“ಇತರರ ಮೇಲೆ ನಮ್ಮ ಪ್ರೀತಿಯನ್ನು ಹೇಗೆ ವೃದ್ಧಿಸಿಕೊಳ್ಳುವುದು” ನಮಿತಾ ಮಾಯಿ ಅವರಿಂದ

6 ಫೆಬ್ರವರಿ, 2026

ಇದು ಲಾಸ್ ಏಂಜಲೀಸ್‌ನಲ್ಲಿ ನಡೆದ 2007ರ ಎಸ್‌ಆರ್‌ಎಫ್‌ ವಿಶ್ವ ಸಮ್ಮೇಳನದ ಸಮಯದಲ್ಲಿ ಎಸ್‌ಆರ್‌ಎಫ್‌ ಸನ್ಯಾಸಿನಿ ನಮಿತಾ ಮಾಯಿ ಅವರು ನೀಡಿದ ಸತ್ಸಂಗದಿಂದ (ಪ್ರಶ್ನೋತ್ತರಗಳಿಂದ) ಆಯ್ದ ಭಾಗವಾಗಿದೆ. ನಮಿತಾ ಮಾಯಿ ಅವರು ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್‌ನ ಸನ್ಯಾಸಿನಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಸುಮಾರು ನಾಲ್ಕು ದಶಕಗಳ ಕಾಲ, ಪ್ರೀತಿಯ ಸಂಘಮಾತಾ ಹಾಗೂ ವೈಎಸ್ಎಸ್/ಎಸ್‌ಆರ್‌ಎಫ್‌ ನ ಮೂರನೇ ಅಧ್ಯಕ್ಷರಾದ ಶ್ರೀ ದಯಾ ಮಾತಾ ಅವರ ಕಾರ್ಯದರ್ಶಿಗಳು ಮತ್ತು ವೈಯಕ್ತಿಕ ಸಹಾಯಕರಲ್ಲಿ ಒಬ್ಬರಾಗಿ ಅವರ ಕಛೇರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಪ್ರಸ್ತುತ ಲಾಸ್ ಏಂಜಲೀಸ್‌ನಲ್ಲಿರುವ ಎಸ್‌ಆರ್‌ಎಫ್‌ ಮದರ್ ಸೆಂಟರ್‌ನಲ್ಲಿ ವಾಸಿಸುತ್ತಿದ್ದಾರೆ. ಈ ಸತ್ಸಂಗದ ಸಂಪೂರ್ಣ ಆಯ್ದ ಭಾಗಗಳು, “ಎಲ್ಲರಲ್ಲಿ ದೇವರನ್ನು ಕಾಣುವುದು” ಎಂಬ ಶೀರ್ಷಿಕೆಯಡಿಯಲ್ಲಿ, ಯೋಗದಾ ಸತ್ಸಂಗ ಪತ್ರಿಕೆಯ 2025ರ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಗಿವೆ.

ಕೇಸರಿ-ಕಮಲ-ರೇಖಾಚಿತ್ರ

ಪ್ರಶ್ನೆ: “ನಾನು ಇತರರನ್ನು ಪ್ರೀತಿಸಲು ಮತ್ತು ಅವರೊಂದಿಗೆ ಹೆಚ್ಚು ಉತ್ತಮ ಸಂಬಂಧ ಬೆಳೆಸಿಕೊಳ್ಳಲು ಬಯಸುತ್ತೇನೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಲು ದಯವಿಟ್ಟು ನನಗೆ ಕೆಲವು ಮಾರ್ಗದರ್ಶನಗಳನ್ನು ನೀಡಬಹುದೇ?”

ಇದು ಅತ್ಯಂತ ವಿಶಾಲವಾದ ವಿಷಯ, ಆದರೆ ಬಹುಶಃ ಅತ್ಯಂತ ಸರಳವಾದ ಉತ್ತರವೆಂದರೆ, ನಾವು ಧ್ಯಾನಿಸುವಾಗ, ಭಗವಂತನ ಆ ಮಾಧುರ್ಯವನ್ನು ಮತ್ತು ಇತರರ ಕಡೆಗೆ ಹರಡುವ ಆ ಪ್ರೀತಿಯನ್ನು ಅನುಭವಿಸತೊಡಗುತ್ತೇವೆ.

ದೇವರು ಎಲ್ಲರಲ್ಲೂ ಇದ್ದಾನೆ, ನಾವೆಲ್ಲರೂ ಆ ದಿವ್ಯ ಪ್ರಿಯತಮನ ಕಿಡಿಗಳಷ್ಟೆ ಎಂದು ಅರಿತುಕೊಳ್ಳಲು ಪ್ರಾರಂಭಿಸಿದಾಗ, ನಾವು ಇತರರನ್ನು ಬೇರೆ ರೀತಿಯಲ್ಲಿ, ಬೇರೆ ದೃಷ್ಟಿಯಿಂದ ನೋಡುತ್ತೇವೆ.

13ನೇ ಶತಮಾನದ ಪರ್ಷಿಯನ್ ಕವಿ ಹಾಫಿಜ್ ಈ ವಿಚಾರವನ್ನು ಬಹಳ ಸುಂದರವಾಗಿ ವ್ಯಕ್ತಪಡಿಸಿದ್ದಾರೆ. ಅವರು ಹೀಗೆ ಬರೆದಿದ್ದಾರೆ, “ದೇವರು ನಿಮ್ಮನ್ನು ಒಂದು ಔತಣಕೂಟಕ್ಕೆ ಆಹ್ವಾನಿಸಿ, ‘ಇಂದು ರಾತ್ರಿ ನೃತ್ಯ ಮಂದಿರದಲ್ಲಿರುವ ಪ್ರತಿಯೊಬ್ಬರೂ ನನ್ನ ವಿಶೇಷ ಅತಿಥಿಗಳು’ ಎಂದು ಹೇಳಿದ್ದರೆ — ನೀವು ಅಲ್ಲಿಗೆ ತಲುಪಿದಾಗ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಿರಿ? ನಿಜಕ್ಕೂ, ನಿಜಕ್ಕೂ, ಹಾಫಿಜ್ ಹೇಳುತ್ತಾರೆ, ಈ ಜಗತ್ತಿನಲ್ಲಿ ದೇವರ ರತ್ನಖಚಿತ ನೃತ್ಯ ಮಂದಿರದಲ್ಲಿ ಇಲ್ಲದವರು ಯಾರೂ ಇಲ್ಲ.”

ಅನೇಕ ವರ್ಷಗಳ ಹಿಂದೆ, ನಾನು ಎಸ್‌ಆರ್‌ಎಫ್‌ ಸದಸ್ಯೆಯಾದ ಸ್ವಲ್ಪ ಸಮಯದ ನಂತರ, ನಾನು ಅಧ್ಯಯನ ಮಾಡಲು ಲಂಡನ್‌ಗೆ ಹೋದೆ. ನಾನು ಲಂಡನ್ ತಲುಪಿದ ತಕ್ಷಣ ಮಾಡಿದ ಮೊದಲ ಕೆಲಸವೆಂದರೆ ಅಲ್ಲಿನ ಎಸ್‌ಆರ್‌ಎಫ್‌ ಧ್ಯಾನ ಮಂಡಳಿಯನ್ನು ಹುಡುಕುವುದಾಗಿತ್ತು.

ನಾನು ಬಂದಾಗ, ನನ್ನಂತೆ ಇಟಲಿಯಿಂದ ಬಂದಿದ್ದ ಇನ್ನೊಬ್ಬ ಮಹಿಳೆಯನ್ನು ನನಗೆ ಪರಿಚಯಿಸಲಾಯಿತು. ಆಕೆ ಬಹಳ ಸುಂದರವಾಗಿದ್ದಳು ಮತ್ತು ಬಹಳ ಸೊಗಸಾಗಿದ್ದಳು. ನಾನು ಅವರಿಗೆ ನಮಸ್ಕರಿಸಿದಾಗ, ಅವರು ಬಹಳಾ ಅಹಂಕಾರದಿಂದ, “ನಾನು ಇಂಥಾ ಇಂಥಾ ಗಣ್ಯಸ್ತ್ರೀ” ಎಂದು ಹೇಳಿದಳು. ಅಷ್ಟೇ ಸಾಕಿತ್ತು. ನನಗೆ ಆಕೆಯ ಬಗ್ಗೆ ತಕ್ಷಣವೇ ಒಂದು ರೀತಿಯ ವಿಮುಖತೆ ಉಂಟಾಯಿತು, ಮತ್ತು ಧ್ಯಾನ ಪ್ರಾರಂಭವಾದಾಗ ನನಗೆ ಬಹಳ ಸಂತೋಷವಾಯಿತು, ಇದರಿಂದಾಗಿ ನಾನು ಅವರೊಂದಿಗೆ ಮತ್ತೆ ಮಾತನಾಡಬೇಕಾಗಿರಲಿಲ್ಲ.

ಸತ್ಸಂಗ ಮುಗಿದ ಕೂಡಲೇ, ನಾನು ಬೇಗನೆ ಶುಭರಾತ್ರಿ ಹೇಳಿ, ನನ್ನ ಹೋಟೆಲ್‌ಗೆ ಹಿಂದಿರುಗಿದೆ. ನನ್ನ ಕೋಣೆಯ ಬಾಗಿಲು ತೆರೆದಾಗ, ನಾನು ದಿಗ್ಭ್ರಮೆಗೊಂಡೆ. ನಮ್ಮ ಗುರುಗಳಾದ ಪರಮಹಂಸ ಯೋಗಾನಂದರ “ಕೊನೆಯ ನಗು” ವಿನ ಚಿತ್ರವನ್ನು ನಾನು ಕಪಾಟಿನ ಮೇಲೆ ಇಟ್ಟಿದ್ದೆ, ಮತ್ತು ಆ ಕ್ಷಣದಲ್ಲಿ ಅವರು ಆ ಗಣ್ಯರಂತೆಯೇ ಕಾಣುತ್ತಿದ್ದರು! ಅವರ ಕೂದಲು ಕೂಡಾ ಬಂಗಾರದ ಬಣ್ಣದ್ದಾಗಿತ್ತು!

ಕೆಲವು ವರ್ಷಗಳ ನಂತರ, ಅವರು ಮೌಂಟ್ ವಾಷಿಂಗ್ಟನ್‌ನಲ್ಲಿರುವ ಎಸ್‌ಆರ್‌ಎಫ್ ಅಂತರರಾಷ್ಟ್ರೀಯ ಮುಖ್ಯ ಕೇಂದ್ರಕ್ಕೆ ಬಂದಾಗ ನಾನು ಆ ಗಣ್ಯಸ್ತ್ರೀ ಅವರನ್ನು ಭೇಟಿಯಾದೆನು — ಆ ಹೊತ್ತಿಗೆ ನಾನು ಆಶ್ರಮದಲ್ಲಿ ಸನ್ಯಾಸಿನಿಯಾಗಿ ವಾಸಿಸುತ್ತಿದ್ದೆನು — ಮತ್ತು ನಾನು ಅವರ ಬಗ್ಗೆ ನಿಜವಾಗಿಯೂ ಕೃತಜ್ಞತೆ ಹಾಗೂ ಪ್ರೀತಿಯನ್ನು ಅನುಭವಿಸಿದೆನು. ಗುರುಗಳು ನನಗೆ ಉತ್ತಮ ಪಾಠವನ್ನು ಕಲಿಸಲು ಅವರನ್ನು ಬಳಸಿಕೊಂಡಿದ್ದರಿಂದ ಮಾತ್ರವಲ್ಲದೆ, ಅವರ ಮುಖ ಮತ್ತು ಹೊಂಬಣ್ಣದ ಕೂದಲನ್ನು ಮೀರಿ ನೋಡಿದಾಗ, ನನಗೆ ಪರಮಹಂಸಜಿಯವರ ಚೇಷ್ಟೆಯ ನೋಟವು ಕಾಣಿಸುತ್ತಿತ್ತು.

ನಾವು ಇತರರನ್ನು ಆತ್ಮ-ಸಾಕ್ಷಾತ್ಕಾರದ ಮಾರ್ಗದಲ್ಲಿ ನಮ್ಮ ಸಹ ಪ್ರಯಾಣಿಕರಾಗಿ ಮತ್ತು ಅನೇಕ ಬಾರಿ ಅರಿವಿಲ್ಲದ ನಮ್ಮ ವೈಯಕ್ತಿಕ ಗುರುಗಳಾಗಿ ಸದಾ ನೋಡಲು ಪ್ರಯತ್ನಿಸಿದರೆ, ನಾವು ಅವರನ್ನು ಇನ್ನಷ್ಟು ಸುಲಭವಾಗಿ ಪ್ರೀತಿಸಲು ಸಾಧ್ಯವಾಗುತ್ತದೆ.

ಹಾಗಾದರೆ ನಾವು ಬೇರೆ ಏನು ಮಾಡಬಹುದು? ಚಿಕ್ಕ ವಿಷಯಗಳಿಂದ ಪ್ರಾರಂಭಿಸಿ. ನಿಮ್ಮ ಬೆಳಗಿನ ಧ್ಯಾನದ ನಂತರ, ಅಂದು ಯಾರಾದರೂ ಒಬ್ಬರಿಗೆ ಸಹಾಯ ಮಾಡಲು ನಿಮ್ಮನ್ನು ಬಳಸಿಕೊಳ್ಳುವಂತೆ ಗುರೂಜಿ ಅವರನ್ನು ಎಂದಾದರೂ ಕೇಳಲು ಪ್ರಯತ್ನಿಸಿದ್ದೀರಾ? ನಿಮ್ಮ ಹೃದಯ ಮತ್ತು ಮನಸ್ಸನ್ನು ತೆರೆದಿಟ್ಟರೆ, ಸಂಭವಿಸಬಹುದಾದ ಅದ್ಭುತ ಸಂಗತಿಗಳನ್ನು ನೋಡಿ ನಿಮಗೆ ಆಶ್ಚರ್ಯವಾಗುತ್ತದೆ. ಅವರು ನಿಮ್ಮ ಮೂಲಕ ಕೆಲಸ ಮಾಡಬಹುದು.

ನಿಮಗೆ ಅತ್ಯಂತ ಪ್ರಿಯವಾದುದನ್ನು ಮತ್ತೊಬ್ಬರ ಸಂತೋಷಕ್ಕಾಗಿ ತ್ಯಾಗಮಾಡಲು ಹಿಂಜರಿಯಬೇಡಿ. ಅದು ನಿಮಗೆ ಅಮೂಲ್ಯವಾದುದಾಗಿದ್ದರೂ ಸಹ, ಅದನ್ನು ನೀಡಲು ಹಿಂಜರಿಯಬೇಡಿ. ಏಕೆಂದರೆ, ವಾಸ್ತವವೇನೆಂದರೆ, ನಾವು (ಮರಣಾನಂತರ) ಸೂಕ್ಷ್ಮಲೋಕವನ್ನು ಪ್ರವೇಶಿಸಿದಾಗ, ನಮ್ಮೊಂದಿಗೆ ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಖಂಡಿತ ಏನೂ ಇಲ್ಲ. ಕೇವಲ ನಮ್ಮ ಆತ್ಮವು ಮಾತ್ರ ಮುಂದುವರಿಯುತ್ತದೆ. ಹಾಗಾಗಿ, ಈಗ ಯಾರನ್ನಾದರೂ ಸಂತೋಷಪಡಿಸಿ ಮತ್ತು ಅದೇ ಸಮಯದಲ್ಲಿ ಸ್ವಲ್ಪ ಪುಣ್ಯವನ್ನು ಏಕೆ ಸಂಪಾದಿಸಬಾರದು?

ಯಾರಾದರೊಬ್ಬರಿಗೆ ಕೃತಜ್ಞತೆ ಅಥವಾ ಕೇವಲ ಮೆಚ್ಚುಗೆಯನ್ನು ವ್ಯಕ್ತಪಡಿಸಲು, ಅಥವಾ ಏಕಾಂಗಿಯಾಗಿರುವವರಿಗೆ ಹೂಗುಚ್ಛವನ್ನು ಕಳುಹಿಸಲು ಹಿಂಜರಿಯಬೇಡಿ. ಇತರರೊಂದಿಗೆ ಸಂಪರ್ಕ ಸಾಧಿಸಿ. ಪ್ರೇಮವನ್ನು ನೀವು ಹಂಚಿಕೊಂಡಾಗ ನಿಮ್ಮೆಡೆಗೆ ಬರುತ್ತದೆ, ಅದನ್ನು ನಿಮ್ಮಲ್ಲೇ ಇಟ್ಟುಕೊಂಡಾಗ ಅಲ್ಲ.

ಮತ್ತು ಇತರರಿಗಾಗಿ ಪ್ರಾರ್ಥಿಸಲು ಹಿಂಜರಿಯಬೇಡಿ. ನಿಮ್ಮ ಧ್ಯಾನದ ಕೊನೆಯಲ್ಲಿ, ನೀವು ಕಾರ್ಯನಿರತರಾಗಿದ್ದಾಗಲೂ ಸಹ, ಕೆಲವು ನಿಮಿಷಗಳನ್ನು ಮೀಸಲಿಟ್ಟು ಇತರರಿಗಾಗಿ ಪ್ರಾರ್ಥಿಸಿ. ಪ್ರಾರ್ಥನೆಯು ಅತ್ಯಂತ ಶಕ್ತಿಶಾಲಿ. ಆ ರೀತಿಯಲ್ಲಿಯೂ ನೀವು ಸಂಪರ್ಕ ಸಾಧಿಸಬಹುದು. ನೀವು ಪರರಿಗಾಗಿ ಪ್ರಾರ್ಥಿಸಿದ್ದೀರಿ ಎಂದು ಅವರಿಗೆ ಎಂದಿಗೂ ತಿಳಿಯದಿರಬಹುದು, ಆದರೆ ಹಾಗೆ ಮಾಡುವುದರಿಂದ ನೀವು ಅವರ ಜೀವನವನ್ನೇ ಬದಲಿಸಬಹುದು.

ತದನಂತರ, ಗುರುದೇವರು ನಿಮ್ಮ ಮೂಲಕ ಏನು ಮಾಡಿದರು ಎಂಬುದನ್ನು ಬಹುಶಃ ನೀವು ಅರಿತಾಗ, ನಿಮಗೆ ಅತೀವ ಸಂತೋಷವಾಗುವುದು — ಇತರರನ್ನು ತಲುಪುವಲ್ಲಿನ ಈ ಅಸಮರ್ಥತೆಯನ್ನು ಮೀರಿ ನಿಲ್ಲಲು ನೀವು ಏನನ್ನಾದರೂ ಮಾಡಿದ್ದೀರಿ ಎಂದು ತಿಳಿದು ನಿಮಗೆ ಬಹಳ ಆನಂದವಾಗುವುದು.

ಒಮ್ಮೆ ಅತ್ಯಂತ ಚಿಂತನಶೀಲ ಮಗುವನ್ನು ಹುಡುಕುವ ಉದ್ದೇಶದಿಂದ ಆಯೋಜಿಸಲಾದ ಸ್ಪರ್ಧೆಯೊಂದರ ಬಗ್ಗೆ ನಾನು ಓದಿದ್ದೆ. ಆ ಸ್ಪರ್ಧೆಯ ವಿಜೇತನು ನಾಲ್ಕು ವರ್ಷದ ಪುಟ್ಟ ಬಾಲಕನಾಗಿದ್ದನು. ಅವನ ಪಕ್ಕದ ಮನೆಯ ವೃದ್ಧನು ಇತ್ತೀಚೆಗೆ ತನ್ನ ಪತ್ನಿಯನ್ನು ಕಳೆದುಕೊಂಡಿದ್ದನು. ಒಂದು ದಿನ ಆ ಪುಟ್ಟ ಬಾಲಕನು ಆ ವೃದ್ಧರು ತಮ್ಮ ಮನೆಯ ಅಂಗಳದಲ್ಲಿ ಕುಳಿತು ಅಳುತ್ತಿರುವುದನ್ನು ನೋಡಿದನು. ತಕ್ಷಣವೇ ಅವನು ಅವರ ಬಳಿಗೆ ಹೋಗಿ ಅವರ ತೊಡೆಯ ಮೇಲೆ ಹತ್ತಿ ಕುಳಿತನು.

ಅನಂತರದಲ್ಲಿ, ಅವನ ತಾಯಿ ಆ ಹುಡುಗನನ್ನು ಕೇಳಿದಳು, “ಕಂದಾ, ನೀನು ಆ ವೃದ್ಧರಿಗೆ ಏನು ಹೇಳಿದೆ?” ಅದಕ್ಕೆ ಆತ ಹೇಳಿದನು, “ಏನೂ ಇಲ್ಲ, ನಾನು ಅವರಿಗೆ ಅಳಲು ಸಹಾಯ ಮಾಡಿದೆ ಅಷ್ಟೇ.”

ಸಾಮಾನ್ಯವಾಗಿ, ಜನರ ಹೃದಯಗಳನ್ನು ಸ್ಪರ್ಶಿಸುವಂತಹವು ದೊಡ್ಡ ಕಾರ್ಯಗಳಲ್ಲ. ಅವು ನಾವು ಪ್ರತಿದಿನ ಮಾಡಬಹುದಾದ ಚಿಕ್ಕ ಪುಟ್ಟ ಸಂಗತಿಗಳು. ಆದ್ದರಿಂದ, ಇತರರನ್ನು ಪ್ರೀತಿಸಲು ಅನುಕೂಲವಾಗುವಂತೆ, ದೇವರು ಮತ್ತು ಗುರುಗಳು ತಮ್ಮ ಪ್ರೀತಿಯನ್ನು ನಿಮಗೆ ನೀಡಬೇಕೆಂದು ಬೇಡಿರಿ. ಆಗ ನಿಮ್ಮ ಹೃದಯವು ತೆರೆದುಕೊಳ್ಳುತ್ತದೆ — ಮತ್ತು ನೀವು ಅದೇ ಪ್ರೀತಿಯನ್ನು ಎಲ್ಲರಿಗೂ ನೀಡಲು, ಹಾಗೂ ಇತರರನ್ನು ಹೆಚ್ಚು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ.

ಕೇಸರಿ-ಕಮಲ-ರೇಖಾಚಿತ್ರ

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಷನ್ ಫೆಲೋಶಿಪ್ ಜಾಗತಿಕ ಪ್ರಾರ್ಥನಾ ಸಮೂಹದಲ್ಲಿ ಭಾಗವಹಿಸುವ ಮೂಲಕ, ಪ್ರಾರ್ಥನೆಯ ಸಕ್ರಿಯ ಶಕ್ತಿಯಿಂದ — ನಮ್ಮ ಪ್ರತಿಯೊಬ್ಬರೊಳಗಿರುವ ದೇವರ ಅನಂತ ಶಕ್ತಿಯಿಂದ ಇತರರಿಗೆ ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.

ಇದನ್ನು ಹಂಚಿಕೊಳ್ಳಿ