ರಾಂಚಿಯಲ್ಲಿ ಹದಿಹರೆಯದವರ ಹೊಸ ಕಾರ್ಯಕ್ರಮದ ಉದ್ಘಾಟನೆ

1 ನವೆಂಬರ್‌, 2024
ಹದಿಹರೆಯದವರ ಹೊಸ ಕಾರ್ಯಕ್ರಮದ ಉದ್ಘಾಟನಾ ದಿನದಂದು ವೈಎಸ್ಎಸ್ ರಾಂಚಿ ಆಶ್ರಮದಲ್ಲಿ ವೈಎಸ್ಎಸ್ ಮತ್ತು ಎಸ್ಆರ್‌ಎಫ್ ಸನ್ಯಾಸಿಗಳೊಂದಿಗೆ ಯುವ ಕಾರ್ಯಕ್ರಮದ ಹದಿಹರೆಯದವರು ಮತ್ತು ಮಕ್ಕಳು.

ಯುವಜನರಲ್ಲಿ ಆಧ್ಯಾತ್ಮಿಕ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುವ ಮಹತ್ವದ ಉಪಕ್ರಮದಲ್ಲಿ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈಎಸ್ಎಸ್) 13 ರಿಂದ 19 ವರ್ಷ ವಯಸ್ಸಿನವರಿಗಾಗಿ ಹದಿಹರೆಯದವರ ಹೊಸ ಕಾರ್ಯಕ್ರಮವನ್ನು ಉದ್ಘಾಟಿಸಿತು. ವೈಎಸ್ಎಸ್ ರಾಂಚಿ ಆಶ್ರಮದ ಶಿವ ಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವಾಮಿ ಶಂಕರಾನಂದ ಮತ್ತು ಅಮೆರಿಕದಲ್ಲಿರುವ ನಮ್ಮ ಎಸ್‌ಆರ್‌ಎಫ್ ಆಶ್ರಮಗಳಿಂದ ಇಬ್ಬರು ವಿಶೇಷ ಅತಿಥಿಗಳಾದ ಸ್ವಾಮಿ ಸರಳಾನಂದ ಮತ್ತು ಸ್ವಾಮಿ ಪದ್ಮಾನಂದ ಭಾಗವಹಿಸಿದ್ದರು.

ಸ್ವಾಮಿ ಪದ್ಮಾನಂದರು ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರ ಚಿತ್ರದ ಮುಂದೆ ದೀಪ ಬೆಳಗಿಸುವಾಗ ಮಕ್ಕಳು ಹರ್ಷದಿಂದ “ಜೈ ಗುರು” ದಿವ್ಯ ಗೀತೆಯನ್ನು ಹಾಡಿದರು. ನಂತರ ಸ್ವಾಮೀಜಿ ಸ್ಫೂರ್ತಿದಾಯಕ ಆರಂಭಿಕ ಸಂದೇಶವನ್ನು ನೀಡಿದರು, ಅದರಲ್ಲಿ ಅವರು ಎಸ್‌ಆರ್‌ಎಫ್‌ನಲ್ಲಿ ಯುವ ಕಲ್ಯಾಣದ ಚಟುವಟಿಕೆಯಲ್ಲಿ ಅವರ ದಶಕಗಳ ಅನುಭವಗಳಿಂದ ಆಕರ್ಷಕ ಕಥೆಗಳನ್ನು ಹಂಚಿಕೊಂಡರು — ಸ್ಯಾನ್ ಡಿಯಾಗೋ ಮಂದಿರದಲ್ಲಿ ಯುವಕರ ಸಂಘದ ಅವಧಿಗಳನ್ನು ನಡೆಸುವುದು ಮತ್ತು ಎಸ್‌ಆರ್‌ಎಫ್‌ನಲ್ಲಿ ಬೇಸಿಗೆಯ ಯುವ ಶಿಬಿರಗಳಲ್ಲಿ ಧ್ಯಾನದ ಅವಧಿಗಳನ್ನು ನಡೆಸುವುದೂ ಸೇರಿದಂತೆ. ಆಕರ್ಷಕ ರೀತಿಯಲ್ಲಿ, ಅವರು ಸುಮಾರು 25 ಹದಿಹರೆಯದ ಯುವ ಪ್ರೇಕ್ಷಕರೊಂದಿಗೆ ಆಳವಾಗಿ ಸಂಪರ್ಕ ಸಾಧಿಸಿದರು: “ನೀವು ಎಲ್ಲೇ ಹೋದರೂ ಗುರೂಜಿ ಯಾವಾಗಲೂ ನಿಮ್ಮೊಂದಿಗಿದ್ದಾರೆ ಎಂಬುದು ನೆನಪಿರಲಿ. ಜೀವನದ ಎಲ್ಲ ಸಂದರ್ಭಗಳಲ್ಲೂ ನೀವು ವಿಶ್ವಾಸ ಮತ್ತು ಆಶಾವಾದದಿಂದ ಅವರ ನೆರವಿಗಾಗಿ ಅರಸುತ್ತಿದ್ದರೆ, ಅವರು ಹಲವಾರು ಘಟನೆಗಳ ಮೂಲಕ ನಿಮಗೆ ತಮ್ಮ ಉಪಸ್ಥಿತಿಯನ್ನು ತೋರ್ಪಡಿಸುತ್ತಾರೆ,” ಎಂದು ಹೇಳಿದರು.

ಹದಿಹರೆಯದ ಹುಡುಗರಲ್ಲಿ ಒಬ್ಬರು ಆರಂಭಿಕ ಪ್ರಾರ್ಥನೆ ಮತ್ತು ಕೀರ್ತನೆಯನ್ನು ನಡೆಸಿದರು. ಇದರ ನಂತರ ಮಕ್ಕಳ ಸತ್ಸಂಗವು ತಮ್ಮ ಜೀವನದ ಮೇಲೆ ಬೀರಿದ ಪ್ರಭಾವದ ಕುರಿತು ಇತರ ಹದಿಹರೆಯದವರು ಹೃತ್ಪೂರ್ವಕ ಭಾವನೆಗಳನ್ನು ಹಂಚಿಕೊಂಡರು. 13 ವರ್ಷದ ಅನಿಮೇಶ್, ಮಕ್ಕಳ ಸತ್ಸಂಗ ತರಗತಿಗಳಿಗೆ ಹಾಜರಾಗುವುದು ತನಗೆ ಹೇಗೆ ಸ್ಫೂರ್ತಿ ನೀಡಿತು ಎಂದು ಹೇಳಿದರೆ, 16 ವರ್ಷದ ಆದ್ಯ, ಹದಿಹರೆಯದ ಹೊಸ ಕಾರ್ಯಕ್ರಮದ ಮೂಲಕ ಕಲಿಯುವ ಮತ್ತು ಬೆಳೆಯುವ ತನ್ನ ಆಶಯವನ್ನು ವ್ಯಕ್ತಪಡಿಸಿದಳು. ಅವರ ಮಾತುಗಳು ವೈಎಸ್ಎಸ್ ನ ಯುವ ಉಪಕ್ರಮಗಳ ಪರಿವರ್ತನಾತ್ಮಕ ಪ್ರಭಾವಕ್ಕೆ ಸಾಕ್ಷಿಯಾಗಿವೆ.

ಅನಿಮೇಶ್‌ ಹೇಳಿದ ಒಂದು ಆಯ್ದ ಭಾಗ ಇಲ್ಲಿದೆ: “ಸುಮಾರು ಎಂಟು ವರ್ಷಗಳಿಂದ ವೈಎಸ್ಎಸ್ ರಾಂಚಿಯ ಮಕ್ಕಳ ಸತ್ಸಂಗದಲ್ಲಿ ಭಾಗವಹಿಸಲು ಮತ್ತು ಬೇಸಿಗೆ ಶಿಬಿರಗಳು, ವಾರ್ಷಿಕ ಪಿಕ್‌ನಿಕ್‌ಗಳು, ತೀರ್ಥಯಾತ್ರೆಗಳು ಇತ್ಯಾದಿಗಳಲ್ಲಿ ಭಾಗವಹಿಸಲು ನನಗೆ ಒಂದು ದೊಡ್ಡ ಅವಕಾಶ ಮತ್ತು ಅನುಗ್ರಹ ದೊರೆತಿದೆ. ನಾನು ಕಲಿತ ಅತ್ಯಂತ ಪ್ರಮುಖ ವಿಷಯವೆಂದರೆ ನಮ್ಮ ಜೀವನದಲ್ಲಿ ಭಗವಂತ ಮತ್ತು ಗುರುಗಳ ಪ್ರಾಮುಖ್ಯತೆ, ಧ್ಯಾನದಲ್ಲಿ ಗುರೂಜಿಯನ್ನು ಹೇಗೆ ಸಂಪರ್ಕಿಸುವುದು ಮತ್ತು ಗುರೂಜಿ ನನ್ನನ್ನು ಮಾರ್ಗದರ್ಶಿಸುತ್ತ ಮತ್ತು ರಕ್ಷಿಸುತ್ತ ಸದಾ ನನ್ನೊಂದಿಗಿದ್ದಾರೆ ಎಂಬ ಅರಿವಿನಲ್ಲಿ ಒಳ್ಳೆಯ, ಸಂತೋಷದ ಜೀವನವನ್ನು ಹೇಗೆ ನಡೆಸುವುದು.”

ಆದ್ಯ ತನ್ನ ಹೇಳಿಕೆಯಲ್ಲಿ, “ಹದಿಹರೆಯದವರ ಹೊಸ ಕಾರ್ಯಕ್ರಮದಿಂದ ನಾವು ಧ್ಯಾನ ಮಾಡುವುದು ಹೇಗೆ ಮತ್ತು ನಮ್ಮ ಏಕಾಗ್ರತೆಯನ್ನು ಬೆಳೆಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿಯುತ್ತೇವೆ ಎಂದು ನಾನು ನಿರೀಕ್ಷಿಸುತ್ತೇನೆ. ಏಕೆಂದರೆ ಈ ವಯಸ್ಸಿನಲ್ಲಿ, ನಮ್ಮಲ್ಲಿ ಬಹಳಷ್ಟು ಗೊಂದಲಗಳಿವೆ ಮತ್ತು ಇವುಗಳನ್ನು ಪರಿಣಾಮಕಾರಿಯಾಗಿ ಹೇಗೆ ನಿಭಾಯಿಸಬೇಕೆಂದು ಶಾಲೆಗಳು ನಮಗೆ ಕಲಿಸುವುದಿಲ್ಲ. ಗೆಳೆಯರ ಒತ್ತಡ, ಅಭದ್ರತೆ, ಕೀಳರಿಮೆ, ನಕಾರಾತ್ಮಕ ಆಲೋಚನೆಗಳು, ಭಯ, ಒತ್ತಡ, ಆತಂಕ, ಒಂಟಿತನ, ಇಂತಹ ವಿವಿಧ ಸಮಸ್ಯೆಗಳಿವೆ.

“ಈಗಿನ ಪೀಳಿಗೆಯ ಅನೇಕ ಹದಿಹರೆಯದವರು ಖಿನ್ನತೆಗೆ ಒಳಗಾಗುತ್ತಾರೆ, ವಿಶೇಷವಾಗಿ ಅವರು ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಗಳಿಸಿದರೆ. ನಿರಂತರ ಪ್ರಯತ್ನಗಳ ನಂತರವೂ ವಿಫಲರಾದರೆ, ಅವರು ಈ ರೀತಿ ಯೋಚಿಸಲಾರಂಭಿಸುತ್ತಾರೆ: ʼನನಗೆ ಹೀಗೇಕೆ ಆಗುತ್ತಿದೆ? ಹೀಗಾಗಲು ನಾನೇನು ಮಾಡಿದ್ದೆ?ʼ ತಮ್ಮ ದುರಾದೃಷ್ಟಕ್ಕೆ ಕೆಲವರು ಭಗವಂತನನ್ನು ದೂಷಿಸಲೂ ಆರಂಭಿಸುತ್ತಾರೆ. ಆದ್ದರಿಂದ, ಇಂದು ಬಹಳ ಮುಖ್ಯವಾದ, ಆದರೂ ಯಾರೂ ಪರಿಹರಿಸದಂತಹ ಸಮಸ್ಯೆಗಳನ್ನು, ನಿಭಾಯಿಸುವ ಬಗ್ಗೆ ನಾನು ಕಲಿಯಬೇಕೆಂದಿದ್ದೇನೆ. ಈ ಪೀಳಿಗೆಯು ಕಥೆಗಳು ಮತ್ತು ಪುರಾಣಗಳನ್ನು ನಂಬುವುದಿಲ್ಲ. ಅವರು ಪುರಾವೆಗಳ ಜೊತೆಗೆ ಕಾರ್ಯೋಪಯೋಗಿ ಪರಿಹಾರಗಳನ್ನು ಬಯಸುತ್ತಾರೆ ಮತ್ತು ಗುರೂಜಿಯವರ ಬೋಧನೆಗಳು ಪರಿಪೂರ್ಣ ಮಾರ್ಗದರ್ಶಕವಾಗಿರುತ್ತವೆ. ಗುರೂಜಿಯವರ ಕಾರ್ಯೋಪಯೋಗಿ ಬೋಧನೆಗಳು ನಮ್ಮ ಆಂತರಿಕ ಹೋರಾಟಗಳನ್ನು ಗೆಲ್ಲಲು ನಮಗೆ ಸಹಾಯ ಮಾಡುತ್ತವೆ ಎಂದು ನಾನು ನಂಬುತ್ತೇನೆ,” ಎಂದು ಹೇಳಿದಳು.

ಸ್ವಾಮಿ ಶಂಕರಾನಂದರು ತಮ್ಮ ಭಾಷಣದಲ್ಲಿ, “ಗುರೂಜಿಯವರ ‘ಬದುಕುವುದು-ಹೇಗೆ’ ಎಂಬ ಬೋಧನೆಗಳು ಜೀವನದ ಸವಾಲುಗಳನ್ನು ಎದುರಿಸಲು ನಮ್ಮ ಸಹಜ ಆತ್ಮ ಶಕ್ತಿಯನ್ನು ಹೇಗೆ ಅವಲಂಬಿಸಬೇಕೆಂದು ನಮಗೆ ತೋರಿಸುತ್ತವೆ. ಅವು ದೈಹಿಕ ಆರೋಗ್ಯ, ಒಬ್ಬರ ಮಾನಸಿಕ ಸಾಮರ್ಥ್ಯಗಳನ್ನು ಅಭಿವೃದ್ಧಿಗೊಳಿಸುವುದು ಮತ್ತು ಧ್ಯಾನದ ಮೂಲಕ ಆತ್ಮದ ಅಂತರ್ಬೋಧೆಯನ್ನು ಜಾಗೃತಗೊಳಿಸುವುದೂ ಸೇರಿದಂತೆ ಸುಖ ಜೀವನಕ್ಕಾಗಿ ಸಮತೋಲಿತ ಮತ್ತು ಸರ್ವತೋಮುಖ ಅಭಿವೃದ್ಧಿಯ ಮಹತ್ವವನ್ನು ಎತ್ತಿ ತೋರಿಸುತ್ತವೆ. ಅಲ್ಲದೆ, ಹಿನ್ನಡೆಗಳಿಂದ ಚೇತರಿಸಿಕೊಳ್ಳುವ ಸಾಮರ್ಥ್ಯಕ್ಕಾಗಿ, ವೈಫಲ್ಯ, ಭಯ ಮತ್ತು ನಷ್ಟವನ್ನು ರಚನಾತ್ಮಕ ರೀತಿಯಲ್ಲಿ ನಿಭಾಯಿಸುವುದೂ ಸೇರಿದಂತೆ ನಮ್ಮ ಭಾವನೆಗಳನ್ನು ಹೇಗೆ ನಿಯಂತ್ರಿಸಬೇಕೆಂದು ಕಲಿಯುವುದು ಮುಖ್ಯವಾಗಿರುತ್ತದೆ,” ಎಂದು ಹೇಳಿದರು. 

ಅವರು ಮುಂದುವರಿದು ಹೇಳಿದರು, “ನಮ್ಮ ಹದಿಹರೆಯದವರಿಗಾಗಿರುವ ಹೊಸ ಕಾರ್ಯಕ್ರಮದಲ್ಲಿ ನಾವು ಗುಂಪು ಚರ್ಚೆಗಳು, ಸ್ಕಿಟ್‌ಗಳು, ಕರಕೌಶಲಗಳು, ಆಟಗಳು, ಪ್ರಾತ್ಯಕ್ಷಿಕೆಗಳು ಮತ್ತು ಸೇವಾ ಚಟುವಟಿಕೆಗಳಂತಹ ವಿವಿಧ ಸ್ವರೂಪಗಳಲ್ಲಿ ಈ ವಿಷಯಗಳ ವೈವಿಧ್ಯತೆಯನ್ನು ಅನ್ವೇಷಿಸುತ್ತೇವೆ. ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ ಶಿಕ್ಷಣಶಾಸ್ತ್ರದ ಸಾಬೀತಾದ ವಿಧಾನಗಳ ಮೂಲಕ, ಯೋಗಾನಂದಜಿಯವರ ಬೋಧನೆಗಳ ಸಂಪೂರ್ಣ ಆಳ ಮತ್ತು ವ್ಯಾಪ್ತಿಯನ್ನು ನಿಮ್ಮೆಲ್ಲರಿಗೂ ಪರಿಚಯಿಸಲು ನಾವು ಆಶಿಸುತ್ತೇವೆ”.

ಯೋಗಿಯ ಆತ್ಮಕಥೆಯಲ್ಲಿ ವಿವರಿಸಿದಂತೆ — ಮುಕುಂದ (ಪರಮಹಂಸ ಯೋಗಾನಂದರ ಬಾಲ್ಯದ ಹೆಸರು) ನ ತಂದೆ ಭಗವತಿ ಚರಣ್‌ ಘೋಷರು ಸಮತೋಲಿತ ನಿರ್ಧಾರಗಳು ಮತ್ತು ಪಾಲಕರ ಮಾರ್ಗದರ್ಶಕ ಪೋಷಣೆಯನ್ನು ನಿದರ್ಶಿಸುತ್ತ ತಮ್ಮ ಮಕ್ಕಳ ಕೋರಿಕೆಗಳನ್ನು ಎಷ್ಟು ವಿಚಾರಪೂರ್ಣವಾಗಿ ಪರಿಗಣಿಸಿದರು, ಎಂದು ಗುರೂಜಿಯವರ ತಂದೆಯ ಉದಾಹರಣೆಯನ್ನು ಉದ್ಧರಿಸುತ್ತ ಹದಿಹರೆಯದವರ ಜೀವನದಲ್ಲಿ ಪೋಷಕರು ಮತ್ತು ಹಿರಿಯ ಮಾರ್ಗದರ್ಶಕರು ವಹಿಸುವ ಪ್ರಮುಖ ಪಾತ್ರವನ್ನು ಅವರು ಒತ್ತಿ ಹೇಳಿದರು.

ಒಬ್ಬ ಹದಿಹರೆಯದವನ ನೇತೃತ್ವದಲ್ಲಿ, ಇತರರಿಗಾಗಿ ಪ್ರಾರ್ಥಿಸುವುದು, ಉಪಶಮನದಾಯಕ ತಂತ್ರದ ಅಭ್ಯಾಸ ಮತ್ತು ಮುಕ್ತಾಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ನಂತರ ಸ್ವಾಮಿಗಳಾದ ಸರಳಾನಂದ ಮತ್ತು ಪದ್ಮಾನಂದರು ಭಾಗವಹಿಸಿದವರಿಗೆ ಕೊನೆಯಲ್ಲಿ ಪ್ರಸಾದ ವಿತರಿಸಿ ಆಶೀರ್ವದಿಸಿದರು (ಕೆಳಗೆ ನೋಡಿ). 

ಇದನ್ನು ಹಂಚಿಕೊಳ್ಳಿ