ಪರಮಹಂಸ ಯೋಗಾನಂದರ ಯೋಗಿಯ ಆತ್ಮಕಥೆಯಿಂದ ಮರುಮುದ್ರಿಸಲಾಗಿದೆ (ಅಧ್ಯಾಯ 33)
ಉತ್ತರದಲ್ಲಿ ಬದರಿನಾರಾಯಣದ ಸಮೀಪದ ಕಡಿದಾದ ಹಿಮಾಲಯದ ಬಂಡೆಗಳು ಲಾಹಿರಿ ಮಹಾಶಯರ ಗುರುಗಳಾದ ಬಾಬಾಜಿಯವರ ಜೀವಂತ ಅಸ್ತಿತ್ವದಿಂದ ಇಂದಿಗೂ ಪುನೀತವಾಗಿವೆ. ಆ ಏಕಾಂತವಾಸಿ ಗುರುಗಳು ಶತಶತಮಾನಗಳ ಕಾಲ ಬಹುಶಃ ಲಕ್ಷಾವಧಿ ವರ್ಷಗಳ ಕಾಲ ತಮ್ಮ ಭೌತಶರೀರವನ್ನು ಉಳಿಸಿಕೊಂಡಿದ್ದಾರೆ. ಸಾವೇ ಇಲ್ಲದ ಬಾಬಾಜಿ ಒಬ್ಬ ಅವತಾರ ಪುರುಷ. ಅವತಾರ ಎಂಬ ಸಂಸ್ಕೃತ ಪದದ ಅರ್ಥ “ಇಳಿದು ಬರುವುದು”; ಅದರ ವ್ಯುತ್ಪತ್ತಿ ‘ಅವ’ ಎಂದರೆ ಕೆಳಗೆ, ‘ತ್ರ’ ಎಂದರೆ “ಚಲಿಸಿ ಬರುವುದು.” ಹಿಂದೂ ಪುರಾಣಗಳಲ್ಲಿ ಅವತಾರ ಎಂದರೆ ದೇವರು ಭೌತಶರೀರದ ರೂಪದಲ್ಲಿ ಇಳಿದು ಬರುವುದು.
“ಬಾಬಾಜಿಯ ಆಧ್ಯಾತ್ಮಿಕ ಮಟ್ಟವನ್ನರಿಯಲು ಮಾನವಬುದ್ಧಿಗೆ ಸಾಧ್ಯವಿಲ್ಲ. ಮಾನವನ ಸಂಕುಚಿತ ದೃಷ್ಟಿ ಆ ಅತೀಂದ್ರಿಯಗೋಚರ ನಕ್ಷತ್ರವನ್ನು ನಾಟಲಾರದು. ಆ ಅವತಾರ ಪುರುಷನ ಸಾಧನೆಯನ್ನು ಊಹಿಸಿಕೊಳ್ಳುವುದಕ್ಕೂ ಕೂಡ ಸಾಧ್ಯವಿಲ್ಲ. ಅದು ಅಗ್ರಾಹ್ಯವಾದುದು” ಎಂದು ಶ್ರೀ ಯುಕ್ತೇಶ್ವರರೇ ನನಗೆ ವಿವರಿಸಿದ್ದರು.
ಉಪನಿಷತ್ತುಗಳು ಆಧ್ಯಾತ್ಮಿಕ ಪ್ರಗತಿಯ ಪ್ರತಿ ಹಂತವನ್ನೂ ಸೂಕ್ಷ್ಮವಾಗಿ ವರ್ಗೀಕರಿಸಿವೆ. ಸಿದ್ಧಪುರುಷನಾದವನು ಜೀವನ್ಮುಕ್ತಾವಸ್ಥೆಯಿಂದ (“ಬದುಕಿರುವಾಗಲೇ ಮುಕ್ತನಾದವನು”) ಮುಂದುವರಿದು ಪರಾಮುಕ್ತಾವಸ್ಥೆಗೆ (“ಸಂಪೂರ್ಣವಾಗಿ ಮುಕ್ತಿ” – ಸಾವಿನ ಮೇಲೆ ವಿಜಯ) ತಲುಪುತ್ತಾನೆ; ಪರಾಮುಕ್ತನು ಮಾಯದ ದಾಸ್ಯದಿಂದ ಹಾಗೂ ಅದರ ಪುನರ್ಜನ್ಮದ ಚಕ್ರದಿಂದ ಸಂಪೂರ್ಣವಾಗಿ ಪಾರಾಗಿರುತ್ತಾನೆ. ಆದ್ದರಿಂದ ಪರಾಮುಕ್ತನಾದವನು ಈ ಭೌತಶರೀರಕ್ಕೆ ಹಿಂತಿರುಗುವುದು ವಿರಳ. ಹಿಂತಿರುಗಿದರೆ ಅವನನ್ನೇ ಅವತಾರ ಎನ್ನುವುದು. ಅವನು ಈ ವಿಶ್ವದ ಮೇಲೆ ದಿವ್ಯಾಶಿಷಗಳನ್ನು ವರ್ಷಿಸಲು ಭಗವಂತನಿಂದ ನಿಯೋಜಿಸಲ್ಪಟ್ಟ ಮಾಧ್ಯಮವಾಗುತ್ತಾನೆ. ಅವತಾರ ಪುರುಷನು ಈ ವಿಶ್ವದ ಆರ್ಥಿಕ ವ್ಯವಸ್ಥೆಗೆ ಬದ್ಧನಲ್ಲ. ತೇಜೋ ರೂಪದಲ್ಲಿ ಕಾಣುವ ಅವನ ಪರಿಶುದ್ಧ ದೇಹ, ಪ್ರಕೃತಿಯ ಋಣದಿಂದ ಮುಕ್ತವಾಗಿರುತ್ತದೆ.
ಅವತಾರಪುರುಷನ ರೂಪವು ಮೇಲುನೋಟಕ್ಕೆ ಅತಿಶಯವಾಗಿ ಕಾಣದೇ ಇರಬಹುದು; ಆದರೆ ಕೆಲವೊಮ್ಮೆ ಅದು ನೆರಳನ್ನೇ ಮೂಡಿಸದು ಅಥವಾ ನೆಲದ ಮೇಲೆ ಹೆಜ್ಜೆಯ ಗುರುತನ್ನೇ ಉಂಟುಮಾಡದು. ಅಂಧಕಾರದ ಹಾಗೂ ವೈಷಯಿಕ ಬಂಧನದಿಂದ ಆಂತರಿಕವಾಗಿ ಬಿಡುಗಡೆ ಹೊಂದಿದುದರ ಬಾಹ್ಯರೂಪದ ಸಾಂಕೇತಿಕ ಸಾಕ್ಷಿ ಇವುಗಳು. ಬದುಕು ಸಾವುಗಳ ಸಾಪೇಕ್ಷತೆಯ ಹಿಂದಿರುವ ಸತ್ಯವನ್ನು ಅಂತಹ ದೈವೀಪುರುಷ ಮಾತ್ರವೇ ಅರಿಯಬಲ್ಲ. ಉಮರ್ ಖಯಾಮನನ್ನು ಜನ ಸ್ಥೂಲವಾದ ಮೇಲುನೋಟದಿಂದ ತಪ್ಪಾಗಿ ತಿಳಿದಿದ್ದಾರೆ. ಆತ ತನ್ನ ಶಾಶ್ವತ ಕೃತಿಯಾದ “ರುಬೈಯಾತ್” ನಲ್ಲಿ ಈ ಮುಕ್ತಾತ್ಮನನ್ನು ಕುರಿತು ಹೀಗೆ ಹಾಡಿದ್ದಾನೆ:
“ಈ ಹಾಡಿನ ಕನ್ನಡ ಭಾವಾನುವಾದ ಹೀಗಿದೆ:
ಓಹ್! ಕ್ಷಯವರಿಯದ ನನ್ನ ಆನಂದ ಚಂದ್ರ,
ಉದಯಿಸುತಿಹಳು ಸ್ವರ್ಗದ ಆ ಚಂದ್ರಮ;
ಅದೆಷ್ಟು ಬಾರಿ ಹುಡುಕುವಳೋ ಉದಯಿಸುತಾ ಇನ್ನು ಮುಂದೆ
ಇದೇ ಉದ್ಯಾನದಲಿ, ನನಗಾಗಿ-ವ್ಯರ್ಥವಾಗಿ!”
“Moon of my Delight who know’st no wane” ಎಂದರೆ ದೇವರು, ಶಾಶ್ವತನಾದವನು, ಕಾಲ ಕ್ಷಯವಾಗದವನು. ‘The Moon of Heav’n is rising once again’ ಎಂದರೆ ಹೊರಗೆ ವ್ಯಕ್ತವಾಗಿರುವ ಕಾಲಕ್ಕನುಗುಣವಾಗಿ ಪುನರಾವರ್ತನೆ ಹೊಂದುವ ನಿಯಮಗಳಿಗೆ ಬದ್ಧವಾದ ವಿಶ್ವ. ಆತ್ಮಸಾಕ್ಷಾತ್ಕಾರ ಪಡೆಯುವ ಮೂಲಕ, ಈ ಪರ್ಷಿಯದ ದಾರ್ಶನಿಕ, ಭೂಮಿಗೆ ಅಂದರೆ ಪ್ರಕೃತಿ ಅಥವಾ ಮಾಯೆಯ “garden” ಗೆ ಹಿಂತಿರುಗಲೇಬೇಕೆಂಬ ಬಂಧನದಿಂದ ಎಂದೆಂದಿಗೂ ಬಿಡುಗಡೆ ಹೊಂದಿದ್ದ. ‘How oft hereafter rising shall she look after me-in vain!’ ಎಂದರೆ ಒಂದು ಅನವಚ್ಛಿನ್ನ ಲೋಪದ ಕಾರಣಕ್ಕಾಗಿ ಬೆರಗುಗೊಂಡ ವಿಶ್ವದಿಂದ ಎಂತಹ ಹತಾಶೆ ಶೋಧನೆಗೆ!
ಕ್ರಿಸ್ತನು ಅವನ ಸ್ವಾತಂತ್ರ್ಯವನ್ನು ಮತ್ತೊಂದು ರೀತಿಯಲ್ಲಿ ಪ್ರಕಟಿಸಿದ: “ಮತ್ತೆ ಒಬ್ಬ ಲಿಪಿಕಾರ ಬಂದ. ಬಂದವನೇ ಯೇಸುವಿಗೆ ಹೇಳಿದ, ಪ್ರಭು ನೀನು ಎಲ್ಲಿ ಹೋಗುವೆಯೋ ಅಲ್ಲೆಲ್ಲ ನಾನು ನಿನ್ನನ್ನು ಅನುಸರಿಸುವೆ ಎಂದು. ಅದಕ್ಕೆ ಯೇಸು, ನರಿಗಳಿಗೆ ಬಿಲಗಳಿವೆ, ಗಾಳಿಯಲ್ಲಿ ಹಾರುವ ಹಕ್ಕಿಗಳಿಗೆ ಗೂಡುಗಳಿವೆ; ಆದರೆ ಮಾನವಪುತ್ರನಿಗೆ ಮಾತ್ರ ತಲೆಯನ್ನು ಮರೆಸಿಕೊಳ್ಳುವುದಕ್ಕೆ ಸ್ಥಳವೇ ಇಲ್ಲವಾಗಿದೆ ಎಂದ.”
ಸರ್ವವ್ಯಾಪಿತ್ವದೊಂದಿಗೆ ವಿಶಾಲವಾದ ಕ್ರಿಸ್ತನನ್ನು ಸರ್ವವ್ಯಾಪಿ ಪರಮಾತ್ಮನಲ್ಲಲ್ಲದೆ ಬೇರೆಲ್ಲಿ ಅನುಸರಿಸಲು ಸಾಧ್ಯ?
ಭಾರತದ ಪ್ರಾಚೀನ ಅವತಾರಗಳಲ್ಲಿ ಕೃಷ್ಣ, ರಾಮ, ಬುದ್ಧ ಹಾಗೂ ಪತಂಜಲಿಗಳೂ ಸೇರಿದ್ದಾರೆ. ದಕ್ಷಿಣ ಭಾರತದ ಅವತಾರವಾದ ಅಗಸ್ತ್ಯನ ಬಗ್ಗೆ ತಮಿಳಿನಲ್ಲಿ ಗಮನಾರ್ಹವಾದಷ್ಟು ಕಾವ್ಯ ಸಾಹಿತ್ಯ ಸೃಷ್ಟಿಯಾಗಿದೆ. ಕ್ರೈಸ್ತ ಯುಗಕ್ಕೆ ಪೂರ್ವದಲ್ಲೂ ಆನಂತರದಲ್ಲೂ ಆತ ಅನೇಕ ಪವಾಡಗಳನ್ನು ಮಾಡಿದನಲ್ಲದೆ ತನ್ನ ಭೌತಶರೀರದೊಡನೆ ಇಂದಿಗೂ ಇದ್ದಾನೆಂದೇ ನಂಬಲಾಗುತ್ತದೆ.
ಪ್ರವಾದಿಗಳು ತಮ್ಮ ತಮ್ಮ ವಿಶೇಷ ಉದ್ದೇಶಗಳನ್ನು ನೆರವೇರಿಸಲು ಅವರಿಗೆ ಸಹಾಯ ನೀಡುವುದೇ ಭಾರತದಲ್ಲಿ ಬಾಬಾಜಿಯವರ ಧ್ಯೇಯ. ಆ ಕಾರಣದಿಂದಾಗಿ ಅವರು ಮಹಾವತಾರ್ ಎಂಬ ಧಾರ್ಮಿಕ ಉಪಾಧಿಗೆ ಪಾತ್ರರಾಗುತ್ತಾರೆ. ಸಂನ್ಯಾಸಾಶ್ರಮವನ್ನು ಪುನರ್ವ್ಯವಸ್ಥೆಗೊಳಿಸಿದ ಶಂಕರರಿಗೆ ಹಾಗೂ ಮಧ್ಯಕಾಲೀನ ಪ್ರಸಿದ್ಧ ಪುರುಷನಾದ ಕಬೀರನಿಗೆ ಅವರೇ ಯೋಗದ ಉಪದೇಶ ನೀಡಿದುದಾಗಿ ಹೇಳಿದ್ದಾರೆ. 19ನೇ ಶತಮಾನದ ಅವರ ಪ್ರಧಾನ ಶಿಷ್ಯರೆಂದರೆ ಲಾಹಿರಿ ಮಹಾಶಯ, ಕಳೆದುಹೋಗಿದ್ದ ಕ್ರಿಯಾಯೋಗವನ್ನು ಪುನರುಜ್ಜೀವನಗೊಳಿಸಿದವರು ಅವರು.
ಬಾಬಾಜಿ ನಿರಂತರವಾಗಿ ಕ್ರಿಸ್ತನೊಡನೆ ಸಂಪರ್ಕ ಹೊಂದಿರುವವರು. ಇಬ್ಬರೂ ಒಟ್ಟುಗೂಡಿ ವಿಮೋಚನೆಗೊಳಿಸುವ ಸ್ಪಂದನಗಳನ್ನು ಕಳಿಸಿಕೊಡುತ್ತಾರೆ ಹಾಗೂ ಈ ಯುಗಕ್ಕನುಗುಣವಾಗಿ ಮೋಕ್ಷಕ್ಕೆ ಬೇಕಾದ ಆಧ್ಯಾತ್ಮಿಕ ತಂತ್ರವನ್ನು ಯೋಜಿಸಿದ್ದಾರೆ. ಪೂರ್ಣಜ್ಞಾನವನ್ನು ಪಡೆದ ಈ ಇಬ್ಬರು ಸಿದ್ಧರೂ, ಒಬ್ಬರು ಸಶರೀರವಾಗಿ, ಮತ್ತೊಬ್ಬರು ಅಶರೀರಿಗಳಾಗಿ ಕೆಲಸಮಾಡಿ ಯುದ್ಧಗಳನ್ನು ವರ್ಜಿಸುವಂತೆಯೂ ಜನಾಂಗ ದ್ವೇಷಗಳನ್ನು ತೊರೆಯುವಂತೆಯೂ ಮತೀಯ ದ್ವೇಷಗಳನ್ನು ಬಿಡುವಂತೆಯೂ ಐಹಿಕ ಭೋಗಗಳಿಂದ ಸಂಭವಿಸುವ ತಿರುಗುಬಾಣವಾಗುವ ದುಷ್ಪರಿಣಾಮಗಳನ್ನು ನಿವಾರಿಸುವಂತೆಯೂ ರಾಷ್ಟ್ರ, ರಾಷ್ಟ್ರಗಳನ್ನು ಪ್ರೇರಿಸುತ್ತಿರುತ್ತಾರೆ. ಆಧುನಿಕ ಯುಗದ ಒಲವುಗಳನ್ನು, ಅದರಲ್ಲೂ ಪಾಶ್ಚಾತ್ಯ ನಾಗರಿಕತೆಯ ಪ್ರಭಾವದ ಸಂಕೀರ್ಣತೆ ಎಂಥದೆಂಬುದನ್ನು ಬಾಬಾಜಿ ಚೆನ್ನಾಗಿ ಅರಿತುಕೊಂಡಿದ್ದಾರೆ. ಅಲ್ಲದೆ, ಪಶ್ಚಿಮದಲ್ಲೂ ಪೂರ್ವದಲ್ಲೂ ಯೋಗದ ಮೂಲಕ ಬಂಧವಿಮೋಚನೆಯ ಮಾರ್ಗವನ್ನು ಸಮಾನವಾಗಿ ಪ್ರಚುರಪಡಿಸಬೇಕಾದ ಅಗತ್ಯವನ್ನು ಅರಿತುಕೊಂಡಿದ್ದಾರೆ.
ಬಾಬಾಜಿಯ ಬಗ್ಗೆ ಐತಿಹಾಸಿಕ ದಾಖಲೆಯೇನೂ ಇಲ್ಲವೆಂದು ನಾವು ಆಶ್ಚರ್ಯಪಡಬೇಕಾಗಿಲ್ಲ. ಆ ಮಹಾಗುರು ಯಾವ ಶತಮಾನದಲ್ಲಿಯೂ ಸಾರ್ವಜನಿಕವಾಗಿ ಹೊರಗೆ ಕಾಣಿಸಿಕೊಂಡಿಲ್ಲ. ಪ್ರಚಾರದ ಅಪವ್ಯಾಖ್ಯಾನದ ಥಳುಕು ಹೊಳಪಿಗೆ ಅವರ ಸಹಸ್ರಮಾನದ ಯೋಜನೆಗಳಲ್ಲಿ ಯಾವ ಸ್ಥಾನವೂ ಇಲ್ಲ. ಸೃಷ್ಟಿಕರ್ತನಂತೆಯೇ ಏಕಮಾತ್ರ ಆದರೆ ಮೌನಶಕ್ತಿಯಾಗಿ ಬಾಬಾಜಿಯವರು ನಮ್ರ ಅಜ್ಞಾತತೆಯಿಂದಲೇ ಕೆಲಸ ಮಾಡುತ್ತಾರೆ.
ಕ್ರಿಸ್ತ ಹಾಗೂ ಕೃಷ್ಣರಂತಹ ಮಹಾನ್ ಸಂತರು ಗೊತ್ತಾದ ಹಾಗೂ ಪ್ರದರ್ಶನಾತ್ಮಕ ಉದ್ದೇಶಕ್ಕಾಗಿ ಭೂಮಿಯಲ್ಲಿ ಅವತರಿಸುತ್ತಾರೆ; ತಮ್ಮ ಉದ್ದೇಶ ನೆರವೇರಿದೊಡನೆಯೇ ಅವರು ನಿರ್ಗಮಿಸುತ್ತಾರೆ. ಬಾಬಾಜಿಯಂತಹ ಇತರ ಅವತಾರಗಳಾದರೋ ಇತಿಹಾಸದ ಯಾವುದೋ ಪ್ರಮುಖ ಘಟನೆಯ ಸಲುವಾಗಿ ಬರುವ ಬದಲು ಶತಮಾನಗಳ ಅವಧಿಯಲ್ಲಿ ನಡೆಯಬೇಕಾದ ಮನುಷ್ಯನ ಮಂದಗತಿಯ ವಿಕಾಸಾತ್ಮಕ ಪ್ರಗತಿಯನ್ನು ಕುರಿತ ಕೆಲಸವನ್ನು ಕೈಗೆತ್ತಿಕೊಳ್ಳುತ್ತಾರೆ. ಇಂತಹ ಸಿದ್ಧರು ಯಾವಾಗಲೂ ಸಾರ್ವಜನಿಕ ಸ್ಥೂಲ ದೃಷ್ಟಿಗೆ ಬೀಳದಂತೆ ತಮ್ಮನ್ನು ಮರೆಮಾಡಿಕೊಂಡಿರುತ್ತಾರೆ ಹಾಗೂ ಸ್ವಇಚ್ಛೆಯಿಂದ ಅದೃಶ್ಯವಾಗುವ ಶಕ್ತಿ ಅವರಲ್ಲಿದೆ. ಈ ಕಾರಣಗಳಿಂದ ಮತ್ತು ತಮ್ಮ ಬಗ್ಗೆ ಮೌನವಾಗಿರಬೇಕೆಂದು ಸಾಮಾನ್ಯವಾಗಿ ತಮ್ಮ ಶಿಷ್ಯರಿಗೆ ಬೋಧಿಸುತ್ತಾರಾದ್ದರಿಂದ ಎಷ್ಟೋ ಮಂದಿ ಶಿಖರಪ್ರಾಯರಾದ ಅಧ್ಯಾತ್ಮ ಚೇತಸರು ಈ ಪ್ರಪಂಚಕ್ಕೆ ಅಜ್ಞಾತರಾಗಿಯೇ ಉಳಿಯುತ್ತಾರೆ. ಈ ಪುಟಗಳಲ್ಲಿ ನಾನು ಬಾಬಾಜಿಯವರ ಜೀವನದ ಬಗ್ಗೆ ಬರೀ ಒಂದು ಸೂಚನೆ ಮಾತ್ರ ಕೊಡುವವನಿದ್ದೇನೆ – ಸಾರ್ವಜನಿಕರಿಗೆ ತಿಳಿಸುವುದು ಯೋಗ್ಯವೆಂದೂ ಹಾಗೂ ಉಪಯುಕ್ತವೆಂದೂ ಅವರು ಪರಿಗಣಿಸಬಹುದಾದಂತಹ ಕೆಲವು ಅಂಶಗಳನ್ನು ಮಾತ್ರವೇ ಹೇಳುತ್ತೇನೆ.
ಬಾಬಾಜಿಯ ವಂಶ ಅಥವಾ ಹುಟ್ಟಿದ ಸ್ಥಳ ಇಂತಹ ಚರಿತ್ರ ಲೇಖಕರ ಹೃದಯಕ್ಕೆ ಪ್ರಿಯವಾಗುವಂತಹ ಆದರೆ ಪರಿಮಿತವಾಗುವಂತಹ ಸಂಗತಿಗಳಾವುವನ್ನೂ ಕಂಡುಹಿಡಿದವರಿಲ್ಲ. ಅವರು ಮಾತನಾಡುತ್ತಿದ್ದುದು ಸಾಮಾನ್ಯವಾಗಿ ಹಿಂದಿಯಲ್ಲಿ, ಆದರೆ ಅವರು ಬೇರೆ ಯಾವುದೇ ಭಾಷೆಯಲ್ಲಿ ಸರಳವಾಗಿ ಸಂಭಾಷಿಸುತ್ತಿದ್ದರು. ಬಾಬಾಜಿ ಎಂಬ ಸರಳವಾದ ಹೆಸರೇ ಅವರಿಗೆ ಸಮ್ಮತವಾಗಿತ್ತು. ಲಾಹಿರಿ ಮಹಾಶಯರ ಶಿಷ್ಯರು ಗೌರವದಿಂದ ಅವರನ್ನು ಕರೆಯುತ್ತಿದ್ದ ಇತರ ಹೆಸರುಗಳು ಇವು: ಮಹಾಮುನಿ ಬಾಬಾಜಿ ಮಹಾರಾಜ್, ಮಹಾಯೋಗಿ ಮತ್ತು ತ್ರಯಂಬಕ್ ಬಾಬಾ ಅಥವಾ ಶಿವಬಾಬಾ. ಪೂರ್ಣ ಸ್ವತಂತ್ರರಾದ ಯೋಗಿಯ ಕುಟುಂಬದ ಹೆಸರನ್ನು ನಾವು ತಿಳಿಯದಿದ್ದ ಮಾತ್ರಕ್ಕೆ ಏನು ತೊಂದರೆ?
“ಬಾಬಾಜಿಯ ಹೆಸರನ್ನು ಯಾರು ಭಕ್ತಿಯಿಂದ ಯಾವಾಗ ಉಚ್ಚರಿಸಿದರೂ ಅಂತಹ ಭಕ್ತರು ತತ್‌ಕ್ಷಣದಲ್ಲೇ ಅವರ ಆಧ್ಯಾತ್ಮಿಕ ಕೃಪೆಗೆ ಪಾತ್ರರಾಗುತ್ತಾರೆ” ಎಂದು ಲಾಹಿರಿ ಮಹಾಶಯರು ಹೇಳಿದ್ದಾರೆ.
ಸಾವರಿಯದ ಆ ಗುರುವಿನ ದೇಹದ ಮೇಲೆ ವಯಸ್ಸಿನ ಚಿಹ್ನೆಗಳು ಕಾಣವು; ಇಪ್ಪತ್ತೈದನ್ನು ಮೀರದ ಯುವಕನಂತೆ ಕಾಣುತ್ತಾರೆ. ಸುಂದರ ಚರ್ಮದ ಸಾಧಾರಣ ಎತ್ತರ ಹಾಗೂ ಮೈಕಟ್ಟಿನ ಬಾಬಾಜಿಯವರ ಸುಂದರವಾದ ದೃಢವಾದ ದೇಹವು ದರ್ಶನೀಯ ತೇಜಸ್ಸನ್ನು ಹೊರಹೊಮ್ಮಿಸುತ್ತದೆ. ಅವರ ಕಣ್ಣುಗಳು ಕಪ್ಪಗಿದ್ದು ಸೌಮ್ಯವಾಗಿಯೂ ಕೋಮಲವಾಗಿಯೂ ಇವೆ. ಅವರ ನೀಳವಾದ ಹಾಗೂ ಹೊಳಪಿನಿಂದ ಕೂಡಿದ ಕೂದಲು ಕೆಂಚು ಬಣ್ಣ ಹೊಂದಿದೆ. ಕೆಲವೊಮ್ಮೆ ಬಾಬಾಜಿಯವರ ಮುಖ ಲಾಹಿರಿ ಮಹಾಶಯರ ಮುಖವನ್ನು ಹೋಲುತ್ತಿತ್ತು. ಒಂದೊಂದು ಸಲ ಆ ಹೋಲಿಕೆ ಎಷ್ಟೊಂದು ಗಮನಾರ್ಹವಾಗಿರುತ್ತಿತ್ತೆಂದರೆ, ಲಾಹಿರಿ ಮಹಾಶಯರು ತಮ್ಮ ಅನಂತರದ ದಿನಗಳಲ್ಲಿ, ಯುವಕನಂತೆ ಕಾಣುತ್ತಿದ್ದ ಆ ಬಾಬಾಜಿಯವರ ತಂದೆ ಎನ್ನುವಂತಿತ್ತು.
ಸಂತರಂತಿದ್ದ ನನ್ನ ಸಂಸ್ಕೃತದ ಗುರು, ಸ್ವಾಮಿ ಕೇವಲಾನಂದರು ಹಿಮಾಲಯದಲ್ಲಿ ಬಾಬಾಜಿಯವರೊಡನೆ ಕೆಲವು ಕಾಲ ಕಳೆದರು.
ಅವರು ಬಾಬಾಜಿಯನ್ನು ಕುರಿತು ಹೀಗೆ ಹೇಳಿದರು: “ಆ ಅಸಮಾನರಾದ ಗುರು ತಮ್ಮ ಶಿಷ್ಯಪರಿವಾರದೊಡನೆ ಸ್ಥಳದಿಂದ ಸ್ಥಳಕ್ಕೆ ಪರ್ವತಗಳಲ್ಲಿ ಸಂಚರಿಸುತ್ತಿದ್ದರು. ಅವರ ಆ ಸಣ್ಣ ಪರಿವಾರದಲ್ಲಿ ಆಧ್ಯಾತ್ಮಿಕವಾಗಿ ಅತ್ಯಂತ ಮುಂದುವರಿದ ಅಮೆರಿಕದ ಇಬ್ಬರು ಶಿಷ್ಯರಿದ್ದರು. ಒಂದು ಸ್ಥಳದಲ್ಲಿ ಕೆಲವು ಕಾಲ ಇದ್ದ ಮೇಲೆ ಬಾಬಾಜಿ ‘ಡೇರಾ ದಂಡ ಉಠಾವೊ’ (‘ಡೇರೆಯನ್ನು ದಂಡವನ್ನೂ ಕೀಳಿ’) ಎನ್ನುತ್ತಿದ್ದರು. ಅವರ ಕೈಯಲ್ಲಿ ಬಿದಿರಿನ ದಂಡ ಇರುತ್ತಿತ್ತು. ತತ್‌ಕ್ಷಣವೇ ಬೇರೊಂದೆಡೆಗೆ ತಮ್ಮ ತಂಡ ಚಲಿಸಬೇಕೆಂದು ಆ ಮಾತುಗಳ ಸೂಚನೆ. ಈ ಬಗೆಯ ಆಕಾಶಗಾಮಿ ಪ್ರಯಾಣವನ್ನು ಅವರು ಸದಾ ಅನುಸರಿಸುತ್ತಿರಲಿಲ್ಲ. ಕೆಲವೊಮ್ಮೆ ಕಾಲುನಡಿಗೆಯಲ್ಲೇ ಶಿಖರದಿಂದ ಶಿಖರಕ್ಕೆ ನಡೆದುಕೊಂಡು ಹೋಗುತ್ತಿದ್ದರು.
“ಬಾಬಾಜಿ ಸ್ವಯಂ ಅಪೇಕ್ಷೆಪಟ್ಟಾಗ ಮಾತ್ರವೇ ಇತರರು ಅವರನ್ನು ಕಾಣಬಲ್ಲರು, ಇಲ್ಲವೇ ಗುರುತಿಸಬಲ್ಲರು. ಅನೇಕ ಶಿಷ್ಯರಿಗೆ ಅವರು ಸ್ವಲ್ಪ ವೈವಿಧ್ಯಮಯ ರೂಪದಿಂದ ಕೆಲವೊಮ್ಮೆ ಗಡ್ಡ ಮೀಸೆಗಳಿಂದ ಕೂಡಿ, ಕೆಲವೊಮ್ಮೆ ಅವುಗಳಿಲ್ಲದೆ ಕಾಣಿಸಿಕೊಂಡಿದ್ದರೆಂದು ಹೇಳುತ್ತಾರೆ. ನಶ್ವರವಲ್ಲದ ಅವರ ದೇಹಕ್ಕೆ ಯಾವ ಆಹಾರವೂ ಬೇಡ. ಆದ್ದರಿಂದ ಗುರುಗಳು ಆಹಾರ ಸೇವಿಸುವುದೇ ವಿರಳ. ಕಾಣಲು ಹೋದ ಶಿಷ್ಯರ ಬಗ್ಗೆ ಸೌಜನ್ಯದ ಸಲುವಾಗಿ ಕೆಲವೊಮ್ಮೆ ಅವರು ಹಣ್ಣುಗಳನ್ನೂ ಹಾಲಿನಲ್ಲಿ ಕುದಿಸಿದ ಅನ್ನ ಹಾಗೂ ತುಪ್ಪವನ್ನೂ ಸ್ವೀಕರಿಸುವುದುಂಟು.
“ಬಾಬಾಜಿಯವರ ಜೀವನದ ಎರಡು ಆಶ್ಚರ್ಯಕರ ಘಟನೆಗಳು ನನಗೆ ತಿಳಿದಿವೆ” ಎನ್ನುತ್ತಾ ಕೇವಲಾನಂದರು ಮುಂದುವರಿಸಿದರು. “ಒಂದು ರಾತ್ರಿ ಒಂದು ಪವಿತ್ರ ಯಜ್ಞದ ಸಲುವಾಗಿ ಧಗಧಗಿಸುತ್ತಿದ್ದ ದೊಡ್ಡ ಅಗ್ನಿಕುಂಡದ ಸುತ್ತ ಅವರ ಶಿಷ್ಯರು ಕುಳಿತಿದ್ದರು. ಗುರುಗಳು ಇದ್ದಕ್ಕಿದ್ದಂತೆ ಉರಿಯುತ್ತಿದ್ದ ಕೊಳ್ಳಿಯೊಂದನ್ನು ತೆಗೆದುಕೊಂಡು ಬೆಂಕಿಗೆ ಅತಿ ಸಮೀಪದಲ್ಲಿದ್ದ ಒಬ್ಬ ಶಿಷ್ಯನ ತೆರೆದ ಭುಜದ ಮೇಲೆ ಮೆಲ್ಲನೆ ಬಡಿದರು.
“ಆಗ ಅಲ್ಲೇ ಇದ್ದ ಲಾಹಿರಿ ಮಹಾಶಯರು ‘ಗುರುಗಳೇ ಏನಿದೀ ಕ್ರೌರ್ಯ!’ ಎಂದು ಪ್ರತಿಭಟಿಸಿದರು.
“‘ಆತ ಪೂರ್ವಾರ್ಜಿತ ಕರ್ಮಫಲದಂತೆ ನಿಮ್ಮ ಕಣ್ಮುಂದೆಯೇ ಬೆಂಕಿಯಲ್ಲಿ ಸುಟ್ಟು ಭಸ್ಮವಾಗುತ್ತಿದ್ದುದನ್ನು ನೋಡಬೇಕೆಂದಿದ್ದಿರೇನು?’
“ಈ ಮಾತುಗಳನ್ನಾಡಿದ ಬಾಬಾಜಿಯವರು ಆ ಶಿಷ್ಯನ ಸುಟ್ಟು ವಿಕಾರಗೊಂಡಿದ್ದ ಭುಜದ ಮೇಲೆ ತಮ್ಮ ಶಮನಕಾರಕ ಹಸ್ತವನ್ನು ಇಟ್ಟರು. ಅನಂತರ ಅವನಿಗೆ, ‘ಈ ರಾತ್ರಿ ಯಾತನೆಯಿಂದ ಕೂಡಿದ ಸಾವನ್ನು ನಿನಗೆ ತಪ್ಪಿಸಿದ್ದೇನೆ. ಬೆಂಕಿಯಿಂದಾದ ಈ ಸ್ವಲ್ಪ ನೋವಿನಿಂದಲೇ ನಿನ್ನ ಕರ್ಮದ ಪರಿಣಾಮ ನೀಗಿತು’ ಎಂದರು.
“ಮತ್ತೊಂದು ಸಂದರ್ಭದಲ್ಲಿ ಒಬ್ಬ ಅಪರಿಚಿತನ ಆಗಮನದಿಂದ ಬಾಬಾಜಿಯ ಪಾವನ ಕೂಟಕ್ಕೆ ಶಾಂತಿಭಂಗವಾಯಿತು. ಆ ಅಪರಿಚಿತ ಅತ್ಯಾಶ್ಚರ್ಯಕರ ಚತುರತೆಯಿಂದ ಗುರುಗಳ ಬಿಡಾರದ ಸಮೀಪದ ದುರ್ಗಮವಾಗಿದ್ದ ಬೆಟ್ಟದ ಬದಿಯ ಚಾಚುಬಂಡೆಯನ್ನು ಏರಿ ಬಂದಿದ್ದ.
“ಗುರುಗಳನ್ನು ಕಂಡೊಡನೆ ಅವನ ಮುಖ ಅನಿರ್ವಚನೀಯ ಭಕ್ತಿಭಾವದಿಂದ ಕಳೆಯೇರಿತು. ಸ್ವಾಮಿ ತಾವೇ ಆ ಮಹಾತ್ಮ ಬಾಬಾಜಿ ಇರಬೇಕು. ಈ ದುರ್ಗಮವಾದ ಬಂಡೆಗಳ ನಡುವೆ ತಮಗಾಗಿ ತಿಂಗಳುಗಟ್ಟಲೆ ಅವಿರತವಾಗಿ ಹುಡುಕಾಡಿದೆ. ಬೇಡಿಕೊಳ್ಳುತ್ತೇನೆ, ನನ್ನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿರಿ’ ಎಂದ.
“ಗುರುಗಳು ಏನೊಂದು ಪ್ರತಿಕ್ರಿಯೆ ತೋರಿಸದಿರಲು ಆತ ಆ ಚಾಚುಬಂಡೆಯ ಕೆಳಗೆ ಸಾಲುಗಟ್ಟಿರುವ ಬಂಡೆಗಳ ಪ್ರಪಾತವನ್ನು ತೋರಿಸಿ ‘ನೀವು ನನ್ನನ್ನು ನಿರಾಕರಿಸಿದರೆ ಈ ಪರ್ವತದಿಂದ ಧುಮುಕಿಬಿಡುತ್ತೇನೆ. ದೈವ ಸಾಕ್ಷಾತ್ಕಾರ ಪಡೆಯಲು ನಿಮ್ಮ ಮಾರ್ಗದರ್ಶನ ದೊರೆಯದ ಮೇಲೆ ಈ ಬಾಳಿಗೆ ಬೇರೇನೂ ಬೆಲೆಯಿಲ್ಲ’ ಎಂದ.
“ಗುರುಗಳು ಯಾವೊಂದು ಉದ್ರೇಕವೂ ಇಲ್ಲದೆ ‘ಹಾರು ಮತ್ತೆ. ನಿನ್ನ ವಿಕಾಸದ ಸದ್ಯದ ಸ್ಥಿತಿಯಲ್ಲಿ ನಿನ್ನನ್ನು ನಾನು ಸ್ವೀಕರಿಸಲಾರೆ’ ಎಂದರು.
“ಆ ಮನುಷ್ಯ ಆ ಕ್ಷಣವೇ ಶಿಖರದಿಂದ ಪ್ರಪಾತಕ್ಕೆ ನೆಗೆದೇ ಬಿಟ್ಟ. ಸ್ತಂಭೀಭೂತರಾಗಿದ್ದ ಶಿಷ್ಯರಿಗೆ ಬಾಬಾಜಿಯವರು ಆ ಅಪರಿಚಿತನ ದೇಹವನ್ನು ತರಲು ನಿರ್ದೇಶಿಸಿದರು. ಅವನ ಆ ಜರ್ಜರಿತ ಕಳೇಬರವನ್ನು ಶಿಷ್ಯರು ತಂದರು. ಗುರುಗಳು ಮೃತ ಕಳೇಬರದ ಮೇಲೆ ಕೈಯಿಟ್ಟರು. ಅಗೋ! ಅವನು ಕಣ್ಣು ತೆರೆದ. ಆ ಸರ್ವಶಕ್ತ ಗುರುವಿನೆದುರು ನಮ್ರನಾಗಿ ಅಡ್ಡಬಿದ್ದ.
“ಮತ್ತೆ ಜೀವತಳೆದ ಆ ಚೇಲಾನ ಮೇಲೆ ದಯಾಪೂರ್ಣ ದೃಷ್ಟಿಯನ್ನು ಬೀರಿ ಬಾಬಾಜಿ ‘ನೀನೀಗ ಶಿಷ್ಯತ್ವಕ್ಕೆ ಅರ್ಹನಾಗಿದ್ದೀಯೆ. ಕಷ್ಟಕರವಾದ ಪರೀಕ್ಷೆಯನ್ನು ನೀನು ಧೈರ್ಯವಾಗಿ ಎದುರಿಸಿ ಉತ್ತೀರ್ಣನಾದೆ. ಇನ್ನೆಂದಿಗೂ ಸಾವು ನಿನ್ನನ್ನು ಸ್ಪರ್ಶಿಸದು; ಈಗ ನೀನು ಈ ನಮ್ಮ ಅಮರ್ತ್ಯ ತಂಡದಲ್ಲಿ ಒಬ್ಬನಾಗಿರುವೆ’ ಎಂದರು. ಆಮೇಲೆ ಎಂದಿನಂತೆ ‘ಡೇರಾ ದಂಡ ಉಠಾವೋ’ ಎಂದು ನಿರ್ಗಮಿಸಲು ಬಳಸುವ ಮಾತುಗಳನ್ನುಚ್ಚರಿಸಿದರು. ಇಡೀ ತಂಡ ಆ ಪರ್ವತದಿಂದ ಅದೃಶ್ಯವಾಯಿತು.”
ಅವತಾರ ಪುರುಷನು ಸರ್ವವ್ಯಾಪಿಯಾದ ಪರಮಾತ್ಮನಲ್ಲೇ ಇರುತ್ತಾನೆ. ಅಂಥವರಿಗೆ ದೇಶ ಕಾಲಗಳ ಯಾವ ದೂರಭಾವವೂ ಇರುವುದಿಲ್ಲ. ಶತಮಾನದಿಂದ ಶತಮಾನಕ್ಕೆ ಬಾಬಾಜಿಯವರು ತಮ್ಮ ಭೌತದೇಹವನ್ನು ಉಳಿಸಿಕೊಂಡು ಬರುವ ಏಕೈಕ ಉದ್ದೇಶವೆಂದರೆ ಮಾನವನ ಸಾಧ್ಯತೆಗಳೇನೆಂಬುದನ್ನು ಮಾನವರಿಗೆ ವಾಸ್ತವವಾಗಿ ನಿದರ್ಶನದ ಮೂಲಕ ತೋರಿಸಿಕೊಡುವುದಕ್ಕಷ್ಟೆ. ಮಾಂಸಲವಾದ ಈ ದೇಹದಲ್ಲಿ ದೇವತ್ವದ ನಸುನೋಟವನ್ನು ದಯಪಾಲಿಸದೆಯೇ ಇದ್ದಿದ್ದರೆ ಮನುಷ್ಯ ತಾನು ನಶ್ವರತ್ವವನ್ನು ಮೀರಲಾರೆ ಎಂಬ ಭಾವನೆಗೊಳಗಾಗಿ ಪ್ರಬಲ ಮಾಯಾಭ್ರಮೆಯ ದಮನಕ್ಕೊಳಗಾಗಿರುತ್ತಿದ್ದ.
ಯೇಸುವಿಗೆ ಮೊದಲಿನಿಂದಲೂ ತನ್ನ ಬಾಳು ಹೇಗೆ ಸಾಗುತ್ತದೆಂಬುದು ತಿಳಿದಿತ್ತು. ಬಾಳಿನ ಪ್ರತಿ ಘಟನೆಯನ್ನೂ ಅವನು ಹಾಗೇ ಅನುಭವಿಸಿದುದು ತನಗಾಗಿ ಅಲ್ಲ ಅಥವಾ ಯಾವ ಕರ್ಮದ ಬಂಧನಕ್ಕೆ ಒಳಗಾಗಿಯೂ ಅಲ್ಲ, ಆದರೆ ಅನುಕರಿಸಿ ಬಾಳುವ ಮಾನವರ ಉದ್ಧಾರಕ್ಕಾಗಿ ಮಾತ್ರವೇ. ಮ್ಯಾಥ್ಯೂ, ಮಾರ್ಕ್, ಲ್ಯೂಕ್ ಹಾಗೂ ಜಾನ್ – ಈ ನಾಲ್ವರು ಸುವಾರ್ತಾಕಾರರು ವರ್ಣನಾತೀತವಾದ ನಾಟಕವನ್ನು ಅನಂತರದ ತಲೆಮಾರಿನವರ ಪ್ರಯೋಜನಕ್ಕಾಗಿ ಬರೆದಿಟ್ಟರು.
ಬಾಬಾಜಿಯವರಿಗೂ ಸಹ ಭೂತ ಭವಿಷ್ಯದ್ವರ್ತಮಾನಗಳ ಸಾಪೇಕ್ಷತೆಯೇನೂ ಇರಲಿಲ್ಲ. ಆದಿಯಿಂದಲೂ ತಮ್ಮ ಬಾಳಿನ ಎಲ್ಲ ಹಂತಗಳ ಅರಿವೂ ಅವರಿಗಿತ್ತು. ಮಾನವರ ಮಿತವಾದ ತಿಳಿವಳಿಕೆಗೆ ತಮ್ಮನ್ನು ಅಳವಡಿಸಿಕೊಂಡು ಒಬ್ಬರೋ ಅಥವಾ ಹಲವು ಮಂದಿ ಪ್ರೇಕ್ಷಕರೆದುರು ತಮ್ಮ ದೈವೀಜೀವನದ ಹಲವು ದೃಶ್ಯಗಳನ್ನು ಆಡಿ ತೋರಿಸಿದ್ದಾರೆ. ಹಾಗಾಗಿಯೇ ದೇಹದ ಅಮರತ್ವ ಸಾಧ್ಯವೆಂದು ಘೋಷಿಸಲು ಅದು ಪಕ್ವಕಾಲವೆಂದು ಬಾಬಾಜಿ ಭಾವಿಸಿದಾಗ ಲಾಹಿರಿ ಮಹಾಶಯರ ಶಿಷ್ಯರೊಬ್ಬರು ಅವರೊಂದಿಗಿದ್ದರು. ಅವರು ರಾಮಗೋಪಾಲ ಮಜುಮ್‌ದಾರ್‌ರ ಮುಂದೆ ಈ ಭರವಸೆಯನ್ನು ಕೊಟ್ಟರು. ಅದರ ಫಲವಾಗಿ ಆಧ್ಯಾತ್ಮಾನ್ವೇಷಣೆಯಲ್ಲಿ ತೊಡಗಿರುವ ಇತರರಿಗೂ ಅದು ತಿಳಿದು ಪ್ರೇರಣೆಯುಂಟಾಗಲಿ ಎಂಬುದು ಅವರ ಬಯಕೆಯಾಗಿತ್ತು. ಮಹಾನುಭಾವರು ಸಾಮಾನ್ಯರಂತೆಯೇ ಮಾತನಾಡುವುದಾಗಲಿ ಸಾಮಾನ್ಯವೇ ಎಂಬಂತೆ ಕಾಣುವ ಘಟನೆಗಳಲ್ಲಿ ಭಾಗವಹಿಸುವುದಾಗಲಿ, ಪ್ರಧಾನತಃ ಮಾನವನ ಒಳಿತಿಗಾಗಿಯೇ. ಕ್ರಿಸ್ತನೂ ಹಾಗೆಯೇ ಹೇಳಿದ್ದಾನೆ – “ತಂದೆಯೇ …. ನನ್ನ ಮಾತುಗಳನ್ನು ನೀನು ಯಾವಾಗಲೂ ಆಲಿಸುವೆಯೆಂದು ನನಗೆ ಗೊತ್ತಿತ್ತು, ಆದರೆ ಬಳಿಯಲ್ಲಿ ನಿಂತಿರುವ ಜನಗಳಿಗಾಗಿ ನಾನು ಹೇಳಿದುದು, ಅದರಿಂದ ನೀನು ನನ್ನನ್ನು ಕಳಿಸಿಕೊಟ್ಟಿರುವೆಯೆಂದು ಅವರಿಗೆ ನಂಬಿಕೆಯುಂಟಾಗಬಹುದೆಂದು.”
ರಣಬಜಪುರದಲ್ಲಿ ನಾನು “ನಿದ್ರಿಸದ ಸಂತ” ಎಂದು ಪ್ರಸಿದ್ಧರಾದ ರಾಮಗೋಪಾಲರನ್ನು ಭೇಟಿಯಾದಾಗ ತಾವು ಬಾಬಾಜಿಯನ್ನು ಮೊದಲ ಬಾರಿ ಭೇಟಿಯಾದಾಗಿನ ಆಶ್ಚರ್ಯಕರ ಘಟನೆಯನ್ನು ನನಗೆ ಹೇಳಿದರು.
“ಕೆಲವೊಮ್ಮೆ ನಾನು ನನ್ನ ಏಕಾಂತ ಗುಹಾವಾಸವನ್ನು ತ್ಯಜಿಸಿ ವಾರಾಣಸಿಯಲ್ಲಿದ್ದ ಲಾಹಿರಿ ಮಹಾಶಯರ ಪದತಲದಲ್ಲಿ ಕುಳಿತಿರಲು ಹೋಗುತ್ತಿದ್ದೆ. ಒಂದು ನಡುರಾತ್ರಿ ಅವರ ಶಿಷ್ಯವೃಂದದ ನಡುವೆ ನಾನು ಮೌನವಾಗಿ ಧ್ಯಾನಮಗ್ನನಾಗಿರಲು ಗುರುಗಳು ಆಶ್ಚರ್ಯಕರ ಅಪೇಕ್ಷೆಯನ್ನು ವ್ಯಕ್ತಪಡಿಸಿದರು” ಎಂದು ರಾಮಗೋಪಾಲ್ ನನಗೆ ಹೇಳಿದರು.
“‘ರಾಮಗೋಪಾಲ, ಈ ಕ್ಷಣವೇ ದಶಾಶ್ವಮೇಧ ಸ್ನಾನಘಟ್ಟಕ್ಕೆ ನಡೆ’ ಎಂದರು.
“ಆ ಕ್ಷಣವೇ ನಾನು ಆ ನಿರ್ಜನವಾದ ಸ್ಥಳಕ್ಕೆ ಹೋದೆ. ಮಿನುಗುವ ತಾರೆಗಳು ಹಾಗೂ ಬೆಳದಿಂಗಳಿನಿಂದ ರಾತ್ರಿ ಪ್ರಕಾಶಮಾನವಾಗಿತ್ತು. ತಾಳ್ಮೆಯಿಂದ ಮೌನವಾಗಿ ನಾನಲ್ಲಿ ಕುಳಿತು ಸ್ವಲ್ಪ ಹೊತ್ತಾದ ಮೇಲೆ ನನ್ನ ಕಾಲ ಬಳಿಯಿದ್ದ ಭಾರಿಯಾದ ಕಲ್ಲುಚಪ್ಪಡಿಯೊಂದರ ಕಡೆಗೆ ನನ್ನ ಗಮನ ಹೋಯಿತು. ಆ ಚಪ್ಪಡಿ ನಿಧಾನವಾಗಿ ಮೇಲೆದ್ದು ಭೂಗತವಾಗಿದ್ದ ಗುಹೆಯೊಂದರ ದರ್ಶನ ಮಾಡಿಸಿತು. ಮೇಲೆದ್ದ ಚಪ್ಪಡಿ ಅವ್ಯಕ್ತಶಕ್ತಿಯಿಂದ ಹಿಡಿಯಲ್ಪಟ್ಟು ಚಲಿಸದೆ ನಿಂತ ಮೇಲೆ ಯೌವನಸ್ಥಳಾದ ಹಾಗೂ ಅಸಾಧಾರಣವಾಗಿ ಸೌಂದರ್ಯವತಿಯಾದ ಹೆಂಗಸಿನ ಸಾಲಂಕೃತ ರೂಪ ಗುಹೆಯೊಳಗಿನಿಂದ ಮೇಲೇರಿ ಗಾಳಿಯಲ್ಲಿ ತೇಲಿಬಂದಿತು. ಸೌಮ್ಯ ಬೆಳಕಿನ ಪರಿವೇಷದಿಂದ ಕೂಡಿದ ಆಕೆ ಸಾವಧಾನವಾಗಿ ನನ್ನ ಮುಂಭಾಗದಲ್ಲಿಳಿದು ಆನಂದ ಪರವಶತೆಯಿಂದ ಅಚಲವಾಗಿ ನಿಂತಳು. ಮತ್ತೆ ಚಲಿಸಿ ಮಾತನಾಡತೊಡಗಿದಳು.
“‘ನಾನು ಮಾತಾಜಿ, ಬಾಬಾಜಿಯ ಸೋದರಿ. ನಾನು ಅವರನ್ನೂ ಲಾಹಿರಿ ಮಹಾಶಯರನ್ನೂ ಬಹಳ ಮಹತ್ವದ ಸಂಗತಿಯೊಂದನ್ನು ಚರ್ಚಿಸಲೆಂದು ಈ ರಾತ್ರಿ ನನ್ನ ಗುಹೆಗೆ ಬರುವಂತೆ ಆಹ್ವಾನಿಸಿದ್ದೇನೆ.’
“ಆಗ ಗಂಗಾನದಿಯ ಮೇಲೆ ಜ್ಯೋತಿಃ ಪಟಲದಂತಹ ಬೆಳಕು ವೇಗವಾಗಿ ತೇಲಿ ಬರುತ್ತಿತ್ತು. ಆ ಅದ್ಭುತವಾದ ಪ್ರಭೆ ನದಿಯ ನಿಷ್ಪಾರದರ್ಶಕ ನೀರಿನಲ್ಲಿ ಪ್ರತಿಫಲಿಸಿತು. ಅದು ಹತ್ತಿರ ಹತ್ತಿರ ಬಂದು ಕಣ್ಣು ಕೋರೈಸುವ ತೇಜಸ್ಸನ್ನು ತಳೆದು ಮಾತಾಜಿಯ ಪಕ್ಕದಲ್ಲಿ ನಿಂತಿತು. ಮತ್ತೆ ಆ ಬೆಳಕು ಘನೀಭೂತವಾಗಿ ಮನುಷ್ಯನ ಆಕೃತಿಯನ್ನು ತಳೆಯಿತು. ಅವರೇ ಲಾಹಿರಿ ಮಹಾಶಯ! ಅವರು ಆ ಸಂತಳ ಪಾದಗಳಿಗೆ ನಮ್ರತೆಯಿಂದ ನಮಿಸಿದರು.
“ನನಗುಂಟಾದ ದಿಗ್ಭ್ರಮೆಯಿಂದ ಎಚ್ಚೆತ್ತುಕೊಳ್ಳುವಷ್ಟರಲ್ಲಿ ಆಕಾಶದಲ್ಲಿ ಸುತ್ತಿಕೊಂಡು ಬರುತ್ತಿದ್ದ ಮತ್ತೊಂದು ಅಲೌಕಿಕ ತೇಜಸ್ಸಿನ ಗೋಳವನ್ನು ನೋಡಿ ಮತ್ತೂ ಆಶ್ಚರ್ಯವಾಯಿತು. ಆ ಜ್ವಲಿಸುತ್ತಿದ್ದ ಬೆಳಕಿನ ಸುಳಿ ವೇಗವಾಗಿ ನಮ್ಮ ಬಳಿಗೆ ಇಳಿದು ಬಂದು ಸ್ವಯಂ ಸುಂದರ ಯುವಕನ ದೇಹದ ಆಕೃತಿಯನ್ನು ತಳೆಯಿತು. ಅವರೇ ಬಾಬಾಜಿ ಎಂದು ಕೂಡಲೇ ನನಗರಿವಾಯಿತು. ಆತ ಲಾಹಿರಿ ಮಹಾಶಯರಂತೆಯೇ ಕಂಡರು. ಇಬ್ಬರಿಗೂ ಇದ್ದ ವ್ಯತ್ಯಾಸವೆಂದರೆ ಬಾಬಾಜಿ ಎಷ್ಟೋ ಚಿಕ್ಕವರಾಗಿ ಕಾಣುತ್ತಿದ್ದರು. ಅವರಿಗೆ ನೀಳವಾದ ಹೊಳೆಯುವ ಕೂದಲುಗಳಿದ್ದುವು.
“ಲಾಹಿರಿ ಮಹಾಶಯರೂ ಮಾತಾಜಿಯೂ ನಾನೂ ಆ ಮಹಾಗುರುಗಳ ಪಾದಗಳಿಗೆ ಎರಗಿದೆವು. ಅವರ ಪವಿತ್ರ ದೇಹವನ್ನು ಸ್ಪರ್ಶಿಸುತ್ತಲೇ ಸ್ವರ್ಗಾನಂದದ ದಿವ್ಯಪ್ರಭೆಯ ಅಲೌಕಿಕ ಸಂವೇದನೆಯೊಂದು ನನ್ನ ಅಸ್ತಿತ್ವದ ಪ್ರತಿ ಎಳೆಯನ್ನು ಪುಳಕಿತಗೊಳಿಸಿತು.
“‘ಧನ್ಯ ಸೋದರಿ, ನಾನು ನನ್ನ ದೇಹವನ್ನು ತ್ಯಜಿಸಿ ಅನಂತಪ್ರವಾಹದಲ್ಲಿ ಮುಳುಗಬೇಕೆಂದಿದ್ದೇನೆ’ ಎಂದರು ಬಾಬಾಜಿ.
“‘ಪ್ರಿಯ ಗುರು, ನಿನ್ನ ಯೋಜನೆಯನ್ನು ನಾನಾಗಲೇ ಕಂಡುಕೊಂಡೆ. ಅದನ್ನು ಕುರಿತು ಚರ್ಚಿಸಲೆಂದೇ ಈ ರಾತ್ರಿ ನಾನು ಬಯಸಿದ್ದು. ನೀನು ದೇಹವನ್ನೇಕೆ ತ್ಯಜಿಸಬೇಕು?’ ಎನ್ನುತ್ತಾ ಆ ಮಹಾಮಾತೆ ಪ್ರಾರ್ಥನಾ ದೃಷ್ಟಿಯಿಂದ ಬಾಬಾಜಿಯತ್ತ ನೋಡಿದರು.
“‘ನನ್ನ ಆತ್ಮವೆಂಬ ಸಾಗರದ ಮೇಲೆ ದೃಶ್ಯವಾದ ಅಲೆಯನ್ನು ಧರಿಸಿದರೇನು, ಅದೃಶ್ಯವಾದ ಅಲೆಯನ್ನು ಧರಿಸಿದರೇನು? ಅದರಲ್ಲಿ ವ್ಯತ್ಯಾಸವೇನು?’
“ಅದಕ್ಕೆ ಹಳೆಯ ಕಾಲದ ಚತುರೋಕ್ತಿಯಿಂದ ಮಾತಾಜಿ ಉತ್ತರಿಸಿದರು – ‘ಸಾವರಿಯದ ಗುರುವೆ, ವ್ಯತ್ಯಾಸವಿಲ್ಲದಿದ್ದ ಮೇಲೆ ದಯವಿಟ್ಟು ನಿನ್ನ ದೇಹವನ್ನು ಎಂದಿಗೂ ತ್ಯಜಿಸಬೇಡ.’
“ಅದಕ್ಕೆ ಬಾಬಾಜಿ ಗಂಭೀರವಾಗಿ ‘ಹಾಗೇ ಆಗಲಿ, ನನ್ನ ಈ ಭೌತದೇಹವನ್ನು ನಾನೆಂದಿಗೂ ತ್ಯಜಿಸುವುದಿಲ್ಲ. ಭೂಮಿಯ ಮೇಲಿನ ಕೆಲವು ಮಂದಿಗಾದರೂ ನನ್ನ ದೇಹ ಯಾವಾಗಲೂ ಕಾಣುತ್ತಿರುತ್ತದೆ. ಪರಮಾತ್ಮನು ನಿನ್ನ ತುಟಿಗಳಿಂದಲೇ ತನ್ನ ಅಪೇಕ್ಷೆಯನ್ನು ಅಡಿಸಿದ್ದಾನೆ’ ಎಂದರು.
“ಈ ಮಹೋನ್ನತ ವ್ಯಕ್ತಿಗಳ ನಡುವೆ ನಡೆದ ಸಂಭಾಷಣೆಯನ್ನು ಭಯಭಕ್ತಿಯಿಂದ ಆಲಿಸುತ್ತಿರಲು, ಆ ಮಹಾನ್ ಗುರು ನನ್ನತ್ತ ದಯಾಮಯ ದೃಷ್ಟಿಯನ್ನು ಬೀರಿ:
“‘ಹೆದರಬೇಡ ರಾಮಗೋಪಾಲ, ಈ ಅಮರವಾದ ಭಾಷೆಯನ್ನಿತ್ತ ದೃಶ್ಯಕ್ಕೆ ಸಾಕ್ಷಿಯಾಗುವ ಭಾಗ್ಯ ನಿನ್ನದಾಗಿದೆ’ ಎಂದರು.
“ಬಾಬಾಜಿಯವರ ಮೃದುಮಧುರವಾದ ಧ್ವನಿ ಕ್ಷೀಣವಾದೊಡನೆ ಅವರ ಅಕೃತಿಯೂ ಲಾಹಿರಿ ಮಹಾಶಯರ ಆಕೃತಿಯೂ ಸಾವಧಾನವಾಗಿ ಮೇಲೇರಿ ಗಂಗಾನದಿಯ ಮೇಲಿನಿಂದ ಹಿಂದೆ ಸರಿದವು. ಅವರು ರಾತ್ರಿಯ ಆ ಆಕಾಶದೊಳಕ್ಕೆ ಸೇರಿಹೋದಂತೆ ಕಣ್ಣು ಕೋರೈಸುವ ದಿವ್ಯಪ್ರಭೆಯ ಪರಿವೇಷ ಅವರ ದೇಹವನ್ನು ಬಳಸಿತ್ತು. ಮಾತಾಜಿಯ ಆಕೃತಿಯೂ ಗುಹೆಯೊಳಕ್ಕೆ ತೇಲಿಕೊಂಡು ಹೋಗಿ ತಳಕ್ಕಿಳಿಯಿತು. ಕಲ್ಲುಚಪ್ಪಡಿ ಅದೃಶ್ಯ ಕೈಗಳಿಂದ ತಳ್ಳಲ್ಪಡುತ್ತಿದೆಯೋ ಎಂಬಂತೆ ಕೆಳಕ್ಕೆ ಸರಿದು ಗುಹೆಯನ್ನು ಮುಚ್ಚಿತು.
“ಅಮಿತವಾಗಿ ಸ್ಫೂರ್ತಿಗೊಂಡ ನಾನು ಲಾಹಿರಿ ಮಹಾಶಯರ ಜಾಗಕ್ಕೆ ಹಿಂದಿರುಗಿದೆ. ಆ ವೇಳೆಗೋ ಉಷಃಕಾಲ, ನಾನವರಿಗೆ ವಂದಿಸಿದಾಗ ಗುರುಗಳು ನನ್ನನ್ನು ನೋಡಿ ಅರ್ಥಪೂರ್ಣವಾದ ನಗೆಯನ್ನು ಬೀರಿದರು.
“ಅನಂತರ ‘ನಿನ್ನ ಬಗ್ಗೆ ಸಂತೋಷವಾಯಿತು ರಾಮಗೋಪಾಲ್, ಬಾಬಾಜಿಯನ್ನೂ ಮಾತಾಜಿಯನ್ನೂ ಭೇಟಿಮಾಡಬೇಕೆಂದು ನನ್ನಲ್ಲಿ ಆಗಾಗ್ಗೆ ತೋಡಿಕೊಳ್ಳುತ್ತಿದ್ದ ನಿನ್ನ ಬಯಕೆ ಕಡೆಗೂ ಆಶ್ಚರ್ಯಕರ ರೀತಿಯಲ್ಲಿ ಪೂರೈಸಿತು’ ಎಂದರು.
“ನಡುರಾತ್ರಿಯಲ್ಲಿ ನಾನು ಹೊರಟಾಗಿನಿಂದಲೂ ಲಾಹಿರಿ ಮಹಾಶಯರು ತಮ್ಮ ವೇದಿಕೆಯನ್ನು ಬಿಟ್ಟು ಕದಲಲಿಲ್ಲವೆಂದು ನನ್ನ ಶಿಷ್ಯಮಿತ್ರರು ಹೇಳಿದರು.
“ಅವರಲ್ಲಿ ಒಬ್ಬಾತ ‘ನೀನು ದಶಾಶ್ವಮೇಧ ಘಾಟಿಗೆ ಹೋದ ಮೇಲೆ ಗುರುಗಳು ಅಮರತ್ವವನ್ನು ಕುರಿತು ಭವ್ಯವಾದ ಉಪನ್ಯಾಸವನ್ನು ಮಾಡಿದರು’ ಎಂದು ಹೇಳಿದ. ಆತ್ಮಸಾಕ್ಷಾತ್ಕಾರವನ್ನು ಪಡೆದ ಮನುಷ್ಯ ಒಂದೇ ಕಾಲದಲ್ಲಿ ಎರಡು ಅಥವಾ ಅನೇಕ ದೇಹಗಳನ್ನು ಧರಿಸಿ ಬೇರೆ ಬೇರೆ ಸ್ಥಾನಗಳಲ್ಲಿ ಕಾಣಿಸಿಕೊಳ್ಳಬಲ್ಲ ಎಂಬ ದಾರ್ಶನಿಕ ಸತ್ಯವನ್ನು ಮೊತ್ತ ಮೊದಲ ಬಾರಿಗೆ ನಾನು ಚೆನ್ನಾಗಿ ಅರಿತುಕೊಂಡೆ.
“ಲಾಹಿರಿ ಮಹಾಶಯರು ಆಮೇಲೆ ನನಗೆ ಈ ಲೋಕಕ್ಕಾಗಿ ಭಗವಂತನ ರಹಸ್ಯ ಯೋಜನೆಯೇನೆಂಬುದನ್ನು ಕುರಿತು ಅನೇಕ ಆಧ್ಯಾತ್ಮಿಕ ವಿಷಯಗಳನ್ನು ವಿವರಿಸಿದರು. ಈ ವಿಶಿಷ್ಟ ಜಗತ್-ಚಕ್ರದ ಕಾಲಾವಧಿಯವರೆಗೂ ದೇಹಧಾರಿಯಾಗಿ ಉಳಿದಿರಬೇಕೆಂದು ಬಾಬಾಜಿಯನ್ನು ಭಗವಂತನೇ ಆಯ್ಕೆ ಮಾಡಿಕೊಂಡಿದ್ದಾನೆ. ಯುಗಗಳು ಬರುತ್ತವೆ ಹೋಗುತ್ತವೆ – ಆದರೂ ಸಾವರಿಯದ ಆ ಮಹಾತ್ಮ ಶತಮಾನಗಳ ನಾಟಕವನ್ನೆಲ್ಲಾ ನೋಡುತ್ತಾ ಈ ಭೂಮಂಡಲದ ರಂಗಭೂಮಿಯ ಮೇಲೆ ನೆಲಸಿಯೇ ಇರುತ್ತಾನೆ.” ಹೀಗೆ ಮಾತನ್ನು ಕೊನೆಗೊಳಿಸಿದರು ರಾಮಗೋಪಾಲರು.

ಬಾಬಾಜಿ
ಒಬ್ಬ ಮಹಾವತಾರ, ಲಾಹಿರಿ ಮಹಾಶಯರ ಗುರುಗಳು
ಯೋಗಾನಂದಜಿ ಒಬ್ಬ ಕಲಾವಿದನಿಗೆ ಆಧುನಿಕ ಭಾರತದ ಮಹಾನ್ ಯೋಗಿ-ಕ್ರಿಸ್ತರ ಯಥಾಪ್ರತಿಯ ಚಿತ್ರವನ್ನು ಬಿಡಿಸಲು ಸಹಾಯ ಮಾಡಿದರು.
ಮಹಾವತಾರ ಬಾಬಾಜಿಯವರು ತಮ್ಮ ಜನ್ಮಸ್ಥಳ ಮತ್ತು ಜನ್ಮ ದಿನಾಂಕದ ಬಗ್ಗೆ ಯಾವುದೇ ಸೀಮಿತ ಸಂಗತಿಗಳನ್ನು ತಮ್ಮ ಶಿಷ್ಯರಿಗೆ ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಅವರು ಅನೇಕ ಶತಮಾನಗಳಿಂದ ಹಿಮಾಲಯದ ಹಿಮಗಡ್ಡೆಗಳ ನಡುವೆ ವಾಸಿಸುತ್ತಿದ್ದಾರೆ.
“ಬಾಬಾಜಿಯ ಹೆಸರನ್ನು ಯಾರು ಭಕ್ತಿಯಿಂದ ಯಾವಾಗ ಉಚ್ಚರಿಸಿದರೂ ಅಂತಹ ಭಕ್ತರು ತತ್‌ಕ್ಷಣದಲ್ಲೇ ಅವರ ಆಧ್ಯಾತ್ಮಿಕ ಕೃಪೆಗೆ ಪಾತ್ರರಾಗುತ್ತಾರೆ,” ಎಂದು ಲಾಹಿರಿ ಮಹಾಶಯರು ಹೇಳಿದ್ದಾರೆ.