ಪರಮಹಂಸ ಯೋಗಾನಂದರ ಆಶ್ರಮಗಳಿಂದ ಜನ್ಮಾಷ್ಟಮಿಯ ಸಂದೇಶ — 2024

8 ಆಗಸ್ಟ್‌, 2024

ಯಾರು [ಅವರಿಗೆ] ನನ್ನನ್ನು ತಮ್ಮವನನ್ನಾಗಿ ಭಾವಿಸುತ್ತಾ ಅವಿರತವಾಗಿ ಉಪಾಸಿಸುತ್ತಾ ನನ್ನ ಮೇಲೆ ಧ್ಯಾನ ಮಾಡುತ್ತಾರೋ, ನಾನು ಅವರ ಕುಂದುಕೊರತೆಗಳನ್ನು ನೀಗುತ್ತೇನೆ ಮತ್ತು ಅವರ ಪ್ರಾಪ್ತಿಯನ್ನು ಚಿರಸ್ಥಾಯಿಯಾಗಿಸುತ್ತೇನೆ.

—ಗಾಡ್‌ ಟಾಕ್ಸ್‌ ವಿತ್‌ ಅರ್ಜುನ: ದಿ ಭಗವದ್ಗೀತಾ (IX:22)

ಪ್ರೀತಿ ಪಾತ್ರರೇ,

ನಮ್ಮ ನಲ್ಮೆಯ ಭಗವಾನ್‌ ಶ್ರೀಕೃಷ್ಣನ ಜನ್ಮೋತ್ಸವವಾದ ಜನ್ಮಾಷ್ಟಮಿಯ ಪವಿತ್ರ ಸಂದರ್ಭದಂದು ನಿಮಗೆಲ್ಲಾ ಪ್ರೇಮಪೂರ್ಣ ಶುಭಾಶಯಗಳು! ದಿವ್ಯ ಪ್ರೇಮದ ಈ ರಾಜಸದೃಶ ಅವತಾರ ಪುರುಷನನ್ನು ನಾವು ನಮ್ಮ ಭಕ್ತಿಯಿಂದ ಮತ್ತು ಆನಂದಮಯ ಸಂಭ್ರಮದಿಂದ ಆಚರಿಸುತ್ತಿರುವಾಗ, ಅವನ ಎಲ್ಲಬಲ್ಲ ಆನಂದದಾಯಕ ಉಪಸ್ಥಿತಿಯ ಪರವಶಗೊಳಿಸುವ ಅರಿವಿನಿಂದ ನಮ್ಮ ಹೃದಯಗಳು ರೋಮಾಂಚನಗೊಳ್ಳಲಿ.

ನಮ್ಮ ಪೂಜ್ಯ ಗುರುಗಳಾದ ಪರಮಹಂಸ ಯೋಗಾನಂದರು ಶ್ರೀ ಕೃಷ್ಣನೊಂದಿಗೆ ಅಂದರೆ ಯಾರ ಜೀವನ ಮತ್ತು ಕಾಲಾತೀತವಾದ ಮಾರ್ಗದರ್ಶನವು ಆತ್ಮ ವಿಮೋಚನೆಗೆ ಯುಗ ಯುಗಗಳಿಂದ ಜೀವಂತ ಸದ್ಗ್ರಂಥಗಳಾಗಿವೆಯೋ ಅವನೊಡನೆ ಒಂದು ಗಾಢವಾದ ವೈಯಕ್ತಿಕ ಬಾಂಧವ್ಯವನ್ನು ಹೊಂದಿದ್ದರು. ಗುರುದೇವರ ಗಾಡ್‌ ಟಾಕ್ಸ್‌ ವಿತ್‌ ಅರ್ಜುನ: ದಿ ಭಗವದ್ಗೀತದಲ್ಲಿ ಅವರು ಶ್ರೀ ಕೃಷ್ಣನನ್ನು ಯೋಗದ ಮಹಾನ್‌ ಗುರು – ಧರ್ಮ ಮತ್ತು ಕ್ರಿಯಾ ಯೋಗದ ನಿತ್ಯ ವಿಜ್ಞಾನದ ಪುನಃಸ್ಥಾಪಕ – ಮತ್ತು ನಮ್ಮ ಸ್ವ-ಆತ್ಮದ ದಿವ್ಯ ಮಿತ್ರನೆಂದು ನಾವು ಪ್ರೀತಿಯಿಂದ ಕಾಣುವೆಡೆಗೆ ನಮ್ಮನ್ನು ಕರೆದೊಯ್ಯುತ್ತಾರೆ. ಗೀತೆಯೊಳಗಿನ ಪ್ರಬುದ್ಧ ಸತ್ಯಗಳು ಇಡೀ ಬ್ರಹ್ಮಾಂಡದ ಜ್ಞಾನವನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳುವಷ್ಟು ವಿಸ್ತೃತವಾಗಿವೆ ಎಂದು ಗುರುಗಳು ನಮಗೆ ತೋರಿಸಿದ್ದಾರೆ; ಆದರೂ ಕೃಷ್ಣನ ಬೋಧನೆಗಳು ಕೋಟ್ಯಂತರ ಜನರಿಗೆ ವೈಯಕ್ತಿಕ ಮಾರ್ಗದರ್ಶನವಾಗಿವೆ. ಅವುಗಳ ಮೂಲಕ ಭಕ್ತಾದಿಗಳು ಭಗವಂತನ ಆಪ್ತ ಸಂಬಂಧ ಮತ್ತು ಪ್ರೇಮಪೂರ್ಣ ರಕ್ಷಣೆಯನ್ನು ಪಡೆದಿದ್ದಾರೆ.

ನಮ್ಮ ದಿನನಿತ್ಯದ ಜೀವನವು, ಮೇಲ್‌ಸ್ತರದ ಆತ್ಮದ ಧಾರ್ಮಿಕ ಸಿದ್ಧಾಂತಗಳು — ಒಳ್ಳೆಯತನ, ದಯಾಪರತೆ, ಋಜುತ್ವ, ಭಗವಂತನೊಂದಿಗೆ ಶ್ರುತಿಗೂಡುವಿಕೆ — ಮತ್ತು ಅಹಂಕಾರ ಹುಟ್ಟಿಸುವ ಲೌಕಿಕ ಆಸೆಗಳು, ಧ್ಯಾನ ಮಾಡಲು ಇಷ್ಟವಿಲ್ಲದಿರುವಿಕೆ ಮತ್ತು ಸಂಕುಚಿತ ದೃಷ್ಟಿಯ ಸ್ವಾರ್ಥಪರತೆಗಳ ನಡುವೆ ಅನಂತ ಆಯ್ಕೆಗಳನ್ನು ಪ್ರಸ್ತುತ ಪಡಿಸುತ್ತದೆ. ನಮ್ಮ ಅಂತರಂಗದಲ್ಲಿ ಶ್ರೀ ಕೃಷ್ಣನ “ಗಂಧರ್ವ ಗಾನ”ವನ್ನು ಕೇಳುತ್ತ, ನಾವು ದುಡುಕಿನ, ಸ್ವಹಿತ ಸಾಧನೆಯ ನಿರ್ಧಾರಗಳನ್ನು ತೆಗೆದಕೊಳ್ಳುವಂತೆ ಪ್ರಚೋದಿಸುವ ಇಂದಿನ ತ್ವರಿತ ಗತಿಯ ಜಗತ್ತಿಗಿಂತ ಉನ್ನತ ವಾಸ್ತವತೆಯಲ್ಲಿ ಬದುಕಬಹುದು. ಭಗವಂತನು, ಅವನ ಉದಾತ್ತ ಅನುಗ್ರಹಗಳಿಂದ ನಾವು ಮಾಡುವ ಪ್ರತಿಯೊಂದು ದಿಟ್ಟ ಹಾಗೂ ನಿಸ್ವಾರ್ಥ ಪ್ರಯತ್ನವನ್ನು ಶಕ್ತಿಯುತಗೊಳಿಸುತ್ತಾ ನಮ್ಮ ದಿನ ನಿತ್ಯದ ಆಂತರಿಕ ಪ್ರಯತ್ನಗಳನ್ನು ಉದಾರಹೃದಯದಿಂದ ಪರಿಗಣಿಸುತ್ತಾನೆ.

ಭಗವಂತನೊಡನೆ ಸಹಭಾಗಿಯಾದಾಗ ವಿವೇಚನಾಯುಕ್ತ ಆಧ್ಯಾತ್ಮಿಕ ಕ್ರಿಯೆಯ ವಿಮೋಚಕ, ಸಂಘಟಿತ ಶಕ್ತಿಯು ಹೆಚ್ಚುತ್ತದೆ. ಕುರುಕ್ಷೇತ್ರದ ಯುದ್ಧಾರಂಭಕ್ಕೆ ಮುನ್ನ ಕೃಷ್ಣ ತನ್ನ ಶಿಷ್ಯ ಅರ್ಜುನನಿಗೆ ತನ್ನ ಇಡೀ ಸೈನ್ಯ ಅಥವಾ ಅವನ ಸಾರಥಿಯಾಗಿ ಕೇವಲ ತನ್ನನ್ನು ಮಾತ್ರ ಆಯ್ಕೆ ಮಾಡಿಕೊಳ್ಳೆಂದು ಹೇಳಿದನು. ಅರ್ಜುನನು ಮಾಡಿದಂತೆ, ಭಗವಂತನನ್ನು — ಮತ್ತು ಅವನ ಶುದ್ಧ ಮಾಧ್ಯಮವಾಗಿ ಜ್ಞಾನೋದಯ ಹೊಂದಿದ ಒಬ್ಬ ಗುರುವನ್ನು ಆಯ್ಕೆ ಮಾಡುವುದೆಂದರೆ, ವಿಜಯವನ್ನು ಆಯ್ಕೆ ಮಾಡಿದಂತೆಯೇ ಎಂದು ನೀವು ತಿಳಿಯುವಂತಾಗಲಿ.

ಜನ್ಮಾಷ್ಟಮಿಯಂದು ಮತ್ತು ಇಡೀ ವರ್ಷ ಭಗವಾನ್‌ ಕೃಷ್ಣನನ್ನು ಗೌರವಿಸುವ ನಿಜವಾದ ಮಾರ್ಗವೆಂದರೆ, ಅವನು ಹೇಳಿರುವ ಜ್ಞಾನ, ಭಕ್ತಿ, ಉಚಿತ ಕ್ರಿಯೆ ಮತ್ತು ಭಗವಂತನೊಡನೆ ಒಂದುಗೂಡಿಸುವ ಧ್ಯಾನದ ರಾಜ ಯೋಗವನ್ನು ಆನಂದದಿಂದ ಅಪ್ಪಿಕೊಳ್ಳುವುದು. ನೀವು ಹಾಗೆ ಮಾಡಿದಾಗ, ನಿಮ್ಮ ಸ್ವ-ಪ್ರಜ್ಞೆಯನ್ನು ಗೆಲುವಿನಿಂದ ಮೇಲೆತ್ತುತ್ತೀರಿ ಮತ್ತು ಜಗತ್ತಿಗೆ ದಿವ್ಯ ಪ್ರೇಮ, ಸೌಂದರ್ಯ ಮತ್ತು ಆನಂದದ ಸಮನ್ವಯಗೊಳಿಸುವ ಪ್ರಭಾವವನ್ನು ಕೂಡ ಪ್ರಸರಿಸುತ್ತೀರಿ. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಇದೇ ನನ್ನ ಪ್ರಾರ್ಥನೆಯಾಗಿದೆ.

ಜೈ ಶ್ರೀ ಕೃಷ್ಣ! ಜೈ ಗುರು!

ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ