ಗೃಹ ಅಧ್ಯಯನಕ್ಕಾಗಿ ಪಾಠಗಳು

ಧ್ಯಾನ ಮತ್ತು ಆಧ್ಯಾತ್ಮಿಕ ಜೀವನವನ್ನು ಕುರಿತ ಪಾಠಗಳ ಸಮಗ್ರ ಸರಣಿ

ದಂಪತಿ ಧ್ಯಾನ ಮಾಡುತ್ತಿರುವುದು

ದಯವಿಟ್ಟು ಗಮನಿಸಿ:

  • ದಯವಿಟ್ಟು ಗಮನಿಸಿ: ಯೋಗದಾ ಸತ್ಸಂಗ ಪಾಠಗಳ ಮೂಲ ಸರಣಿಯು ಪ್ರಸ್ತುತ ಇಂಗ್ಲಿಷ್, ಹಿಂದಿ, ತಮಿಳು, ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಿದೆ.
  • ಪಾಠ ಗಳ ಕನ್ನಡ ಆವೃತ್ತಿಗಾಗಿ ನೊಂದಣಿಯು ಭಾನುವಾರ, ಮಾರ್ಚ್ 22, 2026 ರಂದು ಬೆಳಿಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ) ಪ್ರಾರಂಭವಾಗಲಿದೆ.

ವೈಎಸ್‌ಎಸ್‌ ಪಾಠಗಳಲ್ಲಿ ಏನೇನಿರುತ್ತದೆ?

ನಿಮ್ಮ ಆತ್ಮದ ಅನಂತ ಸಾಮರ್ಥ್ಯವನ್ನು ಆವಿಷ್ಕರಿಸಿ: ಕ್ರಿಯಾ ಯೋಗ ವಿಜ್ಞಾನ

ಶ್ರೀ ಶ್ರೀ ಪರಮಹಂಸ ಯೋಗಾನಂದರ ಬೋಧನೆಗಳ ಮೂಲಕ ಆತ್ಮದ ಶಾಂತಿ, ಆನಂದ ಮತ್ತು ಜ್ಞಾನದ ಬದುಕು-ಬದಲಿಸುವ ಆವಿಷ್ಕಾರದಲ್ಲಿ ನಮ್ಮೊಂದಿಗೆ ಪಯಣಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

ಪರಮಹಂಸ ಯೋಗಾನಂದರ ಬೋಧನೆಗಳ ಅಂತರಾಳದಲ್ಲಿ ಧ್ಯಾನ ತಂತ್ರಗಳ ಪ್ರಬಲ ಕ್ರಮಬದ್ಧತೆ ಇದೆ: ಅದೇ, ಧ್ಯಾನದ ಕ್ರಿಯಾ ಯೋಗ ವಿಜ್ಞಾನ. ಆತ್ಮದ ಈ ಪ್ರಾಚೀನ ವಿಜ್ಞಾನವು ಉನ್ನತ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಮತ್ತು ದಿವ್ಯ ಸಾಕ್ಷಾತ್ಕಾರದ ಆಂತರಿಕ ಆನಂದವನ್ನು ಹೊಂದಲು ಪ್ರಬಲ ವಿಧಾನಗಳನ್ನು ಒದಗಿಸುತ್ತದೆ.

ಕ್ರಿಯಾ ಯೋಗ ವಿಜ್ಞಾನದ ವಾಸ್ತವಿಕ ತಂತ್ರಗಳನ್ನು ಪರಮಹಂಸ ಯೋಗಾನಂದರು ಯೋಗದಾ ಸತ್ಸಂಗ ಪಾಠಗಳಲ್ಲಿ ಕಲಿಸುತ್ತಾರೆ. ಅವರ ಪ್ರಕಟಿತ ಬರಹಗಳಲ್ಲಿ ಪಾಠಗಳು ವಿಶಿಷ್ಟವಾಗಿವೆ, ಏಕೆಂದರೆ ಅವು ಧ್ಯಾನ, ಏಕಾಗ್ರತೆ ಮತ್ತು ಚೈತನ್ಯಗೊಳಿಸುವಿಕೆಯ ಬಗ್ಗೆ ಮತ್ತು ಆಧ್ಯಾತ್ಮಿಕವಾಗಿ ಸಮತೋಲಿತ ಹಾಗೂ ಯಶಸ್ವೀ ಜೀವನವನ್ನು ನಡೆಸುವುದು ಹೇಗೆ ಎಂಬುದರ ಕುರಿತು ಹಂತ-ಹಂತದ ಸೂಚನೆಗಳನ್ನು ಒದಗಿಸುತ್ತವೆ.

ನಿಮ್ಮದೇ ಗತಿಯಲ್ಲಿ ಅಧ್ಯಯನ ಮಾಡಿ, ಅವುಗಳಲ್ಲಿ ಒಂದು ಜೀವಿತಾವಧಿಗೆ ಸಾಲುವಷ್ಟು ಆಯ್ಕೆಗಳಿವೆ.

ನನ್ನ ಏಕಮಾತ್ರ ಉದ್ದೇಶ, ನಿಮ್ಮಲ್ಲಿರುವ ಭಗವಂತನನ್ನು ಜಾಗೃತಗೊಳಿಸುವುದು. ನೀವು ಆಧ್ಯಾತ್ಮಿಕ ಮಾರ್ಗದಲ್ಲಿ ಎಷ್ಟು ದೂರ ಹೋಗಬಯಸುವಿರೋ, ಅದನ್ನು ತೋರಿಸಬಲ್ಲೆ; ಹಾಗೂ ನೀವು ಪಾಠಗಳಲ್ಲಿರುವ ತಂತ್ರಗಳನ್ನು ಅಭ್ಯಾಸ ಮಾಡಿದರೆ ನಿಮ್ಮ ಪ್ರಗತಿಯಲ್ಲಿ ಎಂದಿಗೂ ಜಡತೆಯನ್ನು ಕಾಣುವುದಿಲ್ಲ.

— ಪರಮಹಂಸ ಯೋಗಾನಂದ

ವೈಎಸ್‌ಎಸ್‌ ಪಾಠಗಳು (ಮೂಲ ಸರಣಿ)

ಎಲ್ಲ ವಿದ್ಯಾರ್ಥಿಗಳು ಇಲ್ಲಿಂದ ಪ್ರಾರಂಭಿಸುತ್ತಾರೆ: ಧ್ಯಾನ, ಏಕಾಗ್ರತೆ ಮತ್ತು ಚೈತನ್ಯಗೊಳಿಸುವಿಕೆಯ ವೈಎಸ್‌ಎಸ್‌ ತಂತ್ರಗಳನ್ನು ಮತ್ತು ಸಮತೋಲಿತ ಆಧ್ಯಾತ್ಮಿಕ ಜೀವನದ ಮೂಲಭೂತ ತತ್ವಗಳನ್ನು ಕಲಿಯುವುದು.

ನಿಮ್ಮ ಅಧ್ಯಯನವನ್ನು ಮುಂದುವರೆಸಿ

ಕ್ರಿಯಾ ಯೋಗ ದೀಕ್ಷಾ ಸರಣಿ 

ಕ್ರಿಯಾ ಯೋಗ ತಂತ್ರದಲ್ಲಿ ದೀಕ್ಷೆ ಮತ್ತು ಸೂಚನೆಗಳು ಹಾಗೂ ಪರಮಹಂಸ ಯೋಗಾನಂದರೊಂದಿಗೆ ಗುರು-ಶಿಷ್ಯ ಸಂಬಂಧವನ್ನು ಸ್ಥಾಪಿಸಿಕೊಳ್ಳುವುದು

ಪೂರಕ ಪಾಠಗಳ ಸರಣಿ

ಈ ಪಾಠಗಳು ಮೂಲ ಸರಣಿಯಲ್ಲಿ ಕಲಿಸಿದ ಬದುಕುವುದು-ಹೇಗೆ ತತ್ವಗಳು ಮತ್ತು ಧ್ಯಾನ ತಂತ್ರಗಳ ವಿಸ್ತರಣೆಯಾಗಿರುತ್ತವೆ

ಪಾಠಗಳ ಸರಣಿಯ ಅನುಕ್ರಮ/ಕ್ರಮ

ಉದ್ದೇಶ ಮತ್ತು ಇತಿಹಾಸ

ಪಾಠಗಳ ಉದ್ದೇಶ: ಕ್ರಿಯಾ ಯೋಗ ವಿಜ್ಞಾನವನ್ನು ಕಲಿಸುವುದು

ಪರಮಹಂಸ ಯೋಗಾನಂದರು ತಮ್ಮ ಯೋಗಿಯ ಆತ್ಮಕಥೆಯಲ್ಲಿ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಕಾರ್ಯದ ಹಿಂದಿನ ಪ್ರಬುದ್ಧ ಗುರು ಪರಂಪರೆಯನ್ನು ಪರಿಚಯಿಸಿದ್ದಾರೆ: ಮಹಾವತಾರ ಬಾಬಾಜಿ, ಲಾಹಿರಿ ಮಹಾಶಯ ಮತ್ತು ಸ್ವಾಮಿ ಶ್ರೀ ಯುಕ್ತೇಶ್ವರರು. ಸಂಪೂರ್ಣವಾಗಿ ಭಗವತ್ಸಾಕ್ಷಾತ್ಕಾರ ಹೊಂದಿರುವ ಈ ಗುರುಗಳೆಲ್ಲರು, ಕಳೆದುಹೋಗಿದ್ದ, ಭಗವತ್ಸಾಕ್ಷಾತ್ಕಾರದ ಪ್ರಾಚೀನ ಕ್ರಿಯಾ ಯೋಗ ವಿಜ್ಞಾನವನ್ನು ಪಶ್ಚಿಮಕ್ಕೆ ತಂದು ಪ್ರಪಂಚದಾದ್ಯಂತ ಹರಡಲು ತಮ್ಮನ್ನು ಹೇಗೆ ಆಯ್ಕೆ ಮಾಡಿದರು ಮತ್ತು ಸಿದ್ಧಪಡಿಸಿದರು ಎಂಬುದನ್ನು ಅವರು ವಿವರಿಸುತ್ತಾರೆ.

ಪರಮಹಂಸ ಯೋಗಾನಂದರು ಯೋಗಿಯ ಆತ್ಮಕಥೆಯಲ್ಲಿ ವಿವರಿಸಿದ ಧ್ಯಾನದ ಕ್ರಿಯಾ ಯೋಗ ಮಾರ್ಗದ ವಾಸ್ತವಿಕ ಅಭ್ಯಾಸವನ್ನು ಕೈಗೊಳ್ಳಲು ಬಯಸುವವರಿಗಾಗಿ ಆತ್ಮ-ಸಾಕ್ಷಾತ್ಕಾರದ ಬಗ್ಗೆ ಯೋಗದಾ ಸತ್ಸಂಗ ಪಾಠಗಳಿವೆ. ಅವರು ವಿವರಿಸಿದ್ದಾರೆ:

ಸಾರ್ವಜನಿಕರಿಗೆ ಲಭ್ಯವಿರುವ ಪುಸ್ತಕದಲ್ಲಿ ನಾನು ತಂತ್ರಗಳನ್ನು ನೀಡಲು ಸಾಧ್ಯವಿಲ್ಲ; ಏಕೆಂದರೆ ಅವು ಪವಿತ್ರವಾದುವು, ಹಾಗೂ ಅವುಗಳನ್ನು ಗೌರವದಿಂದ ಮತ್ತು ಗೌಪ್ಯತೆಯಿಂದ ಸ್ವೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಕೆಲವು ಪ್ರಾಚೀನ ಆಧ್ಯಾತ್ಮಿಕ ಆದೇಶಗಳನ್ನು ಮೊದಲು ಅನುಸರಿಸಬೇಕಾಗುತ್ತದೆ ಮತ್ತು ನಂತರ ಸರಿಯಾಗಿ ಆನುಷ್ಠಾನ ಮಾಡಬೇಕಾಗುತ್ತದೆ.”

ಪರಮಹಂಸ ಯೋಗಾನಂದರು ತಮ್ಮ ಬೋಧನೆಗಳನ್ನು ಪ್ರಸಾರ ಮಾಡುವುದಕ್ಕಾಗಿ ಮತ್ತು ತಮ್ಮ ಧ್ಯೇಯದ ನಿರಂತರ ನೆರವೇರಿಕೆಗಾಗಿ ಸ್ಥಾಪಿಸಿದ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್) ನೀಡುವ ಪಾಠಗಳಿಗೆ ಸೇರಿಕೊಂಡರೆ, ಈ ಮಾರ್ಗವನ್ನು ಅನುಸರಿಸಲು ಮತ್ತು ಅವರು ಈ ಜಗತ್ತಿಗೆ ತಂದಂತಹ ಪವಿತ್ರ ಧ್ಯಾನ ತಂತ್ರಗಳನ್ನು ಅಭ್ಯಾಸ ಮಾಡಲು ಬಯಸುವವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಅತ್ಯುತ್ತಮ ಪ್ರಯೋಜನ ದೊರೆಯುವುದು ಖಂಡಿತ.

ಪಾಠಗಳು ಪರಮಹಂಸ ಯೋಗಾನಂದರ ಬೋಧನೆಗಳ ಅಂತಸ್ಸಾರ

ಯಾವ ಬೋಧನೆಗಳನ್ನು ಮುಂಬರುವ ಜಾಗತಿಕ ನಾಗರಿಕತೆಗೆ ಆಧ್ಯಾತ್ಮಿಕ ವಿಶೇಷಾನುಗ್ರಹವಾಗಿ ಜಗತ್ತಿಗೆ ತರಲು ತಾವು ನೇಮಿಸಲ್ಪಟ್ಟಿದ್ದರೋ ಅವುಗಳ ಅಂತಸ್ಸಾರವೇ ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್/ಯೋಗದಾ ಸತ್ಸಂಗ ಪಾಠಗಳು ಎಂದು ಪರಮಹಂಸ ಯೋಗಾನಂದರು ಪರಿಗಣಿಸಿದ್ದರು.

ಸಾರ್ವಜನಿಕರಿಗಾಗಿರುವ ಅವರ ಅನೇಕ ಮೆಚ್ಚುಗೆ ಪಡೆದ ಪುಸ್ತಕಗಳಲ್ಲಿ ಮುದ್ರಿಸಲಾದ ಅವರ ಉಪನ್ಯಾಸಗಳು ಮತ್ತು ಬರಹಗಳಲ್ಲಿ, ಪರಮಹಂಸಜಿ ಆಧ್ಯಾತ್ಮಿಕ ಜೀವನಕ್ಕಾಗಿ ಕಾರ್ಯೋಪಯೋಗಿ ಮಾರ್ಗದರ್ಶನದ ಸಂಪತ್ತನ್ನು ನೀಡುತ್ತಾರೆ – ಬದಲಾಗುತ್ತಿರುವ ಈ ಜಗತ್ತಿನಲ್ಲಿ ನಿರಂತರ ಸವಾಲುಗಳು ಮತ್ತು ಅವಕಾಶಗಳ ನಡುವೆ ಆನಂದದಿಂದ ಮತ್ತು ಯಶಸ್ವಿಯಾಗಿ ಬದುಕುವುದು ಹೇಗೆ ಎಂಬುದರ ಬಗ್ಗೆ. ಆ ಸ್ಫೂರ್ತಿಯನ್ನು ದೈನಂದಿನ ಆಧ್ಯಾತ್ಮಿಕ ಅಭ್ಯಾಸವನ್ನಾಗಿ ಮಾಡಿಕೊಳ್ಳ ಬಯಸುವವರಿಗಾಗಿರುವುದೇ ಯೋಗದಾ ಸತ್ಸಂಗ ಪಾಠಗಳು.

ಪರಮಹಂಸ ಯೋಗಾನಂದರ ಪ್ರಕಟಿತ ಬರಹಗಳಲ್ಲಿ ಪಾಠಗಳು ವಿಶಿಷ್ಟವಾಗಿವೆ, ಏಕೆಂದರೆ ಅವು ಕ್ರಿಯಾ ಯೋಗವೂ ಸೇರಿದಂತೆ, ಅವರು ಕಲಿಸಿರುವ ಧ್ಯಾನ, ಏಕಾಗ್ರತೆ ಮತ್ತು ಚೈತನ್ಯಗೊಳಿಸುವಿಕೆಯ ಬಗ್ಗೆ ಅವರ ಹಂತ-ಹಂತದ ಸೂಚನೆಗಳನ್ನು ಒದಗಿಸುತ್ತವೆ.

ಸರಳವಾದರೂ ಅತ್ಯಂತ ಪರಿಣಾಮಕಾರಿಯಾದ ಈ ಯೋಗ ತಂತ್ರಗಳು ಪ್ರಾಣಶಕ್ತಿ ಮತ್ತು ಪ್ರಜ್ಞೆಯೊಂದಿಗೆ ನೇರವಾಗಿ ಕೆಲಸ ಮಾಡುತ್ತವೆ, ಇದು ನಿಮಗೆ ಶರೀರವನ್ನು ಚೈತನ್ಯದಿಂದ ಮರುಪೂರಣಗೊಳಿಸಲು, ಮನಸ್ಸಿನ ಅಸೀಮ ಶಕ್ತಿಯನ್ನು ಜಾಗೃತಗೊಳಿಸಲು ಮತ್ತು ನಿಮ್ಮ ಜೀವನದಲ್ಲಿ ಭಗವಂತನ ಬಗ್ಗೆ ನಿರಂತರವಾಗಿ ಆಳವಾಗುವ ಅರಿವನ್ನು ಅನುಭವಿಸಲು ಸಾಧ್ಯವಾಗಿಸುತ್ತದೆ – ಇದು ಆಧ್ಯಾತ್ಮಿಕ ಪ್ರಜ್ಞೆಯ ಅತ್ಯುನ್ನತ ಸ್ಥಿತಿಗಳಲ್ಲಿ ಮತ್ತು ಭಗವಂತನೊಂದಿಗಿನ ಸಂಯೋಗದಲ್ಲಿ ಕೊನೆಗೊಳ್ಳುತ್ತದೆ.

ಯೋಗವು ನಿರ್ದಿಷ್ಟ ನಂಬಿಕೆಗಳ ಅನುಸರಣೆಗಿಂತ ಅನುಷ್ಠಾನ ಮತ್ತು ಅನುಭವವನ್ನು ಆಧರಿಸಿರುವುದರಿಂದ, ಎಲ್ಲಾ ಧರ್ಮಗಳ ಅನುಯಾಯಿಗಳು – ಹಾಗೂ ಯಾವುದೇ ಧಾರ್ಮಿಕ ಮಾರ್ಗಕ್ಕೆ ಸೇರಿರದವರೂ- ಪಾಠಗಳ ಮೂಲ ಸರಣಿಯಲ್ಲಿನ ಆಧ್ಯಾತ್ಮಿಕ ಬೋಧನೆಗಳು ಮತ್ತು ಅದರಲ್ಲಿ ಕಲಿಸಲಾದ ತಂತ್ರಗಳಿಂದ ಪ್ರಯೋಜನ ಪಡೆಯಬಹುದು. ನಿಯತವಾಗಿ ಅಭ್ಯಾಸ ಮಾಡಿದಾಗ, ಈ ವಿಧಾನಗಳು ಖಂಡಿತವಾಗಿಯೂ ಆಳವಾದ ಆಧ್ಯಾತ್ಮಿಕ ಅರಿವು ಮತ್ತು ಗ್ರಹಿಕೆಯನ್ನು ತಂದುಕೊಡುತ್ತವೆ.

ಯೋಗದಾ ಸತ್ಸಂಗ ಬೋಧನೆಗಳು ದೇಹ, ಮನಸ್ಸು ಹಾಗೂ ಆತ್ಮದ ಸಾಮರಸ್ಯಕರ ಅಭಿವೃದ್ಧಿಯನ್ನು ನೀಡುತ್ತವೆ. ನಾನು ಪಂಥೀಯ ಧರ್ಮದ ಹೊಸ ಪಂಗಡವನ್ನು ತರಲು ಬಂದಿಲ್ಲ, ಆದರೆ ನಿಮ್ಮ ದೇಹ, ಮನಸ್ಸು ಹಾಗೂ ಆತ್ಮವನ್ನು ಭಗವಂತನ ಅತ್ಯುನ್ನತ ಸಂಪರ್ಕದೊಂದಿಗೆ ನೀವು ಶ್ರುತಿಗೂಡುವಂತೆ ಮಾಡುವಂತಹ ಉತ್ಕೃಷ್ಟ–ತಂತ್ರವನ್ನು ಕೊಡಲು ಬಂದಿದ್ದೇನೆ.

— ಪರಮಹಂಸ ಯೋಗಾನಂದ

ಪಾಠಗಳ ಉಗಮ ಮತ್ತು ವಿಕಸನ

ಭಾರತದಲ್ಲಿ ಕೇವಲ ಯೋಗದಾ ಸತ್ಸಂಗ ಸೊಸೈಟಿಯ ಮೂಲಕ ನೀಡಲಾಗುವ ಪರಮಹಂಸ ಯೋಗಾನಂದರ ಗೃಹ-ಅಧ್ಯಯನದ ಪಾಠಗಳುನ್ನು ಮೂಲತಃ ಗುರುಗಳು ಅಮೆರಿಕದಲ್ಲಿನ ತಮ್ಮ ಐತಿಹಾಸಿಕ ಕಾರ್ಯಾಚರಣೆಯ ಸಮಯದಲ್ಲಿ ಅಭಿವೃದ್ಧಿಪಡಿಸಿದರು. 1920 ಮತ್ತು 30 ರ ದಶಕಗಳಲ್ಲಿ, ಪರಮಹಂಸಜಿ ಅವರು ಅಮೆರಿಕದ ಉದ್ದಗಲಕ್ಕೂ ಇರುವ ಪ್ರಮುಖ ನಗರಗಳಲ್ಲಿ ವೈಎಸ್ಎಸ್ /ಎಸ್ಆರ್‌ಎಫ್ ಬೋಧನೆಗಳ ಕುರಿತು ಸಾರ್ವಜನಿಕ ಉಪನ್ಯಾಸಗಳನ್ನು ನೀಡುತ್ತ ದೇಶದಾದ್ಯಂತ ಪಯಣಿಸಿದರು, ಅವುಗಳಲ್ಲಿ ಹತ್ತಾರು ಸಾವಿರ ಜನರು ಉಪಸ್ಥಿತರಿದ್ದರು.

ಪ್ರತಿಯೊಂದು ನಗರದಲ್ಲಿ ಒಂದೆರಡು ವಾರಗಳ ಸಾರ್ವಜನಿಕ ಉಪನ್ಯಾಸಗಳ ಸರಣಿಯಾದ ಮೇಲೆ, ಆಳವಾದ ಅಧ್ಯಯನ ಹಾಗೂ ಸಾಧನೆಯನ್ನು ಮುಂದುವರಿಸಲು ಬದ್ಧರಾಗಿರಬಯಸುವವರನ್ನು ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್ (ಯೋಗದಾ ಸತ್ಸಂಗ) ಬೋಧನೆಗಳ ಹಾಗೂ ಧ್ಯಾನ ತಂತ್ರಗಳ ಪಾಠಗಳ ತರಗತಿಗಳ ಹೆಚ್ಚುವರಿ ಸರಣಿಗೆ ನೋಂದಾಯಿಸಿಕೊಳ್ಳಲು ಅಹ್ವಾನಿಸುತ್ತಿದ್ದರು, ಅದನ್ನು ಅವರು ಮುಂದಿನ ಕೆಲವು ವಾರಗಳ ಕಾಲ ಪ್ರತಿ ರಾತ್ರಿ ತೆಗೆದುಕೊಳ್ಳುತ್ತಿದ್ದರು. ಬಹಳ ಮೊದಲು, ಪ್ರತಿಯೊಂದು ತರಗತಿಯಲ್ಲೂ ವಿದ್ಯಾರ್ಥಿಗಳಿಗೆ ವಿಷಯದ ಬಗ್ಗೆ ಮುದ್ರಿತ ಸಂಕ್ಷಿಪ್ತ ಸಾರಾಂಶವನ್ನು ನೀಡಲಾಗುತ್ತಿತ್ತು

1934 ರಲ್ಲಿ ಗೃಹ-ಅಧ್ಯಯನಕ್ಕಾಗಿ ಮುದ್ರಿತ ಪಾಠಗಳ ಸಮಗ್ರ ಸಂಕಲನದ ಪ್ರಥಮ ಆವೃತ್ತಿಯನ್ನು ಘೋಷಿಸಿದರು.
ಆ ಸಂದರ್ಭದಲ್ಲಿನ ಅವರ ಮಾತುಗಳು ಈ ಕೆಳಕಂಡಂತಿವೆ:

ಹದಿನಾಲ್ಕು ವರ್ಷಗಳಿಂದ ಹಗಲಿರುಳೂ ನಾನು ವಿದ್ಯಾರ್ಥಿಗಳಿಗೆ, ಅವರು ಮತ್ತೆಂದೂ ನಿದ್ರೆಗೆ ಜಾರುವುದಿಲ್ಲ ಎಂಬ ಭರವಸೆ ನೀಡುವಂತಹ, ಆ ಆಧ್ಯಾತ್ಮಿಕ ಜಾಗೃತಿಯ ನಿರಂತರ ಪ್ರವಾಹವನ್ನು ಹೇಗೆ ನೀಡಬೇಕೆಂದು ಯೋಚಿಸುತ್ತಿದ್ದೇನೆ. ಆದ್ದರಿಂದ ಪಾಠಗಳನ್ನು ನಾನು ವಾರಕ್ಕೊಮ್ಮೆ ಕಳಿಸಲು ಯೋಜಿಸಿದ್ದೇನೆ. ಅವು ಮುಂದಿನ ವಾರ ಆರಂಭವಾಗುತ್ತವೆ ಹಾಗೂ ನಂತರ ಪ್ರತಿ ವಾರ ಬರುತ್ತವೆ. ಅವುಗಳನ್ನು ಆರಂಭಿಸಲು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ‘ನೀವು ವಾರಕ್ಕೊಮ್ಮೆ ಪಾಠಗಳನ್ನು ಏಕೆ ಕೊಡಬಾರದು?’ ಎಂದು ದೇಶದ ಎಲ್ಲ ಭಾಗಗಳಿಂದ ವಿದ್ಯಾರ್ಥಿಗಳು ಕೇಳುತ್ತಿದ್ದಾರೆ. ಕೊನೆಗೂ ನಾನು ಒಂದು ಯೋಜನೆಯನ್ನು ಕಂಡುಕೊಂಡೆ, ಅದು ಸಾವಿರಾರು ಆತ್ಮಗಳನ್ನು ಮುಕ್ತಗೊಳಿಸುವುದೆಂದು ನನಗೆ ತಿಳಿದಿದೆ.”

ಹೀಗೆ ಸೆಲ್ಫ್-ರಿಯಲೈಝೇಷನ್‌ ಫೆಲೋಷಿಪ್‌ ಪಾಠಗಳು ಹುಟ್ಟಿಕೊಂಡವು—ಹಾಗೂ ಸ್ವಲ್ಪ ಸಮಯದ ನಂತರ ಅವುಗಳನ್ನು ಯೋಗದಾ ಸತ್ಸಂಗ ಪಾಠಗಳೆಂದು ಭಾರತದಲ್ಲಿ ಉದ್ಘಾಟಿಸಲಾಯಿತು. ಹಲವಾರು ವರ್ಷಗಳ ಅವಧಿಯಲ್ಲಿ, ಅಂದರೆ 1934 ರಿಂದ ಸುಮಾರು 1938 ರವರೆಗೆ ಈ ಸರಣಿಯನ್ನು ಜೋಡಿಸಲಾಯಿತು. 1935-36 ರಲ್ಲಿ ಪರಮಹಂಸರು ಭಾರತಕ್ಕೆ ಭೇಟಿ ನೀಡಿದಾಗ ಭಾರತದ ಭಕ್ತರಿಗಾಗಿ ಪಾಠಗಳ ವೈಎಸ್‌ಎಸ್‌ ಆವೃತ್ತಿಯನ್ನು ನೀಡಲು ವ್ಯವಸ್ಥೆ ಮಾಡಿದರು. ಅವರ ನಿರ್ದೇಶನದಡಿಯಲ್ಲಿ, ಪಾಠಗಳ ಪರಿಭಾಷೆಯನ್ನು ಸ್ವಲ್ಪ ಮಟ್ಟಿಗೆ ಭಾರತದ ಭಕ್ತರಿಗಾಗಿ ಅಳವಡಿಸಲಾಯಿತು, ಆದರೂ ಬೋಧನೆಗಳು, ಸಾಧನೆ ಹಾಗೂ ಧ್ಯಾನ ತಂತ್ರಗಳು ಒಂದೇ ಅಗಿದ್ದವು. ಸ್ವಲ್ಪಮಟ್ಟಿನ ಸುಧಾರಣೆಗಳು ಹಾಗೂ ಮಾರ್ಪಾಡುಗಳೊಂದಿಗೆ ಈ ಪಾಠಗಳು 2019 ರವರೆಗೆ ಚಾಲ್ತಿಯಲ್ಲಿದ್ದವು.

ಪಾಠಗಳ ಪ್ರಮುಖ ಸುಧಾರಣೆ

ತಮ್ಮ ಜೀವಿತದ ಕೊನೆಯ ವರ್ಷಗಳಲ್ಲಿ ಗುರುಗಳು ಹೊಸ ವಿಷಯಗಳನ್ನು ಬರೆಯುವುದರಲ್ಲಿ ಹಾಗೂ ಹಿಂದೆ ಪ್ರಕಟವಾದ ತಮ್ಮ ಕೃತಿಗಳ ಪುನರ್ವಿಮರ್ಶೆಯಲ್ಲಿ ತಮ್ಮನ್ನು ತೀವ್ರವಾಗಿ ತೊಡಗಿಸಿಕೊಂಡರು. ಇತರ ಯೋಜನೆಗಳ ಮಧ್ಯೆ ಅವರು ಶ್ರೀ ಮೃಣಾಲಿನಿ ಮಾತಾ(ಆಗ ಅವರು ಯುವ ಶಿಷ್ಯೆಯಾಗಿದ್ದರು, ನಂತರ ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್/ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ನಾಲ್ಕನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು)ರೊಂದಿಗೆ ಪಾಠಗಳ ವಿಷಯದಲ್ಲಿ ವೈಯಕ್ತಿಕವಾಗಿ ತೊಡಗಿಸಿಕೊಂಡರು. ಪರಮಹಂಸರು ಆಕೆಯೊಂದಿಗೆ ಪಾಠಗಳ ನಿರೂಪಣೆಯನ್ನು ಪರಿಶೀಲಿಸಿದರು ಹಾಗೂ ಅವರು ಪರಿಹರಿಸಲು ಬಯಸಿದ ಹಲವಾರು ಸಮಸ್ಯೆಗಳು ಮತ್ತು ನ್ಯೂನತೆಗಳನ್ನು ಟಿಪ್ಪಣಿ ಮಾಡಿಕೊಂಡು, ಸಂಪೂರ್ಣ ಪರಿಷ್ಕರಣೆಯನ್ನು ಆಕೆ ಮಾಡಬೇಕೆಂಬ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಪಾಠಗಳನ್ನು ಮೊದಲ ಬಾರಿಗೆ ಸಂಗ್ರಹಿಸಿದಾಗಿನ ನಂತರದ ವರ್ಷಗಳಲ್ಲಿ ಅವರು ಹೊರತಂದ ಅನೇಕ ಬರಹಗಳು ಹಾಗೂ ನೀಡಿದ ಉಪನ್ಯಾಸಗಳಿಂದ ವಿಷಯಗಳನ್ನು ತೆಗೆದುಕೊಳ್ಳಲು ಆಕೆಗೆ ಹೇಳಿದರು. “ಪಾಠಗಳು ನಿನ್ನ ಜೀವಿತಾವಧಿಯ ಕೆಲಸವಾಗಲಿವೆ,” ಎಂದು ಅವರು ಆಕೆಗೆ ಹೇಳಿದರು.

ಆ “ಜೀವಿತಾವಧಿಯ ಕೆಲಸ”ದ ಫಲಿತಾಂಶವೇ ಪ್ರಸ್ತುತ ಸರಣಿ, ಇದು, ಅವರು 2017 ರಲ್ಲಿ ನಿಧನ ಹೊಂದುವ ಸ್ವಲ್ಪ ಸಮಯದ ಮೊದಲು ಪೂರ್ಣಗೊಂಡಿತು—ಅದರಲ್ಲಿ ಅಗಾಧವಾಗಿ ಸುಧಾರಿತವಾದ ಸಂಯೋಜನೆ ಹಾಗೂ 1934 ರ ಮೂಲ ಸಂಕಲನಕ್ಕೆ ಲಭ್ಯವಿರದಿದ್ದ ಪರಮಹಂಸರ ಹೊಸ ವಿಷಯಗಳ ಸಂಪತ್ತು ಇರುತ್ತವೆ. ವೈಎಸ್‌ಎಸ್‌ ಪಾಠಗಳ ಈ ಹೊಸ ಆವೃತ್ತಿಯು ಇದುವರೆಗೆ ನೀಡಲಾದುದರಲ್ಲೇ ಅತ್ಯಂತ ಸಮಗ್ರವಾಗಿದೆ ಹಾಗೂ ಹಿಂದೆಂದೂ ಪ್ರಕಟಿಸಿರದ ಹೆಚ್ಚಿನ ಸ್ಫೂರ್ತಿ ಮತ್ತು ಬೋಧನೆಯನ್ನು ಒಳಗೊಂಡಿದೆ.

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್‌ನ ಪಾಠಗಳ ಹೊಸ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮ

ಜನವರಿ 31, 2019 ರಂದು ಎಸ್‌ಆರ್‌ಎಫ್‌ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸ್ಸೆಲ್ಫ್-ರಿಯಲೈಝೇಷನ್‌ ಫೆಲೋಶಿಪ್‌ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿ ಅವರು ನೇತೃತ್ವವಹಿಸಿದ್ದ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಪಾಠಗಳ ಹೊಸ ಆವೃತ್ತಿಯ ಉದ್ಘಾಟನೆಯ ಆಯ್ದ ಭಾಗಗಳು. ಈ ಕಾರ್ಯಕ್ರಮವನ್ನು ಪ್ರಪಂಚದಾದ್ಯಂತದ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಸದಸ್ಯರು ಮತ್ತು ಸ್ನೇಹಿತರಿಗೆ ನೇರಪ್ರಸಾರ ಮಾಡಲಾಯಿತು. ಸಂಪೂರ್ಣ ಕಾರ್ಯಕ್ರಮದ ವೀಡಿಯೊ ಕೂಡ ಲಭ್ಯವಿದೆ

ಎಸ್‌ಆರ್‌ಎಫ್‌ /ವೈಎಸ್‌ಎಸ್‌ ಆಪ್ — ಅಧ್ಯಯನ, ಧ್ಯಾನ ಮತ್ತು ಸ್ಫೂರ್ತಿಗಾಗಿ ನಿಮ್ಮ ಡಿಜಿಟಲ್ ಆಧ್ಯಾತ್ಮಿಕ ಒಡನಾಡಿ

YSS-SRF-App-Responsive-Devices-July29-2022 (1)

ನಿಮ್ಮ ಆಧ್ಯಾತ್ಮಿಕ ಪಯಣದ ನೆರವಿಗೆ ಡಿಜಿಟಲ್ ಸಂಪನ್ಮೂಲ

ಆಧ್ಯಾತ್ಮಿಕ ಮೇರುಕೃತಿ ಯೋಗಿಯ ಆತ್ಮಕಥೆಯ ಲೇಖಕರಾದ ಶ್ರೀ ಶ್ರೀ ಪರಮಹಂಸ ಯೋಗಾನಂದರ ಬೋಧನೆಗಳ ಮೂಲಕ ಆತ್ಮದ ಶಾಂತಿ, ಆನಂದ ಮತ್ತು ಜ್ಞಾನದ ಬದುಕು-ಬದಲಿಸುವ ಜಾಗೃತಿಯನ್ನು ಅನುಭವಿಸಿ.

ಎಸ್‌ಆರ್‌ಎಫ್‌ /ವೈಎಸ್‌ಎಸ್‌ ಆಪ್ ಎಲ್ಲರಿಗಾಗಿದೆ — ನೀವು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿರಲಿ ಅಥವಾ ದಶಕಗಳಿಂದ ಈ ಮಹಾನ್ ಗುರುವಿನ ಜ್ಞಾನದಲ್ಲಿ ನಿಮ್ಮನ್ನು ತೊಡಗಿಸಿಕೊಂಡಿರಲಿ. ಧ್ಯಾನ, ಕ್ರಿಯಾ ಯೋಗದ ವಿಜ್ಞಾನ ಮತ್ತು ಆಧ್ಯಾತ್ಮಿಕವಾಗಿ ಸಮತೋಲಿತ ಜೀವನವನ್ನು ನಡೆಸುವ ಕಾರ್ಯೋಪಯೋಗಿ ಮಾರ್ಗಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಯಾರಿಗೇ ಆದರೂ ಇದು ಸಲ್ಲುತ್ತದೆ.

ಮುಖ್ಯ ವಿಷಯಗಳು:

  • ಶಾಂತಿ, ಭಯವಿಲ್ಲದೆ ಬದುಕುವುದು, ಬೆಳಕಿನ ರೂಪದಲ್ಲಿ ಭಗವಂತ, ಪ್ರಜ್ಞೆಯ ವಿಸ್ತರಣೆ ಮತ್ತು ಇನ್ನೂ ಹೆಚ್ಚಿನವುಗಳ ಕುರಿತ ಮಾರ್ಗದರ್ಶಿತ ಧ್ಯಾನಗಳು — 15 ರಿಂದ 45 ನಿಮಿಷಗಳವರೆಗಿರುವ ಸರಿಹೊಂದಿಸಬಹುದಾದ (customizable) ಧ್ಯಾನದ ಸಮಯಗಳೊಂದಿಗೆ.
  • ನೇರ ಆನ್‌ಲೈನ್‌ನಲ್ಲಿ ಧ್ಯಾನಗಳಿಗೆ ಉಚಿತ ಪ್ರವೇಶ
  • ವೈಎಸ್‌ಎಸ್‌/ಎಸ್‌ಆರ್‌ಎಫ್‌ ಸುದ್ದಿ ಮತ್ತು ಕಾರ್ಯಕ್ರಮಗಳ ಮಾಹಿತಿ

ವೈಎಸ್‌ಎಸ್‌/ಎಸ್‌ಆರ್‌ಎಫ್‌ ಪಾಠಗಳ ವಿದ್ಯಾರ್ಥಿಗಳಿಗಾಗಿ…

ನಿಮ್ಮ ದೈನಂದಿನ ಜೀವನದಲ್ಲಿ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಕ್ರಿಯಾ ಯೋಗ ಬೋಧನೆಗಳನ್ನು ಅಳವಡಿಸಿಕೊಳ್ಳುವಲ್ಲಿ ನಿಮಗೆ ನೆರವಾಗಲು, ನಿಮ್ಮ ಪಾಠಗಳ ಡಿಜಿಟಲ್ ಆವೃತ್ತಿಗಳ ಜೊತೆಗೆ ಸಮೃದ್ಧ ವೈವಿಧ್ಯಮಯ ಮಲ್ಟಿಮೀಡಿಯಾ ವಿಷಯವನ್ನು ಈ ಆಪ್‌ ಒಳಗೊಂಡಿರುತ್ತದೆ.

ಇವುಗಳನ್ನೂ ಒಳಗೊಂಡಿರುತ್ತದೆ:

  • ಪರಮಹಂಸ ಯೋಗಾನಂದರ ಆಡಿಯೋ ರೆಕಾರ್ಡಿಂಗ್‌ಗಳು
  • ವೈಎಸ್‌ಎಸ್‌/ಎಸ್‌ಆರ್‌ಎಫ್‌ ಸಂನ್ಯಾಸಿಗಳಿಂದ ಮಾರ್ಗದರ್ಶಿತ ಧ್ಯಾನಗಳು ಮತ್ತು ದೃಶ್ಯೀಕರಣಗಳು
  • ವೈಎಸ್‌ಎಸ್‌/ಎಸ್‌ಆರ್‌ಎಫ್‌ ಧ್ಯಾನ ತಂತ್ರಗಳ ತರಗತಿಗಳು
  • ವೈಎಸ್‌ಎಸ್/‌ಎಸ್‌ಆರ್‌ಎಫ್‌ ಚೈತನ್ಯದಾಯಕ ವ್ಯಾಯಾಮಗಳ ಹಂತ-ಹಂತದ ವೀಡಿಯೋ ಸಹಿತ ಸೂಚನೆಗಳು

ನೀವು ವೈಎಸ್‌ಎಸ್/‌ಎಸ್‌ಆರ್‌ಎಫ್‌ ಪಾಠಗಳ ವಿದ್ಯಾರ್ಥಿಯಾಗಿದ್ದರೆ, ದಯವಿಟ್ಟು ಆಪ್‌ನಲ್ಲಿ ಪಾಠಗಳನ್ನು ತೆರೆಯಲು, ಪರಿಶೀಲಿಸಲಾದ ನಿಮ್ಮ ಖಾತೆಯ ಮಾಹಿತಿಯನ್ನು (verified account information) ಬಳಸಿ.

ಎಸ್‌ಆರ್‌ಎಫ್‌/ವೈಎಸ್‌ಎಸ್‌ ಆಪ್‌ ಅನ್ನು ನಾನು ಹೊಂದುವುದು ಹೇಗೆ

  • ಇನ್ನೂ ಪಾಠಗಳ ವಿದ್ಯಾರ್ಥಿ ಆಗಿಲ್ಲವೇ? ಮೊದಲು ವೈಎಸ್‌ಎಸ್‌ ಪಾಠಗಳಿಗೆ ಚಂದಾದಾರರಾಗಿ. ನಂತರ ನಿಮಗೆ ಆಪ್‌ ಅನ್ನು ಡೌನ್‌ಲೋಡ್ ಮಾಡುವುದು ಮತ್ತು ಸೈನ್ ಇನ್ ಮಾಡುವುದು ಹೇಗೆ ಎಂಬುದರ ಕುರಿತ ಸೂಚನೆಗಳನ್ನು ಹೊಂದಿರುವ ಇಮೇಲ್ ದೊರೆಯುತ್ತದೆ.
  • ಪ್ರಸ್ತುತದಲ್ಲಿ ವೈಎಸ್‌ಎಸ್ ಮೂಲ ಪಾಠಗಳಿಗೆ ಚಂದಾದಾರರಾಗಿರುವಿರೆ? ಗೂಗಲ್ ಪ್ಲೇ ಅಥವಾ ಆಪಲ್ ಸ್ಟೋರ್‌ನಿಂದ ಆಪ್‌ ಅನ್ನು ಡೌನ್‌ಲೋಡ್ ಮಾಡಿ. ಲಾಗಿನ್ ಆಗಲು ನಿಮ್ಮ ವೈಎಸ್‌ಎಸ್ ಡಿವೋಟೀ ಪೋರ್ಟಲ್‌ನ ಬಳಕೆದಾರರಹೆಸರು (username) ಮತ್ತು ಪಾಸ್‌ವರ್ಡ್‌ ಬೇಕಾಗುತ್ತದೆ.

ವೈಎಸ್‌ಎಸ್‌ ಪಾಠಗಳ ವಿದ್ಯಾರ್ಥಿಗಳು ಡೆಸ್ಕ್‌ಟಾಪ್ ಆಪ್‌ನಲ್ಲೂ ವೈಎಸ್‌ಎಸ್‌ ಪಾಠಗಳು ಮತ್ತು ಸಹಾಯಕ ವಿಷಯಗಳನ್ನು ವೀಕ್ಷಿಸಬಹುದು:

ಮತ್ತೆ ಮತ್ತೆ ಕೇಳಲಾಗುವ ಪ್ರಶ್ನೆಗಳು

ಅಪ್‌ಗೆ ಸಂಬಂಧಿಸಿದ ಮತ್ತೆ ಮತ್ತೆ ಕೇಳಲಾಗುವ ಪ್ರಶ್ನೆಗಳನ್ನು ಓದಲು ದಯವಿಟ್ಟು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.