ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾದ ಶಬ್ದಾರ್ಥ ಸಂಗ್ರಹ (ಮ, ಯ)

ಮಂತ್ರ ಯೋಗ. ಆಧ್ಯಾತ್ಮಿಕವಾಗಿ ಲಾಭದಾಯಕವಾದ ಸ್ಪಂದನೀಯ ಸಾಮರ್ಥ್ಯವನ್ನು ಹೊಂದಿರುವ ಮೂಲ-ಪದ ಶಬ್ದಗಳ ಭಕ್ತಿಪೂರ್ವಕ ಏಕ್ರಾಗತೆಯಿಂದ ಕೂಡಿದ ಪುನರುಕ್ತಿಯ ಮೂಲಕ ಭಗವಂತನೊಂದಿಗೆ ಹೊಂದುವ ಸಂಸರ್ಗ. ಯೋಗ ನೋಡಿ.

ಮನುಷ್ಯ. ಈ ಪದವು ಸಂಸ್ಕೃತದ ಮಾನಸ, ಅಂದರೆ ಮನಸ್ಸು ಎಂಬ ಪದದ ಮೂಲದಿಂದ ಬಂದಿದೆ, – ಅಂದರೆ ಮಾನವನಿಗೆ ತಾರ್ಕಿಕ ಚಿಂತನೆಗಾಗಿರುವ ವಿಶಿಷ್ಟ ಸಾಮರ್ಥ್ಯ. ಯೋಗ ವಿಜ್ಞಾನವು ಮಾನವ ಪ್ರಜ್ಞೆಯನ್ನು ಮೂಲಭೂತವಾಗಿ ಉಭಯಲಿಂಗಿ ಆತ್ಮ ಎಂಬ ದೃಷ್ಟಿಕೋನದಿಂದ ವ್ಯವಹರಿಸುತ್ತದೆ. ಇಂಗ್ಲಿಷ್‌ನಲ್ಲಿ ಈ ಮಾನಸಿಕ ಮತ್ತು ಆಧ್ಯಾತ್ಮಿಕ ಸತ್ಯಗಳನ್ನು ಅತಿಯಾದ ಸಾಹಿತ್ಯಿಕ ಎಡವಟ್ಟುಗಳಿಲ್ಲದೆ ತಿಳಿಸುವ ಯಾವುದೇ ಇತರ ಪರಿಭಾಷೆ ಇಲ್ಲದಿರುವುದರಿಂದ, ಮನುಷ್ಯ ಮತ್ತು ಸಂಬಂಧಿತ ಪದಗಳ ಬಳಕೆಯನ್ನು ಈ ಪ್ರಕಟಣೆಯಲ್ಲಿ ಉಳಿಸಿಕೊಳ್ಳಲಾಗಿದೆ – ಮಾನವ ಜನಾಂಗದ ಅರ್ಧವನ್ನು ಮಾತ್ರ ಸೂಚಿಸುವ ಪುರುಷ ಎಂಬ ಪದದ ಸಂಕುಚಿತ ಅರ್ಥದಲ್ಲಿ ಅಲ್ಲ, ಆದರೆ ಅದರ ವಿಶಾಲವಾದ ಮೂಲ ಅರ್ಥದಲ್ಲಿ.

ಮಹಾವತಾರ ಬಾಬಾಜಿ. ಸಾವಿಲ್ಲದ ಮಹಾವತಾರರು 1861 ರಲ್ಲಿ ಲಾಹಿರಿ ಮಹಾಶಯರಿಗೆ ಕ್ರಿಯಾ ಯೋಗ (ಇದನ್ನು ನೋಡಿ) ದೀಕ್ಷೆಯನ್ನು ನೀಡುವ ಮೂಲಕ ಮೋಕ್ಷಪ್ರಾಪ್ತಿಯ ಪ್ರಾಚೀನ ತಂತ್ರವನ್ನು ಜಗತ್ತಿಗೆ ಮರಳಿ ಕೊಟ್ಟಂತಾಯಿತು. ಚಿರಯೌವನವುಳ್ಳ ಅವರು ಜಗತ್ತಿಗೆ ನಿರಂತರ ಅನುಗ್ರಹವನ್ನು ದಯಪಾಲಿಸುತ್ತ ಹಿಮಾಲಯದಲ್ಲಿ ಶತಮಾನಗಳಿಂದ ವಾಸಿಸುತ್ತಿದ್ದಾರೆ. ಧರ್ಮಪ್ರವರ್ತಕರಿಗೆ ಅವರ ವಿಶೇಷ ವಿನಿಯೋಗಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡುವುದು ಅವರ ಧ್ಯೇಯವಾಗಿದೆ. ಅವರ ಉನ್ನತ ಆಧ್ಯಾತ್ಮಿಕ ಶ್ರೇಷ್ಠತೆಯನ್ನು ಸೂಚಿಸುವ ಅನೇಕ ಬಿರುದಾವಳಿಗಳನ್ನು ಅವರಿಗೆ ನೀಡಲಾಗಿದೆ, ಆದರೆ ಸಂಸ್ಕೃತದ ಬಾಬಾ ಎಂದರೆ “ತಂದೆ” ಹಾಗೂ ಗೌರವ ಸೂಚಕ “ಜಿ” ಎಂಬ ಪ್ರತ್ಯಯಗಳಿಂದ ಬಾಬಾಜಿ ಎಂಬ ಸರಳ ಹೆಸರನ್ನು ಮಹಾವತಾರರು ಬಹುವಾಗಿ ಆಯ್ದುಕೊಂಡಿದ್ದಾರೆ. ಅವರ ಜೀವನ ಹಾಗೂ ಆಧ್ಯಾತ್ಮಿಕ ಧ್ಯೇಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಯೋಗಿಯ ಆತ್ಮಕಥೆಯಲ್ಲಿ ಕೊಡಲಾಗಿದೆ. ಅವತಾರ ನೋಡಿ.

ಮಹಾಸಮಾಧಿ. ಸಂಸ್ಕೃತದ ಮಹಾ ಅಂದರೆ “ಮಹಾನ್,” ಸಮಾಧಿ‌. ಅಂತಿಮ ಧ್ಯಾನ, ಅಥವಾ ಭಗವಂತನೊಂದಿಗಿನ ಪ್ರಜ್ಞಾಪೂರ್ವಕ ಸಂಸರ್ಗ, ಈ ಸ್ಥಿತಿಯಲ್ಲಿ ಒಬ್ಬ ಪರಿಪೂರ್ಣ ಮಹಾತ್ಮನು ತನ್ನನ್ನು ತಾನು ಬ್ರಹ್ಮಾಂಡೀಯ ಓಂಕಾರದೊಂದಿಗೆ ವಿಲೀನಗೊಳಿಸಿಕೊಳ್ಳುತ್ತಾನೆ ಹಾಗೂ ಭೌತ ಶರೀರವನ್ನು ಕಳಚಿಹಾಕುತ್ತಾನೆ. ಒಬ್ಬ ಮಹಾತ್ಮನಿಗೆ ತನ್ನ ದೈಹಿಕ ನಿವಾಸವನ್ನು ತೊರೆಯಲು ಭಗವಂತ ನಿಗದಿಪಡಿಸಿದ ಸಮಯ ಮೊದಲೇ ತಿಳಿದಿರುತ್ತದೆ. ಸಮಾಧಿ ನೋಡಿ.

ಮಾಯೆ. ಸೃಷ್ಟಿಯ ರಚನೆಯಲ್ಲಿ ಅಂತರ್ಗತವಾಗಿರುವ ಭ್ರಾಂತಿಕಾರಕ ಶಕ್ತಿ, ಅದರಿಂದ ಏಕವು ಅನೇಕವಾಗಿ ತೋರಿಕೊಳ್ಳುತ್ತದೆ. ಮಾಯೆಯು ಸಾಪೇಕ್ಷತೆ, ತಲೆಕೆಳಗು ಮಾಡುವ ವೈಪರೀತ್ಯದ, ದ್ವೈತದ, ವಿರೋಧಾತ್ಮಕ ಸ್ಥಿತಿಗಳ ತತ್ವವಾಗಿದೆ; ಬೈಬಲ್‌ನ ಹಳೆಯ ಸಂಪ್ರದಾಯದ ಪ್ರವಾದಿಗಳು ಅದನ್ನು “ಸೈತಾನ” ಎನ್ನುತ್ತಾರೆ. (ಹೀಬ್ರೂ ಸಾಹಿತ್ಯದಲ್ಲಿ ಇದನ್ನು “ವೈರಿ” ಎಂದೆನ್ನುತ್ತಾರೆ); ಕ್ರಿಸ್ತನು ಮಾಯೆಯನ್ನು ದೆವ್ವ, ಕೊಲೆಗಾರ, ಸುಳ್ಳುಗಾರ ಎಂದು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾನೆ. ಏಕೆಂದರೆ ಅವನಲ್ಲಿ ಸತ್ಯವೆಂಬುದೇ ಇಲ್ಲ..(ಜಾನ್ 8:44).

ಪರಮಹಂಸ ಯೋಗಾನಂದರು ಹೀಗೆ ಬರೆಯುತ್ತಾರೆ: “ಸಂಸ್ಕೃತ ಶಬ್ದ ಮಾಯ ಎಂಬುದರ ಅರ್ಥ ‘ಅಳೆಯುವವ’; ಅಪರಿಮಿತತ್ವ ಮತ್ತು ಅಪರಿಚ್ಛಿನ್ನತೆಯಲ್ಲಿ ಪರಿಮಿತಿ ಮತ್ತು ಪರಿಚ್ಛಿನ್ನತೆ ಸಹಜವಾಗಿ ಇದೆ ಎಂಬಂತೆ ಭ್ರಾಂತಿಪಡಿಸಿ ತೋರಿಸುವ ಸೃಷ್ಟಿಯಲ್ಲಿನ ಒಂದು ಇಂದ್ರಜಾಲ ಶಕ್ತಿ. ಪ್ರಕೃತಿಯೇ ಮಾಯೆ-ಅಂದರೆ ದೈವದ ಬದಲಾಗದ ಗುಣಕ್ಕೆ ವಿರುದ್ಧವಾದ ಬದಲಾವಣೆಯ ನಿರಂತರ ಪ್ರವಾಹದಲ್ಲಿರುವ ಇಂದ್ರಿಯಗೋಚರ ಪ್ರಪಂಚಗಳು. ಭಗವಂತನ ಯೋಜನೆ ಮತ್ತು ಲೀಲೆಯಲ್ಲಿ ಸೈತಾನನ ಅಥವಾ ಮಾಯೆಯ ಏಕೈಕ ಕಾರ್ಯವೆಂದರೆ ಮಾನವನನ್ನು‌ ಚೈತನ್ಯದಿಂದ ಜಡತ್ವಕ್ಕೆ, ಸತ್ಯದಿಂದ ಅಸತ್ಯಕ್ಕೆ ಕೊಂಡೊಯ್ಯಲು ಪ್ರಯತ್ನಿಸುವುದು.”
ಮಾಸ್ಟರ್. ಸ್ವಯಂ-ಪ್ರಭುತ್ವ ಹೊಂದಿರುವವನು. ಅಲ್ಲದೆ, ಒಬ್ಬರ ಗುರುಗಳಿಗೆ (ಗುರು ನೋಡಿ) ಗೌರವಯುತವಾಗಿ ಸಂಬೋಧಿಸುವ ಪದ. “ಒಬ್ಬ ಗುರುವಿನ ವಿಶಿಷ್ಟ ಅರ್ಹತೆಗಳು ಭೌತಿಕವಲ್ಲ, ಆಧ್ಯಾತ್ಮಿಕ….. ಒಬ್ಬನು ಗುರು ಎಂಬುದಕ್ಕೆ, ಇಚ್ಛಾನುಸಾರ ಉಸಿರಾಟರಹಿತ ಸ್ಥಿತಿಯನ್ನು (ಸವಿಕಲ್ಪ ಸಮಾಧಿ) ಪ್ರವೇಶಿಸುವ ಸಾಮರ್ಥ್ಯ ಹಾಗೂ ನಿರ್ವಿಕಲ್ಪ ಆನಂದ (ನಿರ್ವಿಕಲ್ಪ ಸಮಾಧಿ)ದ ಸ್ಥಿತಿಯ ಸಾಧನೆಗಳು ಮಾತ್ರವೇ ಪುರಾವೆಯಾಗಿರುತ್ತವೆ,” ಎಂದು ಪರಮಹಂಸ ಯೋಗಾನಂದರು ಸೂಚಿಸಿದ್ದಾರೆ. ಸಮಾಧಿ ನೋಡಿ.

ಮೆಡುಲ್ಲಾ ಅಬ್ಲಾಂಗೇಟ. ಮಿದುಳಿನ ಬುಡದಲ್ಲಿರುವ ಈ ರಚನೆಯು (ಬೆನ್ನುಹುರಿಯ ಮೇಲ್ತುದಿ) ಪ್ರಾಣಶಕ್ತಿಯು ಶರೀರವನ್ನು ಪ್ರವೇಶಿಸುವ ಪ್ರಮುಖ ದ್ವಾರ; ಆರನೇ ಚಕ್ರದ ಸ್ಥಾನ, ಇದರ ಕೆಲಸ ಬ್ರಹ್ಮಾಂಡ ಶಕ್ತಿಯ ಒಳಹರಿವನ್ನು ಸ್ವೀಕರಿಸುವುದು ಹಾಗೂ ಅದನ್ನು ನಿರ್ದೇಶಿಸುವುದು. ಪ್ರಾಣಶಕ್ತಿಯು ಮಿದುಳಿನ ಅತ್ಯಂತ ಮೇಲ್ಭಾಗದಲ್ಲಿರುವ ಏಳನೇ ಚಕ್ರದಲ್ಲಿ (ಸಹಸ್ರಾರ) ಸಂಗ್ರಹವಾಗಿರುತ್ತದೆ. ಆ ಕೋಶದಿಂದ ಅದು ದೇಹದಾದ್ಯಂತ ವಿತರಿಸಲ್ಪಡುತ್ತದೆ. ಮೆಡುಲ್ಲಾದಲ್ಲಿರುವ ಸೂಕ್ಷ್ಮಕೇಂದ್ರವು ಪ್ರಾಣಶಕ್ತಿಯ ಪ್ರವೇಶ, ಸಂಗ್ರಹಣೆ ಮತ್ತು ವಿತರಣೆಯನ್ನು ನಿಯಂತ್ರಿಸುವ ಮುಖ್ಯ ಸ್ವಿಚ್ ಆಗಿದೆ.

ಯುಗ. ಪ್ರಾಚೀನ ಹಿಂದೂ ಗ್ರಂಥಗಳಲ್ಲಿ ವಿವರಿಸಲಾದ, ಸೃಷ್ಟಿಯ ಒಂದು ಕಾಲಚಕ್ರ ಅಥವಾ ಉಪಕಾಲ. ಇದನ್ನು ಸ್ವಾಮಿ ಶ್ರೀ ಯುಕ್ತೇಶ್ವರರು (ಇದನ್ನು ನೋಡಿ) ʼದಿ ಹೋಲಿ ಸೈನ್ಸ್‌ʼ ನಲ್ಲಿ 24,000 ವರ್ಷಗಳ ವಿಷುವತ್ ಚಕ್ರ ಹಾಗೂ ಅದರಲ್ಲಿ ಮನುಕುಲದ ಪ್ರಸ್ತುತ ಸ್ಥಾನವನ್ನು ವಿವರಿಸುತ್ತಾರೆ. ಈ ಆವರ್ತವು ಪುರಾತನ ಗ್ರಂಥಗಳಲ್ಲಿರುವ ಹೆಚ್ಚು ದೀರ್ಘವಾದ ಸಾರ್ವತ್ರಿಕ ಆವರ್ತದ ಮಿತಿಯೊಳಗೆ ಸಂಭವಿಸುತ್ತದೆ, ಇದನ್ನು ಪುರಾತನ ಋಷಿಗಳು ಲೆಕ್ಕ ಹಾಕಿದ್ದಾರೆ ಹಾಗೂ ಯೋಗಿಯ ಆತ್ಮಕಥೆಯ ಅಧ್ಯಾಯ 16 ರಲ್ಲಿ ಚರ್ಚಿಸಲಾಗಿದೆ.

ಯೋಗ. ಸಂಸ್ಕೃತದಿಂದ ʼಯುಜ್ʼ “ಸಂಯೋಗ.” ಹಿಂದೂ ತತ್ವಶಾಸ್ತ್ರದಲ್ಲಿ ಯೋಗ ಎಂಬ ಪದದ ಅತ್ಯುನ್ನತ ಅರ್ಥವೆಂದರೆ ಧ್ಯಾನದ ವೈಜ್ಞಾನಿಕ ವಿಧಾನಗಳ ಮೂಲಕ ಪರಮಾತ್ಮನೊಂದಿಗೆ ವ್ಯಕ್ತಿಗತ ಆತ್ಮನ ಸಂಯೋಗ. ಹಿಂದೂ ತತ್ತ್ವಶಾಸ್ತ್ರದ ವಿಶಾಲ ವ್ಯಾಪ್ತಿಯಲ್ಲಿ, ಯೋಗವು ಆರು ಸಾಂಪ್ರದಾಯಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ: ವೇದಾಂತ, ಮೀಮಾಂಸ, ಸಾಂಖ್ಯ, ವೈಶೇಷಿಕ, ನ್ಯಾಯ ಮತ್ತು ಯೋಗ. ವಿವಿಧ ರೀತಿಯ ಯೋಗ ವಿಧಾನಗಳೂ ಇವೆ: ಹಠ ಯೋಗ, ಮಂತ್ರ ಯೋಗ, ಲಯ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ ಹಾಗೂ ರಾಜ ಯೋಗ. ರಾಜಯೋಗ “ರಾಜೋಚಿತ” ಅಥವಾ ಸಂಪೂರ್ಣ ಯೋಗ, ಇದನ್ನು ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್‌ನಲ್ಲಿ ಕಲಿಸಲಾಗುತ್ತದೆ, ಹಾಗೂ ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ತನ್ನ ಶಿಷ್ಯ ಅರ್ಜುನನಿಗೆ ಇದರ ಗುಣಗಾನ ಮಾಡಿದ್ದಾನೆ: “ಯೋಗಿಯು ದೇಹವನ್ನು ಶಿಸ್ತಿಗೊಳಪಡಿಸುವ ತಪಸ್ವಿಗಳಿಗಿಂತ ಶ್ರೇಷ್ಠನು, ಜ್ಞಾನ ಮಾರ್ಗ ಅಥವಾ ಕರ್ಮ ಮಾರ್ಗದ ಅನುಯಾಯಿಗಳಿಗಿಂತಲೂ ಶ್ರೇಷ್ಠನು; “ಓ ಅರ್ಜನ, ನೀನೊಬ್ಬ ಯೋಗಿಯಾಗು!” (ಭಗವದ್ಗೀತೆ VI:46). ಯೋಗದ ಅಗ್ರಗಣ್ಯ ಪ್ರತಿಪಾದಕರಾದ ಮಹರ್ಷಿ ಪತಂಜಲಿಗಳು, ರಾಜಯೋಗಿಯು ಸಮಾಧಿಯನ್ನು ಅಥವಾ ಭಗವಂತನೊಂದಿಗೆ ಸಂಯೋಗವನ್ನು ಸಾಧಿಸಲು ಬೇಕಾದ ಎಂಟು ನಿರ್ದಿಷ್ಟ ಹಂತಗಳನ್ನು ವಿವರಿಸಿದ್ದಾರೆ. ಅವುಗಳೆಂದರೆ (1) ಯಮ: ನೈತಿಕ ನಡವಳಿಕೆ; (2) ನಿಯಮ: ಧಾರ್ಮಿಕ ಆಚರಣೆಗಳು; (3) ಆಸನ, ಸೂಕ್ತ ಭಂಗಿ; (4) ಪ್ರಾಣಾಯಾಮ: ಪ್ರಾಣದ, ಸೂಕ್ಷ್ಮ ಪ್ರಾಹಗಳ ನಿಯಂತ್ರಣ; (5) ಪ್ರತ್ಯಾಹಾರ: ಆಂತರೀಕರಣ, ಬಾಹ್ಯ ವಸ್ತು ವಿಷಯಗಳಿಂದ ಇಂದ್ರಿಯಗಳನ್ನು ಹಿಂತೆಗೆದುಕೊಳ್ಳುವುದು; (6) ಧಾರಣ: ಏಕಾಗ್ರತೆ; (7) ಧ್ಯಾನ; ಹಾಗೂ (8) ಸಮಾಧಿ: ಅತೀತ ಪ್ರಜ್ಞೆಯ ಅನುಭವ; ಭಗವಂತನೊಡನೆ ಸಂಯೋಗ.

ಯೋಗದಾ ಸತ್ಸಂಗ ನಿಯತಕಾಲಿಕೆ. ಪರಮಹಂಸ ಯೋಗಾನಂದರ ಮಾತುಕತೆಗಳು ಹಾಗೂ ಬರಹಗಳನ್ನು ಒಳಗೊಂಡಿರುವ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಪ್ರಕಟಿಸುವ ವಾರ್ಷಿಕ ಪತ್ರಿಕೆ; ಪ್ರಚಲಿತ ಆಸಕ್ತಿ ಹಾಗೂ ಶಾಶ್ವತ ಮೌಲ್ಯವಿರುವ ಇತರೆ ಆಧ್ಯಾತ್ಮಿಕ, ಕಾರ್ಯೋಪಯೋಗಿ ಹಾಗೂ ಬೋಧಪ್ರದ ವಿಷಯಗಳ ಲೇಖನಗಳನ್ನೂ ಒಳಗೊಂಡಿರುತ್ತದೆ.

ಯೋಗದಾ ಸತ್ಸಂಗ ಪಾಠಗಳು. ಗೃಹ-ಅಧ್ಯಯನದ ಪಾಠಗಳ ಸರಣಿಯನ್ನಾಗಿ ಸಂಕಲಿಸಿ, ಪ್ರಪಂಚದಾದ್ಯಂತದ ವಿದ್ಯಾರ್ಥಿಗಳಿಗೆ ಕಳಿಸಲಾಗುವ ಪರಮಹಂಸ ಯೋಗಾನಂದರ ಬೋಧನೆಗಳು, ಇವು ಎಲ್ಲ ಪ್ರಾಮಾಣಿಕ ಸತ್ಯಾನ್ವೇಷಕರಿಗೆ ಲಭ್ಯವಿವೆ. ಈ ಪಾಠಗಳಲ್ಲಿ ಪರಮಹಂಸ ಯೋಗಾನಂದರು ಕಲಿಸಿದ ಯೋಗ ಧ್ಯಾನ ತಂತ್ರಗಳು, ಜೊತೆಗೆ, ಕೆಲವು ಅವಶ್ಯಕತೆಗಳನ್ನು ಪೂರೈಸುವವರಿಗಾಗಿ ಕ್ರಿಯಾ ಯೋಗ (ಕ್ರಿಯಾ ಯೋಗ ನೋಡಿ)ವೂ ಕೂಡ ಇರುತ್ತದೆ.

ಯೋಗದಾ ಸತ್ಸಂಗ ಸನ್ಯಾಸಿಗಳ ಶ್ರೇಣಿ. ಯೋಗದ ಆದರ್ಶಗಳಾದ ಧ್ಯಾನ ಮತ್ತು ಕರ್ತವ್ಯನಿಷ್ಠ ಚಟುವಟಿಕೆಗಳ ಮೂಲಕ ಭಗವಂತನನ್ನು ಅರಸುವ ಮತ್ತು ಅವನ ಸೇವೆ ಮಾಡುವ ಜೀವನವುಳ್ಳ ಸಂಪೂರ್ಣ ತ್ಯಾಗಕ್ಕೆ ಅರ್ಪಿಸಿಕೊಳ್ಳಬೇಕೆಂದು ಭಾವಿಸುವವರಿಗಾಗಿ ಆದಿ ಶಂಕರಾಚಾರ್ಯರು ಸ್ಥಾಪಿಸಿದ ಪ್ರಾಚೀನ ಸ್ವಾಮಿ ಶ್ರೇಣಿಯ ಭಾಗ. ಸನ್ಯಾಸಿಗಳು ಸಂಸ್ಥೆಯ ಆಶ್ರಮ ಕೇಂದ್ರಗಳಲ್ಲಿ ವಾಸಿಸುತ್ತಾರೆ ಮತ್ತು ಪರಮಹಂಸ ಯೋಗಾನಂದರ ವಿಶ್ವಾದ್ಯಂತದ ಕಾರ್ಯವನ್ನು ಅನೇಕ ಸಾಮರ್ಥ್ಯಗಳಲ್ಲಿ ಪೂರೈಸುತ್ತಾರೆ, ಅವುಗಳೆಂದರೆ: ಧ್ಯಾನ ಶಿಬಿರಗಳನ್ನು ನಡೆಸುವುದು, ತರಗತಿಗಳು ಮತ್ತು ಇತರ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು; ಪ್ರತಿ ತಿಂಗಳು ಬೋಧನೆಗಳ ಸಾವಿರಾರು ವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕ ಸಲಹೆ ಮತ್ತು ಮಾರ್ಗದರ್ಶನವನ್ನು ಒದಗಿಸುವುದು; ಮತ್ತು ಸಮಾಜದ ವಿವಿಧ ದತ್ತಿ ಚಟುವಟಿಕೆಗಳನ್ನು ನಿರ್ವಹಿಸುವುದು. ಅನೇಕ ವಿಭಿನ್ನ ಹಿನ್ನೆಲೆ ಮತ್ತು ವಿಭಿನ್ನ ವಯಸ್ಸಿನ ಸನ್ಯಾಸಿಗಳು ದೇಶದ ಎಲ್ಲಾ ಭಾಗಗಳಿಂದ ಬಂದು ಸೇರುತ್ತಾರೆ.

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ. ಪರಮಹಂಸ ಯೋಗಾನಂದರ ಸಂಸ್ಥೆಗೆ ಭಾರತದಲ್ಲಿರುವ ಹೆಸರು. ಈ ಸಂಸ್ಥೆಯನ್ನು ಅವರು 1917 ರಲ್ಲಿ ಸ್ಥಾಪಿಸಿದರು. ಇದರ ಪ್ರಧಾನ ಕಛೇರಿಯಾದ ಯೋಗದಾ ಮಠವು ಕೋಲ್ಕತ್ತಾದ ಬಳಿಯಿರುವ ದಕ್ಷಿಣೇಶ್ವರದ ಗಂಗಾ ತೀರದಲ್ಲಿದೆ. ಯೋಗದಾ ಸತ್ಸಂಗ ಸೊಸೈಟಿಯು ಜಾರ್ಖಂಡ್‌ನ (ಹಿಂದೆ ಬಿಹಾರ) ರಾಂಚಿಯಲ್ಲಿ ಒಂದು ಶಾಖಾ ಮಠವನ್ನು ಮತ್ತು ಅನೇಕ ಶಾಖಾ ಕೇಂದ್ರಗಳನ್ನು ಹೊಂದಿದೆ. ಭಾರತದಾದ್ಯಂತ ಇರುವ ಧ್ಯಾನ ಕೇಂದ್ರಗಳ ಜೊತೆಗೆ, ಪ್ರಾಥಮಿಕ ಶಾಲೆಯಿಂದ ಕಾಲೇಜಿನವರೆಗಿರುವ ಇಪ್ಪತ್ತೆರಡು ಶೈಕ್ಷಣಿಕ ಸಂಸ್ಥೆಗಳಿವೆ. ಪರಮಹಂಸ ಯೋಗಾನಂದರು ಸೃಷ್ಟಿಸಿದ ಯೋಗದಾ ಪದವು ಯೋಗ ಅಂದರೆ, ಒಂದಾಗುವುದು, ಸಾಮರಸ್ಯ, ಸಮಚಿತ್ತತೆ; ಮತ್ತು ದಾ ಎಂದರೆ ಅದನ್ನು ನೀಡುವಂತಹುದು, ಎಂಬ ಪದಗಳಿಂದ ಬಂದಿದೆ. ಸತ್ಸಂಗವು ಸತ್ ಎಂದರೆ ಸತ್ಯ ಮತ್ತು ಸಂಗ ಎಂದರೆ ಸಹಭಾಗಿತ್ವ ಎಂಬ ಪದಗಳಿಂದಾಗಿದೆ. ಪಶ್ಚಿಮದವರಿಗಾಗಿ, ಶ್ರೀ ಪರಮಹಂಸ ಯೋಗಾನಂದರು ಭಾರತದ ಈ ಹೆಸರನ್ನು “ಸೆಲ್ಫ್‌-ರಿಯಲೈಝೇಷನ್ ಫೆಲೋಷಿಪ್” ಎಂದು ಅನುವಾದಿಸಿದರು.

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಗುರುಗಳು. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ (ಸೆಲ್ಫ್‌-ರಿಯಲೈಝೇಷನ್ ಫೆಲೋಶಿಪ್) ಗುರುಗಳೆಂದರೆ, ಭಗವಾನ್ ಕೃಷ್ಣ, ಏಸು ಕ್ರಿಸ್ತ ಮತ್ತು ಸಮಕಾಲೀನ ಶ್ರೇಷ್ಠ ಗುರು ಪರಂಪರೆ: ಮಹಾವತಾರ ಬಾಬಾಜಿ, ಲಾಹಿರಿ ಮಹಾಶಯ, ಸ್ವಾಮಿ ಶ್ರೀ ಯುಕ್ತೇಶ್ವರ ಹಾಗೂ ಪರಮಹಂಸ ಯೋಗಾನಂದರು. ಭಗವಾನ್ ಕೃಷ್ಣನ ಯೋಗ ನಿಯಮಗಳು ಹಾಗೂ ಯೇಸು ಕ್ರಿಸ್ತನ ಬೋಧನೆಗಳ ಸಾಮರಸ್ಯ ಮತ್ತು ಮೂಲಭೂತ ಏಕತೆಯನ್ನು ತೋರಿಸುವುದು ವೈಎಸ್‌ಎಸ್‌ ಆಡಳಿತ ಕ್ರಮದ ಅವಿಭಾಜ್ಯ ಅಂಗವಾಗಿದೆ. ಈ ಎಲ್ಲ ಗುರುಗಳು, ತಮ್ಮ ಭವ್ಯವಾದ ಬೋಧನೆಗಳು ಹಾಗೂ ದಿವ್ಯ ನೆರವಿನ ಮೂಲಕ, ಇಡೀ ಮನುಕುಲಕ್ಕೆ ಭಗವತ್ಸಾಕ್ಷಾತ್ಕಾರದ ಪ್ರಾಯೋಗಿಕ ಆಧ್ಯಾತ್ಮಿಕ ವಿಜ್ಞಾನವನ್ನು ತರುವ ಯೋಗದಾ ಸತ್ಸಂಗ ಸೊಸೈಟಿಯ ಉದ್ದೇಶದ ನೆರವೇರಿಕೆಗೆ ನೆರವಾಗುತ್ತಾರೆ. ಭಗವತ್‌-ಸಾಕ್ಷಾತ್ಕಾರದ ಕಾರ್ಯೋಪಯೋಗಿ ಆಧ್ಯಾತ್ಮಿಕ ವಿಜ್ಞಾನವನ್ನು ಮಾನವಸಂಕುಲಕ್ಕೆ ನೀಡುವ ಸಹಭಾಗಿತ್ವದ ನಿಯೋಗ. ಆ ಗುರುಪರಂಪರೆಗೆ ಸೇರಿದ ಗುರುವು ತನ್ನ ಆಧ್ಯಾತ್ಮಿಕ ಅಧಿಕಾರವನ್ನು ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಗೊತ್ತುಪಡಿಸಿದ ಒಬ್ಬ ಶಿಷ್ಯನಿಗೆ ಹಸ್ತಾಂತರಿಸಿದಾಗ ಅದನ್ನು ಗುರು-ಪರಂಪರೆಯೆಂದು ಕರೆಯಲಾಗುತ್ತದೆ. ಹೀಗೆ ಪರಮಹಂಸ ಯೋಗಾನಂದರು ಮಹಾವತಾರ್‌ ಬಾಬಾಜಿ, ಲಾಹಿರಿ ಮಹಾಶಯ ಮತ್ತು ಸ್ವಾಮಿ ಶ್ರೀ ಯುಕ್ತೇಶ್ವರರ ನೇರ ಗುರು ಪರಂಪರೆಯವರು. ಪರಮಹಂಸಜಿಯವರು ಸ್ವರ್ಗಸ್ಥರಾಗುವ ಮುನ್ನ, ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌ -ರಿಯಲೈಝೇಷನ್‌ ಫೆಲೋಷಿಪ್‌ನ ಗುರು ಪರಂಪರೆಯಲ್ಲಿ ತಾವೇ ಕಡೆಯವರಾಗಿರಬೇಕು ಎಂಬುದು ಭಗವಂತನ ಇಚ್ಛೆಯಾಗಿದೆ ಮತ್ತು ತಮ್ಮ ಸಂಸ್ಥೆಯಲ್ಲಿ ಮುಂದೆ ಬರುವ ಯಾವ ಶಿಷ್ಯ ಅಥವಾ ಮುಂದಾಳು ಕೂಡ ಎಂದೂ ಗುರು ಎಂಬ ಉಪಾಧಿಯನ್ನು ತೆಗೆದುಕೊಳ್ಳುವ ಹಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನಾನು ಇಲ್ಲಿಂದ ಹೋದ ಮೇಲೆ, ಬೋಧನೆಗಳೇ ಗುರು…ಬೋಧನೆಗಳ ಮುಖಾಂತರ ನೀವು ನನ್ನೊಡನೆ ಮತ್ತು ನನ್ನನ್ನು ಇಲ್ಲಿಗೆ ಕಳಿಸಿದ ಮಹಾನ್‌ ಗುರುಗಳೊಡನೆ ಶ್ರುತಿಗೊಳ್ಳುತ್ತೀರಿ,” ಎಂದು ಹೇಳಿದ್ದಾರೆ. ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಅಧ್ಯಕ್ಷರ ಪದವಿಯ ಉತ್ತರಾಧಿಕಾರಿಗಳ ಬಗ್ಗೆ ಕೇಳಿದಾಗ, ಪರಮಹಂಸಜಿ, “ಸಂಸ್ಥೆಯ ಮುಂದಾಳತ್ವದಲ್ಲಿ ಸದಾ ಸಾಕ್ಷಾತ್ಕಾರ ಹೊಂದಿದ ಪುರುಷರು ಮತ್ತು ಮಹಿಳೆಯರೇ ಇರುತ್ತಾರೆ. ಭಗವಂತ ಮತ್ತು ಗುರುಗಳಿಗೆ ಅವರೆಲ್ಲರ ಬಗ್ಗೆ ಈಗಾಗಲೇ ತಿಳಿದಿದೆ. ಎಲ್ಲ ಆಧ್ಯಾತ್ಮಿಕ ಮತ್ತು ಸಾಂಸ್ಥಿಕ ವಿಷಯಗಳಲ್ಲಿ ಅವರು ನನ್ನ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿ ಮತ್ತು ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಾರೆ,” ಎಂದು ಹೇಳಿದರು.

ಯೋಗಿ. ಯೋಗ (ಯೋಗ ನೋಡಿ)ವನ್ನು ಅಭ್ಯಾಸ ಮಾಡುವವನು. ದಿವ್ಯ ಸಾಕ್ಷಾತ್ಕಾರಕ್ಕಾಗಿ ವೈಜ್ಞಾನಿಕ ತಂತ್ರವನ್ನು ಅಭ್ಯಾಸ ಮಾಡುವ ವ್ಯಕ್ತಿಯೇ ಯೋಗಿ. ಯೋಗಿಗಳು ವಿವಾಹಿತರಾಗಿರಬಹುದು ಅಥವಾ ಅವಿವಾಹಿತರಾಗಿರಬಹುದು—ಲೌಕಿಕ ಜವಾಬ್ದಾರಿಗಳನ್ನು ಹೊಂದಿರುವ ಗೃಹಸ್ಥರಾಗಿರಬಹುದು ಅಥವಾ ವಿಧ್ಯುಕ್ತ ಧಾರ್ಮಿಕ ಕಟ್ಟುಪಾಡುಗಳನ್ನು ಹೊಂದಿರುವ ಸಂನ್ಯಾಸಿಯೂ ಆಗಿರಬಹುದು.

ಇದನ್ನು ಹಂಚಿಕೊಳ್ಳಿ