ನೂರು ವರ್ಷಗಳಿಗೂ ಹಿಂದೆ, ಜುಲೈ 1915ರಲ್ಲಿ, ಪರಮಹಂಸ ಯೋಗಾನಂದರು ತಮ್ಮ ಗುರುಗಳಾದ ಸ್ವಾಮಿ ಶ್ರೀ ಯುಕ್ತೇಶ್ವರರಿಂದ ಭಾರತದ ಪ್ರಾಚೀನ ಸನ್ಯಾಸ ಪರಂಪರೆಯಂತೆ ಸನ್ಯಾಸ ದೀಕ್ಷೆಯನ್ನು ಸಿರಾಂಪುರ, ಭಾರತದಲ್ಲಿ ಸ್ವೀಕರಿಸಿದರು. ಈ ಘಟನೆಯಲ್ಲಿ 22 ವರ್ಷದ ಮುಕುಂದ ಲಾಲ್ ಘೋಷ್ — ಅವರಿಗೆ ಸ್ವಾಮಿ ಯೋಗಾನಂದ ಎಂದು ಮರು ನಾಮಕರಣ ಮಾಡಲಾಯಿತು — ಅದು ಅವರ ಜೀವನದಲ್ಲಿ ದೊಡ್ಡ ತಿರುವನ್ನು ತಂದುಕೊಟ್ಟಿದ್ದಲ್ಲದೆ, 20ನೇ ಶತಮಾನ ಮತ್ತು ಅದರ ನಂತರವೂ ಜಾಗತಿಕವಾಗಿ ಆಧ್ಯಾತ್ಮಿಕ ಜಾಗೃತಿಯನ್ನು ಮೂಡಿಸುವಲ್ಲಿ ಅವರ ಪ್ರಭಾವ ಬೀರಲು ಬರೆದ ಮುನ್ನುಡಿಯಾಯಿತು. ಅಷ್ಟೇ ಅಲ್ಲದೇ, ಅವರು ಸ್ಥಾಪಿಸಿದ ಸನ್ಯಾಸ ಆಚರಣೆಯು ಒಂದು ಶಾಶ್ವತ ಪರಂಪರೆಯಾಗಿ ಉಳಿದಿದೆ.
ಪರಮಹಂಸ ಯೋಗಾನಂದರು ಸೇರಿರುವ ಪ್ರಾಚೀನ ಸ್ವಾಮಿ ಶ್ರೇಣಿಯು ದಿನದಿನವೂ ವೃದ್ಧಿಸುತ್ತಿದ್ದು, ಯೋಗದಾ ಸತ್ಸಂಗ ಸಂಸ್ಥೆಯ ಸನ್ಯಾಸಿ ಬಳಗವು ಭಾರತದ ವಿವಿಧ ಭಾಗಗಳಿಂದ ಬಂದ ಸನ್ಯಾಸಿಗಳನ್ನು ಒಳಗೊಂಡಿದೆ. ಈ ಸ್ವಾಮಿ ಶ್ರೇಣಿಯು ವೈಎಸ್ಎಸ್‌ನ ಬೆಳವಣಿಗೆಗೆ ಆಧಾರಸ್ಥಂಭವಾಗಿದ್ದು, ಭಾರತದಲ್ಲಿ ಯೋಗವು ವಿಸ್ತಾರವಾಗಿ ಹರಡುವುದಕ್ಕೆ ಸಹಾಯಕವಾಗಿದೆ.

ತಾವೇ ಪ್ರಾರಂಭಿಸಿದ ಸನ್ಯಾಸದ ಆಚರಣೆಗಳನ್ನು ವಿವರಿಸುತ್ತ ಪರಮಹಂಸ ಯೋಗಾನಂದರು ಹೀಗೆ ಬರೆಯುತ್ತಾರೆ. “ಈ ಪ್ರಾಪಂಚಿಕ ಕಟ್ಟಳೆಗಳಿಗೆ ರಾಜಿಯಾಗದೆ, ನನ್ನ ಇಡೀ ಜೀವನವನ್ನು ಭಗವಂತನಿಗಾಗಿಯೇ ಮುಡಿಪಾಗಿಡಬೇಕೆಂಬ ನನ್ನ ಹೃದಯದ ಉತ್ಕಟವಾದ ಬಯಕೆಗೆ, ನಾನು ಎಲ್ಲವನ್ನೂ ಸಂಪೂರ್ಣವಾಗಿ ಪರಿತ್ಯಜಿಸಿ, ಸನ್ಯಾಸಿಯಾಗಿ ಸ್ವಾಮಿ ದೀಕ್ಷೆಯನ್ನು ಪಡೆಯುವುದೊಂದೇ ಉಳಿದ ಮಾರ್ಗವಾಗಿತ್ತು….
“ಓರ್ವ ಸನ್ಯಾಸಿಯಾಗಿ, ನನ್ನ ಜೀವನವು ಭಗವಂತನ ಅಪರಿಮಿತ ಸೇವೆಗಾಗಿ ಮತ್ತು ಆತನ ಸಂದೇಶಗಳಿಂದ ಎಲ್ಲರ ಹೃದಯಗಳಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನು ಉಂಟುಮಾಡುವುದಕ್ಕೆ ಮೀಸಲಾಗಿದೆ. ಯಾರು ನಾನು ಕ್ರಮಿಸಿದ ಹಾದಿಯಲ್ಲಿ ಬರುತ್ತಿರುವರೋ, ಯಾರಿಗೆ ಈ ಪ್ರಪಂಚದ ಐಹಿಕ ಭೋಗಗಳನ್ನು ತ್ಯಜಿಸಿ ದೈವಾನ್ವೇಷಣೆಯ ತುಡಿತವಿದೆಯೋ ಮತ್ತು ಯಾರು ಧ್ಯಾನ ಯೋಗದ ಸೂತ್ರಗಳನ್ನು ಪರಿಪಾಲಿಸುವ ಮೂಲಕ ದೇವರ ಸೇವೆಯನ್ನು ಮತ್ತು ತಮ್ಮ ಕರ್ತವ್ಯಗಳನ್ನು ಮಾಡುತ್ತಿರುವರೋ, ಅವರಿಗಾಗಿ ನಾನು ಸೆಲ್ಫ್ ರಿಯಲೈಝೇಶನ್ ಫೆಲೋಶಿಪ್/ಭಾರತೀಯ ಯೋಗದಾ ಸತ್ಸಂಗ ಸಂಸ್ಥೆಯಲ್ಲಿ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಸನ್ಯಾಸ ದೀಕ್ಷೆಯ ಸನ್ಯಾಸ ಪದ್ದತಿಗಳನ್ನು,ಯಾವ ಪದ್ದತಿಗಳಿಂದ ನಾನು ನನ್ನ ಗುರುಗಳಿಂದ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದ್ದೇನೆಯೋ ಅವುಗಳನ್ನು, ಶಾಶ್ವತವಾಗಿ ಉಳಿಯುವಂತೆ ಅಳವಡಿಸಿದ್ದೇನೆ. ದೇವರು, ನನ್ನ ಗುರು ಮತ್ತು ಪರಮಗುರುಗಳ ಮೂಲಕ ಪ್ರಾರಂಭಿಸಿದ ಈ ಸಂಸ್ಥೆಯ ಕಾರ್ಯಗಳನ್ನು ಮುಂದೆಯೂ, ಯಾರು ಎಲ್ಲವನ್ನೂ ತ್ಯಜಿಸಿ ತಮ್ಮ ಜೀವನವನ್ನು ದೇವರ ಪ್ರೀತಿಗಾಗಿ ಮತ್ತು ಸನ್ಯಾಸದ ಉನ್ನತ ಧ್ಯೇಯಗಳಿಗಾಗಿ ಮೀಸಲಿಟ್ಟಿರುವರೋ, ಅವರಿಂದ ಮುಂದುವರೆಸಿಕೊಂಡು ಹೋಗಲಾಗುವುದು.”


"ನಾನು ಸ್ವಾಮಿ ಶ್ರೇಣಿಯ ಸನ್ಯಾಸಿಯಾದೆ"
ಪರಮಹಂಸ ಯೋಗಾನಂದರಿಂದ

“ಗುರುಗಳೇ, ಬಂಗಾಳ-ನಾಗಪುರ ರೈಲ್ವೆಯಲ್ಲಿ ಕಾರ್ಯನಿರ್ವಾಹಕನ ಹುದ್ದೆಯನ್ನು ನಾನು ಒಪ್ಪಿಕೊಳ್ಳಬೇಕೆಂದು ನನ್ನ ತಂದೆಯವರ ಇಚ್ಚೆಯಾಗಿದೆ, ಅದರ ಬಗ್ಗೆ ಉತ್ಸುಕರಾಗಿದ್ದಾರೆ. ಆದರೆ, ನಾನು ಖಂಡಿತವಾಗಿ ಬೇಡವೆಂದು ತಿರಸ್ಕರಿಸಿದ್ದೇನೆ. ಪೂಜ್ಯರೇ, ನೀವು ನನಗೆ ಸನ್ಯಾಸ ದೀಕ್ಷೆ ನೀಡಿ ಸನ್ಯಾಸಿಯನ್ನಾಗಿ ಮಾಡಲಾರಿರಾ?“ ಎಂದು ಕೇಳುತ್ತಾ ನನ್ನ ಗುರುವಿನತ್ತ [ಶ್ರೀ ಯುಕ್ತೇಶ್ವರರ] ಯಾಚನೆಯ ದೃಷ್ಟಿಯನ್ನು ಬೀರಿದೆ. ಅವರು ನನ್ನ ನಿರ್ಧಾರದ ಧೃಡತೆಯನ್ನು ಪರೀಕ್ಷಿಸುವ ಸಲುವಾಗಿ, ಇದೇ ನನ್ನ ಈ ಕೋರಿಕೆಯನ್ನು ಹಿಂದಿನ ವರ್ಷಗಳಲ್ಲಿ ನಿರಾಕರಿಸಿದ್ದರು. ಆದರೆ ಇಂದು ವಾತ್ಸಲ್ಯದಿಂದ ನಸುನಕ್ಕರು.
“ಸರಿ ಆಗಲಿ, ನಾಳೆ ನಿನಗೆ ಸನ್ಯಾಸ ದೀಕ್ಷೆಯನ್ನು ನೀಡುತ್ತೇನೆ”, ಅವರು ಪ್ರಶಾಂತವಾದ ಧ್ವನಿಯಲ್ಲಿ ಮುಂದುವರೆಸಿದರು. “ಸನ್ಯಾಸಿಯಾಗಬೇಕೆಂಬ ನಿನ್ನ ಬಯಕೆಯನ್ನು ಪಟ್ಟು ಹಿಡಿದು ಉಳಿಸಿಕೊಂಡೇ ಬಂದೆಯೆಂಬುದನ್ನು ನೋಡಿ ನನಗೆ ಸಂತೋಷವಾಯಿತು. ಲಾಹಿರಿ ಮಹಾಶಯರು ಆಗಾಗ್ಗೆ ಹೇಳುತ್ತಿದ್ದರು: ‘ದೇವರನ್ನು ನೀವು ನಿಮ್ಮ ಬೇಸಿಗೆಯ ಅತಿಥಿಯನ್ನಾಗಿ ಆಹ್ವಾನಿಸದಿದ್ದರೆ, ನಿಮ್ಮ ಬಾಳಿನ ಚಳಿಗಾಲದಲ್ಲಿ ಆತ ಬರುವುದಿಲ್ಲ’ ಎಂದು.”
“ಪ್ರಿಯ ಗುರುಗಳೇ, ತಾವು ಹೇಗೋ ಹಾಗೆಯೇ ನಾನು ಸನ್ಯಾಸಾಶ್ರಮವನ್ನು ಸ್ವೀಕರಿಸುವ ನನ್ನ ಬಯಕೆಯನ್ನು ಎಂದಿಗೂ ಬಿಡಲಾರದವನಾದೆ.” ಅಮೇಯವಾದ ಒಲುಮೆಯಿಂದ ನಾನು ಅವರತ್ತ ನಗೆಯನ್ನು ಬೀರಿದೆ….
ಭಗವಂತನಿಗೆ ಬಾಳಿನಲ್ಲಿ ಅಮುಖ್ಯವಾದ ಸ್ಥಾನವನ್ನು ಕೊಡುವುದು ನನಗಂತೂ ಊಹೆಗೆ ನಿಲುಕದಂತಾಗಿತ್ತು. ಭಗವಂತನೆ ಈ ಬ್ರಹ್ಮಾಂಡದ ಏಕಮಾತ್ರ ಪ್ರಭು, ಬಾಳಿನಿಂದ ಬಾಳಿಗೆ ಮನುಷ್ಯನ ಮೇಲೆ ಮೌನವಾಗಿ ಇಷ್ಟಾರ್ಥಗಳನ್ನು ವರ್ಷಿಸುತ್ತಾನೆ, ಮನುಷ್ಯನು ಪ್ರತಿಯಾಗಿ ಅರ್ಪಿಸಬಹುದಾದ ಒಂದೇ ಒಂದು ಕೊಡುಗೆ — ಪ್ರೀತಿ, ಅದನ್ನು ಕೊಡುವ ಅಥವಾ ಬಿಡುವ ಶಕ್ತಿ ಅವನಿಗಿದೆ….
ಮಾರನೆಯ ದಿವಸ ನನ್ನ ಬಾಳಿನಲ್ಲಿ ಅತ್ಯಂತ ಸ್ಮರಣೀಯವಾದ ದಿನ, ಅದೊಂದು ಬಿಸಿಲಿನ ಗುರುವಾರ. ನಾನು ಕಾಲೇಜಿನ ಪದವೀಧರನಾದ ಕೆಲವು ವಾರಗಳ ನಂತರ 1915ರ ಜುಲೈ ತಿಂಗಳಿನಲ್ಲಿ ಎಂದು ನನ್ನ ನೆನಪು. ಸಿರಾಂಪುರ ಆಶ್ರಮದ ಒಳಗಿನ ಮೊಗಸಾಲೆಯಲ್ಲಿ ಗುರುಗಳು ಒಂದು ಹೊಸ ಬಿಳಿ ರೇಷ್ಮೆ ವಸ್ತ್ರವನ್ನು ಸನ್ಯಾಸಿಗೆ ಸಾಂಪ್ರದಾಯಿಕ ವರ್ಣವಾದ ಕಾಷಾಯದಲ್ಲಿ ಅದ್ದಿದ್ದರು. ವಸ್ತ್ರ ಒಣಗಿದ ಮೇಲೆ ಸನ್ಯಾಸದ ಉಡುಪಾಗಿ ಅದನ್ನು ನನಗೆ ಸುತ್ತಿದರು.….
ನಾನು ಶ್ರೀ ಯುಕ್ತೇಶ್ವರರ ಮುಂದೆ ಮಣಿದು ಅವರು ಮೊಟ್ಟ ಮೊದಲ ಬಾರಿಗೆ ನನ್ನ ಹೊಸ ಹೆಸರನ್ನು ಕರೆದುದನ್ನು ಕೇಳಿದಾಗ ನನ್ನ ಹೃದಯ ಕೃತಜ್ಞತೆಯಿಂದ ತುಂಬಿ ಬಂದಿತು. ಬಾಲಕ ಮುಕುಂದನನ್ನು ಒಂದಾನೊಂದು ಕಾಲಕ್ಕೆ ಸನ್ಯಾಸಿ ಯೋಗಾನಂದನಾಗಿ ಪರಿವರ್ತಿತನಾಗಲೆಂದು ಎಷ್ಟೊಂದು ಪ್ರೀತಿಯಿಂದ ಅವಿಶ್ರಾಂತವಾಗಿ ಅವರು ಕಷ್ಟಪಟ್ಟರು. ಸ್ವಾಮಿ ಶಂಕರರನ್ನು ಕುರಿತ (ಶ್ರೀ ಶಂಕರಾಚಾರ್ಯರ) ದೀರ್ಘವಾದ ಸಂಸೃತ ಸ್ತೋತ್ರದಿಂದ ಕೆಲವು ಶ್ಲೋಕಗಳನ್ನು ಉಲ್ಲಾಸದಿಂದ ಹಾಡಿದೆ:
ಮನೋಬುದ್ಧ್ಯಹಂಕಾರ ಚಿತ್ತಾನಿ ನಾಹಂ
(ನ ಚ ಶ್ರೋತಜಿಹ್ವೇ ನ ಚ ಘ್ರಾಣನೇತ್ರೇ) ||
ನ ಚ ವ್ಯೋಮಭೂಮಿರ್ನ ತೇಜೋ ನ ವಾಯುಃ
ಚಿದಾನಂದ ರೂಪಃ ಶಿವೋsಹಂ ಶಿವೋsಹಂ ||
ನ ಮೃತ್ಯುರ್ನ ಶಂಕಾ ನ ಮೇ ಜಾತಿಭೇದಃ
ಪಿತಾ ನೈವ ಮೇ ನೈವ ಮಾತಾ ನ ಜನ್ಮ||
(ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯಃ)
ಚಿದಾನಂದ ರೂಪಃ ಶಿವೋsಹಂ ಶಿವೋsಹಂ ||
ಅಹಂ ನಿರ್ವಿಕಲ್ಪೋ ನಿರಾಕಾರರೂಪೋ
ವಿಭುತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್ ||
ನ ವಾ ಸಂಗತಂ ನೈವ ಮುಕ್ತಿರ್ನ ಬಂಧಃ
ಚಿದಾನಂದ ರೂಪಃ ಶಿವೋsಹಂ ಶಿವೋsಹಂ ||
ಪರಮಹಂಸಜಿಯವರ ಪಾಚೀನ ಯೋಗದ ಧ್ಯಾನವಿಜ್ಞಾನವನ್ನು ವಿಶ್ವದಾದ್ಯಂತ ಪ್ರಚಾರ ಮಾಡಬೇಕೆಂಬ ದೃಢ ಧ್ಯೇಯವು ಅಮೇರಿಕಾದಲ್ಲಿ ಸ್ವಾಮಿ ಶ್ರೇಣಿಯ ಚಾರಿತ್ರಿಕ ವಿಸ್ತರಣೆಯೊಂದಿಗೆ ಸಮಗ್ರವಾಗಿ ಸಂಬಂಧಿಸಿದೆ. ಕ್ರಿಯಾಯೋಗವನ್ನು ಪ್ರಚಾರ ಮಾಡಬೇಕೆಂಬ ಯೋಗಾನಂದರ ಧ್ಯೇಯದ ಮೂಲ ಜಾಡು, ಅವರ ಗುರು ಶ್ರೀ ಯುಕ್ತೇಶ್ವರರು ಮಹಾವತಾರ ಬಾಬಾಜಿಯವರನ್ನು — ಕ್ರಿಯಾಯೋಗ ಪರಂಪರೆಯನ್ನು ಆಧುನಿಕ ಕಾಲದಲ್ಲಿ ಪ್ರಾರಂಭಿಸಿದವರು, ಭೇಟಿಯಾದ ಘಟನೆಯೊಂದಿಗೆ ಮಿಳಿತವಾಗಿದೆ. ಬಾಬಾಜಿರವರು ಮೊದಲು ಲಾಹಿರಿ ಮಹಾಶಯರಿಗೆ — ವಿವಾಹವಾಗಿ ಗೃಹಸ್ಥ ಜೀವನವನ್ನು ನಡೆಸುತ್ತಿದ್ದವರು, ಶತಮಾನಗಳ ಹಿಂದೆಯೇ ನಶಿಸಿ ಹೋಗಿದ್ದ ಕ್ರಿಯಾಯೋಗವನ್ನು ಪುನಃ ಜನಸಾಮಾನ್ಯರಿಗೂ ಬೋಧಿಸಬೇಕೆಂದು ಆದೇಶಿಸಿದರು. ಶ್ರೀ ಯುಕ್ತೇಶ್ವರರೂ ಕೂಡ ತಮ್ಮ ಗುರು ಲಾಹಿರಿ ಮಹಾಶಯರಂತೆ — 1894ಲ್ಲಿ ಅಲಹಾಬಾದ್ ನಲ್ಲಿ ನಡೆದ ಕುಂಭಮೇಳದಲ್ಲಿ ಮಹಾವತಾರ ಬಾಬಾಜಿಯವರನ್ನು ಭೇಟಿಯಾಗುವವರೆಗೂ — ಅವರು ಕೂಡ ಗೃಹಸ್ಥ ಜೀವನವನ್ನು (ನಂತರ ವಿದುರರಾದರು) ನಡೆಸುತ್ತಿದ್ದರು. ಶ್ರೀಯುಕ್ತೇಶ್ವರರು ಆ ಭೇಟಿಯನ್ನು ಹೀಗೆ ವಿವರಿಸುತ್ತಾರೆ: “ಸ್ವಾಗತ ಸ್ವಾಮೀಜಿ” ಎಂದು ಬಾಬಾಜಿಯವರು ವಾತ್ಸಲ್ಯದಿಂದ ಹೇಳಿದರು.
“ಪೂಜ್ಯರೇ, ನಾನು ಸ್ವಾಮಿಯಲ್ಲ.” ಎಂದು ಖಂಡಿತವಾಗಿಯೇ ಹೇಳಿದೆ.
“ದೈವಪ್ರೇರಣೆಯಿಂದ ನಾನು ಯಾರಿಗೆ ಸ್ವಾಮಿ ಎಂಬ ಉಪಾಧಿಯನ್ನು ಕೊಟ್ಟೆನೋ ಅವರದನ್ನು ಎಂದಿಗೂ ತಿರಸ್ಕರಿಸಿಲ್ಲ.” ಎಂದರು. ಅವರು ಸರಳವಾಗಿಯೇ ಹೇಳಿದರೂ ಅವರ ಮಾತಿನಲ್ಲಿ ಗಂಭೀರವಾದ ನಿರ್ಧಾರ ಮೊಳಗುತ್ತಿತ್ತು; ಆಧ್ಯಾತ್ಮಿಕ ಅನುಗ್ರಹದ ಅಲೆಗಳಿಂದ ಆ ಕ್ಷಣವೇ ಆವರಿಸಲ್ಪಟ್ಟೆ.
ಬಾಬಾಜಿ ಹೊಸ ಸ್ವಾಮಿಗೆ ಹೀಗೆ ಹೇಳಿದರು: “ಕೆಲವು ವರ್ಷಗಳ ನಂತರ ನಾನು ಒಬ್ಬ ಶಿಷ್ಯನನ್ನು ನಿನ್ನ ಬಳಿಗೆ ಕಳಿಸಿಕೊಡುತ್ತೇನೆ. ಪಶ್ಚಿಮದಲ್ಲಿ ಯೋಗವನ್ನು ಪ್ರಚಾರ ಮಾಡುವುದಕ್ಕಾಗಿ ನೀನವನಿಗೆ ತರಬೇತಿಯನ್ನು ನೀಡಬೇಕು.” ಹಾಗೆ ಅವರು ಕಳಿಸಿಕೊಟ್ಟ ಶಿಷ್ಯರೇ ಪರಮಹಂಸ ಯೋಗಾನಂದರು. ಇದನ್ನು ಮಹಾವತಾರ ಬಾಬಾಜಿಯವರೇ ಪರಮಹಂಸಜಿಯವರಿಗೆ ಅವರ ವೈಯಕ್ತಿಕ ಭೇಟಿಯ ಸಮಯದಲ್ಲಿ ದೃಢಪಡಿಸಿದರು. ಕ್ರಿಯಾಯೋಗವನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡುವುದಕ್ಕಾಗಿ ಪರಮಹಂಸರು ಭಾರತದ ಪ್ರಾಚೀನ ಸನ್ಯಾಸ ಪರಂಪರೆಯಂತೆ ಒಬ್ಬ ಅಧಿಕೃತ ಸ್ವಾಮೀಜಿಯಿಂದ ತರಬೇತಿ ಪಡೆದಿರಬೇಕೆಂಬುದನ್ನು ಖಚಿತಪಡಿಸಿಕೊಳ್ಳಲು, ಪರಮಹಂಸರನ್ನು ತರಬೇತಿಗಾಗಿ ಶ್ರೀ ಯುಕ್ತೇಶ್ವರರ ಬಳಿಗೆ ಕಳಿಸುವುದಕ್ಕೂ ಮುನ್ನವೇ ಬಾಬಾಜಿಯವರು ಶ್ರೀ ಯುಕ್ತೇಶ್ವರರನ್ನು ಸ್ವಾಮಿಯನ್ನಾಗಿ ಮಾಡಿದರು.
ಪರಮಹಂಸ ಯೋಗಾನಂದರು, ತಮ್ಮ ಪ್ರೀತಿಯ ಶಿಷ್ಯರಾದ ಜೇಮ್ಸ್ ಜೆ. ಲಿನ್ ರವರಿಗೆ ಸನ್ಯಾಸ ದೀಕ್ಷೆಯನ್ನು ನೀಡಿ, ಅವರಿಗೆ ಸನ್ಯಾಸಾಶ್ರಮದ ನೂತನ ಹೆಸರಾಗಿ ರಾಜರ್ಷಿ ಜನಕಾನಂದ ಎಂದು ನಾಮಕರಣ ಮಾಡಿದ ನಂತರ ಆಶೀರ್ವದಿಸುತ್ತಿರುವುದು; ಎಸ್ಆರ್‌ಎಫ್-ವೈಎಸ್ಎಸ್ ಅಂತರಾಷ್ಟ್ರೀಯ ಕೇಂದ್ರ ಕಚೇರಿ, ಲಾಸ್ ಏಂಜಲೀಸ್, ಆಗಸ್ಟ್ 25, 1951 ರಲ್ಲಿ.


ಸ್ವಾಮಿ ಶ್ಯಾಮಾನಂದರಿಗೆ ಶ್ರೀ ದಯಾಮಾತಾರವರು ಸನ್ಯಾಸದ ಕುರುಹಾದ ಕಾಷಾಯ ವಸ್ತ್ರವನ್ನು ಹೊದಿಸುತ್ತಿರುವುದು, 1970ರಲ್ಲಿ ಮದರ್ ಸೆಂಟರ್‌ನಲ್ಲಿ.
1925ಲ್ಲಿ ಲಾಸ್ ಏಂಜಲೀಸ್ ನಲ್ಲಿ ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಅಂತರಾಷ್ಟ್ರೀಯ ಕೇಂದ್ರ ಕಚೇರಿಯನ್ನು ಸ್ಥಾಪಿಸಿದ ನಂತರ, ನಿಧಾನವಾಗಿ ಪರಮಹಂಸ ಯೋಗಾನಂದರು ದೈವಾನ್ವೇಷಣೆಗಾಗಿ ತಮ್ಮ ಜೀವನವನ್ನೇ ಸಂಪೂರ್ಣವಾಗಿ ಮುಡಿಪಾಗಿಡುವ ಆಶಯವನ್ನು ಹೊತ್ತು ಬಂದ ಅನೇಕ ಪುರುಷ ಮತ್ತು ಮಹಿಳೆಯರಿಗೆ ತರಬೇತಿ ನೀಡಲು ಪ್ರಾರಂಭಿಸಿದರು. ಶ್ರೀ ದಯಾಮಾತಾ, ಶ್ರೀ ಜ್ಞಾನಮಾತಾ ಮತ್ತು ಇತರ ಗಾಢವಾದ ನಿಷ್ಠಾವಂತ ಶಿಷ್ಯರ ಆಗಮನದೊಂದಿಗೆ ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾದ ಮೌಂಟ್ ವಾಷಿಂಗ್ಟನ್ ಬೆಟ್ಟದ ಮೇಲಿರುವ ಈ ಆಶ್ರಮವು ಸನ್ಯಾಸಿಗಳಿಂದ ನಿರಂತರವಾಗಿ ಬೆಳೆಯಲಾರಂಭಿಸಿತು. ಸ್ವತಃ ಸನ್ಯಾಸಾಶ್ರಮವನ್ನು ಸ್ವೀಕರಿಸಿದ್ದ ಮತ್ತು ಆದರ್ಶ ಸನ್ಯಾಸಾಶ್ರಮ ಜೀವನಕ್ಕೆ ಉತ್ತಮ ಉದಾಹರಣೆಯಂತಿದ್ದ ಗುರುಗಳು ಶಿಷ್ಯರಿಗೆ ಸನ್ಯಾಸ ಜೀವನದ ಆದರ್ಶಗಳನ್ನು ಬೋಧಿಸಿ, ಪ್ರೋತ್ಸಾಹವನ್ನು ನೀಡಿದರು. ಗುರುಗಳು ತಮ್ಮ ಧ್ಯೇಯ ಸಾಧನೆಯ ಮುಂದಿನ ಜವಾಬ್ದಾರಿಯನ್ನು ವಹಿಸಿದ ಆಪ್ತ ಶಿಷ್ಯರಿಗೆ ತಮ್ಮ ಬೋಧನೆಗಳನ್ನು ಪ್ರಸಾರ ಮಾಡಲು ಮತ್ತು ವಿಶ್ವದಾದ್ಯಂತ ತಾವು ಪ್ರಾರಂಭಿಸಿದ ಆಧ್ಯಾತ್ಮಿಕ ಹಾಗೂ ಮಾನವೀಯ ಕಾರ್ಯಗಳನ್ನು ಮುಂದುವರೆಸಲು ಸ್ಪಷ್ಟ ಮಾರ್ಗದರ್ಶನವನ್ನು ನೀಡಿದರು. ಇಂದಿಗೂ, ಅಷ್ಟೇ ಆಳವಾದ ಆಧ್ಯಾತ್ಮಿಕ ಚಿಂತನೆಗಳು ಮತ್ತು ತಮ್ಮ ಜೀವಿತಾವಧಿಯಲ್ಲಿ ಆಶ್ರಮವಾಸಿಗಳಿಗೆ ಕಲಿಸಿದ ಶಿಸ್ತನ್ನು ಮುಂದಿನ ಪೀಳಿಗೆಯ ವೈಎಸ್ಎಸ್ ಮತ್ತು ಎಸ್ಆರ್‌ಎಫ್ ಸನ್ಯಾಸಿಗಳಿಗೂ ಹಾಗೆಯೇ ವರ್ಗಾಯಿಸಲಾಗುತ್ತಿದೆ.
ಹೀಗೆ, ಪರಮಹಂಸ ಯೋಗಾನಂದರ ಮೂಲಕ, ಭಾರತದ ಪ್ರಾಚೀನ ಸನ್ಯಾಸಾಶ್ರಮದ ಸ್ವಾಮಿ ಶ್ರೇಣಿಯು ಅಮೇರಿಕಾದಲ್ಲಿ ಆಳವಾಗಿ ಮತ್ತು ಶಾಶ್ವತವಾಗಿ ಬೇರೂರಲು ಸಾಧ್ಯವಾಯಿತು. ಎಲ್ಲ ಅರ್ಹ ಪಾಶ್ಚಿಮಾತ್ಯರಿಗೆ ದೀಕ್ಷೆ ನೀಡುವುದರ ಜೊತೆಗೆ ಪರಮಹಂಸಜಿಯವರು ಸಾಂಪ್ರದಾಯಿಕ ಆಚರಣೆಯನ್ನು ಬೇರೆ ರೀತಿಯಲ್ಲಿ ಮಾರ್ಪಡಿಸಿದರು: ಪವಿತ್ರವಾದ ಸನ್ಯಾಸಾಶ್ರಮದ ಶಪಥಗಳನ್ನು ಬೋಧಿಸುವುದರ ಮೂಲಕ ಮತ್ತು ಆಧ್ಯಾತ್ಮಿಕ ಮುಖ್ಯಸ್ಥರ ಹುದ್ದೆಗಳನ್ನು ಕೇವಲ ಪುರುಷರಿಗೆ ಮೀಸಲಾಗಿಡದೆ, ಮಹಿಳೆಯರಿಗೂ ನೀಡಲು ಆದ್ಯತೆ ನೀಡಿದರು. ಇದು, ಆಗಿನ ಕಾಲದಲ್ಲಿ ಅಪರೂಪವೇ ಆಗಿತ್ತು. ವಾಸ್ತವದಲ್ಲಿ, ಸನ್ಯಾಸ ದೀಕ್ಷೆಯನ್ನು ಪಡೆದ ಮೊಟ್ಟ ಮೊದಲ ಎಸ್ಆರ್‌ಎಫ್ ಸನ್ಯಾಸಿ ಶಿಷ್ಯೆಯು ಒಬ್ಬ ಮಹಿಳೆಯೇ ಆಗಿದ್ದರು — ಶ್ರೀ ದಯಾ ಮಾತಾ, ನಂತರ ಅವರೇ ವೈಎಸ್ಎಸ್/ಎಸ್ಆರ್‌ಎಫ್‌ನ ಆಧ್ಯಾತ್ಮಿಕ ಮುಖ್ಯಸ್ಥರಾಗಿ ಅರ್ಧ ಶತಮಾನಕ್ಕೂ ಮೀರಿ ಸೇವೆ ಸಲ್ಲಿಸಿದರು.
ಶ್ರೀ ದಯಮಾತಾರ ಅಧ್ಯಕ್ಷೀಯ ಅವಧಿಯಲ್ಲಿಯೇ ಭಾರತದಲ್ಲಿನ ಸ್ವಾಮಿ ಶ್ರೇಣಿಯ ಹಿರಿಯ ಮುಖ್ಯಸ್ಥರು ಮತ್ತು ಪುರಿಯ ಜಗದ್ಗುರು ಶ್ರೀ ಶಂಕರಾಚಾರ್ಯರಾದ ಪೂಜ್ಯ ಸ್ವಾಮಿ ಭಾರತಿ ಕೃಷ್ಣ ತೀರ್ಥರು ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಆಹ್ವಾನವನ್ನು ಸ್ವೀಕರಿಸಿ, ಮೊದಲ ಬಾರಿಗೆ 1958ಲ್ಲಿ ಅಮೇರಿಕಾಗೆ ಮೂರು ತಿಂಗಳ ಕಾಲ ಭೇಟಿ ನೀಡಿದರು. ಇದು, ಭಾರತದ ಇತಿಹಾಸದಲ್ಲೇ ಪಾಶ್ಚಿಮಾತ್ಯ ದೇಶಗಳಿಗೆ ಪ್ರವಾಸ ಮಾಡಿದ ಶಂಕರಾಚಾರ್ಯರಲ್ಲಿ (ಆದಿ ಶಂಕರಾಚಾರ್ಯರ ಉತ್ತರಾದಿಕಾರಿಗಳು, 8ನೆಯ ಶತಮಾನದಲ್ಲಿ ಸನ್ಯಾಸಾಶ್ರಮದ ಪುನರುತ್ಥಾನ ಮಾಡಿದವರು) ಮೊದಲಿಗರಾಗಿದ್ದಾರೆ. ಶ್ರೀ ಜಗದ್ಗುರು ಶಂಕರಾಚಾರ್ಯರು, ಶ್ರೀ ದಯಾ ಮಾತಾರ ಬಗ್ಗೆ ಅಗಾಧವಾದ ಗೌರವಾದರಗಳನ್ನು ಹೊಂದಿದ್ದರು ಮತ್ತು ಬಾಬಾಜಿಯವರ ಅಣತಿಯಂತೆ ಪರಮಹಂಸ ಯೋಗಾನಂದರು ವೈಎಸ್ಎಸ್/ಎಸ್ಆರ್‌ಎಫ್ ಆಶ್ರಮಗಳ ಮೂಲಕ ಪ್ರಾರಂಭಿಸಿದ ಸನ್ಯಾಸದೀಕ್ಷೆಯನ್ನು ಮತ್ತೂ ವಿಸ್ತರಿಸುವುದಕ್ಕೆ ಔಪಚಾರಿಕ ಒಪ್ಪಿಗೆಯನ್ನು ನೀಡಿ ಆಶೀರ್ವದಿಸಿದರು. ಭಾರತಕ್ಕೆ ಹಿಂತಿರುಗಿದ ನಂತರ, ಅವರು ಸಾರ್ವಜನಿಕವಾಗಿ ಹೀಗೆ ಹೇಳಿಕೆಯನ್ನು ನೀಡಿದರು: “ನಾನು, ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ [ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ] ನಲ್ಲಿ ಪ್ರೀತಿ, ನಿಸ್ವಾರ್ಥ ಸೇವೆ ಮತ್ತು ಆಧ್ಯಾತ್ಮ ಅತ್ಯುನ್ನತ ಮಟ್ಟದಲ್ಲಿರುವುದನ್ನು ನೋಡಿದ್ದೇನೆ. ಈ ಸಂಸ್ಥೆಯ ಪ್ರತಿನಿಧಿಗಳು ಕೇವಲ ಈ ತತ್ವಗಳನ್ನು ಬೋಧಿಸುವುದಷ್ಟಕ್ಕೆ ಸೀಮಿತವಾಗಿರದೆ, ಈ ತತ್ವಗಳಿಗನುಗುಣವಾಗಿ ಅವರು ಬದುಕಿದ್ದಾರೆ”.


ಪರಮಹಂಸ ಯೋಗಾನಂದರ ಕಾರ್ಯಗಳ ಮುಂದುವರಿಕೆ
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸನ್ಯಾಸಿಗಳು ಪರಮಹಂಸಜಿಯವರ ಕಾರ್ಯಗಳನ್ನು ಬೇರೆ ಬೇರೆ ಸ್ತರಗಳಲ್ಲಿ ಸೇವೆ ಸಲ್ಲಿಸುವುದರ ಮೂಲಕ ಮುಂದುವರೆಸಿಕೊಂಡು ಬರುತ್ತಿದ್ದಾರೆ — ಇದು ಭಾರತಾದ್ಯಂತ, ವಾರ್ಷಿಕ ಸಾರ್ವಜನಿಕ ಉಪನ್ಯಾಸಗಳ ಪ್ರವಾಸವನ್ನು ಮತ್ತು ತರಗತಿಗಳನ್ನು ಏರ್ಪಡಿಸುವಿಕೆ, ಸಂಗಮಗಳಲ್ಲಿ ಉಪನ್ಯಾಸಗಳನ್ನು ನೀಡುವುದು, ವಿವಿಧ ಸಂಸ್ಥೆಗಳಲ್ಲಿ ಸಾರ್ವಜನಿಕ ಭಾಷಣಗಳನ್ನು ಏರ್ಪಡಿಸುವಿಕೆ, ಕಛೇರಿಯ ಕೆಲಸಗಳು, ಸಂಸ್ಥೆಯ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳ ಆಡಳಿತ ಕಾರ್ಯಗಳು, ವೈಎಸ್ಎಸ್ ಪುಸ್ತಕಗಳು ಮತ್ತು ಧ್ವನಿಮುದ್ರಿಕೆಗಳ ಪ್ರಕಟಣೆ ಮತ್ತು ಪ್ರಸಾರದ ಮೇಲ್ವಿಚಾರಣೆ ಮತ್ತು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಸಾಧಕರಿಗೆ ಸೂಕ್ತ ಸಮಾಲೋಚನೆ ನೀಡುವುದು — ಇವುಗಳನ್ನು ಒಳಗೊಂಡಿದೆ.









"ಭಗವಂತನೇ ಮೊಟ್ಟಮೊದಲು, ಭಗವಂತನೇ ನಿತ್ಯ, ಭಗವಂತನೇ ಸರ್ವಸ್ವ"
ಶ್ರೀ ಮೃಣಾಲಿನಿ ಮಾತಾರವರಿಂದ
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ ನ ನಾಲ್ಕನೇ ಅಧ್ಯಕ್ಷರಿಂದ (2011-2017) ವೈಎಸ್ಎಸ್/ಎಸ್ಆರ್‌ಎಫ್ ಸನ್ಯಾಸಿಗಳಿಗೆ ನೀಡಿದ ಸೂಚನೆಗಳ ಸಾರಾಂಶ
ಪ್ರಿಯ ಬಂಧುಗಳೇ,
ಕಳೆದ ಕೆಲವು ವರ್ಷಗಳಲ್ಲಿ, ನಮ್ಮ ಗುರುಗಳ ಆಶೀರ್ವಾದಿಂದ, ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ (ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ) ಕ್ಷಿಪ್ರವಾಗಿ ಬೆಳೆದು, ಅವರ ಕಾರ್ಯಗಳು ಆಧುನಿಕ ಯುಗಕ್ಕೂ ವಿಸ್ತರಿಸುತ್ತಿರುವುದನ್ನು ಕಾಣಬಹುದು. ಬಹಳ ವರ್ಷಗಳ ಹಿಂದೆಯೇ ಗುರುಗಳು ನಮ್ಮೊಂದಿಗೆ – ಸನ್ಯಾಸಾಶ್ರಮಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಶಿಷ್ಯರಿಗೆ – ಹೇಳಿದುದನ್ನು ನಾವು ಆಗಾಗ್ಗೆ ನೆನಪಿಸಿಕೊಳ್ಳುತ್ತಿರುತ್ತೇವೆ: “ನಾನು ಈ ಭೌತಿಕ ದೇಹವನ್ನು ತೊರೆದಾಗ, ಈ ಸಂಸ್ಥೆಯೇ ನನ್ನ ದೇಹವಾಗಿರುತ್ತದೆ ಮತ್ತು ನೀವೆಲ್ಲರೂ ಅದರ ಕೈ, ಕಾಲು ಮತ್ತು ಮಾತುಗಳಾಗಿರುತ್ತೀರಿ.” ಈ ಜೀವನದ ಸಾರ್ಥಕತೆಗೆ ಎಂತಹ ಅದ್ಭುತ ಅವಕಾಶ, ಎಂತಹ ಅಪೂರ್ವವಾದ ಮುಕ್ತತಾ ಭಾವ! ಯಾರು ಇದನ್ನು ಹೃತ್ಪೂರ್ವಕವಾಗಿ ಅಪ್ಪಿಕೊಳ್ಳುತ್ತಾರೋ ಅವರೆಲ್ಲರೂ ಗುರುದೇವರ ಒಂದು ಕಾಂತಿಯುತವಾದ ಕಣದಂತೆಯೇ ಆಗುತ್ತಾರೆ; ಸಂಸ್ಥೆಯ ಸಮಗ್ರತೆಗೆ ಪ್ರತಿಯೊಬ್ಬರೂ ಅವಶ್ಯಕ ಕೊಡುಗೆಗಳನ್ನು ನೀಡುವ ಮೂಲಕ, ಗುರುದೇವರ ಈ ಸಂಸ್ಥೆಯು ಅವರ ದೈವೀ ಪ್ರೇಮದ ಸ್ಪೂರ್ತಿಯ ಸೆಲೆಯಾಗಿ ಎಲ್ಲರನ್ನೂ ತಲುಪುತ್ತಾ ಮುಂದುವರಿಯುತ್ತಿದೆ.
ಈ ಪ್ರಪಂಚದಲ್ಲಿ ಆಧ್ಯಾತ್ಮಿಕ ಮೌಲ್ಯಗಳ ಮತ್ತು ನೈತಿಕತೆಯ ಮಟ್ಟ ಕುಸಿಯುತ್ತಿದೆ. ಸನ್ಯಾಸ ಮಾರ್ಗದಲ್ಲಿ ನಡೆಯಲಿಚ್ಚಿಸುವವರು ತಮ್ಮ ಆತ್ಮದ ಆಶಯಗಳಿಗನುಸಾರವಾಗಿ ಮತ್ತು ಸಾಮಾನ್ಯ ಪ್ರಾಪಂಚಿಕ ನಿಯಮಗಳನ್ನು ಮೀರಿ ಜೀವನ ನಡೆಸುವ ಆಯ್ಕೆ ಮಾಡಿಕೊಳ್ಳುತ್ತಾರೆ. ತುಲನಾತ್ಮಕವಾಗಿ, ಕೆಲವೇ ಕೆಲವು ಮಂದಿ ಸನ್ಯಾಸಾಶ್ರಮವನ್ನು ಆರಿಸಿಕೊಳ್ಳುತ್ತರಾದರೂ, ಯಾರು ಆ ಶಿಸ್ತಿನ ಜೀವನಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಾರೋ ಅವರು ಉನ್ನತ ಮೌಲ್ಯಗಳನ್ನು ಸದಾ ತಮ್ಮ ದೃಷ್ಟಿಯಲ್ಲಿರಿಸಿಕೊಳ್ಳುವುದಕ್ಕೆ ಹಂಬಲಿಸುತ್ತಾರೆ. ಭಗವಂತನಿಗಾಗಿಯೇ ಜೀವನವನ್ನು ಮೀಸಲಾಗಿಟ್ಟ ಭಕ್ತರು ಈ ಶುದ್ಧ ಜೀವನದಿಂದ ಹೇಳಲಾಗದ ಯಾವುದೋ ರೀತಿಯ ಸುಂದರ ಅನುಭವವನ್ನೂ, ವಿಶೇಷತೆಯನ್ನೂ ಅನುಭವಿಸುತ್ತಾರೆ. ಜೀವನದ ಸರಳತೆ, ವಿಧೇಯತೆ, ಪರಿಶುದ್ಧತೆ ಮತ್ತು ನಿಷ್ಠೆಯಿಂದಿರುವ ಪ್ರತಿಜ್ಞೆಗಳಿಗೆ ಬದ್ಧರಾಗಿ, ನಿರಂತರ ಧ್ಯಾನ ಮತ್ತು ಸಾಧನೆಯು ಭಕ್ತರಲ್ಲಿ ಗುರುತರವಾದ ಬದಲಾವಣೆಯನ್ನು ತರುತ್ತದೆ. ಅವರ ಈ ಪುಟ್ಟ ಮಾಂಸಲ ದೇಹದ ಆಧ್ಯಾತ್ಮಿಕ ಮಟ್ಟವೂ ಕೂಡ ಗಮನಾರ್ಹವಾಗಿ ಏರುತ್ತದೆ. ಬೇರೆಯವರಿಗೆ ಇದನ್ನು ಗುರುತಿಸಲಾಗದಿದ್ದರೂ, ಆ ಭಕ್ತರ ದಿವ್ಯ ಪ್ರಭೆಯ ಸಾನಿಧ್ಯದಿಂದ ಅವರ ಪ್ರಜ್ಞೆಯು ಉನ್ನತ ಮಟ್ಟಕ್ಕೆ ಏರುವುದನ್ನೂ ಮತ್ತು ಅವರು ಭಗವಂತನ ಬಗ್ಗೆ ಮಾತನಾಡಲು ಪ್ರೇರೇಪಿಸುವುದೆಂಬುದನ್ನು ಒಪ್ಪುತ್ತಾರೆ. ಆದರೆ ವಿನಮ್ರ ಭಕ್ತನು ಇದನ್ನು ತೋರ್ಪಡಿಸಿಕೊಳ್ಳುವುದಿಲ್ಲ ಅಥವಾ ಆತನಿಗೆ ಇದರ ಬಗ್ಗೆ ಗೊತ್ತೇ ಇರುವುದಿಲ್ಲ.
ಅನಂತತೆಯ ದೃಷ್ಟಿಯಿಂದ ನೋಡಿದಾಗ ಯಾವುದೇ ವೃತ್ತಿಯಾಗಲಿ, ಯಶಸ್ಸಾಗಲಿ, ಕೀರ್ತಿಯಾಗಲಿ, ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗಲು ಮುಡಿಪಾಗಿಟ್ಟ ಜೀವನಕ್ಕಿಂತ ಹೆಚ್ಚಿನದಲ್ಲ. ಯಾರು ದೇವರು ಮತ್ತು ಗುರುವಿಗೆ ಶರಣಾಗುತ್ತಾರೋ, ಯಾರು ಹೃತ್ಪೂರ್ವಕವಾಗಿ ಸೇವಾಭಾವವನ್ನು ಹೊಂದಿರುತ್ತಾರೋ ಮತ್ತು ಯಶಸ್ವಿಯಾಗುವರೋ ಅವರು ಮೌನವಾಗಿ ಅವರಿಗೇ ತಿಳಿಯದಂತೆ ಈ ಪ್ರಪಂಚದ ಸಾವಿರಾರು ಜನರಲ್ಲಿ ಬದಲಾವಣೆಯನ್ನು ತರುತ್ತಾರೆ. ದೇವರ ಸನ್ನಿಧಿಯಲ್ಲಿ, ಆತ ಹಿಂತಿರುಗಿ ನೋಡಿ ಹೀಗೆ ಹೇಳಬಹುದು “ಓಹ್, ಆ ಜಗನ್ಮಾತೆ ಮತ್ತು ಗುರುದೇವರು ಈ ಪುಟ್ಟ ಅತ್ಯಲ್ಪ ಜೀವನದಿಂದ ಎಂತಹ ಕಾರ್ಯಗಳನ್ನು ಮಾಡಿಸಿದ್ದಾರೆ!” ಎಂದು. ಗುರುಗಳ ಕಾರ್ಯವು ಇಷ್ಟು ವರ್ಷಗಳಲ್ಲಿ ವೃದ್ಧಿಸುತ್ತಾ ಬರುತ್ತಿರುವುದಕ್ಕೆಅವರ ಆಧ್ಯಾತ್ಮಿಕ ಪರಿವಾರವಾದ — ಆಶ್ರಮವಾಸಿ ಸನ್ಯಾಸಿಗಳು ಮತ್ತು ನಿಷ್ಠಾವಂತ ಗೃಹಸ್ಥ ಅನುಯಾಯಿಗಳು — ಗುರುಗಳ ಬೋಧನೆಗಳಿಗೆ ಮತ್ತು ಚಿಂತನೆಗಳಿಗೆ ಜೀವಂತ ಉದಾಹರಣೆಯಾಗಿ ಬದುಕುತ್ತಿರುವ, ಅದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅನೇಕ ಶಿಷ್ಯರುಗಳೇ ಕಾರಣರಾಗಿದ್ದಾರೆ.
ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್ ನ [ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ] ಉಸಿರು ಮತ್ತು ಹೃದಯವೇ ಗುರುಗಳಾಗಿದ್ದಾರೆ. ಅವರ ಚೇತನವು ಆಶ್ರಮದ ನಮ್ಮ ದಿನನಿತ್ಯದ ಜೀವನದಲ್ಲಿ ಅಚ್ಚೊತ್ತಿದಂತಿದೆ. ಗುರುಗಳ ಸನ್ಯಾಸಿ ಮತ್ತು ಸನ್ಯಾಸಿನಿ ಶಿಷ್ಯರುಗಳು — ಅವರ ನಡೆನುಡಿಯಲ್ಲಿ, ಅವರ ವರ್ತನೆಗಳಲ್ಲಿ, ಅವರ ಆಲೋಚನೆಗಳಲ್ಲಿ, ಅವರ ಸಂಪೂರ್ಣ ಪ್ರಜ್ಞೆಯಲ್ಲಿ, ಅವರು ಯಾವುದೇ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರೂ: “ನಾನು, ನನ್ನ ಗುರುಗಳು ಜೀವಿಸಿದ್ದ ಆಧ್ಯಾತ್ಮಿಕ ನಿಯಮಾವಳಿಗಳ ಪ್ರಕಾರವೇ ಜೀವಿಸಲು ಮತ್ತು ಆ ಆದರ್ಶಗಳಿಗಾಗಿ ನನ್ನ ಜೀವನವನ್ನೇ ಮುಡಿಪಾಗಿಡಲು ನಿರ್ಧರಿಸಿದ್ದೇನೆ. ಅದೇ, ಭಗವಂತನೇ ಮೊದಲು, ಭಗವಂತನೇ ನಿತ್ಯ ಮತ್ತು ಭಗವಂತನೊಬ್ಬನೇ ಸರ್ವಸ್ವ” ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಯಾರು ತಮ್ಮ ಜೀವನದಲ್ಲಿ ಈ ಆದರ್ಶದ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳುವರೋ ಅವರನ್ನು ಗುರೂಜಿಯವರು — ಯಾರು ಬೇರೆಯವರ ಸೇವೆಗಾಗಿ ಸಿದ್ಧರಾಗಿರುವರೋ ಅವರನ್ನು ಸೇವಾಕಾರ್ಯಗಳಿಗಾಗಿ, ಯಾರ ಜೀವನದ ಮೂಲಕ ಭಗವಂತನ ಪ್ರೀತಿಯನ್ನು ವ್ಯಕ್ತಪಡಿಸಬಹುದೋ ಅಂತಹವರನ್ನು, ಯಾರಿಗೆ ಭಗವಂತನ ಅರಿವು ಮತ್ತು ಶ್ರದ್ಧೆ, ಜೀಸಸ್ ನ ಕ್ಷಮಾಗುಣ, ಶ್ರೀಕೃಷ್ಣನ ಜ್ಞಾನ ಮತ್ತು ಇತರ ದೈವೀ ಗುಣಗಳು ಇರುವವೋ ಅವರನ್ನು — ಸದಾ ಆಶೀರ್ವದಿಸುತ್ತಿರುವರು. ಈ ಎಲ್ಲಾ ದೈವೀಗುಣಗಳನ್ನು ಗುರೂಜಿಯವರು ತಮ್ಮ ಜೀವನದಲ್ಲಿ ಬಹಳ ಅದ್ಭುತವಾಗಿ, ಬಹಳ ಸುಂದರವಾಗಿ ಸಾಕ್ಷಾತ್ಕರಿಸಿಕೊಂಡಿದ್ದಾರೆ. ಅವರೇ ಸ್ಥಾಪಿಸಿದ ಈ ಆಶ್ರಮಗಳಲ್ಲಿ, ಕೇವಲ ನಮ್ಮ ಮುಕ್ತಿಗಾಗಿ ಮಾತ್ರವಲ್ಲದೇ ಮನುಕುಲದ ಉನ್ನತಿಗಾಗಿ ಸೇವೆ ಸಲ್ಲಿಸುವ ಅಭೂತಪೂರ್ವ ಅವಕಾಶ ಸಿಕ್ಕಿರುವುದು ಗುರುಗಳ ಆಶೀರ್ವಾದವೇ ಆಗಿದೆ.

ಆಹ್ವಾನ
ಅವಿವಾಹಿತ ಯುವಕರು, ಸಾಂಸಾರಿಕ ಜವಾಬ್ದಾರಿಗಳಿಂದ ಮುಕ್ತರಾದವರು ಮತ್ತು ದೈವಾನ್ವೇಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ಪ್ರಾಮಾಣಿಕ ಆಶಯವನ್ನು ಹೊಂದಿರುವವರು ಮತ್ತು ಸನ್ಯಾಸಾಶ್ರಮದಲ್ಲಿ ಭಗವಂತನ ಸೇವೆ ಮಾಡುತ್ತಾ ಪರಿತ್ಯಕ್ತ ಜೀವನವನ್ನು ನಡೆಸಲು ಇಚ್ಚಿಸುವವರು, ಹೆಚ್ಚಿನ ಮಾಹಿತಿಗಾಗಿ ಯೋಗದಾ ಸತ್ಸಂಗ ಶಾಖಾ ಆಶ್ರಮ, ರಾಂಚಿಯನ್ನು ಸಂಪರ್ಕಿಸಬೇಕಾಗಿ ಕೋರುತ್ತೇವೆ.