಂತರ್ಬೋಧಿತ ಗ್ರಹಿಕೆಯನ್ನು ಮತ್ತು ಸತ್ಯ ಏನೆಂದು ತಿಳಿಯುವ ಸಾಮರ್ಥ್ಯವನ್ನು ಒದಗಿಸುತ್ತದೆ. ಈ ಸಮತೋಲನವನ್ನು ಸಾಧಿಸಿದಾಗ, ಮನುಷ್ಯರು ದೇವರಾಗುತ್ತಾರೆ.
ಅಭಿವೃದ್ಧಿಯಾಗದ ಅಂತರ್ಬೋಧೆಯಿಂದಾಗುವ ಪರಿಣಾಮಗಳು
ನೀವು ನಿಜವಾಗಿಯೂ ಏನಾಗಿದ್ದೀರಿ ಎಂಬುದರ ಬಗ್ಗೆ ಇರುವ ಅಜ್ಞಾನ:
ಅಭಿವೃದ್ಧಿಯಾಗದ ಅಂತರ್ಬೋಧೆಯು ಆತ್ಮದ ಮುಂದೆ ಇಡಲಾದ ಸ್ಫಟಿಕವಿದ್ದಂತೆ, ಇದು ದ್ವಂದ್ವ ಚಿತ್ರಣವನ್ನು ನೀಡುತ್ತದೆ. ಆತ್ಮವೇ ನಿಜವಾದ ಪ್ರತೀಕ; ಪ್ರತಿಬಿಂಬವು ಅವಾಸ್ತವ—ಅಹಂ ಅಥವಾ ಮಿಥ್ಯ ಆತ್ಮ. ಅಂತರ್ಬೋಧೆಯ ಅಭಿವೃದ್ಧಿ ಕಡಿಮೆ ಇದ್ದಷ್ಟೂ, ಅಹಂಕಾರದ ಚಿತ್ರಣವು ಹೆಚ್ಚು ವಿರೂಪಗೊಂಡಿರುತ್ತದೆ. ಅಭಿವೃದ್ಧಿಯಾಗದ ಅಂತರ್ಬೋಧೆಯಿಂದಾಗಿ ಉಂಟಾಗುವ ಈ ಹುಸಿ ವ್ಯಕ್ತಿತ್ವದಿಂದ ಮಾನವ ಜೀವನವು ಮಾರ್ಗದರ್ಶಿಸಲ್ಪಟ್ಟಾಗ, ಅದು ಎಲ್ಲಾ ಮಿತಿಗಳಿಗೆ ಮತ್ತು ಭ್ರಮೆಯ ತಪ್ಪು ಕಲ್ಪನೆಗಳಿಗೆ ಒಳಪಡುತ್ತದೆ. ಆದ್ದರಿಂದ ತಪ್ಪು ಅಭಿಪ್ರಾಯ ಮತ್ತು ಅದರಿಂದುಂಟಾಗುವ ಪರಿಣಾಮಗಳ ಅವ್ಯವಸ್ಥಿತ ಅಸ್ತಿತ್ವವು ಅನಿವಾರ್ಯ.


"ಯಶಸ್ಸನ್ನು ಬಯಸುವ ಯಾರೇ ಆದರೂ, ತಮ್ಮ ಪ್ರಗತಿಗಾಗಿ ಪುಸ್ತಕಗಳು ಮತ್ತು ಕಾಲೇಜಿನ ಸಾಧನೆಗಳ ಮೇಲೆ ಅವಲಂಬಿತರಾಗುವ ಬದಲು ತಮ್ಮ ಮಿದುಳಿನ ಜೀವಕೋಶಗಳ ಗ್ರಹಿಸುವ ಗುಣಮಟ್ಟವನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಿದರೆ ಹೆಚ್ಚಿನದನ್ನು ಸಾಧಿಸುತ್ತಾರೆ.”
“ನಾನು ಉಸಿರಲ್ಲ; ನಾನು ಶರೀರವಲ್ಲ; ಮೂಳೆಗಳೂ ಅಲ್ಲ ಮಾಂಸವೂ ಅಲ್ಲ. ನಾನು ಮನಸ್ಸೂ ಅಲ್ಲ, ಭಾವನೆಯೂ ಅಲ್ಲ. ಯಾವುದು ಉಸಿರು, ಶರೀರ, ಮನಸ್ಸು ಮತ್ತು ಭಾವನೆಯ ಹಿಂದಿದೆಯೋ ಅದೇ ನಾನು.” ನೀವು ಈ ಲೌಕಿಕ ಪ್ರಜ್ಞೆಯನ್ನು ಮೀರಿ ಹೋದಾಗ, ನೀವು ಶರೀರವೂ ಅಲ್ಲ, ಮನಸ್ಸೂ ಅಲ್ಲ ಎಂಬ ಅರಿವಿದ್ದರೂ ನೀವು ಅಸ್ತಿತ್ವದಲ್ಲಿರುವಿರಿ ಎಂಬ ಬಗ್ಗೆ ಹಿಂದೆಂದೂ ಇಲ್ಲದಿದ್ದಂತಹ ಅರಿವಿರುತ್ತದೆ — ಆ ದಿವ್ಯ ಪ್ರಜ್ಞೆಯೇ ನೀವು. ಯಾವುದರಲ್ಲಿ ವಿಶ್ವದಲ್ಲಿರುವ ಪ್ರತಿಯೊಂದೂ ನೆಲೆಗೊಂಡಿರುವುದೋ ಅದೇ ನೀವು.
ಪ್ರಬುದ್ಧ ವಿದ್ಯಾರ್ಥಿಯು ತನ್ನ ಆಲೋಚನೆಗಳು ಅಂತರ್ಬೋಧೆಯಲ್ಲಿ ಕರಗುವವರೆಗೆ ಆಳವಾಗಿ ಧ್ಯಾನಮಾಡಬೇಕು. ಅಂತರ್ಬೋಧೆಯ ಕೊಳದಲ್ಲಿ, ಆಲೋಚನೆಯ ಅಲೆಗಳಿಂದ ಮುಕ್ತವಾಗಿ, ಯೋಗಿಯು ಆತ್ಮದ ಚಂದ್ರನ ಕದಡದ ಪ್ರತಿಬಿಂಬವನ್ನು ನೋಡುತ್ತಾನೆ.
ಅಭಿವೃದ್ಧಿಯಾಗದ ಅಂತರ್ಬೋಧೆಯು ತೀರ್ಪಿನಲ್ಲಿ ತಪ್ಪುಗಳನ್ನು ತರುತ್ತದೆ ಮತ್ತು ತಪ್ಪು ನಿರ್ಧಾರಗಳನ್ನು ತರುತ್ತದೆ….
ಅಭಿವೃದ್ಧಿಯಾಗದ ಅಂತರ್ಬೋಧೆಯಿಂದಾಗಿ ತೀರ್ಪಿನಲ್ಲಿ ದೋಷಗಳು ಉಂಟಾಗುತ್ತವೆ. ನಿಮ್ಮಲ್ಲಿ ಹೆಚ್ಚಿನವರು ನೀವು ವಿಶೇಷ ವ್ಯಕ್ತಿಗಳಾಗಬಹುದು ಮತ್ತು ದೊಡ್ಡ ಕೆಲಸಗಳನ್ನು ಮಾಡಬಹುದು ಎಂಬ ಭಾವನೆಯನ್ನು ಹೊಂದಿರುತ್ತೀರಿ; ಆದರೆ ನಿಮ್ಮಲ್ಲಿ ಅಂತರ್ಬೋಧಿತ ಶಕ್ತಿಯ ಕೊರತೆಯಿಂದಾಗಿ, ಆ ಸಾಮರ್ಥ್ಯವು ಬಹುಪಾಲು ಸುಪ್ತವಾಗಿ ಉಳಿದಿದೆ.
ನಿಮ್ಮ ಮನಸ್ಸಿನ ನಿರ್ಣಯವು ಇಂದ್ರಿಯಗಳಿಂದ ಒದಗಿಸಲಾದ ಮಾಹಿತಿಯಿಂದ ಕಟ್ಟುಪಾಡಿಗೊಳಪಟ್ಟಿರುವುದರಿಂದಾಗಿ, ನಿಮ್ಮ ಇಂದ್ರಿಯಗಳು ಭ್ರಮಾಧೀನವಾದರೆ, ಒಬ್ಬ ವ್ಯಕ್ತಿಯು ನಿಜವಾಗಿಯೂ ಅಂತರಂಗದಲ್ಲಿ ಏನಾಗಿದ್ದಾನೆಂದು ತಿಳಿಯದೆ ಅವನು ಒಳ್ಳೆಯವನು ಎಂದು ನೀವು ಭಾವಿಸಬಹುದು. ನಿಮ್ಮ ಆತ್ಮ ಸಂಗಾತಿಯು ನಿಮಗೆ ಸಿಕ್ಕಿದ್ದಾರೆ ಎಂದು ನೀವು ಭಾವಿಸಿ, ವೈವಾಹಿಕ ಜೀವನವನ್ನು ಪ್ರಾರಂಭಿಸುವಿರಿ; ತದನಂತರ ವಿಚ್ಛೇದನ ನ್ಯಾಯಾಲಯದಲ್ಲಿ ಕೊನೆಗೊಳ್ಳುವಿರಿ. ಆದರೆ ಅಂತರ್ಬೋಧೆಯು ಅಂತಹ ತಪ್ಪನ್ನು ಎಂದಿಗೂ ಮಾಡುವುದಿಲ್ಲ. ಅದು ಕಣ್ಣುಗಳ ಕಾಂತೀಯ ಶಕ್ತಿಯನ್ನು ನೋಡುವುದಿಲ್ಲ ಅಥವಾ ವ್ಯಕ್ತಿಯ ಆಕರ್ಷಕ ಮುಖ ಅಥವಾ ವ್ಯಕ್ತಿತ್ವವನ್ನು ನೋಡುವುದಿಲ್ಲ, ಆದರೆ ಆ ವ್ಯಕ್ತಿಯು ನಿಜವಾಗಿಯೂ ಹೇಗಿದ್ದಾನೆ ಎಂಬುದನ್ನು ಹೃದಯದಲ್ಲಿ ನಿಖರವಾಗಿ ಅನುಭವಿಸುತ್ತದೆ ಮತ್ತು ಗ್ರಹಿಸುತ್ತದೆ.
. . . ಅಭಿವೃದ್ಧಿ ಹೊಂದಿದ ಅಂತರ್ಬೋಧೆಯು ಜೀವನದಲ್ಲಿ ಯಶಸ್ಸನ್ನು ತರುತ್ತದೆ:
ಪ್ರಗತಿ ಹೊಂದಲು ಮತ್ತು ತಪ್ಪುಗಳಿಂದಾಗುವ ದುಃಖವನ್ನು ತಪ್ಪಿಸಲು, ನೀವು ಎಲ್ಲದರಲ್ಲೂ ಇರುವ ಸತ್ಯವೇನೆಂದು ಕಂಡುಹಿಡಿಯಬೇಕು. ನಿಮ್ಮ ಅಂತರ್ಬೋಧೆಯನ್ನು ಅಭಿವೃದ್ಧಿಪಡಿಸಿಕೊಂಡರೆ ಮಾತ್ರ ಇದು ಸಾಧ್ಯ. ಅದು ವಿಷಯದ ವ್ಯಾವಹಾರಿಕ ಸತ್ಯ. ಅದಕ್ಕಾಗಿಯೇ ನಾನು ನಿಮಗೆ ಅಂತರ್ಭೋದಯ ಶಕ್ತಿಯನ್ನು ಬೆಳೆಸಿಕೊಳ್ಳಿ ಮತ್ತು ಎಲ್ಲದರಲ್ಲೂ ಬಳಸಿಕೊಳ್ಳಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಇತರರೊಂದಿಗಿನ ನಿಮ್ಮ ಸಂಬಂಧಗಳಲ್ಲಿ, ನಿಮ್ಮ ವ್ಯವಹಾರದಲ್ಲಿ, ನಿಮ್ಮ ವೈವಾಹಿಕ ಜೀವನದಲ್ಲಿ, ನಿಮ್ಮ ಜೀವನದ ಪ್ರತಿಯೊಂದು ಭಾಗದಲ್ಲೂ ಅಂತರ್ಬೋಧೆಯು ಅತ್ಯಗತ್ಯವಾಗಿರುತ್ತದೆ. ಅಂತರ್ಬೋಧೆಯ ಶಕ್ತಿಯನ್ನು ಅಭಿವೃದ್ಧಿಪಡಿಸದೆ, ನೀವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ, ತಪ್ಪು ಸಹೋದ್ಯೋಗಿಗಳನ್ನು ಆರಿಸಿಕೊಳ್ಳುತ್ತೀರಿ ಮತ್ತು ತಪ್ಪು ವೈಯಕ್ತಿಕ ಸಂಬಂಧಗಳಲ್ಲಿ ಸಿಲುಕಿಕೊಳ್ಳುತ್ತೀರಿ.
ಯಶಸ್ಸಿನ ಲೌಕಿಕ ಮಾರ್ಗಗಳನ್ನು ಮಾತ್ರ ಅವಲಂಬಿಸಿದಾಗ ಸದಾ ಅನಿಶ್ಚಿತತೆ ಇರುತ್ತದೆ. ಆದರೆ ಯಶಸ್ಸಿನ ಅಂತರ್ಬೋಧಿತ ಮಾರ್ಗವು ವಿಭಿನ್ನವಾದುದು. ಅಂತರ್ಬೋಧಿತ ಗ್ರಹಿಕೆಯು ಎಂದಿಗೂ ತಪ್ಪಾಗಲು ಸಾಧ್ಯವಿಲ್ಲ. ಅದು ಆಂತರಿಕ ಸಂವೇದನತ್ವದಿಂದ ಬರುತ್ತದೆ, ಅದು, ನಿಮ್ಮ ನಿರ್ಧಾರಿತ ಮಾರ್ಗವನ್ನು ಅನುಸರಿಸುವ ಮೂಲಕ ನೀವು ಯಶಸ್ವಿಯಾಗುವಿರೇ, ಇಲ್ಲವೇ ಎಂಬುದು ನಿಮಗೆ ಮೊದಲೇ ತಿಳಿದಿರುವ ಒಂದು ಭಾವನೆ.
ಅಂತರ್ಬೋಧೆ ಇಲ್ಲದ ಅನೇಕ ಜನರು ಏನನ್ನೂ ನೀಡದ ಹಣಕಾಸಿನ ಸಂಭಾವ್ಯತೆಗಳಿಗೆ ಬಹಳಷ್ಟು ಹಣವನ್ನು ಹಾಕುತ್ತಾರೆ, ಅದರ ಪರಿಣಾಮವಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಅಂತರ್ಬೋಧಿತ ಶಕ್ತಿಯ ಮೂಲಕ ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರದಲ್ಲೂ ನಾನು ಯಶಸ್ವಿಯಾಗಿದ್ದೇನೆ. ಅದು ಎಂದಿಗೂ ವಿಫಲವಾಗುವುದಿಲ್ಲ.
ವೈಜ್ಞಾನಿಕ ವ್ಯಕ್ತಿ ಅಥವಾ ಉದ್ಯಮಿ ಅಥವಾ ಯಶಸ್ಸನ್ನು ಬಯಸುವ ಯಾರೇ ಆದರೂ ತನ್ನ ಪ್ರಗತಿಗಾಗಿ ಕೇವಲ ಪುಸ್ತಕಗಳು ಮತ್ತು ಕಾಲೇಜಿನ ಸಾಧನೆಗಳನ್ನು ಅವಲಂಬಿಸುವ ಬದಲು ತನ್ನ ಮಿದುಳಿನ ಜೀವಕೋಶಗಳ ಗ್ರಹಿಸುವ ಗುಣಮಟ್ಟವನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸಿದರೆ ಹೆಚ್ಚಿನದನ್ನು ಸಾಧಿಸಬಹುದು. ಪ್ರಪಂಚವು ಪುಸ್ತಕಗಳು ಮತ್ತು ಹೊರಗಿನ ವಿಧಾನಗಳೊಂದಿಗೆ ಪ್ರಾರಂಭಿಸುತ್ತದೆ, ಆದರೆ ನೀವು ನಿಮ್ಮ ಅಂತರ್ಬೋಧೆಯ ಗ್ರಹಿಕೆಯನ್ನು ಹೆಚ್ಚಿಸುವ ಮೂಲಕ ಪ್ರಾರಂಭಿಸಬೇಕು. ನಿಮ್ಮಲ್ಲಿ ಎಲ್ಲ ಜ್ಞಾನದ ಅನಂತ ಪೀಠವಿದೆ.
ಅಂತರ್ಬೋಧೆಯನ್ನು ಬೆಳೆಸಿಕೊಳ್ಳುವ ಮಾರ್ಗಗಳು
ಮೊದಲು ವಿವೇಚನೆಯನ್ನು ಬೆಳೆಸಿಕೊಳ್ಳಿ. . .
ಅಂತರ್ಬೋಧಿತ ಜ್ಞಾನವು, ಸಾಮಾನ್ಯ ಜ್ಞಾನವನ್ನು ಮೀರಿದುದಾಗಿದ್ದರೂ, ಅದು ಒಬ್ಬನನ್ನು ಪಾರಮಾರ್ಥಿಕನನ್ನಾಗಿಯೋ ಅಥವಾ ಅವ್ಯಾವಹಾರಿಕನನ್ನಾಗಿಯೋ ಮಾಡುವುದಿಲ್ಲ; ಅದು ವಿವೇಚನೆಯ ಜನಕ, ಸರಳವಾಗಿ ಹೇಳಬೇಕೆಂದರೆ, ಅದು ಒಬ್ಬರ ಪರಿಸ್ಥಿತಿಗೆ ಅಂತರ್ಬೋಧೆಯಿಂದ ಪಡೆದ ಪ್ರತಿಕ್ರಿಯೆ ಅಷ್ಟೆ.
. . .ನಂತರ ಅಂತರ್ಬೋಧಿತ ಮಾರ್ಗದರ್ಶನಕ್ಕಾಗಿ ಪ್ರಾರ್ಥನೆಯನ್ನು ಸೇರಿಸಿ:
ನಿಮ್ಮ ಗುರಿಯ ಬಗ್ಗೆ ಮತ್ತು ಅದನ್ನು ಸಾಧಿಸಲು ಅವಶ್ಯವಿರುವ ವ್ಯಾವಹಾರಿಕ ಹಂತಗಳ ಬಗ್ಗೆ ನಿಮಗೆ ಸಾಧ್ಯವಾದುದೆಲ್ಲವನ್ನೂ ಕಲಿತುಕೊಳ್ಳಿ. ನಿಮ್ಮ ಹಣವನ್ನು ಹೂಡಿಕೆ ಮಾಡುವ ವಿಷಯದಲ್ಲಾಗಲಿ, ಒಂದು ಉದ್ಯಮವನ್ನು ಆರಂಭಿಸುವ ವಿಷಯದಲ್ಲಾಗಲಿ, ನಿಮ್ಮ ಉದ್ಯೋಗವನ್ನು ಬದಲಾಯಿಸುವ ವಿಷಯದಲ್ಲಾಗಲಿ, ನೀವು ತನಿಖೆ ಮಾಡಿದ ನಂತರ, ಹೋಲಿಸಿದ ನಂತರ ಮತ್ತು ನಿಮ್ಮ ಬುದ್ಧಿಶಕ್ತಿಯನ್ನು ಅದರ ಪರಮಾವಧಿಯವರೆಗೆ ಅನ್ವಯಿಸಿದ ನಂತರವೂ, ಹಿಂದೆ ಮುಂದೆ ನೋಡದೆ ಅದರಲ್ಲಿ ತೊಡಗಿಕೊಳ್ಳಬೇಡಿ. ನಿಮ್ಮ ವಿವೇಚನೆ ಮತ್ತು ವಿಚಾರಣೆ ಒಂದರ ಕಡೆ ಸೂಚಿಸುತ್ತಿರುವಾಗ, ಧ್ಯಾನ ಮಾಡಿ ಮತ್ತು ಭಗವಂತನಿಗೆ ಪ್ರಾರ್ಥನೆ ಸಲ್ಲಿಸಿ. ಆಂತರಿಕ ಮೌನದಲ್ಲಿ, ಮುಂದೆ ಹೋಗುವುದು ವಿಹಿತವೇ ಎಂದು ಭಗವಂತನನ್ನು ಕೇಳಿಕೊಳ್ಳಿ. ನೀವು ಗಾಢವಾಗಿ ಮತ್ತು ಮನಃಪೂರ್ವಕವಾಗಿ ಪ್ರಾರ್ಥಿಸಿದಾಗ ಯಾವುದೋ ಒಂದು ಅದರಿಂದ ನಿಮ್ಮನ್ನು ಬೇರೆಡೆಗೆ ತಿರುಗಿಸುತ್ತಿದೆ ಎಂದಾದಾಗ, ಅದನ್ನು ಮಾಡಬೇಡಿ. ಆದರೆ ನಿಮ್ಮಲ್ಲಿ ಒಂದು ಧನಾತ್ಮಕ ತುಡಿತವಿದ್ದು, ನೀವು ಪ್ರಾರ್ಥಿಸುತ್ತಾ, ಪ್ರಾರ್ಥಿಸುತ್ತಾ, ಪ್ರಾರ್ಥಿಸುತ್ತಾ ಹೋದರೂ ಈ ತುಡಿತವು ಇನ್ನೂ ಪಟ್ಟುಬಿಡದೆ ಹಾಗೇ ಇದ್ದಲ್ಲಿ, ಮುಂದುವರೆಯಿರಿ. ನೀವು ಅನುಭವಿಸುತ್ತಿರುವ ಯಾವುದೇ ತುಡಿತವು ಭಗವಂತನಿಂದಾದದ್ದು ಮತ್ತು ಕೇವಲ ನಿಮ್ಮದೇ ದೋಷಪೂರಿತ ಆಸೆಯ ಒತ್ತಾಯವಲ್ಲ ಎಂದು ಅರಿಯಲು ಮಾರ್ಗದರ್ಶನ ಬಯಸುವ ನಿಮ್ಮ ಪ್ರಾರ್ಥನೆಯು ಪ್ರಾಮಾಣಿಕವಾದದ್ದಾಗಿರಬೇಕು.
ಇದೇ ರೀತಿಯಲ್ಲಿ ನಾನು ನನ್ನ ಅಂತರ್ಬೋಧೆಯ ಕ್ರಿಯಾತ್ಮಕ ಬಳಕೆಯನ್ನು ಬೆಳೆಸಿಕೊಂಡದ್ದು. ಯಾವುದೇ ಕಾರ್ಯವನ್ನು ಆರಂಭಿಸುವ ಮೊದಲು, ನಾನು ನನ್ನ ಕೋಣೆಯಲ್ಲಿ ಧ್ಯಾನಸ್ಥ ಮೌನದಲ್ಲಿ ಕುಳಿತುಕೊಳ್ಳುತ್ತೇನೆ ಮತ್ತು ಆ ಶಕ್ತಿಯನ್ನು ನನ್ನ ಮನಸ್ಸಿನಲ್ಲಿ ವೃದ್ಧಿಸುತ್ತಾ ಹೋಗುತ್ತೇನೆ. ನಂತರ ನನ್ನ ಮನಸ್ಸಿನ ಕೇಂದ್ರೀಕೃತ ಪ್ರಕಾಶವನ್ನು ನಾನು ಏನು ಸಾಧಿಸಬೇಕೆಂದಿದ್ದೇನೋ ಅದರ ಮೇಲೆ ಚೆಲ್ಲುತ್ತೇನೆ.

“ಅಶಾಂತ ಆಲೋಚನೆಗಳು ನಿಂತಾಗ ಮಾತ್ರ ಒಬ್ಬರು ಅಂತರ್ಬೋಧೆಯ ಮೌನದ ಮೂಲಕ ಭಗವಂತನು ಅರುಹುತ್ತಿರುವ ಧ್ವನಿಯನ್ನು ಕೇಳಬಹುದು…ಭಕ್ತನ ಮೌನದಲ್ಲಿ ಭಗವಂತನ ಮೌನವು ಸಮಾಪ್ತವಾಗುತ್ತದೆ.”
ಅಂತರ್ಬೋಧೆಯಿಂದ ಒಂದು ಸಮಸ್ಯೆಯನ್ನು ಬಗೆಹರಿಸಲು ನೀವು ಬಯಸಿದಾಗಲೆಲ್ಲ, ನಿಮಗೆ ಪಾಠಗಳಲ್ಲಿ ಬೋಧಿಸಿರುವ ಹಾಗೆ, ಮೊದಲು ಗಾಢವಾದ ಧ್ಯಾನದಲ್ಲಿ ಅಥವಾ ಮೌನದಲ್ಲಿ ತೊಡಗಿಕೊಳ್ಳಿ. ಧ್ಯಾನದ ಸಮಯದಲ್ಲಿ ನಿಮ್ಮ ಸಮಸ್ಯೆಗಳ ಬಗ್ಗೆ ಯೋಚಿಸಬೇಡಿ. ನಿಮ್ಮ ಶರೀರದ ಆಂತರಿಕ ವಿವಿಕ್ತ ಸ್ಥಾನಗಳೆಲ್ಲವೂ ಪ್ರಶಾಂತತೆಯ ಭಾವದಿಂದ ತುಂಬಿವೆ ಎಂದು ನೀವು ಮನಗಾಣುವವರೆಗೂ – ದಿವ್ಯ ಸಂತೋಷವು ಆತ್ಮದ ಆಂತರಿಕ ವಿವಿಕ್ತ ಸ್ಥಾನವನ್ನು ತುಂಬುವವರೆಗೂ – ಮತ್ತು ಉಸಿರಾಟವು ಶಾಂತ ಮತ್ತು ನಿಶ್ಚಲವಾಗುವವರೆಗೂ ಧ್ಯಾನ ಮಾಡಿ. ನಂತರ ಏಕಕಾಲದಲ್ಲಿ ಹುಬ್ಬುಗಳ ನಡುವಿನ ಕೇಂದ್ರ (ಕ್ರಿಸ್ತ ಪ್ರಜ್ಞೆಯ ಕೇಂದ್ರ) ಮತ್ತು ಹೃದಯದ ಮೇಲೆ ಕೇಂದ್ರೀಕರಿಸಿ. ಅಂತಿಮವಾಗಿ, ನಿಮ್ಮ ಸಮಸ್ಯೆಗಳ ಬಗ್ಗೆ ನೀವು ಏನು ಮಾಡಬೇಕೆಂದು ತಿಳಿಯಲು ಭಗವಂತನು ನಿಮ್ಮ ಅಂತರ್ಬೋಧೆಯನ್ನು ನಿರ್ದೇಶಿಸಲು ಕೇಳಿಕೊಳ್ಳಿ.
ಸ್ಪಷ್ಟವಾಗಿ-ಯೋಚಿಸುವ ಮನುಷ್ಯನನ್ನು ಅತಿಯಾಗಿ ಯೋಚಿಸುವ ಮನುಷ್ಯನಿಗಿಂತ ಬೇರೆ ಎಂದು ಗುರುತಿಸಬೇಕು.…ಅಂತರ್ಬೋಧೆಯು ಕೇವಲ ಪ್ರಶಾಂತತೆಯಲ್ಲಿ ಅಭಿವ್ಯಕ್ತಿಯಾಗುತ್ತದೆ; ಅವಿಕಸಿತ ಮನುಷ್ಯನಲ್ಲಿ, ಅದು ಆಗಾಗ ಸಕ್ರಿಯ ಮನಸ್ಸಿನ ಮತ್ತು ಅವಿಶ್ರಾಂತ ಇಂದ್ರಿಯಗಳ ವಿಶ್ರಾಂತಿಯ ಅವಧಿಗಳ ಕಿಂಡಿಗಳ ಮೂಲಕ ಇಣುಕಿನೋಡುತ್ತದೆ. ಸ್ಪಷ್ಟವಾಗಿ-ಯೋಚಿಸುವ ವ್ಯಕ್ತಿಯು, ಬುದ್ಧಿಶಕ್ತಿಯು ಅವನ ಅಂತರ್ಬೋಧೆಯನ್ನು ಅತಿಕ್ರಮಿಸಲು ಬಿಡುವುದಿಲ್ಲ; ಅವನ ಸಹನಶೀಲ ಶಾಂತತೆಯಿಂದ, ಅವನು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು, ಅವನನ್ನು ಮಾರ್ಗದರ್ಶಿಸುವ ಕಾರ್ಯದಲ್ಲಿ ಅಂತರ್ಬೋಧೆಯು ಸಂಪೂರ್ಣವಾಗಿ ತೊಡಗಿಕೊಳ್ಳಲು ಅನುಮತಿ ನೀಡುತ್ತಾನೆ.
ಪ್ರಜ್ಞೆಯ ಉನ್ನತ ಸ್ಥಿತಿ ಮತ್ತು ಭಗವಂತನ ಗ್ರಹಿಕೆಯನ್ನು ಸಿದ್ಧಿಸಿಕೊಳ್ಳಲು, ಧ್ಯಾನದ ಮೂಲಕ ಮನಸ್ಸನ್ನು ಅದರ ಅವಿರತ ಅಶಾಂತ ಚಟುವಟಿಕೆಗಳಿಂದ ಹಿಂತೆಗೆದುಕೊಳ್ಳುವುದು ಆವಶ್ಯಕ. ಆ ಆಂತರೀಕೃತ ಸ್ಥಿತಿಯಲ್ಲಿ, ಆಧ್ಯಾತ್ಮಿಕ ಸೂಕ್ಷ್ಮ ಸಂವೇದನೆ ಅಥವಾ ಅಂತರ್ಬೋಧೆಯು ಜಾಗೃತವಾಗುತ್ತದೆ.
ಸಮಾಧಿ ಧ್ಯಾನದಲ್ಲಿ ತನ್ನ ಅರಿವು ಮತ್ತು ಪ್ರಾಣ ಶಕ್ತಿಯನ್ನು ಸ್ಥೂಲ ಶರೀರ ಮತ್ತು ಇಂದ್ರಿಯಗಳ ಸಾಮ್ರಾಜ್ಯದಿಂದ ಹಿಂತೆಗೆದುಕೊಂಡಂತಹ ಒಬ್ಬ ಮುಂದುವರಿದ ಕ್ರಿಯಾ ಯೋಗಿಯು, ಸೂಕ್ಷ್ಮ ಪರಿಜ್ಞಾನವನ್ನು ಹೊರಗೆಡಹುವ ಆಂತರಿಕ ಪ್ರಪಂಚವನ್ನು ಪ್ರವೇಶಿಸುತ್ತಾನೆ. ಅವನು ಬೆನ್ನುಹುರಿ ಮತ್ತು ಮಿದುಳಿನಲ್ಲಿರುವ ಚೈತನ್ಯದ ಏಳು ಯಜ್ಞವೇದಿಗಳ ಬಗ್ಗೆ ಅರಿವು ಹೊಂದುತ್ತಾನೆ ಮತ್ತು ಅವುಗಳಿಂದ ಹೊರಡುವ ಎಲ್ಲ ಜ್ಞಾನವನ್ನೂ ಪಡೆಯುತ್ತಾನೆ. ಹೀಗೆ, ಅಂತರ್ಬೋಧಿತ ಆತ್ಮ-ಗ್ರಹಿಕೆಯ ಮೂಲಕ ಸತ್ಯದೊಡನೆ ಶ್ರುತಿಗೂಡುವ ಅವನು, ತನ್ನ ಆಧ್ಯಾತ್ಮಿಕ ಮತ್ತು ಲೌಕಿಕ ಕರ್ತವ್ಯಪರ ನಡವಳಿಕೆಯ ಎಲ್ಲ ಅಂಶಗಳಿಗೂ ಇರುವ ಸರಿಯಾದ ಮಾರ್ಗದರ್ಶನವನ್ನು ತಿಳಿದೇ ತಿಳಿಯುತ್ತಾನೆ.
ಮನಸ್ಸು ಯಾವುದೇ ವಿರೂಪವೆಲ್ಲದೆ ಆಂತರಿಕ ದನಿಯ ದೋಷಾತೀತ ಸಲಹೆಯನ್ನು ಕೇಳಿಸಿಕೊಳ್ಳಲು ಸಾಧ್ಯವಾಗುವಂತೆ ಅದನ್ನು ಶಾಂತಗೊಳಿಸುವುದೇ ಯೋಗ ವಿಜ್ಞಾನದ ಉದ್ದೇಶ.
ಭಗವಂತನು ಅಂತರ್ಬೋಧೆಯ ಮೂಲಕ ನಿಮ್ಮೊಡನೆ ಮಾತನಾಡುತ್ತಾನೆ …
ಚೇತನವು, ಒಂದು ದರ್ಶನದಲ್ಲಿ, ಒಂದು ಆಕೃತಿಯ ತುಟಿಗಳ ಮೂಲಕವೋ ಅಥವಾ ಮೂರ್ತೀಭವಿಸಿದ ಮಾನವ ಶರೀರದ ಮೂಲಕವೋ ಮಾತನಾಡಬೇಕಂತಿಲ್ಲ, ಅದರೆ ಭಕ್ತನ ಜಾಗೃತಗೊಂಡ ಅಂತರ್ಬೋಧೆಯ ಮಾಧ್ಯಮದ ಮೂಲಕ ಜ್ಞಾನದ ನುಡಿಗಳನ್ನು ತಿಳಿಸಬಹುದು. ಒಬ್ಬ ಸಂತನ ರೂಪವನ್ನು ಧರಿಸಿ, ಭಗವಂತನು ಭಕ್ತನಿಗೆ ಸಲಹೆ ನೀಡಬಹುದು, ಆದರೆ ಸಾಮಾನ್ಯವಾಗಿ ಅವನು ಭಕ್ತನದೇ ಅಂತರ್ಬೋಧೆಯ ಗ್ರಹಿಕೆಯ ಮೂಲಕ ಮಾತನಾಡುವ ಸರಳ ವಿಧಾನವನ್ನು ಉಪಯೋಗಿಸುತ್ತಾನೆ.
ಮೌನವೇ ಭಗವಂತನ ಧ್ವನಿ. ಕೇವಲ ಅಶಾಂತ ಆಲೋಚನೆಗಳು ನಿಂತಾಗ ಮಾತ್ರ ಒಬ್ಬರು ಅಂತರ್ಬೋಧೆಯ ಮೌನದಲ್ಲಿ ಭಗವಂತನ ಸಂದೇಶದ ಧ್ವನಿಯನ್ನು ಕೇಳಬಹುದು. ಅದು ಭಗವಂತನು ಪ್ರಕಟಪಡಿಸುವ ಮಾರ್ಗ. ಭಕ್ತನ ಮೌನದಲ್ಲಿ ಭಗವಂತನ ಮೌನವು ಸಮಾಪ್ತವಾಗುತ್ತದೆ.
ಆತ್ಮ ಮತ್ತು ಭಗವಂತನ ಸಂಸರ್ಗವನ್ನು ಅನುಭವಿಸಲು, ಕ್ರಿಯಾ ಯೋಗದಲ್ಲಿರುವಂತೆ ನಿಷ್ಪಕ್ಷಪಾತ ಆತ್ಮಾವಲೋಕನ ಮತ್ತು ಆಳವಾದ ಧ್ಯಾನದಿಂದ ತನ್ನ ಅಂತರ್ಬೋಧೆಯನ್ನು ಸಾಕಷ್ಟು ಬೆಳೆಸಿಕೊಳ್ಳುವವರೆಗೆ ಯಾವುದೇ ಭಕ್ತನು ತೃಪ್ತನಾಗಬಾರದು. ಒಬ್ಬ ಭಕ್ತನು ಪ್ರತಿನಿತ್ಯ ಕನಿಷ್ಠ ಸಣ್ಣ ಅವಧಿಗಳಲ್ಲಿ ಗಾಢವಾಗಿ ಮತ್ತು ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಮೂರು ನಾಲ್ಕು ಘಂಟೆಗಳ ದೀರ್ಘಾವಧಿಯ ಧ್ಯಾನ ಮಾಡಿದಲ್ಲಿ, ಆತ್ಮ ಮತ್ತು ಭಗವಂತನ ನಡುವೆ ನಡೆಯುವ ಆನಂದಮಯ ಜ್ಞಾನದ ವಾರ್ತಾಲಾಪವನ್ನು ನಿರಂತರವಾಗಿ ಅರಿಯಲು ಅವನ ಅಂತರ್ಬೋಧೆಯು ಸಾಕಷ್ಟು ಸೂಕ್ಷ್ಮವಾಗುವುದನ್ನು ಅವನು ಮನಗಾಣುತ್ತಾನೆ.ಅವನು ಆತ್ಮವು ಭಗವಂತನೊಂದಿಗೆ “ಮಾತನಾಡುವಂಥ” ಸಂಸರ್ಗದ ಆಂತರೀಕೃತ ಸ್ಥಿತಿಯನ್ನು ಅರಿಯುತ್ತಾನೆ ಹಾಗೂ ಪ್ರತಿಕ್ರಿಯೆಯನ್ನು ಪಡೆಯುತ್ತಾನೆ, ಯಾವುದೇ ಮಾನುಷ ಭಾಷೆಯ ಉಚ್ಚಾರಣೆಗಳಿಂದಲ್ಲ, ಬದಲಿಗೆ ಪದಗಳಿಲ್ಲದ ಅಂತರ್ಬೋಧಿತ ವಿನಿಮಯಗಳ ಮೂಲಕ.
ನೈಜ ಧರ್ಮ ಅಂತರ್ಬೋಧೆಯ ಮೇಲೆ ಅವಲಂಬಿತವಾಗಿದೆ
ಭೂಮಿಯ ಮೇಲಿನ ಎಲ್ಲ ನೈಜ ಧರ್ಮಗಳೂ ಅಂತರ್ಬೋಧೆಯ ಜ್ಞಾನದ ಮೇಲೆ ಅವಲಂಬಿತವಾಗಿವೆ. ಪ್ರತಿಯೊಂದೂ ಸಹ ಒಂದು ಸರ್ವಗ್ರಾಹ್ಯ ಸಿದ್ಧಾಂತ ಅಥವಾ ಬಾಹ್ಯ ವಿಶಿಷ್ಟತೆ ಮತ್ತು ಒಂದು ಗೂಢ ಅನುಭಾವದ ಅಥವಾ ಆಂತರಿಕ ಅಂತಸ್ಸಾರವನ್ನು ಹೊಂದಿದೆ. ಸರ್ವಗ್ರಾಹ್ಯ ಅಂಶವು ಸಾರ್ವಜನಿಕ ಚಿತ್ರವಾಗಿದೆ ಮತ್ತು ಅದರ ಹಿಂಬಾಲಕರಾದ ಸಾಮಾನ್ಯ ಜನರನ್ನು ಮಾರ್ಗದರ್ಶಿಸಲು ಅದರೊಳಗೆ ನೈತಿಕ ಆಚಾರ ಸೂತ್ರಗಳನ್ನು ಮತ್ತು ಸಿದ್ಧಾಂತಗಳ, ಮತತತ್ತ್ವಗಳ, ದೀರ್ಘ ವ್ಯಾಖ್ಯಾನಗಳ, ನಿಯಮಗಳ ಮತ್ತು ಸಂಪ್ರದಾಯಗಳ ಒಡಲನ್ನು ಒಳಗೊಂಡಿರುತ್ತದೆ. ಅಂತಸ್ಥವಾದ ಅಂಶವು ಆತ್ಮವು ಭಗವಂತನೊಂದಿಗೆ ವಸ್ತುತಃ ಸಂಸರ್ಗವನ್ನು ಹೊಂದಲು ಬೇಕಾದ ಮಾರ್ಗಗಳನ್ನು ಒಳಗೊಂಡಿರುತ್ತದೆ. ಸರ್ವಗ್ರಾಹ್ಯ ಅಂಶವು ಹಲವರಿಗಾಗಿದೆ; ಅಂತಸ್ಥವಾದ ಅಂಶವು ಅತ್ಯುತ್ಸಾಹವುಳ್ಳ ಕೆಲವರಿಗಾಗಿ ಮಾತ್ರ. ಧರ್ಮದ ಅಂತಸ್ಥವಾದ ಅಂಶವೇ ಅಂತರ್ಬೋಧೆಯತ್ತ, ಯಥಾರ್ಥತೆಯ ಮೂಲ ಜ್ಞಾನದತ್ತ ಕರೆದೊಯ್ಯುತ್ತದೆ.
ಸೃಷ್ಟಿಕರ್ತನ ಬಗ್ಗೆ ಮಾಡುವ ಬೌದ್ಧಿಕ ಪ್ರವಚನಗಳು ನಿಮಗೆ ಭಗವಂತನನ್ನು ದಯಪಾಲಿಸುವುದಿಲ್ಲ. ಆದರೆ ಅವನನ್ನು ಒಳಗೆ ಅನ್ವೇಷಿಸುವುದರಿಂದ, ಪ್ರತಿದಿನ ಪ್ರಯತ್ನ ಮಾಡುವುದರಿಂದ, ನೀವು ಅವನನ್ನು ಕಾಣುವಿರಿ. ಭಗವಂತನೆಡೆಗಿನ ಮಾರ್ಗದ ಪಯಣ ಬೌದ್ಧಿಕತೆಯ ಮೂಲಕವಲ್ಲ, ಬದಲಾಗಿ ಅಂತರ್ಬೋಧೆಯ ಮೂಲಕ.
ಐಹಿಕ ಜೀವನದೊಂದಿಗೆ ಓದುವ ಮತ್ತು ಕೆಲಸ ಮಾಡುವ ಸಾಮಾನ್ಯ ಮಾನವ ಜೀವಿಗಳು, ತಮ್ಮ ತಿಳುವಳಿಕೆಯಲ್ಲಿ, ತಮ್ಮ ಇಂದ್ರಿಯ ಗ್ರಹಿಕೆಗಳ ಮತ್ತು ತಾರ್ಕಿಕ ಬುದ್ಧಿಯ ಮಿತಿಗೊಳಪಟ್ಟಿರುತ್ತಾರೆ. ಅಂತರ್ಬೋಧೆಯು ಅಭಿವೃದ್ಧಿಯಾಗದಿರುವುದರಿಂದ, ಅವರ ಬೌದ್ಧಿಕತೆಯ ಸೀಮಿತ ಶಕ್ತಿಯು ಚೇತನದ ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರದು, ಅಂತಹ ಸತ್ಯವನ್ನು ಅವರಿಗೆ ನಿರೂಪಿಸಿದರೂ ಸಹ. ಅಸಾಧಾರಣ ಬುದ್ಧಿಶಾಲಿಗಳು ಮತ್ತು ವಿಖ್ಯಾತ ದೇವತಾಶಾಸ್ತ್ರಜ್ಞರು ಆತ್ಮದ ಬಗ್ಗೆ ಸಾಕಷ್ಟು ಓದಿಕೊಂಡಿರಬಹುದು, ಆದಾಗ್ಯೂ ಅದರ ಬಗ್ಗೆ ಅವರಿಗೆ ಸ್ವಲ್ಪವೂ ತಿಳಿದಿರುವುದಿಲ್ಲ!
ಇನ್ನೊಂದೆಡೆಗೆ, ಗಾಢ ಧ್ಯಾನದಲ್ಲಿ ನಿರತರಾದ ಅನಕ್ಷರಸ್ಥರೂ ಕೂಡ, ತಮ್ಮ ಪ್ರತ್ಯಕ್ಷ ಅನುಭವದಿಂದ ಆತ್ಮದ ಸ್ವಭಾವವನ್ನು ಸ್ಪಷ್ಟವಾಗಿ ವಿವರಿಸಬಲ್ಲರು. ಅಂತರ್ಬೋಧೆಯು ಆತ್ಮದ ಬೌದ್ಧಿಕ ಜ್ಞಾನ ಮತ್ತು ಭಗವಂತನ ನೈಜ ಸಾಕ್ಷಾತ್ಕಾರದ ನಡುವಿನ ಶೂನ್ಯವನ್ನು ತುಂಬುತ್ತದೆ.
ನಿಸ್ಸಂದಿಗ್ಧವಾದ ಅಂತರ್ಭೋಧೆಯ ಸಹಾಯವಿಲ್ಲದ ಬೌದ್ಧಿಕ ಮಹಾಮಹಿಮರು, ಹಲವಾರು ಭಾಷೆಗಳ ಪರಿಣತರಾಗಿದ್ದರೂ, ಜ್ಞಾನ ಮತ್ತು ನಿಗಮನಾತ್ಮಕ ತತ್ತ್ವಜಿಜ್ಞಾಸೆಯ ನಡೆದಾಡುವ ಸಾಕ್ಷಾತ್ ಪುಸ್ತಕ ಭಂಡಾರಗಳಾಗಿದ್ದರೂ, ಒಂದು ಭ್ರಾಂತಿಗೊಳಗಾದ ಬುದ್ಧಿವಂತಿಕೆಯನ್ನು ಹೊಂದಿರುತ್ತಾರೆ — ಸಾಪೇಕ್ಷತೆಯ ಸ್ತರದಲ್ಲಿ ಕೆಲಸ ಮಾಡಿದರೂ, ದಿವ್ಯ ಜ್ಞಾನಕ್ಕೆ ತಡೆಯೊಡ್ಡುವಂಥ ಬುದ್ಧಿವಂತಿಕೆ.
ಕೇವಲ ಅಂತರ್ಬೋಧೆಯಿಂದ ಮಾತ್ರ ಭಗವಂತನನ್ನು ಅವನ ಎಲ್ಲ ಅಂಶಗಳಲ್ಲೂ ಅರಿಯಬಹುದು. ಅವನ ವಿಷಯವನ್ನು ತಿಳಿಯಪಡಿಸಲು ಸಾಧ್ಯವಿರುವ ಯಾವುದೇ ಇಂದ್ರಿಯ ನಮಗಿಲ್ಲ; ಇಂದ್ರಿಯಗಳು ಅವನ ಅಭಿವ್ಯಕ್ತಿಗಳ ಜ್ಞಾನವನ್ನು ಮಾತ್ರ ನೀಡುತ್ತವೆ. ವಸ್ತುತಃ ಅವನು ಹೇಗಿದ್ದಾನೆ ಎಂಬುದನ್ನು ಅರಿಯಲು ಯಾವ ಆಲೋಚನೆ ಅಥವಾ ಊಹೆ ಕೂಡ ನಮಗೆ ಸಾಧ್ಯವಾಗಿಸಲಾರದು, ಏಕೆಂದರೆ, ಆಲೋಚನೆಯು ಇಂದ್ರಿಯಗಳ ಮಾಹಿತಿಗಿಂತ ಆಚೆಗೆ ಹೋಗಲಾರದು; ಅದು ಕೇವಲ ಇಂದ್ರಿಯಗಳ ಅನಿಸಿಕೆಗಳನ್ನು ಮಾತ್ರ ಜೋಡಿಸಿ ವ್ಯಾಖ್ಯಾನಿಸಬಹುದು.
ಭಗವಂತನು ಮನಸ್ಸು ಮತ್ತು ಬುದ್ಧಿಶಕ್ತಿಯ ಆಚೆಗಿದ್ದಾನೆ…ಕೇವಲ ಆತ್ಮದ ಅಂತರ್ಬೋಧೆಯ ಶಕ್ತಿಯಿಂದ ಮಾತ್ರ ಅವನ ನೈಜ ಪ್ರಕೃತಿಯನ್ನು ಅನುಭವಿಸಬಹುದು. ನಾವು ಅವನ ಪ್ರಜ್ಞೆಯನ್ನು ಮನಸ್ಸು ಮತ್ತು ಬುದ್ಧಿಶಕ್ತಿಯ ಕೇಂದ್ರವಾದ ಅತೀತ ಪ್ರಜ್ಞೆಯಿಂದ ಕಂಡುಕೊಳ್ಳಬೇಕು. ಅವನ ಎಲ್ಲೆಯಿಲ್ಲದ ಪ್ರಕೃತಿಯು ಮನುಷ್ಯನಿಗೆ ಆತ್ಮದ ಅಂತರ್ಬೋಧೆಯುಳ್ಳ ಅತೀತ ಪ್ರಜ್ಞೆಯ ಮೂಲಕ ಪ್ರಕಟವಾಗುತ್ತದೆ. ಧ್ಯಾನದಲ್ಲಿ ಅನುಭವಕ್ಕೆ ಬಂದ ಆನಂದವು ಇಡೀ ಸೃಷ್ಟಿಯಲ್ಲಿ ಪಸರಿಸಿರುವ ನಿತ್ಯ ಆನಂದದ ಉಪಸ್ಥಿತಿಯನ್ನು ಪ್ರಕಟಗೊಳಿಸುತ್ತದೆ. ಧ್ಯಾನದಲ್ಲಿ ಕಾಣುವ ಬೆಳಕು ನಮ್ಮ ಮೂರ್ತ ಸೃಷ್ಟಿಯನ್ನು ಉಂಟುಮಾಡಿರುವ ಸೂಕ್ಷ್ಮ ಬೆಳಕಾಗಿದೆ. ಈ ಬೆಳಕನ್ನು ಕಂಡಾಗ, ಒಬ್ಬರು ಎಲ್ಲ ವಸ್ತು ವಿಷಯಗಳ ಜೊತೆ ಏಕತೆಯನ್ನು ಮನಗಾಣುತ್ತಾರೆ.
“ಭಗವಂತನು ಮನಸ್ಸು ಮತ್ತು ಬುದ್ಧಿಶಕ್ತಿಯ ಆಚೆಗಿದ್ದಾನೆ…ಕೇವಲ ಆತ್ಮದ ಅಂತರ್ಬೋಧೆಯ ಶಕ್ತಿಯಿಂದ ಮಾತ್ರ ಅವನ ನೈಜ ಪ್ರಕೃತಿಯನ್ನು ಅನುಭವಿಸಬಹುದು.”
ಅಂತರ್ಬೋಧೆಯು ನೈಜ ಜ್ಞಾನವನ್ನು ನೀಡುತ್ತದೆ, ಅದು ಬ್ರಹ್ಮಾಂಡ ಮಾಯೆಗೆ ಮದ್ದು
ಮನುಷ್ಯ ಭ್ರಮೆಯಿಂದ ಎಷ್ಟು ಮತ್ತನಾಗಿದ್ದಾನೆ ಎಂದರೆ, ಅದು ಅವನ ನಿಜವಾದ ಗ್ರಹಿಕೆಯನ್ನೇ ನಾಶಮಾಡುತ್ತದೆ, ಆಗ ಅವನ ಅಜ್ಞಾನದ ಅಂಧಕಾರಕ್ಕೆ, ಎಲ್ಲೆಡೆ ಅನುರಣಿಸುತ್ತಿರುವ ಭಗವಂತನ ಬೆಳಕನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಹೀಗೆ ಭಗವಂತನ ಸರ್ವವ್ಯಾಪಿತ್ವವನ್ನು ಅರಿತಿರುವ ಆತ್ಮದ ಅಂತಸ್ಥ ಅಂತರ್ಬೋಧೆಯ ಪ್ರಜ್ಞೆಯನ್ನು ಅಸ್ಪಷ್ಟಗೊಳಿಸಲು ಮತ್ತು ಗಲಿಬಿಲಿಗೊಳಿಸಲು ಬ್ರಹ್ಮಾಂಡ ಮಾಯೆ ಮತ್ತು ವೈಯಕ್ತಿಕ ಭ್ರಮೆ ಅಥವಾ ಅಜ್ಞಾನ (ಅವಿದ್ಯೆ)ವೆರಡೂ ಒಟ್ಟಿಗೇ ಕೆಲಸ ಮಾಡುತ್ತವೆ. ಧ್ಯಾನದಲ್ಲಿ ಇಂದ್ರಿಯಗಳ ಮೇಲೆ ಅವಲಂಬಿತವಾದ ಈ ಅಂಧಕಾರವು ದೂರವಾಗುತ್ತದೆ ಮತ್ತು ಅಂತರ್ಬೋಧೆಯು ಮೇಲುಗೈ ಸಾಧಿಸುತ್ತದೆ, ಆಗ ಬೆಳಕಿನ ಇಡೀ ಬ್ರಹ್ಮಾಂಡದ ವೈಶಾಲ್ಯದಲ್ಲಿ ಒಬ್ಬನು ತಾನೇ ಬೆಳಕಾಗಿರುವುದನ್ನು ಅರಿತುಕೊಳ್ಳುತ್ತಾನೆ.
ಮನುಷ್ಯನು ದಿವ್ಯ ಪ್ರಜ್ಞೆಯ ಆ ಆಂತರಿಕ ಸಾಮ್ರಾಜ್ಯದಲ್ಲಿ ಸ್ಥಿತನಾದಾಗ, ಜಾಗೃತಗೊಂಡ ಆತ್ಮದ ಅಂತರ್ಬೋಧಿತ ಗ್ರಹಿಕೆಯು ಭೌತ ದ್ರವ್ಯ, ಪ್ರಾಣಶಕ್ತಿ ಮತ್ತು ಪ್ರಜ್ಞೆಯ ಪರದೆಯನ್ನು ಭೇದಿಸಿ ಎಲ್ಲ ವಸ್ತುಗಳ ಅಂತರಾಳದಲ್ಲಿರುವ ಭಗವಂತನ-ಅಸ್ತಿತ್ವವನ್ನು ತೆರೆದು ತೋರಿಸುತ್ತದೆ.
ಧ್ಯಾನದಿಂದ ಮತ್ತು ದಿವ್ಯ ಬೋಧನೆಗಳ ಭಕ್ತಿಪೂರ್ಣ ಅಭ್ಯಾಸದಿಂದ ಆತ್ಮದ ಅಂತರ್ಬೋಧೆಯು ಬುದ್ಧಿಶಕ್ತಿಯ ಬೆಳವಣಿಗೆಯನ್ನು ಮಾರ್ಗದರ್ಶಿಸಲಾರಂಭಿಸಿದಾಗ, ಜ್ಞಾನದ ಬದಲು ಭ್ರಮೆಯು ನಾಶವಾಗುತ್ತದೆ.
ಇಂದ್ರಿಯಾತೀತ ದರ್ಶನ
ಈ ಬದುಕು ಭಗವಂತನು ಬರೆದ ಪ್ರೌಢ ಕಾದಂಬರಿ. ಇದನ್ನು ಕೇವಲ ತರ್ಕದಿಂದ ಅರಿಯಲು ಬಯಸಿದರೆ ಮನುಷ್ಯನು ಹುಚ್ಚನಾಗುತ್ತಾನೆ. ಆದ್ದರಿಂದಲೇ ನಾನು ನಿಮಗೆ ಹೆಚ್ಚು ಧ್ಯಾನ ಮಾಡಲು ಹೇಳುವುದು. ನಿಮ್ಮ ಅಂತರ್ಬೋಧೆಯ ಅದ್ಭುತ ಮಾಯಾ ಬಟ್ಟಲನ್ನು ದೊಡ್ಡದು ಮಾಡಿಕೊಳ್ಳಿ. ಆಗ ನೀವು ಅನಂತ ಜ್ಞಾನದ ಸಾಗರವನ್ನು ಹಿಡಿದಿಟ್ಟುಕೊಳ್ಳಬಲ್ಲಿರಿ.
ಯಾವ ಭಕ್ತನು ಶರೀರ ಪ್ರಜ್ಞೆಯ ಸಮೀಪ ದೃಷ್ಟಿಯನ್ನು ಮೀರಿ ಹೋಗುತ್ತಾನೋ ಅವನು ದಿವ್ಯ ಅಂತರ್ಬೋಧೆಯ ಉನ್ನತ ದೃಷ್ಟಿಯಿಂದ ನೋಡುತ್ತಾನೆ ಹಾಗೂ ಭಾವಪರವಶತೆಯ ಗ್ರಹಿಕೆಯಲ್ಲಿ, ಈ ಹಿಂದೆ ಗ್ರಹಿಲಾಗದಿದ್ದಂತಹ ಸೃಷ್ಟಿಯಲ್ಲಿನ ದ್ವಂದ್ವಗಳನ್ನು ಸೌಂದರ್ಯ ಹಾಗೂ ಆನಂದ ಎಂದು ಅರ್ಥಮಾಡಿಕೊಳ್ಳುತ್ತಾನೆ.
ಈ ಸತ್ಯವನ್ನು ಗೀತೆಯು ಎಷ್ಟು ಅರ್ಥವತ್ತಾಗಿ ಕೊಂಡಾಡುತ್ತದೆ: “ಅಸಂಖ್ಯಾತ ದಿವ್ಯ ಉಡುಗೆಗಳು, ಹಾರಗಳು ಮತ್ತು ಆಭರಣಗಳಿಂದ ಅಲಂಕೃತವಾಗಿದ್ದಾನೆ” — ತಾರೆಗಳೇ ಅವನ ಕಿರೀಟದ ರತ್ನಗಳು, ಭೂಮಿಯೇ ಅವನ ಪಾದಪೀಠ; ಸೃಷ್ಟಿ, ಸ್ಥಿತಿ, ಲಯಗಳ ಕಾಲಚಕ್ರದ ಛಂದೋಗತಿಯಲ್ಲಿ ಅವನು ಆನಂದದಿಂದ ನರ್ತಿಸುತ್ತಿರುವಾಗ, ಅವನ ಉಡುಗೆಗಳ ಝಳಪು ಮತ್ತು ಮೇಲಂಗಿಯ ಎಳೆತಗಳೇ ಮಿಂಚು, ಮೇಘನಾದ, ಚಂಡಮಾರುತ ಹಾಗೂ ಜಲಪ್ರಳಯಗಳು. ಬಾಹ್ಯಗೋಚರ ಪ್ರಪಂಚದಲ್ಲಿನ ಪ್ರತಿಯೊಂದೂ ಭಗವಂತನ ಬ್ರಹ್ಮಾಂಡ ಉಡುಗೆಯನ್ನು ಸಿಂಗರಿಸುವ ಒಂದು ಹೆಚ್ಚುವರಿ ಅಲಂಕಾರ; ಈ ಎಲ್ಲದರ ಹಿಂದಡಗಿರುವುದೇ ದಿವ್ಯ ಸತ್ಯ.
ಸಹನೆಯಿಂದ ಮತ್ತು ಎಡೆಬಿಡದೆ ಧ್ಯಾನ ಮಾಡಿ. ಒಟ್ಟುಗೂಡುವ ಪ್ರಶಾಂತತೆಯಲ್ಲಿ, ನೀವು ಆತ್ಮದ ಅಂತರ್ಬೋಧೆಯ ಸಾಮ್ರಾಜ್ಯವನ್ನು ಪ್ರವೇಶಿಸುತ್ತೀರಿ. ಯುಗಯುಗಗಳಿಂದಲೂ, ಈ ಭಗವತ್-ಸಂಸರ್ಗದ ಆಂತರಿಕ ಜಗತ್ತಿನ ಆಸರೆ ಇದ್ದವರೇ ಸಾಕ್ಷಾತ್ಕಾರವನ್ನು ಹೊಂದಿದ್ದವರು. ಏಸು ಹೇಳಿದ್ದಾನೆ: “ನೀನು ಪ್ರಾರ್ಥಿಸಿದಾಗ, ನಿನ್ನ ಅಂತರಂಗವನ್ನು ಪ್ರವೇಶಿಸು ಮತ್ತು ನೀನು ನಿನ್ನ ದ್ವಾರವನ್ನು ಮುಚ್ಚಿದಾಗ, ರಹಸ್ಯವಾಗಿ ನಿನ್ನ ತಂದೆಯನ್ನು ಪ್ರಾರ್ಥಿಸು; ರಹಸ್ಯವಾಗಿ ನೋಡುವ ನಿನ್ನ ತಂದೆಯು, ಪ್ರತ್ಯಕ್ಷವಾಗಿ ನಿನ್ನನ್ನು ಪುರಸ್ಕರಿಸುತ್ತಾನೆ.”*
ಇಂದ್ರಿಯಗಳ ಮತ್ತು ಅವಿಶ್ರಾಂತ ಜಗತ್ತಿನೊಡನೆ ಅವುಗಳ ಹಸ್ತಕ್ಷೇಪದ ದ್ವಾರವನ್ನು ಮುಚ್ಚಿ ನಿಮ್ಮ ಆಂತರ್ಯದೊಳಗೆ ಹೋಗಿ, ಆಗ ಭಗವಂತನು ತನ್ನೆಲ್ಲಾ ಭವ್ಯತೆಯಲ್ಲಿ ನಿಮಗೆ ಪ್ರತ್ಯಕ್ಷವಾಗುತ್ತಾನೆ.
*ಮ್ಯಾಥ್ಯೂ 6:6.