ಪರಮಹಂಸ ಯೋಗಾನಂದರಿಂದ
1935 ರಲ್ಲಿ ಹೋಲಿ ಲ್ಯಾಂಡ್‌ಗೆ ಭೇಟಿ ಮಾಡಿದ ಸಂದರ್ಭದಲ್ಲಿ, ಭಾರತದಿಂದ ತಮ್ಮ ಸೆಲ್ಫ್ – ರಿಯಲೈಝೇಷನ್ ಫೆಲೋಶಿಪ್ ನ ಇಡೀ ಶಿಷ್ಯವೃಂದಕ್ಕೆ ಹಾಗೂ ಗೆಳೆಯರಿಗೆ ಬರೆದದ್ದು.
ಮಹಾನ್ ಸಂತರ ಗ್ರಹಿಕೆಯಿಂದ ಬಲಗೊಂಡ ಜೆರುಸಲೇಮ್ ಮತ್ತು ಭಾರತದಿಂದ ಭಗವತ್-ಚೈತನ್ಯದ ಹೊಸ ಸಂದೇಶವನ್ನು ನಿಮಗಾಗಿ ತಂದಿದ್ದೇನೆ. ಹೀಗೆ ಪರಮಾತ್ಮನ ಸಾಧನವಾಗಿ ನನ್ನ ಆತ್ಮವು ಧನ್ಯವಾಗಿದೆ.
ಚಿಂತನೆಯ ಲೇಖನಿಯು ಆಕಾಶ-ದ್ರವ್ಯದ ಕರಾಳ ಪುಟಗಳಲ್ಲಿ ಬರೆದು ಭಗವತ್-ಚೈತನ್ಯದ ಅಗೋಚರ ಸತ್ಯವನ್ನು ಗೋಚರವಾಗಿಸುತ್ತದೆ ಮತ್ತು ನನ್ನ ಫೌಂಟನ್ ಪೆನ್ನು ಕಾಣದ ಆಲೋಚನೆಗಳನ್ನು ಕಾಣುವಂತೆ ಮಾಡುತ್ತದೆ. ಆದ್ದರಿಂದ ಈ ಪುಟಗಳಲ್ಲಿ ನಾನು ದೇವರನ್ನು – ಶಾಯಿ, ಆಲೋಚನೆಗಳು ಮತ್ತು ಆತ್ಮ- ಸಾಕ್ಷಾತ್ಕಾರದಿಂದ ಚಿತ್ರಿಸಿ, ಎಲ್ಲರೂ ಗ್ರಹಿಸುವಂತೆ ಆತನ ಮಹಿಮೆಯನ್ನು ಬಿಂಬಿಸಿದ್ದೇನೆ.
ಆಲೋಚನೆಗಳು ಮತ್ತು ಪದಗಳ ಕಿಟಕಿಯ ಮೂಲಕ ಸತ್ಯವು ಇಣುಕಿದ ಹಾಗೆಯೇ, ಭಗವಂತನು ಕ್ರೈಸ್ತ ಪ್ರಜ್ಞೆ ಹಾಗೂ ಸೃಷ್ಟಿಯ ಚೈತನ್ಯದ ರೂಪದಲ್ಲಿ ಪ್ರಕಟಗೊಳ್ಳುತ್ತಾನೆ. ದೇಶಗಳೆಂಬ ಮಣಿಗಳು, ಸಾರ್ವತ್ರಿಕವಾದ ಕ್ರಿಸ್ತ ಪ್ರಜ್ಞೆ ಮತ್ತು ಶಾಂತಿಯ ಗ್ರಹಿಕೆಯ ದಾರದಿಂದ ಜೋಡಿಸಲ್ಪಡದಿದ್ದರೆ, ಸ್ವಾರ್ಥದ ಬಂಡೆಗಳಿಗೆ ಬಡಿದು ಅವು ಚೆಲ್ಲಾಪಿಲ್ಲಿಯಾಗಿ ಬೇರ್ಪಡುತ್ತವೆ. ಕ್ರಿಸ್‌ಮಸ್‌ನ ಕ್ರಿಸ್ತನನ್ನು ಪರಸ್ಪರ ಸರ್ವ ಜನಾಂಗಗಳ ಹೃದಯದ ಪ್ರೀತಿಯಿಂದ ಆಚರಿಸಬೇಕು.
ಯುದ್ಧದ ಕರಾಳ ರಾತ್ರಿಯಲ್ಲಿ, ಕ್ರೈಸ್ತ ಪ್ರೇಮದ ನಕ್ಷತ್ರವು ನವ ಏಕತೆಯ ವಿಶ್ವವನ್ನು ಬೆಳಗಿ; ಹೊಸ ಅಂತರಾಷ್ಟ್ರೀಯ ತಿಳುವಳಿಕೆಯ ತೊಟ್ಟಿಲಿನಲ್ಲಿ ಕ್ರಿಸ್ತನು ಜನಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಕ್ರಿಸ್ತನು ಎಲ್ಲಾ ದೇಶಗಳಲ್ಲಿ ಪ್ರೇಮದ ಐಕ್ಯತೆಯಾಗಿ, ಎಲ್ಲಾ ಮಾನವರಲ್ಲಿ ಆಧ್ಯಾತ್ಮಿಕ ಆಕಾಂಕ್ಷೆಯಾಗಿ, ನಿಜವಾದ ಸ್ನೇಹಿತರಲ್ಲಿ ದೈವೀ ಸ್ನೇಹಿಯಾಗಿ, ಈ ಮಾರ್ಗದ ಶಿಷ್ಯ ವೃಂದಕ್ಕೆ ಆತ್ಮ-ಸಾಕ್ಷಾತ್ಕಾರವಾಗಿ ಮತ್ತು ಎಲ್ಲಾ ಪರಮ ಭಕ್ತರಲ್ಲಿ, ಅಸೀಮ ಆನಂದ ಮತ್ತು ಅನಂತ ಜ್ಞಾನವಾಗಿ ಹುಟ್ಟಿ ಬರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
ಈ ಪ್ರಾಪಂಚಿಕ ಸಂಪತ್ತುಗಳು ಮತ್ತು ವೈಭವಗಳೆಲ್ಲವೂ ಮಸುಕಾಗುತ್ತವೆ. ಆದರೆ ಪಾರಮಾರ್ಥಿಕ ಕೊಡುಗೆಗಳು ಶಾಶ್ವತವಾದ ಅತ್ಯುನ್ನತ ಉಪಯುಕ್ತತೆಯಿಂದ ಸೇವೆ ಸಲ್ಲಿಸುತ್ತವೆ. ಪರಿವರ್ತನೆಯ ಪೀಠದ ಮೇಲೆ ಪ್ರಾಪಂಚಿಕ ಸುಖಗಳನ್ನೇಕೆ ಪೂಜಿಸಬೇಕು? ಅವಿನಾಶಿಯಾದ ದೇವಾಲಯದಲ್ಲಿ ಆಧ್ಯಾತ್ಮಿಕ ಸೌಖ್ಯವನ್ನು ಆರಾಧಿಸಲು ಕಲಿಯಿರಿ. ಐಹಿಕ ಸಂಪತ್ತನ್ನು ನಾಶವಾಗದ ಸ್ವರ್ಗೀಯ ನಿಧಿಯಾಗಿ ಪರಿವರ್ತಿಸುವ ಅತ್ಯುತ್ತಮ ಮಾರ್ಗವೆಂದರೆ, ಅವುಗಳನ್ನು ಆಧ್ಯಾತ್ಮಿಕ ಸೇವೆಗಾಗಿ ಬಳಸುವುದು. ಕ್ರಿಸ್ತನಂತೆ ಬದುಕಿಯೇ ಆತನನ್ನು ಅರಿಯಬೇಕು. ಎಲ್ಲಾ ಉತ್ತಮ ಕಾರ್ಯಗಳಲ್ಲಿ, ಪ್ರತಿಯೊಂದು ಭೌತಿಕ ಹಾಗೂ ಆಧ್ಯಾತ್ಮಿಕ ಸೇವೆಯಲ್ಲಿ ಮತ್ತು ಧ್ಯಾನವೆಂಬ ಕೊಟ್ಟಿಗೆಯಲ್ಲಿ, ಚಿರಂತನ ನವ ಚೇತನವಾಗಿ ಕ್ರೈಸ್ತನು ಜನಿಸುತ್ತಾನೆ.
ಧರ್ಮಶಾಸ್ತ್ರಗಳನ್ನು ಓದುವ ಮೂಲಕ ಆ ಕ್ರಿಸ್ತನನ್ನು ಅರಿಯಲು ಸಾಧ್ಯವಿಲ್ಲ; ವ್ಯಕ್ತಿಯು ಆಳವಾದ ಧ್ಯಾನದ ಪೊದರಿನಲ್ಲಿ ಆತನ ಉಪಸ್ಥಿತಿಯನ್ನು ಗ್ರಹಿಸಬೇಕು. ಭಕ್ತಿಯ ನವಿರಾದ ರೆಂಬೆಗಳಿಂದ ನೇಯ್ದ ಧ್ಯಾನ-ರಾಗದ ತೊಟ್ಟಿಲಿನಲ್ಲಿ, ಆಂತರಿಕ ಶಾಂತಿಯೆಂಬ ಕಪೋತ ಪಕ್ಷಿಯ ಜೋಗುಳದಲ್ಲಿ ನವಜಾತ ಕ್ರೈಸ್ತನನ್ನು ಕಾಣಿರಿ.
ಈ ಇಪ್ಪತ್ತು ಶತಮಾನಗಳಲ್ಲಿ ಕ್ರಿಸ್ಮಸ್ ಅನ್ನು 1,935 ಬಾರಿ ಆಚರಿಸಲಾಗಿದೆ. ಆದರೂ ಏಸುವಿನ ಜನನದ ನಿಜವಾದ ಮಹತ್ವವನ್ನು ಕೆಲವೇ ಜನ ಅರಿತಿದ್ದಾರೆ! ಪ್ರತೀ ವರ್ಷ ದೇವಾನುದೇವತೆಗಳು, ಈ ಸಂದರ್ಭವನ್ನು ಎಲ್ಲರ ಒಳಿತಿಗಾಗಿ ಅವಕಾಶ ಒದಗಿಸುವ ಉದ್ದೇಶದಿಂದ ಈ ಆಚರಣೆಯನ್ನು ಗುರುತಿಸುತ್ತಾರೆ. ಆದ್ದರಿಂದ ನೀವು ಪ್ರತಿಯೊಬ್ಬರೂ ಈ ಮುಂಬರುವ ಕ್ರಿಸ್ಮಸ್ ಅನ್ನು ಆಚರಿಸಲು ಹಲವು ವಾರಗಳ ಮೊದಲಿನಿಂದಲೇ ಆಳವಾದ ಧ್ಯಾನದಲ್ಲಿ ತೊಡಗಿ ನಿಮ್ಮ ಪ್ರಜ್ಞೆಯನ್ನು ಸಿದ್ಧಪಡಿಸಿಕೊಳ್ಳಿ. ನಿಮ್ಮ ಧ್ಯಾನದ ಕುಗ್ರಾಮದಲ್ಲಿ ನವಜಾತ ಕ್ರಿಸ್ತ ಪ್ರಜ್ಞೆಯ ಆಗಮನವು ವರ್ಣನಾತೀತ ಮೋಡಿಯಿಂದ, ನಿಮ್ಮ ಆತ್ಮದ ಉನ್ನತಿಗೆ ವಿಸ್ತರಿಸುತ್ತದೆ. ನಿಮ್ಮ ಮೇರುದಂಡದ ಕ್ರಿಸ್ಮಸ್ ವೃಕ್ಷ*ವನ್ನು ನಿಮ್ಮ ಧ್ಯಾನ ಪ್ರಜ್ಞೆಯ ಮೂಲಕ, ಅನೇಕ ಹೊಸ ಗ್ರಹಿಕೆಗಳೊಂದಿಗೆ, ವಿವೇಕದ ಮಿನುಗುತಾರೆಗಳು ಮತ್ತು ದೈವೀ ಪ್ರೇಮದ ಪದ್ಮ ಪುಷ್ಪಗಳಿಂದ ಅಲಂಕರಿಸುವ ಮೂಲಕ, ಕ್ರಿಸ್ತನಿಗಾಗಿ ಸಿದ್ಧರಾಗಿ. ಈ ಆಂತರಿಕ ಕ್ರಿಸ್ಮಸ್ ವೃಕ್ಷದ ಅಡಿಯಲ್ಲಿ ನಿಮ್ಮ ಎಲ್ಲಾ ಪ್ರಾಪಂಚಿಕ ಆಸೆಗಳನ್ನು ಒಮ್ಮೆ ಶಾಶ್ವತವಾಗಿ ಅರ್ಪಿಸಿ, ನಿಮ್ಮೊಳಗಿನ ಕ್ರಿಸ್ತನ ಆನಂದಕ್ಕೆ ಉಡುಗೊರೆಯಾಗಿಸಿ.
ಆ ನಂತರ, ಕ್ರಿಸ್ಮಸ್ ಮುಂಜಾನೆ ಎಚ್ಚರಗೊಂಡಾಗ, ಕ್ರಿಸ್ತನು ನಿಮ್ಮ ಪ್ರಜ್ಞೆಯಲ್ಲಿ ಕವಲೊಡೆದ ಕ್ರಿಸ್ಮಸ್ ವೃಕ್ಷದ ಬಳಿ ಸೆಳೆಯಲ್ಪಡುತ್ತಾನೆ ಮತ್ತು ತನ್ನ ಅವಿನಾಶಿ ಉಡುಗೊರೆಗಳಾದ ಸರ್ವವ್ಯಾಪಕತೆ, ಸರ್ವಜ್ಞತೆ, ದಿವ್ಯಪ್ರೇಮ, ಬ್ರಹ್ಮಾಂಡ ಬೆಳಕು, ಅವಿರತ-ಜಾಗೃತಿ ಮತ್ತು ನಿತ್ಯ ನವೀನಾನಂದಗಳನ್ನು ಅನಂತತೆಯ ಸ್ವರ್ಣ ತಂತುಗಳಿಂದ ಬಿಗಿದು ನಿಮಗೆ ಉಡುಗೊರೆಯಾಗಿ ನೀಡುತ್ತಾನೆ.
* ಮನುಷ್ಯನ ಕಶೇರುರಜ್ಜುವಿನಲ್ಲಿ ಉಲ್ಲೇಖಿಸಿರುವ ಏಳು ಆಧ್ಯಾತ್ಮಿಕ ಜ್ಞಾನ ಹಾಗೂ ಶಕ್ತಿಯ ಕೇಂದ್ರಗಳು, ಆಳವಾಗಿ ಧ್ಯಾನಿಸುವ ಭಕ್ತರ ಒಳಗಣ್ಣಿಗೆ ಬೆಳಕಿನ ರೂಪದಲ್ಲಿ ಪ್ರಕಟಗೊಳ್ಳುತ್ತವೆ. ಹಿಂದೂ ಧರ್ಮ ಗ್ರಂಥಗಳಲ್ಲಿ ಈ ಕೇಂದ್ರಗಳನ್ನು ಸಾಮಾನ್ಯವಾಗಿ “ಕಮಲಗಳು” ಎಂದು ವಿವರಿಸಲಾಗಿದೆ; ದಿ ಬುಕ್ ಆಫ್ ರೆವಿಲೇಶನ್ ಪುಸ್ತಕದಲ್ಲಿ ಸಂತ ಜಾನ್ ಅವುಗಳ ಪ್ರಕಾಶಮಾನವಾದ ಕಿರಣಗಳನ್ನು “ಏಳು ನಕ್ಷತ್ರಗಳು” ಎಂದು ಉಲ್ಲೇಖಿಸಿದ್ದಾನೆ.