ಭಾರತ ಸರ್ಕಾರವು ಮತ್ತೊಮ್ಮೆ ಭಾರತದ ಅಮರ ಸಂತಾನಗಳಲ್ಲೊಬ್ಬರಾದ ನಮ್ಮ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರ ಆಧ್ಯಾತ್ಮಿಕ ಔನ್ನತ್ಯ ಮತ್ತು ಕೊಡುಗೆಗಳನ್ನು ಪರಿಗಣಿಸಿ ಅವರ 125ನೇ ಜನ್ಮ ದಿನೋತ್ಸವವನ್ನು ಸ್ಮರಿಸಿಕೊಳ್ಳಲು ನಿರ್ಧರಿಸಿದೆ ಎಂದು ಹೇಳಲು ನಮಗೆ ಬಹಳ ಸಂತೋಷವಾಗುತ್ತಿದೆ.
ನ್ಯಾಷನಲ್ ಇಂಪ್ಲಿಮೆಂಟೇಷನ್ ಕಮಿಟಿ (ಎನ್‌ಐಸಿ)ಯ ಸಹಾಯದೊಂದಿಗೆ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಇಂತಹ ಸ್ಮರಣಾರ್ಥ ದಿನಗಳನ್ನು ಆಯೋಜಿಸುತ್ತದೆ. ಭಾರತದ ಗೌರವಾನ್ವಿತ ಗೃಹ ಸಚಿವರಾದ ಶ್ರೀ ರಾಜನಾಥ್ ಸಿಂಗ್‌ರವರ ನೇತೃತ್ವದಲ್ಲಿ ಪರಮಹಂಸ ಯೋಗಾನಂದಜಿ ಅವರ 125ನೇ ಜನ್ಮದಿನೋತ್ಸವದ ಸ್ಮರಣಾರ್ಥ ದಿನವನ್ನು ಆಚರಿಸಲು ಒಂದು ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ವೈಎಸ್‌ಎಸ್‌ನ ಪ್ರತಿನಿಧಿಗಳ ಜೊತೆಗೆ ಅರ್ಥ ಸಚಿವರಾದ ಶ್ರೀ ಅರುಣ್ ಜೈಟ್ಲಿ, ಸಂಸ್ಕೃತಿ ಸಚಿವರಾದ ಡಾ. ಮಹೇಶ್ ಶರ್ಮ ಮತ್ತು ಇತರ ಗಣ್ಯ ಸರ್ಕಾರಿ ಅಧಿಕಾರಿಗಳು ಇದ್ದಾರೆ.
ವೈಎಸ್‌ಎಸ್‌ನ ಸಹಕಾರದೊಂದಿಗೆ ಭಾರತ ಸರ್ಕಾರವು ಪರಮಹಂಸ ಯೋಗಾನಂದಜಿ ಅವರ 125ನೇ ಜನ್ಮದಿನೋತ್ಸವದ ಸ್ಮರಣಾರ್ಥ ದಿನವನ್ನು ಗೌರವಿಸಲು ಮತ್ತು ಆಚರಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ:
- ನೂರಾರು ಗ್ರಂಥಭಂಡಾರಗಳು ಮತ್ತು ವಿಶ್ವವಿದ್ಯಾನಿಲಯಗಳೂ ಸೇರಿದಂತೆ ರಾಷ್ಟ್ರಾದ್ಯಂತ ಪರಮಹಂಸಜಿ ಅವರ ಯೋಗಿಯ ಆತ್ಮಕಥೆ ಮತ್ತು ಇತರ ಪುಸ್ತಕಗಳನ್ನು ಇಂಗ್ಲಿಷ್‌ನಲ್ಲಿ ಮತ್ತು ಭಾರತದ ಇತರ ಪ್ರಧಾನ ಭಾಷೆಗಳಲ್ಲಿ ಉಚಿತವಾಗಿ ಹಂಚುವುದು;
- ಆಸಕ್ತಿಯಿರುವ ಜನರಿಗಾಗಿ ಯೋಗ-ಧ್ಯಾನದ ತಂತ್ರಗಳು ಮತ್ತು ಬೋಧನೆಗಳನ್ನು ಪ್ರಸಾರ ಮಾಡಲು ಉಪನ್ಯಾಸಗಳು ಮತ್ತು ವಿಚಾರಸಂಕಿರಣಗಳನ್ನು ಏರ್ಪಡಿಸುವುದು.
- ಪ್ರಧಾನ ಭಾರತೀಯ ಭಾಷೆಗಳಲ್ಲಿ ಯೋಗಿಯ ಆತ್ಮಕಥೆಯ ಆಡಿಯೋ ಆವೃತ್ತಿಯನ್ನು ಪ್ರಕಟಿಸುವುದು;
- ಪರಮಹಂಸ ಯೋಗಾನಂದರ ಜೀವನ ಮತ್ತು ಗುರಿಯ ಸಾಧನೆಯನ್ನು ನಿರೂಪಿಸುವ ಒಂದು ಚಿತ್ರಾತ್ಮಕ ಕಥನದ ಪುಸ್ತಕವನ್ನು ಹೊರತರುವುದು;
- ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ಸ್ವಾಮ್ಯದ ಸಂಸ್ಥೆಗಳ ನೌಕರರನ್ನು ಸಂಪರ್ಕಿಸಿ ಅವರಿಗೆ ಪರಮಹಂಸಜೀ ಅವರ ಬೋಧನೆಗಳನ್ನು ಪರಿಚಯಿಸುವುದು.
- ಪರಮಹಂಸಜೀ ಅವರ ಪುಸ್ತಕಗಳು, ಇಬುಕ್ಸ್ ಮತ್ತು ಆಡಿಯೋ-ವಿಷ್ಯುಯಲ್ ವಸ್ತುಗಳನ್ನು ಪ್ರಕಟಿಸುವುದು.
- ರಾಂಚಿಯ ವೈಎಸ್‌ಎಸ್ ಶೈಕ್ಷಣಿಕ ಸಂಸ್ಥೆಗಳಿಗೆ ಆಧುನಿಕ ಮೂಲಭೂತ ವ್ಯವಸ್ಥೆಗಳು.
ಈ ಆಚರಣೆಗಳು ಮತ್ತು ಕಾರ್ಯಕ್ರಮಗಳು ಪರಮಹಂಸಜೀ ಅವರು ಪ್ರತಿಪಾದಿಸಿದ ಭಾರತದ ಪುರಾತನ ಆಧ್ಯಾತ್ಮಿಕ ಸಂಪತ್ತನ್ನು ಎಲ್ಲೆಡೆಯೂ ಪ್ರಸಾರ ಮಾಡುವ ಪವಿತ್ರ ವಾಹನಗಳಾಗಲಿ ಎಂದು ನಾವು ಆಶಿಸುತ್ತೇವೆ ಮತ್ತು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ. ಇದೆ ಸಮಯದಲ್ಲಿ, ಈ ಕಾರ್ಯಕ್ರಮಗಳನ್ನು ಆಯೋಜಿಸಲು ಬೆಂಬಲ ನೀಡುವ ಅಥವಾ ಅವರ ಉತ್ಸಾಹಭರಿತ ಭಾಗವಹಿಸುವಿಕೆಯ ಮೂಲಕ ಅವನ್ನು ಅದ್ಭುತ ಯಶಸ್ವಿಯಾಗಿ ಮಾಡುವುದಕ್ಕೆ ಬೆಂಬಲ ನೀಡುವ ಎಲ್ಲ ಸತ್ಯಾನ್ವೇಷಕರಿಗೂ ಮತ್ತು ಭಕ್ತಾದಿಗಳಿಗೂ ನಾವು ಬಹಳ ಆಭಾರಿಯಾಗಿದ್ದೇವೆ.
ನಮ್ಮ ಗುರುದೇವರ 125ನೇ ಜನ್ಮದಿನೋತ್ಸವವನ್ನು ನಾವು ಆಚರಿಸುತ್ತಿರುವಾಗ ನಾವು ನಿಮ್ಮೊಡನೆ ಕಾಲ ಕಾಲಕ್ಕೆ ನಡೆದದ್ದನ್ನು ಮತ್ತು ಸಮಾಚಾರಗಳನ್ನು ಹಂಚಿಕೊಳ್ಳುತ್ತೇವೆ. ಕೆಳಗೆ ನೀಡಿರುವ ಕಾರ್ಯಕ್ರಮಗಳ ಪಟ್ಟಿಯನ್ನು ನೋಡಿ.


















