ಶ್ರೀ ಶ್ರೀ ಮೃಣಾಲಿನಿ ಮಾತಾ (ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಷಿಪ್‌ನ ಅಂದಿನ ಅಧ್ಯಕ್ಷರು) ಅವರ ಹೊಸ ಪುಸ್ತಕ ಮ್ಯಾನಿಫೆಸ್ಟಿಂಗ್ ಡಿವೈನ್ ಕಾನ್ಷಿಯಸ್‌ನೆಸ್ ಇನ್ ಡೈಲಿ ಲೈಫ್ ಪ್ರಕಟವಾದ ಸ್ವಲ್ಪ ದಿನಗಳಲ್ಲೇ ಇಂಟಗ್ರಲ್ ಯೋಗ ಮ್ಯಾಗಜಿನ್‌ನಲ್ಲಿ 2014ರಲ್ಲಿ ಮೊದಲು ಪ್ರಕಟವಾದ ವೈಎಸ್‌ಎಸ್/ಎಸ್‌ಆರ್‌ಎಫ್ ಅಧ್ಯಕ್ಷರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರ ಸಂದರ್ಶನದ ಆಯ್ದ ಭಾಗಗಳನ್ನು ಕೆಳಗೆ ಕೊಡಲಾಗಿದೆ. ಈ ಪುಸ್ತಕವು ಆಧ್ಯಾತ್ಮಿಕ ಮಾರ್ಗದಲ್ಲಿ ಯಶಸ್ವಿ ಎಂದರೆ ಏನು ಎಂಬುದರ ಸಾರವನ್ನು ಹೇಗೆ ಹಿಡಿದಿಟ್ಟುಕೊಂಡಿದೆ ಎಂಬುದರ ಮೇಲೆ ಈ ಸಂದರ್ಶನ ಕೇಂದ್ರಿತವಾಗಿತ್ತು. 2017ರಲ್ಲಿ ಮೃಣಾಲಿನಿ ಮಾತಾರವರು ನಿಧನರಾದ ನಂತರ ಸ್ವಾಮಿ ಚಿದಾನಂದ ಗಿರಿಯವರು ಅಧ್ಯಕ್ಷರಾದರು.
ಸಂಪೂರ್ಣ ಸಂದರ್ಶನವನ್ನು ಯೋಗದಾ ಸತ್ಸಂಗ ಮ್ಯಾಗಜಿನ್‌ನ 2022ರ ಸಂಚಿಕೆಯಲ್ಲಿ ಓದಬಹುದು. (ಈ ಮ್ಯಾಗಜಿನ್‌ಗೆ ಚಂದಾದಾರರಾಗಿರುವವರು ಈ ಸಂಚಿಕೆಯನ್ನು ಯೋಗದಾ ಸತ್ಸಂಗ ಆನ್‌ಲೈನ್ ಗ್ರಂಥಭಂಡಾರದಲ್ಲಿ ಓದಬಹುದು. ಮುಂಬರುವ ವಾರಗಳಲ್ಲಿ, ಹಿಂದಿನ ಸಂಚಿಕೆಗಳಲ್ಲಿ ಪ್ರಕಟವಾಗಿದ್ದ ನೂರಾರು ಪುಟಗಳು ಅವರಿಗೆ ಲಭ್ಯವಾಗಲಿದೆ, ಅದನ್ನು ಈ ಆನ್‌ಲೈನ್ ಗ್ರಂಥಭಂಡಾರದ ಮೂಲಕ ನೀಡಲಾಗುತ್ತದೆ.)

ಇಂಟಗ್ರಲ್ ಯೋಗ ಮ್ಯಾಗಜಿನ್ (ಐವೈಎಂ): ಯಶಸ್ಸನ್ನು ನೀವು ಹೇಗೆ ನಿರೂಪಿಸುತ್ತೀರಿ?
ಸ್ವಾಮಿ ಚಿದಾನಂದ ಗಿರಿ (ಎಸ್‌ಸಿ): ಶ್ರೀ ಮೃಣಾಲಿನಿ ಮಾತಾರವರ ಹೊಸ ಪುಸ್ತಕದ ಮ್ಯಾನಿಫೆಸ್ಟಿಂಗ್ ಡಿವೈನ್ ಕಾನ್ಷಿಯಸ್‌ನೆಸ್ ಇನ್ ಡೈಲಿ ಲೈಫ್ ಎಂಬ ಶೀರ್ಷಿಕೆಯೇ ಒಂದು ಅದ್ಭುತ ನಿರೂಪಣೆ ಎಂದು ನನಗನಿಸುತ್ತದೆ. ಜೀವನದಲ್ಲಿ ಹಾಗೂ ಖಂಡಿತವಾಗಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಯಶಸ್ಸು, ಎಂದರೆ ನಮ್ಮೊಳಗಿರುವ ದಿವ್ಯ ಸತ್ವದ ಅಂದರೆ ಆತ್ಮದ ಅಂತರ್ನಿಹಿತ ಸಹಜ ಗುಣಗಳನ್ನು ಹೊರಗೆಡಹುವುದು.
ಐವೈಎಂ: ಆ ಸಹಜ ಗುಣಗಳ್ಯಾವುವು?
ಎಸ್‌ಸಿ: ದಿನದ 24 ಗಂಟೆಗಳೂ ನಾವು ಬದ್ಧರಾಗಿರಲು ಸಾಧ್ಯವಾದರೆ, ಎಂದು ಇಚ್ಛಿಸುವ ಎಲ್ಲ ಅದ್ಭುತ ಸಂಗತಿಗಳು: ಆನಂದ, ಪ್ರೇಮ, ಸಮಚಿತ್ತತೆ, ಶಾಂತಿ, ಸದಾ ನಮ್ಮ ಅಸ್ತಿತ್ವದ ಪ್ರಶಾಂತ ಕೇಂದ್ರದಲ್ಲಿರುವ ಸಾಮರ್ಥ್ಯ. ಮತ್ತು ಆ ಪ್ರಶಾಂತ ಕೇಂದ್ರದಿಂದ ನಾವು ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಸವಾಲುಗಳಿಗೆ ಪ್ರತಿಸ್ಪಂದಿಸಬಹುದು. ಎಂತಹದೇ ಘಟನೆ ಸಂಭವಿಸಲಿ, ಅದನ್ನು ನಾವು ದಿವ್ಯ ಪ್ರಜ್ಞೆಯ, ದಿವ್ಯ ಆನಂದದ ಮತ್ತು ಸೇವಾ ಮನೋಭಾವದಿಂದ ಅಥವಾ ದಿವ್ಯ ನಿಸ್ವಾರ್ಥತೆಯ ಅಂತಃಪ್ರವಾಹದಿಂದ ಎದುರಿಸಲು ಕಲಿಯಬಹುದು. ಪರಮಹಂಸ ಯೋಗಾನಂದರು ಹೇಳಿದ ಹಾಗೆ: “ಒಡೆದು ಹೋಳಾಗಿ ಅಪ್ಪಳಿಸುತ್ತಿರುವ ಪ್ರಪಂಚಗಳ ಮಧ್ಯೆ ಅಚಲವಾಗಿ ನಿಲ್ಲುವ ಸಾಮರ್ಥ್ಯ.”
ಐವೈಎಂ: ಹೇಗೆ ನಾವು ಅಚಲರಾಗಿ ನಿಲ್ಲಬಹುದು?
ಎಸ್‌ಸಿ: ಮೊದಲಿಗೆ ಪ್ರಪ್ರಥಮವಾಗಿ ನಾವು ಅಡಚಣೆಗಳ ಬಗ್ಗೆ ಬಹಳ ವಸ್ತುನಿಷ್ಠರಾಗಿರಬೇಕು — ಅಂತಹ ಬದುಕನ್ನು ಒಂದು ನಿಜವಾದ ಸವಾಲನ್ನಾಗಿ ಮಾಡುವ ನಮ್ಮೊಳಗಿರುವ ಹಾಗೂ ನಮ್ಮ ಸುತ್ತಲಿರುವ ಪ್ರಪಂಚದ ವಿಷಯಗಳ ಬಗ್ಗೆ. ಇದು ಅಷ್ಟು ಸುಲಭವಾದದ್ದಲ್ಲ. ಆಧ್ಯಾತ್ಮಿಕ ಜೀವನದ ನೈಜ ಪ್ರಗತಿಯ ಆರಂಭವೆಂದರೆ ಇದೊಂದು ಹೋರಾಟ ಎಂದು ಒಪ್ಪಿಕೊಳ್ಳುವುದು. ಜೀವನದಲ್ಲಿ ಯಶಸ್ಸನ್ನು ಒಂದು ಬೆಳ್ಳಿಯ ತಟ್ಟೆಯಲ್ಲಿಟ್ಟು ನಮಗೆ ಕೊಡಲಾಗುವುದಿಲ್ಲ. ಆಧ್ಯಾತ್ಮಿಕ ಪ್ರಜ್ಞೆಯು ಬಹಳ ಸುಲಭವಾದದ್ದು ಎಂದು ಪರಿಗಣಿಸುವುದು ಅಥವಾ ಉಪೇಕ್ಷೆ ಮಾಡುವಂತಹದ್ದಲ್ಲ.
ಒಂದರ್ಥದಲ್ಲಿ ಇದೇ ಇಡೀ ಭಗವದ್ಗೀತೆಯ ಸಂದೇಶ. ಈ ಗ್ರಂಥವನ್ನು ನಾನು ಯೋಗ ಗ್ರಂಥಗಳಲ್ಲೇ ಅತಿಶಯವಾದದ್ದು, ಆದ್ದರಿಂದ ಜೀವನದ ನೈಜ ಯಶಸ್ಸಿಗೆ ಮಹಾನ್ ಗ್ರಂಥ ಎಂದು ಪರಿಗಣಿಸುತ್ತೇನೆ. ಗೀತೆಯ ಸಂದೇಶವನ್ನು ಪರಸ್ಪರ ವಿರೋಧಿಗಳಾದ ಎರಡು ವಂಶಗಳ ಕಥೆಯ ರೂಪದಲ್ಲಿ ಹೇಳಲಾಗಿದೆ. ಪರಮಹಂಸ ಯೋಗಾನಂದರು ಗೀತೆಯನ್ನು ಯೋಗದ ದೃಷ್ಟಿಕೋನದಿಂದ ವ್ಯಾಖ್ಯಾನಿಸುತ್ತಾ, ಅದು ನಮ್ಮದೇ ಅಸ್ತಿತ್ವದ ವಿವಿಧ ಅಂಶಗಳ ನಡುವಿನ ಯುದ್ಧ ಎಂದು ತೋರಿಸುತ್ತಾ ಅದರ ಆಳವಾದ ಸಾಂಕೇತಿಕ ಅರ್ಥವನ್ನು ವಿವರಿಸಿದ್ದಾರೆ. ನಮ್ಮ ಒಂದು ಪಾರ್ಶ್ವವು ಸಾಮಾನ್ಯವಾಗಿ ಅಹಂ, ಸ್ವಾರ್ಥ, ಅನಿಯಂತ್ರಿತ ಮತ್ತು ಅನಾಕರ್ಷಕ ಭಾವನೆಗಳಿಂದ ಪ್ರಚೋದಿತವಾಗುತ್ತದೆ — ನಮ್ಮ ಮರ್ತ್ಯ ಸ್ವಭಾವದ ಕಪ್ಪುಮುಖ. ಇನ್ನೊಂದು ಪಾರ್ಶ್ವವು ನಮ್ಮ ದಿವ್ಯ ಅಂತಸ್ಸತ್ವ ಮತ್ತು ಸಾಮರ್ಥ್ಯಗಳು, ಅವು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಇದ್ದು, ನಾವು ನಮ್ಮ ದಿವ್ಯ ಪ್ರಕೃತಿಯ ಅರಿವಿನಲ್ಲಿ ಬಾಳಬೇಕೆಂದು ಹೇಳುವ ಭಾಗ. ಇದು ದೈನಂದಿನ ಯುದ್ಧವಾಗಿದ್ದು, ಪ್ರತಿ ದಿನವನ್ನೂ, ಆ ದಿನ ಸಂಭವಿಸಿದ ಎಲ್ಲದಕ್ಕೂ ನಮ್ಮ ವರ್ತನೆಗಳು, ಮನೋಭಾವಗಳು ಮತ್ತು ಪ್ರತಿಕ್ರಿಯೆಗಳನ್ನು ನಾವು ಪರಿಶೀಲಿಸುತ್ತ, ಆತ್ಮಾವಲೋಕನದೊಂದಿಗೆ, ಆತ್ಮ-ವಿಶ್ಲೇಷಣೆಯೊಂದಿಗೆ ಪ್ರಾರಂಭಿಸಿ, ಕೊನೆಗೊಳಿಸುವ ಮೂಲಕ ಮಾತ್ರ ಗೆಲ್ಲಬಹುದು.
ಆದ್ದರಿಂದ, ಜೀವನವು ಒಂದು ಯುದ್ಧ ಎಂದು ಗುರುತಿಸುವುದು ಒಂದು ಅಂಶವಾಗಿದೆ. ಅಲ್ಲಿಂದ ಎಲ್ಲಿಗೆ ಹೋಗಬೇಕು? ನಮ್ಮ ದೈನಂದಿನ ವರ್ತನೆಗಳು ಮತ್ತು ಮನೋಭಾವಗಳಲ್ಲಿ, ನಮ್ಮ ಜೀವನದ ಸುತ್ತ ಸುತ್ತುವಂತೆ ಮಾಡಲು ಪ್ರಯತ್ನಿಸುತ್ತಿರುವ ಈ ದೈವಿಕ ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುವ ಮೂಲಕ ನಾವು ಪ್ರಾರಂಭಿಸುತ್ತೇವೆ. ಇದೇ ಮೃಣಾಲಿನಿ ಮಾತಾರವರ ಪುಸ್ತಕದ ವಿಷಯ.
ಐವೈಎಮ್: ಆ ಗುಣಗಳನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು?
ಎಸ್‌ಸಿ: ಪ್ರತಿ ದಿನವೂ ಧ್ಯಾನವನ್ನು ಅಭ್ಯಾಸ ಮಾಡುವ ನಿಜವಾದ ಅವಶ್ಯಕತೆಯ ಬಗ್ಗೆ ಪರಮಹಂಸ ಯೋಗಾನಂದರು ಒತ್ತಿ ಹೇಳಿದ್ದನ್ನು ಆಕೆ ಹೇಳುತ್ತಾರೆ. ಯೋಗದಂತೆಯೇ ಧ್ಯಾನವೆಂಬುದು ಒಂದು ಶಬ್ದ, ಅದನ್ನು ಹಲವಾರು ವಿಭಿನ್ನ ರೀತಿಯಲ್ಲಿ ಉಪಯೋಗಿಸಲಾಗುತ್ತದೆ. ನೀವು ಧ್ಯಾನದ ನೈಜ, ಪರಿವರ್ತಕ ಶಕ್ತಿಯನ್ನು ಅರಿತಾಗ, ಶಾಂತವಾಗಿ ಮತ್ತು ಸಮರಸದಿಂದ ಸುಮ್ಮನೆ ಕುಳಿತುಕೊಳ್ಳುವ ಒಂದು ಅವಧಿಗಿಂತ ಅದು ಬಲು ಹೆಚ್ಚಿನದು ಎಂದು ತಿಳಿಯುತ್ತೀರಿ. ಧ್ಯಾನವೆಂದರೆ, ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಸುಪ್ತವಾಗಿರುವ ಆ ಸಹಜ ದೈವತ್ವವನ್ನು ಸಂಪರ್ಕಿಸಲು ಮತ್ತು ಅಭಿವ್ಯಕ್ತಿಸಲು, ಮನಸ್ಸು ಮತ್ತು ಆತ್ಮದ ಏಕಾಗ್ರತಾ ಶಕ್ತಿಯ ಅತ್ಯಂತ ಶಿಸ್ತಿನ ಬಳಕೆ.
ನಮ್ಮ ಮನಸ್ಸು, ಹೃದಯ, ಭಾವನೆಗಳು ಮತ್ತು ಮಾನುಷ ಸ್ವಭಾವದ ಮೇಲ್ಮೈ ಭಾವೋದ್ವೇಗಗಳು ಒಂದು ನಿರಂತರ ಪ್ರತಿಕ್ರಿಯಾತ್ಮಕತೆ, ವಿಪ್ಲವ, ರಾಗದ್ವೇಷಗಳು ಎಂಬ ಸ್ಥಿತಿಯಲ್ಲಿ ಇರುವವರೆಗೂ, ಈ ನಿರಂತರ ಬಡಬಡಿಕೆ, ನಾವು ಸಂಪರ್ಕಿಸಲು ಬಯಸುತ್ತಿರುವ ದಿವ್ಯ ಪ್ರಜ್ಞೆಯ ಪ್ರಶಾಂತ ತಳಗಳನ್ನು ಮರೆಮಾಡುತ್ತದೆ ಮತ್ತು ಅಸ್ಪಷ್ಟಗೊಳಿಸುತ್ತದೆ. ಧ್ಯಾನವು, ನಮ್ಮ ಅರಿವನ್ನು ಅವಿಶ್ರಾಂತ ಮತ್ತು ಅಸಮಂಜಸ ಉದ್ವೇಗಗಳ ಸ್ತರದ ಅಡಿಗೆ ತೆಗೆದುಕೊಂಡು ಹೋಗುವ ಒಂದು ಶಿಸ್ತುಬದ್ಧ ಅಭ್ಯಾಸ — ಎಲ್ಲಿ ಬೆಳಕು, ದಿವ್ಯತೆ, ಪ್ರಶಾಂತತೆ ಇದೆಯೋ ಮತ್ತು ಎಲ್ಲಿ ಎಲ್ಲವೂ ಪರಿಪೂರ್ಣವಾಗಿದೆಯೆಂಬ ಆ ಉನ್ನತ ವಾಸ್ತವತೆಯ ಅರಿವಿದೆಯೋ ಆ ಪ್ರಜ್ಞೆಯ ಒಂದು ಆಳವಾದ ಸ್ತರ.
ನಮ್ಮ ಮನಸ್ಸು ಮತ್ತು ಸಹಜಶಕ್ತಿಗಳು ಕೇವಲ ಗ್ರಹಿಕೆಯ ಭೌತಿಕ ಸಾಧನಗಳಾದ ಇಂದ್ರಿಯಗಳ ಮೂಲಕ ಮಾತ್ರ ಕಾರ್ಯನಿರ್ವಹಿಸುತ್ತವೋ ಆಗ ಅವು ಈ ಲೌಕಿಕ ಪ್ರಪಂಚವೇ ನಿಜವಾದದ್ದು ಎಂದು ಯೋಚಿಸುವಂತೆ ನಮ್ಮನ್ನು ಮೋಸಗೊಳಿಸುತ್ತವೆ ಮತ್ತು ಭ್ರಮೆಗೊಳ್ಳುವಂತೆ ಮಾಡುತ್ತವೆ. ಮಾಯೆ ಅಥವಾ ಭ್ರಮೆ ನಮ್ಮನ್ನು ಬಹಳ ಗಂಭೀರವಾದ ಮತ್ತು ಭಯವನ್ನು ಹುಟ್ಟಿಸುವ ಉದ್ವೇಗಗಳತ್ತ ಸೆಳೆದುಕೊಳ್ಳುತ್ತದೆ. ಬಾಹ್ಯ ನಾಟಕದಲ್ಲಿ ಕೇಂದ್ರಿತವಾದ ನಮ್ಮ ಬಾಹ್ಯ ಸಾಧನಗಳಿಂದ ಪ್ರಾಣ ಶಕ್ತಿ ಮತ್ತು ಪ್ರಜ್ಞೆಯನ್ನು ಹಿಂತೆಗೆದುಕೊಳ್ಳುವುದರಿಂದ ಧ್ಯಾನವು, ನಮ್ಮೊಳಗಿರುವುದನ್ನು ಅಂದರೆ ಯಾವುದು ಏಳುಬೀಳುಗಳ ನಶ್ವರ ಪ್ರದರ್ಶನಕ್ಕಿಂತ ನಮ್ಮೊಳಗಿರುವ ಹೆಚ್ಚು ನಿಜವಾದದ್ದು ಮತ್ತು ಗಣನೀಯವಾದದ್ದನ್ನು ಹಂತ ಹಂತವಾಗಿ ಕಂಡುಕೊಳ್ಳಲು ಆಸ್ಪದ ನೀಡುತ್ತದೆ. ಆಗ ನಮ್ಮ ಆಂತರಿಕ ಜೀವನವು ಹಾದುಹೋಗುವ ಪ್ರದರ್ಶನಕ್ಕಿಂತ ಹೆಚ್ಚು ನೈಜವಾಗುತ್ತದೆ. “ಒಡೆದು ಹೋಳಾಗಿ ಅಪ್ಪಳಿಸುತ್ತಿರುವ ಪ್ರಪಂಚಗಳ ಮಧ್ಯೆ ಅಚಲನಾಗಿ ನಿಲ್ಲು” ಎಂದು ಪರಮಹಂಸ ಯೋಗಾನಂದರು ಹೇಳಿದಾಗ, ಆ ಪ್ರಜ್ಞೆಯಲ್ಲಿ ನೆಲೆಸುವ ಸಾಮರ್ಥ್ಯದ ಬಗ್ಗೆಯೇ ಅವರು ಹೇಳುತ್ತಿದ್ದುದು.
ಸ್ವಾಮಿ ಚಿದಾನಂದ ಗಿರಿ ಅವರ ಸಂಪೂರ್ಣ ಸಂದರ್ಶನವನ್ನು ಯೋಗದಾ ಸತ್ಸಂಗ ಮ್ಯಾಗಜಿನ್‌ನ 2022ರ ಸಂಚಿಕೆಯಲ್ಲಿ ನೀವು ನೋಡಬಹುದು. “ಶರೀರ, ಮನಸ್ಸು ಮತ್ತು ಆತ್ಮದ ಉಪಶಮನಕ್ಕೆ ಮೀಸಲಾದ” ಯೋಗದಾ ಸತ್ಸಂಗ ಮ್ಯಾಗಜಿನ್ ವರ್ಷಕ್ಕೊಮ್ಮೆ ಪ್ರಕಟವಾಗುತ್ತದೆ. ಮುದ್ರಿತ ಸಂಚಿಕೆಯನ್ನು ಪಡೆಯುವುದರ ಜೊತೆಗೆ ಮ್ಯಾಗಜಿನ್‌ಗೆ ಚಂದಾದಾರರಾದವರಿಗೆ ಯೋಗದಾ ಸತ್ಸಂಗ ಆನ್‌ಲೈನ್ ಗ್ರಂಥಭಂಡಾರದಲ್ಲಿರುವ ಡಿಜಿಟಲ್ ಆವೃತ್ತಿಯನ್ನು ಓದುವುದಕ್ಕೂ ಅವಕಾಶವಿದೆ. ಮುಂಬರುವ ವಾರಗಳಲ್ಲಿ, ಆನ್‌ಲೈನ್ ಗ್ರಂಥಭಂಡಾರವು ಪರಮಹಂಸ ಯೋಗಾನಂದರ, ಹಿಂದಿನ ಮತ್ತು ಪ್ರಸ್ತುತ ವೈಎಸ್‌ಎಸ್/ಎಸ್‌ಆರ್‌ಎಫ್ ಅಧ್ಯಕ್ಷರ ಮತ್ತು ಇತರ ನೆಚ್ಚಿನ ಲೇಖಕರ ನೂರಾರು ಪುಟಗಳ ವಿಷಯಗಳಗಳನ್ನು ಸಹ ಒಳಗೊಂಡಿರುತ್ತದೆ.