“ಭಗವಂತನೊಡನೆ ಒಂದು ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳುವುದು” ಶ್ರೀ ದಯಾ ಮಾತಾರವರಿಂದ

9 ಫೆಬ್ರವರಿ, 2024

ಕಮಲ

ಕೆಳಗಿನದು ಶ್ರೀ ದಯಾ ಮಾತಾರವರ ಫೈಂಡಿಂಗ್‌ ದಿ ಜಾಯ್‌ ವಿತಿನ್‌ ಯು: ಪರ್ಸನಲ್‌ ಕೌನ್ಸಿಲ್‌ ಫಾರ್‌ ಗಾಡ್‌ ಸೆಂಟರ್ಡ್‌-ಲಿವಿಂಗ್. ಪುಸ್ತಕದಲ್ಲಿರುವ “ಡೀಪನಿಂಗ್‌ ಯುವರ್‌ ಲವ್‌ ಫಾರ್‌ ಗಾಡ್‌”ನಿಂದ ಆಯ್ದ ಭಾಗವಾಗಿದೆ. ಶ್ರೀ ದಯಾ ಮಾತಾರವರು ಪರಮಹಂಸ ಯೋಗಾನಂದರ ಬಹಳ ಮುಂಚಿನ ಮತ್ತು ಅತ್ಯಂತ ಆಪ್ತ ಶಿಷ್ಯರಲ್ಲೊಬ್ಬರಾಗಿದ್ದರು ಮತ್ತು 1955ರಿಂದ 2010ರಲ್ಲಿ ಸ್ವರ್ಗಸ್ಥರಾಗುವವರೆಗೂ ಗುರುಗಳು ಸ್ಥಾಪಿಸಿದ ಸಂಸ್ಥೆಯ ಆಧ್ಯಾತ್ಮಿಕ ಮುಖ್ಯಸ್ಥರಾಗಿದ್ದರು.

ಭಗವಂತನನ್ನು ಅನ್ವೇಷಿಸಲು ನೀವು ಪ್ರಪಂಚವನ್ನು ತೊರೆದು ಆಶ್ರಮವನ್ನು ಸೇರಬೇಕಾಗುತ್ತದೆ ಎಂದು ಭಾವಿಸಬೇಡಿ. ನೀವು ಎಷ್ಟೇ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೂ, ಅವನೊಡನೆ ಒಂದು ಪ್ರೇಮಪೂರ್ಣ, ವೈಯಕ್ತಿಕ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಸಮಯವನ್ನು ಕಂಡುಕೊಳ್ಳಬಹುದು.

ಕೇವಲ ಈ ದೇಶದಲ್ಲಿ ಮಾತ್ರವಲ್ಲ ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಗುರೂಜಿಯವರ ಸಂಸ್ಥೆಯ ವ್ಯವಹಾರಗಳನ್ನು ನೋಡಿಕೊಳ್ಳುವ ನನ್ನ ಜವಾಬ್ದಾರಿಗಳಿಂದಾಗಿ ನಾನು, ನಿಮ್ಮಲ್ಲಿ ಯಾರು ಅತ್ಯಂತ ಕಾರ್ಯನಿರತರಾಗಿದ್ದಾರೋ ಅವರಷ್ಟೇ ಕಾರ್ಯನಿರತಳಾಗಿರುತ್ತೇನೆ. ಆದರೆ ಭಗವಂತ ಮೊದಲು. ಬೇರೆ ಯಾವುದೂ ಅದಕ್ಕೆ ಅಡ್ಡಬರಲು ನಾನು ಬಿಡುವುದಿಲ್ಲ. ಯಾವುದು ಮುಖ್ಯವಾದದ್ದೆಂದರೆ, ದಿನ ನಿತ್ಯದ ಧ್ಯಾನದಲ್ಲಿ ಭಗವಂತನಿಗಾಗಿ ಹಂಬಲಿಸುವುದು ಮತ್ತು ಅವನಿಗಾಗಿ ಸಮಯ ತೆಗೆದುಕೊಳ್ಳಲು ಇಚ್ಛಾ ಶಕ್ತಿಯನ್ನು ಉಪಯೋಗಿಸುವುದು.

ಧ್ಯಾನವು ಎಂದೂ ನಿಮಗೆ ಕೇವಲ ಒಂದು ನಿತ್ಯದ ಕಟ್ಟಳೆ, ಅಥವಾ ಚಿಟ್ಟುಹಿಡಿಸುವ ಚಟುವಟಿಕೆಯಾಗಿರಬಾರದು. ನನ್ನ ಪ್ರಯಾಣಗಳಲ್ಲಿ ನಾನು ದೇವಸ್ಥಾನಗಳಿಗೆ, ಮಸೀದಿಗಳಿಗೆ ಮತ್ತು ಚರ್ಚ್‌ಗಳಿಗೆ ಹೋಗಿದ್ದೇನೆ, ಮತ್ತು ಪ್ರಪಂಚದ ಎಲ್ಲೆಡೆ ಭಕ್ತಾದಿಗಳು ಅನ್ಯಮನಸ್ಕರಾಗಿ ಪ್ರಾರ್ಥನೆ ಮಾಡುವುದನ್ನು ನೋಡಿದ್ದೇನೆ.

ಏಸುಕ್ರಿಸ್ತನು ಓಡಾಡಿದ ಮತ್ತು ಭಗವಂತನೊಡನೆ ಸಂಸರ್ಗವನ್ನು ಹೊಂದಿದ ಜೆರುಸಲೇಮ್‌ನ ಪವಿತ್ರ ಸ್ಥಳಗಳಿಗೆ ನಾನು ಭೇಟಿ ನೀಡಿದ್ದೇನೆ ಮತ್ತು ಒಬ್ಬ ಪಾದ್ರಿಯು ತಾನು ಯಾರ ಬಗ್ಗೆ ಪ್ರಾರ್ಥಿಸುತ್ತಿದ್ದಾನೋ ಅದಕ್ಕಿಂತ ಹೆಚ್ಚಿನ ಆಸಕ್ತಿಯನ್ನು ತನ್ನ ಸಭಿಕರಲ್ಲಿ ತೋರಿಸುತ್ತಾ ಯಾಂತ್ರಿಕವಾಗಿ ಪೂಜೆ ಮಾಡುತ್ತಾ ಯಾಂತ್ರಿಕವಾಗಿ ಪ್ರಾರ್ಥನೆಯನ್ನು ಹೇಳುತ್ತಿದ್ದುದನ್ನು ನೋಡಿದ್ದೇನೆ. ನನ್ನ ಒಳಗಿನ ಧ್ವನಿ ಹೇಳುತ್ತಿತ್ತು: “ಇಲ್ಲ, ಇಲ್ಲ, ಇಲ್ಲ! ನೀನು ಇಲ್ಲಿರುವುದು ಏಸು ಕ್ರಿಸ್ತನೊಡನೆ ಸಂವಹನ ನಡೆಸುವುದಕ್ಕಾಗಿ!”

ಅದೇ ರೀತಿ, ಭಾರತದ ದೇವಸ್ಥಾನಗಳಲ್ಲಿ, ಪೂಜಾರಿಗಳು ದೇವರೊಡನೆ ಸಂಭಾಷಿಸುತ್ತಿರುವ ಇಡೀ ಸಮಯದಲ್ಲಿ ಬೇರೆ ಜನರನ್ನು ನೋಡುವುದರಲ್ಲೇ ಕಾರ್ಯನಿರತರಾಗಿ ತಮ್ಮ ಪೂಜೆಗಳನ್ನು ಮಾಡುವುದನ್ನು ನೋಡಿದ್ದೇನೆ. ಯಾರಿಗಾಗಿ ಆ ಪ್ರಾರ್ಥನೆಗಳು ಉದ್ದೇಶಿಸಲಾಗಿತ್ತೋ ಅವನು ಆಲಿಸುತ್ತಲೇ ಇರಲಿಲ್ಲ, ಏಕೆಂದರೆ ಆ ಭಕ್ತಾದಿಗಳು ಅವನ ಬಗ್ಗೆ ಯೋಚಿಸುತ್ತಲೇ ಇರಲಿಲ್ಲ!

ಆಧುನಿಕ ಧರ್ಮದ ದೊಡ್ಡ ತಪ್ಪೆಂದರೆ, ಹೊರಗಡೆ ಏನು ನಡೆಯುತ್ತಿದೆಯೋ ಅದರಲ್ಲಿ ತೊಡಗಿಕೊಂಡು ಯಾರನ್ನುದ್ದೇಶಿಸಿ ಅದು ಇರಬೇಕೋ ಅವನನ್ನು ಸಂಪೂರ್ಣವಾಗಿ ಮರೆತುಬಿಡುವುದು.

ನಮಗೆ ಗುರೂಜಿ ಏನು ಕಲಿಸಿದ್ದಾರೆಂದರೆ, ನಾವು ಧ್ಯಾನಕ್ಕೆ ಕುಳಿತಾಗ, ನಮಗೆ ವ್ಯವಹಾರವಿರುವುದು ಭಗವಂತನೊಂದಿಗೆ ಮಾತ್ರ. ಬೇರೆ ಯಾವುದೇ ಅಡಚಣೆಯು ಪ್ರವೇಶಿಸದ ಹಾಗೆ ಕೇವಲ ಐದು ನಿಮಿಷಗಳವರೆಗೆ ಅವನೊಡನೆ ಮಾತನಾಡಿ. ಆಗ ಅವನೊಡನೆಯ ನಿಮ್ಮ ಬಾಂಧವ್ಯವು ಕ್ರಮೇಣವಾಗಿ ಹೆಚ್ಚು ವಾಸ್ತವಿಕವಾಗುವುದನ್ನು ನೀವು ಕಾಣುತ್ತೀರಿ.

ಅತ್ತಿತ್ತ ಕದಲದ ಭಕ್ತಿಯನ್ನು ಬೆಳೆಸಿಕೊಳ್ಳುವ ಒಂದು ಮಾರ್ಗವೆಂದರೆ ಮನಸ್ಸಿನಲ್ಲಿಯೇ ಭಗವಂತನ ಹೆಸರನ್ನು ಅಥವಾ ಅವನಿಗೆ ಸಂಬೋಧಿಸಿದ ಯಾವುದಾದರೂ ಒಂದು ಚಿಕ್ಕ ಚಿಂತನೆಯನ್ನು ಅಥವಾ ಪ್ರಾರ್ಥನೆಯನ್ನು ಮತ್ತೆ ಮತ್ತೆ ಹೇಳಿಕೊಳ್ಳುವುದು. ಇದನ್ನೇ ಭಾರತವು ಜಪ ಯೋಗವೆಂದು ಕರೆಯುತ್ತದೆ ಮತ್ತು ಪಶ್ಚಿಮವು ಇದನ್ನು “ಸಾನ್ನಿಧ್ಯವನ್ನು (ಭಗವಂತನ) ಅಭ್ಯಾಸ ಮಾಡುವ” ಒಂದು ವಿಧಾನ ಎಂದು ತಿಳಿದಿದೆ.

ಅವನಿಗೆ ಸಂಬೋಧಿಸಿದ ಒಂದು ಗೀತೆಯ ಮೂಲಕ ಅವನ ಮೇಲಿನ ಹಂಬಲವನ್ನು ವ್ಯಕ್ತಪಡಿಸುವುದು ಕೂಡ ಸಹಾಯಕವಾಗಬಹುದು — ಗುರೂಜಿಯವರ ಕಾಸ್ಮಿಕ್‌ ಚಾಂಟ್ಸ್‌ (ದಿವ್ಯ ಗೀತೆಗಳು)ನಂತಹದ್ದೊಂದು. ಭಗವಂತನನ್ನು ಉದ್ದೇಶಿಸಿ ಹಾಡುವ ಅನೇಕ ಪ್ರೀತಿಯ ಗೀತೆಗಳಿವೆ, ಅವನನ್ನುದ್ದೇಶಿಸಿ ಅವುಗಳನ್ನು ಬರೆಯದೇ ಇದ್ದರೂ ಕೂಡ. ಗುರುಗಳಿಗೆ ಬಹಳ ಇಷ್ಟವಿದ್ದ ಗೀತೆಯೆಂದರೆ, “ದಿ ಇಂಡಿಯನ್‌ ಲವ್‌ ಕಾಲ್‌.” ಒಬ್ಬ ಮಾನವ ಪ್ರೇಮಿಗಲ್ಲ, ಆದರೆ ಭಗವಂತನಿಗೆ ಇಂತಹ ಭಾವಾತ್ಮಕತೆ ಹಾಗೂ ಹಂಬಲವನ್ನು ವ್ಯಕ್ತಪಡಿಸುವುದು ಎಷ್ಟು ಮೈ ಜುಮ್ಮೆನ್ನುವಂತಿರುತ್ತದೆ.

ಅಷ್ಟೇ ಅಲ್ಲದೆ, ಭಗವಂತನ ಪ್ರೇಮದಲ್ಲಿ ಸದಾ ತಲ್ಲೀನರಾಗಿದ್ದಂತಹ, ಗುರೂಜಿಯವರಂತಹ ಮಹಾನ್‌ ಆತ್ಮಗಳ ಜೀವನದ ಬಗ್ಗೆ ಕೂಡ ಓದಿರಿ.

ಭಕ್ತಿಯನ್ನು ಜಾಗೃತಗೊಳಿಸುವುದಕ್ಕಿರುವ ಮಹಾನ್‌ ಸಹಾಯವೆಂದರೆ, ನೀವು ಬಹಳ ಪ್ರೀತಿಸುವ ಒಬ್ಬರ ಬಗ್ಗೆ ಯೋಚಿಸುವುದು, ಅಂದರೆ ಯಾರ ಪ್ರೀತಿಯು ನಿಮಗೆ ಬಹಳ ಪ್ರೇರಣಾದಾಯಕವಾಗಿದೆಯೋ ಅವರ ಬಗ್ಗೆ. ಗುರೂಜಿ ತಮ್ಮ ತಾಯಿಯ ಮೇಲೆ ತಮಗಿದ್ದ ಪ್ರೀತಿಯ ಬಗ್ಗೆ ಆಲೋಚಿಸುತ್ತಿದ್ದರು, ಅದು ಬಹಳ ಸುಂದರವಾಗಿತ್ತು, ಆದರ್ಶಪ್ರಾಯವಾಗಿತ್ತು ಮತ್ತು ಪರಿಶುದ್ಧವಾಗಿತ್ತು; ಅವರು ಆಕೆಯನ್ನು ಪೂಜಿಸುತ್ತಿದ್ದರು. ನೀವು ಅಂತಹ ಒಬ್ಬ ವ್ಯಕ್ತಿಯ ಬಗ್ಗೆ ಇರುವ ನಿಮ್ಮ ಪ್ರೀತಿಯನ್ನು ನೆನಪಿಸಿಕೊಂಡಾಗ — ಉದಾಹರಣೆಗೆ ನಿಮ್ಮ ತಾಯಿಯ ಬಗ್ಗೆ — ನಿಮ್ಮ ಮನಸ್ಸು ಮತ್ತು ಭಾವನೆಯನ್ನು ದಿವ್ಯ ಮಾತೆಯೆಡೆಗೆ ತಿರುಗಿಸಿ. “ಓಹ್‌, ದಿವ್ಯ ಮಾತೆ, ನನ್ನ ತಾಯಿಯ ರೂಪದಲ್ಲಿ ನೀನು ನನ್ನ ಬಳಿಗೆ ಬಂದೆ ಎಂದು ನನಗೆ ತಿಳಿದಿದೆ.”

ಅದು ಪೋಷಕರಾಗಿರಬಹುದು, ಪತಿಯಾಗಿರಬಹುದು, ಪತ್ನಿಯಾಗಿರಬಹುದು, ಮಗುವಾಗಿರಬಹುದು ಅಥವಾ ಸ್ನೇಹಿತರಾಗಿರಬಹುದು. ಆ ವ್ಯಕ್ತಿಯ ಪ್ರಿಯವಾದ ಗುಣದ ಬಗ್ಗೆ ಯೋಚಿಸಿ ಮತ್ತು ನಿಮ್ಮ ಅಂತರಾಳದೊಳಗೆ ಪ್ರೀತಿಯು ಉಕ್ಕಿಬಂದಾಗ, ತತ್‌ಕ್ಷಣ ನಿಮ್ಮ ಮನಸ್ಸನ್ನು ಭಗವಂತನ ಮೇಲಿರಿಸಿ. ಆ ಕ್ಷಣಗಳಲ್ಲಿ ಹೀಗೆ ಯೋಚಿಸಿ: “ನೀನು ಅವರೊಳಗೆ ಪ್ರೀತಿಯನ್ನು ಊರಿಸದೇ ಇದ್ದಲ್ಲಿ ಆ ವ್ಯಕ್ತಿಯು ನನ್ನನ್ನು ಪ್ರೀತಿಸುತ್ತಿರಲಿಲ್ಲ.” ಎಲ್ಲ ಪ್ರೀತಿಯೂ ಕೇವಲ ಭಗವಂತನಿಂದ ಮಾತ್ರ ಹೊರಹೊಮ್ಮುತ್ತದೆ. ನೀವು ಈ ರೀತಿ ಭಾವಿಸಿದಾಗ, ಕ್ರಮೇಣವಾಗಿ ಆ ಪ್ರೀತಿಯ ಹಿಂದಿರುವ ಪ್ರೀತಿಯ (ಭಗವಂತನ) ಬಗ್ಗೆ ನೀವು ಪ್ರೀತಿಯನ್ನು ಬೆಳೆಸಿಕೊಳ್ಳಲು ಆರಂಭಿಸುವಿರಿ.

ದಿನದ ಅವಧಿಯಲ್ಲಿ, ಯಾರಾದರೂ ನಿಮಗೆ ಸಹಾಯ ಮಾಡಲು ಏನನ್ನಾದರು ಮಾಡಿದಾಗ, ಆ ಕೊಡುಗೆಯ ನೀಡುವಿಕೆಯಲ್ಲಿ ಸದಾ ಭಗವಂತನ ಕರಗಳನ್ನು ನೋಡಿ. ಯಾರಾದರೂ ನಿಮ್ಮ ಬಗ್ಗೆ ಪ್ರೀತಿಯಿಂದ ಮಾತನಾಡಿದಾಗ, ಆ ನುಡಿಗಳ ಹಿಂದೆ ಭಗವಂತನ ಧ್ವನಿಯನ್ನು ಕೇಳಿ. ಯಾವುದಾದರೂ ಒಳ್ಳೆಯದು ಅಥವಾ ಸುಂದರವಾದದ್ದು ನಿಮ್ಮ ಬದುಕನ್ನು ಪ್ರಸಾದಿಸಿದಾಗ, ಅದು ಭಗವಂತನಿಂದ ಬಂದದ್ದು ಎಂದು ಭಾವಿಸಿ.

ನಿಮ್ಮ ಜೀವನದ ಪ್ರತಿಯೊಂದನ್ನೂ ಭಗವಂತನೊಂದಿಗೆ ಸಂಬಂಧಿಸಿ. ಆ ಪರಿಭಾಷೆಯಲ್ಲಿ ಯೋಚಿಸಿ ಆಗ ಇದ್ದಕ್ಕಿದ್ದಂತೆ ಒಂದು ದಿನ, “ಓಹ್‌, ಕೇವಲ ಅವನೊಬ್ಬನೊಂದಿಗೇ ನಾನು ವ್ಯವಹರಿಸಬೇಕಾದುದು.” ಎಂದು ಕಾಣಲಾರಂಭಿಸುತ್ತೀರಿ.

ಎಲ್ಲ ಮಾನವ ಜೀವಿಗಳ ಬದುಕಿನಲ್ಲಿ ಭಗವಂತನೇ ಸರ್ವಸಮಾನವಾದ ಸಾಮಾನ್ಯ ಗುಣ. ಅವನೇ ನಮ್ಮೆಲ್ಲ ಕ್ರಿಯೆಗಳ ಹಿಂದಿರುವ ಪ್ರಧಾನ ಚಾಲಕ, ನಮ್ಮ ಮಹಾನ್‌ ಶುಭಾಕಾಂಕ್ಷಿ ಮತ್ತು ಕೊಡುಗೈ ದಾನಿ. ಅವನನ್ನು ಪ್ರೀತಿಸಲು ಮತ್ತು ಅವನ ಪ್ರೀತಿಯನ್ನು ಹಿಂದಿರುಗಿ ಪಡೆಯಲು ಇದಕ್ಕಿಂತ ಮಹತ್ವದ ಪ್ರೇರಣೆಯಲ್ಲದೆ ಬೇರೆ ಯಾವುದಾದರೂ ಬೇಕೆ?

ಕಮಲ

ಇದನ್ನು ಹಂಚಿಕೊಳ್ಳಿ