“ನಿಜವಾದ ಭಕ್ತಿ ಎಂದರೇನು?” ಎಂಬ ಪ್ರಶ್ನೆಗೆ ಭಗವಾನ್ ಕೃಷ್ಣ ಉತ್ತರಿಸುತ್ತಾನೆ.

9 ಫೆಬ್ರವರಿ, 2024

ಕಮಲ

ವೈಎಸ್‌ಎಸ್‌/ಎಸ್‌ಆರ್‌ಎಫ್‌ ಆನ್‌ಲೈನ್ ಸ್ಫೂರ್ತಿದಾಯಕ ಉಪನ್ಯಾಸಗಳ ಸಾಪ್ತಾಹಿಕ ಸರಣಿಯ ಭಾಗವಾದ “ಭಕ್ತಿಯು ಕಾಣದ ಭಗವಂತನನ್ನು ಹೇಗೆ ಪ್ರಕಾಶಪಡಿಸುತ್ತದೆ” ಎಂಬ ಉಪನ್ಯಾಸದಲ್ಲಿ ಎಸ್‌ಆರ್‌ಎಫ್‌ ಸನ್ಯಾಸಿ ಸ್ವಾಮಿ ಕಮಲಾನಂದ ಗಿರಿಯವರು ಹೇಳಿದ ಕಥೆಯನ್ನು ಈ ಕೆಳಗೆ ಕೊಡಲಾಗಿದೆ. ಪೂರ್ಣ ಉಪನ್ಯಾಸವನ್ನು ಇಲ್ಲಿ ವೀಕ್ಷಿಸಬಹುದು.

ಒಂದು ದಿನ ಭಗವಾನ್ ಕೃಷ್ಣನು ತನ್ನ ಕೆಲವು ಶಿಷ್ಯರೊಂದಿಗೆ ನದಿಯ ತಟದಲ್ಲಿ ಪ್ರಕೃತಿಯ ಪ್ರಶಾಂತತೆಯನ್ನು ಆನಂದಿಸುತ್ತಿದ್ದನು. ಸ್ವಲ್ಪ ಸಮಯದ ನಂತರ ಒಬ್ಬ ಶಿಷ್ಯನು ಒಂದು ಪ್ರಶ್ನೆಯನ್ನು ಮುಂದಿಟ್ಟನು: “ಕೃಷ್ಣ ಪರಮಾತ್ಮ, ನಿಜವಾದ ಭಕ್ತಿ ಎಂದರೇನು ಎಂದು ನಮಗೆ ವಿವರಿಸುವಿರಾ? ನೈಜ ಭಕ್ತನು ನಿಜವಾಗಿಯೂ ಭಕ್ತಿಯನ್ನು ಹೇಗೆ ಅಭ್ಯಾಸ ಮಾಡಬೇಕು?”

ತನ್ನ ಶಿಷ್ಯರಿಗೆ ಆಧ್ಯಾತ್ಮಿಕ ಪರಿಕಲ್ಪನೆಗಳನ್ನು ಅರ್ಥಮಾಡಿಸಲು ನೆರವಾಗುವುದೆಂದರೆ ಕೃಷ್ಣನಿಗೆ ಸದಾ ಆಸಕ್ತಿ ಇರುತ್ತಿತ್ತು, ಆದ್ದರಿಂದ ಅವನು ಶಿಷ್ಯನಿಗೆ ಹೇಳಿದನು: “ನೀನು ನದಿಗೆ ಹೋಗಿ ನದಿಪಾತ್ರದಿಂದ ನನಗೆ ಒಂದು ಬೆಣಚುಕಲ್ಲನ್ನು ತೆಗೆದುಕೊಂಡು ಬಾ.” ಶಿಷ್ಯನು ಅದರಂತೆ, ಒಂದು ಸಣ್ಣ ಉರುಟುಕಲ್ಲನ್ನು ತಂದು ಕೃಷ್ಣನಿಗೆ ಕೊಟ್ಟನು.

“ನೋಡು, ಈ ಬೆಣಚುಕಲ್ಲು ಹೇಗೆ ಹೊರಗೆ ಒದ್ದೆಯಾಗಿದೆ,” ಎಂದು ಕೃಷ್ಣ ಹೇಳಿದ. “ಈಗ ಈ ಬೆಣಚುಕಲ್ಲನ್ನು ಎರಡು ಹೋಳಾಗಿ ಒಡೆ.” ಶಿಷ್ಯನು ಒಂದು ದೊಡ್ಡ ಕಲ್ಲನ್ನು ತೆಗೆದುಕೊಂಡು ಬೆಣಚುಕಲ್ಲನ್ನು ಎರಡು ಹೋಳಾಗಿ ಒಡೆದನು.

ಕೃಷ್ಣ ಹೇಳಿದ: “ಬೆಣಚುಕಲ್ಲು ಹೊರಗೆ ಒದ್ದೆಯಾಗಿದ್ದರೂ ಒಳಭಾಗದಲ್ಲಿ ಹೇಗೆ ಒಣಗಿದೆ ನೋಡು. ಇದು ಹೊರಗಿನಿಂದ ಮಾತ್ರ ಭಗವಂತನೆಡೆಗೆ ಭಕ್ತಿ ಮತ್ತು ಪ್ರೀತಿಯ ಲೇಪನವಿರುವ ಭಕ್ತರಂತೆ, ಮತ್ತು ಅವರು ಆಧ್ಯಾತ್ಮಿಕ ಪರಿಸರದಲ್ಲಿ, ಆದರ್ಶ ಪರಿಸ್ಥಿತಿಗಳಲ್ಲಿ ಇರುವವರೆಗೆ ಮಾತ್ರ. ಆದರೆ ಅವರ ಅಂತರಂಗವು ಬದಲಾಗದೆ, ಸದಾ ಒಣಗಿಯೇ ಇರುತ್ತದೆ. ಮತ್ತು ಆ ಆಧ್ಯಾತ್ಮಿಕ ಪರಿಸರದಿಂದ ಅವರು ಹೊರಬಂದಾಕ್ಷಣ, ಅವರ ಭಕ್ತಿಯು ಆವಿಯಾಗುತ್ತದೆ.”

ಶಿಷ್ಯರು ಗಮನವಿಟ್ಟು ಕೇಳುತ್ತಿದ್ದರು. ನಂತರ ಕೃಷ್ಣನು ಎದ್ದು ನದಿಯ ಬಳಿಗೆ ಹೋಗಿ ತನ್ನ ರೇಷ್ಮೆ ಶಾಲಿನ ಅಂಚನ್ನು ನೀರಿನಲ್ಲಿ ಅದ್ದಿದ.

ಅದನ್ನು ಶಿಷ್ಯರ ಬಳಿಗೆ ತಂದು ಹೇಳಿದ: “ನೋಡಿ ಈ ಎಳೆಗಳು ತೊಟ್ಟಿಕ್ಕುವಷ್ಟರ ಮಟ್ಟಕ್ಕೆ ಹೇಗೆ ಸಂಪೂರ್ಣವಾಗಿ ನೆನೆದಿವೆ? ಬಹುತೇಕ ಭಕ್ತರು ಹೀಗೆಯೇ ಇರುತ್ತಾರೆ. ಅವರು ಭಕ್ತಿಯಿಂದ ತುಂಬಿರುತ್ತಾರೆ, ಭಗವಂತನ ಮೇಲಿನ ಪ್ರೀತಿಯಿಂದ ಮಿಂದಿರುತ್ತಾರೆ. ಆದರೆ ನಾನು ನನ್ನ ಶಾಲನ್ನು ನೀರಿನಿಂದ ಹೊರತೆಗೆದ ಕೂಡಲೆ ಗಾಳಿಯು ಅದನ್ನು ಒಣಗಿಸುತ್ತದೆ ಮತ್ತು ಸ್ವಲ್ಪ ಸಮಯದ ನಂತರ ನೀರಿನ ಯಾವುದೇ ಕುರುಹೂ ಇರುವುದಿಲ್ಲ.

““ಅಂತೆಯೇ, ಈ ಭಕ್ತರು ದೈವಿಕ ಚಟುವಟಿಕೆಗಳಿಂದ ಸುತ್ತುವರೆದಿರುವಾಗ ಹಾಗೂ ಆಧ್ಯಾತ್ಮಿಕ ಗುಂಪಿನಲ್ಲಿದ್ದು ಧ್ಯಾನ, ಪ್ರಾರ್ಥನೆ ಮತ್ತು ಆರಾಧನೆಯಲ್ಲಿ ತೊಡಗಿಸಿಕೊಂಡಾಗ, ಅವರು ಭಕ್ತಿಯಿಂದ ತುಂಬಿರುತ್ತಾರೆ. ಆದರೆ ಅವರನ್ನು ಮತ್ತೆ ಹೊರ ಜಗತ್ತಿಗೆ ಕಳುಹಿಸಿದ ತಕ್ಷಣ, ಅವರ ಭಕ್ತಿ ಆವಿಯಾಗುತ್ತದೆ.”

ಶಿಷ್ಯರು ತಮ್ಮ ಗುರುಗಳು ಮುಂದೆ ಏನು ಮಾಡಲಿದ್ದಾರೆ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದರು. ಸ್ವಲ್ಪ ಸಮಯದ ನಂತರ, ಕೃಷ್ಣನು ಒಬ್ಬ ಶಿಷ್ಯನಿಗೆ ಸಕ್ಕರೆಯ ಉಂಡೆಯನ್ನು ಕೊಟ್ಟು, “ಹೋಗಿ ಇದನ್ನು ನೀರಿನಲ್ಲಿ ಎಸೆ” ಎಂದು ಹೇಳಿದ, ಶಿಷ್ಯನು ಹಾಗೇ ಮಾಡಿದ.

ಒಂದು ನಿಮಿಷದ ನಂತರ, ಕೃಷ್ಣ, “ಹೋಗಿ ಅದನ್ನು ತೆಗೆದುಕೊಂಡು ಬಾ,” ಎಂದು ಹೇಳಿದನು. ಶಿಷ್ಯನು ಹೋಗಿ ನೋಡಿದ, ಆದರೆ ಸಕ್ಕರೆ ನೀರಿನಲ್ಲಿ ಕರಗಿದ್ದರಿಂದ ಎಲ್ಲೂ ಕಾಣಲಿಲ್ಲ. ಕೃಷ್ಣ ಹೇಳಿದ: “ನಿಜವಾದ ಭಕ್ತನು ಹೀಗಿರುತ್ತಾನೆ. ಅವನು ಅಥವಾ ಅವಳು ತಮ್ಮ ಅಹಂಕಾರವನ್ನು ಭಗವಂತನಲ್ಲಿ ಕರಗಿಸಿರುತ್ತಾರೆ. ಮತ್ತೆಂದೂ ಪ್ರತ್ಯೇಕತೆ ಇರುವುದಿಲ್ಲ. ಅವರಿಬ್ಬರೂ ಒಂದೇ ಆಗಿರುತ್ತಾರೆ.”

ಕಮಲ

ಇದನ್ನು ಹಂಚಿಕೊಳ್ಳಿ