
ನನ್ನ ಮೇಲೆ ನಿನ್ನ ಮನಸ್ಸನ್ನು ನೆಲೆಗೊಳಿಸು, ನೀನು ನನ್ನ ಭಕ್ತನಾಗು, ನಿರಂತರ ಆರಾಧನೆಯೊಂದಿಗೆ ನನಗೆ ಗೌರವದಿಂದ ನಮಸ್ಕರಿಸು. ನಿನ್ನ ಅತ್ಯುನ್ನತ ಗುರಿಯಾಗಿ ನನ್ನೊಂದಿಗೆ ನಿನ್ನನ್ನು ಒಂದಾಗಿಸಿಕೊಂಡ ನಂತರ ನೀನು ನನ್ನವನೇ ಆಗುವೆ.
— ಗಾಡ್ ಟಾಕ್ಸ್ ವಿತ್ ಅರ್ಜುನ: ದಿ ಭಗವದ್ಗೀತಾ
ಆತ್ಮೀಯರೇ,
ಭಗವಾನ್ ಶ್ರೀ ಕೃಷ್ಣನ ಜನ್ಮದಿನವಾದ ಜನ್ಮಾಷ್ಟಮಿಯ ಸಂತೋಷದಾಯಕ ಸಂದರ್ಭದಲ್ಲಿ, ಪ್ರಪಂಚದಾದ್ಯಂತ ಯಾರೆಲ್ಲರ ಹೃದಯಗಳು ಮತ್ತೊಮ್ಮೆ ಅವನ ಸರ್ವರನ್ನೂ ಒಳಗೊಳ್ಳುವ ಪ್ರೀತಿ ಮತ್ತು ಸಾಂತ್ವನಗೊಳಿಸುವ ವಿವೇಕದೆಡೆಗೆ ಶ್ರುತಿಗೊಂಡಿವೆಯೋ ಆ ಲಕ್ಷಾಂತರ ಜನರೊಂದಿಗೆ ಸೇರುವ ಪವಿತ್ರ ಅವಕಾಶವನ್ನು ನಾವು ಹೊಂದಿದ್ದೇವೆ. ಭಗವಂತನಿಂದ ನೀಡಲ್ಪಟ್ಟ ಯೋಗ ವಿಜ್ಞಾನದ ಮೂಲಕ ಸೋಲು ಮತ್ತು ಭ್ರಮೆಯ ವಿರುದ್ಧ ಆತ್ಮ ವಿಜಯದ ಅವನ ಅಮರ ಭರವಸೆಯು ನಮ್ಮಲ್ಲಿ ಪ್ರತಿಯೊಬ್ಬರಿಗೂ ಹೊಸ ಧೈರ್ಯ ಮತ್ತು ಸ್ಫೂರ್ತಿಯನ್ನು ತುಂಬಿ, ನಮ್ಮ ಬದುಕನ್ನು ದಿವ್ಯವಾಗಿಸಲಿ!
ಭಗವದ್ಗೀತೆಯಲ್ಲಿ, ಕರುಣಾಮಯಿ ಪರಮಾತ್ಮನು ಶ್ರೀಕೃಷ್ಣನ ಮೂಲಕ ಶಿಷ್ಯ ಅರ್ಜುನನಿಗೆ – ಮತ್ತು ಎಲ್ಲಾ ಯುಗಗಳ ಪ್ರಾಮಾಣಿಕ ಭಕ್ತರಿಗೆ – ಈ ಸರಳವಾದರೂ ಪ್ರಬುದ್ಧವಾದ ವಿಮೋಚಕ ಸಲಹೆಯನ್ನು ಕೊಡುತ್ತಾನೆ: ” ನಿಮ್ಮ ಪ್ರಜ್ಞೆಯನ್ನು ಸದಾ ನನ್ನ ರಕ್ಷಣಾತ್ಮಕ ಉಪಸ್ಥಿತಿಯಲ್ಲಿರಿಸಿ.” ಧ್ಯಾನದ ಮೂಲಕ ನಮ್ಮ ಹೃದಯ ಮತ್ತು ಮನಸ್ಸನ್ನು ಮತ್ತೆ ಮತ್ತೆ ಆ ಶಾಶ್ವತ ನೆಲೆಗೆ ತರುವ ಮೂಲಕ ಮಾಯೆಯ ಆತ್ಮವನ್ನು-ಪ್ರತಿಬಂಧಿಸುವಂತಹ ಪ್ರಭಾವವನ್ನು ದುರ್ಬಲಗೊಳಿಸುತ್ತೇವೆ ಹಾಗೂ ಮಾನವ ಮಿತಿಗಳ ಪರಿಭಾಷೆಯಲ್ಲಿ ನಮ್ಮನ್ನು ನಾವು ಅಳೆಯುವ ಪ್ರವೃತ್ತಿಯನ್ನು ಕಡಿಮೆ ಮಾಡುತ್ತೇವೆ. ಎಲ್ಲಕ್ಕಿಂತಾ ಮುಖ್ಯವಾಗಿ, ಆಂತರೀಕೃತ ಭಕ್ತಿಯ ದೇಗುಲದಲ್ಲಿ ನಾವು ನಮ್ಮ ಸ್ವಂತ ಜೀವನದ ಕುರುಕ್ಷೇತ್ರ ಯುದ್ಧದಲ್ಲಿ ನಮ್ಮ ಅತ್ಯಂತ ಪ್ರಿಯ ಮಿತ್ರ, ಮಾರ್ಗದರ್ಶಿ ಮತ್ತು ಹಿತಚಿಂತಕನಾದ ಆ ದೈವೀ ಸ್ನೇಹಿತನೊಂದಿಗೆ ಸಂತೃಪ್ತ ಸಂಬಂಧವನ್ನು ಸ್ಥಾಪಿಸುತ್ತೇವೆ.
ಯೋಗೇಶ್ವರನ (ಕೃಷ್ಣನ) ಅನಿರ್ಬಂಧಿತ ಪ್ರೀತಿ ಮತ್ತು ಆಶೀರ್ವಾದಗಳು, ಉದಾತ್ತನಾಗಿದ್ದರೂ ತಾತ್ಕಾಲಿಕವಾಗಿ ಗೊಂದಲಕ್ಕೊಳಗಾಗಿದ್ದ ಅರ್ಜುನನನ್ನು ಹೇಗೆ ಮೇಲಕ್ಕೆತ್ತಿದವು ಮತ್ತು ಜಾಗೃತಗೊಳಿಸಿದವು ಎಂದು ಭಗವದ್ಗೀತೆಯು ವಿವರಿಸುತ್ತದೆ. ನಾವು ಜನ್ಮಾಷ್ಟಮಿಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ನಿಮ್ಮ ಜೀವನವೂ ಸಹ ಅಂತೆಯೇ ರೂಪಾಂತರಗೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀವು ನಮ್ಮ ಗುರುದೇವ ಪರಮಹಂಸ ಯೋಗಾನಂದರ ಗೀತೆಯ ಆತ್ಮೋದ್ಧಾರಕ ಸತ್ಯಗಳ ಜ್ಞಾನವರ್ಧಕ ಬಹಿರಂಗಪಡಿಸುವಿಕೆಯನ್ನು ಮನಸ್ಸಿಗೆ ತೆಗೆದುಕೊಂಡರೆ ಹಾಗೂ ಜೊತೆ ಜೊತೆಗೇ ನಮ್ಮ ಗುರುಗಳು ಈ ಆಧುನಿಕ ಯುಗದಲ್ಲಿ ಭಗವಂತನ ವಿಶ್ವಾದ್ಯಂತ ಕುಟುಂಬಕ್ಕೆ ಸಂತೋಷದಿಂದ ನೀಡಿದಂಥ ಭಗವಾನ್ ಕೃಷ್ಣನ ರಾಜಯೋಗದ ಪವಿತ್ರ ತಂತ್ರಗಳನ್ನು ನಿಷ್ಠೆಯಿಂದ ಅಭ್ಯಾಸ ಮಾಡಿದರೆ ಅದು ಖಂಡಿತವಾಗಿಯೂ ಆಗುತ್ತದೆ.
ನಮ್ಮ ಮುಂದೆ ಇರುವ ಅವಕಾಶ ಎಷ್ಟು ದೊಡ್ಡದು! ಅದನ್ನು ಮರೆಯಬೇಡಿರೆಂದು ನಿಮ್ಮನ್ನು ಒತ್ತಾಯಿಸುತ್ತೇನೆ. ಏಕೆಂದರೆ ಕೃಷ್ಣನ ಅತ್ಯುನ್ನತ ಶಿಷ್ಯ ಅರ್ಜುನನಂತೆಯೇ, ನಮ್ಮಲ್ಲಿ ಪ್ರತಿಯೊಬ್ಬರೂ ಅಂತಹ ಅಚಲವಾದ ಧೈರ್ಯ ಮತ್ತು ಅಂತರ್ಬೋಧಿತ ಶ್ರುತಿಗೂಡುವಿಕೆಯಿಂದ ವರ್ತಿಸಲು ಕಲಿತು, ಅದರ ಮೂಲಕ ಸಮಕಾಲೀನ ಅಸ್ತಿತ್ವದ ಬೆಳಕು ಮತ್ತು ಕತ್ತಲೆಯ ರಣರಂಗದಲ್ಲಿ ನಮ್ಮ ವಿಮೋಚನೆಯನ್ನು ಗೆಲ್ಲಲು ಸಾಧ್ಯ.
ಶ್ರೀಕೃಷ್ಣನ ಜನ್ಮದಿನದ ಆಚರಣೆಯು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ, ಈ ಜಗತ್ತು ನೀಡಬಹುದಾದ ಯಾವುದೇ ವಸ್ತುವಿಗಿಂತ ಭಗವತ್ಪ್ರೇಮವು ಹೆಚ್ಚು ನೈಜ, ಹೆಚ್ಚು ಶಾಶ್ವತ ಎಂಬುದನ್ನು ಧ್ಯಾನ-ಜನ್ಯ ಗುರುತಿಸುವಿಕೆಯು ಪುನರುಜ್ಜೀವನಗೊಳಿಸಲಿ — ಹಾಗೂ ಅವನ ಸದಾ ಸಿದ್ಧ ಸಹಾಯ ಹಸ್ತಕ್ಕಾಗಿ, ಅವನ ಅಮೋಘ ಸ್ನೇಹಕ್ಕಾಗಿ ಮತ್ತು ಅವನ ಅನಂತ ಕಾಳಜಿಯ ಉಪಸ್ಥಿತಿಗಾಗಿ ಎಲ್ಲ ಸಮಯದಲ್ಲೂ ನಾವು ಅವನನ್ನು ಕರೆಯುವಂತಾಗಲಿ.
ಜೈ ಶ್ರೀ ಕೃಷ್ಣಾ ! ಜೈ ಗುರು!
ಸ್ವಾಮಿ ಚಿದಾನಂದ ಗಿರಿ