ಭಗವಂತನನ್ನು ಅರಿಯುವುದು

ಶ್ರೀ ಶ್ರೀ ಪರಮಹಂಸ ಯೋಗಾನಂದರ ಬರವಣಿಗೆಗಳಿಂದ ಆಯ್ದ ಭಾಗಗಳು

Rose with dew drops advertising God's beauty

“ಎಲ್ಲ ಸಮಯದಲ್ಲೂ ಭಗವಂತನನ್ನು ನೆನೆಯುವುದು ಸಾಧ್ಯ ಎಂದೆನಿಸುವುದಿಲ್ಲ,” ಒಬ್ಬ ಸಂದರ್ಶಕ ಹೇಳಿದ. ಪರಮಹಂಸರು ಉತ್ತರಿಸಿದರು:

“ಜಗತ್ತು ನೀನು ಹೇಳುವುದನ್ನು ಒಪ್ಪುತ್ತದೆ. ಆದರೆ ಜಗತ್ತು ಸಂತೋಷದಾಯಕ ಸ್ಥಳವಾಗಿದೆಯೇನು? ಭಗವಂತನನ್ನು ತೊರೆದ ವ್ಯಕ್ತಿಗೆ ನಿಜವಾದ ಆನಂದ ಮರೀಚಿಕೆಯಾಗುಳಿಯುತ್ತದೆ, ಏಕೆಂದರೆ ಭಗವಂತನೇ ಪರಮಾನಂದವಾಗಿದ್ದಾನೆ. ಭೂಮಿಯ ಮೇಲೆ ಅವನ ಭಕ್ತರು ಶಾಂತಿಯ ಆಂತರಿಕ ಸ್ವರ್ಗದಲ್ಲಿ ಜೀವಿಸುತ್ತಾರೆ; ಆದರೆ ಅವನನ್ನು ಮರೆತವರು ಅಭದ್ರತೆ ಮತ್ತು ನಿರಾಶೆಗಳೆಂಬ ಸ್ವಯಂಕಲ್ಪಿತ ನರಕದಲ್ಲಿ ತಮ್ಮ ದಿನಗಳನ್ನು ದೂಡುತ್ತಾರೆ. ಭಗವಂತನೊಡನೆ ‘ಸ್ನೇಹ ಬೆಳೆಸುವುದೇ’ ನಿಜವಾಗಿಯೂ ಕಾರ್ಯಸಾಧ್ಯವಾದುದಾಗಿದೆ!”

ಅವನ ಪರಿಚಯವನ್ನು ಬೆಳೆಸಿಕೊಳ್ಳಿ. ನಿಮ್ಮ ನೆಚ್ಚಿನ ಸ್ನೇಹಿತನನ್ನು ತಿಳಿದಷ್ಟೇ ಚೆನ್ನಾಗಿ ನೀವು ದೇವರನ್ನು ಕೂಡ ಅರಿಯಲು ಸಾಧ್ಯ. ಅದು ಸತ್ಯ.

ಮೊಟ್ಟಮೊದಲು ನಿಮಗೆ ದೇವರ ಸರಿಯಾದ ಕಲ್ಪನೆಯಿರಬೇಕು. ಅಂದರೆ ಅವನೊಂದಿಗೆ ಸಂಬಂಧ ಬೆಳೆಸುವಂತಹ ಒಂದು ನಿರ್ದಿಷ್ಟವಾದ ಕಲ್ಪನೆ– ನಂತರ ಆ ಮಾನಸಿಕ ಕಲ್ಪನೆಯು ಒಂದು ನೈಜ ಗ್ರಹಿಕೆಯಾಗಿ ಪರಿವರ್ತಿತವಾಗುವವರೆಗೂ ಧ್ಯಾನ ಮತ್ತು ಪ್ರಾರ್ಥನೆಯನ್ನು ಮಾಡುತ್ತಿರಬೇಕು. ಆಗ ನೀವು ಅವನನ್ನು ಅರಿಯುವಿರಿ. ನೀವು ಪಟ್ಟು ಹಿಡಿದಾಗ ದೇವರು ಬಂದೇ ಬರುತ್ತಾನೆ.

ತಮ್ಮ ಸೃಷ್ಟಿಕರ್ತನು ಮನುಷ್ಯನನ್ನು ಅಜ್ಞಾನದ ತೆರೆಯ ಮೂಲಕವೂ, ಶಿಕ್ಷಾಗ್ನಿಯ ಮೂಲಕವೂ ಪರೀಕ್ಷಿಸುತ್ತಾನೆ ಹಾಗೂ ಮನುಷ್ಯನ ಕರ್ಮಗಳನ್ನು ನಿರ್ದಯೆಯಿಂದ ಪರಿಶೀಲಿಸಿ ವಿಮರ್ಶಿಸುತ್ತಾನೆ ಎಂದು ಚಿತ್ರಿಸುವವರೂ ಇದ್ದಾರೆ. ಹೀಗೆ ಅವರು ದೇವರನ್ನು ವಾತ್ಸಲ್ಯಮಯಿ ಮತ್ತು ಕರುಣಾಮಯಿಯಾದ ಪರಮಪಿತ ಎನ್ನುವ ನಿಜವಾದ ಗ್ರಹಿಕೆಯ ಬದಲು ಒಬ್ಬ ನಿಷ್ಠುರಿ, ನಿರ್ದಯಿ ಹಾಗೂ ಸೇಡಿನ ಮನೋವೃತ್ತಿಯ ಪ್ರಜಾಪೀಡಕ ಎಂದು ವಿರೂಪಗೊಳಿಸುತ್ತಾರೆ. ಆದರೆ ದೇವರೊಡನೆ ಸಂಪರ್ಕ ಸಾಧಿಸುವವರಿಗೆ ಎಲ್ಲ ಪ್ರೇಮ ಮತ್ತು ಒಳ್ಳೆಯತನಗಳ ಎಣೆಯಿಲ್ಲದ ಭಂಡಾರವಾದ ಅವನನ್ನು ಕರುಣಾಮಯಿಯಲ್ಲವೆಂದು ಯೋಚಿಸುವುದು ಮೂರ್ಖತನ ಎಂಬ ಅರಿವಿರುತ್ತದೆ.

ದೇವರು ಶಾಶ್ವತ ಆನಂದ. ಅವನು ಪ್ರೀತಿ, ಜ್ಞಾನ ಮತ್ತು ಆನಂದ. ಅವನು ನಿರಾಕಾರನೂ ಹೌದು, ಸಾಕಾರನೂ ಹೌದು. ಹಾಗೂ ಅವನು ತಾನಿಚ್ಛಿಸಿದ ರೀತಿಯಲ್ಲಿ ಪ್ರಕಟಗೊಳ್ಳುತ್ತಾನೆ. ತನ್ನ ಸಂತರಿಗೆ, ಅವರಿಗೆ ಪ್ರಿಯವಾದ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ: ಒಬ್ಬ ಕ್ರಿಶ್ಚಿಯನ್ ಕ್ರಿಸ್ತನನ್ನು ಕಾಣುತ್ತಾನೆ, ಒಬ್ಬ ಹಿಂದು, ಕೃಷ್ಣ ಅಥವಾ ಜಗನ್ಮಾತೆಯನ್ನು ಕಾಣುತ್ತಾನೆ, ಇತ್ಯಾದಿ. ಭಕ್ತರ ಉಪಾಸನೆಯು ನಿರಾಕಾರಕ್ಕೆ ತಿರುಗಿದರೆ ಅವರಿಗೆ ಭಗವಂತ ಅನಂತ ಬೆಳಕು ಅಥವಾ ಮೂಲಭೂತ ಶಬ್ದ ಹಾಗೂ ಪವಿತ್ರಾತ್ಮವಾದ ಅದ್ಭುತ ಶಬ್ದ ಓಂ ಆಗಿರುವುದರ ಅರಿವಾಗುತ್ತದೆ. ಮಾನವನು ಪಡೆಯಬಹುದಾದ ಅತ್ಯುತ್ತಮ ಅನುಭವವೆಂದರೆ ದೈವತ್ವದ ಸಂಕೇತಗಳಾಗಿರುವ — ಪ್ರೀತಿ, ವಿವೇಕ, ಅಮರತ್ವ — ಮುಂತಾದುವೆಲ್ಲವನ್ನೂ ಸಂಪೂರ್ಣವಾಗಿ ಒಳಗೊಂಡ ಪರಮಾನಂದದ ಅನುಭವ.

ಆದರೆ ಭಗವಂತನ ಸ್ವರೂಪವನ್ನು ನಾನು ನಿಮಗೆ ಶಬ್ದಗಳಲ್ಲಿ ಹೇಗೆ ವಿವರಿಸಲಿ? ಅವನು ವರ್ಣನಾತೀತ. ಆಳವಾದ ಧ್ಯಾನದಲ್ಲಿ ಮಾತ್ರ ನೀವು ಅವನ ಅನನ್ಯ ಅಸ್ತಿತ್ವವನ್ನು ಅರಿಯಬಲ್ಲಿರಿ.

ದೃಢೀಕರಣಗಳು

ಸಕಾರಾತ್ಮಕ ಘೋಷಣೆಗಳ ಸಿದ್ಧಾಂತ ಮತ್ತು ಸೂಚನೆಗಳು

“ಪ್ರತಿಯೊಂದು ಆಲೋಚನೆ ಮತ್ತು ಚಟುವಟಿಕೆಯ ಮಂದಿರದಲ್ಲಿ ನಾನು ನಿನ್ನನ್ನು ಕಾಣುವಂತೆ ಆಶೀರ್ವದಿಸು. ನಿನ್ನನ್ನು ಒಳಗೆ ಕಂಡುಕೊಂಡ ನಾನು, ಹೊರಗೂ ಕಂಡುಕೊಳ್ಳುತ್ತೇನೆ, ಎಲ್ಲ ಜನಗಳಲ್ಲಿ ಹಾಗೂ ಎಲ್ಲ ಪರಿಸ್ಥಿತಿಗಳಲ್ಲಿ.”

– ಶ್ರೀ ಶ್ರೀ ಪರಮಹಂಸ ಯೋಗಾನಂದ
ಮೆಟಾಫಿಸಿಕಲ್‌ ಮೆಡಿಟೇಶನ್ಸ್

ಮತ್ತಷ್ಟು ಅನ್ವೇಷಣೆ

ಇದನ್ನು ಹಂಚಿಕೊಳ್ಳಿ