ಶ್ರೀ ಮೃಣಾಲಿನಿ ಮಾತಾ – ವೈಎಸ್‌ಎಸ್‌/ಎಸ್‌ಆರ್‌ಎಫ್‌ ನಿರ್ದೇಶಕರ ಮಂಡಳಿಯಿಂದ ಒಂದು ವಿಶೇಷ ಸಂದೇಶ

ಪ್ರೀತಿಪಾತ್ರರೇ,

2011ರಿಂದ ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ಸೆಲ್ಫ್‌-ರಿಯಲೈಝೇಷನ್‌ ಫೆಲೋಷಿಪ್‌ನ ಅಧ್ಯಕ್ಷರು ಹಾಗೂ ಸಂಘಮಾತಾ ಆಗಿದ್ದ ನಮ್ಮ ಪ್ರೀತಿಯ ಶ್ರೀ ಮೃಣಾಲಿನಿ ಮಾತಾಜಿ, ಆಗಸ್ಟ್‌ 3, 2017ರಂದು ಪ್ರಶಾಂತವಾಗಿ ಈ ಭೂಮಿಯಿಂದ ನಿರ್ಗಮಿಸಿದರು. ನಾವು ಅವರನ್ನು ಸದಾ ನೆನಪಿಸಿಕೊಳ್ಳುತ್ತೇವೆ. ಅವರು ಈಗ ಭಗವಂತನ ಪರಂಧಾಮದಲ್ಲಿ ಅನುಭವಿಸುತ್ತಿರುವ ಆನಂದ ಹಾಗೂ ಸ್ವಾತಂತ್ರ್ಯವನ್ನು ಹಾಳುಮಾಡಲು ನಮಗೆ ಇಷ್ಟವಿಲ್ಲವಾದ್ದರಿಂದ ನಾವು ದುಃಖಿಸುವುದಿಲ್ಲ. ಅವರು ನಿಷ್ಠೆಯಿಂದ ಗುರುಗಳ ನಂಬಿಕೆಯನ್ನು ಈಡೇರಿಸಿದ್ದಕ್ಕಾಗಿ, ಆ ಪರಂಧಾಮದಲ್ಲಿ ಗುರುಗಳು ಆಕೆಯನ್ನು ಅಸೀಮ ಸಂತೋಷದಿಂದ ಹಾಗೂ ಆಕೆಗೆ ತಮ್ಮ ದಿವ್ಯ ಪ್ರೇಮ ಹಾಗೂ ಆಶೀರ್ವಾದವನ್ನು ಮಳೆಗರೆಯುತ್ತಾ ಸ್ವಾಗತಿಸಿದ್ದಾರೆ. ಆಕೆ ಗುರುಗಳು ತಿಳಿಸಬಯಸಿದ್ದ ಅವರ ಬೋಧನೆಗಳು ಹಾಗೂ ಮಾರ್ಗದರ್ಶನದ ಅಪ್ಪಟ ಮಾಧ್ಯಮವಾಗಿದ್ದರು. ಆಕೆ ತನ್ನತನವನ್ನು ಬದಿಗಿಟ್ಟು ಕೇವಲ ಭಗವಂತ ಹಾಗೂ ಗುರುವನ್ನು ಸಂತುಷ್ಟಗೊಳಿಸುವ ಜ್ಞಾನ ಹಾಗೂ ವಿನಯವನ್ನು ಹೊಂದಿದ್ದರು ಎಂದೇ ಗುರುಗಳು ತಿಳಿದಿದ್ದರಿಂದ ಆಕೆಯ ಹಿಂದಿನ ಜನ್ಮಗಳ ಆಧ್ಯಾತ್ಮಿಕ ಮುನ್ನಡೆಯನ್ನರಿತು ಗುರುಗಳು ಅವರನ್ನು ತಮ್ಮ ಶಿಷ್ಯೆಯನ್ನಾಗಿ ಸ್ವೀಕರಿಸಿದ್ದರು.

ಗುರುದೇವ ಪರಮಹಂಸ ಯೋಗಾನಂದರಂಥ ಮಹಾನ್‌ ಆತ್ಮಗಳು ಒಂದು ಜಾಗತಿಕ ಉದ್ದೇಶಕ್ಕಾಗಿ ಭೂಮಿಯ ಮೇಲೆ ಅವತರಿಸಿದಾಗ, ಭಗವಂತ ಬಹಳಷ್ಟು ಸಲ ಅಂಥವರ ಕೆಲಸದಲ್ಲಿ ನೆರವಾಗಲು ಅವರ ಹಿಂದಿನ ಜನ್ಮದ ಆಪ್ತ ಶಿಷ್ಯರನ್ನು ಅವರೆಡೆಗೆ ಆಕರ್ಷಿಸುತ್ತಾನೆ. ಮೃಣಾಲಿನಿ ಮಾತಾ ಖಂಡಿತ ಅಂಥವರಲ್ಲಿ ಒಬ್ಬರು. ಅವರು ಕೇವಲ ಹದಿನಾಲ್ಕು ವರ್ಷದವರಾಗಿದ್ದಾಗ, ಗುರುಗಳೊಡನೆಯ ತಮ್ಮ ಮೊದಲ ಭೇಟಿಯಲ್ಲೇ, ಭಗವಂತ ಹಾಗೂ ಮಹಾನ್‌ ಪುರುಷರು, ಗುರುಗಳಿಗೆ ಕ್ರಿಯಾ ಯೋಗದ ಪವಿತ್ರ ವಿಜ್ಞಾನವನ್ನು ಭೂಮಿಯ ಮೇಲೆ ಪ್ರಸರಿಸಲು ಆದೇಶ ಮಾಡಿದ್ದನ್ನು ಪೂರೈಸುವುದರಲ್ಲಿ ಆಕೆ ಒಂದು ವಿಶಿಷ್ಟ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಅವರು ಗುರುತಿಸಿದ್ದರು.

ಈ ಸೌಮ್ಯ, ಸಂಕೋಚ ಸ್ವಭಾವದ ಎಳೆಯ ಬಾಲಕಿಯಲ್ಲಿ, ಅವರು ಬೋಧಿಸುವ, ಭಗವಂತನಿಂದ ತಿಳಿಯಪಡಿಸಿದ ಸತ್ಯಗಳ ಆಳವನ್ನು ಒಳಹೊಕ್ಕು ನೋಡಲು ಹಾಗೂ ಗುರುಗಳ ಪರಿಜ್ಞಾನದ ಸತ್ತ್ವ ಮತ್ತು ನಿಜತ್ವವನ್ನು ಮುದ್ರಣ ರೂಪದಲ್ಲಿ ಪ್ರಸ್ತುತ ಪಡಿಸುವ ಸಾಮರ್ಥ್ಯವಿರುವಂತಹ ಪರಿಶುದ್ಧತೆ ಹಾಗೂ ಆಳವಾದ ಅರಿವನ್ನು ಗುರುಗಳು ಕಂಡಿದ್ದರು. ಆಕೆ ಅವರ ಆದರ್ಶಗಳು ಹಾಗೂ ಮಾರ್ಗದರ್ಶನಕ್ಕೆ ಏಕನಿಷ್ಠೆಯಿಂದಿರುವ ಸಾಮರ್ಥ್ಯವನ್ನು ಹೊಂದಿದ್ದಾಳೆಂದು ಕೂಡ ಅವರು ಅರಿತಿದ್ದರು–ಆಕೆ ಅವರ ಬೋಧನೆಗಳ ಅರ್ಥದಿಂದ ಅಚೀಚೆಗೆ ಹೋಗದೆ ಅದರ ಮೂಲತತ್ತ್ವವನ್ನೇ ಸೆರೆಹಿಡಿಯಬಲ್ಲಳು ಎಂದರಿತು, ತಮ್ಮ ಸ್ಫೂರ್ತಿಯ ಅನರ್ಘ್ಯ ರತ್ನಗಳಿಗೆ ಮೆರುಗು ಕೊಡುವ ಕೆಲಸವನ್ನು ಆಕೆಗೆ ಒಪ್ಪಿಸಬಹುದು ಎಂದು ಗುರುಗಳು ಅರಿತಿದ್ಧಂಥ ಶಿಷ್ಯೆ. ಅವರ ಬರಹಗಳನ್ನು ಪ್ರಕಟಿಸಲು ಸಿದ್ಧಪಡಿಸುವ ಮಹತ್ವಪೂರ್ಣ ಕಾರ್ಯಕ್ಕೆ ಈಕೆಯನ್ನು ತಾರಾ ಮಾತಾರವರ ನಂತರ ಕಾರ್ಯ ನಿರ್ವಹಿಸುವುದಕ್ಕೆ ತಾವೇ ವೈಯಕ್ತಿಕವಾಗಿ ತರಬೇತುಗೊಳಿಸಿದರು. ಮತ್ತು ಆ ಕಾರ್ಯಕ್ಕೆ ಆಕೆ ತಮ್ಮ ತನು-ಮನವನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ಗುರುದೇವರ ಬೋಧನೆಗಳನ್ನು ಅಭ್ಯಾಸ ಮಾಡುವ ನಾವೆಲ್ಲರು, ಹಾಗೂ ಮುಂಬರುವ ಭಕ್ತಾದಿಗಳ ತಲೆಮಾರುಗಳು, ಗುರುಗಳ ದಿವ್ಯ ಜ್ಞಾನದ ಸಂಪತ್ತನ್ನು ನಮಗೆ ನೀಡಿದ ಆಕೆಯ ಗುರುವಿನೊಂದಿಗಿನ ಶುದ್ಧಾಂತಃಕರಣದ ಶ್ರುತಿಗೂಡುವಿಕೆಗಾಗಿ ಮತ್ತು ದಶಕಗಳ ಕಾಲದ ಆಕೆಯ ನಿಸ್ವಾರ್ಥ ಶ್ರಮಕ್ಕಾಗಿ ನಾವು ಆಕೆಗೆ ಚಿರಕಾಲ ಋಣಿಯಾಗಿರಲೇಬೇಕು.

ಗುರುದೇವರ ನಿತ್ಯಪ್ರಜ್ಞೆಯಲ್ಲಿ ಸದಾ ಸ್ಥಿತವಾದ ಅರಿವಿನಲ್ಲಿ, ಮೃಣಾಲಿನಿ ಮಾತಾಜಿಯವರು ಆಶ್ರಮದಲ್ಲಿ ಕಳೆದ ಹಲವಾರು ವರ್ಷಗಳಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಿದರು. ಗುರೂಜಿಯವರ ಬರಹಗಳ ಸಂಪಾದನೆಯ ಇಡೀ ಜೀವಮಾನದ ಜವಾಬ್ದಾರಿಯ ಜೊತೆಗೆ ಆಕೆ ಪಶ್ಚಿಮ ಹಾಗೂ ಭಾರತದಲ್ಲಿ ಗುರುದೇವರ ಕಾರ್ಯದ ಬೆಳವಣಿಗೆಗೆ ಸಹಾಯ ಮಾಡಲು ಶ್ರೀ ದಯಾ ಮಾತಾರವರ ಜೊತೆ ಜೊತೆಯಲ್ಲೇ ಕೆಲಸ ಮಾಡುತ್ತಾ ಹಲವಾರು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಗುರೂಜಿಯವರ ತಾಯ್ನಾಡಿನ ಬಗ್ಗೆ ಆಕೆಯ ಹೃದಯದಲ್ಲಿ ವಿಶೇಷ ಸ್ಥಾನವಿತ್ತು ಹಾಗೂ ಅಲ್ಲಿ ಅವರ ಕೆಲಸವು ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಕಂಡು ಸಂತೋಷಪಡುತ್ತಿದ್ದರು. ದಯಾ ಮಾತಾರವರ ನಿಧನದ ನಂತರ ಅವರು ವೈಎಸ್‌ಎಸ್‌/ಎಸ್‌ಆರ್‌ಎಫ್‌ ಅಧ್ಯಕ್ಷರಾದ ಮೇಲೆ, “ನನಗೆ ಬೇಕಾದುದಲ್ಲ, ಗುರುಗಳಿಗೆ ಏನು ಬೇಕೋ ಅದು,” ಎಂದು ದಯಾ ಮಾತಾಜಿ ಹೇಳುತ್ತಿದ್ದ ಅಂತರಾರ್ಥದಲ್ಲೇ ಅವರ ಸಂಸ್ಥೆಯನ್ನು ಮುನ್ನಡೆಸಿದರು. ಅವರಿಬ್ಬರ ಉದಾಹರಣೆ ಗುರೂಜಿ ಈ ಪವಿತ್ರ ಕಾರ್ಯದ ಪ್ರಭಾರಿಯಾಗಿದ್ದಾರೆ ಎಂಬುದನ್ನು ದೃಢಪಡಿಸಿತು, ಹಾಗೂ ಅದು ಸದಾ ಹಾಗೆಯೇ ಇರುತ್ತದೆ.

ನಮ್ಮನ್ನು ಸ್ಫೂರ್ತಿಗೊಳಿಸಿದ ಹಾಗೂ ಆಧ್ಯಾತ್ಮಿಕವಾಗಿ ನಾವು ಬೆಳೆಯಲು ಸಹಾಯ ಮಾಡಿದ ಜೀವಗಳು ನಮ್ಮ ಆತ್ಮಗಳ ಮೇಲೆ ಒಂದು ಅಚ್ಚಳಿಯದ ಅಂಕಿತವನ್ನು ಹಾಕುತ್ತವೆ. ಭಗವಂತ ಹಾಗೂ ಗುರುಗಳ ಮೇಲಿನ ಅವರ ದೃಢ ನಿಷ್ಠೆಯ ಮೂಲಕ, ಗುರೂಜಿಯವರ ಬರಹಗಳ ಬಗೆಗಿನ ಅವರ ಕಾರ್ಯ, ಹಾಗೂ ಗುರುಗಳ ಆಧ್ಯಾತ್ಮಿಕ ಸಂಸಾರದ ಬಗ್ಗೆ ಅವರಿಗಿದ್ದ ಕಳಕಳಿಯಿಂದಾಗಿ ನಮ್ಮ ಪ್ರೀತಿಯ ಮೃಣಾಲಿನಿ ಮಾತಾ ಎಂದೆಂದೂ ನಮ್ಮ ಹೃದಯಗಳಲ್ಲಿ ಪ್ರತಿಷ್ಠಾಪನೆಗೊಂಡಿರುತ್ತಾರೆ. ನಮ್ಮ ಪ್ರೇಮ, ಕೃತಜ್ಞತೆ ಮತ್ತು ಪ್ರಾರ್ಥನೆಗಳನ್ನು ಆಕೆಗೆ ಸಲ್ಲಿಸಲು ನಾವು ಒಂದಾದಾಗ, ಆಕೆ ಆ ಚಿಂತನೆಗಳನ್ನು ಸ್ವೀಕರಿಸುತ್ತಾರೆ ಮತ್ತು ನಾವು ಅವರನ್ನು ಭಗವಂತನ ಪ್ರಕಾಶ ಹಾಗೂ ಆನಂದದಲ್ಲಿ ಮತ್ತೆ ಸಂಧಿಸುತ್ತೇವೆ ಎಂದು ನಾವು ನಿಸ್ಸಂದೇಹವಾಗಿ ನಂಬಬಹುದು. ಗುರುದೇವರ ಬರಹಗಳಲ್ಲಿನ ಸತ್ಯಗಳು, ನಮ್ಮ ಜೀವನದಲ್ಲಿ ಪರಿಣಾಮಕಾರಿಯಾದ ಮತ್ತು ಪರಿವರ್ತಿಸುವ ಶಕ್ತಿಯಾಗುವವರೆಗೂ, ಉತ್ಸಾಹ ಮತ್ತು ನಿರಂತರ ಪ್ರಯತ್ನದಿಂದ ಅವುಗಳನ್ನು ಅಳವಡಿಸಿಕೊಳ್ಳುವ ನಮ್ಮ ಪ್ರಯತ್ನಗಳೇ ಆಕೆಗೆ ನಮ್ಮ ಶಾಶ್ವತ ಅಂತಿಮ ಕೊಡುಗೆಯಾಗಲಿ. ಗುರೂಜಿಯವರ ಪಾದಗಳ ಬಳಿಯಿರಿಸಿದ ಆ ಕೊಡುಗೆಯೇ, ಆಕೆಯ ಆತ್ಮವನ್ನು ಖಂಡಿತವಾಗಿ ಸ್ಪರ್ಶಿಸುವ ಕೃತಜ್ಞತೆಯ ಅಭಿವ್ಯಕ್ತಿ.

ದಿವ್ಯ ಬಾಂಧವ್ಯದಲ್ಲಿ, ನಿಮ್ಮವನು

ಸ್ವಾಮಿ ಅಚಲಾನಂದ, ಉಪಾಧ್ಯಕ್ಷರು

ವೈಎಸ್‌ಎಸ್‌/ಎಸ್‌ಆರ್‌ಎಫ್‌ ನಿರ್ದೇಶಕರ ಮಂಡಳಿಯ ಪರವಾಗಿ

ಇದನ್ನು ಹಂಚಿಕೊಳ್ಳಿ