ಶ್ರೀ ಶ್ರೀ ದಯಾ ಮಾತಾರವರು 1955 ರಿಂದ 2010 ರಲ್ಲಿ ಸ್ವರ್ಗಸ್ಥರಾಗುವವರೆಗೆ ಪ್ರೀತಿಯ ಸಂಘಮಾತಾ ಮತ್ತು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಝೇಷನ್ ಫೆಲೋಶಿಪ್‌ನ ಅಧ್ಯಕ್ಷರಾಗಿದ್ದರು. ಅವರ ದ್ವೈಮಾಸಿಕ ಪತ್ರಗಳು ದಶಕಗಳಿಂದ ವೈಎಸ್ಎಸ್ ಭಕ್ತರಿಗೆ ಮಾರ್ಗದರ್ಶನ ಮತ್ತು ಸ್ಫೂರ್ತಿಯ ಮೂಲವಾಗಿವೆ. ಮೂಲತಃ 2001 ರಲ್ಲಿ ಪ್ರಕಟಿಸಲಾದ ಪತ್ರವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ, ಇದರಲ್ಲಿ ಅವರು ಯೌವನದ ನಿಜವಾದ ಮೂಲವನ್ನು ಮತ್ತು ನಾವು ಅದನ್ನು ನಮ್ಮ ಜೀವನದಲ್ಲಿ ಹೇಗೆ ಸಂತೋಷದಿಂದ ಹೊರಸೂಸಬಹುದು ಎಂಬುದನ್ನು ಪ್ರೀತಿಯಿಂದ ನಮಗೆ ನೆನಪಿಸುತ್ತಾರೆ.
ಆತ್ಮೀಯರೆ,
ಇಂದಿನ ಜನರ ಒತ್ತು, ಯೌವನವನ್ನು ದೀರ್ಘಗೊಳಿಸುವುದು. ಆದರೆ ಅವರು ಯುವಕರಾಗಿ ಕಾಣಲು ಮತ್ತು ಯುವಕರಂತೆ ವರ್ತಿಸಲು ಬಾಹ್ಯ ಅಂಶಗಳ ಮೇಲೆ ಕೇಂದ್ರೀಕರಿಸುತ್ತಾರೆ. ಯೌವನವು ಪ್ರಜ್ಞೆಯ ಒಂದು ಉನ್ನತಗೊಳಿಸುವ ಸ್ಥಿತಿಯಾಗಿದ್ದು ಅದು ಜೀವನದ ಸತ್ವವನ್ನು ಮತ್ತು ಸಾಧಿಸುವ ಶಕ್ತಿಯನ್ನು ಪೋಷಿಸುತ್ತದೆ ಎಂದು ಪರಮಹಂಸ ಯೋಗಾನಂದರು ತಮ್ಮ ಜೀವನದಲ್ಲಿ ಪ್ರದರ್ಶಿಸಿದ್ದಾರೆ.
ಅವರು ದಿವ್ಯ ಆಲೋಚನೆಗಳೇ ವಾಸ್ತವವಾಗಿರುವ ಸ್ತರದಲ್ಲಿ ವಾಸಿಸುತ್ತಿದ್ದರು ಹಾಗೂ ನಮ್ಮ ಶರೀರ ಮತ್ತು ಮನಸ್ಸುಗಳಿಗೆ ನಾವು ಏನಾಗಿದ್ದೇವೆಂಬ ಸತ್ಯವನ್ನು ಅಭಿವ್ಯಕ್ತಿಸಲು ಕಾರಣವಾಗುವಂತಹ ಆಲೋಚನೆಗಳನ್ನು ಬೆಳೆಸಿಕೊಳ್ಳಲು ನಮಗೆ ಕಲಿಸಿದರು: “ಆತ್ಮವೇ ಆಗಿರುವ ನೀವು, ಶಾಶ್ವತವಾಗಿ ತರುಣರು. ನಿಮ್ಮ ಪ್ರಜ್ಞೆಯ ಮೇಲೆ ಆ ಆಲೋಚನೆಯನ್ನು ಮೂಡಿಸಿ: ‘ನಾನು ಆತ್ಮ, ನಿತ್ಯ- ಯೌವನವುಳ್ಳ ಪರಮಾತ್ಮನ ಪ್ರತಿಬಿಂಬ. ನಾನು ಯೌವನದಿಂದ, ಮಹತ್ವಾಕಾಂಕ್ಷೆಯಿಂದ, ಯಶಸ್ವಿಯಾಗುವ ಶಕ್ತಿಯಿಂದ ತುಡಿಯುತ್ತಿದ್ದೇನೆ.ʼ”
ಅತ್ಯಂತ ಶಕ್ತ್ಯುತ್ಸಾಹದಿಂದ ತುಡಿಯುತ್ತಿರುವ “ಜೀವಂತ” ವ್ಯಕ್ತಿಗಳು ಯಾರೆಂದರೆ ಭಗವಂತನನ್ನು ತಮ್ಮ ದೈನಂದಿನ ಅಸ್ತಿತ್ವಕ್ಕೆ ತಂದವರು.
ಯೌವನವನ್ನು ಕಾಪಾಡಿಕೊಳ್ಳಲು ಇರುವ ಶಾರೀರಿಕ ಸಾಧನಗಳು, ಭಗವಂತನ ಆರೋಗ್ಯದ ನಿಯಮಗಳ ಮೇಲೆ ಆಧಾರಿತವಾಗಿರುವುದರಿಂದ, ಅನಿವಾರ್ಯವಾಗಿ ತಾತ್ಕಾಲಿಕವಾಗಿದ್ದರೂ ಮೌಲ್ಯಯುತವಾಗಿವೆ. ನಿಜವಾದ ತಾರುಣ್ಯವು ದೈಹಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವುದಕ್ಕಿಂತ ಬಹಳ ಹೆಚ್ಚಿನದು. ಇದು ಒಳಗಿನಿಂದ ಹೊರಹೊಮ್ಮುವ ಮನಸ್ಸು ಮತ್ತು ಚೈತನ್ಯದ ಸತ್ವ — ಭಗವಂತನ ಶಾಶ್ವತ ಶಕ್ತಿ ಮತ್ತು ಆನಂದದೊಂದಿಗೆ ನಮ್ಮ ಆಳವಾದ ಆಂತರಿಕ ಸಂಪರ್ಕವನ್ನು ಅನುಭವಿಸುವುದರಿಂದ ಹುಟ್ಟುವ ಆನಂದ.
ಯೌವನಭರಿತ ಉತ್ಸಾಹದ ಆತ್ಮ ಗುಣವನ್ನು ನಾನು ಭಕ್ತರಲ್ಲಿ ನೋಡಲು ಇಷ್ಟಪಡುತ್ತೇನೆ, ಅದು ಜೀವನದ ಅನುಭವಗಳಿಂದ ಅತ್ಯುತ್ತಮ ಪ್ರಯೋಜನವನ್ನು ಪಡೆದುಕೊಳ್ಳುವ ಸಕಾರಾತ್ಮಕ ಮನೋಭಾವವಾಗಿ ವ್ಯಕ್ತವಾಗುತ್ತದೆ ಮತ್ತು ಶರೀರದ ಮಿತಿಗಳಿಂದ ಪ್ರತಿಬಂಧಿಸಲ್ಪಡಲು ನಿರಾಕರಿಸುತ್ತದೆ.
ನಾವು ಹದಿಹರೆಯದವರಾಗಿರಲಿ ಅಥವಾ “ಹಿರಿಯ ನಾಗರಿಕರಾಗಿರಲಿ,” ನಮ್ಮ ಮನಸ್ಸು ಮತ್ತು ಸಾಮರ್ಥ್ಯಗಳ ಅಂತಸ್ಸತ್ವವನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮ ಆಸಕ್ತಿಯನ್ನು ನಿರಂತರವಾಗಿ ಚುರುಕುಗೊಳಿಸಿದಾಗ, ಹೃದಯವು ಸದಾ ನೀಡಲು ಮತ್ತು ಸೇವೆ ಮಾಡಲು ಸಿದ್ಧವಾಗಿರುವಾಗ, ನಮ್ಮ ಪರಿಸ್ಥಿತಿಗಳು ಏನೇ ಇದ್ದರೂ ನಾವು ಭಗವಂತನಲ್ಲಿ ನಂಬಿಕೆಯನ್ನು ಇರಿಸಿಕೊಂಡಾಗ, ನಾವು ನಿಜವಾಗಿಯೂ ಒಳಗಿನ “ಯೌವನದ ಕಾರಂಜಿ” ಯನ್ನು ಮೈಗೂಡಿಸಿಕೊಳ್ಳುತ್ತಿರುತ್ತೇವೆ.
ಜನರು ಅವರ ವಯಸ್ಸನ್ನು ಕೇಳಿದಾಗ, ಪರಮಹಂಸಜಿ ಸಂತೋಷದಿಂದ ಉತ್ತರಿಸುತ್ತಿದ್ದರು: “ನನಗೆ ವಯಸ್ಸಿಲ್ಲ; ನನ್ನ ವಯಸ್ಸು ಒಂದು – ಅನಂತ.” ನಿಮ್ಮ ಬಾಹ್ಯ ರೂಪಕ್ಕೆ ಹೆಚ್ಚು ಮಹತ್ವ ಕೊಡಬೇಡಿ; ಇದು ನೀವು ಅನೇಕ ಜನ್ಮಗಳಲ್ಲಿ ಧರಿಸಿರುವ ಅಸಂಖ್ಯಾತ ದೈಹಿಕ ಉಡುಪುಗಳಲ್ಲಿ ಒಂದಷ್ಟೆ.
ದಿನವಿಡೀ ಆಗಾಗ, ಮತ್ತು ವಿಶೇಷವಾಗಿ ಧ್ಯಾನದಲ್ಲಿ ಮನಸ್ಸು ಕೇಂದ್ರೀಕೃತವಾಗಿರುವಾಗ, ನೀವು ಭಗವಂತನ ಶಾಶ್ವತ ಜೀವನದಿಂದ ಸಂಪನ್ನಗೊಂಡಿರುವ ಆತ್ಮ, ಅವನ ಶಾಶ್ವತ ಯೌವನ ಮತ್ತು ಸೌಂದರ್ಯದಿಂದ ನೀವು ಶೋಭಿತವಾಗಿರುವಿರಿ ಎಂದು ನಿಮಗೆ ನೀವು ನೆನಪಿಸಿಕೊಳ್ಳಿ. ಪರಮಹಂಸಜಿ ಹೇಳಿರುವಂತೆ: “ಭಗವಂತನೊಂದಿಗೆ ನಿಮ್ಮ ಏಕತೆಯನ್ನು ಅನುಭವಿಸಿ….ನಿಮ್ಮ ಶರೀರ, ಮನಸ್ಸು ಮತ್ತು ಆತ್ಮಗಳಲ್ಲಿ ಅವನ ಅನಂತ ಅಮರತ್ವವನ್ನು ಸೂಚಿಸುವ ಅವನ ಮಹಿಮೆಯನ್ನು ಅನುಭವಿಸಿ.”
ಭಗವಂತ ನಿಮ್ಮನ್ನು ಪ್ರೀತಿಸುತ್ತಾನೆ,
ದಯಾ ಮಾತಾ