ಆಧ್ಯಾತ್ಮಿಕ ಚಕ್ಷುವಿನ ದಿವ್ಯ ಬೆಳಕಿನೊಂದಿಗೆ ಸಂಪರ್ಕ ಏರ್ಪಡಿಸಿಕೊಳ್ಳುವುದು — ದಿವ್ಯ ಗೀತೆಗಳ ಗಾಯನ, ದೃಶ್ಯೀಕರಣ ಮತ್ತು ಧ್ಯಾನದ ಮೂಲಕ

ಪರಮಹಂಸ ಯೋಗಾನಂದರು ಮತ್ತು ಅವರ ಗುರು ಪರಂಪರೆ ಕಲಿಸಿದಂತೆ ಧ್ಯಾನಾಭ್ಯಾಸದ ಅವಿಭಾಜ್ಯ ಅಂಗವೆಂದರೆ ಆಧ್ಯಾತ್ಮಿಕ ಚಕ್ಷು ಅಥವಾ ಕೂಟಸ್ಥ ಚೈತನ್ಯ ಅಥವಾ ಕ್ರಿಸ್ತ ಪ್ರಜ್ಞಾ ಕೇಂದ್ರ ಎಂದು ಕರೆಯಲಾಗುವ ಶರೀರದಲ್ಲಿನ ಭ್ರೂಮಧ್ಯದ ಬಿಂದುವಿನಲ್ಲಿ ಗಮನವನ್ನು ಇರಿಸಿ ಮೃದುವಾಗಿ ನೋಡುವುದು. ಅಂತರ್ಬೋಧೆಯ ಕೇಂದ್ರ ಮತ್ತು ದಿವ್ಯ ಗ್ರಹಿಕೆಯ ಕೇಂದ್ರವಾದ ಆಧ್ಯಾತ್ಮಿಕ ಚಕ್ಷುವಿನ ಪ್ರಾಮುಖ್ಯತೆಯನ್ನು ಪರಮಹಂಸಜಿ ಆಗಾಗ್ಗೆ ಒತ್ತಿಹೇಳುತ್ತಿದ್ದರು, ಇದರ ಬಗ್ಗೆ ಯೇಸುವೂ ಹೇಳಿದ್ದಾನೆ: “ಆದ್ದರಿಂದ ನಿನ್ನ ಕಣ್ಣು ಒಂದೇ ಆಗಿದ್ದರೆ, ನಿನ್ನ ಇಡೀ ಶರೀರವು ಬೆಳಕಿನಿಂದ ತುಂಬಿರುತ್ತದೆ” (ಮ್ಯಾಥ್ಯೂ 6:22). “ದ ಡೀಪರ್‌ ಟೀಚಿಂಗ್ಸ್‌ ಆಫ್‌ ಜೀಸಸ್‌ ಕ್ರೈಸ್ಟ್” ಈ ವಿಷಯವಾಗಿ ಎಸ್‌ಆರ್‌ಎಫ್‌ ಸನ್ಯಾಸಿಗಳಾದ ಸ್ವಾಮಿ ಸರಳಾನಂದರ ಇತ್ತೀಚೆಗೆ ಪೋಸ್ಟ್ ಮಾಡಿದ ಸ್ಫೂರ್ತಿದಾಯಕ ವೀಡಿಯೊದಲ್ಲಿ ಇದನ್ನು ಸುಂದರವಾಗಿ ಚರ್ಚಿಸಲಾಗಿದೆ.

ಆಧ್ಯಾತ್ಮಿಕ ಚಕ್ಷುವಿನ ಬಗ್ಗೆ ಸಂಕ್ಷಿಪ್ತ ಪರಿಚಯವನ್ನು ನೀವು ಈ ಕೆಳಗೆ ಓದಬಹುದು ಮತ್ತು ಈ ಉನ್ನತೀಕರಿಸುವ ಆಧ್ಯಾತ್ಮಿಕ ಕೇಂದ್ರದೊಂದಿಗೆ ಸಂಪರ್ಕ ಏರ್ಪಡಿಸುವ ಕೆಲವು ವಿಧಾನಗಳನ್ನು ಅಭ್ಯಾಸ ಮಾಡಬಹುದು — ಇದರಿಂದ ನಿಮ್ಮ ಜೀವನ ಮತ್ತು ಪ್ರಜ್ಞೆಗೆ ಮತ್ತು ಆ ಮೂಲಕ ಪ್ರಪಂಚಕ್ಕೆ ಹೆಚ್ಚು ಬೆಳಕನ್ನು ತರಬಹುದು. (ಮತ್ತು ಹೆಚ್ಚಿನ ಪರಿಶೋಧನೆಗಾಗಿ ಪುಟದ ಕೊನೆಯಲ್ಲಿ ಕೆಲವು ಸಂಪನ್ಮೂಲಗಳನ್ನು ಪಟ್ಟಿಮಾಡಲಾಗಿದೆ, ಏಕೆಂದರೆ ಇದು ಆಧ್ಯಾತ್ಮಿಕ ಮಾರ್ಗದಲ್ಲಿ ನಿಜವಾಗಿಯೂ ಆಳವಾದ ವಿಷಯವಾಗಿದೆ.)

ಒಂದು “ನೀಲ ಜ್ಯೋತಿ” ಯಂತೆ, ಆಧ್ಯಾತ್ಮಿಕ ಚಕ್ಷು — ದಿವ್ಯ ಗೀತಾ ಗಾಯನದ ಮೂಲಕ ಸಂಯೋಗ

ಪರಮಹಂಸ ಯೋಗಾನಂದರು “ನೀಲ ಜ್ಯೋತಿ” (ಓಪಲ್ ಫ್ಲೇಮ್) (ಇದು ಅವರ ಪುಸ್ತಕ ಕಾಸ್ಮಿಕ್ ಚಾಂಟ್ಸ್‌ (ದಿವ್ಯ ಗೀತೆಗಳು)ನಲ್ಲಿದೆ) ಎಂಬ ಶೀರ್ಷಿಕೆಯಡಿ ಆಧ್ಯಾತ್ಮಿಕ ಚಕ್ಷುವಿನ ಬಗ್ಗೆ ಗೀತೆಯನ್ನು ರಚಿಸಿದ್ದಾರೆ.

ಪರಮಹಂಸಜಿಯವರು ಆರಂಭಿಸಿದ ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಇಡೀ ದಿನದ ಕ್ರಿಸ್‌ಮಸ್ ಧ್ಯಾನದ ಅಂಗವಾಗಿ ಕ್ರಿಸ್‌ಮಸ್‌ ಸಮಯದಲ್ಲಿ ಹೆಚ್ಚಾಗಿ ಈ ಗೀತೆಯನ್ನು ಹಾಡಲಾಗುತ್ತಿತ್ತು, ಇದು, ಹಣೆಯೊಳಗಿರುವ ಆಧ್ಯಾತ್ಮಿಕ ಚಕ್ಷುವಿನ “ದ್ವಾರದ” ಮೂಲಕ ಭಕ್ತನು ಹಾದುಹೋಗುವ ಮಾರ್ಗವನ್ನು ವಿವರಿಸುತ್ತದೆ.

ಯೋಗಿಯು ಆಧ್ಯಾತ್ಮಿಕ ಚಕ್ಷುವನ್ನು ಕ್ಷೀರಸ್ಫಟಿಕ ನೀಲಿ ಗೋಳವನ್ನು ಸುತ್ತುವರೆದಿರುವ ಹೊನ್ನ ಬೆಳಕಿನ ಉಂಗುರದಂತೆ ಕಾಣುತ್ತಾನೆ; ಮತ್ತು ಮಧ್ಯದಲ್ಲಿ, ಹೊಳೆಯುವ ಶ್ವೇತ ನಕ್ಷತ್ರ. (ಯೇಸುವು ಜಾನ್ ದ ಬ್ಯಾಪ್ಟಿಸ್ಟ್‌ನಿಂದ ದೀಕ್ಷಾಸ್ನಾನವನ್ನು ಪಡೆದಾಗ, “ಚೈತನ್ಯವು ಪಾರಿವಾಳದಂತೆ ಸ್ವರ್ಗದಿಂದ ಇಳಿದು ಬರುತ್ತಿರುವಂತೆ” ಅವನು ನಕ್ಷತ್ರದಂತಹ ಆಧ್ಯಾತ್ಮಿಕ ಚಕ್ಷುವನ್ನು ನೋಡಿದನು ಎಂದು ಪರಮಹಂಸಜಿ ವಿವರಿಸಿದರು. ಅದರ “ರೆಕ್ಕೆಗಳು” ನೀಲಿ ಮತ್ತು ಚಿನ್ನದ ಕಿರಣಗಳ ಪ್ರಭಾವಲಯವನ್ನು ಪ್ರತಿನಿಧಿಸುತ್ತವೆ.)

ಭಕ್ತಿ ಮತ್ತು ಪ್ರಾಣಾಯಾಮ (ಪ್ರಾಣಶಕ್ತಿ ನಿಯಂತ್ರಣ)ದ ತಂತ್ರಗಳಿಂದ — ವೈಎಸ್‌ಎಸ್‌ ಪಾಠಗಳಲ್ಲಿ ಕಲಿಸಿದ ಕ್ರಿಯಾ ಯೋಗ ವಿಜ್ಞಾನದಂತಹ ಧ್ಯಾನ ತಂತ್ರಗಳು— ನಕ್ಷತ್ರದಂತಹ ದ್ವಾರವನ್ನು ದಾಟಿ ಹೋಗುವವರು ಸಮಸ್ತ ಸೃಷ್ಟಿಯನ್ನು ವ್ಯಾಪಿಸಿರುವ ಕ್ರಿಸ್ತ ಪ್ರಜ್ಞೆಯೊಂದಿಗೆ [ಕೂಟಸ್ಥ ಚೈತನ್ಯ] ಸಂಸರ್ಗ ನಡೆಸುತ್ತಾರೆ.

ಈ ಗೀತ ಗಾಯನದಲ್ಲಿ ನಮ್ಮೊಂದಿಗೆ ಹಾಡಲು (ಜೋರಾಗಿ ಅಥವಾ ಮಾನಸಿಕವಾಗಿ) ನಾವು ನಿಮ್ಮನ್ನು ಆಹ್ವಾನಿಸುತ್ತೇವೆ, ಇದು ನಿಮಗೆ ಆಧ್ಯಾತ್ಮಿಕ ಚಕ್ಷುವಿನ ದಿವ್ಯ ಬೆಳಕನ್ನು ದೃಶ್ಯೀಕರಿಸಲು ಮತ್ತು ಅದನ್ನು ಸಂಪರ್ಕಿಸಲು ನೆರವಾಗುತ್ತದೆ.

“ನೀಲ ಜ್ಯೋತಿ”

ನೀಲ ಜ್ಯೋತಿಯ ದರುಶನ ಬೇಕಿರೆ, ಓಡಿಸು ಕತ್ತಲೆ ಇನ್ನಿಲ್ಲದಂತೆ,
ತರಿದು ನಿನ್ನ ಮೌನವನ್ನು ಪ್ರಾಣಾಯಾಮದ ಖಡ್ಗದಿಂದ.

ನೀಲಿ ಕಣ್ಣಲ್ಲಿನ ನಕ್ಷತ್ರ ತೂರಿ, ನೋಡು ಎಲ್ಲೆಡೆ ಇರುವ ಕ್ರಿಸ್ತನ,
ಸುಪ್ತವಾಗಿ ಎಲ್ಲಾ ಕಣದಿ, ಅಣು, ಪರಮಾಣುಗಳಲ್ಲಿ.

ಹೊನ್ನ ಮಂಜಿನ ಪ್ರಭಾವಳಿಯು, ಅಲಂಕರಿಸಿದೆ ನೀಲಿ ದ್ವಾರವ;
ನೀಲಿಯಲ್ಲಿನ ನಕ್ಷತ್ರ ತೂರಿ, ಮಾಡು ಎಲ್ಲೆಡೆ ಕ್ರಿಸ್ತ ಸಮಾಗಮ.

ರಶ್ಮಿ ರೆಕ್ಕೆಯ ತಾರಾ ಕಪೋತ ಇಳಿಯುವುದು ಹಣೆಯ ಮೇಲೆ,
ತೋರುತ ಕ್ರಿಸ್ತನ ಸಿಂಹಾಸನವ ಎಲ್ಲ ಹೃದಯದ ಶಾಂತಿಯಲ್ಲಿ.

ಮಾಡು ನಿನ್ನ ಕಂಗಳ ಏಕ ಜ್ಯೋತಿ ನೋಡಲು ಆ ಹೊಳೆವ ದ್ವಾರವ;
ಜ್ಯೋತಿ ಆಗುವುದು ನಿನ್ನ ದೇಹ, ಬೆಳಗಿಸುತಲಿ ಎಲ್ಲಾ ಲೋಕವ.

ಜ್ಞಾನದ ಹುಮ್ಮಸ್ಸಿನಿಂದ, ಅನುಸರಿಸು ತಾರಾನಯನವ,
ಕ್ರಿಸ್ತ ಜನನವ ನೋಡಲು ಪುನಃ ನಿನ್ನ ಆತ್ಮದಲ್ಲಿ.

ಜ್ವಲಿಪ ರೆಕ್ಕೆಯ ತಾರಾ ಕಪೋತ, ದೀಕ್ಷೆ ಕೊಡು ನಿನ್ನ ಜ್ಯೋತಿಯಲ್ಲಿ,
ವಿಸ್ತರಿಸಿ ಎಲ್ಲೆಡೆ ನನ್ನಾತ್ಮವನ್ನು ಕ್ರಿಸ್ತನೊಡನೆ ಬ್ರಹ್ಮಾನಂದದಲ್ಲಿ.

ಜಗದ ಹೊಳೆವ ದ್ವಾರದಿಂದ, ಇಣುಕುವೆ ತಾರೆಯೇ! ನಿನ್ನೊಳಗಿಂದ
ಸೂಕ್ಷ್ಮ ಬೆಳಕಿನ ಆ ಲೋಕಕೆ ಅದುವೇ ತುಂಬುವುದು ಪ್ರಾಣ ಸರ್ವಕೆ.

ನೀಲ ಜ್ಯೋತಿಯ ದರುಶನ ಬೇಕಿರೆ, ಓಡಿಸು ಕತ್ತಲೆ ಇನ್ನಿಲ್ಲದಂತೆ!

ಆಧ್ಯಾತ್ಮಿಕ ಚಕ್ಷುವನ್ನು ಕುರಿತ ಮಾರ್ಗದರ್ಶಿತ ದೃಶ್ಯೀಕರಣ ಮತ್ತು ಧ್ಯಾನ

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಅಧ್ಯಕ್ಷ ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿ ಅವರು ಆಧ್ಯಾತ್ಮಿಕ ಚಕ್ಷುವನ್ನು ಕುರಿತ ಮಾರ್ಗದರ್ಶಿತ ಅನುಭವವನ್ನು ನಡೆಸಿಕೊಡುತ್ತಾರೆ. ಈ ಮಾರ್ಗದರ್ಶಿತ ದೃಶ್ಯೀಕರಣ ಮತ್ತು ಧ್ಯಾನವು ಸ್ವಾಮಿ ಚಿದಾನಂದಜಿ ಅವರು 2019 ರಲ್ಲಿ ವೈಎಸ್ಎಸ್ ರಾಂಚಿ ಆಶ್ರಮದಲ್ಲಿ ದೀಪಾವಳಿಯಂದು ನೀಡಿದ ಉಪನ್ಯಾಸದ ಭಾಗವಾಗಿದೆ. (“ದ ಇನ್ನರ್‌ ಸೆಲೆಬ್ರೇಷನ್‌ ಆಫ್‌ ದಿವಾಲಿ: ಅವೇಕನಿಂಗ್‌ ದ ಲೈಟ್‌ ಆಫ್‌ ದ ಸೋಲ್‌”- ದೀಪಾವಳಿಯ ಆಂತರಿಕ ಆಚರಣೆ: ಆತ್ಮದ ಬೆಳಕನ್ನು ಜಾಗೃತಗೊಳಿಸುವುದು ಎಂಬ ಶೀರ್ಷಿಕೆಯ ಆ ಉಪನ್ಯಾಸದಲ್ಲಿ, ಯೋಗದ ಆತ್ಮ-ವಿಜ್ಞಾನವನ್ನು ಅಭ್ಯಾಸ ಮಾಡುವ ಮೂಲಕ ನಾವು ಹೇಗೆ ಸರ್ವ-ಶಕ್ತ ಬೆಳಕಿನ ಜಾಗೃತಿಯನ್ನು ಅನುಭವಿಸಬಹುದು ಎಂಬುದನ್ನು ಅವರು ಆಳವಾಗಿ ಚರ್ಚಿಸಿದ್ದಾರೆ.)

“ಮೊದಲಿಗೆ ನೀವು ಅತ್ತ ನೋಡಿದಾಗ ಅಲ್ಲಿ ಕೇವಲ ಕತ್ತಲು ಕಾಣಬಹುದು, ಆದರೆ ಆ ಕತ್ತಲೆಯ ಹಿಂದೆ ಆತ್ಮದ ಬೆಳಕಿದೆ, ಮಾನವ ರೂಪದಲ್ಲಿ ಪರಮಾತ್ಮನ ಉಪಸ್ಥಿತಿ,” ಎಂದು ಸ್ವಾಮಿ ಚಿದಾನಂದಜಿ ಅವರು ಅಂತರಂಗದ ದಿವ್ಯ ಬೆಳಕನ್ನು ಜಾಗೃತಗೊಳಿಸಲು ಹೇಳುತ್ತ ಈ ಶಕ್ತಿಯುತ ಮಾರ್ಗದರ್ಶಿತ ಧ್ಯಾನವನ್ನು ಪ್ರಾರಂಭಿಸುತ್ತಾರೆ.

ಇನ್ನೂ ಆಳಕ್ಕೆ ಮುಳುಗಬಯಸುವಿರೆ?

ಆಧ್ಯಾತ್ಮಿಕ ಕಣ್ಣಿನಿಂದ ಸಾಧ್ಯವಿರುವ ಅನೇಕ ಅನುಭವದ ಸ್ತರಗಳ ಬಗ್ಗೆ ಮತ್ತು ಆಂತರ್ಯದಲ್ಲಿರುವ ಬೆಳಕಿನ ದಿವ್ಯ ಸಾಮ್ರಾಜ್ಯದ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರೇ? ಕೆಲವು ಉಪಯುಕ್ತ ಸಂಪನ್ಮೂಲಗಳು ಇಲ್ಲಿವೆ:

ವೈಎಸ್‌ಎಸ್‌ ಪುಸ್ತಕಮಳಿಗೆಯಲ್ಲಿ ಲಭ್ಯವಿರುವ ಪರಮಹಂಸಜಿಯವರ ಧರ್ಮಗ್ರಂಥಗಳ ವ್ಯಾಖ್ಯಾನಗಳು ಆಧ್ಯಾತ್ಮಿಕ ಚಕ್ಷುವಿನ ಬಗ್ಗೆ ವಿಪುಲ ಒಳನೋಟ ಮತ್ತು ಸ್ಫೂರ್ತಿಯನ್ನು ಹೊಂದಿವೆ:

ಯೋಗದಾ ಸತ್ಸಂಗ ಪಾಠಗಳು ಕ್ರಿಯಾ ಯೋಗ ಧ್ಯಾನ ಮತ್ತು ಸಮತೋಲಿತ ಜೀವನ ಕಲೆಯ ವಿಜ್ಞಾನದ ಕುರಿತು ಪರಮಹಂಸ ಯೋಗಾನಂದರ ಬೋಧನೆಗಳ ಗೃಹಾಧ್ಯಯನ ಸರಣಿ ಆಗಿದ್ದು, ಇದರ ಅಭ್ಯಾಸವು ಆಧ್ಯಾತ್ಮಿಕ ಚಕ್ಷುವಿನ ದಿವ್ಯ ದ್ವಾರವನ್ನು ಅನುಭವಿಸಲು ಮತ್ತು ಹಾದುಹೋಗಲು ಸಾಧ್ಯವಾಗಿಸುತ್ತದೆ.

ಅಭ್ಯಾಸಕ್ಕೆ ಒಂದು ದೃಢೀಕರಣ — ದಿವ್ಯ ಬೆಳಕಿನಿಂದ ತುಂಬಿಕೊಳ್ಳುವುದು

ದೃಢೀಕರಿಸಿ: “ನಾನು ನನ್ನ ಭೌತಿಕ ಕಣ್ಣುಗಳನ್ನು ಮುಚ್ಚುತ್ತೇನೆ ಮತ್ತು ಪ್ರಾಪಂಚಿಕ ಪ್ರಲೋಭನೆಗಳನ್ನು ದೂರಮಾಡುತ್ತೇನೆ. ನನ್ನ ಸಾಪೇಕ್ಷತೆಯ ಕಣ್ಣುಗಳು ಬೆಳಕಿನ ಒಳ ಏಕಚಕ್ಷುವಿಗೆ ತೆರೆದುಕೊಳ್ಳುವವರೆಗೂ ನಾನು ಮೌನದ ಕತ್ತಲೆಯ ಮೂಲಕ ಇಣುಕಿ ನೋಡುತ್ತೇನೆ. ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನೂ ನೋಡುವ ನನ್ನ ಎರಡು ಕಣ್ಣುಗಳು ಒಂದೇ ಆದಾಗ ಮತ್ತು ಎಲ್ಲದರಲ್ಲೂ ಭಗವಂತನ ದಿವ್ಯ ಸದ್ಗುಣವನ್ನು ಮಾತ್ರ ನೋಡಿದಾಗ, ನನ್ನ ದೇಹ, ಮನಸ್ಸು ಮತ್ತು ಆತ್ಮಗಳು ಅವನ ಸರ್ವವ್ಯಾಪಿ ಬೆಳಕಿನಿಂದ ತುಂಬಿರುವುದನ್ನು ಕಾಣುತ್ತೇನೆ.”

ಇದನ್ನು ಹಂಚಿಕೊಳ್ಳಿ