
ಪವಿತ್ರ ಕ್ರಿಸ್‌ಮಸ್ ಋತುವಿನ ಬೆಳಕು ಮತ್ತು ಆನಂದಗಳು ಭಗವತ್‌ಪ್ರೇಮದ ನವೀಕೃತ ಅರಿವಿನಿಂದ, ಹಾಗೂ ನಿಮ್ಮ ಜೀವನದಲ್ಲಿ ಮತ್ತು ಜಗತ್ತಿನಲ್ಲಿ ಅದರ ರೂಪಾಂತರಗೊಳಿಸುವ ಮತ್ತು ಸಮನ್ವಯಗೊಳಿಸುವ ಶಕ್ತಿಯಲ್ಲಿರುವ ವಿಶ್ವಾಸದಿಂದ ನಿಮ್ಮ ಹೃದಯವನ್ನು ಉನ್ನತೀಕರಿಸಲಿ. ಪ್ರೀತಿಯ ಪ್ರಭು ಯೇಸು ಉದಾಹರಿಸಿದ ದೈವಿಕ ಗುಣಗಳಿಗೆ ನಮ್ಮ ಹೃದಯವನ್ನು ತೆರೆಯಲು ವಿಶೇಷ ಪ್ರಯತ್ನವನ್ನು ಮಾಡುವ ಮೂಲಕ ಮತ್ತು ವಿಶೇಷವಾಗಿ ನಮ್ಮ ಗುರು ಪರಮಹಂಸ ಯೋಗಾನಂದರು ಒತ್ತಾಯಿಸಿದಂತೆ, ನಮ್ಮ ಪ್ರಜ್ಞೆಯಲ್ಲಿ ಸರ್ವವ್ಯಾಪಿ ಭಗವತ್‌ಪ್ರೇಮ ಮತ್ತು ಬೆಳಕನ್ನು ಸ್ವೀಕರಿಸಲು, ಆಳವಾಗಿ ಧ್ಯಾನಿಸುವ ಮೂಲಕ ಈ ಬಾಹ್ಯ ಹಬ್ಬದ ಸಮಯದಲ್ಲಿ ಆಂತರಿಕ, ಪವಿತ್ರ ಆಯಾಮವನ್ನು ನಾವು ಪ್ರತಿಯೊಬ್ಬರೂ ಸ್ಪಷ್ಟವಾಗಿ ಅನುಭವಿಸಬಹುದು. ಈ ಪವಿತ್ರ ಋತುವಿನಲ್ಲಿ ನಾವು ಈ ಜಗತ್ತಿನಲ್ಲಿ ಎಲ್ಲೇ ಇದ್ದರೂ, ಆ ಪ್ರಯತ್ನದಲ್ಲಿ ನಮ್ಮ ಭಕ್ತಿಯನ್ನು ಒಂದುಗೂಡಿಸುವ ಮೂಲಕ ನಾವು ಕ್ರಿಸ್ಮಸ್‍ನ ನಿಜವಾದ ಅನುಗ್ರಹವನ್ನು ಪೂರ್ಣರೀತಿಯಲ್ಲಿ ಪಡೆಯುತ್ತೇವೆ.
ಯೇಸು ಕ್ರಿಸ್ತ ಮತ್ತು ಇತರ ಮಹಾನ್ ಆತ್ಮಗಳ ಮೂಲಕ, ನಮ್ಮ ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳಲು, ನಮ್ಮ ಹೋರಾಟಗಳಲ್ಲಿ ನಮಗೆ ಸಹಾನುಭೂತಿಯ ಸಹಾಯವನ್ನು ನೀಡಲು ಮತ್ತು ನಮ್ಮ ದಿವ್ಯ ಪರಂಪರೆಯನ್ನು ಮರುಪಡೆಯಲು ಧೈರ್ಯ ಮತ್ತು ಸಂಕಲ್ಪವನ್ನು ಉದಾಹರಣೆಯ ಮೂಲಕ ನಮ್ಮಲ್ಲಿ ಮೂಡಿಸಲು ದೇವರು ಈ ಜಗತ್ತಿನಲ್ಲಿ ಮಾನವನಾಗಿ ಪ್ರಕಟವಾಗುತ್ತಾನೆ. ಗುರೂಜಿ ನಮಗೆ ಹೇಳಿದಂತೆ, “ಕ್ರಿಸ್ಮಸ್ ನ ನಿಜವಾದ ಆಚರಣೆ ಎಂದರೆ, ನಮ್ಮ ಪ್ರಜ್ಞೆಯಲ್ಲಿ ಕ್ರಿಸ್ತ ಪ್ರಜ್ಞೆಯ ಜನನದ ಅರಿವು.” ನೀವು ದುರ್ಬಲ ಮನುಷ್ಯ ಎಂಬ ಕನಸಿನಿಂದ ನಿಮ್ಮ ಆತ್ಮದ ಸಹಜವಾದ ದೈವತ್ವದ ವಾಸ್ತವಕ್ಕೆ ನಿಮ್ಮನ್ನು ಜಾಗೃತಗೊಳಿಸುವಲ್ಲಿ ಈ ಕ್ರಿಸ್ಮಸ್ ನಿಮಗೆ ಹೊಸ ಆರಂಭವಾಗಲು ಸಾಧ್ಯವಿದೆ. ನಿಮಗೆ ಅಡ್ಡಿಯಾಗಿರುವ ಯಾವುದೇ ಸೀಮಿತ ಆಲೋಚನೆಗಳು ಮತ್ತು ರೂಢಿಗತ ಅಭ್ಯಾಸಗಳು ಮಾಯೆಯಿಂದ ನಿಮ್ಮ ಪ್ರಜ್ಞೆಯ ಮೇಲೆ ಹೇರಲಾದ ಭ್ರಮೆಯ ಕನಸುಗಳು. ಕ್ರಿಸ್ತ ಮತ್ತು ನಮ್ಮೆಲ್ಲ ಗುರುಗಳು ತೋರಿಸಿದ ನಮ್ರತೆ, ಪ್ರೀತಿ ಮತ್ತು ದಿವ್ಯ ಸಂಸರ್ಗದ ಪ್ರಜ್ಞೆಯನ್ನು ವಿಸ್ತರಿಸುವ ಮಾರ್ಗವನ್ನು ನೀವು ತಾಳ್ಮೆಯಿಂದ ಮತ್ತು ಎಡೆಬಿಡದೆ ಅನುಸರಿಸುವಾಗ ನಿಮ್ಮ ಇಚ್ಛಾ ಶಕ್ತಿ ಮತ್ತು ದೇವರ ಕೃಪೆಯಿಂದ ಅವು ಕರಗುತ್ತವೆ. ನೀವು ದೇವರಲ್ಲಿ ವಿಶ್ವಾಸವನ್ನು ಇರಿಸಿದರೆ ಹಾಗೂ ನಿಮ್ಮ ಮನಸ್ಸು ಮತ್ತು ಹೃದಯದಿಂದ ಭಯ ಮತ್ತು ಚಿಂತೆಗಳನ್ನು ಬಿಡುಗಡೆ ಮಾಡಿದರೆ, ಶಾಂತತೆ ಮತ್ತು ಕ್ರಿಸ್ತ ಶಾಂತಿಯು ನಿಮ್ಮ ಪ್ರಜ್ಞೆಯಲ್ಲಿ ಹರಿಯುತ್ತದೆ — ಮತ್ತು ದೇವರ ಪೋಷಕ ಶಕ್ತಿ ಮತ್ತು ಸರ್ವ-ಗುಣಕಾರಕ ಬೆಳಕಿನ ಆಂತರಿಕ ಭರವಸೆಯನ್ನು ತರುತ್ತದೆ. ಇತರರಿಗೆ ಪ್ರೀತಿ ಮತ್ತು ದಯೆಯನ್ನು ಹೊರಸೂಸಲು, ಅವರಲ್ಲಿರುವ ಒಳ್ಳೆಯದನ್ನು ನೋಡಲು ಮತ್ತು ಪ್ರೋತ್ಸಾಹಿಸಲು ಹಾಗೂ ಯೇಸುವಿನಂತೆ ನಿಸ್ವಾರ್ಥ ಸೇವೆಯಲ್ಲಿ ಸಂತೋಷವನ್ನು ಕಂಡುಕೊಳ್ಳಲು ನೀವು ಮಾಡುವ ಪ್ರತಿಯೊಂದು ಪ್ರಯತ್ನದಿಂದ ಅನಂತತೆಯೊಂದಿಗಿನ ಆಂತರಿಕ ಸಂತೋಷ ಮತ್ತು ಶ್ರುತಿಗೂಡುವಿಕೆಯನ್ನು ನೀವು ಕಂಡುಕೊಳ್ಳುವಿರಿ, “ಪ್ರತಿಯೊಂದು ಒಳ್ಳೆಯ ಆಲೋಚನೆಯಲ್ಲಿ ಕ್ರಿಸ್ತನ ರಹಸ್ಯ ಮನೆ ಇದೆ,” ಎಂದು ಪರಮಹಂಸಜಿಯವರು ಹೇಳಿದಾಗ, ಅವರು ಇದನ್ನೇ ಉಲ್ಲೇಖಿಸಿದ್ದು.
ನಮ್ಮ ಜೀವನದಲ್ಲಿ ಭಗವಂತನ ದೈವಿಕ ಗುಣಗಳನ್ನು ಪ್ರತಿಬಿಂಬಿಸಲು ನಾವು ಪ್ರಯತ್ನಿಸಿದಾಗ ವಿಶ್ವವ್ಯಾಪಿ ಯೇಸುವು ನಮ್ಮಲ್ಲಿ ವಾಸಿಸುತ್ತಾನೆ. ಆದರೆ ಆ ಅನಂತ ಪ್ರಜ್ಞೆಯ ವಾಸ್ತವತೆಯನ್ನು ಸಂಪೂರ್ಣವಾಗಿ ಅನುಭವಿಸಲು, ನಾವು ನಮ್ಮ ಆತ್ಮದ ಆಳದಲ್ಲಿ, ಮೌನ ಸಂಸರ್ಗದ ಪವಿತ್ರ ಮಂದಿರವನ್ನು ಪ್ರವೇಶಿಸಬೇಕು, ಅಲ್ಲಿ ಅವನ ಪ್ರೀತಿಯ ರೂಪಾಂತರದ ಶಕ್ತಿಯು ನಮ್ಮ ಅಸ್ತಿತ್ವದಲ್ಲಿ ವ್ಯಾಪಿಸುತ್ತಿರುವುದನ್ನು ನಾವು ಅನುಭವಿಸಬಹುದು. ಸ್ವರ್ಗೀಯ ತಂದೆಯೊಂದಿಗಿನ ಆಂತರಿಕ ಸಂಸರ್ಗವೇ ಕ್ರಿಸ್ತನಿಗೆ ತನ್ನ ಧ್ಯೇಯವನ್ನು ಪೂರೈಸಲು ಶಕ್ತಿ ಮತ್ತು ಧೈರ್ಯವನ್ನು ನೀಡಿತು ಮತ್ತು ಎಲ್ಲಾ ಮರ್ತ್ಯ ಮಿತಿಗಳನ್ನು ಮೀರಿದ ಪ್ರೀತಿಯನ್ನು ನೀಡಿತು. ಯಾವ ಪ್ರತಿಯೊಂದು ಆತ್ಮವೂ ಆ ದಿವ್ಯ ಉಪಸ್ಥಿತಿಯನ್ನು ಆಂತರಿಕವಾಗಿ ಅನುಭವಿಸಲು ಪ್ರಾರಂಭಿಸುವುದೋ ಮತ್ತು ಎಲ್ಲದರಲ್ಲೂ ದೇವರನ್ನು ಕಾಣಲು ಪ್ರಾರಂಭಿಸುವುದೋ ಅದು ಕ್ರಿಸ್ತನ ಪ್ರಜ್ಞೆಯ ಮಹಾನ್ ಬೆಳಕಿನ ಒಂದು ಪ್ರಜ್ಞಾಪೂರ್ವಕ ಭಾಗವಾಗುತ್ತದೆ — ಅದರಲ್ಲೇ ಏಸುವೂ ಜೀವಿಸಿದ್ದ, ಆ ಬೆಳಕಿಗೆ ಭಗವತ್‌ಪ್ರೇಮದ ಗ್ರಾಹ್ಯ ಅಪ್ಪುಗೆಗೆ ಹೆಚ್ಚು ಹೆಚ್ಚು ಆತ್ಮಗಳನ್ನು ಸೆಳೆಯುವ ಮೂಲಕ ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ಸಾಮರಸ್ಯ ಮತ್ತು ಸದ್ಭಾವನೆಯನ್ನು ತರುವ ಶಕ್ತಿ ಇದೆ.
ಈ ಕ್ರಿಸ್ಮಸ್‍ನಲ್ಲಿ ದಿವ್ಯ ಪ್ರೇಮದ ಗ್ರಹಿಕೆಯೇ ನಿಮಗೆ ಮತ್ತು ನಿಮ್ಮ ಆತ್ಮೀಯರಿಗೆ ಭಗವಂತನ ಆಶೀರ್ವಾದವಾಗಲಿ.
ಸ್ವಾಮಿ ಚಿದಾನಂದ ಗಿರಿ
ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರು, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್.