
“ಗುರುವು ಜಾಗೃತಗೊಂಡ ಭಗವಂತನಾಗಿದ್ದಾನೆ, ಶಿಷ್ಯನಲ್ಲಿ ಮಲಗಿರುವ ಭಗವಂತನನ್ನು ಜಾಗೃತಗೊಳಿಸುವವನು….ಗುರುವು, ಎಲ್ಲಾ ಮಾನವರಲ್ಲಿ, ಅತ್ಯುತ್ತಮ ದಾತಾರನಾಗಿದ್ದಾನೆ. ಭಗವಂತನಂತೆಯೇ, ಅವನ ಉದಾರತೆಗೆ ಕೊನೆಯೇ ಇಲ್ಲ.”
— ಶ್ರೀ ಶ್ರೀ ಪರಮಹಂಸ ಯೋಗಾನಂದ
ಪ್ರೀತಿಯ ದಿವ್ಯಾತ್ಮರೇ,
ಭಾರತದಲ್ಲಿಯ ಗುರುದೇವರ ಆಶ್ರಮಗಳಿಂದ ನಿಮಗೆ ಶುಭ ಕಾಮನೆಗಳು! ಗುರುಪೂರ್ಣಿಮೆಯು (ಜುಲೈ 21) ಸಮೀಪಿಸುತ್ತಿರುವಂತೆಯೇ, ನಮ್ಮ ಹೃದಯಗಳು ಶ್ರೀ ಶ್ರೀ ಪರಮಹಂಸ ಯೋಗಾನಂದರು — ಗುರುದೇವರು ಮತ್ತು ಭಾರತೀಯ ಯೋಗದಾ ಸತ್ಸಂಗ ಸಂಸ್ಥೆಯ ಸಂಸ್ಥಾಪಕರು, ಮತ್ತು ವೈಎಸ್‌ಎಸ್ ಗುರು ಪರಂಪರೆಯ ಎಲ್ಲಾ ಗುರುಗಳಿಗೆ ಹೃತ್ಪೂರ್ವಕ ಗೌರವವನ್ನು ಸಲ್ಲಿಸುತ್ತಿವೆ. ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಿರುವವರಿಗೆ, ಗುರುವಿನ ಬಳಿಗೆ ಸೆಳೆಯಲ್ಪಡುವುದಕ್ಕಿಂತ ದೊಡ್ಡ ಉಡುಗೊರೆ ಬೇರೆ ಯಾವುದೂ ಇಲ್ಲ. ಗುರು ಭಗವಂತನೊಂದಿಗೆ-ಸಮ್ಮಿಲಿತವಾದ ಆತ್ಮ, ನಮ್ಮನ್ನು ಮಾಯಾ-ಬಂಧಿತ ಮಾನವ ಪ್ರಕೃತಿಯಿಂದ ಭಗವಂತನ ಅಪರಿಮಿತ ಸ್ವಾತಂತ್ಯ್ರದೆಡೆಗೆ ನಮ್ಮನ್ನು ಕೊಂಡೊಯ್ಯುವ ದಿವ್ಯ ಚೈತನ್ಯವೇ ಗುರು.
ಆಧ್ಯಾತ್ಮಿಕ ನಿಧಿಯನ್ನು ತಮಗೆ ಅನುಗ್ರಹಿಸಿದ್ದಕ್ಕಾಗಿ, ಯೋಗದಾ ಸಂಸ್ಥೆಯ ಭಕ್ತರು, ತಮ್ಮ ಕೃತಜ್ಞತೆಯನ್ನು ಅರ್ಪಿಸಲು ಮತ್ತು ತಮ್ಮ ಭಕ್ತಿಯನ್ನು ಅಭಿವ್ಯಕ್ತ ಪಡಿಸಲು ವೈಎಸ್‌ಎಸ್ ಕೆಲಸಗಳಲ್ಲಿ ಸಹಾಯ ನೀಡಲು ಇರುವ ಅವಕಾಶಗಳ ಬಗ್ಗೆ ತಿಳಿದುಕೊಳ್ಳಲು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಇದು ಪರಮಹಂಸಜಿರವರ ಬೋಧನೆ ಹಾಗೂ ಪರಂಪರೆಯನ್ನು ಭಾರತದಲ್ಲಿ ಸಾಕಾರಗೊಳಿಸುವ ಹಾಗೂ ಮುಂದುವರೆಸುವ ವಾಹಿನಿಯಾಗಿದೆ. ಈ ಸಂದೇಶದಲ್ಲಿ, ನಾವು ಇತ್ತೀಚಿನ ದಿನಗಳಲ್ಲಿ ಕೈಗೆತ್ತಿಕೊಂಡಿರುವ ಪ್ರಮುಖ ಯೋಜನೆಗಳಿಗೆ ಭಕ್ತರ ಆರ್ಥಿಕ ಸಹಾಯವು ಅಗತ್ಯವಾಗಿದ್ದು, ಈ ರೀತಿ ಇರುವ ಅನೇಕ ಅವಕಾಶಗಳ ವಿವರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇವೆ:
- ವೈಎಸ್‌ಎಸ್, ದಕ್ಷಿಣೇಶ್ವರ ಆಶ್ರಮದ ಆವರಣದಲ್ಲಿ, ಅತಿಥಿ ಗೃಹದ ವಿಸ್ತರಣೆ ಹಾಗೂ ಸೌಲಭ್ಯಗಳ ಉನ್ನತೀಕರಣ
- ವೈಎಸ್‌ಎಸ್‌ನ ಶೀಘ್ರಗತಿಯ ಭೆಳವಣಿಗೆಯನ್ನು ಎದುರಿಸಲು ರಾಂಚಿ ಆಶ್ರಮದ ನವೀಕರಣದ ಕೆಲಸಗಳ ತ್ವರಿತ ಅಭಿವೃದ್ದಿಗಾಗಿ ಕೌಶಲ್ಯಭರಿತ ಭಕ್ತಾದಿಗಳ ನೇಮಕ
- ವೈಎಸ್‌ಎಸ್ ರಾಂಚಿ ಆಶ್ರಮದ ನವೀಕರಣದ ಕಾರ್ಯ
ಈ ಯೋಜನೆಗಳ ವೆಚ್ಚವು ಸುಮಾರು 10 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.


ಆಧುನಿಕ ಅವಶ್ಯಕತೆಗಳಿಗೆ ಹೊಂದುವಂತೆ ನಮ್ಮ ಆಶ್ರಮದ ಸೌಲಭ್ಯಗಳನ್ನು ಉನ್ನತೀಕರಿಸುವುದರೊಂದಿಗೆ, ವೈಎಸ್‌ಎಸ್ ಆಶ್ರಮಗಳ ವೈಶಿಷ್ಟತೆಯಾದ ಆಧ್ಯಾತ್ಮಿಕ ಪರಿಸರವನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಇದರಿಂದ ಭಕ್ತರು ಹಿಂದಿನಂತೆಯೇ, ಈಗಲೂ ಕೂಡ ಅದೇ ಉನ್ನತ ಅನುಭವವನ್ನು ಪಡೆಯಬಹುದಾಗಿದೆ. ನಮ್ಮ ಆಶ್ರಮಗಳಿಗೆ ಭೇಟಿ ನೀಡಿ, ಈ ನವೀನ ಸೌಲಭ್ಯಗಳ ಉಪಯೋಗವನ್ನು ಪಡೆದುಕೊಳ್ಳಲು, ಮತ್ತು ಈ ದಿವ್ಯ ಪರಿಸರದಲ್ಲಿ ಸಮಯ ಕಳೆಯಲು ಹಾಗೂ ಆಧ್ಯಾತ್ಮಿಕ ಅಧ್ಯಯನವನ್ನು ಕೈಗೊಂಡು, ನಿಮ್ಮಲ್ಲಿ ಹೊಸ ಚೈತನ್ಯವನ್ನು ಕಂಡುಕೊಳ್ಳಲು ನಿಮ್ಮನ್ನು ಆಹ್ವಾನಿಸುತ್ತೇವೆ.


ಎಲ್ಲಿ ಸಾವಿರಾರು ಭಕ್ತರು ತಮ್ಮ ಆಧ್ಯಾತ್ಮಿಕ ಪುನಃ ಚೈತನ್ಯಕ್ಕಾಗಿ ಭೇಟಿ ನೀಡುತ್ತಿರುವರೋ, ಅಂತಹ ಪವಿತ್ರ ಸ್ಥಳಗಳ ನಿರ್ಮಾಣ ಅಥವಾ ನವೀಕರಣ ಕಾರ್ಯಕ್ಕೆ — ಆರ್ಥಿಕ ಕೊಡುಗೆಯಿಂದಾಗಲಿ, ಸೇವೆ ಅಥವಾ ಪ್ರಾರ್ಥನೆಯ ಮೂಲಕವಾಗಲಿ ತಮ್ಮ ಸಹಕಾರವನ್ನು ಸಲ್ಲಿಸಿದ್ದಕ್ಕಾಗಿ, ನಾವು ನಮ್ಮ ಆಳವಾದ ಕೃತಜ್ಙತೆಗಳನ್ನು ಸಲ್ಲಿಸುತ್ತೇವೆ. ಗುರೂಜೀಯವರ ವಿಶ್ವದಾದ್ಯಂತದ ಕುಟುಂಬದ ಭಾಗವಾಗಿ, ಭಗವದನ್ವೇ಼ಷಣೆಯಲ್ಲಿ ಒಂದಾಗಿರುವ ನಿಮ್ಮನ್ನು ಹೊಂದಲು ನಮಗೆ ಗೌರವವೆನಿಸುತ್ತದೆ.
ಶ್ರೀ ಶ್ರೀ ಪರಮಹಂಸ ಯೋಗಾನಂದರು ಹೇಳುತ್ತಾರೆ, “ನಾನು ನಿಮಗೆ ಒಂದು ವಿಷಯವನ್ನು ವಿಷದಪಡಿಸಲು ಇಚ್ಚಿಸುತ್ತೇನೆ. ಯಾರು ಈ ಕೆಲಸಗಳಲ್ಲಿ ಆಸಕ್ತಿಯಿಂದ ಭಾಗವಹಿಸುವರೋ, ನಾನು ವೈಯಕ್ತಿಕವಾಗಿ ಅವರ ರಕ್ಷಣೆ ಮಾಡುತ್ತೇನೆ. ನಾನು ನಿಮ್ಮನ್ನು ನನ್ನ ವೈಯಕ್ತಿಕ ಪ್ರೀತಿಯ ಅನುಬಂಧದಲ್ಲಿ ಬೆಸೆಯುತ್ತೇನೆ. ನಾನು, ಇಹ ಮತ್ತು ಪರಲೋಕದಲ್ಲೂ ನೀವು ಮುಂದುವರೆಯಲು ಬೇಕಾದ ಎಲ್ಲಾ ಸಹಾಯವನ್ನು ಮಾಡುತ್ತೇನೆ.”
ಈ ಗುರುಪೂರ್ಣಿಮೆಯಂದು, ಗುರುದೇವರ ದಿವ್ಯ ಪ್ರೇಮದ ಜ್ಯೋತಿಯು ನಿಮ್ಮ ಜೀವನವನ್ನು ಸಮೃದ್ಧಗೊಳಿಸಲಿ. ಜೈ ಗುರು!
ದಿವ್ಯ ಸ್ನೇಹದಲ್ಲಿ,
ಭಾರತೀಯ ಯೋಗದಾ ಸತ್ಸಂಗ ಸಂಸ್ಥೆ

ಈ ಕೆಳಗಿನ ಮನವಿಯನ್ನು ಸಂಪೂರ್ಣವಾಗಿ ಓದಿ:
ಗಂಗೆಯ ತಟದಲ್ಲಿರುವ ಪವಿತ್ರ ಆಶ್ರಮವನ್ನು ಗುರೂಜಿಯವರ ಸಮಯದಲ್ಲಿಯೇ ಸ್ವಾಧೀನಪಡಿಸಿಕೊಳ್ಳಲಾಗಿತ್ತು ಮತ್ತು ಅಂದಿನಿಂದಲೂ ಇದು ಸಾವಿರಾರು ಭಕ್ತರಿಗೆ ಆಧ್ಯಾತ್ಮಿಕ ಪವಿತ್ರ ಧಾಮವಾಗಿದೆ. ಶಾಂತಿಯನ್ನರಸಿ ಬರುತ್ತಿರುವ ಭಕ್ತರ ಹಾಗೂ ಪ್ರವಾಸಿಗರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅವರ ಅನುಕೂಲಕ್ಕಾಗಿ ನಾವು ಆಶ್ರಮದ ಆವರಣವನ್ನು ವಿಸ್ತಾರಗೊಳಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಅದಕ್ಕಾಗಿ ಆವರಣಕ್ಕೆ ಹೊಂದಿಕೊಂಡಿರುವ ಜಾಗವನ್ನು ಖರೀದಿಸಿ ನಮ್ಮ ಅತಿಥಿ ಸೌಲಭ್ಯಗಳನ್ನು ಆಧುನಿಕ ಅವಶ್ಯಕತೆಗಳಿಗೆ ಹೊಂದುವಂತೆ ಉನ್ನತೀಕರಿಸುವ ಯೋಜನೆಯೂ ಇದರೊಂದಿಗಿದೆ.
ಅತಿಥಿಗೃಹದ ಉನ್ನತೀಕರಣ: ಅತಿಥಿಗೃಹದ ಎಲ್ಲಾ ಕೊಠಡಿಗಳನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ ಮತ್ತು ಈಗ ಹೊಸದಾದ ಹಾಸಿಗೆಗಳು, ಹೊದಿಕೆಗಳು, ಪರದೆಗಳು, ಕಂಬಳಿಗಳು, ಸ್ನಾನಗೃಹದ ಪರಿಕರಗಳು ಹಾಗೂ ಪೀಠೋಪಕರಣಗಳನ್ನು ಒಳಗೊಂಡಿದೆ. ಬೇಸಿಗೆಕಾಲದಲ್ಲಿಯೂ ತಂಪಾಗಿರುವಂತೆ ಕೊಠಡಿಗಳಿಗೆ ಹವಾ-ನಿಯಂತ್ರಕಗಳನ್ನು ಅಳವಡಿಸಲಾಗಿದೆ. ಅತಿಥಿಗೃಹದ ಆವರಣದಲ್ಲಿ ಹೊಸದಾಗಿ ಟೈಲ್ಸ್‌ಗಳನ್ನು ಹೊಂದಿಸಿದ್ದು, ಇಡೀ ಕಟ್ಟಡಕ್ಕೆ ಹೊಸದಾಗಿ ಬಣ್ಣ ಬಳಿಯಲಾಗಿದೆ.
ಅಡುಗೆಕೋಣೆಯ ಆಧುನೀಕರಣ ಮತ್ತು ಭೋಜನಶಾಲೆಯ ಸೌಲಭ್ಯಗಳು: ಪ್ರಮುಖ ಅಡುಗೆ ಕೋಣೆಯ ವಿನ್ಯಾಸವನ್ನು ಉತ್ತಮಗೊಳಿಸಲಾಗಿದ್ದು, ಹೊಸದಾದ ಒಲೆಗಳು ಹಾಗೂ ಉಪಕರಣಗಳನ್ನು ತರಿಸಲಾಗಿದೆ. ಕೆಲಸದ ಪರಿಸರದಲ್ಲಿ ದಕ್ಷತೆ ಹಾಗೂ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಆಶ್ರಮದಲ್ಲಿ ಉಳಿದುಕೊಳ್ಳುತ್ತಿರುವ ಭಕ್ತರು ಮತ್ತು ಭಾನುವಾರದ ಸತ್ಸಂಗಗಳಿಗೆ ಹಾಗೂ ವಾರದ ಇತರೆ ದಿನಗಳಲ್ಲಿಯೂ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆಯಲ್ಲಿ ವೃಧ್ಧಿಯಾಗುತ್ತಿರುವ ಕಾರಣದಿಂದಾಗಿ, ಅದಕ್ಕೆ ಅನುಗುಣವಾಗಿ ಭೋಜನಾಶಾಲೆಯನ್ನು ಎರೆಡು ಹಂತಗಳಿಗೆ ವಿಸ್ತರಿಸಲಾಗಿದೆ ಮತ್ತು ಹೊಸದಾದ ಮೇಜು ಮತ್ತು ಕುರ್ಚಿಗಳಿಂದ ಸಂಪೂರ್ಣವಾಗಿ ನವೀಕರಿಸಲಾಗಿದೆ.
ಭಕ್ತಾದಿಗಳು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಅನೇಕ ಪ್ರಶಂಸಾ ಪತ್ರಗಳನ್ನು ಬರೆಯುತ್ತಿದ್ದು. ಅವುಗಳಲ್ಲಿ ಎರಡು ಪತ್ರಗಳನ್ನು ಇಲ್ಲಿ ಕೊಡಲಾಗಿದೆ:
“ನಾನು [ಇತ್ತೀಚೆಗೆ] ದಕ್ಷಿಣೇಶ್ವರಕ್ಕೆ ಭೇಟಿ ನೀಡಿದ್ದೆ. ನಾನು ಆಶ್ರಮವನ್ನು ಪ್ರವೇಶಿಸುತ್ತಿರುವಂತೆಯೇ, ಅಲ್ಲಿನ ಪ್ರಶಾಂತತೆಯು ಮನಸೂರೆಗೊಳ್ಳುವಂತಿತ್ತು…ವಸತಿ ಗೃಹದ ಒಳಗೆ ಹಾಗು ಹೊರಗೆ ಸ್ವಚ್ಛತೆ ಹಾಗೂ ನೈರ್ಮಲ್ಯವು ಅತ್ಯುತ್ತಮವಾಗಿದ್ದು ಗಮನ ಸೆಳೆಯುವಂತಿದೆ. ಹೊಸದಾಗಿ ನವೀಕರಿಸಿದ ಅಡುಗೆ ಕೋಣೆಯಂತೂ ಪರಿಶುದ್ದವಾಗಿರುವುದಲ್ಲದೆ, ಸುವ್ಯವಸ್ಥಿತವಾಗಿದೆ. ಆ ಪ್ರಶಾಂತ ಪರಿಸರ ಮತ್ತು ನಿಷ್ಕಲ್ಮಶ ಆತಿಥ್ಯವು ನನ್ನ ಬೇಟಿಯನ್ನು ಎಂದೆಂದಿಗೂ ಅವಿಸ್ಮರಣೀಯವಾಗಿಸಿದೆ.” — ಎಸ್. ಸಿ., ಉ. ಪ್ರ.
“ಅತಿಥಿಗೃಹದ ನವೀಕರಣಗೊಂಡ ಕೋಣೆಗಳು ತುಂಬಾ ಅನುಕೂಲಕರವಾಗಿದ್ದು, ಅತ್ಯಾಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಬಿರುಬೇಸಿಗೆಯ ಏಪ್ರಿಲ್ ತಿಂಗಳಿನಲ್ಲಿ ನಾನು ದಕ್ಷಿಣೇಶ್ವರಕ್ಕೆ ಭೇಟಿ ನೀಡಿ ಧ್ಯಾನದ ಅದ್ಭುತ ಅನುಭವಗಳನ್ನು ಪಡೆದೆ. ಕೊಠಡಿಗಳಿಗೆ ಏರ್-ಕಂಡೀಶನರ್‌ಗಳನ್ನು ಅಳವಡಿಸಿದುದಕ್ಕಾಗಿ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ, ಏಕೆಂದರೆ — ನನಗೆ ಸೆಕೆಯ ಅನುಭವವೇ ಆಗಲಿಲ್ಲ.” — ಎಚ್. ಕೆ., ಪ. ಬಂ.
ಪವಿತ್ರ ಪ್ರಾಕಾರಗಳ ವಿಸ್ತರಣೆ: ಈಗಿರುವ ಧ್ಯಾನಮಂದಿರವು ಚಿಕ್ಕದಾಗಿದ್ದು, ಭಾನುವಾರದ ಸತ್ಸಂಗಗಳು, ವಿಶೇಷ ಸ್ಮರಣಾರ್ಥ ಕಾರ್ಯಕ್ರಮಗಳು ಮತ್ತು ಇತರ ಪ್ರಮುಖ ಕಾರ್ಯಕ್ರಮಗಳಿಗೆ ಬರುತ್ತಿರುವ ಭಕ್ತರ ಸಂಖ್ಯೆಯು ಹೆಚ್ಚುತ್ತಿರುವ ಕಾರಣ ಅಲ್ಲಿ ಸ್ಥಳಾವಕಾಶದ ಅಭಾವವಿದ್ದು, ಎಲ್ಲರೂ ಒಟ್ಟಾಗಿ ಭಾಗವಹಿಸಲು ತೊಂದರೆಯಾಗುತ್ತಿದೆ. ಮುಖ್ಯ ಕಟ್ಟಡದ ವರಾಂಡವನ್ನು, ತಾತ್ಕಾಲಿಕ ಪರಿಹಾರವೆಂದು, ಹವಾ ನಿಯಂತ್ರಕವನ್ನು ಅಳವಡಿಸಿ ಮತ್ತು ಖಾಲಿ ಜಾಗವನ್ನು ನೀಲಿ ಬಣ್ಣದ ದಪ್ಪ ಪರದೆಗಳಿಂದ ಮುಚ್ಚಿ ಧ್ಯಾನದ ಸಭಾಂಗಣವಾಗಿ ಪರಿವರ್ತಿಸಲಾಗಿದೆ.
ಸದಾ ವೃದ್ಧಿಸುತ್ತಿರುವ ಭಕ್ತರ ಸಂಖ್ಯೆಯಿಂದಾಗಿ, ವಿಶಾಲವಾದ ಧ್ಯಾನಮಂದಿರದ ಅವಶ್ಯಕತೆಯಿದೆ ಎಂದು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿಲ್ಲ.
ಭಗವಂತನ ಹಾಗೂ ಗುರುದೇವರ ಅನುಗ್ರಹದಿಂದ, ದಕ್ಷಿಣೇಶ್ವರದ ಆಶ್ರಮಕ್ಕೆ ಹೊಂದಿಕೊಂಡಂತಿರುವ ಎರಡು ಜಾಗಗಳು (ಆಶ್ರಮದ ಅತಿಥಿಗೃಹದ ಉತ್ತರಕ್ಕೆ) ಮಾರಾಟಕ್ಕೆ ಲಭ್ಯವಿದ್ದು, ಅದನ್ನು ವೈಎಸ್‌ಎಸ್ ಸಂಸ್ಥೆಯು ಖರೀದಿ ಮಾಡಿದೆ. ಈ ಖರೀದಿಯಿಂದ, ವೈಎಸ್‌ಎಸ್ ಸಂಸ್ಥೆಯ ಸೌಕರ್ಯಗಳನ್ನು ವಿಸ್ತರಿಸಬಹುದಾಗಿದೆ ಮತ್ತು ದಕ್ಷಿಣೇಶ್ವರ ಆಶ್ರಮಕ್ಕೆ ಭೇಟಿ ನೀಡುತ್ತಿರುವ ಅತಿಥಿಗಳ ಮತ್ತು ಪ್ರವಾಸಿಗರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ, ಅವರಿಗಾಗಿ ವಿಶಾಲವಾದ ಧ್ಯಾನ ಮಂದಿರವನ್ನು ನಿರ್ಮಿಸಬಹುದಾಗಿದೆ.
ಇತ್ತೀಚಿನ ವರ್ಷಗಳಲ್ಲಿ, ವೈಎಸ್‌ಎಸ್ ಸಂಸ್ಥೆಯ ದಾಖಲಾತಿಗಳಲ್ಲಿ ಕಂಡುಬರುತ್ತಿರುವ ಅಭೂತಪೂರ್ವ ಬೆಳವಣಿಗೆಯು ಗುರುದೇವರ ಬೋಧನೆಗಳಿಗಾಗಿ ಸಲ್ಲಿಸುತ್ತಿರುವ ನಿರಂತರ ಕೋರಿಕೆಗಳಿಗೆ ಸಾಕ್ಷಿಯಾಗಿದೆ. ಇದರ ಜೊತೆಗೆ, ಈಗಿನ ಡಿಜಿಟಲ್ ಯುಗವು ನಮ್ಮ ಕೆಲವು ಕ್ಷೇತ್ರಗಳ ಕೆಲಸಗಳನ್ನು — ವಿತ್ತೀಯ ಕ್ಷೇತ್ರ, ಪುಸ್ತಕಗಳ ಹಾಗೂ ಪಠ್ಯಗಳ ವಿತರಣೆ, ಭಕ್ತಾದಿಗಳ ಜೊತೆ ಸಂವಹನ, ವೆಬ್‌ಸೈಟ್ ವಿನ್ಯಾಸ ಮತ್ತು ಸೋಷಿಯಲ್ ಮೀಡಿಯಾಗಳು — ಡಿಜಿಟಲೀಕರಣಗೊಳಿಸಿಕೊಳ್ಳುವುದರ ಅಗತ್ಯತೆಯನ್ನು ಒತ್ತಿ ಹೇಳುತ್ತಿದೆ. ಸದಾ ವಿಸ್ತಾರಗೊಳ್ಳುತ್ತಿರುವ ಭಕ್ತ ವರ್ಗದ ಉತ್ತಮ ಸೇವೆಗಾಗಿ ಮತ್ತು ಶೀಘ್ರವಾಗಿ ಬದಲಾಗುತ್ತಿರುವ ಪ್ರಪಂಚದ ಜೊತೆ ಸರಿಸಮನಾಗಿ ಸಾಗಲು ಸಮರ್ಥವಾಗಿರುವಂತೆ ನಾವು ಕೆಲವು ನವೀನ ಡಿಜಿಟಲ್ ವೇದಿಕೆಗಳನ್ನು ನೀಡುತ್ತಿದ್ದೇವೆ. ಇದರಿಂದ ಗುರುದೇವರ ಜೀವನ-ಪರಿವರ್ತಿಸುವ ಬೋಧನೆಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವುದಲ್ಲದೆ, ಅದರಿಂದ ಉಪಯೋಗ ಪಡೆಯಬಹುದಾಗಿದೆ.
ಈ ಬೆಳವಣಿಗೆಯ ಜೊತೆಜೊತೆಯಲ್ಲಿಯೇ, ಸರ್ಕಾರದ ನೀತಿ, ನಿಯಮಗಳ ಪಾಲನೆಯ ಅಗತ್ಯವೂ ಹೆಚ್ಚಾಗಿದೆ. ನಮ್ಮ ಸನ್ಯಾಸಿಗಳ ಪ್ರಮುಖ ಗುರಿಯು ಆಧ್ಯಾತ್ಮಿಕ ಕಾರ್ಯಕ್ರಮಗಳು, ಪ್ರವಚನಗಳು ಮತ್ತು ಸಮಾಲೋಚನೆಗಳನ್ನು ಆಯೋಜಿಸುವುದಾಗಿದ್ದು, ಸಂಸ್ಥೆಯ ಕಾರ್ಯ ನಿರ್ವಾಹಕ ಕೆಲಸಗಳಿಗಾಗಿ ಸಮಯವನ್ನು ಮೀಸಲಾಗಿಡುವುದು ಸವಾಲಾಗಿ ಪರಿಣಮಿಸಿದೆ.
ಬೆಳೆಯುತ್ತಿರುವ ಸದಸ್ಯರ ಆಧ್ಯಾತ್ಮಿಕ ಅವಶ್ಯಕತೆಗಳಿಗನುಗುಣವಾಗಿ ಸೇವೆ ಸಲ್ಲಿಸುವುದರ ಕಡೆಗೆ ಗಮನವನ್ನು ಕೇಂದ್ರೀಕರಿಸಲು ನಮ್ಮ ಸನ್ಯಾಸಿಗಳಿಗೆ ಬಿಡುವು ಮಾಡಿಕೊಡಬೇಕೆಂಬ ಉದ್ದೇಶದಿಂದ ಮತ್ತು ಸಂಸ್ಥೆಯ ಅಗತ್ಯ ಕಾರ್ಯಗಳನ್ನು ಸುಲಲಿತವಾಗಿ ನಿರ್ವಹಿಸುವ ಸಲುವಾಗಿ ವೈಎಎಸ್‌ಎಸ್ ಸಂಸ್ಥೆಯು ತನ್ನ ಭಕ್ತ ವೃಂದದಿಂದ ಹಲವು ಪ್ರತಿಭಾವಂತ ಪರಿಣಿತರನ್ನು ನೇಮಕ ಮಾಡಿಕೊಂಡಿದೆ. ಇವರು ಈ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದಾರೆ. ಆ ಕ್ಷೇತ್ರಗಳು ಹೀಗಿವೆ:
- ಐಟಿ ತಜ್ಞರು: ಗುರುದೇವರ ಬೋಧನೆಗಳ ಡಿಜಿಟಲ್ ಪ್ರಸರಣದ ಮುಂಚೂಣಿಯಲ್ಲಿರುತ್ತಾರೆ
- ವೈದ್ಯರುಗಳು: ನಮ್ಮ ಉಚಿತ ಔಷದಾಲಯಗಳಲ್ಲಿ ಸೇವೆ ಸಲ್ಲಿಸುವರು
- ಚಾರ್ಟರ್ಡ್ ಅಕೌಂಟೆಂಟ್: ನಮ್ಮ ಹಣಕಾಸು ವ್ಯವಹಾರಗಳ ನಿರ್ವಹಣೆ ಮತ್ತು ನಿಯಮಗಳ ಪಾಲನೆ
- ಸಂಸ್ಥೆಯ ಅಭಿವೃದ್ಧಿ ತಜ್ಞರು: ನಮ್ಮ ಆಂತರಿಕ ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿ ಮತ್ತು ಸುಗಮವಾಗಿ ನಡೆಸಲು ಕಾರ್ಯ ನಿರ್ವಹಿಸುವರು.
- ಇತರ ಅಗತ್ಯವಿರುವ ಸಿಬ್ಬಂದಿ ವರ್ಗ: ಅನೇಕ ತುರ್ತು ಕಾರ್ಯಗಳ ಸಹಾಯಕರು
ಭಗವಂತನ ಕೃಪೆಯಿಂದ, ಈ ಭಕ್ತಾದಿಗಳು, ತಮ್ಮ ಕ್ಷೇತ್ರದಲ್ಲಿ ಪರಿಣಿತರಾಗಿರುವವರಲ್ಲದೇ, ಗುರುದೇವರ ಮೌಲ್ಯಗಳನ್ನು ತಮ್ಮ ಕಾರ್ಯಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಇದು ನಮ್ಮ ಕಾರ್ಯಕ್ಷೇತ್ರವನ್ನು, ಮೂಲಭೂತ ಆಶಯಕ್ಕೆ ಧಕ್ಕೆಯಾಗದಂತೆ ವಿಸ್ತರಿಸಿಕೊಳ್ಳಲು ಅವಕಾಶ ನೀಡುತ್ತಿದೆ.
ಇದಲ್ಲದೆ, ಈಗಿನ ಸರ್ಕಾರವು ಕುಶಲ ಮತ್ತು ಅರೆ-ಕುಶಲ ನೌಕರರು, ಅಂದರೆ — ತೋಟದ ಮಾಲಿಗಳು, ಅಡುಗೆಯವರು ಮತ್ತು ಇತರೆ ಕೆಲಸಗಾರರ — ಕನಿಷ್ಟ ವೇತನವನ್ನು ಗಣನೀಯವಾಗಿ ಹೆಚ್ಚಿಸಿ ಅಧಿಸೂಚನೆ ಹೊರಡಿಸಿದೆ. ಇದರ ಜೊತೆಗೆ ನಮ್ಮ ಅವಶ್ಯಕತೆಗೆ ಅನುಗುಣವಾಗಿ ನೇಮಕ ಮಾಡಿಕೊಳ್ಳಬೇಕಾದ ಇತರ ನುರಿತ ತಜ್ಞರ ವೇತನಗಳೂ ಸೇರಿ ನಮ್ಮ ವಾರ್ಷಿಕ ಸಂಬಳದ ಮೊತ್ತವು ರೂ.2 ಕೋಟಿಯನ್ನು ದಾಟುತ್ತಿದೆ.
ನಮ್ಮ ಕಳೆದ ಜನ್ಮೋತ್ಸವದ ವಾರ್ತಾಪತ್ರಿಕೆಯಲ್ಲಿ, ರಾಂಚಿ ಆಶ್ರಮದಲ್ಲಿ ಆಧ್ಯಾತ್ಮಿಕ ಉನ್ನತಿಗಾಗಿ ಮತ್ತು ಪುನರುಜ್ಜೀವನಕ್ಕಾಗಿ ಅನುಕೂಲಕರವಾದ ವಾತಾವರಣವನ್ನು ಕಲ್ಪಿಸುವ ಸಲುವಾಗಿ ನಾವು ಕೈಗೆತ್ತಿಕೊಂಡಿರುವ ಕೆಲವು ಪ್ರಮುಖ ಯೋಜನೆಗಳ ನವೀಕರಣ ಕಾರ್ಯಗಳ ವಿವರಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೆವು. ಈ ಕಾರ್ಯಗಳಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿರುವುದನ್ನು ನಿಮಗೆ ತಿಳಿಸಲು ನಮಗೆ ಬಹಳ ಹರ್ಷವಾಗುತ್ತದೆ:
- ಅತಿಥಿಗೃಹದ ಉನ್ನತೀಕರಣ: ಮುಖ್ಯ ಅತಿಥಿಗೃಹ ಮತ್ತು ಮಹಿಳಾ ಅತಿಥಿಗೃಹದಲ್ಲಿ ಕೊನೆಯ ಹಂತದ ಕಾರ್ಯಗಳು ನಡೆಯುತ್ತಿದ್ದು, ಅಕ್ಟೋಬರ್ 2024ರ ಹೊತ್ತಿಗೆ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲು ಸಿದ್ಧವಾಗುವುದೆಂಬ ನಿರೀಕ್ಷೆಯಿದೆ. ಈ ನವೀಕರಣ ಕಾರ್ಯವು, ಸಮೂಹ ನಿಲಯವನ್ನು ಕುಟುಂಬ ವರ್ಗದವರಿಗಾಗಿ ಅಥವಾ ಪ್ರತ್ಯೇಕ ಕೊಠಡಿಗಳನ್ನಾಗಿ ಪರಿವರ್ತಿಸುವುದು, ಕಟ್ಟಡದ ರಚನಾತ್ಮಕ ಹಾನಿಗಳ ನಿವಾರಣೆ ಮತ್ತು ಮಹಿಳಾ ಅತಿಥಿಗೃಹದ ವಸತಿಸೌಕರ್ಯದ ಸಾಮರ್ಥ್ಯದ ಹೆಚ್ಚಳಕ್ಕಾಗಿ ಒಂದು ಮಹಡಿಯ ವಿಸ್ತರಣೆ, ಇವುಗಳನ್ನು ಒಳಗೊಂಡಿದೆ.
- ಸಭಾಂಗಣದ ನವೀಕರಣ: 1,100 ಆಸನ ವ್ಯವಸ್ಥೆ ಇರುವ ಸಭಾಂಗಣದ ನವೀಕರಣ ಕಾರ್ಯವು ಭರದಿಂದ ಸಾಗುತ್ತಿದೆ ಮತ್ತು ಜನವರಿ 2025ರ ಹೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನವೀಕರಣದ ವ್ಯಾಪಕ ಕಾರ್ಯವು, ಉಷ್ಣ-ನರೋಧಕ ಹಾಳೆಗಳನ್ನು ಹಾಕಿ ತಾರಸಿಯನ್ನು ಸಿದ್ಧಪಡಿಸುವುದು, ಅತ್ಯಾಧುನಿಕ ಆವಿಷ್ಕರಣ ಹೊಂದಿರುವ ಆಡಿಯೋ-ವೀಡಿಯೋ ಉಪಕರಣಗಳು ಮತ್ತು ಏರ್-ಕಂಡೀಷನಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ.
ಪೂರಕ ಯೋಜನೆಗಳು: ಈ ಮೇಲಿನ ಯೋಜನೆಗಳ ಜೊತೆಯಲ್ಲಿ, ನಾವು ಆಶ್ರಮದ ಆವರಣದಲ್ಲಿರುವ ಹಲವು ಹಳೆಯ ಕಟ್ಟಡಗಳ ನವೀಕರಣ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ. ಅವುಗಳ ವಿವರವನ್ನು ಈ ಕೆಳಗೆ ಕೊಡಲಾಗಿದೆ:
- ಮೈದಾನದಲ್ಲಿ ಹಳೆಯ ಮಳಿಗೆಗಳು (ಸಂಗಮ ಸಮಯದಲ್ಲಿ ಸ್ವಾಗತ ಕೇಂದ್ರ ಹಾಗೂ ನೋಂದಣಿ ಕೇಂದ್ರಗಳಾಗಿ ಉಪಯೋಗಿಸಲ್ಪಡಲಾಗುತ್ತಿದ್ದವು)
- ಸಭಾಂಗಣದ ಸಮೀಪ ಶೌಚಾಲಯ ಕಟ್ಟಡ
- ಸಿಬ್ಬಂದಿ ವಸತಿಗೃಹಗಳು ಮತ್ತು ಸಂಗ್ರಹಾಗಾರ
ನವೀಕರಿಸಿದ ಸಭಾಂಗಣ ಮತ್ತು ಹೊಸದಾಗಿ ಕಟ್ಟಿಸಿರುವ ಅತಿಥಿ ಗೃಹಗಳು ನಮ್ಮ ವಿದ್ಯುಚ್ಚಕ್ತಿಯ ಅಗತ್ಯತೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಹೊಸ 50 ಕಿ.ವ್ಯಾ. ಶಕ್ತಿಯ ಟ್ರಾನ್ಸ್‌ಫಾರ್ಮರ್‌ನ್ನು ಮತ್ತು 125 ಕೆ.ವಿ.ಎ. ಸಾಮರ್ಥ್ಯದ ಡಿಜಿ ಸೆಟ್‌ನ್ನು ಅಳವಡಿಸಿಕೊಳ್ಳಲಾಗಿದೆ.
ಆರ್ಥಿಕ ವಹಿವಾಟಿನ ಪಕ್ಷಿನೋಟ ಮತ್ತು ಭವಿಷ್ಯದ ಅವಶ್ಯಕತೆಗಳು: ರಾಂಚಿ ಆಶ್ರಮದ ಈ ಯೋಜನೆಗಳಿಗಾಗಿ ನೀವು ಉದಾರ ಮನಸ್ಸಿನಿಂದ ನೀಡಿದ ಅಪಾರ ಕಾಣಿಕೆಗಳನ್ನು ನಾವು ಸ್ವೀಕರಿಸಿದ್ದೇವೆ. ಈ ಎಲ್ಲಾ ಪ್ರಮುಖ ನವೀಕರಣದ ಯೋಜನೆಗಳನ್ನು ಪೂರ್ಣಗೊಳಿಸಲು ನಮಗೆ ಇನ್ನೂ ರೂ.4 ಕೋಟಿಯ ಅವಶ್ಯಕತೆಯಿದೆ.
ನಿಮ್ಮ ಸಹಾಯಕ್ಕಾಗಿ ನಾವು ನಿಮಗೆ ಆಭಾರಿಯಾಗಿದ್ದೇವೆ ಮತ್ತು ಉತ್ತಮಗೊಳಿಸಿದ ಸೌಲಭ್ಯಗಳ ಉಪಯೋಗವನ್ನು ಪಡೆದುಕೊಳ್ಳಲು ನಿಮ್ಮನ್ನು ಆಹ್ವಾನಿಸುತ್ತೇವೆ.
ನಿಮ್ಮ ನಿರಂತರ ಸಹಾಯಕ್ಕಾಗಿ ಮತ್ತು ಗುರುದೇವರ ಧ್ಯೇಯದೆಡೆಗೆ ನಿಮ್ಮ ಅಚಲ ನಿಷ್ಠೆಗಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇವೆ. ನಿಮ್ಮ ಸಹಕಾರದಿಂದ, ನಾವು ರಾಂಚಿ ಮತ್ತು ದಕ್ಷಿಣೇಶ್ವರ ಆಶ್ರಮಗಳ ನವೀಕರಣ ಕಾರ್ಯಕ್ಕಾಗಿ ಅಗತ್ಯವಿರುವ ರೂ.10 ಕೋಟಿಗಳನ್ನು ಕ್ರೋಢೀಕರಿಸಬಲ್ಲೆವೆಂಬ ವಿಶ್ವಾಸದಿಂದಿದ್ದೇವೆ ಮತ್ತು ಕುಶಲ ಮತ್ತು ನಿಷ್ಠಾವಂತ ನೌಕರರ ಸಹಕಾರವು ಮುಂಬರುವ ದಿನಗಳಲ್ಲಿ ನಮಗಿರಲಿ ಎಂದು ಆಶಿಸುತ್ತೇವೆ.
ನಮ್ಮ ಸ್ನೇಹ ಹಾಗೂ ಪ್ರಾರ್ಥನೆಗಳು ಸದಾ ನಿಮ್ಮೊಂದಿಗಿವೆ.