ಪ್ರಿಯ ಬಂಧುಗಳೇ,
ಗುರುದೇವ ಪರಮಹಂಸ ಯೋಗಾನಂದರ ಆಶ್ರಮಗಳಿಂದ, ನಾವೆಲ್ಲರೂ ನಿಮಗೆ ಹಾಗೂ ಅವರ ವಿಶ್ವದ ಆಧ್ಯಾತ್ಮಿಕ ಕುಟುಂಬದ ಎಲ್ಲಾ ಪ್ರೀತಿಯ ಸ್ನೇಹಿತರಿಗೂ ಹೊಸವರ್ಷವು ಸಂತೋಷಕರವೂ ಹಾಗೂ ತೃಪ್ತಿದಾಯಕವೂ ಆಗಿರಲೆಂದು ಹಾರೈಸುತ್ತೇವೆ. ಈ ಹೊಸ ಆರಂಭದ ಸಮಯದಲ್ಲಿ ನಾವು ವಿಶೇಷವಾಗಿ ನಿಮಗಾಗಿ, ನಿಮ್ಮ ವಿಶ್ವಾಸ ಹಾಗೂ ದೃಢ ಸಂಕಲ್ಪದಿಂದ ಹಾಗೂ ಭಗವಂತನ ಅನುಗ್ರಹದಿಂದ ನೀವು ಅತ್ಯಂತ ಕಾಳಜಿಯಿಂದ ಪೋಷಿಸಿಕೊಂಡು ಬಂದಿರುವ ನಿಮ್ಮ ಗುರಿಯನ್ನು ಸಾಧಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇವೆ. ನೀವು ಈ ರಜಾ ದಿನಗಳಲ್ಲಿ ಮತ್ತು ವರ್ಷದುದ್ದಕ್ಕೂ ನಮಗಾಗಿ ಕಳುಹಿಸಿರುವ ಶುಭಾಶಯದ ಪತ್ರಗಳಿಗಾಗಿ, ಸಂದೇಶಗಳಿಗಾಗಿ ಹಾಗೂ ಉಡುಗೊರೆಗಳಿಗಾಗಿ ನಮ್ಮ ಧನ್ಯವಾದಗಳನ್ನರ್ಪಿಸುತ್ತಿದ್ದೇವೆ. ನಿಮ್ಮ ಸ್ನೇಹ ಹಾಗೂ ಬೆಂಬಲವು, ಎಲ್ಲಾ ಸನ್ಯಾಸಿ ಹಾಗೂ ಸನ್ಯಾಸಿನಿಯರಂತೆಯೇ, ನನಗೂ ಕೂಡ ಅಮೂಲ್ಯವಾದದ್ದು ಮತ್ತು ಗುರುಗಳ ಆದರ್ಶಗಳನ್ನು ನಿಮ್ಮ ಜೀವನದಲ್ಲಿ ಅನೇಕ ರೀತಿಯಲ್ಲಿ ವ್ಯಕ್ತಪಡಿಸುತ್ತಿರುವುದನ್ನು ನಾವು ಪ್ರಶಂಶಿಸುತ್ತಿದ್ದೇವೆ.
ಕಳೆದ ವರ್ಷವು ಇಡೀ ವಿಶ್ವಕ್ಕೆ ಖಂಡಿತವಾಗಿಯೂ ಬಹಳ ಕಷ್ಟಕರವಾದುದಾಗಿತ್ತು. ಆದರೆ, ಆ ಎಲ್ಲಾ ಕಷ್ಟಗಳ ನಡುವೆಯೂ ಒಂದು ಆಧ್ಯಾತ್ಮಿಕ ಪಾಠವು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅದೇ, ಈ ಹಾದಿಯಲ್ಲಿ ಸಾಗುತ್ತಿರುವವರು ಆಗಲೇ ಅರ್ಥಮಾಡಿಕೊಂಡಿರುವ ಮತ್ತು ಇನ್ನೂ ಹೆಚ್ಚು ಹೆಚ್ಚು ಜನರು ಅರ್ಥ ಮಾಡಿಕೊಳ್ಳುತ್ತಿರುವ ಸತ್ಯ – ಈ ಭೂಮಿಯನ್ನು ಆವರಿಸಿರುವ ಸಂಘರ್ಷಗಳಿಗೆ ನಾವು ಕೇವಲ ಬಾಹ್ಯದಿಂದ ಪರಿಹಾರಗಳನ್ನು ಕಂಡುಕೊಳ್ಳಲಾಗುವುದಿಲ್ಲ, ಆದರೆ, ಭಗವಂತನೊಂದಿಗೆ ಅಂತರಂಗದಲ್ಲಿ ಸಾಮರಸ್ಯವನ್ನು ಸ್ಥಾಪಿಸುವುದರ ಮೂಲಕ ದೀರ್ಘಕಾಲೀನ ಪರಿಹಾರವನ್ನು ಕಂಡುಕೊಳ್ಳಬಹುದು. ಕಳೆದ ವರ್ಷವು “ದೈವಿಕ ಸಂದರ್ಭ”ಕ್ಕೆ ಒಂದು ಉದಾಹರಣೆಯಾಗಿದೆ. ಏಕೆಂದರೆ, ಸತ್ಯದ ಶಾಶ್ವತ ನಿಯಮಗಳೊಂದಿಗೆ ಗಾಢವಾದ ಸಂಪರ್ಕವನ್ನು ಸಾಧಿಸುವುದಕ್ಕೆ ಪ್ರೋತ್ಸಾಹವನ್ನು ನೀಡಿದ ವರ್ಷವಾಗಿದ್ದು, ನಮ್ಮ ಗುರುಗಳ ಆತ್ಮ ಜಾಗೃತಿಯ ಕ್ರಿಯಾ ಯೋಗವನ್ನು ವಿಶ್ವದಾದ್ಯಂತ ಪ್ರಸರಿಸಬೇಕಾದ ಧ್ಯೇಯ ಸಾಧನೆಗೆ ಸರಿಯಾಗಿ ಒಂದು ನೂರು ವರ್ಷಗಳು ಸಂದಿದ್ದು, ಕಳೆದ ವರ್ಷ ಅದರ ಶತಮಾನೋತ್ಸವವೂ ಒಟ್ಟಾಗಿ ಬಂದಿದೆ. ಜಗತ್ತಿನ ಎಲ್ಲಾ ನಾಗರಿಕತೆಗಳನ್ನು ಒಂದುಗೂಡಿಸಲು ಮತ್ತು ಸಾರ್ವತ್ರಿಕ ಆಧ್ಯಾತ್ಮಿಕತೆಯ ಸಾಮರಸ್ಯವನ್ನು ಸಾರಲು ನಮ್ಮ ಕೈಲಾದ ಪ್ರೋತ್ಸಾಹವನ್ನು ನಾವು ಮುಂಬರುವ ದಿನಗಳಲ್ಲೂ ನೀಡೋಣ.
ಹೊಸ ವರ್ಷವನ್ನು ನಾವು ಪ್ರವೇಶಿಸುತ್ತಿರುವಂತೆಯೇ, ನಾನು ನಿಮ್ಮಲ್ಲಿ ಪ್ರಾರ್ಥಿಸುತ್ತಿರುವುದೇನೆಂದರೆ, ಪರಮಹಂಸಜಿಯವರು ಇಡೀ ವಿಶ್ವಕ್ಕೆ ನೀಡಿರುವ ಆತ್ಮ ಸಾಕ್ಷಾತ್ಕಾರಕ್ಕಾಗಿ ಧ್ಯಾನದ ತಂತ್ರಗಳು ಮತ್ತು ಬೋಧನೆಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ಸಂಕಲ್ಪ ಮಾಡಿಕೊಳ್ಳಿ. ಇದು ನಿಮ್ಮ ನವ ಜೀವನದ ಪ್ರಾರಂಭಕ್ಕೆ ನಾಂದಿಯಾಗಲಿ. ನಿಮ್ಮ ಉತ್ಸಾಹ ಹಾಗೂ ಆಳವಾಗಿ ಧ್ಯಾನ ಮಾಡುವ ಪ್ರಯತ್ನಗಳು ನಮ್ಮ ಸಾಂಸಾರಿಕ ಜೀವನಕ್ಕೆ ಅತ್ಯಗತ್ಯವಾದ ಸಾಮರಸ್ಯ, ಬುದ್ಧಿವಂತಿಕೆ ಹಾಗೂ ದೈವೀಕ ಪ್ರೀತಿಗಳಿಗೆ ನೀಡಿದ ಕೊಡುಗೆಗಳಾಗಲಿ.
ಈ ನವ ಪ್ರಾರಂಭದ ಪ್ರಯೋಜನವನ್ನು ಅಧಿಕವಾಗಿ ಪಡೆಯಲೆಂದು ಭಗವಂತನು ನಮಗಾಗಿ ದೈವೀ ಉಡುಗೊರೆಗಳನ್ನು ಕಳುಹಿಸಿಕೊಟ್ಟಿದ್ದಾನೆ: ಆಯ್ಕೆಯ ಸ್ವಾತಂತ್ರ್ಯ ಮತ್ತು ನಮ್ಮ ಗುರಿಯನ್ನು ಸಾಧಿಸಲು ಬೇಕಾದ ಕ್ರಿಯಾತ್ಮಕ ಇಚ್ಚಾ ಶಕ್ತಿ. ನಿಮಗಾಗಿ ಸ್ವಲ್ಪ ಸಮಯವನ್ನು ತೆಗೆದುಕೊಂಡು ನಿಧಾನವಾಗಿ ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳಿ. ನಿಮ್ಮ ಒಳ್ಳೆಯ ಕೆಲಸಗಳು, ಅದರಿಂದ ಕಲಿತ ಪಾಠಗಳು, ಜಯಶೀಲರಾದ ಸಂದರ್ಭಗಳು ಮತ್ತು ನಿಮ್ಮ ಕಷ್ಟಗಳನ್ನು ಧೈರ್ಯದಿಂದ ಎದುರಿಸಿದಾಗ ದೊರೆತ ದೈವೀಕ ಆಶೀರ್ವಾದಗಳನ್ನು ನೆನಪು ಮಾಡಿಕೊಳ್ಳಿ. ನಿಮಗೆ ನಿಮ್ಮ ಬಗ್ಗೆ ಅಥವಾ ಬೇರೆಯವರ ಬಗ್ಗೆ ಇರುವ ನಕಾರಾತ್ಮಕ ಧೋರಣೆಗಳನ್ನು ಮತ್ತು ಒಂದು ಪರಿಧಿಯೊಳಗೆ ಸೀಮಿತಗೊಳಿಸುವ ನಿಮ್ಮ ಗತಕಾಲದ ಹೊರೆಯನ್ನು ಕಳಚಿಹಾಕಿ. ನಿಮಗೆ ಈಗ ಲಭ್ಯವಿರುವ ಎಲ್ಲಾ ಹೊಸ ಅವಕಾಶಗಳ ಬಗ್ಗೆ, ನೀವು ಸಕಾರಾತ್ಮಕ ಬದಲಾವಣೆ ತರಲು ಬಯಸುವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ. ಒಂದು ಚೈತನ್ಯದಾಯಕ, ಆಹ್ಲಾದಕರ ಭರವಸೆಯ ತಂಗಾಳಿಯು ನಿಮ್ಮ ಎಲ್ಲಾ ಚಿಂತೆಗಳನ್ನು ಮತ್ತು ಕೀಳರಿಮೆಗಳನ್ನು ಗುಡಿಸಿಹಾಕುವುದನ್ನು ಅನುಭವಿಸಿ ಮತ್ತು ನಿಮ್ಮ ಸೃಜನಶೀಲ ಇಚ್ಚಾಶಕ್ತಿ ಹಾಗೂ ವಿಶ್ವಾಸದಿಂದ ನೀವು ಗುರಿಯನ್ನು ಮುಟ್ಟಿಯೇ ಮುಟ್ಟುವಿರೆಂಬ ಸಕಾರಾತ್ಮಕ ಧೋರಣೆಯನ್ನು ನಿಮ್ಮ ಪ್ರಯತ್ನಗಳಲ್ಲಿ ತುಂಬಿರಿ.
ನಮ್ಮ ಗುರುಗಳು, ಭಕ್ತರು “ನನ್ನಿಂದ ಸಾಧ್ಯವಿಲ್ಲ” ಎಂದು ಹೇಳುವುದನ್ನು ನಿಷೇಧಿಸಿದ್ದರು. ಅವರು ಹೇಳುತ್ತಾರೆ “ನೀವು ಸಾಧ್ಯವಿಲ್ಲ ಎನ್ನುವುದನ್ನು ‘ನನ್ನಿಂದ ಸಾಧ್ಯ’ ಎಂಬ ಹೊಸ ತಂಗಾಳಿಯೊಂದಿಗೆ ಒಡೆದು ಹಾಕಿ.” ಅವರಿಗೆ ನಿಮ್ಮಲ್ಲಿ ನಂಬಿಕೆಯಿದೆ. ಭಗವಂತನಿಗೆ ನಿಮ್ಮಲ್ಲಿ ನಂಬಿಕೆಯಿದೆ. ನೀವು ನಿರಂತರ ಪ್ರಯತ್ನಶೀಲರೂ ಹಾಗೂ ನಿಮ್ಮಲ್ಲಿ ದೃಢ ನಂಬಿಕೆಯನ್ನಿರಿಸಿಕೊಂಡಿರುವಿರಾದರೆ ಆಗ ನೀವು ಆತನ ಸಹಾಯ ಮತ್ತು ಪ್ರೀತಿಯಿಂದ ನೀವು ವಿಫಲರಾಗಲು ಸಾಧ್ಯವೇ ಇಲ್ಲ. “ಹೊಸ ವರ್ಷದ ಹಾದಿಯನ್ನು ಹೊಸ ಭರವಸೆಗಳೊಂದಿಗೆ ಪ್ರವೇಶಿಸಿ” ಎಂದು ಗುರೂಜಿಯವರು ಹುರಿದುಂಬಿಸುತ್ತಿದ್ದರು. “ನೀವು ಆ ಭಗವಂತನ ಪುತ್ರರೆಂಬುದನ್ನು ನೆನಪಿಡಿ. … ಅವನು ನಿಮ್ಮನ್ನು ಶಾಶ್ವತವಾಗಿ ಪ್ರೀತಿಸುತ್ತಾನೆ. ಅದನ್ನು ಕುರಿತು ಯೋಚಿಸಿ. ಅದನ್ನು ದೃಢವಾಗಿ ನಂಬಿರಿ. ಅದನ್ನು ಅರಿತುಕೊಳ್ಳಿ. ಆಗ ಒಂದು ದಿನ ಇದ್ದಕ್ಕಿದ್ದಂತೆ ನೀವು ಆ ಭಗವಂತನಲ್ಲಿ ಅಮರರಾಗುವಿರಿ ಎಂಬುದನ್ನು ಕಂಡುಕೊಳ್ಳುವಿರಿ.”
ಭಗವಂತನು ನಿಮ್ಮನ್ನು ಹಾಗೂ ನಿಮ್ಮ ಪ್ರೀತಿಪಾತ್ರರೆಲ್ಲರನ್ನೂ ಈ ಹೊಸ ವರ್ಷದಲ್ಲಿ ಹಾಗೂ ಎಂದೆಂದಿಗೂ ಆಶೀರ್ವದಿಸಲಿ,
ಕಾಪಿರೈಟ್ © 2020 ಸೆಲ್ಫ್-ರಿಯಲೈಝೇಶನ್ ಫೆಲೋಷಿಪ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.