ನಮ್ಮ ಗೌರವಾನ್ವಿತ ಅಧ್ಯಕ್ಷರಿಂದ, ಈ ವರ್ಷದ ಜುಲೈ 27ರಂದು ಆಚರಿಸುವ ಗುರುಪೂರ್ಣಿಮೆಯ ನಿಮಿತ್ತ ವಿಶೇಷ ಸಂದೇಶ
ಆತ್ಮೀಯರೇ,
ಗುರುಪೂರ್ಣಿಮೆಯ ಈ ಪವಿತ್ರ ದಿನದಂದು ನಾವು ಭಾರತದ ಹಾಗೂ ವಿಶ್ವಾದ್ಯಂತ ಭಕ್ತರ ಜೊತೆಯಲ್ಲಿ, ಸನಾತನ ಸಂಸ್ಕೃತಿಯಲ್ಲಿ, ಭಗವಂತನು ಆಳವಾಗಿ ಹಂಬಲಿಸುತ್ತಿರುವ ಅನ್ವೇಷಕರಿಗೆ ತಮ್ಮ ಪರಿಶುದ್ಧ ಪ್ರೇಮದ ಮತ್ತು ಜ್ಞಾನದ ಸಂಪರ್ಕ ದಾರಿಯನ್ನು ಅವರ ಆತ್ಮದ ಜಾಗೃತಿಗಾಗಿ ಕಳುಹಿಸಿರುವ ದೈವಿಕ ಸಖ ಹಾಗೂ ಮಾರ್ಗದರ್ಶಿ ಗುರುವನ್ನು ಗೌರವಿಸಲು ಒಟ್ಟಿಗೆ ಸೇರೋಣ. ನಮ್ಮೆಲ್ಲರ ಪ್ರೀತಿಯ ಗುರುದೇವ, ಶ್ರೀ ಶ್ರೀ ಪರಮಹಂಸ ಯೋಗಾನಂದರ ಚರಣಗಳಲ್ಲಿ ನಿಮ್ಮ ಪ್ರೇಮ ಮತ್ತು ಕೃತಜ್ಞತೆಯ ಕಾಣಿಕೆಗಳನ್ನು ಸಮರ್ಪಿಸಿದಾಗ, ನಿಮ್ಮ ಹೃದಯವು ಸಂಪೂರ್ಣವಾಗಿ ಅವರ ಆಧ್ಯಾತ್ಮಿಕ ವರದಾನಕ್ಕಾಗಿ ತೆರೆದುಕೊಳ್ಳಲಿ. ನಮ್ಮ ಮಾಯಾ-ಬಂಧಿತ ಮಾನವ ಸ್ವಭಾವವನ್ನು, ಭಗವಂತನ ಬ್ರಹ್ಮಾನಂದ ಪ್ರಜ್ಞೆಯ ಅಸೀಮ ಮುಕ್ತಿಯ ಕಡೆಗೆ, ಕರೆದೊಯ್ಯುವ ಭಗವಂತನೊಡನೆ ತಾದಾತ್ಮ್ಯಗೊಂಡಿರುವ ಆತ್ಮದ ಕಡೆಗೆ ಸೆಳೆಯಲ್ಪಡುವುದಕ್ಕಿಂತ ಹೆಚ್ಚಿನ ಉಡುಗೊರೆಯು ಮತ್ತೊಂದಿಲ್ಲ.
ನಿಮ್ಮ ಜೀವನದಲ್ಲಿ ಗುರುವಿನ ಪ್ರವೇಶವಾದ ನಂತರ, ಆತ್ಮ ಸ್ವಾತಂತ್ರ್ಯದ ಕಡೆಗಿನ ನಿಮ್ಮ ಮಾರ್ಗವು ತೆರೆಯಲ್ಪಟ್ಟಿದೆ. ಏಕೆಂದರೆ ಗುರು ಮತ್ತು ಅವರ ಬೋಧನೆಗಳ ಮೂಲಕ ಭಗವಂತನು, ಆ ಪ್ರಯಾಣದಲ್ಲಿ ತಾನೇ ನಿಮ್ಮ ಕೈ ಹಿಡಿದು ನಡೆಸುತ್ತಾನೆ. ಕ್ರಿಯಾಯೋಗ ವಿಜ್ಞಾನದಲ್ಲಿ ನಮ್ಮ ಗುರುಗಳು ನಮಗೆ ಚಂಚಲ ಮನಸ್ಸನ್ನು ನಿಶ್ಚಲಗೊಳಿಸಲು ಪವಿತ್ರ ತಂತ್ರಗಳನ್ನು ನೀಡಿರುವರು. ಅವರ ದೈವಿಕವಾಗಿ ಸ್ಪೂರ್ತಿಗೊಂಡ ಬರವಣಿಗೆ ಮತ್ತು ಜೀವನದ ಶಾಸ್ತ್ರಗಳಲ್ಲಿ, ನಾವು ಯಾವ ರೀತಿ ಭಗವಂತನ ನಿಯಮಗಳಾದ ಪ್ರೇಮ ಮತ್ತು ಸತ್ಯಗಳೊಡನೆ ಸಾಮರಸ್ಯದಿಂದ ಜೀವಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮತ್ತು ಅವರು ತಮ್ಮ ನಿರುಪಾಧಿಕ ಪ್ರೇಮವನ್ನು ನಮ್ಮೊಡನೆ ಸದಾ ಪ್ರಸ್ತುತವಾಗಿರುವಂತೆ ನೀಡಿರುವರು. ಗುರೂಜಿಯವರ ನುಡಿಗಳನ್ನು ನೆನಪಿಸಿಕೊಳ್ಳಿ, “ಭಗವಂತನು ನಿಮ್ಮನ್ನು ನನ್ನಲ್ಲಿಗೆ ಕಳುಹಿಸಿರುವನು, ಮತ್ತು ನಾನು ಎಂದಿಗೂ ನಿಮ್ಮನ್ನು ವಿಫಲವಾಗಿಸುವುದಿಲ್ಲ.” ಈ ಭರವಸೆಯನ್ನು ನಿಮ್ಮ ಹೃದಯದಲ್ಲಿ, ನಿಮ್ಮ ಮಾರ್ಗದ ಪ್ರತಿಯೊಂದು ಹೆಜ್ಜೆಯಲ್ಲಿಯೂ ನೆನಪಿಟ್ಟುಕೊಳ್ಳಿ. ಗುರುವಿಗೆ ನಿಮ್ಮಲ್ಲಿ ನಂಬಿಕೆಯಿದೆ. ಏಕೆಂದರೆ ಮಾನವ ಸ್ವಭಾವದ ದೋಷಾಸ್ಪದ ಮೇಲ್ಪದರದ ಒಳಗಡೆ ಇರುವ ನಿಜವಾದ “ನೀನು” — ನಿನ್ನ ಆತ್ಮ ಭಗವಂತನ ದೈವಿಕ ಗುಣಗಳನ್ನು ಪ್ರಕಟಿಸುವ ಸಂಭಾವ್ಯದಿಂದ ತುಂಬಿರುವ ನಿನ್ನನ್ನು ಅವನು ನೋಡುತ್ತಿರುತ್ತಾನೆ. ಒಂದು ವೇಳೆ ಮಾನವನ ಅಪೂರ್ಣತೆಗಳು ಮತ್ತು ಹಿಂದಿನ ತಪ್ಪುಗಳ ಮೇಲೆ ನೆಲೆಸುವ ಬದಲು, ಗುರುವಿನ ಅಪರಿಮಿತ ಸಹಾಯಕ ಶಕ್ತಿಯ ಮೇಲೆ ಕೇಂದ್ರೀಕರಿಸಿದಲ್ಲಿ, ಹವ್ಯಾಸಗಳ ಅಥವಾ ಕರ್ಮಗಳ ಅಡೆತಡೆಗಳು ಯಾವುವೂ ನಿನ್ನ ಪ್ರಗತಿಯ ಮಾರ್ಗದಲ್ಲಿ ನಿಲ್ಲಲಾರವು. ಗುರೂಜಿಯವರು ನಮಗೆ ಭರವಸೆ ನೀಡಿರುವರು, “ಭಗವತ್-ಸಾಕ್ಷಾತ್ಕಾರ ಹೊಂದಿರುವ ಗುರುವಿನ ಸಹಾಯ ಹಾಗೂ ಆಶೀರ್ವಾದಗಳು, ಒಬ್ಬನ ಕರ್ಮಕ್ಕಿಂತ ಹೆಚ್ಚು ಪ್ರಭಾವಶಾಲಿಯಾಗಿರುವುದು. ಗುರುವಿನ ಮಾರ್ಗದರ್ಶನದ ಗೌರವಪೂರ್ವಕ ಆಚರಣೆಯಿಂದ, ಒಬ್ಬ ವ್ಯಕ್ತಿಯು ತನ್ನ ಹಿಂದಿನ ಕರ್ಮಗಳ ಅಂತರ್ಗತ ಒತ್ತಾಯಗಳಿಂದ ಬಿಡುಗಡೆ ಹೊಂದಬಹುದು.”
ನಿಜವಾಗಿಯೂ ಕೊಡುಗೈ ದಾತರಲ್ಲಿ ಗುರುವೇ ಅತ್ಯುತ್ತಮನು. ಏಕೆಂದರೆ ಅವನ ಆಶೀರ್ವಾದಗಳು ನಮ್ಮೊಡನೆ ಸದಾ ಇರುತ್ತವೆ. ಆದರೆ ಅವರ ಇರುವಿಕೆಯ ಪ್ರಭಾವಳಿಯಲ್ಲಿ ಬದುಕಲು,ನಮ್ಮ ಪ್ರಜ್ಞೆಯನ್ನು ಅವರ ಸಮೃದ್ಧವಾದ ಆಧ್ಯಾತ್ಮಿಕತೆಯಲ್ಲಿ ತೆರೆದಿಡಲು ನಮ್ಮದೇ ಸ್ವಂತ ಪ್ರಾಮಾಣಿಕ ಪ್ರಯತ್ನವೂ ಬೇಕಾಗಿದೆ. ನೀವು ಅವರ ಬೋಧನೆಗಳನ್ನು ಆಳವಾಗಿ ಅಧ್ಯಯನ ಮಾಡಿದಾಗ ಮತ್ತು ಅವರು ನೀಡಿರುವ ತಂತ್ರಗಳನ್ನು ಹಾಗೂ ತತ್ವಗಳನ್ನು ನಿಮ್ಮ ಇಚ್ಛೆ ಮತ್ತು ಉತ್ಸಾಹಗಳಿಂದ ಅಭ್ಯಾಸ ಮಾಡಿದಲ್ಲಿ, ನೀವು ಅವರ ದೈವಿಕ ಪ್ರಜ್ಞೆ ಹಾಗೂ ಅದರ ಪರಿವರ್ತನಾಶೀಲ ಶಕ್ತಿಯ ಸ್ಪಂದನಗಳನ್ನು ಹೀರಿಕೊಳ್ಳುವಿರಿ. ಮತ್ತು ನೀವು ನಿಮ್ಮ ಪ್ರಯತ್ನಗಳನ್ನು ಭಕ್ತಿಯಿಂದ ತುಂಬಿಸಿಕೊಂಡಲ್ಲಿ, ಅವರ ಪ್ರೇಮದಲ್ಲಿ ನಿಮ್ಮ ಭರವಸೆಯು ವೃದ್ಧಿಸುತ್ತದೆ. ಅಹಂನ ತಡೆಗೋಡೆಗಳಾದ ಅಸಹಿಷ್ಣುತೆ ಮತ್ತು ಅಹಂನ ಶಕ್ತಿಯು ಬಿದ್ದು ಹೋಗಿ, ಅವರು ನಿಮ್ಮ ಪ್ರಗತಿಯನ್ನು ಮಾರ್ಗದರ್ಶನ ಮಾಡಲು ಅವಕಾಶ ಮಾಡಿಕೊಡುವುದನ್ನು ನೀವು ಕಾಣುವಿರಿ.
ಗುರುವಿನೊಡನೆ ಪ್ರಬಲ ಶ್ರುತಿಗೂಡುವಿಕೆಯು ನಿಮ್ಮ ಎಂದೆಂದಿಗೂ ಆಳವಾಗುತ್ತಿರುವ ಧ್ಯಾನದ ಮೂಲಕ ಬರುತ್ತದೆ. ಏಕೆಂದರೆ ಅಲ್ಲಿಯೇ ಅವರ ಇರುವಿಕೆಯನ್ನು ಅತಿ ಹೆಚ್ಚು ಸ್ಪಷ್ಟವಾಗಿ ಅನುಭವಿಸುವಿರಿ. ನಿಮ್ಮೆಲ್ಲರಿಗಾಗಿ ನನ್ನ ಪ್ರಾರ್ಥನೆ ಏನೆಂದರೆ ನಮ್ಮ ಪ್ರೀತಿಯ ಗುರುಗಳಿಗೆ ನಿಮ್ಮ ಕೃತಜ್ಞತೆಯ ಉಡುಗೊರೆಯನ್ನು, ಅವರು ನಮಗೆ ನೀಡಿರುವ ಆಧ್ಯಾತ್ಮಿಕ ನಿಧಿಯನ್ನು, ಅದರಲ್ಲೂ ವಿಶೇಷವಾಗಿ, ಅವರ ಭಗವತ್-ಸಂಯೋಗದ ವಿಧಾನಗಳನ್ನು ಉಪಯೋಗಿಸುವುದು. ನೀವು ಪ್ರತಿದಿನ ನಿಮ್ಮ ಆತ್ಮದ ಮೌನ ಮಂದಿರವನ್ನು ಪ್ರವೇಶಿಸಿದಾಗ, ಅವರ ಅಪರಿಮಿತ ಪ್ರೇಮವು ನಿಮ್ಮನ್ನು ಆವರಿಸಿ, ನಿಮ್ಮ ದೈವಿಕ ಗುರಿ — ನಿಮ್ಮ ಶಾಶ್ವತ ಆತ್ಮದ ಸಾಕ್ಷಾತ್ಕಾರದ ಕಡೆ, ಭಗವಂತನಲ್ಲಿ ತಾದ್ಯಾತ್ಮತೆಯಿಂದ ಒಂದಾಗುವ ಕಡೆಗೆ ಹೆಚ್ಚು ಹತ್ತಿರವಾಗುವಂತೆ ಸೆಳೆಯುತ್ತದೆ.
ಭಗವಂತ ಮತ್ತು ಗುರುದೇವರು ತಮ್ಮ ಪರಿವರ್ತನಾಶೀಲ ಆಶೀರ್ವಾದವನ್ನು ಅವಿರತವಾಗಿ ವರ್ಷಿಸಲಿ,
ಸ್ವಾಮಿ ಚಿದಾನಂದ ಗಿರಿ



















