ಸ್ವಾಮಿ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರಿಂದ ಜನ್ಮಾಷ್ಟಮಿಯ ಸಂದೇಶ 2020

27 ಜುಲೈ, 2020

Janmashtami 2020

ಆತ್ಮೀಯರೇ,

ಪ್ರಪಂಚದಾದ್ಯಂತ ಶ್ರೀಕೃಷ್ಣನ ಜನ್ಮದಿನವನ್ನು ಆಚರಿಸುತ್ತಿರುವ ಅನೇಕ ಭಕ್ತರೊಂದಿಗೆ ಸೇರಿಕೊಂಡು ನಾವೆಲ್ಲರೂ ಜನ್ಮಾಷ್ಟಮಿಯನ್ನು ಆಚರಿಸುತ್ತಿರುವ ಈ ಸಂತೋಷದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಪ್ರೀತಿಯ ಶುಭಾಶಯಗಳು. ದಿವ್ಯ ಸದಾಚಾರದ ಮರುಸ್ಥಾಪನೆ ಮತ್ತು ದೈವೀ ಪ್ರೇಮ ಮತ್ತು ಅನುಗ್ರಹದ ಸಂದೇಶವಾಹಕನಾದ ಶ್ರೀಕೃಷ್ಣನು ಮಾಯೆಯ ಕತ್ತಲೆಯೊಂದಿಗಿನ ಯುದ್ಧದಲ್ಲಿ ಆತ್ಮಗಳನ್ನು ಮುನ್ನಡೆಸಲು ಅವತರಿಸಿದನು. ನಮ್ಮ ಸಮಯದಲ್ಲೂ ಜಗತ್ತಿಗೆ ಭಗವಂತನ ಉಪಶಮನಕಾರಕ ಸ್ಪರ್ಶದ ಅವಶ್ಯಕತೆಯಿದೆ; ಕೃಷ್ಣನ ಜೀವನದ ಪರಿಶುದ್ಧತೆ ಮತ್ತು ಕಾಂತಿಯನ್ನು ಕುರಿತು ಆಳವಾಗಿ ಧ್ಯಾನಿಸುವ ಮೂಲಕ, ಆಶಾಭಾವದ ಮುಲಾಮನ್ನು ಮತ್ತು ಭಗವತ್ಪ್ರೇಮವು ನಿಮ್ಮನ್ನು ಸದಾ ಆವರಿಸಿರುತ್ತದೆ ಎಂಬ ಭರವಸೆಯನ್ನು ತರುವಂತಹ ಅವನ ನಿತ್ಯ-ಜೀವಂತ ಉಪಸ್ಥಿತಿಯನ್ನು ನೀವು ಅನುಭವಿಸುವಂತಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ.

ಭಗವಂತ ನಮ್ಮನ್ನು ತನ್ನೆಡೆಗೆ ಸೆಳೆದುಕೊಳ್ಳುವ ಆಕರ್ಷಕ ದೈವಿಕ ಪ್ರೀತಿಯನ್ನು ಶ್ರೀಕೃಷ್ಣನು ಸುಂದರವಾಗಿ ಉದಾಹರಿಸುತ್ತಾನೆ. ಆದರೆ ಭೌತಿಕ ಪ್ರಪಂಚ ಮತ್ತು ರೂಢಿಗತ ಅಭ್ಯಾಸಗಳ ಬಾಹ್ಯ ಸೆಳೆತವು ಪ್ರಬಲವಾಗಿದೆ ಮತ್ತು ಆ ಭ್ರಮೆಯ ಬಂಧನಗಳಿಂದ ಮುಕ್ತವಾಗಲು ಶಕ್ತಿ ಮತ್ತು ಸಂಕಲ್ಪದ ಅಗತ್ಯವಿದೆ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನು ಹಿಂಜರಿಯುತ್ತಿದ್ದಾಗ, ಶ್ರೀ ಕೃಷ್ಣನು ಆತನಲ್ಲಿ ಕ್ಷಾತ್ರ ತೇಜವನ್ನು ಬಡಿದೆಬ್ಬಿಸಿದಂತೆಯೇ, ನಾವು ಸಿದ್ಧರಿದ್ದರೆ ನಮ್ಮನ್ನೂ ಅಂತೆಯೇ ಮುನ್ನಡೆಸುತ್ತಾನೆ. ಆಂತರಿಕವಾಗಿ ಅಥವಾ ಬಾಹ್ಯವಾಗಿ ಎದುರಾಗುವ ಸವಾಲುಗಳು, ನಮ್ಮನ್ನು ಧೈರ್ಯಗೆಡಿಸಲು ಬರುವುದಿಲ್ಲ, ಬದಲಿಗೆ ನಮ್ಮೊಳಗಿರುವ ಧೀರೋದಾತ್ತ ಆಧ್ಯಾತ್ಮಿಕ ವಿಜಯಿಯನ್ನು ಹೊರತರಲು ಬರುತ್ತದೆ. ನಾವು ಆ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡರೆ, ಅವು ನಮ್ಮ ಜೀವನದ ಹೊಸ ಆರಂಭವಾಗಬಹುದು ಮತ್ತು ನಮ್ಮ ಮಾನವ ಕುಟುಂಬದ ಪ್ರಜ್ಞೆಯನ್ನು ಉನ್ನತಿಗೇರಿಸುವ ಕೊಡುಗೆಯಾಗಬಹುದು. ಆ ಪರಿವರ್ತನೆಯ ಭಾಗವಾಗುವ ಜವಾಬ್ದಾರಿ ಮತ್ತು ಸುಯೋಗ ನಮ್ಮೆಲ್ಲರಿಗೂ ಇದೆ.

ಭಗವಾನ್ ಕೃಷ್ಣನು ಅರ್ಜುನನಿಗೆ ಸಹಾಯ ಮಾಡಿದಂತೆ, ಆತ್ಮ ಮತ್ತು ಅಹಂಕಾರದ ನಡುವಿನ ನಮ್ಮ ಆಂತರಿಕ ಕುರುಕ್ಷೇತ್ರ ಯುದ್ಧದಲ್ಲಿ ಅವನು ನಮ್ಮಲ್ಲಿ ಪ್ರತಿಯೊಬ್ಬರಿಗೂ ಸಹಾಯ ಮಾಡಬಲ್ಲ. ಭಗವದ್ಗೀತೆಯಲ್ಲಿ ತಿಳಿಸಲಾದ ಅವನ ಕಾಲಾತೀತ ವಿವೇಕವೇನೆಂದರೆ, ಆಳವಾದ ಧ್ಯಾನದಲ್ಲಿ ಭಗವಂತನನ್ನು ಸಂಪರ್ಕಿಸುವ ಮೂಲಕ ಮತ್ತು ನಮ್ಮ ಕರ್ತವ್ಯಗಳನ್ನು ಭಗವಂತನಿಗೆ ಅರ್ಪಿಸುವ ಮೂಲಕವಲ್ಲದೆ ಆತ್ಮ ಸ್ವಾತಂತ್ರ್ಯವನ್ನು ಗೆಲ್ಲಲು ಬೇರಾವುದೇ ದೊಡ್ಡ ಮಾರ್ಗವಿಲ್ಲ. ಸಾವಿರಾರು ವರ್ಷಗಳ ಹಿಂದೆ ಭಗವಾನ್ ಕೃಷ್ಣನು ಕಲಿಸಿದ ಅದೇ ಮುಕ್ತಿದಾಯಕ ಕ್ರಿಯಾಯೋಗ ವಿಜ್ಞಾನವನ್ನು ನಮ್ಮ ಗುರುದೇವ ಶ್ರೀ ಪರಮಹಂಸ ಯೋಗಾನಂದರಿಂದ ಪಡೆದ ನಾವೇ ಧನ್ಯರು. ಆತ್ಮದಲ್ಲಿ ಕೃಷ್ಣನೊಂದಿಗೆ ಒಂದಾಗಿರುವ ಮಹಾವತಾರ ಬಾಬಾಜಿ, ಆ ಪವಿತ್ರ ವಿಜ್ಞಾನವನ್ನು ಪಶ್ಚಿಮಕ್ಕೆ ತರಲು ಮತ್ತು ಈ ಆಧುನಿಕ ಯುಗದ ವಿಶೇಷ ಕೊಡುಗೆಯಾಗಿ ವಿಶ್ವಾದ್ಯಂತ ಅದನ್ನು ಪ್ರಸಾರ ಮಾಡಲು ಪರಮಹಂಸರನ್ನು ಆರಿಸಿಕೊಂಡರು. ಈ ವರ್ಷ ನಾವು ನಮ್ಮ ಗುರುಗಳು ಆ ಅಮೂಲ್ಯವಾದ ಉಡುಗೊರೆಯೊಂದಿಗೆ ಪಶ್ಚಿಮಕ್ಕೆ ಆಗಮಿಸಿದ ಶತಮಾನೋತ್ಸವವನ್ನು ಕೃತಜ್ಞತೆಯಿಂದ ಆಚರಿಸುತ್ತಿದ್ದೇವೆ. ಈ ಮಾರ್ಗದ ಭಕ್ತರಾಗಿ, ನಿಮ್ಮ ಮುಂದೆ ದಿವ್ಯ ಗುರಿಯ ಮಾರ್ಗವು ತೆರೆದಿದೆ; ಮತ್ತು ಈ ಗುರುಗಳೆಲ್ಲರೂ ಆಶೀರ್ವದಿಸಿದ ಬೋಧನೆಗಳು ಮತ್ತು ತಂತ್ರಗಳನ್ನು ಅನುಸರಿಸುವ ಮೂಲಕ ನಿಮ್ಮ ಗೆಲುವು ಖಚಿತವಾಗಿದೆ.

ಜೈ ಶ್ರೀ ಕೃಷ್ಣಾ! ಜೈ ಗುರು!

ಸ್ವಾಮಿ ಚಿದಾನಂದ ಗಿರಿ

ಇದನ್ನು ಹಂಚಿಕೊಳ್ಳಿ