ಇತರರಿಗಾಗಿ ಪ್ರಾರ್ಥಿಸುವುದು ಹೇಗೆ

ದಯಾ ಮಾತಾ ಇತರರಿಗಾಗಿ ಹೇಗೆ ಪ್ರಾರ್ಥಿಸಬೇಕು ಎಂಬುದರ ಕುರಿತು ಮಾತನಾಡುತ್ತಾರೆ“ಆಲೋಚನೆಯು ಒಂದು ಬಲ; ಅದಕ್ಕೆ ಅಗಾಧವಾದ ಶಕ್ತಿಯಿದೆ. ಆದುದರಿಂದಲೇ ನಾನು ಪರಮಹಂಸ ಯೋಗಾನಂದರು ಪ್ರಾರಂಭಿಸಿದ ಜಾಗತಿಕ ಪ್ರಾರ್ಥನಾ ಸಮೂಹದಲ್ಲಿ ಬಲವಾದ ನಂಬಿಕೆಯನ್ನಿಟ್ಟುಕೊಂಡಿರುವೆ. ನೀವೂ ಕೂಡ ಅದರಲ್ಲಿ ಭಾಗವಹಿಸುತ್ತಿರುವಿರೆಂದು ನನಗೆ ಭರವಸೆಯಿದೆ. ಜಾಗತಿಕ ಪ್ರಾರ್ಥನಾ ಸಮೂಹವು ಬಳಸುವ ಉಪಶಮನದಾಯಕ ತಂತ್ರದಂತೆ, ಜನರು ಶಾಂತಿ, ಪ್ರೀತಿ, ಸದ್ಭಾವನೆ, ಕ್ಷಮೆ ಇವುಗಳ ಕೇಂದ್ರೀಕೃತ ಸಕಾರಾತ್ಮಕ ಆಲೋಚನೆಗಳನ್ನು ಕಳುಹಿಸಿದಾಗ, ಅದು ದೊಡ್ಡ ಶಕ್ತಿಯನ್ನು ಹುಟ್ಟು ಹಾಕುತ್ತದೆ. ಇದನ್ನು ಸಾಮೂಹಿಕವಾಗಿ ಮಾಡಿದಾಗ, ಅದು ಜಗತ್ತನ್ನೇ ಬದಲಾಯಿಸಬಲ್ಲಷ್ಟು ಶಕ್ತಿಯುತವಾದ ಸದ್ಭಾವದ ಸ್ಪಂದನಗಳನ್ನು ಸೃಷ್ಟಿಸುತ್ತದೆ.”

—ಶ್ರೀ ದಯಾ ಮಾತಾ

ನಮ್ಮ ಪ್ರಾರ್ಥನೆಗಳು ಬೇರೆಯವರ ಜೀವನದಲ್ಲಿ ಹೇಗೆ ಪ್ರಭಾವ ಬೀರಬಲ್ಲವು? ಅವು ಹೇಗೆ ನಮ್ಮ ಜೀವನವನ್ನು ಮೇಲೆತ್ತಬಲ್ಲವೋ ಅದೇ ರೀತಿ: ಪ್ರಜ್ಞೆಯಲ್ಲಿ ಆರೋಗ್ಯ, ಯಶಸ್ಸು ಮತ್ತು ದೈವೀ ಸಹಾಯಕ್ಕೆ ಗ್ರಹಣಶೀಲತೆಯ ಧನಾತ್ಮಕ ವಿನ್ಯಾಸಗಳನ್ನು ಸ್ಥಾಪಿಸುವ ಮೂಲಕ. ಪರಮಹಂಸ ಯೋಗಾನಂದರು ಬರೆಯುತ್ತಾರೆ:

“ಪ್ರಕ್ಷುಬ್ಧತೆಗಳು ಅಥವಾ ಚಡಪಡಿಕೆಯ ‘ಸ್ಥಾಯಿ’ ಯಿಂದ ಮುಕ್ತವಾದ ಮಾನವನ ಮನಸ್ಸು, ಸಂಕೀರ್ಣವಾದ ರೇಡಿಯೋ ಯಾಂತ್ರಿಕ ರಚನೆಯ ಎಲ್ಲಾ ಕಾರ್ಯಗಳನ್ನು ನೆರವೇರಿಸಲು ಶಕ್ತಿಯುತವಾಗಿರುತ್ತದೆ — ಆಲೋಚನೆಗಳನ್ನು ಕಳುಹಿಸುವ ಮತ್ತು ಸ್ವೀಕರಿಸುವ ಹಾಗೂ ಅನಪೇಕ್ಷಿತವಾದವುಗಳನ್ನು ಹೊರಹಾಕುವ ಕಾರ್ಯಗಳ ಮೂಲಕ. ರೇಡಿಯೋ ಪ್ರಸಾರ ಕೇಂದ್ರದ ಸಾಮರ್ಥ್ಯವು, ಅದು ಉಪಯೋಗಿಸುವ ವಿದ್ಯುಚ್ಛಕ್ತಿಯ ಪ್ರಮಾಣದಿಂದ ನಿಯಂತ್ರಿತವಾಗುವಂತೆ, ಮಾನವ ರೇಡಿಯೋ ಯಂತ್ರದ ಪರಿಣಾಮಕಾರಿತ್ವವೂ ಕೂಡ ಪ್ರತಿ ವ್ಯಕ್ತಿಯು ಹೊಂದಿರುವ ಇಚ್ಛಾಶಕ್ತಿಯ ಪ್ರಮಾಣದ ಮೇಲೆ ಅವಲಂಬಿತವಾಗಿದೆ.”

ತಮ್ಮ ಇಚ್ಛಾಶಕ್ತಿಯನ್ನು ಭಗವಂತನ ಇಚ್ಛಾಶಕ್ತಿಯೊಂದಿಗೆ ಪರಿಪೂರ್ಣವಾಗಿ ಶ್ರುತಿಗೂಡಿಸಿಕೊಂಡಿರುವ ಜ್ಞಾನೋದಯ ಹೊಂದಿದ ಸಂತರ ಮನಸ್ಸುಗಳು, ಇತರರಿಗೆ ಶರೀರ, ಮನಸ್ಸು ಮತ್ತು ಚೇತನಗಳನ್ನು ಕ್ಷಣಮಾತ್ರದಲ್ಲಿ ಗುಣಪಡಿಸಬಲ್ಲ ದೈವೀಶಕ್ತಿಯನ್ನು ವರ್ಗಾಯಿಸಬಲ್ಲರು. ಪರಮಹಂಸ ಯೋಗಾನಂದರ ಬರವಣಿಗೆಗಳು ಮತ್ತು ಉಪನ್ಯಾಸಗಳಲ್ಲಿ ಅಂತಹ ಉಪಶಮನಗಳ ಉದಾಹರಣೆಗಳು ಹೇರಳವಾಗಿವೆ. ಅವು ಪವಾಡಗಳಂತೆ ಕಂಡರೂ, ಈ ದೈವಿಕ ಉಪಶಮನಗಳು ಸೃಷ್ಟಿಯ ಸಾರ್ವತ್ರಿಕ ನಿಯಮಗಳನ್ನು ವೈಜ್ಞಾನಿಕವಾಗಿ ಪಾಲಿಸಿದುದರ ಸಹಜ ಪರಿಣಾಮವಾಗಿವೆ. ದೇವರ ಪರಿಪೂರ್ಣ ಕಲ್ಪನಾ ಮಾದರಿಗಳನ್ನು ಇತರರ ಮನಸ್ಸು ಮತ್ತು ದೇಹಗಳಲ್ಲಿ ಪ್ರಕಟಪಡಿಸುವಷ್ಟು ಇಚ್ಛಾಶಕ್ತಿ ಮತ್ತು ಚೈತನ್ಯವನ್ನು ರವಾನಿಸುವ ಮೂಲಕ, ಸಾಕ್ಷಾತ್ಕಾರ ಪಡೆದ ಈ ಅನುಭಾವಿಗಳು ವಿಶ್ವದಲ್ಲಿ ಎಲ್ಲವೂ ಯಾವ ರೀತಿ ರೂಪುಗೊಂಡಿತೋ ಅದೇ ಪ್ರಕ್ರಿಯೆಯನ್ನೇ ಅನುಸರಿಸುತ್ತಾರೆ.

ಈ ನಿಯಮಗಳನ್ನನುಸರಿಸಿ ಪ್ರಾರ್ಥಿಸುವ ಯಾವುದೇ ವ್ಯಕ್ತಿಯು, ಆಕೆಯ ಅಥವಾ ಆತನ ಪ್ರಾರ್ಥನೆಯ ಪ್ರತ್ಯಕ್ಷ ಪ್ರಭಾವವನ್ನು ನೋಡಬಹುದು. ನಮ್ಮ ವೈಯಕ್ತಿಕ ಶಕ್ತಿಯು ಸಹಜವಾಗಿಯೇ ಒಬ್ಬ ಗುರು ವರ್ಗಾಯಿಸುವಷ್ಟು ಪ್ರಬಲವಾಗಿರುವುದಿಲ್ಲವಾದರೂ, ಸಾವಿರಾರು ಜನರ ಪ್ರಾರ್ಥನೆಗಳು ಒಗ್ಗೂಡಿದಾಗ ಉಂಟಾಗುವ ಶಾಂತಿ ಮತ್ತು ದೈವಿಕ ಉಪಶಮನಕಾರಿ ಸ್ಪಂದನಗಳು, ಆಶಿಸಿದ ಪರಿಣಾಮವನ್ನು ಬೀರಲು ನೆರವಾಗುವಲ್ಲಿ ಬೆಲೆಕಟ್ಟಲಾಗದಷ್ಟು ಮೌಲ್ಯವುಳ್ಳದ್ದಾಗಿರುತ್ತವೆ. ಆದ್ದರಿಂದಲೇ ಪರಮಹಂಸ ಯೋಗಾನಂದರು ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್‌ನ ಪ್ರಾರ್ಥನಾ ಮಂಡಳಿ ಮತ್ತು ಜಾಗತಿಕ ಪ್ರಾರ್ಥನಾ ಸಮೂಹವನ್ನು ಹುಟ್ಟುಹಾಕಿದ್ದಾರೆ.

ಪರಮಹಂಸಜಿಯವರ ಇತರರಿಗಾಗಿ ಮಾಡುವ ಪರಿಣಾಮಕಾರಿ ಪ್ರಾರ್ಥನಾ ತಂತ್ರಗಳಲ್ಲಿ ಒಂದನ್ನು ಇಲ್ಲಿ ಕೊಡಲಾಗಿದೆ:

ಪರಮಹಂಸ ಯೋಗಾನಂದ ವ್ಹೀಲ್‌ಚೇರ್‌ನಲ್ಲಿರುವ ವ್ಯಕ್ತಿಯೊಂದಿಗೆ.“ಮೊದಲು ನಿಮ್ಮ ಹುಬ್ಬುಗಳನ್ನು ಸ್ವಲ್ಪ ಸಂಕುಚಿಸಿ, ನಂತರ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ. ನೀವು ಯಾರಿಗೆ ಉಪಶಮನದಾಯಕ ಶಕ್ತಿಯನ್ನು ಕಳುಹಿಸಬಯಸುವಿರೋ ಆ ವ್ಯಕ್ತಿಯನ್ನು ನೆನಪಿಸಿಕೊಳ್ಳಿ.

“ನಿಮ್ಮ ಗಮನವನ್ನು ನಿಮ್ಮ ಹುಬ್ಬುಗಳ ನಡುವೆ ಕೇಂದ್ರೀಕರಿಸಿ ಮತ್ತು ಮನಸ್ಸಿನಲ್ಲಿಯೇ ಹೇಳಿ: ‘ಪರಮ ಪಿತನೇ, ನಿನ್ನಿಚ್ಛೆಯೊಂದಿಗೆ ನಾನು ಇಚ್ಛಿಸುತ್ತೇನೆ. ನನ್ನ ಇಚ್ಛಾಶಕ್ತಿಯೇ ನಿನ್ನ ಇಚ್ಛಾಶಕ್ತಿಯಾಗಿದೆ, ಸರ್ವವ್ಯಾಪಿಯಾಗಿರುವ ನಿನ್ನ ಇಚ್ಛಾಶಕ್ತಿಯಿಂದ, ಓ ತಂದೆಯೇ, ನಾನು ಈ ವ್ಯಕ್ತಿಯು ಗುಣಮುಖವಾಗಲೆಂದು ಹೃತ್ಪೂರ್ವಕವಾಗಿ, ಮನಃಪೂರ್ವಕವಾಗಿ ಪ್ರಾರ್ಥಿಸುತ್ತೇನೆ.’

ನೀವು ಹೀಗೆ ಹೇಳುತ್ತಿರುವಾಗ, ನಿಮ್ಮ ಹುಬ್ಬುಗಳ ನಡುವಿನ ಬಿಂದುವಿನಿಂದ ಒಂದು ವಿದ್ಯುತ್ಪ್ರವಾಹವು ನೀವು ಸಹಾಯ ಮಾಡಬಯಸುವ ವ್ಯಕ್ತಿಯ ಹುಬ್ಬುಗಳ ನಡುವಿನ ಬಿಂದುವಿಗೆ ಪ್ರವಹಿಸುತ್ತಿರುವಂತೆ ಊಹಿಸಿಕೊಳ್ಳಿ. ನೀವು ನಿಮ್ಮ ಆಧ್ಯಾತ್ಮಿಕ ಚಕ್ಷುವಿನಿಂದ ನೀವು ಗುಣಪಡಿಸಬಯಸುವ ವ್ಯಕ್ತಿಯ ಆಧ್ಯಾತ್ಮಿಕ ಚಕ್ಷುವಿಗೆ ವಿದ್ಯುತ್ಪ್ರವಾಹವು ಹರಿಯುತ್ತಿರುವುದನ್ನು ಅನುಭವಿಸಿ.

ಹೆಚ್ಚು ಗಾಢವಾಗಿ ಕೇಂದ್ರೀಕರಿಸಿದಾಗ ನಿಮಗೆ ನಿಮ್ಮ ಹುಬ್ಬುಗಳ ನಡುವಿನ ಬಿಂದುವು ಬಿಸಿಯಾಗುವುದು ಅನುಭವಕ್ಕೆ ಬರುತ್ತದೆ. ಆ ಬಿಸಿಯ ಅನುಭವವು ನಿಮ್ಮ ಇಚ್ಛಾಶಕ್ತಿಯು ವೃದ್ಧಿಯಾಗುತ್ತಿರುವುದರ ಸಂಕೇತವಾಗಿದೆ.

“ಇನ್ನೂ ಆಳವಾಗಿ ಕೇಂದ್ರೀಕರಿಸಿ. ಮನಸ್ಸಿನಲ್ಲಿಯೇ ಹೇಳಿ: ‘ನಿನ್ನ ಇಚ್ಛಾಶಕ್ತಿಯೊಂದಿಗೆ ನಾನು ಬ್ರಹ್ಮಾಂಡ ಶಕ್ತಿಯ ಸ್ಫುರಣವೊಂದನ್ನು ಕಳುಹಿಸುತ್ತಿದ್ದೇನೆ. ತಂದೆಯೇ, ಅದು ಇದೆ.ʼ

“ಇದನ್ನು 15 ರಿಂದ 20 ನಿಮಿಷಗಳವರೆಗೆ ಅಭ್ಯಾಸ ಮಾಡಬೇಕು. ನೀವು ಹೀಗೆ ಮಾಡುತ್ತಿರುವಾಗ ನಿಮ್ಮ ಇಚ್ಛಾಶಕ್ತಿಯು ವೃದ್ಧಿಯಾಗುವುದು; ಮತ್ತು ಹೀಗೆ ವೃದ್ಧಿಯಾದ ಇಚ್ಛಾಶಕ್ತಿಯು, ಏನೇ ಆದರೂ, ನಿಮಗೆ ಮತ್ತು ಬೇರೆಯವರಿಗೆ ಅಗತ್ಯವಿರುವಾಗ ಸಹಾಯ ಮಾಡಲು ನಿರಂತರವಾಗಿ ನಿಮ್ಮೊಂದಿಗಿರುವುದು.”

ನನ್ನ ಪ್ರಾರ್ಥನೆಯು ಬೇರೆಯವರಿಗೆ ಹೇಗೆ ಸಹಾಯ ಮಾಡಬಲ್ಲದು?
ಶ್ರೀ ದಯಾ ಮಾತಾ
ಸಮಯ: 4:26 ನಿಮಿಷಗಳು

ದಯಾ ಮಾತಾ: YSS/SRF ನ ಮೂರನೇ ಅಧ್ಯಕ್ಷರು.ಕೆಲವೊಮ್ಮೆ, ಜನರು, “ಇತರರಿಗಾಗಿ ಪ್ರಾರ್ಥನೆ ಸಲ್ಲಿಸುವ ಉತ್ತಮ ಮಾರ್ಗ ಯಾವುದು?” ಎಂದು ಪ್ರಶ್ನಿಸುತ್ತಾರೆ. ಶ್ರೀ ಶ್ರೀ ದಯಾ ಮಾತಾ ಹೀಗೆ ಹೇಳುತ್ತಾರೆ:

“ಇತರರಿಗಾಗಿ ಪ್ರಾರ್ಥನೆ ಸಲ್ಲಿಸುವುದು ಸರಿಯಾದುದು ಮತ್ತು ಉತ್ತಮವಾದುದು…ಎಲ್ಲಕ್ಕಿಂತ ಮಿಗಿಲಾಗಿ, ತಾವು ಭಗವಂತನಿಗೆ ಗ್ರಹಣಶೀಲರಾಗಿರಬೇಕೆಂದು ಕೇಳಿಕೊಳ್ಳಬೇಕು, ಹಾಗೂ ಅದರಿಂದ ದೈಹಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ನೆರವನ್ನು ನೇರವಾಗಿ ದಿವ್ಯ ವೈದ್ಯನಿಂದ (ಭಗವಂತನಿಂದ) ಪಡೆಯಬೇಕು. ಇದೇ ಎಲ್ಲಾ ಪ್ರಾರ್ಥನೆಗಳ ಮೂಲ. ಭಗವಂತನ ಆಶೀರ್ವಾದವು ಸದಾ ಇರುತ್ತದೆ; ಆದರೆ ಹೆಚ್ಚಾಗಿ ಗ್ರಹಣಶೀಲತೆಯಲ್ಲೇ ಕೊರತೆಯಿರುತ್ತದೆ. ಪ್ರಾರ್ಥನೆಯು ಈ ಗ್ರಹಣಶೀಲತೆಯನ್ನು ವೃದ್ಧಿಸುತ್ತದೆ….

“ನೀವು ನಿಮಗಾಗಿ ಅಥವಾ ಬೇರೆಯವರಿಗಾಗಿ ಗುಣಕಾರಿ ನುಡಿಗಳನ್ನು ದೃಢೀಕರಿಸುತ್ತಿರುವಾಗ, ಭಗವಂತನ ಗುಣಕಾರಿ ಶಕ್ತಿಯ ಅದ್ಭುತ ಚೇತನವು ಒಂದು ಬೆಳ್ಳಿ ಬೆಳಕಿನಂತೆ ನಿಮ್ಮನ್ನು ಅಥವಾ ನೀವು ಪ್ರಾರ್ಥಿಸುತ್ತಿರುವ ವ್ಯಕ್ತಿಯನ್ನು ಸುತ್ತುವರೆದಿರುವಂತೆ ಮನಸ್ಸಿನಲ್ಲಿಯೇ ಚಿತ್ರಿಸಿಕೊಳ್ಳಿ. ಆ ಬೆಳಕು ಎಲ್ಲಾ ಅನಾರೋಗ್ಯವನ್ನು ಮತ್ತು ನ್ಯೂನತೆಯನ್ನು ಕರಗಿಸುತ್ತಿರುವಂತೆ ಭಾವಿಸಿ. ನಾವು ಯೋಚಿಸುವ ಪ್ರತಿ ಉತ್ತಮ ಯೋಚನೆ, ನಾವು ಹೇಳುವ ಪ್ರತಿ ಪ್ರಾರ್ಥನೆ, ನಾವು ಮಾಡುವ ಪ್ರತಿ ಒಳ್ಳೆಯ ಕಾರ್ಯ, ಎಲ್ಲದರಲ್ಲೂ ಭಗವಂತನ ಶಕ್ತಿಯೇ ತುಂಬಿಕೊಂಡಿರುತ್ತದೆ. ನಮ್ಮ ನಂಬಿಕೆಯು ಹೆಚ್ಚು ಬಲಿಷ್ಠವಾದಾಗ ಮತ್ತು ಭಗವಂತನ ಮೇಲೆ ನಮ್ಮ ಪ್ರೀತಿಯು ಇನ್ನೂ ಆಳವಾದಾಗ ನಾವು ಆ ಶಕ್ತಿಯನ್ನು ಇನ್ನೂ ಹೆಚ್ಚು ಹೆಚ್ಚಾಗಿ ಸಾಕಾರಗೊಳಿಸಬಹುದು.”

ನೀವು ಪ್ರಾರ್ಥನೆಯ ಮೂಲಕ ಜಾಗತಿಕ ಶಾಂತಿ ಮತ್ತು ಗುಣಕಾರಿ ಶಕ್ತಿಯನ್ನು ತರಲು ಹೇಗೆ ಸಹಾಯ ಮಾಡಬಹುದು

ಇದನ್ನು ಹಂಚಿಕೊಳ್ಳಿ